ಸುಳ್ಳು ಸುದ್ದಿ (ಫೇಕ್ ನ್ಯೂಸ್) ಪತ್ತೆ ಹಚ್ಚುವುದು ಹೇಗೆ? ಇಲ್ಲಿವೆ ನೊಡಿ ಸರಳ ಮಾರ್ಗಗಳು

ದೇಶದ ಪ್ರಧಾನಮಂತ್ರಿಯವರ ಸಹೋದರ ರಿಕ್ಷಾ ನಡೆಸಿ ಕುಟುಂಬ ಸಾಕುತ್ತಿದ್ದಾರೆ, ನಮ್ಮ ಪ್ರಧಾನಿ ನಿಜವಾಗಿ ಧನ್ಯ! ಎಂಬ ಸುದ್ದಿ ಸಂಪೂರ್ಣ ಸುಳ್ಳು

| ಜಿ.ಆರ್. ವಿದ್ಯಾರಣ್ಯ |

ಸಂತಸದ ಸುದ್ದಿ” ಪ್ರಧಾನ ಮಂತ್ರಿ ಮೋದಿಯವರು ಘೋಷಣೆ ಮಾಡಿದಂತೆ –ನಿಮ್ಮ ಮನೆಯಲ್ಲಿ ಯಾವುದೇ ಸಮಾರಂಭ ಅಥವಾ ಪಾರ್ಟಿ ನಡೆದಿದ್ದು, ತುಂಬಾ ಆಹಾರ ಮಿಕ್ಕಿದ್ದಲ್ಲಿ ಸಂಕೋಚವಿಲ್ಲದೇ 1098 ಗೆ ಕರೆ ಮಾಡಿ (ಭಾರತದ ಎಲ್ಲೆಡೆಯಿಂದಲೂ) – ಮಕ್ಕಳ ಸಹಾಯವಾಣಿ. ಅವರು ಬಂದು ಮಿಕ್ಕ ಆಹಾರವನ್ನು ಕೊಂಡೊಯ್ಯುತ್ತಾರೆ.  ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯ ನೀಡುವ ಕೈಗಳು ಉತ್ತಮ” ಎಂಬ ಟ್ವಿಟರ್ ಸಂದೇಶ ಮೋದಿಯವರ ಕೊಡುಗೆ ಎನ್ನುವಂತೆ ಬಿಂಬಿಸಿ ಹಲವಾರು ಗುಂಪುಗಳಲ್ಲಿ ಮತ್ತೆ ಮತ್ತೆ ವೈರಲ್ ಆಗುತ್ತಿದೆ.

ಇದೇನೂ ಹೊಸ ಸಂದೇಶವಲ್ಲ. ಜನವರಿ 30, 2012ರಲ್ಲಿ  ದಿ ಟೆಲೆಗ್ರಾಫ್ ಪತ್ರಿಕೆ ಈ ಸುಳ್ಳು ಸುದ್ದಿಯನ್ನು ಬಹಿರಂಗಗೊಳಿಸಿ ಇಂತಹ ಸುದ್ದಿಯನ್ನು ನಂಬಿ ಜನರು ಹೇಗೆ ಮಕ್ಕಳ ಸಹಾಯವಾಣಿಗೆ ಅನಾವಶ್ಯಕ ಕರೆ ಮಾಡಿ ಸಂಸ್ಥೆಯ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿತ್ತು. ಇಂತಹ ದುರುದ್ದೇಶಪೂರಿತ ಹಾಗೂ ತಪ್ಪು ಸುದ್ದಿಗಳಿಂದ ಬೇಸತ್ತ ಮಕ್ಕಳ ಸಹಾಯವಾಣಿಯ ಅಧಿಕೃತ ಅಂತರ್ಜಾಲ ತಾಣ ChildLine India ತನ್ನ ಮುಖಪುಟದಲ್ಲಿ “ನಮ್ಮ ಸಂಸ್ಥೆ ಕೇವಲ ಸಂಕಷ್ಟದಲ್ಲಿರುವ ಮಕ್ಕಳಿಗೆ ಸಹಾಯವಾಣಿಯಾಗಿದ್ದು, ನಾವು ಯಾರಿಂದಲೂ ಆಹಾರ ಸ್ವೀಕರಿಸಿ ವಿತರಿಸುವುದಿಲ್ಲ. ಇಂತಹ ಸುದ್ದಿ ಪಸರಿಸಬೇಡಿ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು” ಎಂಬ ನೋಟಿಸ್ ಒಂದನ್ನು ಜಾರಿಗೊಳಿಸಿತ್ತು. ಆದರೂ ಸಹ ಇಂತಹ ದುಶ್ಪ್ರಚಾರ ಹೊಸ ಹೊಸ ನಾಯಕರ ಭಾವಚಿತ್ರ ಮತ್ತು ಹೆಸರುಗಳನ್ನು ಬಳಸಿಕೊಂಡು ಪದೇ ಪದೇ ವೈರಲ್ ಆಗುತ್ತಿದೆ.

ದೇಶದ ಪ್ರಧಾನಮಂತ್ರಿಯವರ ಸಹೋದರ ರಿಕ್ಷಾ ನಡೆಸಿ ಕುಟುಂಬ ಸಾಕುತ್ತಿದ್ದಾರೆ, ನಮ್ಮ ಪ್ರಧಾನಿ ನಿಜವಾಗಿ ಧನ್ಯ!

ಈ ರೀತಿಯ ಸಂದೇಶವೂ ಬಹಳ ದಿನದಿಂದ ವೈರಲ್ ಆಗುತ್ತಿದೆ. ಆದರೆ ಚಿತ್ರದಲ್ಲಿರುವ ವ್ಯಕ್ತಿ ನಮ್ಮ ಪ್ರಧಾನಮಂತ್ರಿಯವರ ಸಹೋದರನಲ್ಲ. ಅವರನ್ನು ಹೋಲುವಂತಹ ಇನ್ನೋರ್ವ ವ್ಯಕ್ತಿ. ಈ ಸುಳ್ಳು ಸುದ್ದಿಯನ್ನು ಇತ್ತೀಚೆಗೆ ಬಿ.ಜೆ.ಪಿ. ದೆಹಲಿ ಘಟಕ ಪ್ರಕಟಿಸಿತ್ತು ಆದರೆ ಇದೂ ಸಹ 2016ರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚಾಲನೆಯಲ್ಲಿ ಇಲ್ಲದ ಮಹಿಳಾ ಸುರಕ್ಷಾ ದೂರವಾಣಿ ಸಂಖ್ಯೆ ಮೋದಿಯವರ ಹೊಸ ಪ್ರಯತ್ನ ಎಂಬಂತೆ ಸಂದೇಶ

ಯೋಗಿ ಆದಿತ್ಯನಾಥ್– ಟ್ರು ಇಂಡಿಯನ್ ಎಂಬ ಹೆಸರಿನ ಫೇಸ್ಬುಕ್ ಪುಟದಿಂದ, 23 ಜುಲೈ 2018ರಿಂದ, ವೈರಲ್ ಆಗಿರುವ ಇನ್ನೊಂದು ಸಂದೇಶದ ಪ್ರಕಾರ “ರಾತ್ರಿ ಸಮಯದಲ್ಲಿ ಒಂಟಿಯಾಗಿ ನಗರದಲ್ಲಿ ಟ್ಯಾಕ್ಸಿ/ಆಟೋಗಳಲ್ಲಿ ಸಂಚಾರ ಮಾಡುತ್ತಿರುವ ಮಹಿಳೆಯರು 9969777888 ಎಂಬ ದೂರವಾಣಿಗೆ ವಾಹನ ಸಂಖ್ಯೆ ಎಸ್.ಎಂ.ಎಸ್. ಸಂದೇಶ ಮೂಲಕ ಕಳುಹಿಸಿದಲ್ಲಿ ಅಂತಹ ವಾಹನವನ್ನು ಪೋಲಿಸ್ ಗಸ್ತು ಪಡೆ ಜಿ.ಪಿ.ಆರ್.ಎಸ್. ಮೂಲಕ ಹಿಂಬಾಲಿಸುತ್ತಾರೆ. ಈ ಸಂದೇಶವನ್ನು ಆದಷ್ಟು ಜನರೊಂದಿಗೆ ಹಂಚಿಕೊಳ್ಳಿ. ಮುಂದಿನ ದುರ್ದೈವಿ ನಿಮ್ಮ ಮನೆಯವರೇ ಏಕೆ ಆಗಿರಬಾರದು?” ಎಂಬ ಸಂದೇಶವೂ ಸಹ ಸಾಕಷ್ಟು ವೈರಲ್ ಆಗಿದೆ. ಇದನ್ನೂ ಸಹ ಪ್ರಧಾನಿ ಮೋದಿ ಸರಕಾರದ  ಹೊಸ ಪ್ರಯತ್ನ ಎಂಬಂತೆ ಬಿಂಬಿಸಿ, ಅವರ ಭಾವಚಿತ್ರ ಲಗತ್ತಿಸಲಾಗಿದೆ. ಇದನ್ನು 3,000ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ಇದು ಭಾರತದ ಹಲವಾರು ಭಾಷೆಗಳಲ್ಲಿಯೂ ಹರಡುತ್ತಿದೆ.

ನಿಜ ಏನು?

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಇಂತಹ ಸುಳ್ಳು ಸುದ್ದಿ/ಅಪ-ಪ್ರಚಾರವನ್ನು ಆಲ್ಟ್-ನ್ಯೂಸ್, ಎಸ್.ಎಂ.ಹೋಕ್ಸ್-ಸ್ಲೇಯರ್, ಫ್ಯಾಕ್ಟ್-ಚೆಕರ್ ಮುಂತಾದ ಅಂತರ್ಜಾಲತಾಣಗಳು ನಿರಂತರವಾಗಿ ಬಹಿರಂಗಗೊಳಿಸುತ್ತಿರುತ್ತವೆ. ಕೆಲವು ಮುಖ್ಯವಾಹಿನಿ ಮಾಧ್ಯಮಗಳೂ ಸಹ ಇಂತಹ ಕೆಲಸ ಆಗ್ಗಾಗ್ಗೆ ಮಾಡುತ್ತಿರುತ್ತವೆ. ಮುಂಬಯಿ ಮತ್ತು ಬೆಂಗಳೂರು ಪೋಲಿಸ್ ಇಲಾಖೆಗಳು ಇಂತಹ ಸುಳ್ಳು ಸುದ್ದಿ ನಂಬಬೇಡಿ ಮತ್ತು ಮುಂದೆ ಪಸರಿಸಬೇಡಿ ಎಂದು ಹಲವಾರು ಬಾರಿ ಮನವಿ ಮಾಡಿದೆ. ಆದರೂ ಪ್ರಯೋಜನವಾಗುತ್ತಿಲ್ಲ. ಮಾಧ್ಯಮದಲ್ಲಿ ಬರುವ ನಿಜವಾದ ಸುದ್ದಿಗಿಂತಲೂ ಹೆಚ್ಚು ಸುಳ್ಳು ಸುದ್ದಿ/ಅಪಪ್ರಚಾರವನ್ನು ಜನರು ನಂಬ ತೊಡಗಿದ್ದಾರೆ. ಇಂತಹ ಅಪಪ್ರಚಾರಕ್ಕೆ ಕೆಲವು ರಾಜಕೀಯ ಪಕ್ಷಗಳ ಐಟಿ ಘಟಕದ ನೇರ ಹಾಗೂ ಪರೋಕ್ಷ ಬೆಂಬಲವೂ ಇದೆ.

ಇದನ್ನು ತಡೆಗಟ್ಟುವುದು ಹೇಗೆ? ಅಂದರೆ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವುದು ಹೇಗೆ

ಕಾನೂನಿನ ವ್ಯಾಪ್ತಿಯಲ್ಲಿ ಪೋಲಿಸ್ ಮತ್ತು ಇತರ ತನಿಖಾ ಏಜೆನ್ಸಿಗಳು ಇದರ ಸತ್ಯಾಸತ್ಯತೆ ಪತ್ತೆಹಚ್ಚುವ ಕೆಲಸ ಮಾಡುತ್ತಿರುತ್ತವೆ. ಜನ ಸಾಮಾನ್ಯರು ಮಾಡಬೇಕಾಗಿರುವುದು ಇಷ್ಟೇ:

  1. ಸುದ್ದಿ ಮೂಲ ಪರೀಕ್ಷಿಸಿ. ಸಂದೇಶವನ್ನು ಬಿಟ್ಟು ಅದರ ಮೂಲದ ಬಗ್ಗೆ ಹುಡುಕಿ. ಯಾರು ಇದನ್ನು ನಿಮಗೆ ಕಳುಹಿಸಿದ್ದಾರೆ ಅವರು ಕೇವಲ ಸ್ನೇಹಿತರೇ, ಯಾವುದೋ ಗುಂಪಿನ ಸದಸ್ಯರೇ, ನಂಬಿಕಸ್ಥರೇ ತಿಳಿಯಿರಿ. ಜಾಲತಾಣದ ಉದ್ದೇಶವೇನು, ಅವರ ಸಂಪರ್ಕ ವಿಳಾಸ ದೂರವಾಣಿ ಸಖ್ಯೆ ಇದೆಯೇ ನೋಡಿ.
  2. ಕೇವಲ ಸುದ್ದಿಯ ತಲೆಬರಹ ಓದಬೇಡಿ, ಅವು ರೋಚಕವಾಗಿರುತ್ತವೆ, ಇದೀ ಸುದ್ದಿ ಓದಿ ನೋಡಿ.
  3. ಸುದ್ದಿಯ ಲೇಖಕರ/ಪ್ರಕಾಶಕರ ಬಗ್ಗೆ ಸ್ವಲ್ಪ ಹುಡುಕಿ, ಅವರು ಪೂರ್ವಗ್ರಹ ಪೀಡಿತರಾಗಿರಬಹುದು.
  4. ಸುದ್ದಿಗೆ ಏನಾದರೂ ಬೆಂಬಲಿಸುವಂತಹ ಮೂಲದ ಲಿಂಕ್ ಇದ್ದರೆ ಅದನ್ನು ಜಾಲಿಸಿ ನೋಡಿ. ಪೂರಕವಾಗಿದೆಯೇ ಇಲ್ಲವೇ ಎಂದು. ಎಷ್ಟೋ ಬಾರಿ ಅಂತಹ ಜಾಲತಾಣವೇ ಇರುವುದಿಲ್ಲ.
  5. ಕೇವಲ ಒರ್ವ ದೊಡ್ಡ ವ್ಯಕ್ತಿಯ ಭಾವಚಿತ್ರವಿದೆ ಮತ್ತು ಅದರೊಂದಿಗೆ ಏನೋ ಹೇಳಿಕೆ ಇದೆ ಎಂದ ಮಾತ್ರಕ್ಕೆ ಅದು ನಿಜವಾಗುವುದಿಲ್ಲ. ಚಾಣಕ್ಯ, ನಾಟ್ರಡ್ಯಾಮಸ್, ಚರ್ಚಿಲ್, ಮಕ್ಕಾಲೆ ಮುಂತಾದವರ ಭಾವಚಿತ್ರದ ಜೊತೆ ಏನೇನೋ ಸಂದೇಶಗಳು ಹರಿದಾಡುತ್ತಿವೆ.
  6. ಸುದ್ದಿಯ ದಿನಾಂಕ ನೋಡಿ. ಹಳೆಯ ಸುದ್ದಿಗಳು ಹೊಸ ತಲೆಬರಹದೊಂದಿಗೆ ಮತ್ತೆ ಮತ್ತೆ ಕಾಣಸಿಗುತ್ತವೆ.
  7. ಸುದ್ದಿಯೋ ಕೇವಲ ತಮಾಷೆಯೋ ಸರಿಯಾಗಿ ನೋಡಿ. ಏಪ್ರಿಲ್ 1ರ ಸಂದೇಶಗಳು ವರ್ಷವಿಡೀ ಸುತ್ತುತ್ತಿರುತ್ತವೆ.
  8. ನಿಮ್ಮ ಸ್ವಂತ ಪೂರ್ವನಿರ್ಧಾರಿತ ನಂಬಿಕೆಗಳು ಸುಳ್ಳನ್ನೇ ನಿಜ ಎಂದು ನಂಬುವಂತೆ ಮಾಡಬಹುದು. ಅದನ್ನು ಸರಿಪಡಿಸಿಕೊಳ್ಳಿ.
  9. ತಜ್ಞರನ್ನು ಸಂಪರ್ಕಿಸಿ. ಸಂದೇಶ ನಿಜವೋ ಸುಳ್ಳೋ ಎಂದು ಸಂದೇಹವಿದ್ದಲ್ಲಿ ಅದನ್ನು ಮುಂದಕ್ಕೆ ಪಸರಿಸದೇ ಅದನ್ನು ನಂಬಿಕಸ್ಥ ಸತ್ಯಾಸತ್ಯತೆ ಪರಿಶೀಲಿಸುವ ಜಾಲತಾಣಗಳಿಗೆ ಕಳುಹಿಸಿ (ಆಲ್ಟ್-ನ್ಯೂಸ್, ಫ್ಯಾಕ್ಟ್-ಚೆಕರ್, ಎಸ್.ಎಂ.ಹೋಕ್ಸ್ ಸ್ಲೇಯರ್ ಇತ್ಯಾದಿ). ಸತ್ಯವನ್ನು ಬೆಂಬಲಿಸುವ ಜಾಲತಾಣಗಳನ್ನು ಬೆಂಬಲಿಸಿ.

ಸುಳ್ಳು ಸುದ್ದಿ/ಅಪಪ್ರಚಾರ ಪಸರಿಸಬೇಡಿ. ಇದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here