Homeಮುಖಪುಟವಿಶ್ಲೇಷಣೆ: 100 ವರ್ಷಗಳಷ್ಟು ಹಳೆಯದಾದ ‘ಚಿಂತಾಮಣಿ’ ನಾಟಕವನ್ನು ಆಂಧ್ರ ಸರ್ಕಾರ ನಿಷೇಧಿಸಿದ್ದೇಕೆ?

ವಿಶ್ಲೇಷಣೆ: 100 ವರ್ಷಗಳಷ್ಟು ಹಳೆಯದಾದ ‘ಚಿಂತಾಮಣಿ’ ನಾಟಕವನ್ನು ಆಂಧ್ರ ಸರ್ಕಾರ ನಿಷೇಧಿಸಿದ್ದೇಕೆ?

- Advertisement -
- Advertisement -

ಜನಪ್ರಿಯ ನಾಟಕವಾದ`ಚಿಂತಾಮಣಿ’ಯನ್ನು ಆಂಧ್ರಪ್ರದೇಶ ಸರ್ಕಾರ ಜನವರಿ 17ರಂದು ರಾಜ್ಯಾದ್ಯಂತ ನಿಷೇಧಿಸಿ ಆದೇಶ ಹೊರಡಿಸಿದೆ. ಈ ನಾಟಕವು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಚಾಲ್ತಿಯಲ್ಲಿದೆ.

100 ವರ್ಷಗಳಷ್ಟು ಹಳೆಯದಾದ ನಾಟಕವನ್ನು ಆರ್ಯ ವೈಶ್ಯ ಸಮುದಾಯವು ವಿರೋಧಿಸಿದ ನಂತರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ತಮ್ಮ ಸಮುದಾಯದ ಕುರಿತು ಆಕ್ಷೇಪಾರ್ಹ ವಿಷಯವನ್ನು ಒಳಗೊಂಡಿದೆ ಎಂದು ಆರ್ಯವೈಶ್ಯ ಸಮುದಾಯ ಆರೋಪಿಸಿದೆ. ಈ ನಾಟಕವನ್ನು ನಿಷೇಧಿಸಬೇಕೆಂದು 2020ರಿಂದಲೂ ಸಮುದಾಯವು ಒತ್ತಾಯಿಸುತ್ತಿತ್ತು. ವೈಶ್ಯ ಸಮುದಾಯದ ವ್ಯಾಪಾರಿ ಸುಬ್ಬಿ ಸೆಟ್ಟಿಯ ಪಾತ್ರವನ್ನು ನಾಟಕದಲ್ಲಿ ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ವೇಶ್ಯಾಗೃಹಕ್ಕೆ ನಿಯಮಿತವಾಗಿ ಭೇಟಿ ನೀಡುವ ದುಷ್ಕೃತ್ಯದಿಂದಾಗಿ ತನ್ನೆಲ್ಲ ಸಂಪತ್ತನ್ನು ಕಳೆದುಕೊಳ್ಳುವ ಹಾಸ್ಯ ಪ್ರಧಾನ ಪಾತ್ರವಾಗಿ ಸುಬ್ಬಿಸೆಟ್ಟಿಯನ್ನು ಇಲ್ಲಿ ಚಿತ್ರಿಸಲಾಗಿದೆ ಎಂಬುದು ಸಮುದಾಯದ ಆಕ್ಷೇಪ.

ಸರ್ಕಾರದ ನಿರ್ಧಾರದಿಂದ ಸಂತೋಷಗೊಂಡಿರುವ ಆಂಧ್ರಪ್ರದೇಶ ಆರ್ಯ-ವೈಶ್ಯ ಮಹಾಸಭಾದ ಅಧ್ಯಕ್ಷ ಎಂ. ದ್ವಾರಕಾನಾಥ್, “ಹಲವು ವರ್ಷಗಳಿಂದ ನಮ್ಮ ಸಮುದಾಯವು ನಾಟಕವನ್ನು ಆಕ್ಷೇಪಿಸುತ್ತಿದೆ. ಆದರೆ ಯಾವುದೇ ಸರ್ಕಾರವು ಇದನ್ನು ಗಮನಿಸಿರಲಿಲ್ಲ. ಈಗಿನ ಸರ್ಕಾರ ನಾಟಕವನ್ನು ಪರಿಶೀಲಿಸಿ ಸರಿಯಾದ ನಿರ್ಧಾರ ಕೈಗೊಂಡಿದೆ” ಎಂದಿದ್ದಾರೆ.

ನಾಟಕದ ಆಕ್ಷೇಪಣೆಗಳನ್ನು ವಿವರಿಸಿದ ಅವರು, ನಾಟಕವು ನಮ್ಮ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದರು. ಸುಬ್ಬಿ ಸೆಟ್ಟಿ ಪಾತ್ರವನ್ನು ಉಲ್ಲೇಖಿಸಿದ ಅವರು, “ನಮ್ಮನ್ನು ಕಪ್ಪಗಿನ, ಕುಳ್ಳಗಿನ ಮತ್ತು ತಮಾಷೆಯಾಗಿ ಮಾತನಾಡುವ ಜನರೆಂದು ತೋರಿಸಲಾಗಿದೆ. ಇದು 100 ವರ್ಷಗಳ ಹಿಂದೆ ಸ್ವೀಕಾರಾರ್ಹವಾಗಿರಬಹುದು, ಆದರೆ ಇನ್ನು ಮುಂದೆ ಅಲ್ಲ. ಇದು ಈಗ ಅಪರಾಧವಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌‌ ಅಯೋಧ್ಯೆಯಲ್ಲಿ ಸ್ಪರ್ಧಿಸುವ ಕನಸು ಭಗ್ನವಾಗಿದ್ದೇಕೆ?

“ಸುಬ್ಬಿ ಸೆಟ್ಟಿ ಪಾತ್ರವನ್ನು ತೆಗೆದುಹಾಕಲು, ಕೆಲವು ಬದಲಾವಣೆಗಳನ್ನು ಮಾಡಲು ಮತ್ತು ನಾಟಕವನ್ನು ಮುಂದುವರಿಸಲು ಅವಕಾಶ ಮಾಡಿಕೊಡಲು ಕಲಾವಿದರನ್ನು ಏಕೆ ಕೇಳಬಾರದು ಎಂದು ಕೆಲವರು ಕೇಳುತ್ತಿದ್ದಾರೆ … ಆದರೆ ಇಡೀ ನಾಟಕವು ಸುಬ್ಬಿಯ ಪಾತ್ರವನ್ನು ಆಧರಿಸಿದೆ” ಎಂದಿದ್ದಾರೆ.

ಸಮಾಜ ಸುಧಾರಕ ಕಲ್ಲಕೂರಿ ನಾರಾಯಣ ರಾವ್ ಅವರು 1920ರಲ್ಲಿ ಬರೆದ ಈ ನಾಟಕವು ಕೃಷ್ಣನ ಮೇಲಿನ ಭಕ್ತಿಯಿಂದ ಮುಕ್ತಿಯನ್ನು ಪಡೆಯುವ ‘ಚಿಂತಾಮಣಿ’ ಎಂಬ ವೇಶ್ಯೆಯ ಕುರಿತ್ತಾದ್ದಾಗಿದೆ.

“ಮೂಲತಃ, ನಾಟಕವನ್ನು ಸಾಮಾಜಿಕ ಸಂದೇಶದೊಂದಿಗೆ ಸುಧಾರಣಾ ಭಾಗವಾಗಿ ಬರೆಯಲಾಗಿದೆ. ಆದರೆ ನಂತರದಲ್ಲಿ ಈ ನಾಟಕವನ್ನು ಹೆಚ್ಚು ಮನರಂಜನೆಗಾಗಿ ಹಲವಾರು ರೂಪಾಂತರಗಳನ್ನು ಮಾಡಲಾಯಿತು. ವಿಶೇಷವಾಗಿ ‘ರೆಕಾರ್ಡಿಂಗ್ ಡ್ಯಾನ್ಸ್’ (ಜಾನಪದ ನೃತ್ಯದಿಂದ ಕವಲೊಡೆದ ಕಾಮಪ್ರಚೋದಕ ಮನರಂಜನೆ) ಪ್ರವೇಶದ ನಂತರ, ನಾಟಕವು ಸಂಪೂರ್ಣವಾಗಿ ಅಸಭ್ಯವಾಗಿ ಹೊರಹೊಮ್ಮಿತು” ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಗತಿಪರ ಥಿಯೇಟರ್ ಗ್ರೂಪ್‌ನ ಸ್ಥಾಪಕ ಸದಸ್ಯ ಶೇಕ್ ಜಾನ್ ಬಶೀರ್ ವಿಶ್ಲೇಷಿಸುತ್ತಾರೆ.

“ಗ್ರಾಮೀಣ ಹಬ್ಬಗಳ ಸಮಯದಲ್ಲಿ ಜನಸಾಮಾನ್ಯರನ್ನು ಆಕರ್ಷಿಸಲು, ನಾಟಕದಲ್ಲಿ ಹಲವಾರು ಲೈಂಗಿಕ ಒಳನೋಟಗಳು ಮತ್ತು ಲೈಂಗಿಕ ಉಲ್ಲೇಖಗಳನ್ನು ನಾಟಕದ ಗುಂಪುಗಳು ಸೇರಿಸಿ, ನಾಟಕದ ನಿಜವಾದ ಉದ್ದೇಶವನ್ನು ಅಪವಿತ್ರಗೊಳಿಸಿದ್ದಾರೆ” ಎಂದು ಬಶೀರ್ ಉಲ್ಲೇಖಿಸಿದ್ದಾರೆ.

ಆದರೆ, ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಶೀರ್‌, “ಸೆನ್ಸಾರ್ಶಿಪ್ ಅನ್ನು ಎಂದಿಗೂ ಪ್ರೋತ್ಸಾಹಿಸಬಾರದು. ಕಲೆಯ ಮೂಲಕ ವ್ಯಕ್ತಪಡಿಸಿದ ಭಿನ್ನಾಭಿಪ್ರಾಯವನ್ನು ಮೊಟಕುಗೊಳಿಸಲು ನಾಟಕೀಯ ಪ್ರದರ್ಶನಗಳ ಕಾಯಿದೆಯನ್ನು 1876​ರಲ್ಲಿ ಬ್ರಿಟಿಷರು ಪರಿಚಯಿಸಿದರು. ಪ್ರಸ್ತುತ ಆಂಧ್ರ ಸರ್ಕಾರದ ನಿರ್ಧಾರವನ್ನು ಅದರ ವಿಸ್ತರಣೆಯಾಗಿ ನೋಡಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಟಕದ ಮೇಲೆ ನಿಷೇಧ ಹೇರುವ ಬದಲು ಸರ್ಕಾರವು ಬದಲಾವಣೆಗಳನ್ನು ಕೇಳಬೇಕಿತ್ತು ಎಂದು ಕೆಲವರು ವಾದಿಸಿದ್ದಾರೆ. ನಾಟಕಕಾರ ಮತ್ತು ನಟ ಗೋವಡ ವೆಂಕಟ್ `ದಿ ಹಿಂದೂ’ ಉಲ್ಲೇಖಿಸಿ, “ಎಲ್ಲಾ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ಒಳಗೊಂಡಿರುತ್ತವೆ. ನಾಟಕದಲ್ಲಿ ಕೆಲವು ಪಾತ್ರಗಳನ್ನು ಮಾತ್ರ ಎತ್ತಿ ತೋರಿಸುವುದು ಸರಿಯಲ್ಲ” ಎಂದಿದ್ದಾರೆ. “ಒಂದು ಪಾತ್ರವನ್ನು ತೆಗೆದುಹಾಕಲು ಅಥವಾ ಆಕ್ಷೇಪಾರ್ಹ ಸಂಭಾಷಣೆಗಳನ್ನು ಸಂಪಾದಿಸಲು ಸರ್ಕಾರಕ್ಕೆ ಹಕ್ಕಿದೆ. ಆದರೆ ಐತಿಹಾಸಿಕ ನಾಟಕದ ಮೇಲೆ ನಿಷೇಧ ಹೇರುವುದು ಸರಿಯಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ನಿರ್ಧಾರವು ನ್ಯಾಯಾಲಯಲ್ಲಿ ನಿಲ್ಲುವುದಿಲ್ಲ ಎಂದು ಅಭಿಪ್ರಾಯಪಡುವ ಸಮಾಜ ವಿಜ್ಞಾನಿ ಕಾಂಚ ಐಲಯ್ಯ ಶೆಫರ್ಡ್, “ಸಂತ್ರಸ್ತ ಕಲಾವಿದರು ಹೈಕೋರ್ಟ್‌ನ ಮೊರೆ ಹೋಗಬೇಕು” ಎಂದು ಒತ್ತಾಯಿಸಿದ್ದಾರೆ. “ಇದನ್ನು ನಾವು ಉತ್ತೇಜಿಸಬಾರದು. ನಿಮಗೆ ನಾಟಕ ಅಥವಾ ಚಲನಚಿತ್ರ ಇಷ್ಟವಾಗದಿದ್ದರೆ, ಅದನ್ನು ನೋಡಬೇಡಿ. ನಿಮಗೆ ಪುಸ್ತಕ ಇಷ್ಟವಾಗದಿದ್ದರೆ, ಅದನ್ನು ಓದಬೇಡಿ. ನಿಷೇಧವು ನಮ್ಮ ಪ್ರಧಾನ ಉದ್ದೇಶವಾಗಬಾರದು” ಎಂದು ಕಾಂಶ ಐಲಯ್ಯ ಪ್ರತಿಕ್ರಿಯಿಸಿದ್ದಾರೆ.

ಕಾಂಚ ಐಲಯ್ಯ ಅವರ ‘ಸಾಮಾಜಿಕ ಸ್ಮಗ್ಮರಲು: ಕೊಮಟೊಲ್ಲು’ ಕೃತಿಯನ್ನು ಬ್ಯಾನ್‌ ಮಾಡಬೇಕೆಂಬ ವಿರೋಧ ಕೇಳಿಬಂದಿದ್ದಾಗ ಐಲಯ್ಯ ಅವರು ಈ ಹಿಂದೆ ‘ಬನಿಯಾಸ್’ ಎಂದು ಕರೆಯಲ್ಪಡುವ ವೈಶ್ಯರ ಬಲವಾದ ವಿರೋಧವನ್ನು ಎದುರಿಸಿದ್ದರು. ‘ಸಾಮಾಜಿಕ ಕಳ್ಳಸಾಗಾಣಿಕೆದಾರರು: ವೈಶ್ಯರು’ ಎಂಬ ಶೀರ್ಷಿಕೆಯ ಪುಸ್ತಕ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ ವೈಶ್ಯರು, ಕಾಂಚ ಐಲಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು, ಅವರ ಪ್ರತಿಕೃತಿ ಮತ್ತು ಪುಸ್ತಕಗಳನ್ನು ಸುಟ್ಟುಹಾಕಿದ್ದರು. ವಿವಿಧ ರೀತಿಯ ಕಿರುಕುಳಗಳನ್ನು ನೀಡಿದ್ದರು.

ಈ ಹಿಂದೆ ವೈಶ್ಯ ಸಮುದಾಯದಿಂದ ತಮಗಾದ ತೊಂದರೆಯನ್ನು ಉಲ್ಲೇಖಿಸಿದ ಕಾಂಚ ಐಲಯ್ಯ, “ಮೂಲಭೂತವಾಗಿ ಬಂಡವಾಳದ ಮೇಲೆ ಏಕಸ್ವಾಮ್ಯ ಸಾಧಿಸಿರುವ ವೈಶ್ಯರು ತಮ್ಮ ಜಾತಿಯ ಶಕ್ತಿಯಿಂದಾಗಿ ಸರ್ಕಾರದ ಮೇಲೆ ಪ್ರಭಾವ ಬೀರಿದ್ದಾರೆ” ಎಂದು ಅಭಿಪ್ರಾಯಪಡುತ್ತಾರೆ. “ವೈಶ್ಯರು ಬಹಳ ಶ್ರೀಮಂತ ಸಮುದಾಯ. ಆದ್ದರಿಂದ ಪ್ರತಿಯೊಬ್ಬ ರಾಜಕಾರಣಿಯೂ ವೈಶ್ಯರ ಕುರಿತು ಒಳ್ಳೆಯ ಪುಸ್ತಕಗಳು ಇರಬೇಕೆಂದು ಬಯಸುತ್ತಾರೆ. ಸರ್ಕಾರಗಳು ವೈಶ್ಯರನ್ನು ಸಂತೋಷಪಡಿಸಲು ಬಯಸುವುದು ಮತಕ್ಕಾಗಿ ಅಲ್ಲ, ಅವರ ಹಣಕ್ಕಾಗಿ” ಎಂದಿದ್ದಾರೆ.

ಮೂಲ: ‘ದಿ ವೈರ್‌’ (ಲೇಖಕ: ಬಾಲಕೃಷ್ಣ ಗಣೇಶನ್)


ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌ ವಿರುದ್ಧ ರಾವಣ್ ಸ್ಪರ್ಧೆಯ ಲೆಕ್ಕಾಚಾರಗಳೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ಕೃಪಾಂಕ ರದ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ : ಎಂ.ಕೆ ಸ್ಟಾಲಿನ್

0
ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563...