ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಬೇಕು, ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಮತದಾರರಿಗೆ ಕರೆ ನೀಡಿದ್ದಾರೆ.
ಶನಿವಾರ ಹೈದರಾಬಾದ್‌ನ ಧರ್ನಾ ಚೌಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದರು. ಮತದಾರರ ಪಟ್ಟಿಯಿಂದ 13 ಕೋಟಿಗೂ ಹೆಚ್ಚು ಹೆಸರುಗಳನ್ನು ಕೈಬಿಡಲು ಕಾರಣವಾದ ಪ್ರಮುಖ ನಿರ್ಧಾರಗಳ ವಿಷಯದಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಕತ್ತಲಲ್ಲಿಟ್ಟಿದ್ದರು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿದ ವರದಿಯ ಬೆನ್ನಲ್ಲೇ, ಗ್ಯಾನೇಶ್ ಕುಮಾರ್ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿ ಹಲವರು ಧರ್ನಾ ಚೌಕ್‌ನಲ್ಲಿ ನೆರೆದಿದ್ದರು.
ಧರ್ನಾ ಚೌಕ್‌ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ರಾಜ್, “ಅಪರಾಧ ಪ್ರಕರಣಗಳಲ್ಲಿ, ಅಪರಾಧಿಯು ಕೊಲೆ ಮಾಡುವಾಗ ಸಿಕ್ಕಿಬೀಳುವುದಿಲ್ಲ; ಸಾಕ್ಷ್ಯಗಳನ್ನು ನಾಶಪಡಿಸುವಾಗ ಸಿಕ್ಕಿಬೀಳುತ್ತಾನೆ. ನೀವು (ಗ್ಯಾನೇಶ್ ಕುಮಾರ್) ಈಗ ಸಾಕ್ಷ್ಯಗಳನ್ನು ನಾಶಪಡಿಸುತ್ತಿದ್ದೀರಿ” ಎಂದು ಅವರು ಹೇಳಿದರು.
“ಕಡತಗಳಿಗೆ ಬೆಂಕಿ ಬೀಳುವ ಮುನ್ನವೇ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕು, ಸಾಕ್ಷ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು” ಎಂದು ಅವರು ಜನರಿಗೆ ಕರೆ ನೀಡಿದರು.
“ಇದು ಕೇವಲ ಮತಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ. ಇದು ಪ್ರಜಾಪ್ರಭುತ್ವದ ಕೊಲೆಯ ವಿರುದ್ಧದ ಹೋರಾಟ, ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಗೆ ನೀಡಲಾಗಿದ್ದ ಸಮಯ ಮುಗಿದಿದೆ ಎಂದು ತಿಳಿಸಿದ ಹೈದರಾಬಾದ್ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿದ ನಂತರ ಧರ್ನಾ ಚೌಕ್‌ನಲ್ಲಿ ನಡೆದ ಪ್ರತಿಭಟನೆಯು ದಿಢೀರನೆ ಮುಕ್ತಾಯಗೊಂಡಿತು.


