Homeಮುಖಪುಟದೇಶವ್ಯಾಪಿ ಹಬ್ಬಿದ ರೈತ ಚಳುವಳಿ: ಭಾಗ-2

ದೇಶವ್ಯಾಪಿ ಹಬ್ಬಿದ ರೈತ ಚಳುವಳಿ: ಭಾಗ-2

- Advertisement -
- Advertisement -

ಕರ್ನಾಟಕದ ರೈತ ಹೋರಾಟದ ಅಲೆಯ ಸಮಯದಲ್ಲಿಯೇ ಭಾರತದ ಬೇರೆಬೇರೆ ರಾಜ್ಯಗಳಲ್ಲಿಯೂ ರೈತ ಹೋರಾಟ ಚಿಮ್ಮಿತು. ಏಕೆಂದರೆ ಕೇಂದ್ರ ಸರ್ಕಾರದ ಕೆಟ್ಟ ನೀತಿಗಳ ಫಲವಾಗಿಯೇ ರೈತರ ಸಂಕಟಗಳು ಉದ್ಭವಿಸಿದ್ದವಲ್ಲ! ಅಖಿಲ ಭಾರತ ಕಿಸಾನ್ ಸಭಾ ಕರ್ನಾಟಕದ ರೈತ ಚಳುವಳಿಗೆ ಬೆಂಬಲವಾಗಿ ಮತ್ತು ವಿವಿಧ ರಾಜ್ಯಗಳ ರೈತರ ಸಮಸ್ಯೆಗಳನ್ನು ಎತ್ತಿಕೊಂಡು ಹೋರಾಟ ಮಾಡಲು ಕರೆಕೊಟ್ಟಿತು.

ಮಹಾರಾಷ್ಟ್ರದ ನಾಸಿಕ್‌ನಲ್ಲಿ ರಸ್ತಾ ರೋಕೋ, ನಂತರ ನಾಗಪುರದಲ್ಲಿ ನಡೆಯುತ್ತಿದ್ದ ವಿಧಾನ ಸಭೆಗೆ ಕಾಲ್ನಡಿಗೆ ಜಾಥಾ ಮತ್ತು ಮುತ್ತಿಗೆ, ತಮಿಳುನಾಡಿನಲ್ಲಿ ರಾಜ್ಯಾದ್ಯಂತ ಹೋರಾಟಗಳು, ಆಂಧ್ರ ಪ್ರದೇಶದಲ್ಲಿ ರಾಜ್ಯ ಬಂದ್, ಜಿಲ್ಲಾ ಕಛೇರಿ ಪಿಕೆಟಿಂಗ್ ಮತ್ತು ಬಂಧನ, ಪಂಜಾಬ್‌ನಲ್ಲಿ ಬಸ್ ತಡೆ, ವಿಧಾನ ಸಭೆ ಪಿಕೆಟಿಂಗ್ ಹಲವೆಡೆ ಲಾಠೀ ಚಾರ್ಜ್‌ಗಳು ಬಂಧನ ಹೀಗೆ ಮುಂದುವರೆಯಿತು.

ಅಖಿಲ ಭಾರತ ಕಿಸಾನ್ ಸಭಾ ಮತ್ತು ಅದರ ರಾಜ್ಯ ಅಂಗಗಳು ನೇತೃತ್ವ ನೀಡಿದ ಹೋರಾಟಗಳು ತೀವ್ರತೆಯನ್ನು ಪಡೆಯಲಾರಂಭಿಸಿದವು. ಇವುಗಳ ಜೊತೆಗೆ ವಿವಿಧ ರಾಜ್ಯಗಳಲ್ಲಿ ನಂಜುಂಡ ಸ್ವಾಮಿಯವರಿಗೆ ಸಂವಾದಿಯಾಗಿ ತಮಿಳುನಾಡಿನ ನಾರಾಯಣಸ್ವಾಮಿ ನಾಯ್ಡು, ಮಹಾರಾಷ್ಟ್ರದ ಶೇತ್ಕರಿ ಸಂಘಟನೆಯ ಶರದ್ ಜೋಷಿ, ಉತ್ತರ ಪ್ರದೇಶದ ಭಾರತ ಕಿಸಾನ್ ಯೂನಿಯನ್‌ನ ಮಹೇಂದ್ರ ಟಿಕಾಯತ್ ಮೊದಲಾದವರು ಇದೇ ಸಮಯದಲ್ಲಿ ರೈತ ಚಳುವಳಿಗೆ ಹೊಸತಾಗಿ ಧುಮುಕಿದರು ಅಥವಾ ಕೆಲ ಸಮಯದ ಹಿಂದೆ ಸಂಘಗಳನ್ನು ಸ್ಥಾಪಿಸಿದ್ದವರು ಮತ್ತಷ್ಟು ಕ್ರಿಯಾಶೀಲರಾದರು.

ಈ ಹೋರಾಟಗಳು ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಸ್ವರೂಪವನ್ನು ಪಡೆದುಕೊಂಡವು. ನಾಲ್ಕು ಎಡಪಕ್ಷಗಳು, ದೇವರಾಜ ಅರಸು, ಶರದ ಪವಾರ್ ನಾಯಕತ್ವದ ಕಾಂಗ್ರೆಸ್ ಯು, ಚರಣ್ ಸಿಂಗ್‌ರ ಲೋಕದಳ ಸೇರಿದಂತೆ ಆರು ವಿರೋಧ ಪಕ್ಷಗಳು ದೆಹಲಿಯಲ್ಲಿ ಸೆಪ್ಟೆಂಬರ್‌ನಲ್ಲಿ ಸಭೆ ಸೇರಿದವು. 1981 ಜನವರಿ 17ರಂದು ದೇಶದೆಲ್ಲೆಡೆ ಕಿಸಾನ್ ದಿನವಾಗಿ ಆಚರಿಸಲು ಮತ್ತು ಮಾರ್ಚ್ 31ರಂದು ದೆಹಲಿಯಲ್ಲಿ ದೊಡ್ಡ ರೈತ ಪ್ರತಿಭಟನೆ ನಡೆಸಲು ಈ ಸಮಾವೇಶ ಕರೆ ನೀಡಿತು.

ಅದರ ಭಾಗವಾಗಿ ಕರ್ನಾಟಕದಲ್ಲಿಯೂ ನಾಲ್ಕು ಪಕ್ಷಗಳ ಸಭೆ ನಡೆಯಿತು. ಅದರಲ್ಲಿ ಸಿಪಿಎಂ, ಸಿಪಿಐ ಪಕ್ಷಗಳ ಜೊತೆಗೆ ಆಗ ವಿರೋಧ ಪಕ್ಷದಲ್ಲಿದ್ದ ದೇವರಾಜ ಅರಸುರವರ ಪಕ್ಷವೂ ಭಾಗವಹಿಸಿತು. ಆದರೆ ಲೋಕಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದ ಜನತಾ ಪಕ್ಷ ಈ ಎಲ್ಲವುಗಳಿಂದ ದೂರ ಉಳಿಯಿತು ಎಂಬುದು ಗಮನಿಸಬೇಕಾದ ವಿಷಯ. ಕರ್ನಾಟಕದಲ್ಲಿಯೂ ಕೂಡಾ ಜನತಾ ಪಕ್ಷದ ನಡೆ ಇದೇ ಮಾದರಿಯನ್ನು ಅನುಸರಿಸಿತ್ತು ಎಂಬ ಬಗ್ಗೆ ಹಿಂದಿನ ಭಾಗದಲ್ಲಿ ಸೂಚಿಸಿದ್ದೇನೆ.

ಅದಕ್ಕೆ ಮುನ್ನೆಲೆಯಾಗಿ ಬೆಂಗಳೂರಿನಲ್ಲಿ ದೌರ್ಜನ್ಯ, ದಬ್ಬಾಳಿಕೆಗಳಿಂದ ಬೇಸತ್ತ ರೈತರು ಹಾಗೂ ಕಾರ್ಮಿಕರಿಂದ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಡಿಸೆಂಬರ್ 12ರಂದು ನಡೆದ ಪ್ರತಿಭಟನಾ ಸಭೆಯಲ್ಲಿ ಐವತ್ತು ಸಾವಿರದವರೆಗೂ ಹೆಚ್ಚು ಜನ ಭಾಗವಹಿಸಿದರು.

ಕೇಳ್‌ಕೇಳ್ ಕೇಳೇಲೋ ರೌಡಿ

ಜನವರಿ 2 ಮತ್ತು 3ರಂದು ಮತ್ತೆ ಸೇರಿದ ನಾಲ್ಕು ಪಕ್ಷಗಳ ಸಭೆಯಲ್ಲಿ ನಿಶ್ಚಯಿಸಿದಂತೆ, ಮಹಾರಾಷ್ಟ್ರದಲ್ಲಿ ಸಂಘಟಿಸಲಾದ ಬೃಹತ್ ಕಾಲ್ನಡಿಗೆ ಜಾಥಾದಂತೆ ಕರ್ನಾಟಕದಲ್ಲಿಯೂ ನರಗುಂದದಿಂದ ಬೆಂಗಳೂರಿನವರೆಗೆ ಜನವರಿ 16ರಿಂದ ಕಾಲ್ನಡಿಗೆ ಜಾಥಾ ನಡೆಸಬೇಕೆಂದು ಹಾಗೂ ಫೆ.5ರಂದು ವಿಧಾನಸೌಧದ ಎದುರು ಬೃಹತ್ ಬಹಿರಂಗ ಸಭೆ ನಡೆಸಬೇಕೆಂದು ತೀರ್ಮಾನ ಮಾಡಲಾಯಿತು. ಜನವರಿ 16ರಂದು ನರಗುಂದದಲ್ಲಿ ಹುತಾತ್ಮರಾದ ಚಿಕ್ಕ ನರಗುಂದದ ಈರಪ್ಪ ಬಸಪ್ಪ ಕಡ್ಲಿಕೊಪ್ಪ ಹಾಗೂ ನವಲಗುಂದದಲ್ಲಿ ಗುಂಡೇಟಿಗೆ ಬಲಿಯಾದ ಬಸಪ್ಪ ಲಕ್ಕುಂಡಿಯವರ ನೆನಪಿನ ಹುತಾತ್ಮ ಜ್ಯೋತಿ ಹಿಡಿದು ಕಾಲ್ನಡಿಗೆ ಆರಂಭವಾಯಿತು. ದೇವರಾಜ ಅರಸುರವರು ಉದ್ಘಾಟನೆ ಮಾಡಿದ ಈ ಬಹಿರಂಗ ಸಭೆಯನ್ನು ವಿಫಲಗೊಳಿಸಬೇಕೆಂದು ಗುಂಡೂರಾವ್ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿತು. ಒಂದು ಕಡೆ ತಮ್ಮ ಪಕ್ಷದ ಮುಖಂಡರ ಮೂಲಕ ಜಾಥಾಕ್ಕೆ, ಬಹಿರಂಗ ಸಭೆಗೆ ಸೇರದಿರಲು ರೈತರಿಗೆ ಒತ್ತಾಯ, ಬೆದರಿಕೆಗಳು, ಮತ್ತೊಂದು ಕಡೆ ಪೊಲೀಸ್ ವಾಹನಗಳನ್ನು ನರಗುಂದ ಪಟ್ಟಣದಲ್ಲಿ ಹಾಗೂ ವಿವಿಧ ಹಳ್ಳಿಗಳಲ್ಲಿ ಗಸ್ತು ಹೊಡೆಸಿ ಭಯ ಹುಟ್ಟಿಸಲಾಯಿತು. ತಿಂಗಳುಗಟ್ಟಲೆ ಪೊಲೀಸರ ದೌರ್ಜನ್ಯದಿಂದ ಭಯಭೀತರಾಗಿದ್ದ ರೈತರು ದೂರದೂರ ಮರೆಯಲ್ಲಿ ನಿಂತು ನೋಡುತ್ತಿದ್ದರೇ ಹೊರತು ಸಭೆಗೆ ಬರಲಿಲ್ಲ. ಆಗ ನರಗುಂದದ ನಂದಿ ಅಂಡ್ ಹಸ್ಬಿ ಹತ್ತಿ ಗಿರಣಿಯ ಕಾರ್ಮಿಕರು ಈ ಬೆದರಿಕೆಗಳಿಗೆ ಸೊಪ್ಪು ಹಾಕದೆ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಭೆಗೆ ಬಂದಾಗ ರೈತರೂ ಕೂಡಾ ಅವರೊಡನೆ ಸೇರಿಕೊಂಡು ಉದ್ಘಾಟನೆಯನ್ನು ಯಶಸ್ವಿಗೊಳಿಸಿದರು. ಸರ್ಕಾರ ಮಂತ್ರಿಗಳ ಮೂಲಕ ಕುತಂತ್ರಗಳನ್ನು ಜಾಥಾದ ದಾರಿಯುದ್ದಕ್ಕೂ ಮಾಡಲು ಪ್ರಯತ್ನಿಸಿ ವಿಫಲವಾಯಿತು.

ಅರಸುರವರು ಕಾಲ್ನಡಿಗೆ ಉದ್ಘಾಟನೆ ಮಾಡಿ ಸ್ವಲ್ಪ ದೂರ ನಡೆದರು. ನರಗುಂದದಿಂದ ಆರಂಭವಾದ ಕಾಲ್ನಡಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದರು. ಮುಂದಿನ ಊರು ಸೇರಿದಾಗ ಆ ಊರಿನ ಇಡೀ ಜನರೇ ಈ ನಡಿಗೆಗೆ ಸೇರುತ್ತಿದ್ದರು. ಇಡೀ ಊರಿಗೆ ಊರೇ ನಡೆದು ಬರುತ್ತಿದ್ದಂತೆ ಕಾಣುತ್ತಿತ್ತು. ಹೋರಾಟದ ಕಣವಾಗಿದ್ದ ಮಲಪ್ರಭಾ ಪ್ರದೇಶ ದಾಟಿದ ಮೇಲೂ ಈ ಜನ ಬೆಂಬಲ ಇಡೀ 550 ಕಿಮೀ ಉದ್ದಕ್ಕೂ ಮುಂದುವರೆಯಿತು. ರೈತರು ಅಲಂಕರಿಸಿದ ಎತ್ತಿನ ಬಂಡಿಗಳಲ್ಲಿ ಡೊಳ್ಳು, ಹಲಗೆ ಬಡಿಯುತ್ತಾ ಊಟ, ತಿಂಡಿ ತೆಗೆದುಕೊಂಡು ಬಂದು ಜಾಥಾಕ್ಕೆ ಜೊತೆಗೂಡುತ್ತಿದ್ದರು. ಹರಿಹರದಲ್ಲಂತೂ ರಾತ್ರಿ 11 ಗಂಟೆಗೆ ಸಭೆ ಆರಂಭವಾಗಿ ರಾತ್ರಿ ಒಂದೂವರೆ ಗಂಟೆಯವರೆಗೂ ನಡೆಯಿತು. ಮುಖ್ಯ ನಗರಗಳಲ್ಲಿನ ಸಭೆಗಳಿಗೆ ಅಖಿಲ ಭಾರತ ಕಿಸಾನ್ ಸಭಾದ ನಾಯಕರೂ, ಕಾಂಗ್ರೆಸ್ ಯು ಅಧ್ಯಕ್ಷರಾಗಿದ್ದ ಚಂದ್ರೇಗೌಡ, ಹುಚ್ಚ ಮಾಸ್ತಿಗೌಡ ಮೊದಲಾದವರೂ ಭಾಗವಹಿಸುತ್ತಿದ್ದರು.

ಈ ನಡಿಗೆಯಲ್ಲಿಯೇ ಸಿದ್ಧಲಿಂಗಯ್ಯನವರ ಹಾಡು ಮಾರ್ಪಾಡಾಗಿ “ರೈತರು ಬರುವರು ದಾರಿ ಬಿಡಿ, ರೈತರ ಕೈಗೆ ರಾಜ್ಯ ಕೊಡಿ” ಆಯಿತು. ಚಿಕ್ಕ ನರಗುಂದದ ಒಬ್ಬ ಕೂಲಿಕಾರ ಈ ಜಾಥಾದಲ್ಲಿ ಭಾಗವಹಿಸಿ ರಚಿಸಿದ ಲಾವಣಿ ಜಾಥಾದುದ್ದಕ್ಕೂ ಬಹು ಜನಪ್ರಿಯವಾಯಿತು.

“ಈಗ ಮಾಡೀವಿ ಆರಂಭ,
ವಿಧಾನ ಸೌಧದಿ ರಣಗಂಭ
ಕೇಳ್ ಕೇಳೆಲೋ ರೌಡಿ,
ನೀನಲ್ಲೋ ನಮ ಸಮಾನ ಜೋಡಿ
ಸರಿ ಸರೀ ಸರಿ ಹಿಂದಕ್ಕ,
ಸಾಗಿ ಬರುತೇವಾ ಮುಂದಕ್ಕ”

ಈ ಲಾವಣಿಯ ಕೆಲ ಸಾಲುಗಳು, ಒಬ್ಬ ಕೂಲಿಕಾರ ರಾಜ್ಯದ ಮುಖ್ಯಮಂತ್ರಿಗೆ ’ನೀನಲ್ಲೋ ನಮ ಸಮಾನ ಜೋಡಿ’ ಎಂದು ಸವಾಲು ಹಾಕುವ ಸುಂದರ ಕ್ಷಣ. ಇಂತಹವು ದಕ್ಕುವುದು ಚಳುವಳಿಗಳಲ್ಲಿಯೇ. ಆಗಿನ್ನೂ ಅಧಿಕಾರಿಯಾಗಿದ್ದ ನಾನು ಈ ಮಹಾ ನಡಿಗೆಯಲ್ಲಿ ಭಾಗವಹಿಸುವಂತಿರಲಿಲ್ಲ. ಸಾಧ್ಯವಾದೆಡೆಗಳಿಗೆ ಹೋಗಿ ದೂರದಲ್ಲಿ ನಿಂತು ಕಣ್ಣು ತುಂಬಿಕೊಳ್ಳುತ್ತಿದ್ದೆ.

ನರಗುಂದದಿಂದ ಹೊರಟ ಪ್ರಧಾನ ಕಾಲ್ನಡಿಗೆ ಜಾಥಾಗೆ ರಾಜ್ಯದ ಹಲವು ಜಿಲ್ಲೆಗಳಿಂದ ವಾಹನ ಜಾಥಾಗಳು ಬಂದು ಕೂಡಿಕೊಂಡವು. ಬಿಜಾಪುರದಿಂದ, ಮಂಗಳೂರು-ಚಿಕ್ಕಮಗಳೂರು-ಹಾಸನ ಮಾರ್ಗದಿಂದ, ಶಿವಮೊಗ್ಗ-ಭದ್ರಾವತಿ ಮಾರ್ಗದಿಂದ ಮೈಸೂರು-ಮಂಡ್ಯ ಮಾರ್ಗದಿಂದ, ಕೊಡಗು, ಕೋಲಾರ, ದೊಡ್ಡಬಳ್ಳಾಪುರದಿಂದ, ಬಾಗೇಪಲ್ಲಿಯಲ್ಲಿ ಗುಂಡೇಟಿನಿಂದ ಹುತಾತ್ಮರಾಗಿದ್ದ ನಾಲ್ಕು ಜನರ ನೆನಪಿನ ಜ್ಯೋತಿಯನ್ನು ಹಿಡಿದು ಅಲ್ಲಿಂದ, ಹೀಗೆ ಹಲವೆಡೆಗಳಿಂದ ದಾರಿಯುದ್ದಕ್ಕೂ ಸಭೆಗಳನ್ನು ಮಾಡುತ್ತಾ ಬಹಳಷ್ಟು ಜಾಥಾಗಳು ಬಂದು ಬೆಂಗಳೂರಿನ ಯಶವಂತಪುರ ಸೇರಿದವು.

ನೆನೆ ನೆನೆ ಆ ದಿನವಾ-
ನೆನೆ ನೆನೆ ಆ ದಿನವ
ಓ ರೈತ ಭಾಂಧವಾ
ನೆನೆ ನೆನೆಯೋ ಆ ದಿನವ
ಅಂದು ಆವ ಸೆಲೆಯೊಡೆದುದೇನೋ ಹೊರ
ಹೊಮ್ಮಿಚಿಮ್ಮಿ ಚಿಗಿದು
ಉರುಳಿ ಉರುಳಿ ಹೊರಹೊರಳಿ ಬಂತು ಮೊರೆ
ಮೊರೆದು ಬಂತು ಹೊನಲು
ಹಿಂದೆಗೆಯಲಿಲ್ಲ, ತಲೆ ಬಾಗಲಿಲ್ಲ ಎದೆಗೆಟ್ಟುದಿಲ್ಲ ಜನತೆ
ಅಧಿಕಾರ ಬಲದ ಮದಗಜದ ತುಳಿತಕೂ ಎದೆಯನೊಡ್ಡಿ ನಗುತೆ.

-ಗೋಪಾಲ ಕೃಷ್ಣ ಅಡಿಗ

ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು
ಕಪ್ಪುಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳ

ಸಿದ್ಧಲಿಂಗಯ್ಯ

ಅಂದು ಬೆಂಗಳೂರಿನಲ್ಲಿದ್ದವರೆಲ್ಲ ಕಣ್ತುಂಬಿಕೊಂಡ, ಮನ ತುಂಬಿಕೊಂಡ ದೃಶ್ಯಗಳು ಇಂದೂ ಅವರ ಕಣ್ಣಲ್ಲಿ ನೆಲೆಸಿವೆ. ಧಾವಿಸುತ್ತಿದ್ದ-ಮುನ್ನಗ್ಗುತ್ತಿದ್ದ ರೈತರ ಆ ಧಾಡಸೀತನ, ಉತ್ಸಾಹ ಈಗಲೂ ಕಣ್ತುಂಬಿರುವಂತೆ. ಅದಕ್ಕೆ ಇದೇ ಸಾಟಿ, ಇದಕ್ಕೆ ಅದೇ ಸಾಟಿ. ಸಾಗರಂ ಸಾಗರೋಪಮಂ ಎನುವಂತೆ.

ಯಶವಂತಪುರದಿಂದ ರೈತರ ಮೆರವಣಿಗೆ ಹೊರಾಟಾಗ ಹಲವಾರು ನದಿಗಳು ಕೂಡಿದಂತೆ ಕೂಡುತ್ತಾ ಹೋದವು. ದಾರಿಯುದ್ದಕ್ಕೂ ಹೂವಿನ ಸುರಿಮಳೆಯಿಂದ ಕೂಡಿದ ಸ್ವಾಗತ. ಉತ್ಸಾಹದ ಜಯಘೋಷಗಳು. ಈ ಮೆರವಣಿಗೆ ವಿಧಾನಸೌಧದ ಮುಂದಿನ ಕಬ್ಬನ್ ಪಾರ್ಕ್ ಸೇರಿದಾಗ ಕರ್ನಾಟಕದ ಎಲ್ಲೆಡೆಯಿಂದ ಬಂದ ನದಿ, ಹೊಳೆಗಳು ಸೇರಿ ಜನ ಸಾಗರವಾಯಿತು. ಐದಾರು ಲಕ್ಷವಾಯಿತು. ರೈತರಿಗೆ ಬೆಂಬಲವಾಗಿ ಬಹು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರೂ, ವಿದ್ಯಾರ್ಥಿಗಳು, ಮಹಿಳೆಯರೂ ಸೇರಿದರು.

ಅಂದು ವಿಧಾನಸೌಧದ ಸುತ್ತ ಹಲವು ಸಾವಿರ ಪೋಲೀಸರ ಹಲವು ಸುತ್ತಿನ ಪಹರೆ. ಬಾರು ಮಾಡಿದ ಬಂದೂಕುಗಳ ಮೂರು ನಾಲ್ಕು ಸಾಲುಗಳು. ಈ ರೈತ ಸಾಗರ ಎಲ್ಲಿ ವಿಧಾನಸೌಧದೊಳಕ್ಕೆ ನುಗ್ಗಿ ನರಗುಂದದಲ್ಲಾದಂತೆ ಇಡೀ ಸೌಧಕ್ಕೆ ಬೆಂಕಿ ಹಚ್ಚಿ ಬಿಡುವುದೇನೋ ಎಂಬ ಭಯ ಆಳುವವರಿಗೆ. ಅವರಿಗೆ ಎದೆ ಡವಡವ.

ನರಗುಂದ ಮತ್ತು ವಿವಿಧೆಡೆಗಳಿಂದ ತಂದ ಹುತಾತ್ಮ ರೈತರ ನೆನಪಿನ ಜ್ಯೋತಿಯನ್ನು ವಿಧಾನಸೌಧದ ಮೇಲಿಟ್ಟೇ ತೀರುವೆವೆಂಬ ದೃಢ ತೀರ್ಮಾನ ರೈತರದು. ಕಬ್ಬನ್ ಪಾರ್ಕ್ ದಾಟಲು ಬಿಡೆವೆಂಬ ಪೋಲೀಸರ ತೀರ್ಮಾನ. ಬಾರು ಮಾಡಿದ ಪೋಲೀಸರ ಸಾಲುಸಾಲುಗಳ ನಡುವೆಯೇ ರೈತರು ನುಗ್ಗಿ ವಿಧಾನ ಸೌಧದ ಮೆಟ್ಟಿಲುಗಳನ್ನೇರಿ ಜ್ಯೋತಿಯನ್ನು ಸ್ಥಾಪಿಸಿಯೇಬಿಟ್ಟರು. ಮತ್ತೆ ಹಿಂದಿರುಗಿ ರೈತರ ಬಹಿರಂಗ ಸಭೆ ನಡೆಯಿತು. ರೈತರ ಹಕ್ಕೊತ್ತಾಯಗಳು ಈಡೇರುವವರೆಗೂ ಹೋರಾಟ ಬೆಳೆಯುತ್ತ ಹೋಗುವುದೆಂಬ ದೃಢ ನುಡಿಗಳು ಹಲವರಿಂದ ಹೊಮ್ಮಿದವು.

ಬೆಂಗಳೂರು ಅಲ್ಲಿಯವರೆಗೆ ಕಂಡರಿಯದ ಜನಸ್ತೋಮ. ಹೀಗೆ ಲಕ್ಷಾಂತರ ಜನರು ಬಂದು ಸೇರುವ ಸೂಚನೆ ಸಿಕ್ಕಾಗಲೇ ಸಂಘಟಕರಾದ ನಾಲ್ಕು ರಾಜಕೀಯ ಪಕ್ಷಗಳ ಮುಖಂಡರಿಗೆ ಹಲವು ಚಿಂತೆಗಳು ಹತ್ತಿದವು. ಹತ್ತು ವರ್ಷ ಕರ್ನಾಟಕವನ್ನಾಳಿದ್ದ ಅರಸರಿಗೂ ಕೂಡಾ ಹೇಗಪ್ಪಾ ಇವರಿಗೆಲ್ಲ ಊಟ, ನೀರಿನ ವ್ಯವಸ್ಥೆ ಮಾಡುವುದು ಎಂಬ ಚಿಂತೆ. ಅಂದು ಬೆಂಗಳೂರಿನಲ್ಲಿ ಈಗಿನಂತೆ ಬಹಳ ಹೋಟೆಲುಗಳೂ ಇರಲಿಲ್ಲ. ಆಗ ಬಂದ ರೈತರಿಗೆಲ್ಲ ನಾವು ಊಟ ಕೊಡುವೆವೆಂದು ಮುಂದೆ ಬಂದವರು ಕಾರ್ಮಿಕ ನಾಯಕರಾದ ಸೂರ್ಯ ನಾರಾಯಣ ರಾಯರು. ಬೆಂಗಳೂರಿನ ಕಾರ್ಮಿಕರು ಒಬ್ಬೊಬ್ಬರೂ ಹತ್ತು ಜನರಿಗೆ ಊಟ ತಯಾರಿಸಿ ತರಬೇಕೆಂಬ ನಿರ್ದೇಶನ ಕಾರ್ಮಿಕ ಸಂಘಗಳಿಂದ ಹೊರಟಿತು. ಸರಿ, ಕಬ್ಬನ್ ಪಾರ್ಕಿನಲ್ಲಿ ಊಟದ ಪ್ಯಾಕೆಟ್‌ಗಳು ಬೆಟ್ಟದಂತೆ ಬಂದುಬಿದ್ದಿತು. ಚಿತ್ರಾನ್ನ, ಪುಳಿಯೋಗರೆ, ಚಪಾತಿ, ಬ್ರೆಡ್, ಬಾಳೆ ಹಣ್ಣುಗಳ ರಾಶಿರಾಶಿ. ಬಂದ ರೈತರೆಲ್ಲ ಹೊಟ್ಟೆತುಂಬ ಊಟಮಾಡಿ ಮರಳಿ ಪ್ರಯಾಣದಲ್ಲಿ ತಿನ್ನಲು ಬುತ್ತಿ ತೆಗೆದುಕೊಂಡು ಹೋಗುವಷ್ಟು.

ಗುಂಡೂರಾವ್‌ರವರ ಮೇರೆ ಮೀರಿದ ದಬ್ಬಾಳಿಕೆ, ದೌರ್ಜನ್ಯಗಳ ಖಂಡನೆ, ಧಿಕ್ಕಾರಗಳು – ಗುಂಡೂರಾವ್, ಇಂದಿರಾಗಾಂಧಿಗೆ ಧಿಕ್ಕಾರ, ಅವರು ಆಡಳಿತದಿಂದ ತೊಲಗಲಿ ಎಂಬ ಘೋಷಣೆಗಳು ಕೇಳುತ್ತಿರುವಾಗ ಒಳಗೆ ವಿಧಾನಸೌಧದಲ್ಲಿ ಕುಳಿತ ಗುಂಡೂರಾವ್‌ರವರಿಗೆ ಸಿಡಿಮಿಡಿ. ಸಭೆಯೆಲ್ಲಾ ಮುಗಿದು ರೈತರು ತೆರಳುತ್ತಿದ್ದಾರೆ ಎನ್ನುವಾಗ ಅವರ ಬಾಯಿಂದ “ಬಂದವರೆಲ್ಲಾ ಬಾಡಿಗೆ ರೈತರು” ಎಂಬ ಮಾತುಗಳು ಹೊರಬಂದವು.

ಈ ಮಾತುಗಳು ರೈಲು ನಿಲ್ದಾಣಗಳಲ್ಲಿ ರೈಲು ಹತ್ತುತ್ತಿದ್ದ ಸಾವಿರಾರು ರೈತರ ಕಿವಿಗೆ ಸಂಜೆ ಪತ್ರಿಕೆಗಳ ಮೂಲಕ, ಕರ್ಣಾಕರ್ಣಿಯಾಗಿ ಮುಟ್ಟಿತು. ರೈಲು ಹತ್ತಿದ್ದವರೂ ದಿಗ್ಗನಿಳಿದರು. ರಾತ್ರಿ ಇಲ್ಲಿಯೇ ಉಳಿದರು. ಬೆಳಗ್ಗೆ ಕಛೇರಿಗಳು ಆರಂಭವಾಗುತ್ತಲೇ ಸಾವಿರಾರು ರೈತರು ವಿಧಾನಸೌಧದೆಡೆಗೆ ನುಗ್ಗಿದರು. ಪೊಲೀಸರ ಅಡೆತಡೆಗಳನ್ನೆಲ್ಲಾ ದಾಟಿ ಸೌಧದೊಳಕ್ಕೇ ನುಗ್ಗಿಬಿಟ್ಟರು. “ಯಾರು ಬಾಡಿಗೆ ರೈತರು” ಎಂಬ ಘರ್ಜನೆ ವಿಧಾನಸೌಧದ ಮೊಗಸಾಲೆಗಳಲ್ಲಿ ಘರ್ಜಿಸಿತು. ಗುಂಡೂರಾಯರು ಪರಾರಿ. ಕೊನೆಗೆ ಪೊಲೀಸ್ ದಂಡು ಬಂದು ಐನೂರಕ್ಕೂ ಹೆಚ್ಚು ರೈತರು, ಚಂದ್ರೇಗೌಡರೂ ಸೇರಿದಂತೆ ಹಲವು ಶಾಸಕರು, ಸಿಪಿಎಂ, ಸಿಪಿಐಗಳ ನಾಯಕರುಗಳನ್ನು ಬಂಧಿಸಿತು.

ರಾಜ್ಯದ ರಾಜಕೀಯಕ್ಕೆ ಮಹಾ ತಿರುವು – ರಾಷ್ಟ್ರವ್ಯಾಪಿ ಪ್ರಭಾವ

ರೈತ ಚಳುವಳಿ ಹೀಗೆ ರಾಜ್ಯವ್ಯಾಪಿ ಹಬ್ಬುವುದರ ಜೊತೆಗೆ ಕಾರ್ಮಿಕ ಚಳುವಳಿ, ಮುಷ್ಕರಗಳೂ ಹೆಚ್ಚಾದವು. ಈ ಎರಡೂ ಮುಂದಿನೆರಡು ವರ್ಷಗಳ ಕಾಲ ಅಲ್ಲಲ್ಲಿ ಸ್ಫೋಟಿಸುತ್ತಲೇ ಇದ್ದವು. ಸರಿಸುಮಾರು ಅದೇ ಸಮಯದಲ್ಲಿ ಸಾಂಸ್ಕೃತಿಕ ರಂಗದಲ್ಲಿ ಕೂಡಾ ಮಹತ್ವದ ಬೆಳವಣಿಗೆಗಳು ಘಟಿಸಿದವು. ಸಿದ್ಧಲಿಂಗಯ್ಯನವರ ಕ್ರಾಂತಿಗೀತೆಗಳು ರಾಜ್ಯದಲ್ಲೆಲ್ಲಾ ಮೊಳಗಲಾರಂಭಿಸಿದ್ದವು. ಸಮುದಾಯ ಸಾಂಸ್ಕೃತಿಕ ಜಾಥಾ ಇಡೀ ರಾಜ್ಯದ ಪ್ರಗತಿಪರ ಸಾಹಿತಿ, ಕಲಾವಿದರುಗಳನ್ನು ಒಗ್ಗೂಡಿಸಿತು. ಬಂಡಾಯ ಸಾಹಿತ್ಯ ಚಳುವಳಿ ಆರಂಭವಾಗಿತ್ತು. ಕೆಲವೇ ತಿಂಗಳುಗಳ ನಂತರ ಗೋಕಾಕ್ ಚಳುವಳಿ ಆರಂಭವಾಯಿತು.

ಈ ಎಲ್ಲ ಸಾಂಸ್ಕೃತಿಕ ಚಳುವಳಿಗಳಿಗೆ ಎಪ್ಪತ್ತರ ದಶಕದ ಆರಂಭದಲ್ಲಿಯೇ ಜಾತಿ ವಿನಾಶ ಆಂದೋಲನ, ತೇಜಸ್ವಿ, ಲಂಕೇಶ್, ಚಂಪಾರವರ ಹೊಸ ದಿಗಂತದ ಕಡೆಗೆ ಮುಖ ಮಾಡಿದ ಸಾಹಿತ್ಯ, ಬೂಸಾ ಚಳುವಳಿ, ಸಿದ್ಧಲಿಂಗಯ್ಯನವರ ಹೊಲೆ ಮಾದಿಗರ ಹಾಡು, ದೇವನೂರರ ಕತೆಗಳು, ಜೆಪಿ ಚಳುವಳಿ, ತುರ್ತು ಪರಿಸ್ಥಿತಿ ಹೇರಿದ ಮೇಲೆ ಅದರ ವಿರುದ್ಧದ ಆಕ್ರೋಶ, ಲಂಕೇಶ್ ಪತ್ರಿಕೆಯ ಆರಂಭ ಹೀಗೆ ಹತ್ತು ಹಲವು ವಿದ್ಯಮಾನಗಳು ಮುನ್ನುಡಿ ಬರೆದಿದ್ದವು. ದಲಿತ ಸಂಘರ್ಷ ಸಮಿತಿಯ ಸ್ಥಾಪನೆಯಾಗಿ ದಲಿತ ಚಳುವಳಿಯೂ ಹೋರಾಟಗಳ ಸಾಗರಕ್ಕೆ ಒಂದು ದೊಡ್ಡ ಪ್ರವಾಹವಾಗಿ ಸೇರಿತು.

ಈ ಎಲ್ಲವೂ ಸೇರಿ 1983ರಲ್ಲಿ ವಿಧಾನಸಭಾ ಚುನಾವಣೆಗಳು ನಡೆದಾಗ ಗುಂಡೂರಾವ್ ಸೋಲಿಸಲ್ಪಟ್ಟರು. ಕಾಂಗ್ರೆಸ್ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಸೋಲಿಸಲ್ಪಟ್ಟಿತು. ಕಾಂಗ್ರೆಸ್‌ನ 36 ವರ್ಷಗಳ ಸುದೀರ್ಘ ಏಕಪಕ್ಷೀಯ ಅಧಿಕಾರ ಕೊನೆಗೊಂಡಿತು. ಮುಂದೆ ಎರಡು ದಶಕಗಳ ಕಾಲ ಎರಡು ಪಕ್ಷಗಳ ಒಂದಾದ ಮೇಲೊಂದರ ಆವರ್ತನದ ಆಡಳಿತ ಆರಂಭವಾಯಿತು. ಇಲ್ಲಿಯವರೆಗೂ ಈ ರಾಜಕೀಯ ಬೇರೆ ಬೇರೆ ರೂಪಗಳಲ್ಲಿ ಮುಂದುವರೆಯುತ್ತಿದೆ. ಇಂತಹ ಮಹತ್ವದ ರಾಜಕೀಯದ ಪರಿವರ್ತನೆಯಲ್ಲಿ ಬಹುಸಂಖ್ಯೆಯ ಜನರನ್ನು ಒಳಗೊಂಡ ರೈತಾಪಿ ಜನತೆಯ ಚಳುವಳಿ ಪ್ರಧಾನ ಪಾತ್ರ ವಹಿಸಿತೆಂದರೆ ತಪ್ಪಿಲ್ಲ.

ಕಾಂಗ್ರೆಸ್ ಸೋತಿತು ನಿಜ. ಆದರೆ ಗೆದ್ದದ್ದು ಚಳುವಳಿಗಳಲ್ಲ. ಗೆದ್ದದ್ದು ಚಳುವಳಿಗಳ ನೇತೃತ್ವ ವಹಿಸಿದ್ದ ಸಂಘಟನೆಗಳಲ್ಲ. ಚಳುವಳಿಗಳಿಂದ ಮಾರು ದೂರ ಉಳಿದಿದ್ದ ಜನತಾ ಪಕ್ಷ. ರುದ್ರಪ್ಪ, ನಂಜುಂಡ ಸ್ವಾಮಿಯವರ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಗಳು ಚುನಾವಣೆಗಳಲ್ಲಿ ಭಾಗವಹಿಸಲಿಲ್ಲ. ಆ ವೇಳೆಗೆ ಸಂಭವಿಸಿದ್ದ ದೇವರಾಜ ಅರಸರ ಸಾವಿನೊಂದಿಗೆ ಕಾಂಗ್ರೆಸ್ ಯು ಪ್ರಭಾವ ಕ್ಷೀಣಿಸಿತು. ಚಳುವಳಿಗಳ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘ, ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು, ನಾಯಕರು ಭಾಗವಾಗಿದ್ದ ಕಮ್ಯುನಿಸ್ಟ್ ಪಕ್ಷಗಳು ಮಾತ್ರ ಈ ಚಳುವಳಿಗಳ ಪ್ರತಿನಿಧಿಗಳಾಗಿ ಚುನಾವಣಾ ಕಣಕ್ಕಿಳಿದವು. ಉಳಿದೆಲ್ಲ ಚಳುವಳಿಗಳ ರಾಜಕೀಯ ಅಲಿಪ್ತತೆಯ ಹಿನ್ನೆಲೆಯಲ್ಲಿ ಗುಂಡುರಾವ್ ಸರ್ಕಾರದ ದೌಜನ್ಯಗಳಿಗೆ ಕೊನೆ ಹಾಡಲು ಕಮ್ಯುನಿಸ್ಟ್ ಪಕ್ಷಗಳು ಜನತಾ ಪಕ್ಷದೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಎರಡೂ ಕಮ್ಯುನಿಸ್ಟ್ ಪಕ್ಷಗಳಿಂದ ಗೆದ್ದ ಆರು ಸದಸ್ಯರ ಜೊತೆಗೆ ಜನತಾ ಪಕ್ಷ ಸೇರಿ ಗೆದ್ದಿದ್ದ ಮಲಪ್ರಭಾ ರೈತ ಚಳುವಳಿಯ ನಾಯಕರಲ್ಲೊಬ್ಬರಾದ ಯಾವಗಲ್ ಮಾತ್ರ ಚಳುವಳಿಯ ಬಳುವಳಿಗಳಾದರು.

ಈ ಚುನಾವಣೆಗಳಲ್ಲಿ ಕಾಂಗ್ರೆಸ್‌ಅನ್ನು ಸೋಲಿಸಬೇಕೆಂಬ ಜನರ ದೃಢ ನಿಶ್ಚಯ ಹೇಗಿತ್ತೆಂದರೆ ಅಂದು ಸ್ಪರ್ಧಿಸಿದ್ದ ಅನೇಕರ ಬಳಿ ಪ್ರಚಾರ ಮಾಡಲು ಹಣವೂ ಇರಲಿಲ್ಲ. ಕ್ಷೇತ್ರದಲ್ಲಿ ಅವರ ಹೆಸರೂ ಅನೇಕರಿಗೆ ಗೊತ್ತಿರಲಿಲ್ಲ. ಆದರೂ ಹಳ್ಳಿಗಳಲ್ಲಿ, ನಗರ, ಪಟ್ಟಣಗಳ ಬೀದಿಬೀದಿಗಳಲ್ಲಿ ಜನರೇ ಮುಂದಾಗಿ ಅವರನ್ನು ಹೊತ್ತು ಮೆರೆಸಿದರು. ತಾವೇ ಹಣ ಹಾಕಿಕೊಂಡು ಪ್ರಚಾರ ಮಾಡಿದರು. ಹೀಗೆ ಗೆದ್ದದ್ದು ಜನತಾ ಪಕ್ಷ. ಜನರಲ್ಲ. ಗೆಲ್ಲಿಸಿದ್ದು ಮಾತ್ರ ಜನರೇ.

ಜನತಾ ಪಕ್ಷದ ಆಡಳಿತ ರೈತ ಪರವಾಗಿತ್ತೇ?
ರೈತರ, ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತೇ?

(ಕೃಷಿ ಕಾರ್ಪೊರೆಟೀಕರಣ ಲೇಖನ ಸರಣಿಯ ಭಾಗವಾದ ಎರಡು ಕಂತುಗಳ ಈ ಬರಹ ಇದರೊಂದಿಗೆ ಕೊನೆಗೊಂಡಿದೆ)

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-2

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...