Homeಮುಖಪುಟಪಂಜಾಬ್‌ನ ಸಿಖ್ಖರಿಗೆ ಖಲಿಸ್ತಾನ ಭಾವನೆ ಎಷ್ಟು ದೂರ? ಎಷ್ಟು ಆಪ್ತ?

ಪಂಜಾಬ್‌ನ ಸಿಖ್ಖರಿಗೆ ಖಲಿಸ್ತಾನ ಭಾವನೆ ಎಷ್ಟು ದೂರ? ಎಷ್ಟು ಆಪ್ತ?

- Advertisement -
- Advertisement -

ವಿಭಜನೆಯು ಅನಿವಾರ್ಯವಾದಾಗ, ಸಿಖ್ಖರು ಎದುರಿಸಿದ ಅನಿಶ್ಚಿತತೆಯು ಮೊದಲು ಸಿಖ್ಖಿಸ್ತಾನದ ಆಕಾರವನ್ನು ಪಡೆದುಕೊಂಡಿತು.

ಫೆಬ್ರವರಿ 23ರ ಮಧ್ಯಾಹ್ನ ಕೈಯಲ್ಲಿ ಲಾಠಿಗಳು, ಕತ್ತಿಗಳು ಹಾಗೂ ಬಂದೂಕುಗಳನ್ನು ಹಿಡಿದ ಸಿಖ್ಖರ ದೊಡ್ಡ ಗುಂಪೊಂದು ಪಂಜಾಬಿನ ಅಮೃತಸರ ಜಿಲ್ಲೆಯ ಅಜ್ನಾಲಾ ಪೊಲೀಸ್ ಠಾಣೆಯ ಬಳಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಠಾಣೆಯನ್ನು ವಶಪಡಿಸಿಕೊಂಡ ದೃಶ್ಯಗಳು ದೇಶದೆಲ್ಲೆಡೆ ವೈರಲ್ ಆದವು. ಆ ದೊಡ್ಡ ಗುಂಪು ಬಂದ ಬಸ್ಸು, ಸಿಖ್ಖರು ತಮ್ಮ ಜೀವಂತ ಗುರು ಎಂದು ಪರಿಗಣಿಸುವ ಪವಿತ್ರ ಸಿಖ್ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಹೊತ್ತಿದ್ದರಿಂದ ಪೊಲೀಸರು ಕೈಕಟ್ಟಿ ನಿಂತರು. ಮಾರ್ಚ್ 18ರಂದು ಪೊಲೀಸ್ ದಾಳಿಯನ್ನು ಎದುರಿಸಿದ್ದ ’ವಾರಿಸ್ ಪಂಜಾಬ್ ದೇ’ನ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಈ ಗೊಂದಲಮಯ ಘಟನೆಯ ಕೇಂದ್ರಬಿಂದುವಾಗಿದ್ದ.

ಈ ಲೇಖನವು ಪ್ರಕಟವಾಗುವ ಹೊತ್ತಿನವರೆಗೂ ಅಮೃತಪಾಲ್ ಸಿಂಗ್‌ನ ಬಂಧನವಾಗಿಲ್ಲದಿದ್ದರೂ ಸರ್ಕಾರದ ಅಧಿಕೃತ ವಿವರಗಳ ಪ್ರಕಾರ ಅವನ 112ಕ್ಕೂ ಹೆಚ್ಚು ಸಹಚರರನ್ನು ಬಂಧಿಸಲಾಗಿದೆ. ಮುಖ್ಯವಾಹಿನಿ ಟಿವಿ ಮಾಧ್ಯಮಗಳು ಅಮೃತಪಾಲ್ ಸಿಂಗ್ ನಡೆಸುತ್ತಿದ್ದ ದುಷ್ಕೃತ್ಯಗಳ ಹಿಂದೆ ಪಾಕಿಸ್ತಾನದ ’ಐಎಸ್‌ಐ’ನ ಕುಮ್ಮಕ್ಕು ಇದೆ ಎಂಬ ಸಿದ್ಧಾಂತವನ್ನೂ, ಹಾಗೂ ದಿನದ ಇಪ್ಪತ್ತನಾಲ್ಕು ಗಂಟೆಯೂ ವಶಪಡಿಸಿಕೊಳ್ಳಲಾಗಿದ್ದ ಶಸ್ತ್ರಾಸ್ತ್ರ ದೃಶ್ಯಗಳನ್ನೇ ಬಿತ್ತರಿಸುತ್ತಿದ್ದವು. ಮಾರ್ಚ್ 18ರಂದೇ ಅಮೃತಪಾಲ್ ಸಿಂಗ್ ಅನ್ನು ಬಂಧಿಸಲಾಗಿದೆ ಎಂಬ ವದಂತಿಗಳಿದ್ದರೂ, ಪೊಲೀಸರು ಆತ ಪರಾರಿಯಾಗಿದ್ದಾನೆ ಎಂದು ಘೋಷಿಸಿದರು. ಇದಕ್ಕೆ ಸಂಬಂಧಪಟ್ಟಂತೆ ಬಹಳಷ್ಟು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆಯಾದರೂ, ಪಂಜಾಬ್ ಶಾಂತಿಯುತವಾಗಿದೆ.

ಬಿಹಾರದ ಕತಿಹಾರ್, ಕರ್ನಾಟಕದ ಹುಬ್ಬಳ್ಳಿ ಮತ್ತು ಕೇರಳದ ವೈಝಿಂಜಂನಲ್ಲಿ ಪೊಲೀಸ್ ಠಾಣೆಗಳ ಮೇಲೆ ಕಳೆದ ವರ್ಷ ದಾಳಿಗಳು ನಡೆದಿದ್ದವು. ಅಜ್ನಾಲಾದಲ್ಲಿ ಆದಂತೆಯೇ ಇಲ್ಲಿಯೂ ಪೊಲೀಸರು ಗಾಯಗೊಂಡಿದ್ದರು. ಆದರೂ ಈ ಯಾವ ಘಟನೆಯೂ ಒಂದು ದಿನಕ್ಕಿಂತ ಹೆಚ್ಚಿನ ಕಾಲ ಸುದ್ದಿಯಲ್ಲಿರಲಿಲ್ಲ. ಆದರೆ ಫೆಬ್ರವರಿ 23ರ ಅಜ್ನಾಲಾ ಘಟನೆಯ ನಂತರದ ದಿನಗಳಲ್ಲಿ, ಈ ಘಟನೆಯು ಖಲಿಸ್ತಾನ್ ಚಳವಳಿಯ ಪುನಃ ಸ್ಫೋಟವನ್ನು ಸೂಚಿಸುತ್ತದೆಯೇ ಎಂಬ ಪ್ರಶ್ನೆಯನ್ನು ಮಾಧ್ಯಮಗಳು ಮತ್ತು ವ್ಯಾಖ್ಯಾನಕಾರರು ಪುನರುಚ್ಚರಿಸುತ್ತಲೇ ಬಂದಿದ್ದಾರೆ. ಇದು ಏಕೆ ಹೀಗೆ?

ಇದಕ್ಕೆ ಎರಡು ಕಾರಣಗಳಿರಬಹುದು. ಒಂದು, ಸಿಖ್ ಪ್ರತಿಭಟನಾಕಾರರೆಲ್ಲರೂ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂಬುದು. ಎರಡನೆಯದು, ಅಮೃತಪಾಲನು 1980ರ ದಶಕದ ಸಿಖ್ ಕ್ರಾಂತಿಕಾರಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯವರನ್ನು ಅನುಕರಿಸುತ್ತಾನೆ ಎಂಬುದು. ಇವುಗಳಲ್ಲದೆ, ಅಜ್ನಾಲಾದಲ್ಲಿ ನಡೆದ ಘಟನೆಗೂ 1980ರ ಪರಿಸ್ಥಿತಿಗೂ ಹಲವು ಸ್ವಾಮ್ಯತೆಗಳಿವೆ: ರಾಜ್ಯಾಡಳಿತವು ಅಕ್ಷರಶಃ ಸ್ಥಗಿತಗೊಂಡಿದ್ದು, ಪೊಲೀಸರು ನಿಷ್ಪರಿಣಾಮಕಾರಿಯಾದದ್ದು, ಸಿಖ್ ಸಂಸ್ಥೆಗಳು ಅದರಲ್ಲೂ ಧಾರ್ಮಿಕ ಸಂಸ್ಥೆಗಳು ಮೌನ ವಹಿಸಿರುವುದು.

ಈ ರೀತಿಯಾಗಿ ಹಣೆಪಟ್ಟಿ ಕಟ್ಟುವ ಪ್ರಕ್ರಿಯೆಗೆ ಪಂಜಾಬಿನಲ್ಲಿ ವಿರೋಧವಿದೆ. 2020-21ರ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಕೂಡ ಸರ್ಕಾರ ಹಾಗೂ ಮಾಧ್ಯಮಗಳು ನಿರಾಯುಧ ಪ್ರತಿಭಟನಾಕಾರರನ್ನು ಖಲಿಸ್ತಾನಿಗಳು ಮತ್ತು ದೇಶ ವಿರೋಧಿಗಳು ಎಂದು ಗುಲ್ಲೆಬ್ಬಿಸಿದರು ಎಂದು ಸಾಮಾನ್ಯರು ಹೇಳುತ್ತಿದ್ದಾರೆ. ಜನರು ಹಿಡಿದಿದ್ದ ಪೋಸ್ಟರ್ ಒಂದರ ಬರಹ ಅವರು ಈ ಇಡೀ ಪ್ರಕ್ರಿಯೆಯನ್ನು ಹೇಗೆ ಗ್ರಹಿಸಿದ್ದಾರೆ ಎಂಬುದನ್ನು ತಿಳಿಸುತ್ತದೆ: “ಹಿಂದೂಗಳ ಜೀವವನ್ನು ಉಳಿಸಲು ನಾವು ಸಾವನ್ನಪ್ಪಿದ್ದಾಗ ನಮ್ಮನ್ನು ದಯಾಳು ಎನ್ನುತ್ತೀರಿ; ರಾಷ್ಟ್ರವನ್ನು ಉಳಿಸುವಾಗ ನಾವು ಸತ್ತರೆ ನಮ್ಮನ್ನು ಹುತಾತ್ಮರು ಎನ್ನುತ್ತೀರಿ; ನಾವು ನಮ್ಮ ಹಕ್ಕುಗಳನ್ನು ಕೇಳಿದಾಗ ಮಾತ್ರ ಭಯೋತ್ಪಾದಕರೆನ್ನುತ್ತೀರಿ.”

ಪಂಜಾಬ್ ನಡುಗುತ್ತಿದೆ

ಪಂಜಾಬ್ ರಾಜ್ಯದಲ್ಲಿ ಉಗ್ರಗಾಮಿತ್ವವು 1993ರಲ್ಲಿ ಕೊನೆಗೊಂಡಿತು ಎನ್ನಲಾಗುತ್ತದೆ. ಅದಾಗಿ ಸುಮಾರು ಕಾಲು ಶತಮಾನದ ನಂತರ ರಾಜ್ಯದಲ್ಲಿ ಶಾಂತಿ ಮರಳಿದೆಯೇ ಎಂಬುದನ್ನು ಪರಿಶೀಲಿಸಲು ನಾನು ಪಂಜಾಬ್‌ಗೆ ಪ್ರಯಾಣಿಸಿದೆ. 2015ರ ಕೊನೆಯಲ್ಲಿ, ಬಿಳಿ ನೊಣಗಳ ಹಾವಳಿಯಿಂದ ರೈತರು ತಮ್ಮ ಹತ್ತಿ ಬೆಳೆಯನ್ನು ಕಳೆದುಕೊಂಡು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದೆ. ರೈತರು ತಮ್ಮ ಆಂದೋಲನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸುವುದರ ಹಿಂದಿನ ರಾತ್ರಿ, ಗುರು ಗ್ರಂಥ ಸಾಹಿಬ್‌ಗೆ ಅಪಚಾರ ಮಾಡುವಂತಹ ಘಟನೆಯೊಂದು ಬಾರ್ಗರಿ ಗ್ರಾಮದಲ್ಲಿ ನಡೆಯಿತು. ನಂತರ, ಕೊಟಕಪುರದಲ್ಲಿ ನೆರೆದಿದ್ದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿ ಇಬ್ಬರು ನಿರಾಯುಧ ಪ್ರತಿಭಟನಾಕಾರರನ್ನು ಕೊಂದರು. ಉಪಮುಖ್ಯಮಂತ್ರಿಗಳು ತಕ್ಷಣವೇ “ಇದು ಖಲಿಸ್ತಾನದ ಮರುಹುಟ್ಟ. ಘಟನೆಯ ಹಿಂದೆ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಕೆಲಸ ಮಾಡಿದೆ” ಎಂದು ಗಿಳಿನುಡಿ ನುಡಿದರು.

ಪಂಜಾಬ್ ಕೋಪಾಗ್ನಿಯಲ್ಲಿ ಕುದಿಯಿತು. 15 ದಿನಗಳ ಕಾಲ, ಎಲ್ಲಾ ಧರ್ಮಗಳ ಜನರು ಶಾಂತಿಯುತ ಪ್ರದರ್ಶನಗಳನ್ನು ನಡೆಸುತ್ತಿದ್ದರೂ ಧಾರ್ಮಿಕ ಗ್ರಂಥಗಳನ್ನು ಎಲ್ಲೆಂದರಲ್ಲಿ ಹರಿದು ಹಾಕಲಾಯಿತು. ಇದಾಗಿ ಎಂಟು ವರ್ಷಗಳೇ ಕಳೆದಿದ್ದರೂ, ಎರಡು ಆಯೋಗಗಳು, ವಿಶೇಷ ತನಿಖಾ ತಂಡಗಳು, ವಿವಿಧ ವರದಿಗಳು, ಎರಡು ಸರ್ಕಾರಗಳು ಹಾಗೂ ಮೂರು ಮುಖ್ಯಮಂತ್ರಿಗಳು ಬಂದುಹೋದರೂ ಪ್ರಕರಣಗಳು ಮಾತ್ರ ಇತ್ಯರ್ಥವಾಗಿಲ್ಲ. ರಾಜಕೀಯ-ಆರ್ಥಿಕ ಸಮಸ್ಯೆಯ ಕುರಿತಾದ ರೈತರ ಪ್ರತಿಭಟನೆಯೊಂದಕ್ಕೆ ಹೇಗೆ ಧಾರ್ಮಿಕ ತಿರುವು ನೀಡಲಾಯಿತು ಎಂಬುದಕ್ಕೆ ಇದೊಂದು ನಿದರ್ಶನ. ರಾಜ್ಯದ ಪೊಲೀಸ್-ನ್ಯಾಯಾಂಗ-ರಾಜಕೀಯ ವ್ಯವಸ್ಥೆಯು ನೊಂದವರಿಗೆ ನ್ಯಾಯ ಒದಗಿಸಲು ಹೇಗೆ ವಿಫಲವಾಗಿದೆ ಎಂಬುದಕ್ಕೆ ಕೂಡ ಇದೊಂದು ಉದಾಹರಣೆ.

ಪಂಜಾಬಿನೆಲ್ಲೆಡೆ ನಾನು ಪ್ರಯಾಣ ಮಾಡುವ ಸಂದರ್ಭದಲ್ಲಿ, ರೈತ ಸಂಘಟನೆಗಳ ವೇದಿಕೆಗಳಲ್ಲಿ, “ಭಾರತ ಹಸಿದಿದ್ದಾಗ ನಾವು ಅವಳಿಗೆ ಆಹಾರ ನೀಡಿದ್ದೇವೆ. ಈಗ ನಾವು ಬಾಯಾರಿಕೆಯಿಂದ ಸಾಯುತ್ತಿರುವಾಗ, ಭಾರತ ನಮ್ಮತ್ತ ತಿರುಗಿ ಕೂಡ ನೋಡುವುದಿಲ್ಲ” ಎಂಬ ಮಾತುಗಳನ್ನು ಕೇಳಿದೆ. ಧಾರ್ಮಿಕ ಸಂಘಟನೆಗಳ ವೇದಿಕೆಗಳಿಂದ, “ಪಂಜಾಬನ್ನು ಭಾರತಕ್ಕೆ ಆಹಾರ-ಉತ್ಪಾದಿಸಿ ಕೊಡುವ ವಸಾಹತು ಪ್ರದೇಶವನ್ನಾಗಿ ಮಾಡಿಕೊಂಡಿದ್ದಾರೆ” ಎಂಬ ಮಾತುಗಳು ಕೇಳಿಬರುತ್ತಿದ್ದವು. ಎಡ ಸಂಘಟನೆಗಳ ಒಕ್ಕೂಟಗಳ ವೇದಿಕೆಗಳಿಂದ: “ಹಸಿರು ಕ್ರಾಂತಿಯು ಹಸಿರು ನರಮೇಧವಾಗಿತ್ತು” ಎಂಬ ಮಾತುಗಳು ಕೇಳಿಬರುತ್ತಿದ್ದವು. ನನಗೆ ಪಂಜಾಬ್ ನಲುಗಿಹೋಗುತ್ತಿದೆ ಎಂಬುದು ಸ್ಪಷ್ಟ. ಆದರೆ, ಕೇಂದ್ರ ಸರ್ಕಾರಗಳಾಗಲೀ ಅಥವಾ ರಾಜ್ಯ ಸರ್ಕಾರಗಳಾಗಲೀ ಅದರ ಮೂಲ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವ ಗೋಜಿಗೇ ಹೋಗಿಲ್ಲ. ಪಂಜಾಬ್ ಕೃಷಿಯ ವಿಚಾರದಲ್ಲಿ ಒಂದು ಶಕ್ತಿ ಕೇಂದ್ರವೇ ಆಗಿದೆಯಾದರೂ, ಗೋಧಿ-ಭತ್ತ ಬೆಳೆಯುವ ಕೃಷಿ ಚಕ್ರದಿಂದಾಗಿ ಅಂತರ್ಜಲಮಟ್ಟ ಕ್ಷೀಣಿಸಿದೆ. ಒಂದು ಕಾಲದಲ್ಲಿ “ರಾಷ್ಟ್ರದ ಬ್ರೆಡ್ ಬಾಸ್ಕೆಟ್” ಎನಿಸಿದ್ದ ಪಂಜಾಬ್ ವೇಗವಾಗಿ ಮರುಭೂಮಿಯಾಗಿ ಬದಲಾಗುತ್ತಿದೆ. ರಾಸಾಯನಿಕಗಳ ಅತಿಯಾದ ಬಳಕೆಯು ರಾಜ್ಯವನ್ನು ಕ್ಯಾನ್ಸರ್ ಬೆಲ್ಟ್ ಆಗಿ ಪರಿವರ್ತಿಸಿದೆ. ಮರಳಿನಿಂದ ಹಿಡಿದು ಜಲ್ಲಿಕಲ್ಲು ಸಾಗಣೆಯವರೆಗೆ, ಪ್ರತಿಯೊಂದು ಆದಾಯದ ಮೂಲಗಳಲ್ಲಿಯೂ ಮಾಫಿಯಾಗಳು ಪ್ರಾಬಲ್ಯ ಸಾಧಿಸಿವೆ.

ನಶಿಸುತ್ತಿರುವ ಉದ್ಯಮಗಳು, ಕುಸಿಯುತ್ತಿರುವ ಶಿಕ್ಷಣದ ಗುಣಮಟ್ಟ

ಪಂಜಾಬ್ ಗಡಿ ರಾಜ್ಯವಾಗಿರುವ ಕಾರಣಕ್ಕೆ ದೊಡ್ಡ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸಲು ಕೇಂದ್ರ ಸದಾ ಹಿಂದೇಟು ಹಾಕುತ್ತಲೇ ಸಾಗಿದೆ. ತೀವ್ರವಾದ ವಿದ್ಯುತ್ ಸಮಸ್ಯೆಗಳಿಂದಾಗಿ ಮತ್ತು ಕಾರ್ಮಿಕರ ವಲಸೆಯಿಂದಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ನಶಿಸುತ್ತಿವೆ. ಶಿಕ್ಷಣದ ಮಟ್ಟ ಕುಸಿದಿದೆ, ಆರೋಗ್ಯ ಸೌಲಭ್ಯಗಳ ಕೊರತೆ ತೀವ್ರವಾಗಿದೆ. ಒಂದು ಕಾಲದಲ್ಲಿ ದೇಶದ ನಂಬರ್ ಒನ್ ರಾಜ್ಯವಾಗಿದ್ದ ಪಂಜಾಬ್, ಈಗ ಜಿಡಿಪಿ ಶ್ರೇಯಾಂಕದಲ್ಲಿ 16ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯದ ಮೇಲಿರುವ ಸಾಲದ ಹೊರೆ ರೂ.3 ಲಕ್ಷ ಕೋಟಿಗಿಂತಲೂ ಹೆಚ್ಚಿದೆ. ರೈತರೊಬ್ಬರ ಸರಾಸರಿ ಸಾಲವು 2 ಲಕ್ಷ ರೂಪಾಯಿಯನ್ನೂ ಮೀರುತ್ತಿದೆ. ಕಳೆದೆರಡು ದಶಕಗಳಲ್ಲಿ, ಸುಮಾರು 20,000 ರೈತರು ಮತ್ತು ಕಾರ್ಮಿಕರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಈ ಸಂಖ್ಯೆಯು 1978-93ರ ನಡುವೆ ನಡೆದ ಖಲಿಸ್ತಾನ್ ಚಳವಳಿಯಲ್ಲಿ ಸತ್ತವರ ಸಂಖ್ಯೆಯ ಆಸುಪಾಸಿನಲ್ಲಿದೆ. (ಅನಧಿಕೃತ ವರದಿಗಳ ಪ್ರಕಾರ ಇದರ ಸಂಖ್ಯೆ ಮತ್ತಷ್ಟೂ ಹೆಚ್ಚಿದೆ).

ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ

ಪಂಜಾಬ್‌ಅನ್ನು ಉಗ್ರವಾದ ಬಿಕ್ಕಟ್ಟಿಗೆ ಸಿಲುಕಿಸಿದರೆ, ಅದರ ನಂತರದ ದಶಕಗಳಲ್ಲಿ ಎಲ್ಲಾ ಪಕ್ಷಗಳ ರಾಜಕಾರಣಿಗಳು- ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಅಕಾಲಿ ದಳ ಮತ್ತು ಇತ್ತೀಚಿಗೆ ಆಮ್ ಆದ್ಮಿ ಪಕ್ಷ ಪಂಜಾಬಿನ ನಿಜ ಸಮಸ್ಯೆಗಳನ್ನು ಬಗೆಹರಿಸಲು ಮತ್ತದಕ್ಕೆ ಬೇಕಾದ ಚಿಕಿತ್ಸೆ ಒದಗಿಸುವ ಬಗ್ಗೆ ನಿರಾಸಕ್ತಿ ಪ್ರದರ್ಶಿಸಿವೆ. ಮಾಜಿ ಮುಖ್ಯಮಂತ್ರಿಯೊಬ್ಬರು ಗಡಿಯಾಚೆಗಿನ ಭದ್ರತಾ ಸಮಸ್ಯೆಗಳ ಬಗ್ಗೆ ಮಾತನಾಡುತ್ತಲೇ ಇದ್ದರು. ಆದರೆ, ಪಾಕಿಸ್ತಾನ ತಾನು ಹಸ್ತಕ್ಷೇಪ ಮಾಡುವ ವಾತಾವರಣ ಪಂಜಾಬ್‌ನಲ್ಲಿದೆ ಎಂದು ತಿಳಿದು ಹೇಗೆ ಆಯ್ದುಕೊಳ್ಳುತ್ತದೆಂಬ ಪ್ರಶ್ನೆಗೆ ಮತ್ತು ಇದಕ್ಕೆ ತಮ್ಮದೇ ಸರ್ಕಾರ ಪಂಜಾಬಿನ ಸಂಕಟಗಳನ್ನು ನಿವಾರಿಸಲು ಸಿದ್ಧವಿರಲಿಲ್ಲ ಎಂಬುದೂ ಕಾರಣವಾಗಿರಬಹುದೇ ಎಂಬುದಕ್ಕೆ ಉತ್ತರಿಸಲೇ ಇಲ್ಲ. ಕೇಂದ್ರವು ಗಡಿ ಭದ್ರತಾ ಪಡೆಯನ್ನು ಭಾರತ-ಪಾಕಿಸ್ತಾನದ ಗಡಿಯ ಉದ್ದಗಲಕ್ಕೂ ಪಂಜಾಬಿನ ಅರ್ಧ ಪ್ರದೇಶದೆಲ್ಲೆಡೆ ನಿಯೋಜಿಸಿದೆ. ವಿಪರ್ಯಾಸವೆಂದರೆ, ಎಲ್ಲರ ಮನೆಮಾತಾಗಿರುವ ಡ್ರಗ್ಸ್ ಹರಿದಾಡುವುದು ಈ ಪ್ರದೇಶದಲ್ಲಿಯೇ.

ಇದೆಲ್ಲದರ ಹಿಂದೆ ಅಸಮಾಧಾನ ಹೊಗೆಯಾಡುತ್ತಲೇ ಇದೆ. ವ್ಯವಸ್ಥೆಯಿಂದ ಜನರು ನಿರಾಶೆಗೊಂಡಿದ್ದಾರೆ. ಅವರಿಗೆ ಅಂಟಿಸಲಾಗಿರುವ ಯಾವುದೇ ಲೇಬಲ್‌ಗಳು ಅವರಿಗೆ ಬೇಡವಾಗಿವೆ. ಹತಾಶೆ ಮತ್ತು ನಿರಾಕರಣವಾದವು ರಾಜ್ಯದ ಜನಸಂಖ್ಯೆಯಲ್ಲಿ ನಾಲ್ಕನೇ ಒಂದು ಭಾಗದಷ್ಟಿರುವ, ಅಂದರೆ 75 ಲಕ್ಷ ಯುವಜನರಲ್ಲಿ ಬೆಳೆಯತೊಡಗಿದೆ. ಸರಿಸುಮಾರು, ಪ್ರತಿ ವರ್ಷ, ಅವರಲ್ಲಿ ಸುಮಾರು ಒಂದೂವರೆ ಲಕ್ಷ ಯುವಜನರು ಕಾನೂನುಬದ್ಧವಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಕೆಲವರು ಅಕ್ರಮವಾಗಿಯೂ ತೆರಳುತ್ತಾರೆ. ಅಜ್ನಾಲಾದಲ್ಲಿ, ಪೊಲೀಸ್ ಠಾಣೆಗೆ ಧಾವಿಸುತ್ತಿದ್ದ ಶಸ್ತ್ರಸಜ್ಜಿತ ಹತಾಶ ಸಿಖ್ ಯುವಕರು ಈಗ ಅಮೃತಪಾಲ್ ಸಿಂಗ್‌ನಲ್ಲಿ ಭರವಸೆ ಕಾಣಲಾರಂಭಿಸಿದ್ದಾರೆ.

ಮುತ್ತಿಗೆಯ ಭಾವ

ಪಂಜಾಬ್ ಸಿಖ್ಖರು ಬಹುಸಂಖ್ಯಾತರಾಗಿರುವ (57 ಪ್ರತಿಶತ) ರಾಜ್ಯ. ಸಿಖ್ ಧರ್ಮದ ಇತಿಹಾಸದಲ್ಲಿ ಹೋರಾಟ ಮತ್ತು ಶೌರ್ಯದ ನೆನಪುಗಳು ಅಂತರ್ಗತವಾಗಿದೆ. 20ನೇ ಶತಮಾನದ ಆರಂಭದಲ್ಲಿ ಅಕಾಲಿ ದಳದ ರಾಜಕೀಯ ಪ್ರಾರಂಭವಾಗಿದ್ದು ಗುರುದ್ವಾರ ಸುಧಾರಣಾ ಚಳವಳಿಯೊಂದಿಗೆ ಮತ್ತು ಧರ್ಮ ಎಂಬುದು ಅದರ ರಾಜಕೀಯದ ಮುಖ್ಯ ನೆಲೆಯಾಗಿತ್ತು; ಭಾರತ ಸರ್ಕಾರದಿಂದಾದ ಹಲವು ಲೋಪಗಳು, ತಮ್ಮನ್ನು ಮುತ್ತಿಗೆ ಹಾಕಲಾಗಿದೆ ಎಂಬ ಭಾವವನ್ನು ಸಮುದಾಯದ ಹಲವು ಸ್ತರಗಳಲ್ಲಿ ನೆಲೆಗೊಳಿಸಿವೆ – ಆಪರೇಷನ್ ಬ್ಲೂ ಸ್ಟಾರ್; 1984ರ ಸಿಖ್ ವಿರೋಧಿ ಹತ್ಯಾಕಾಂಡದಲ್ಲಿ ಸಮುದಾಯಕ್ಕೆ ನ್ಯಾಯ ಸಿಗಲಿಲ್ಲವೆಂಬುದು; ಸಿಖ್ಖರನ್ನು ಹಿಂದೂ ಸಮುದಾಯದ ಭಾಗವೆಂದು ಪರಿಗಣಿಸುವ ಸಂವಿಧಾನದ 25(ಬಿ) ವಿಧಿಯೂ ಸೇರಿದಂತೆ ಎಲ್ಲವೂ ಇವಕ್ಕೆ ಕೊಡುಗೆ ನೀಡಿವೆ.

ಅಮೃತಪಾಲ್ ಸಿಂಗ್ ಇತ್ತೀಚೆಗೆ ದುಬೈನಿಂದ ಮರಳಿದ್ದಾನೆ. ರೈತರ ಪ್ರತಿಭಟನೆಗೆ ಧಾರ್ಮಿಕ ನೆಲೆಯನ್ನು ಒದಗಿಸಲು ಪ್ರತಿಪಾದಿಸಿದ, ಯುವ ನಾಯಕ ದೀಪ್ ಸಿಧು ಸ್ಥಾಪಿಸಿದ ವಾರಿಸ್ ಪಂಜಾಬ್ ದೇ ಎಂಬ ಹೊಸ ಸಂಘಟನೆಯನ್ನು ಆತ ಸ್ವಾಧೀನಪಡಿಸಿಕೊಂಡ. ದೀಪ್ ಸಿಧು ಕಳೆದ ವರ್ಷದ ಆರಂಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನನಾದ. ಅಧಿಕಾರ ವಹಿಸಿಕೊಂಡ ನಂತರ, ಅಮೃತಪಾಲ್ ಪ್ರಸ್ತುತವೆನಿಸುವ ವಿಷಯಗಳಾದ ಡ್ರಗ್ಸ್ ಹಾವಳಿ, ಯುವಕರು ವಿದೇಶಕ್ಕೆ ತೆರಳುತ್ತಿರುವುದು, ವಲಸೆ ಕಾರ್ಮಿಕರು ಪಂಜಾಬಿಗೆ ಬರುತ್ತಿರುವುದರಿಂದ ಆಗುತ್ತಿರುವ ಪಂಜಾಬಿ ಸಂಸ್ಕೃತಿಯ ನಾಶದ ಪ್ರತಿಪಾದನೆ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಇತ್ಯಾದಿಗಳನ್ನು ಆಯ್ದುಕೊಂಡ. ಆತ ಸ್ತ್ರೀವಾದದ ಪಾಶ್ಚಿಮಾತ್ಯ ವಿಚಾರಗಳನ್ನು ತಿರಸ್ಕರಿಸುತ್ತಾ, ಸಿಖ್ ಧರ್ಮವು ಮಹಿಳೆಯರಿಗೆ ಹೇಗೆ ಸಮಾನ ಸ್ಥಾನಮಾನವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುತ್ತಾನೆ. ಆತ ಸಿಖ್ ಧರ್ಮದ ದೀಕ್ಷೆಯಾದ ಅಮೃತ ಪ್ರಚಾರವನ್ನು ಪ್ರತಿಪಾದಿಸುತ್ತಾನೆ.

ಇದನ್ನೂ ಓದಿ: ಖಲಿಸ್ತಾನಿ ನಾಯಕನ ಬಂಧನ; ಪಂಜಾಬ್‌ನಲ್ಲಿ ಇಂಟರ್‌ನೆಟ್ ಬಂದ್

ವೇಷಭೂಷಣ, ನಡವಳಿಕೆ ಹಾಗೂ ಮಾತಿನ ಧಾಟಿಯಲ್ಲಿ, ಅಮೃತಪಾಲ್ ತನ್ನನ್ನು ಭಿಂದ್ರನ್‌ವಾಲೆ ಎಂದು ಬಿಂಬಿಸಿಕೊಳ್ಳುತ್ತಾನೆ: “ಗುರುಗಳ ಕಾಲದ ಈ ಬಟ್ಟೆಗಳನ್ನು ಧರಿಸದಿದ್ದರೆ ಇನ್ನಾವುದನ್ನು ಧರಿಸುವುದು? ನಾನು ಖಲಿಸ್ತಾನಕ್ಕಾಗಿ ಯೋಜನೆಗಳನ್ನು ನೀಡಿದರೆ, ನೀವು ಒಪ್ಪುತ್ತೀರಾ?” ನನ್ನ ಪ್ರಯಾಣದ ಸಂದರ್ಭದಲ್ಲಿ, ಗ್ರಾಮೀಣ ಪ್ರದೇಶದಲ್ಲಿದ್ದ ಬಹಳಷ್ಟು ಮನೆಗಳಲ್ಲಿ ನಾನು ಮೂರು ಚಿತ್ರಗಳನ್ನು ಕಂಡೆ – ಭಗತ್ ಸಿಂಗರದ್ದು, ಭಿಂದ್ರನ್‌ವಾಲೆ ಅವರದ್ದು ಹಾಗೂ ವಲಸೆ ಹೋಗಿರುವ ಮಗನದ್ದು. ಹಳ್ಳಿಗಾಡಿನ ಸಿಖ್ಖರು ಅವಮಾನ ಮತ್ತು ದುರಾಸೆಯ ಜೀವನದಿಂದ ರಕ್ಷಿಸಬಲ್ಲ ವೀರರಿವರು ಎಂದು ಪರಿಗಣಿಸುತ್ತಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಅಮೃತಪಾಲನು ಕಾಣಿಸಿಕೊಳ್ಳತೊಡಗಿದಾಗ ಪಂಜಾಬಿನ ಅಂತರ್ಜಾಲ ಮಾಧ್ಯಮಗಳು ಆತನನ್ನು ಕೊಂಡಾಡಿದವು. ಆತನನ್ನು ರಾಜಕೀಯಕ್ಕೆ ಕರೆತರುವುದರ ಹಿಂದೆ ದೊಡ್ಡ ಮಟ್ಟದ ಪೂರ್ವಸಿದ್ಧತೆಯಿರುವುದು ಕಂಡು ಬರುತ್ತದೆಯಾದರೂ, ಅದರ ಹಿಂದಿರುವ ಕೈಗಳು ಯಾರವು ಎಂಬುದು ತಿಳಿದಿಲ್ಲ. ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಅವರ ನಾಯಕರುಗಳ ಮೇಲೆ ಕೇಂದ್ರ ಸರ್ಕಾರವು ಹೇಗೆ ದಾಳಿ ನಡೆಸುತ್ತಿದೆ ಎಂಬುದನ್ನು ಗಮನಿಸಿದರೆ, ಅಮೃತಪಾಲನು ಅಭಯನಾಗಿರುವಂತೆ ತೋರುತ್ತಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಡಿಸೆಂಬರ್‌ನಲ್ಲಿ, ಅಮೃತಪಾಲನು ಜಲಂಧರ್‌ನ ಗುರುದ್ವಾರದಲ್ಲಿನ ಬೆಂಚುಗಳನ್ನು ಸುಟ್ಟುಹಾಕಿದಾಗ, ಸಿಖ್ ಪ್ರತಿಕ್ರಿಯೆಯು ಹೋಳಾಗಿತ್ತು. ಯುವಕರಲ್ಲಿ ಬಹಳಷ್ಟು ಮಂದಿ ಗುರುದ್ವಾರಗಳಿಗೆ ಬರುವುದೇ ಇಲ್ಲವಾದ್ದರಿಂದ, ವಯಸ್ಸಾದವರಿಗಾಗಿ ಇರಿಸಲಾಗಿರುವ ಬೆಂಚುಗಳನ್ನು ತೆಗೆಯುವ ಮೂಲಕ, ಅವರೂ ಕೂಡ ಗುರುದ್ವಾರಗಳಿಗೆ ಭೇಟಿ ನೀಡಬಾರದೆಂಬುದು ಆತನ ಉದ್ದೇಶವೇ ಎಂದು ಪ್ರಶ್ನಿಸಿದರು. ಅಜ್ನಾಲಾ ಘಟನೆಯ ನಂತರದಲ್ಲಿ, ಜನಸಮೂಹದ ಜೊತೆಗಿದ್ದ ವ್ಯಾನ್ ಧರ್ಮಗ್ರಂಥವನ್ನು ಹೊತ್ತೊಯ್ದ ಕಾರಣ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂಬುದನ್ನು ಗಮನಿಸಿದ ಸಮುದಾಯದ ಅನೇಕರು ಅಮೃತಪಾಲ್ ಮತ್ತವನ ಸಂಗಡಿಗರು ಪೊಲೀಸ್ ಠಾಣೆಗೆ ದಾಳಿ ಮಾಡಿದಾಗ ಗುರು ಗ್ರಂಥ ಸಾಹಿಬ್‌ಅನ್ನು ಹೊತ್ತೊಯ್ದದ್ದನ್ನು ಟೀಕಿಸಿದರು.

ಅಮೃತಪಾಲನಿಗಿರುವ ಬೆಂಬಲವು ಆತ ಆಯ್ದುಕೊಳ್ಳುವ ಸಮಸ್ಯೆ ಮತ್ತದನ್ನು ಆತ ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ಅವಲಂಬಿಸಿದೆ. “ಖಲಿಸ್ತಾನ್” ಎಂಬ ಪದದ ಬಳಕೆಯ ಬಗ್ಗೆ ಜನಸಾಮಾನ್ಯರಲ್ಲಿ ಸಂಶಯವಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯು ಎಷ್ಟೇ ದೋಷಪೂರಿತವಾಗಿದ್ದರೂ ಅದರ ಚೌಕಟ್ಟಿನೊಳಗೆ, ಚಳವಳಿಯು ಅಹಿಂಸಾತ್ಮಕವಾಗಿದ್ದರೆ ಜಯಸಾಧಿಸಬಹುದು ಎಂದು ಪಂಜಾಬ್ ರಾಜ್ಯವು ಸ್ಮರಣೀಯವಾದ ರೈತರ ಪ್ರತಿಭಟನೆಯ ಅನುಭವದಿಂದ ಕಲಿತಿದೆ. ವಿಭಜನೆ ಹಾಗೂ ಒಂದೂವರೆ ದಶಕಗಳ ಕಾಲ ರಕ್ತಸಿಕ್ತವಾದ ಉಗ್ರಗಾಮಿತ್ವದ ಅನುಭವವನ್ನು ಹೊಂದಿರುವ ಪಂಜಾಬ್ ಮತ್ತೆ ಅದೇ ರೀತಿಯ ರಕ್ತಚೆಲ್ಲಾಟ ಪುನರಾವರ್ತನೆಯಾಗುವುದನ್ನು ಬಯಸುವುದಿಲ್ಲ.

ಅದರ ಪ್ರಾರಂಭ ಹೇಗಿತ್ತು?

ಖಲಿಸ್ತಾನ್ ಎಂಬ ಪದವು ದೇಶದ್ರೋಹವೆನಿಸುವುದಿಲ್ಲ ಹಾಗೂ ಅಹಿಂಸಾತ್ಮಕ ಚಳವಳಿಯನ್ನು ಕಟ್ಟುವುದಕ್ಕೆ ಅದನ್ನು ಬಳಸಬಹುದೆಂದು ಸುಪ್ರೀಂ ಕೋರ್ಟು 1995ರಲ್ಲಿ ತೀರ್ಪು ನೀಡಿತು. ಆದಾಗ್ಯೂ, ಪಂಜಾಬ್‌ಅನ್ನು ದೂಷಿಸಲು ಈ ಪದವನ್ನು ಆಗಾಗ್ಗೆ ಬಳಸಲಾಗಿರುವುದರಿಂದ, ಅದನ್ನು ಅರ್ಥೈಸಲು ಪ್ರಯತ್ನಿಸೋಣ. ಮೊದಲನೆಯದಾಗಿ, ಈ ಪದಕ್ಕಿರುವ ಇತಿಹಾಸದ ಬೇರು ಸ್ವಾತಂತ್ರ್ಯ-ಪೂರ್ವದ ಕಾಲಘಟ್ಟದ್ದು. ಇದು 1940ರ ದಶಕದಲ್ಲಿ ಕರಪತ್ರಗಳಲ್ಲಿ ಕಾಣಿಸಿಕೊಳ್ಳತೊಡಗಿತು. ವಿಭಜನೆಯು ಸನ್ನಿಹಿತವಾದಾಗ, ಸಿಖ್ಖರು ತಮ್ಮ ಭವಿಷ್ಯ ಏನಾಗಲಿದೆ ಎಂದು ಕೇಳುತ್ತಾರೆ. ಅವರ ಬೇಡಿಕೆಯು ಸಿಖ್ಖಿಸ್ತಾನ ಮತ್ತು ಆಜಾದ್ ಪಂಜಾಬಿನ ಆಕಾರವನ್ನು ಪಡೆದುಕೊಳ್ಳುತ್ತದೆಯಾದರೂ ಎರಡನೆಯ ಮಹಾಯುದ್ಧ ಹಾಗೂ ಇತರ ಘಟನೆಗಳು ಈ ಬೇಡಿಕೆಗೆ ದೊಡ್ಡ ದನಿಯೇಳದಂತೆ ತಗ್ಗಿಸುತ್ತವೆ. ಅಂತಿಮವಾಗಿ, ಸಿಖ್ಖರು ಭಾರತದೊಂದಿಗೆಯೇ ಸೇರಿದರು.

ಎರಡನೆಯದಾಗಿ, 1973ರಲ್ಲಿ, ಭಾರತದೊಂದಿಗೆ ಇಪ್ಪತೈದು ವರ್ಷಗಳಿಗೂ ಹೆಚ್ಚು ಕಾಲ ಇದ್ದ ನಂತರ ಸಿಖ್ಖರು ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದರು ಮತ್ತು ಪಂಜಾಬಿನ ಹಕ್ಕುಗಳಿಗಾಗಿ ದನಿಯೆತ್ತಿದರು. ಅಕಾಲಿದಳವು ಆನಂದಪುರ ಸಾಹಿಬ್ ನಿರ್ಣಯವನ್ನು ತಯಾರಿಸಿತು. ಅದರ ಸುದೀರ್ಘವಾದ ಧಾರ್ಮಿಕ ಮುನ್ನುಡಿಯಾಚೆಗೆ ಕಂಡುಬಂದ ಪ್ರಮುಖ ಬೇಡಿಕೆಗಳೆಂದರೆ ವಿಕೇಂದ್ರೀಕರಣವಾಗಬೇಕು, ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು, ಬೆಳೆಗಳ ವೈವಿಧ್ಯೀಕರಣವಾಗಬೇಕು, ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳ ಅಭಿವೃದ್ದಿಯ ಅಗತ್ಯ, ನದಿ ನಾಲೆಗಳ ನಿಯಂತ್ರಣ ಮುಂತಾದವು.. ಅದಕ್ಕೂ ಎರಡು ವರ್ಷಗಳ ಹಿಂದೆ, ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸರ್ಕಾರವು ರಾಜಮನ್ನಾರ್ ಸಮಿತಿಯ ವರದಿಯನ್ನು ಸಿದ್ಧಪಡಿಸಿತ್ತು. ಅದು ಕೂಡ ಇದೇ ರೀತಿಯ ಬದಲಾವಣೆಗಳು ಬೇಕೆಂದು ಒತ್ತಾಯಿಸಿತ್ತು. ಕೆಲವು ವರ್ಷಗಳ ನಂತರ, ಪಶ್ಚಿಮ ಬಂಗಾಳದ ಮನವಿ ಪತ್ರವು ಕೂಡ ಕೇಂದ್ರ-ರಾಜ್ಯ ಸಂಬಂಧದಲ್ಲಿ ಬದಲಾವಣೆಗಳಾಗಬೇಕೆಂದು ಒತ್ತಾಯಿಸಿತು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸಂವಿಧಾನವು ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸುತ್ತದೆ. ಈ ಎಲ್ಲಾ ಮನವಿ-ಬೇಡಿಕೆಗಳು “ರಾಜ್ಯ”ವನ್ನು ಗಮನದಲ್ಲಿರಿಸಿಕೊಂಡರೆ, ಕೇಂದ್ರವು “ಒಕ್ಕೂಟ” ಎಂಬ ಪದದ ಮೇಲೆ ಗಮನಹರಿಸಿದೆ. ಕೇಂದ್ರವು ಈ ಸಲಹೆಗಳನ್ನು ತಿರಸ್ಕರಿಸಿದೆ ಮತ್ತು ಬಲಪಂಥೀಯ ಸರ್ಕಾರವೊಂದು ತೀವ್ರತರವಾದ ಕೇಂದ್ರೀಕರಣವನ್ನು ಪ್ರತಿಪಾದಿಸುತ್ತಿರುವ ಕಾಲಘಟ್ಟದಲ್ಲಿ ಹಾಗೂ ರಾಜ್ಯಗಳನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಇದರ ಪರಿಣಾಮ ನಮಗೆ ಸ್ಪಷ್ಟವಾಗುತ್ತಿವೆ.

ಮೂರನೆಯದಾಗಿ ಹುಟ್ಟು ಪಡೆದಿದ್ದು ಖಲಿಸ್ತಾನ್ ಪ್ರತ್ಯೇಕತಾವಾದಿ ಚಳವಳಿ. ಇದು ಪಂಜಾಬ್‌ಅನ್ನು ಬಹಳವಾಗಿ ಹಾನಿಗೊಳಿಸಿತು. ಆಪರೇಷನ್ ಬ್ಲೂ ಸ್ಟಾರ್ ಮತ್ತು ಆರ್ಥಿಕವಾಗಿ ಹಿಂದುಳಿದ ಉತ್ತರ ಭಾರತದ ರಾಜ್ಯಗಳಲ್ಲಿ ಸಿಖ್ ವಿರೋಧಿ ಹತ್ಯಾಕಾಂಡದ ನಂತರ ಇದು ವೇಗ ಪಡೆದುಕೊಂಡಿತು. ಪೊಲೀಸರು ಇದನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು ಇದರ ಬೆಂಕಿ ಮತ್ತಷ್ಟು ಉರಿಯತೊಡಗಿತು. ನದಿ ನೀರು ಹಂಚಿಕೆ, ನೆರೆಯ ರಾಜ್ಯಗಳಲ್ಲಿ ಪಂಜಾಬಿ ಮಾತನಾಡುವ ಪ್ರದೇಶಗಳನ್ನು ಪಂಜಾಬ್‌ಗೆ ಸೇರ್ಪಡಿಸಬೇಕೆನ್ನುವ ಬೇಡಿಕೆ, ಚಂಡೀಘರ್‌ಅನ್ನು ಪಂಜಾಬ್‌ನ ರಾಜ್ಯವನ್ನಾಗಿಸಬೇಕೆನ್ನುವ ಕೆಲವು ಸಮಸ್ಯೆಗಳನ್ನು ಇದು ಮುನ್ನಲೆಗೆ ತಂದರೂ, ಹೊಸ ರಾಷ್ಟ್ರ ನಿರ್ಮಾಣದ ಸ್ಪಷ್ಟ ದೃಷ್ಟಿ ಇಲ್ಲದ ಕಾರಣ ಅದು ವಿಫಲಗೊಂಡಿತು. ಆಂದೋಲನದ ಉತ್ತುಂಗದಲ್ಲಿಯೂ ಕೂಡ ಅದಕ್ಕೆ ಜನಬೆಂಬಲವಿರಲಿಲ್ಲ. ಹೋರಾಟದ ಸಶಸ್ತ್ರ ಬಣಗಳ ನಡುವಿನ ದೊಡ್ಡ ಪ್ರಮಾಣದ ಆಂತರಿಕ ಕಚ್ಚಾಟಗಳನ್ನು ಬಳಸಿಕೊಂಡ ಪ್ರಭುತ್ವಕ್ಕೆ ಅದನ್ನು ಹತ್ತಿಕ್ಕುವುದು ಕಷ್ಟವಾಗಲಿಲ್ಲ.

ಖಲಿಸ್ತಾನದ ಬೇಡಿಕೆಯನ್ನು ಬೆಂಬಲಿಸುವವರು ಅದರ ವೈಫಲ್ಯಕ್ಕೆ ಕಾರಣವಾದ ಚಳವಳಿಯ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗಿದೆಯೇ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕಳೆದ ಎರಡು ದಶಕಗಳಲ್ಲಿ ಬಾದಲ್ ಕುಟುಂಬವು ಸಿಖ್ ಸಂಸ್ಥೆಗಳನ್ನು ವ್ಯಾಪಕವಾಗಿ ಹಾನಿಗೊಳಿಸಿರುವ ಕಾರಣ, ಸಿಖ್ಖರು ಹಿಂದೆಂದಿಗಿಂತಲೂ ಹೆಚ್ಚು ಚದುರಿಹೋಗಿದ್ದಾರೆ. ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ – ಮಹಿಳೆಯರು; ಮೂರನೇ ಒಂದು ಭಾಗದಷ್ಟಿರುವ ದಲಿತರು; ಹಾಗೂ, ಸುಮಾರು ಜನಸಂಖ್ಯೆಯಲ್ಲಿ ಶೇಕಡಾ 40%ರಷ್ಟಿರುವ ಹಿಂದೂಗಳು ಇದರ ಬಗ್ಗೆ ಮೌನವಾಗಿದ್ದಾರೆ.

ವಿದೇಶದಲ್ಲಿ ನೆಲೆಸಿರುವ ಸಿಖ್ಖರು

ಕಳೆದ ವರ್ಷದಿಂದಲೂ, ಪಂಜಾಬ್‌ನ ಹೊರತಾಗಿ ಭಾರತದ ಉಳಿದ ಭಾಗಗಳಲ್ಲಿ ವಾಸಿಸುವ ಸಿಖ್ಖರ ಬಗ್ಗೆ ತಿಳಿದುಕೊಳ್ಳಲು ನಾನು ಪ್ರಯಾಣಿಸುತ್ತಿರುವೆ. ಪ್ರಪಂಚದಾದ್ಯಂತವಿರುವ ಒಟ್ಟು ಸಿಖ್ಖರ ಜನಸಂಖ್ಯೆ ಸುಮಾರು 26 ಮಿಲಿಯನ್. ಅವರಲ್ಲಿ ಸುಮಾರು 18 ಮಿಲಿಯನ್ ಜನರು ಪಂಜಾಬ್‌ನಲ್ಲಿ ವಾಸಿಸುತ್ತಿದ್ದರೆ, ನಾಲ್ಕರಿಂದ ಐದು ಮಿಲಿಯನ್ ಜನರು ಭಾರತದ ಉಳಿದೆಡೆ ನೆಲೆಸಿದ್ದಾರೆ. ಇನ್ನುಳಿದ ಮೂರರಿಂದ ನಾಲ್ಕು ಮಿಲಿಯನ್ ಜನರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಎಲ್ಲರೊಂದಿಗಿನ ನನ್ನ ಮಾತುಕತೆಗಳಲ್ಲಿ ಪದೇಪದೇ ಧ್ವನಿಸಿದ್ದು ಅವರು ಪಂಜಾಬ್ ಸಮೃದ್ಧವಾಗಿರಬೇಕು ಮತ್ತು ಅಭಿವೃದ್ಧಿ ಹೊಂದಬೇಕೆಂದು ಬಯಸುತ್ತಾರೆಂಬುದು; ಆದರೆ ಅವರು ಖಲಿಸ್ತಾನಿ ಭಾವನೆಯನ್ನು ಉದ್ದೀಪಿಸಲು ಬಯಸುವುದಿಲ್ಲ. ಅಸ್ಸಾಂನಿಂದ ಕಚ್‌ವರೆಗೆ, ಕಾಶ್ಮೀರದಿಂದ ತಮಿಳುನಾಡಿನವರೆಗೆ ಹರಡಿರುವ ಸಿಖ್ಖರು ಸ್ಥಿರವಾದ ಜೀವನೋಪಾಯವನ್ನು ಹೊಂದಿದ್ದಾರೆ, ಕನೆಕ್ಟೆಡ್ ಆಗಿದ್ದಾರೆ ಮತ್ತು ದೇಶದಾದ್ಯಂತ ವ್ಯಾಪಾರವನ್ನು ಹೊಂದಿದ್ದಾರೆ. ಅವರು 1984ರಲ್ಲಿ ಸಿಖ್ ವಿರೋಧಿ ಹತ್ಯಾಕಾಂಡವನ್ನು ನೆನಪಿಸಿಕೊಳ್ಳುತ್ತಾರೆ. ಪಂಜಾಬಿನಲ್ಲಿ ಖಲಿಸ್ತಾನದ ಪರ ಭಾವನೆಗಳು ಉದ್ರೇಕಗೊಂಡಾಗಲೆಲ್ಲಾ, ಅದನ್ನು ತಮ್ಮ ನೆರೆಹೊರೆಯವರಿಗೆ ಅರ್ಥಮಾಡಿಸುವುದು ಕಷ್ಟವಾಗುತ್ತದೆ ಎಂದು ಅವರಲ್ಲಿ ಹಲವರು ನನಗೆ ಹೇಳಿದರು.

“ಖಲಿಸ್ತಾನ್ ಎಂಬ ಪದವು ಬೇರೆಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥವನ್ನು ಪಡೆದುಕೊಂಡಿದೆ. ಇಂದಿನ ಕಾಲಘಟ್ಟದಲ್ಲಿ ಪಂಜಾಬ್‌ಗೆ ಖಾಲಿಸ್ತಾನೆಂದರೆ ನ್ಯಾಯದ ಪರ ನಿಲ್ಲುವುದು ಎಂದು ತೋರುತ್ತದೆ.”

ವಿದೇಶದಲ್ಲಿರುವ ಸಿಖ್ ವಲಸಿಗರ ನಿಲುವು ಇದಕ್ಕಿಂತ ಭಿನ್ನವಾಗಿದೆ. 1980ರ ದಶಕದಲ್ಲಿ, ಅನೇಕ ಸಿಖ್ಖರು ವಿದೇಶಗಳಲ್ಲಿ ಆಶ್ರಯ ಪಡೆದುಕೊಂಡರು. ಅವರು ಪಂಜಾಬ್‌ನೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ, ಸ್ವದೇಶದಲ್ಲಿ ಆಗುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಹಾಗೂ ಅವಕ್ಕೆ ದೇಣಿಗೆಗಳನ್ನೂ ನೀಡುತ್ತಾರೆ. ಅವರು ಭಾರತದಲ್ಲಿನ ಸಿಖ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಂದು ರೀತಿಯ ಗುರುತಿನ ರಾಜಕೀಯವನ್ನು ತಮ್ಮ ಆತಿಥೇಯ ರಾಷ್ಟ್ರಗಳಲ್ಲಿ ಬೆಳೆಸಿದ್ದಾರೆ. ಅವರಲ್ಲಿ ಬಹಳಷ್ಟು ಯುವಕರು ತಮ್ಮ ಹಿಂದಿನ ಪೀಳಿಗೆಗಳ ಆಘಾತದ ನೆನಪುಗಳನ್ನು ಹೊಂದಿದ್ದಾರೆ, ಹೆಚ್ಚಿನ ಮಟ್ಟದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಹಾಗೂ ಇಲ್ಲಿನ ಸಮಸ್ಯೆಗಳ ಬಗ್ಗೆ ದನಿ ಎತ್ತುತ್ತಾರೆ. ಭಾರತವು ಸಿಖ್ಖರಿಗೆ ಅನ್ಯಾಯ ಮಾಡುತ್ತಿದೆ ಎಂಬ ನಂಬಿಕೆ ಅವರಲ್ಲಿ ಹೆಚ್ಚಿದಂತೆಲ್ಲಾ ಖಲಿಸ್ತಾನದಪರ ಒಲವು ಹೊಂದತ್ತಾರೆ. ಆಗಾಗ್ಗೆ, ಅವರು ಪಂಜಾಬ್‌ನಲ್ಲಿ ವಾಸಿಸುವ ಸಿಖ್ಖರಿಗಿಂತಲೂ ತಾವು ಉನ್ನತ ಎಂಬ ನಿಲುವುಗಳನ್ನು ತಳೆಯುತ್ತಾರೆ. ಇವು ಭಾವನೆಗಳು ಆಸ್ಪೋಟಿಸುವ ರೀತಿಯಾಗಿದ್ದು, ತಂತ್ರಗಾರಿಕೆಯಲ್ಲ.

ಕಾನೂನು ಸುವ್ಯವಸ್ಥೆಯ ಬಿಕ್ಕಟ್ಟು

ಲವ್‌ಪ್ರೀತ್ ಸಿಂಗ್ ತೂಫಾನ್‌ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲು ಅಮೃತಪಾಲನ ಗುಂಪು ಅಜ್ನಾಲಾ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದಾಗ, ಪೊಲೀಸರು ತೂಫಾನ್ ನಿರಪರಾಧಿಯೆಂದೂ, ಆತನನ್ನು ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಬಹುಬೇಗನೆ ಒಪ್ಪಿಕೊಂಡರು. ಈ ಘಟನೆಯು ಪಂಜಾಬ್‌ನ ಕರಾಳ ರಹಸ್ಯಗಳಲ್ಲಿ ಮುಖ್ಯವೆನಿಸುವ ಒಂದು ಅಂಶದ ಮೇಲೆ ಬೆಳಕುಚೆಲ್ಲಿತು: ಪೊಲೀಸರಿಂದ ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟವರಲ್ಲಿಯೂ ಬಹುತೇಕ ಅಮಾಯಕರೇ? ಇದರ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲದಿದ್ದರೂ ಎರಡು ಸ್ವತಂತ್ರ ಸಂಸ್ಥೆಗಳಾದ ಎನ್ಸಾಫ್ ಹಾಗೂ ಪಂಜಾಬ್ ಡಾಕ್ಯುಮೆಂಟೇಶನ್ ಮತ್ತು ಅಡ್ವೊಕಸಿ ಪ್ರಾಜೆಕ್ಟ್, 1980-90ರ ದಶಕದಲ್ಲಿ ಪ್ರಭುತ್ವದಿಂದಾಗಿ ನಾಪತ್ತೆಯಾದವರ (Enforced Disappearances) ಮತ್ತು ಕಾನೂನುಬಾಹಿರ ಹತ್ಯೆಗಳಲ್ಲಿ ಮೃತರಾದವರ ಸಂಖ್ಯೆಗಳನ್ನು ಸಂಗ್ರಹಿಸಿವೆ. ಅವರ ಕಾರ್ಯ ಮುಂದುವರಿಯುತ್ತಲಿದ್ದರೂ ಹೀಗೆ ಸತ್ತವರ ಸಂಖ್ಯೆ 8,000ಕ್ಕೆ ಏರುತ್ತಿದೆ. ಪಂಜಾಬಿನಲ್ಲಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಯ ವ್ಯಾಪ್ತಿಯ ಮತ್ತು ತೀವ್ರತೆಯ ಬಗ್ಗೆ ಇದು ನಮ್ಮನ್ನು ಎಚ್ಚರಿಸುವುದಿಲ್ಲವೇ?

ದೀಪ್ ಸಿಧು

ಉಗ್ರವಾದದ ಅಂತ್ಯದ ನಂತರ, ಪಂಜಾಬ್‌ನ ರಾಜಕಾರಣಿಗಳು ಗೂಂಡಾಗಳ ಗುಂಪುಗಳನ್ನು (ಗ್ಯಾಂಗ್) ಪೋಷಿಸಿದರು. ಇಂದು, ಪೊಲೀಸರ ಪ್ರಕಾರವೇ, ಪಂಜಾನಿನಲ್ಲಿ ಸುಮಾರು 70 ಗೂಂಡಾಗಳ ಗುಂಪುಗಳಿವೆ. ಕಳೆದ ದಶಕದಲ್ಲಿ, ಗೂಂಡಾಗಳ ಗುಂಪುಗಳ ನಡುವಿನ ಘರ್ಷಣೆಗಳು ಸಾಮಾನ್ಯವೆನಿಸಿದ್ದವು. ಜನಪ್ರಿಯ ಹಾಡುಗಳು ಸಹ ಬಂಧೂಕು, ಹಿಂಸೆ ಮತ್ತು ಸ್ತ್ರೀದ್ವೇಷವನ್ನೇ ಪ್ರತಿಬಿಂಬಿಸುತ್ತಿವೆ. ಕಳೆದ ಬೇಸಿಗೆಯಲ್ಲಿ, ಗಾಯಕ ಸಿಧು ಮೂಸ್ ವಾಲಾನ ಹತ್ಯೆ ನಡೆಯಿತು. ಕೆನಡಾ ಮೂಲದ ಗೋಲ್ಡಿ ಬ್ರಾರ್ ಹಾಗೂ ಆಗ ತಿಹಾರದ ಜೈಲಿನಲ್ಲಿ ಬಂಧಿಯಾಗಿದ್ದ ಲಾರೆನ್ಸ್ ಬಿಷ್ಣೋಯ್ ಮುನ್ನಡೆಸುತ್ತಿದ್ದ ಗುಂಪು ಇದರ ಹಿಂದಿತ್ತು ಎನ್ನಲಾಗುತ್ತದೆ. ಮಾರ್ಚ್ 14ರಂದು ಟಿವಿ ಚಾನೆಲ್ಲೊಂದು ಬಿಷ್ಣೋಯ್ ಅವರೊಂದಿಗಿನ ಒಂದು ಗಂಟೆ ಅವಧಿಯ ಸಂದರ್ಶನವನ್ನು ಪ್ರಸಾರ ಮಾಡಿತು. ಇದನ್ನು ಅವನು ಈಗ ಬಂಧಿಸಲ್ಪಟ್ಟಿರುವ ಬಥಿಂಡಾ ಜೈಲಿನಿಂದ ಪ್ರಸಾರ ಮಾಡಲಾಯಿತು ಎನ್ನಲಾಗುತ್ತದೆ. ಅದರಲ್ಲಿ, ತನ್ನ ಸಹಚರರ ಹತ್ಯೆಗಳಿಗೆ ಕಾರಣವಾದದ್ದಕ್ಕೆ ಮೂಸ್ ವಾಲಾನನ್ನು ಹತ್ಯೆಮಾಡಲಾಯಿತು ಎಂದು ಬಿಷ್ಣೋಯ್ ಹೇಳುತ್ತಾನೆ. ರಾಜಕೀಯ ಬೆಂಬಲವಿರುವ ಗೂಂಡಾಗಳ ಗುಂಪುಗಳು ಪಂಜಾಬಿಗೆ ದೊಡ್ಡ ಸಮಸ್ಯೆಯೆನಿಸಿವೆ.

1990ರ ದಶಕದಲ್ಲಿ, ಭಾರತ ತಾನಿನ್ನೂ ಜಾತ್ಯತೀತ ರಾಷ್ಟ್ರವೆಂದು ಹೇಳಿಕೊಳ್ಳುತ್ತಿರುವಾಗಲೇ ಭಾರತ ಸರ್ಕಾರವು ಖಲಿಸ್ತಾನ್ ಚಳವಳಿಯನ್ನು ನಿಗ್ರಹಿಸಿತು. ಕಳೆದ ಎಂಟು ವರ್ಷಗಳಿಂದ ಹಿಂದುತ್ವವಾದಿ ಸರ್ಕಾರ ಅಧಿಕಾರದಲ್ಲಿದೆ. ಮುಸ್ಲಿಮರನ್ನು ಥಳಿಸಲಾಗುತ್ತಿದೆ, ಕ್ರಿಶ್ಚಿಯನ್ನರನ್ನು ಗುರಿಪಡಿಸಲಾಗಿದೆ. ಸಂಸತ್ತು ಧಾರ್ಮಿಕ ಘೋಷಣೆಗಳನ್ನೇ ಪ್ರತಿಧ್ವನಿಸುತ್ತಿದೆ. ಹಿಂದೂ ರಾಷ್ಟ್ರದ ಬೇಡಿಕೆಗಳು ವಾಡಿಕೆಯಂತೆ ಪ್ರತಿಪಾದಿಸಲ್ಪಡುತ್ತಿವೆ. ಮಧ್ಯಸ್ಥ, ಎಡಪಂಥೀಯ ಅಥವಾ ಉದಾರವಾದ ಸೇರಿದಂತೆ ಭಿನ್ನಮತೀಯ ಧ್ವನಿಗಳೆಲ್ಲವೂ ರಾಷ್ಟ್ರದ ಈ ಮರುವ್ಯಾಖ್ಯಾನವನ್ನು ಬೇಧಿಸಲು ವಿಫಲವಾಗಿವೆ. ಹಿಂದಿ-ಹಿಂದೂ-ಹಿಂದೂಸ್ಥಾನದ ಬೇಡಿಕೆಯು ಖಲಿಸ್ತಾನವೆಂಬ ಪ್ರತಿ ಬೇಡಿಕೆಗೆ ಶಕ್ತಿ ತುಂಬುತ್ತಿದೆ. ತರ್ಕ ಸ್ಪಷ್ಟವಾಗಿದೆ: ಹಿಂದೂಗಳು ಹಿಂದೂ ರಾಷ್ಟ್ರ ಬೇಕೆಂದು ಒತ್ತಾಯಿಸಬಹುದಾದರೆ, ಸಿಖ್ಖರು ಖಲಿಸ್ತಾನವನ್ನು ಬಯಸುವುದರಲ್ಲಿ ತಪ್ಪೇನು?

ಹಿಂದೂ ರಾಷ್ಟ್ರದ ಬೇಡಿಕೆಗಳು ದೊಡ್ಡಮಟ್ಟದಲ್ಲಿ ಏಳುತ್ತಿರುವ ಹೊತ್ತಿನಲ್ಲಿ ಖಲಿಸ್ತಾನದ ಬೇಡಿಕೆಯು ಕೊನೆಯಲ್ಲಿ ಬಿಜೆಪಿಗೇ ಉಪಕಾರಿಯೆನಿಸಿರುವುದು ವಿಪರ್ಯಾಸ. ಪಂಜಾಬ್ ಎಂದೂ ಕೇಸರಿಮಯವಾಗಿರಲಿಲ್ಲ. ಕಾಲುಶತಮಾನಕ್ಕೂ ಹೆಚ್ಚು ಕಾಲ ಬಿಜೆಪಿ ಅಕಾಲಿ ದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡೇ ಹಿಂದೂಗಳು ಹೆಚ್ಚಿರುವ ನಗರಪ್ರದೇಶಗಳಲ್ಲಿ ಸ್ಪರ್ಧಿಸಿ, ಎರಡಂಕಿಯನ್ನು ತಲುಪಿತ್ತು. ಅಕಾಲಿದಳದ ಪತನದಿಂದಾಗಿ ಮತ್ತು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂಬ ಬೇಡಿಕೆಯಿಂದಾಗಿ 2020ರಲ್ಲಿ ಬಿಜೆಪಿಯೊಂದಿಗಿನ ಅಕಾಲಿ ದಳದ ಮೈತ್ರಿ ಮುರಿದುಬಿದ್ದ ಹಿನ್ನೆಲೆಯಲ್ಲಿ, ಪಂಜಾಬಿನ ವಿಧಾನಸಭೆಯಲ್ಲಿ ಬಿಜೆಪಿಯ ಬಲ ಎರಡು ಸ್ಥಾನಗಳಿಗೆ ಇಳಿದಿದೆ.

2017ರಲ್ಲಿ, ಬಿಜೆಪಿ ಸ್ಥಾನಗಳು ಕಾಂಗ್ರೆಸ್ ಪಾಲಾಯಿತು ಮತ್ತು 2022ರಲ್ಲಿ ಎಎಪಿ ಪಾಲಾಯಿತು. ಸಿಖ್ ರಾಜಕೀಯದಲ್ಲಿ ಅಮೃತಪಾಲ್ ಸಿಂಗ್‌ನ ಪಾತ್ರವನ್ನು ಇಷ್ಟು ಬೇಗನೆ ನಿರ್ಣಯಿಸಲು ಕಷ್ಟ. ಆದರೆ, ಹಿಂದೂ ಮತ್ತು ಸಿಖ್ ಸಮುದಾಯವೆರಡೂ 1980ರ ದಶಕದ ಪುನರಾವರ್ತನೆಯನ್ನು ತಡೆಯಲು ಬಹಳ ಪ್ರಯತ್ನಿಸುತ್ತಿದ್ದಾರೆ. ಇದು ಬಿಜೆಪಿಗೆ ಸಹಕಾರಿಯಾಗಿದೆ. ಆಡಳಿತ ನಡೆಸಲು ತನ್ನ ಮೊದಲ ವರ್ಷದಲ್ಲಿ ಎಡವುತ್ತಿರುವ ಎಎಪಿಯನ್ನು ಗಮನಿಸಿದರೆ, ಚುನಾವಣಾ ರಾಜಕೀಯ ಡೋಲಾಯಮಾನವಾಗಿರುವುದು ಸ್ಪಷ್ಟವಾಗುತ್ತದೆ. ಒಂದಿಷ್ಟು ಸೀಟು ಗೆದ್ದರೆ ಬಿಜೆಪಿಗೆ ನೆಲೆ ಸಿಕ್ಕಂತಾಗಲಿದೆ. ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ನಾವು ಕಂಡಂತೆಯೇ, ಮುಂದಿನ ಸರ್ಕಾರವನ್ನು ಯಾರು ರಚಿಸುವರೋ ಅವರೊಂದಿಗೆ ಬಿಜೆಪಿ ಮೈತ್ರಿಮಾಡಿಕೊಳ್ಳಲಿದೆ ಮತ್ತು ಅಧಿಕಾರಕ್ಕೆ ಬರಲಿದೆ. ಹಿಂದೂ ರಾಷ್ಟ್ರದ ಯೋಜನೆಗೆ ಪ್ರಮುಖವೆನಿಸುವುದು ಅದನ್ನು ಜನರು ಹೇಗೆ ಕಾಣುತ್ತಾರೆ ಎಂಬುದು ಮಾತ್ರ.

ದುರಾಡಳಿತದಿಂದಾಗಿ ಪಂಜಾಬ್ ಕುದಿಯುತ್ತಿದೆ. ಅದು ದೀಪ್ ಸಿಧು ಆಗಿರಲಿ ಅಥವಾ ಅಮೃತಪಾಲ್ ಸಿಂಗನೇ ಆಗಿರಲಿ, ರಾಜ್ಯವು ಎಲ್ಲಿಯವರೆಗೆ ಜನರ ಪರ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಮೂಲಭೂತವಾದಿಗಳು ಮುನ್ನಲೆಗೆ ಬರುತ್ತಲೇ ಇರುತ್ತಾರೆ. ಖಲಿಸ್ತಾನ್ ಪದವು ಬೇರೆಬೇರೆ ಸಂದರ್ಭಗಳಲ್ಲಿ ಬೇರೆಬೇರೆ ಅರ್ಥಗಳನ್ನು ಪಡೆದುಕೊಂಡಿವೆ. ಇಂದು, ಪಂಜಾಬಿಗರು ಅದನ್ನು ನ್ಯಾಯಕ್ಕಾಗಿ ನಿಲ್ಲುವುದು ಎಂದು ಅರ್ಥೈಸಿದ್ದಾರೆ. ಈ ಗಡಿ ರಾಜ್ಯಕ್ಕೆ ಅಗತ್ಯವಿರುವ ನ್ಯಾಯ, ಚಿಕಿತ್ಸೆಗಾಗಿ ಮುಲಾಮು ಮತ್ತು ಸಹಾಯ ಒದಗಿಸುವುದೇ ರಾಷ್ಟ್ರದ ಹಿತಾಸಕ್ತಿಯಾಗಿದೆ.

ಅಮನದೀಪ್ ಸಂಧು

ಅಮನದೀಪ್ ಸಂಧು
ಹೋಮಿ ಬಾಬಾ ಫೆಲೋ ಮತ್ತು Panjab: Journeys Through Fault Linesನ ಲೇಖಕರು

ಕೃಪೆ: ಫ್ರಂಟ್‌ಲೈನ್ ಪತ್ರಿಕೆ

ಕನ್ನಡಕ್ಕೆ: ಶಶಾಂಕ್ ಎಸ್ ಆರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...