Homeಮುಖಪುಟಮಾನವಸ್ತ್ರಗಳಿಗೆ ದುಮ್ಮಾನದ ವರ್ಷ- 2021

ಮಾನವಸ್ತ್ರಗಳಿಗೆ ದುಮ್ಮಾನದ ವರ್ಷ- 2021

- Advertisement -
- Advertisement -

ಭಾರತೀಯ ಮಾಧ್ಯಮಗಳ ಮಟ್ಟಿಗೆ 2021ನ್ನು ಒಂದು ಚಿತ್ರವಾಗಿ ಊಹಿಸಿಕೊಳ್ಳುವುದು ಸಾಧ್ಯವೇ?
ಹಾಗೆ ಊಹಿಸಿಕೊಳ್ಳಲು ಪ್ರಯತ್ನಿಸಿದಾಗ ನನಗೆ ಹೊಳೆದ ಏಕೈಕ ಚಿತ್ರ ಎಂದರೆ: ವರ್ಷ ಪೂರ್ತಿ ಮತ್ತೆಮತ್ತೆ ಬೆತ್ತಲಾಗುತ್ತಿದ್ದ ಧಣಿಗಳಿಗಾಗಿ ಒದ್ದಾಡಿ ಸಂಗ್ರಹಿಸಿದ ಮಾನವಸ್ತ್ರದ ಚೌಕಗಳನ್ನು ಅಡ್ಡ ಹಿಡಿಯಲು ಹರಸಾಹಸಪಡುತ್ತಿದ್ದ ಬೆತ್ತಲು ಮನುಷ್ಯರ ಚಿತ್ರ ಅದು!

ಕೋವಿಡ್ ಮತ್ತದರ ನಿರ್ವಹಣೆಯಲ್ಲಿ ಕಾಣಿಸಿಕೊಂಡ ಲೋಪಗಳು, ತಲೆಯೆತ್ತಲಾರಂಭಿಸಿದ ಹಗರಣಗಳು ಒಟ್ಟಾಗಿ ಕಾಡತೊಡಗಿ, ವರ್ಷಪೂರ್ತಿ ಬ್ಯಾಕ್‌ಫುಟ್ ರಕ್ಷಣಾತ್ಮಕ ಆಟ ಆಡುತ್ತಿದ್ದ ಪ್ರಭುತ್ವ, 2021 ಜನರ ನೆನಪಿನ ಪಟಲದಿಂದ ಬಹುಬೇಗ ಮರೆಯಾಗಲಿ ಎಂದು ಹಾರೈಸುತ್ತಿದ್ದರೆ ಅಚ್ಚರಿ ಇಲ್ಲ. ಏಕೆಂದರೆ, 2022ರಲ್ಲಿ ತನ್ನ ಆಟ ಮುಗಿದಿರುತ್ತದೆ ಎಂಬ ಅಫಿಡವಿಟ್ಟನ್ನು ಕೋವಿಡ್ ಇನ್ನೂ ಕೊಟ್ಟಿಲ್ಲ. 2022ರ ಕೊನೆಯಲ್ಲಿ ಮತ್ತೊಮ್ಮೆ ಜನಾದೇಶಕ್ಕೆ ಸಿದ್ಧತೆ ಆರಂಭಿಸಿಕೊಳ್ಳಬೇಕಿರುವ ಒಕ್ಕೂಟ ಸರ್ಕಾರ ಆ ಹೊತ್ತಿಗೆ ತನ್ನ ಸ್ಲೇಟ್ ಕ್ಲೀನ್ ಇರಬೇಕೆಂದು ಬಯಸುವುದು ಸಹಜ.

ಒಕ್ಕೂಟ ಸರ್ಕಾರ 2021ರ ಉದ್ದಕ್ಕೂ ತನ್ನ ಕಷ್ಟಕಾಲದಲ್ಲಿ ಮಾನ ಕಾದ ತನ್ನ ಮಟ್ಟೆ ಮಾಧ್ಯಮಗಳಿಗೆ ಕೃತಜ್ಞವಾಗಿರಬೇಕು. ಏಕೆಂದರೆ ಈ ಮಾಧ್ಯಮಗಳು ತಮ್ಮ ಅನ್ನದ ಧಣಿಗಳ ಮಾನ ಕಾಯುವ ಸಣ್ಣ ಅವಕಾಶವನ್ನೂ ಕೈಚೆಲ್ಲಿಲ್ಲ. ಅಂತಹ ನೂರಾರು ಉದಾಹರಣೆಗಳನ್ನು ಹೆಕ್ಕಿ ತೋರಿಸಬಹುದು. ಒಂದು ಸಮಸ್ಯೆಗೆ ಇನ್ನೊಂದು ಸಮಸ್ಯೆಯನ್ನು ಜಕ್ಸ್ಟಾಪೋಸ್ ಮಾಡುತ್ತಾ ಹೋಗುವುದನ್ನೇ ಕಾರ್ಯತಂತ್ರ ಮಾಡಿಕೊಂಡ ಈ ಮಾಧ್ಯಮಗಳ ಕಾರ್ಯವೈಖರಿಯ ಒಂದು ಪುಟ್ಟ ಮೆಲುಕು ಇಲ್ಲಿದೆ:ಅದಾಗಲೇ ದೇಶದಾದ್ಯಂತ ಬಿಸಿ ಏರಿಸಿದ್ದ ರೈತ ಹೋರಾಟಕ್ಕೆ ಬಲ ಬಂದದ್ದು, ಜನವರಿ 12ರಂದು ಸುಪ್ರೀಂಕೋರ್ಟು ರೈತ ವಿರೋಧಿ ಕಾಯಿದೆಗಳಿಗೆ ತಡೆ ನೀಡಿದಾಗ. ಅದಾಗಿ ಮೂರೇ ದಿನಕ್ಕೆ ಅಂದರೆ ಜನವರಿ 16ರಿಂದ ಭಾರತದಲ್ಲಿ ಲಸಿಕೆ ಉತ್ಸವ ಆರಂಭಗೊಂಡಿತು. ರೈತರ ಗದ್ದಲದ ಬಗ್ಗೆ ಕಸಿವಿಸಿಯಲ್ಲಿದ್ದ ಮಾಧ್ಯಮಗಳಿಗೆ ಲಸಿಕೆ ಬೂಸ್ಟರ್ ಸಿಕ್ಕಿಬಿಟ್ಟಿತ್ತು.

ಜನವರಿ 16ರ ಹೊತ್ತಿಗೆ ಅರ್ನಬ್ ಗೋಸ್ವಾಮಿ-ಪಾರ್ಥೋದಾಸ್ ಗುಪ್ತಾ ಅವರ ನಡುವಿನ ಮಾತುಕತೆಗಳ ವಾಟ್ಸಾಪ್ ದಾಖಲೆಗಳು ಬಿಡುಗಡೆಗೊಂಡದ್ದು ಸರ್ಕಾರ ಮತ್ತು ಡಿಯರ್ ಮೀಡಿಯಾಗಳ ನಡುವಿನ ಸಂಬಂಧಗಳನ್ನು ಬಟಾಬಯಲುಗೊಳಿಸಿದರೆ, ಅದರ ಬೆನ್ನಿಗೇ ಜನವರಿ 26ರಂದು ಗಣರಾಜ್ಯ ದಿನ ದಿಲ್ಲಿಯಲ್ಲಿ ನಡೆದ ಗದ್ದಲ ಮಾಧ್ಯಮಗಳಿಗೆ ಮತ್ತೆ ಜೀವ ಕೊಟ್ಟಿತ್ತು.

ಮತ್ತೆ ಕೋವಿಡ್ ಸಂಬಂಧಿ ಸಂಗತಿಗಳು ಮುನ್ನೆಲೆಗೆ ಬರತೊಡಗಿದಂತೆಲ್ಲ ಏಕಾಏಕಿ “ದಿಶಾರವಿ ಟೂಲ್ ಕಿಟ್ ಪ್ರಹಸನ” ಅನಾವರಣಗೊಂಡಿತು.

ತಾನು ಕೋವಿಡ್ ಜಗನ್ಮಾರಿಯನ್ನು ಗೆದ್ದಾಗಿದೆ ಎಂದು ಬೀಗಿ ಕುಳಿತಿದ್ದ ಸರ್ಕಾರಕ್ಕೆ ಕೋವಿಡ್ ಎರಡನೇ ಅಲೆ ಅಪ್ಪಳಿಸಿದಾಗ ಅಡಗುವುದಕ್ಕೆ ಜಾಗ ಇರಲಿಲ್ಲ. ಏಪ್ರಿಲ್-ಜುಲೈ ನಡುವಿನ ಅವಧಿ ಒಕ್ಕೂಟ ಸರ್ಕಾರಕ್ಕೆ ಬಹಳ ಕಸಿವಿಸಿ ಉಂಟುಮಾಡಿದ ಮೂರು ತಿಂಗಳುಗಳು. ಯಾವ ಮಾನವಸ್ತ್ರವೂ ಸಾಕಾಗದು ಎಂಬಂತಹ ಸ್ಥಿತಿ. ಫ್ರಾನ್ಸಿನ ಮೀಡಿಯಾ ಪಾರ್ಟ್ ಸಂಸ್ಥೆ ರಫೇಲ್ ವಿಮಾನಗಳಿಗೆ ಸಂಬಂಧಿಸಿ ಇನ್ನಷ್ಟು ಆಘಾತಕಾರಿ ಮಾಹಿತಿ ಹೊರಹಾಕಿದರೆ, ಇನ್ನೊಂದೆಡೆ ಸುಪ್ರೀಂ ಕೋರ್ಟು ಸೋಷಿಯಲ್ ಮೀಡಿಯಾವನ್ನು ಪ್ರತಿಬಂಧಿಸುವ ಸರ್ಕಾರದ ಪ್ರಯತ್ನಗಳ ವಿರುದ್ಧ ಗರಂ ಆಯಿತು. ಅತ್ತ ದೇಶದಲ್ಲಿ ಕೋವಿಡ್ ಸಾವುಗಳ ಸಂಖ್ಯೆ ಅಧಿಕೃತವಾಗಿ ಎರಡು ಲಕ್ಷದ ಗಡಿ ದಾಟಿದರೆ, ಇತ್ತ ಗಂಗೆಯಲ್ಲಿ ಶವಗಳ ಪ್ರವಾಹ ಬಂತು. ಪೆಗಸಸ್ ಹಗರಣ ಸದ್ದು ಮಾಡಿತು. ಮೀಡಿಯಾ ತನ್ನ ಕಡೆಯಿಂದ ಆಕ್ಸಿಜನ್ ಸರಬರಾಜು, ಬೆಡ್ ಬ್ಲಾಕಿಂಗ್ ಹಗರಣ, ಪರಿಹಾರ ಪ್ಯಾಕೇಜುಹೀ॒ಗೆ ಹತ್ತಾರು ಮಾನವಸ್ತ್ರಗಳನ್ನು ಅಡ್ಡ ಹಿಡಿಯಲು ಪ್ರಯತ್ನಿಸಿತಾದರೂ, ಯಾವುದೂ ರಕ್ಷಣೆಗೆ ಬರಲಿಲ್ಲ. ಕಟ್ಟಕಡೆಗೆ ರಕ್ಷಣೆಗೆ ಬಂದದ್ದು ಒಲಿಂಪಿಕ್ ಚಿನ್ನ!

ಸೆಪ್ಟಂಬರ್‌ನಲ್ಲಿ ಗುಜರಾತಿನ ಮುಂದ್ರಾ ಬಂದರಿನಲ್ಲಿ 3000 ಕೆಜಿ ಮಾದಕ ದ್ರವ್ಯ ಪತ್ತೆ ಆದದ್ದು ದೇಶದ ಹುಬ್ಬೇರಿಸತೊಡಗಿದರೆ, ಅದಾಗಿ ಎರಡೇ ವಾರದಲ್ಲಿ ನಟ ಶಾರೂಕ್ ಖಾನ್ ಮಗ ಮಾದಕದ್ರವ್ಯ ಬಳಕೆಗಾಗಿ ಬಂಧನಕ್ಕೊಳಗಾದದ್ದು ರಾಷ್ಟ್ರೀಯ ಸುದ್ದಿಯಾಗಿಬಿಡುತ್ತದೆ.

ನವೆಂಬರ್ 19ರಂದು ರೈತ ವಿರೋಧಿ ಕಾಯಿದೆಗಳನ್ನು ಭಾರತ ಸರ್ಕಾರ ಹಿಂದೆಗೆದುಕೊಳ್ಳಲು ನಿರ್ಧರಿಸಿದಾಗ ಎಷ್ಟೇ ಹೆಣಗಾಡಿದರೂ ಅದನ್ನು “ಮಾಸ್ಟರ್ ಸ್ಟ್ರೋಕ್” ಎಂದು ಬಿಂಬಿಸುವಲ್ಲಿ ವೈಫಲ್ಯ ಅನುಭವಿಸಿದ ಮಾಧ್ಯಮಗಳಿಗೆ, ಡಿಸೆಂಬರ್ ಮೊದಲ ವಾರದಲ್ಲೇ ಅಕಸ್ಮಾತ್ ಸಂಭವಿಸಿದ ಒಂದು ಹೆಲಿಕಾಪ್ಟರ್ ದುರಂತ, ದೇಶಭಕ್ತಿಯ ಪ್ರಚಾರಕ್ಕೆ ವೇದಿಕೆ ಒದಗಿಸುತ್ತದೆ.

ಒಟ್ಟಿನಲ್ಲಿ ಇಡೀ ವರ್ಷ ಆಳುವವರಿಗೆ ಹೆಜ್ಜೆಹೆಜ್ಜೆಗೂ ಮುಜುಗರ ಮತ್ತು ಡಿಯರ್ ಮಿಡಿಯಾಕ್ಕೆ ತಮ್ಮ ಧಣಿಗಳನ್ನು ಮುಜುಗರದಿಂದ ರಕ್ಷಿಸಲು ಭರಪೂರ ಕೆಲಸ. ಇಷ್ಟು ಬಿಟ್ಟರೆ, ಒಂದು ಜಗನ್ಮಾರಿಯನ್ನು ದೇಶ ಹೇಗೆ ನಿರ್ವಹಿಸಿತು ಎಂಬುದನ್ನು ದಾಖಲಿಸುವಲ್ಲಿ, ಕೋವಿಡ್ ಲಾಕ್‌ಡೌನಿನ ಕಾರಣದಿಂದಾಗಿ ದೇಶದೊಳಗೆ ಉಂಟಾಗಿರುವ ಆರೋಗ್ಯ-ಆರ್ಥಿಕಸಾಮಾಜಿಕ ಸಂಕಷ್ಟಗಳನ್ನು ಬಿಂಬಿಸುವಲ್ಲಿ, ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಅನೈತಿಕ ನಡವಳಿಕೆಗಳ ಆಪಾದನೆ ಬಂದಾಗ ಅದನ್ನು ನಿಕಷಕ್ಕಿರಿಸಿ ನೋಡುವಲ್ಲಿಯಾಗಲೀಭಾ॒ರತೀಯ ಮಾಧ್ಯಮಗಳ ಪಾತ್ರ ಸಂಪೂರ್ಣ ವೈಫಲ್ಯದ್ದು.

ಡಿಜಿಟಲ್ ಜಗತ್ತು

ಈಗ ಪ್ರಿಂಟ್ ಮತ್ತು ಟೆಲಿವಿಷನ್ ಮಾಧ್ಯಮಗಳಷ್ಟೇ ಸುದ್ದಿಮೂಲ ಅಲ್ಲವಾಗಿರುವುದರಿಂದ, ಆ ಬಾವಿಗಳಿಂದಾಚೆ ವಿಶಾಲವಾದ ಸಮುದ್ರದಲ್ಲಿ ಈಜಾಡಲು ದೇಶದ (ಮಾತ್ರವಲ್ಲ ಜಗತ್ತಿನ) ಜನ ಕಲಿತುಬಿಟ್ಟಿದ್ದಾರೆ. ಕೋವಿಡ್ ಕಾಲ ಈ ಕಲಿಕೆಯನ್ನು ಇನ್ನಷ್ಟು ಸಲೀಸುಗೊಳಿಸಿದೆ ಎಂಬುದು ಅಚ್ಚರಿಯಾದರೂ ಸತ್ಯ.

2021ರ ಆರಂಭದ ಹೊತ್ತಿಗೆ, ಜಗತ್ತಿನಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 522 ಕೋಟಿಗೆ ಏರಿದ್ದು, ಇದು 2019ರ ಅಂಕಿಸಂಖ್ಯೆಗಳಿಗೆ ಹೋಲಿಸಿದರೆ 66.6% ಏರಿಕೆಯಂತೆ. ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯೂ ಜಾಗತಿಕವಾಗಿ ಈ ಅವಧಿಯಲ್ಲಿ 466 ಕೋಟಿಗೆ ಏರಿದೆ (59.5%ಹೆಚ್ಚಳ). ಸೋಷಿಯಲ್ ಮೀಡಿಯಾ ಬಳಕೆದಾರರ ಸಂಖ್ಯೆಯ 420 ಕೋಟಿಗೆ ಏರಿದ್ದು, ಇದು 53.6%ಹೆಚ್ಚಳ. ಇದೆಲ್ಲಕ್ಕಿಂತಲೂ ಗಮನಾರ್ಹವಾದ ಒಂದು ಸ್ಟಾಟಿಸ್ಟಿಕ್ಸ್ ಇದೆ. ಅದು ಯಾವುದೆಂದರೆ, ಸುದ್ದಿ ಮತ್ತು ಸೋಷಿಯಲ್ ಮೀಡಿಯಾಗಳಿಗೆ ಮೊಬೈಲ್ ಬಳಸುವವರ ಪ್ರಮಾಣ ಈಗ 98.8%.

ಕೋವಿಡ್ ಕಾಲದ ಈ ಅಂಕಿಸಂಖ್ಯೆಗಳು 2021ರ ಆರಂಭದ್ದಾದರೂ (ಆಧಾರ: ಹೂಟ್ಸೂಟ್ ಸಮೀಕ್ಷೆ 2021. ಆ ಬಳಿಕದ ಅಂಕಿ-ಅಂಶಗಳು ಈ ಲೇಖನ ಸಿದ್ಧಗೊಳ್ಳುವ ಹೊತ್ತಿಗೆ ಲಭ್ಯವಿಲ್ಲ), ಬದಲಾಗುತ್ತಿರುವ ಮಾಧ್ಯಮ ಜಗತ್ತಿನ ಬಗ್ಗೆ ಇವು ಬಹಳಷ್ಟು ಒಳನೋಟಗಳನ್ನು ಕೊಡಬಲ್ಲವು.

ರಾಶಿರಾಶಿ ಸುಳ್ಳು ಸುದ್ದಿಗಳು, ಪ್ರೊಪಗಾಂಡಾ ಸುದ್ದಿಗಳ ಹೊರತಾಗಿಯೂ ಡಿಜಿಟಲ್ ಮಾಧ್ಯಮ ಉಳಿಯಲು ಮತ್ತು ಪ್ರತೀ ವರ್ಷ ಬೆಳೆಯಲು ಸಾಧ್ಯವಾಗುತ್ತಿದೆ ಎಂದರೆ ಅದರ ಅರ್ಥ, ಸುದ್ದಿಯ ಬಳಕೆದಾರರು ನಿಧಾನಕ್ಕೆ ತಮಗೆ ಈ ಮಹಾಸಾಗರದಲ್ಲಿ ಬೇಕಾದದ್ದೇನು ಎಂಬುದನ್ನು ಕಂಡುಕೊಳ್ಳುವುದಕ್ಕೆ ಆರಂಭಿಸಿದ್ದಾರೆ ಎಂದೇ ಅಲ್ಲವೆ? ಭಾರತದಲ್ಲೇ ಈಗ ವ್ಯಕ್ತಿಯೊಬ್ಬರ ಇಂಟರ್‌ನೆಟ್ ಬಳಕೆಯ ಸರಾಸರಿ ಅವಧಿ ದಿನವೊಂದರ 6.36 ನಿಮಿಷಗಳು. ಈ ಅಲ್ಪಾವಧಿಗೇ ಜಾಹೀರಾತು ಮಾರುಕಟ್ಟೆಯ 28% ಪಾಲು ಡಿಜಿಟಲ್ ಮಾಧ್ಯಮಗಳದು. ಇನ್ನಿದು ದಿನಕ್ಕೆ 30 ನಿಮಿಷಗಳಿಗೆ ಏರಿದರೂ ಎಲ್ಲಿಗೆ ತಲುಪೀತು ಎಂದು ಊಹಿಸಿಕೊಳ್ಳಿ. ವರ್ಷಕ್ಕೆ 20% ದರದಲ್ಲಿ ಬೆಳೆಯುತ್ತಿರುವ ಡಿಜಿಟಲ್ ಮಾಧ್ಯಮ ಮಾರುಕಟ್ಟೆ ಇನ್ನು ಐದು ವರ್ಷಗಳಲ್ಲಿ ಪ್ರಿಂಟ್ ಮತ್ತು ಟೆಲಿವಿಷನ್‌ಗಳನ್ನು ಹಿಂದಿಕ್ಕಲಿದೆ ಎಂಬುದಕ್ಕೆ ಯಾವುದೇ ಸಂಶಯ ಬೇಡ.

ಇಂತಹದೊಂದು ಮಾಹಿತಿ ಮಹಾಪೂರವನ್ನು ಎದುರಿಸಲು ಭಾರತ ಸರ್ಕಾರ ಸಜ್ಜಾಗಿದೆಯೇ? ಭಾರತ ಸರ್ಕಾರ ಫೆಬ್ರವರಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಡಿಜಿಟಲ್ ಮಾಧ್ಯಮಕ್ಕೆ ನಿಯಮಗಳನ್ನು [The Information Technology (Intermediary Guidelines and Digital Media Ethics Code) Rules, 2021] ಜಾರಿಗೊಳಿಸಿದೆ. ಆದರೆ, ಈ ವರ್ಷದ ಅಂತ್ಯದ ತನಕವೂ ತಳಮಟ್ಟದಲ್ಲಿ ಡಿಜಿಟಲ್ ಮಾಧ್ಯಮವನ್ನು ಒಂದು ಶಿಸ್ತಿಗೆ ಒಳಪಡಿಸುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ, ಈ ಕೆಲಸ ಮಾಡಬೇಕಾದ ಸರ್ಕಾರಗಳೇ ಸ್ವತಃ (ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು) ಡಿಜಿಟಲ್ ಮಾಧ್ಯಮವನ್ನು ಸಕ್ರಿಯವಾಗಿ ಪ್ರೊಪಗಾಂಡಾ ಮಾಧ್ಯಮವಾಗಿ ಬಳಸಿಕೊಳ್ಳುವ ಆಟದಲ್ಲಿ ತೊಡಗಿಕೊಂಡಿವೆ. ಫೇಸ್‌ಬುಕ್, ಟ್ವಿಟ್ಟರ್, ಯುಟ್ಯೂಬ್, ವಾಟ್ಸಾಪ್‌ನಂತಹ ದೊಡ್ಡ ಕುಳಗಳನ್ನು ತಮ್ಮ ಮೂಗಿನ ನೇರಕ್ಕೆ ಬಗ್ಗಿಸಿಕೊಳ್ಳುವ ಕೆಲಸಕ್ಕಷ್ಟೇ ಈ ನಿಯಮಗಳು ಸೀಮಿತಗೊಂಡಂತಿದೆ. ಡಿಜಿಟಲ್ ಮಾಧ್ಯಮಗಳ ಚಟುವಟಿಕೆಗಳಿಗೆ ಪೂರಕವಾಗಿ ಚಾಲ್ತಿಯಲ್ಲಿರಬೇಕಿದ್ದ ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ 2019 ಇನ್ನೂ ಸ್ಥಾಯೀ ಸಮಿತಿ ಪರಿಶೀಲನೆಯೆಂಬ ನೆನೆಗುದಿಯಲ್ಲಿದೆ. ಹಾಗಾಗಿ, ಒಟ್ಟಿನಲ್ಲಿ ಒಂದು ಪ್ರಭಾವೀ ಮಾಧ್ಯಮ ವ್ಯವಸ್ಥೆಯನ್ನು ಅದು ವೇಗವಾಗಿ ಬೆಳೆಯುತ್ತಿರುವಾಗ ಶಾಸನಾತ್ಮಕವಾಗಿ ನಿಯಂತ್ರಿಸಲು ಸರ್ಕಾರಕ್ಕೆ ಈ ವರ್ಷವೂ ಸಾಧ್ಯವಾಗಿಲ್ಲ.

ಜಾಗತಿಕ ರಂಗ

ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಎಲ್ಲ ರಂಗಿನಾಟಗಳನ್ನೂ ಸಹಿಸಿಕೊಂಡು ಬಂದಿದ್ದ ಅಮೆರಿಕದ ಮಾಧ್ಯಮಗಳಿಗೆ ವರ್ಷದ ಆರಂಭದಲ್ಲೇ ದೊರೆತ ಶಾಕ್ ಟ್ರೀಟ್ಮೆಂಟ್, ಜಾಗತಿಕವಾಗಿ ಮಾಧ್ಯಮಗಳಿಗೆ ಎಷ್ಟರಮಟ್ಟಿಗೆ ಪಾಠವಾದೀತು ಎಂಬುದನ್ನು ಕಾದು ನೋಡಬೇಕಿದೆ. ದೇಶ ಮತ್ತು ಸಂವಿಧಾನವನ್ನು ಮೀರಿ ಬೆಳೆಯತೊಡಗಿದ ನಾಯಕರನ್ನು ಸಮರ್ಥಿಸಿಕೊಂಡು ಹೊರಟರೆ ಒಂದು ಹಂತದಲ್ಲಿ ತಾವು ಸ್ವತಃ ಸಮರ್ಥನೆಯ ಗಡಿಯಾಚೆ ನಿಂತಿರುತ್ತೇವೆ ಎಂಬುದನ್ನು ಅಮೆರಿಕದ ಮಾಧ್ಯಮಗಳಿಗೆ ಅರ್ಥ ಮಾಡಿಸಿಕೊಟ್ಟದ್ದು ಟ್ರಂಪ್ ಬಳಗದ “ಸಂಸದ್ ಭವನ” (Capitol) ದಂಡಯಾತ್ರೆ.

ಸುದ್ದಿಯೊಂದನ್ನು ಅರ್ಥೈಸಿಕೊಳ್ಳುವ ಮುನ್ನ ಮಾಧ್ಯಮಗಳು ಸತ್ಯವನ್ನು ಯಾವ ಮಗ್ಗುಲಿನಿಂದ ನೋಡುತ್ತವೆ ಎಂಬುದನ್ನು ಅರ್ಥೈಸಿಕೊಳ್ಳಬೇಕೆಂಬ ಪಾಠವನ್ನು ಕಲಿಸಿಕೊಟ್ಟದ್ದು ಅಫ್ಘಾನಿಸ್ಥಾನದ ಘಟನೆಗಳು. ತಾಲಿಬಾನಿ ಆಡಳಿತ ಎಂಬುದು ಆಧುನಿಕ ಆಡಳಿತದ ಕ್ರೌರ್ಯಕ್ಕೆ ಇನ್ನೊಂದು ಹೆಸರು ಎಂಬ ಮಟ್ಟಕ್ಕೆ ಅಭಿಪ್ರಾಯ ರೂಪಿಸಲಾಗಿತ್ತು.

ಆದರೆ, ಮೊನ್ನೆ ಆಗಸ್ಟ್‌ನಲ್ಲಿ ಏಕಾಏಕಿ ಅಮೆರಿಕ ತನ್ನ ಸೇನೆಯನ್ನು ಅಲ್ಲಿಂದ ಹಿಂದೆಗೆದುಕೊಂಡ ಬಳಿಕ, ಮತ್ತೆ ಅಲ್ಲಿ ತಾಲಿಬಾನಿ ಆಡಳಿತ ಹೆಚ್ಚು ಇರುಸುಮುರುಸಿಲ್ಲದೆ ಆರಂಭಗೊಂಡದ್ದುಈ॒ ಎಲ್ಲ ಬೆಳವಣಿಗೆಗಳ ಹಿನ್ನೆಲೆಯ ತರ್ಕಗಳನ್ನು ಮಾಧ್ಯಮಗಳು ವಿವರಿಸಲು ಸೋತಿವೆ. ಇಂತಹ ಬಯಾಸ್ಡ್ ಮಾಧ್ಯಮ ಕವರೇಜ್ ಕೂಡ ಅಂತಿಮವಾಗಿ ಈ ರೀತಿಯ ಯುದ್ಧಗಳ ಭಾಗವೇ ಆಗಿ ಉಳಿಯುವುದಕ್ಕೆ ಜ್ವಲಂತ ಸಾಕ್ಷಿ, ಜುಲೈ ತಿಂಗಳಲ್ಲಿ ರಾಯಿಟರ್ ಪತ್ರಕರ್ತ ದಾನಿಶ್ ಸಿದ್ದಿಕಿ ಅಫ್ಘಾನಿಸ್ಥಾನದಲ್ಲಿ ಮೃತಪಟ್ಟ ಘಟನೆ.

ಹೀಗೆ ಜಾಗತಿಕವಾಗಿ ಕೂಡ ಮಾಧ್ಯಮ ಮಾನವಸ್ತ್ರಗಳು, ತಾವು ಯಾವುದನ್ನು ಕಾಪಾಡಬೇಕೆಂದುಕೊಂಡಿದ್ದವೋ ಅವನ್ನು ಕಾಪಾಡಲು ಹೆಣಗಾಡಬೇಕಾಯಿತು.

ಕರ್ನಾಟಕದಲ್ಲಿ..

ಧಣಿಗಳ ಆಣತಿಯ ಮೇರೆಗೆ ತಾವೇ ಸೃಷ್ಟಿಸಿದ ’ರಾಜಾಹುಲಿ’ಯನ್ನು ತಾವೇ ಸೃಷ್ಟಿಸಿದ ಬೋನಿನೊಳಗೆ ಹಾಕಿದ್ದು ಕರ್ನಾಟಕದಲ್ಲಿ ಮಾಧ್ಯಮಗಳ ಈ ವರ್ಷದ ಸಾಧನೆ. ತಳಮಟ್ಟದಲ್ಲಿ ಸುದ್ದಿಗಳಿಗೆ ಕಿವಿಕೊಡುವುದನ್ನು ಮರೆತೇ ಬಿಟ್ಟಿರುವ ಕನ್ನಡ ಮಾಧ್ಯಮಗಳು ಕೋವಿಡ್ ಕಾಲದಲ್ಲಿ ತಮ್ಮ ನಂಬಿಗಸ್ಥಿಕೆಯನ್ನು ವೇಗವಾಗಿ ಕಳೆದುಕೊಳ್ಳುತ್ತಿರುವುದು ಮತ್ತು ಸಾರ್ವಜನಿಕವಾಗಿ ತಿರಸ್ಕೃತಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದೇ ದಾಖಲಾಗಬೇಕಿದೆ. ಕೋವಿಡ್ ಕಾಲದ ಸಾಮಾಜಿಕ ಮತ್ತು ಆರ್ಥಿಕ ಸಂಕಟಗಳಿಗೆ ಕನ್ನಡ ಮಾಧ್ಯಮಗಳ ಸ್ಪಂದನೆ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ ಇತ್ತು. ಆಪತ್ತಿಗೆ ಆಗಿಬರದ ಈ ನೆಂಟಸ್ಥಿಕೆಗಳಿಂದ ಓದುಗರು ದೂರ ಉಳಿಯುವುದನ್ನು ಕಲಿಯುತ್ತಿದ್ದಾರೆ. 2023ರ ಚುನಾವಣೆಗಳಿಗೆ ಮತ ಬ್ಯಾಂಕ್ ಧ್ರುವೀಕರಣಕ್ಕಾಗಿ ಸಾಮಾಜಿಕ ವೈಷಮ್ಯದ ಮಸಾಲೆ ಅರೆಯುತ್ತಿರುವ ಮಾಧ್ಯಮಗಳಿಗೆ ಇನ್ನೂ ಇದು ಅರ್ಥ ಆದಂತಿಲ್ಲ.

ತಮ್ಮಲ್ಲಿರುವ ಮಾನವಸ್ತ್ರವನ್ನು ತಮ್ಮದೇ ಮಾನ ಮುಚ್ಚುಕೊಳ್ಳುವುದಕ್ಕೆ ಬಳಸಲು ಸಾಧ್ಯವಿದೆ ಎಂಬ ಕನಿಷ್ಠ ಖಬರೂ ಇಲ್ಲದ ಮಾನಗೇಡಿಗಳು ಈ ಕನ್ನಡದ ಡಿಯರ್ ಮೀಡಿಯಾ!

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ, ದುಪ್ಪಟ್ಟು, ನಮ್ದೇಕತೆ ಅವರ ಕೆಲವು ಪ್ರಕಟಿತ ಪುಸ್ತಕಗಳು.


ಇದನ್ನೂ ಓದಿ: ‘ನೀವು ಬಿಜೆಪಿ ಏಜೆಂಟಾ?’- ಕನ್ಹಯ್ಯ ಪ್ರಶ್ನೆಗಳಿಗೆ ಪತ್ರಕರ್ತ ತಬ್ಬಿಬ್ಬು; ಕ್ಷಮೆಯಾಚಿಸಿದ ವರದಿಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...