Homeಮುಖಪುಟಹೊಂಬಾಳೆ 3: ಸ್ತ್ರೀಕರಣಗೊಳ್ಳುತ್ತಿರುವ ಕೃಷಿಯಲ್ಲಿ ಮಹಿಳೆ ಉಳಿದರೆ, ಕೃಷಿಯೂ ಉಳಿದೀತು!

ಹೊಂಬಾಳೆ 3: ಸ್ತ್ರೀಕರಣಗೊಳ್ಳುತ್ತಿರುವ ಕೃಷಿಯಲ್ಲಿ ಮಹಿಳೆ ಉಳಿದರೆ, ಕೃಷಿಯೂ ಉಳಿದೀತು!

‘ಡೌನ್ ಟು ಆರ್ಥ್’ ಪತ್ರಿಕೆ ದಾಖಲಿಸಿದ ವರದಿಯಂತೆ ಒಂದು ಬೆಳೆಯ ಅವಧಿಯಲ್ಲಿ ಮಹಿಳೆಯರು 3300 ಗಂಟೆಗಳ ಕಾಲ ಕೆಲಸ ಮಾಡಿದರೆ ಪುರುಷರು 1860 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದರ ಜೊತೆ ಜೊತೆಗೆ ಅವಳು ಮನೆಯ ಹಿರಿಯರ ಮತ್ತು ಮಕ್ಕಳ ಜವಾಬ್ದಾರಿ, ಹೈನುಗಾರಿಕೆ ಮತ್ತು ಮನೆಯ ಕೆಲಸವನ್ನು ಮಾಡಲೇಬೇಕಾಗಿದೆ.

- Advertisement -
- Advertisement -

1995ರಲ್ಲಿ ಭಾರತ ಮುಕ್ತ ಆರ್ಥಿಕ ಒಪ್ಪಂದಕ್ಕೆ ತೆರೆದುಕೊಂಡಿತು. NCRB- ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಅವರ ಒಂದು ವರದಿಯಂತೆ ಭಾರತ ಈ ಒಪ್ಪಂದಕ್ಕೆ ತೆರೆದುಕೊಂಡ ನಂತರ 2015ರವರೆಗೆ ಸರಿಸುಮಾರು 3.30 ಲಕ್ಷ ರೈತರು ಈ ದೇಶದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರ ಅಂಚಿಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 4 ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚು ಇರುವ ಸಾಧ್ಯತೆ ಸ್ಪಷ್ಟವಾಗಿದೆ. ಕೃಷಿ ಕಸುಬಿನಲ್ಲಿ ಕಂಡು ಬರುವ ಈ ಭೀಕರತೆ ಬೇರೆ ಯಾವ ಉದ್ಯೋಗದಲ್ಲೂ ಕಂಡಿಲ್ಲ. ಇಂತಹ ಮನೆಗಳಲ್ಲಿ ಒಂಟಿಯಾಗಿ ಉಳಿಯುವ ರೈತ ಮಹಿಳೆಯರು ಕೃಷಿಗೆ ಬೆನ್ನುಹಾಕದೇ ಹೊಲ ಗದ್ದೆಗಳ ಒಡೆತನ ತಮ್ಮ ಹೆಸರಲ್ಲಿ ಇದ್ದರೂ, ಇಲ್ಲದಿದ್ದರೂ ಅಥವಾ ಒಟ್ಟು ಕುಟುಂಬದ ಹೆಸರಲ್ಲಿ ಇದ್ದರೂ, ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಎದುರಾಗುವ ತೊಡಕುಗಳಿಂದ ಹಣ್ಣಾದರೂ ಎದೆಗುಂದದೆ ತಮ್ಮ ಬೆನ್ನಿಗೆ ಬಿದ್ದ ಮಕ್ಕಳ ಜವಾಬ್ದಾರಿಯೊಂದಿಗೆ ಮನೆಯ ದೀಪವನ್ನು ಉರಿಸುತ್ತಿದ್ದಾರೆ. ಒಂದು ಸಮೀಕ್ಷಾ ವರದಿಯಂತೆ ಕೇವಲ ಶೇ.5ರಷ್ಟು ಮಹಿಳೆಯರಿಗಷ್ಟೇ ಭೂಮಿಯ ಒಡೆತನವಿದೆ. ಇದರಲ್ಲಿ ಗುತ್ತಿಗೆ ಪಡೆದ ಭೂಮಿಯು ಸೇರಿದೆ. ಭೂಮಿಯ ಒಡೆತನದ ಹಕ್ಕು ಇಲ್ಲದಿದ್ದರೆ ಭೂಮಿಯಲ್ಲಿ ಬೆಳೆ ಬೆಳೆಯಬಹುದೇ ಹೊರತು ಭೂಮಿಯನ್ನು ಆಧಾರವಾಗಿಸಿ ಯಾವುದೇ ವ್ಯವಹಾರ ಮಾಡಲು ಬರುವುದಿಲ್ಲ.

ಕೃಷಿ ಕ್ಷೇತ್ರದ ಎಲ್ಲಾ ಆಧಾರ ಸ್ತಂಭಗಳಾದ ಬಿತ್ತನೆ ಬೀಜ, ಭೂಮಿ, ಸಲಕರಣೆಗಳು, ಹವಾಮಾನ, ನೀರಾವರಿ ವ್ಯವಸ್ಥೆ, ಮಾನವ ಸಂಪನ್ಮೂಲ ಹೀಗೆ ಎಲ್ಲವೂ ಇಂದು ಅಲ್ಲಾಡುತ್ತಿದೆ. ರೈತರ ಬದುಕನ್ನೆ ಅಲ್ಲಾಡಿಸುತ್ತಿದೆ. ಕಂಪನಿಗಳ ಹಿಡಿತಕ್ಕೆ ಹೋಗಿರುವ ಬಹುತೇಕ ಉತ್ಪಾದನಾ ಸಾಮಗ್ರಿಗಳು ದುಬಾರಿಯಷ್ಟೇ ಅಲ್ಲ ರೈತರನ್ನು ಗುಲಾಮರನ್ನಾಗಿಸುತ್ತಿವೆ. ಇದರೊಟ್ಟಿಗೆ ನಮ್ಮ ಸರ್ಕಾರಗಳು ಮತ್ತು ಈ ಆಡಳಿತ ವ್ಯವಸ್ಥೆ ಒಂದು ಸುಭದ್ರವಾದ ಮಧ್ಯವರ್ತಿಮುಕ್ತ ಮಾರುಕಟ್ಟೆಯನ್ನು ಒದಗಿಸದೇ ರೈತರು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅನಿವಾರ್ಯತೆಯಿಂದ ಕೃಷಿ ನಷ್ಟದ ಕಸುಬಾಗಿದೆ. ಈ ಕಾರಣದಿಂದ ಇಂದು ಗ್ರಾಮಗಳಿಂದ ನಗರಗಳಲ್ಲಿನ ಸೇವಾವಲಯಕ್ಕೆ ವಲಸೆ ತೀರಾ ಸಾಮಾನ್ಯವಾಗಿದೆ. ಈಗೊಂದೆರಡು ವರ್ಷಗಳ ಹಿಂದಿನ ಒಂದು ವರದಿಯಂತೆ ಸರಿ ಸುಮಾರು 5386 ರೈತರು ಪ್ರತಿದಿನ ಕೃಷಿಗೆ ಬೆನ್ನು ಹಾಕಿ ವಲಸೆ ಹೋಗುತ್ತಿದ್ದಾರೆ. ಅಲ್ಲದೇ ಯಾವುದೇ ಕನಿಷ್ಠ ಸೌಕರ್ಯಗಳಿಲ್ಲದ ಮೂರು ಮನೆಯ ಕೊಪ್ಪಲಿನಂಥ ಗ್ರಾಮದಲ್ಲೂ ವ್ಯವಸ್ಥಿತವಾಗಿ ಸರಾಯಿ ಅಂಗಡಿಗಳಲ್ಲಿ ಸರಾಯಿ ಮಾರಾಟವಾಗುತ್ತಿದೆ. ಚಟಕ್ಕೆ ಬಲಿಯಾದ ಬಹುತೇಕರು ದುಡಿಮೆಗೆ ಹೆಗಲು ಕೊಡುತ್ತಿಲ್ಲ್ಲ ಮತ್ತು ದುಡಿದದ್ದನ್ನು ಅಲ್ಲೇ ವ್ಯಯಿಸುವುದು ಸಾಮಾನ್ಯವಾಗಿದೆ.

ಹೀಗೆ ವಲಸೆ ಹೋದ ಗಂಡ, ಆತ್ಮಹತ್ಯೆ ಮಾಡಿಕೊಂಡ ಗಂಡ, ಕುಡುಕ ಗಂಡ, ಜವಾಬ್ದಾರಿ ಹೊರದ ಗಂಡ, ದುಡಿಮೆಗೆ ಮತ್ತು ಸಾಲಕ್ಕೆ ಬೆನ್ನು ಹಾಕಿದ ಗಂಡಂದಿರಿರುವ ರೈತ ಕುಟುಂಬಗಳ ದಿಟ್ಟೆಯರು ಇನ್ನೂ ಬೆಳೆ ಬೆಳೆಯುತ್ತಿರುವುದರಿಂದಲೇ ಇಂದಿಗೂ ಕೃಷಿ ನಡೆಯುತ್ತಿದೆ. ಸೂರ್ಯನ ಬೆಳಕು ಭೂಮಿಗೆ ಬೀಳುವ ಮುನ್ನ ಶುರುವಾಗುವ ಇವರ ದಿನಚರಿ ರಾತ್ರಿವರೆಗೂ ಬಿಡುವಿಲ್ಲದೇ ನಡೆಯುತ್ತದೆ. ಕೃಷಿ ಕೆಲಸವೆಂದರೇ ಹಾಗೇ, ಆದರಲ್ಲೂ ‘ಒಬ್ಬಂಟಿಗಿತ್ತಿ’ ಎಂದರೆ ಮುಗಿಯದ ದುಡಿಮೆ. ಇಂತಹ ಬದುಕು ಬೇಕಿಲ್ಲದಿದ್ದರೂ, ಅಸಹನೀಯವಾದುದಾದರೂ ಮನೆಯ ಮರ್ಯಾದೆ, ತಾಯ್ತನದ ಜವಾಬ್ದಾರಿ ಮತ್ತು ಸೆಳೆತ, ಇರುವ ಜಾಗ ಬಿಟ್ಟು ಬೇರೆಡೆಗೆ ಹೋಗಿ ನೆಲೆಸಲಾರದ ಅಸಹಾಯಕತೆ, ಒಳ್ಳೆ ದಿನಗಳು ಬಂದಾವು ಎನ್ನುವ ಭರವಸೆ ಹೀಗೆ ನಾನಾ ಕಾರಣಗಳಿಂದ ಇಷ್ಟವಿದ್ದರೂ ಇಲ್ಲದಿದ್ದರೂ ಹೆಗಲುಕೊಟ್ಟಿದ್ದಾಳೆ ರೈತ ಮಹಿಳೆ. ಕೆಲವು ಒಂಟಿ ರೈತ ಮಹಿಳೆಯರಂತು ಬಹಳ ಸಮರ್ಥವಾಗಿ ತಾವೇ ಸ್ವತಃ ಸಾಲು ಹೊಡೆಯೋದು, ಕುಂಟೆ ಹೊಡೆಯೋದು, ರಾತ್ರಿ 11ಕ್ಕೂ ಬೆಳಗಿನ ಜಾವ 4 ಗಂಟೆಗೂ ಸರ್ಕಾರಗಳು ಕೊಡುವ ಕಿರುಕುಳದ ಕರೆಂಟ್‍ನಲ್ಲಿಯೂ ಬ್ಯಾಟರಿ ಬೆಳಕಿನಲ್ಲಿ ಹೋಗಿ ಪಂಪ್ ಚಾಲೂ ಮಾಡಿಬರುವ ಗಟ್ಟಿಗಿತ್ತಿಯರಿದ್ದಾರೆ. ಕೃಷಿ ಕಾರ್ಮಿಕರ ಆಭಾವದ ಕಾರಣ ‘ಮುಯ್ಯಿ ಆಳು’ (ಸಹಕಾರಿ ದುಡಿಮೆ) ಮಾಡಿಕೊಂಡು ವ್ಯವಸಾಯ ಮಾಡುವ ಈ ಗಟ್ಟಿಗಿತ್ತಿಯರು ಗ್ರಾಮದೊಳಗಿನ ಶೋಷಣೆ, ದೌರ್ಜನ್ಯಗಳನ್ನು ಎದುರಿಸಿ ಕಣ್ಣೀರೊರೆಸುವುದಿದೆ.

ಸಾಂಕೇತಿಕವಾಗಿ ಒಂದೆರೆಡು ಉದಾಹರಣೆ ಕೊಡುವುದಾದರೆ,

ಹದಿಮೂರು ವರ್ಷಗಳ ಹಿಂದೆ ‘ನಾನೇನು ಕೈಗೆ ಬಳೆ ತೊಟ್ಟಿಲ್ಲಾ……………’ ಎನ್ನುತ್ತಾ ಮಾತು ಮಾತಿಗೂ ‘ನಾನು ಗಂಡಸು’ ಎನ್ನುವ ಪುರುಷಹಂಕಾರದಿಂದಲೇ ಮಾತಾಡುತ್ತಿದ್ದ ಶಿವಯ್ಯ ಸಾಲದ ಸುಳಿಯಿಂದ ಹೊರಬರಲಾರೆ ಎಂಬ ಭ್ರಮೆಯಿಂದ ಕೀಟನಾಶ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಎರಡು ಚಿಕ್ಕ ಮಕ್ಕಳು, ದೊಡ್ಡ ಸಾಲದ ಜವಾಬ್ದಾರಿ ಹೊತ್ತು ಪತಿಯ ಶವದ ಮುಂದೆ ರೋದಿಸುತ್ತಿದ್ದ ಪದ್ಮಳ ಸ್ಥಿತಿ ಎಂಥವರನ್ನು ನಡುಗಿಸುತ್ತಿತ್ತು. ಆದರೆ ಇಂದು ಅದೇ ಪದ್ಮ ತನ್ನಲ್ಲಿದ್ದ ಎರಡು ಬೋರ್‍ವೆಲ್ ನೀರಿನಿಂದ ಕೃಷಿ ಮಾಡಿ ಎರಡು ಮಕ್ಕಳನ್ನು ಕಟ್ಟಿಕೊಂಡು ದೂರದ ವಯಸ್ಸಾದ ನೆಂಟರೊಬ್ಬರನ್ನು ಮನೆಗೆ ಗಂಡುದಿಕ್ಕಿರಲೆಂದು ಕರೆತಂದು ಅವರಿಗೂ ಆಧಾರವಾಗಿ ಬದುಕು ನಡೆಸಿದ್ದಾಳೆ. “ಅಯ್ಯೋ ಅಕ್ಕ, ಸಾಲಾ ಕೊಟ್ಟಿದ್ದಂಥ ಅಪ್ಪಂದಿರದು ಯಾರ ಋಣಾನೂ ಇಟ್ಟುಕೊಳ್ಳದೇ ಎಲ್ಲರಿಗೂ ‘ಬಡ್ಡಿ ಕಟ್ಟಕಾಗಲ್ಲಾಂತ’ ಸಾಲ ವಾಪಸ್ ಕೊಟ್ಟುಬುಟ್ಟೆ; ಋಣಾ ತೀರಿಸಿಕೊಂಡೆ….. ಇಬ್ಬರು ಮಕ್ಕಳು ಚೆನ್ನಾಗಿ ಓದುತ್ತಾರೆ. ಎಷ್ಟು ಓದುತ್ತಾರೋ ಓದಲಿ, ಓದಿಸುತ್ತೇನೆ ಖರ್ಚಿಗೆ ಹೆದರಲ್ಲಾ……….” ಎನ್ನುವುದನ್ನು ಕೇಳುತ್ತಿದ್ದಾಗ ಪದ್ಮಳ ಎದೆಗಾರಿಕೆ ಶಿವಯ್ಯನಿಗೆ ಏಕೆ ಆಗಲಿಲ್ಲಾ???? ಎಂದೆನಿಸಿತ್ತು. ‘ಅಯ್ಯೋ ಹೆಣ್ಣು ಹೆಂಗಸು ಅವಳಿಗೇನು ಗೊತ್ತಾಗುತ್ತೆ….’ ಅಂತ ಶಿವಯ್ಯ ಅವಳನ್ನು ಕಡೆಗಣಿಸದೇ ಸಂಗಾತಿಯಂತೆ, ಗೆಳತಿಯಂತೆ ಅವಳ ಮಾತಿಗೂ ಸ್ವಲ್ಪ ಮನ್ನಣೆ ಕೊಟ್ಟಿದ್ದರೆ ಬೆಳೆ ನಷ್ಟಕ್ಕೆ ಸಾಲದ ಭಯಕ್ಕೆ ಪ್ರಾಣ ಕಳೆದುಕೊಳ್ಳುವಂತಿರಲಿಲ್ಲ ಎಂದೆನಿಸಿದ್ದೂ ನಿಜ.

ಬಹುತೇಕ ರೈತ ಕುಟುಂಬಗಳಲ್ಲಿ ಬಿತ್ತಿ, ಬೆಳೆ ಬೆಳೆದು, ಬೇಯಿಸೋಳು ಹೆಣ್ಣಾದರೂ ಏನನ್ನು ಬೆಳೆಯಬೇಕು ಎನ್ನುವ ನಿರ್ಧಾರ ಗಂಡಸರೇ ಮಾಡುವುದಲ್ಲದೇ ಮಹಿಳೆಯರ ಸಣ್ಣ ಸಣ್ಣ ಸಲಹೆಗಳನ್ನು ಸ್ವೀಕರಿಸೋ ಮನಸ್ಥಿತಿ ಗ್ರಾಮೀಣ ಭಾಗದಲ್ಲಿ ಈಗಲೂ ಇಲ್ಲಾ. ಒಂಟಿತನದಲ್ಲಿ ಬಾಳು ಸವೆಸಿದ ಪದ್ಮಳ ಬಾಳು, ಬದುಕು ಉಸಿರಿಗಿಂತ ಹೆಚ್ಚಾಗಿ ನಿಟ್ಟುಸಿರಿನಿಂದಲೇ ನಡೆದದ್ದು ವಾಸ್ತವ.

ಇನ್ನು ನಂಜಮ್ಮಳ ಗಂಡ ರಂಗಣ್ಣನು ಖಾತರಿಯೂ, ಸಮಾಧಾನಕರವೂ ಆದ ಆದಾಯದ ಆಸೆಗಾಗಿ ನಗರಕ್ಕೆ ವಲಸೆ ಹೋದವನು. ಹೆಂಡತಿಯ ಹೆಗಲಿಗೆ ವ್ಯವಸಾಯದ ಜವಾಬ್ದಾರಿ ಹೊರಿಸಿದ್ದ. ನಗರ ಸೇರಿದವನು ನೈಸರ್ಗಿಕವಾದ ದೇಹದ ಬಯಕೆಯ ದಾಹ ತಣಿಸಿಕೊಳ್ಳುವಲ್ಲಿ ಮುಂಜಾಗ್ರತೆಯ ಎಚ್ಚರಿಕೆ ಇಲ್ಲದೇ ಕೆಲ ವರ್ಷಗಳ ಹಿಂದೆ HIV ಬಾಧಿತನಾಗಿ ದುಡಿಯಲಾರದಷ್ಟು ಕೃಷನಾಗಿ ಮರಳಿ ಮನೆಗೆ ಬಂದಾಗ ನಂಜಮ್ಮಳ ಸ್ಥಿತಿ ಹೇಗಾಗಿರಬೇಡ? ಕೈ ಹಿಡಿದ ಗಂಡನ ಕೈ ಬಿಡಲಾರದೇ ಅವರ ಶುಶ್ರೂಷೆಗೂ ಹೆಗಲು ಕೊಡಲೇಬೇಕಾಯಿತು. ಮುಂಚಿನಿಂದಲೂ ಒಬ್ಬಳೇ ಹೆಗಲುಕೊಟ್ಟು ಕೃಷಿ ಮಾಡಿಸುತ್ತಿದ್ದಳಾದರೂ, ಉತ್ಪಾದನಾ ವೆಚ್ಚಕ್ಕೆ ಗಂಡ ರಂಗಣ್ಣ ಇದ್ದ. ನಾಟಿ, ಕುಯ್ಲು, ಕಣಗೆಲಸವಿದ್ದಾಗ ರಂಗಣ್ಣ ರಜೆಯ ಮೇಲೆ ಬಂದು ಕೈಜೋಡಿಸುತ್ತಿದ್ದ. ಈಗ ಇಂಥ ಪರಿಸ್ಥಿತಿಯಲ್ಲೂ ದೈವ ಶಕ್ತಿಯ ಮೇಲಿನ ನಂಬಿಕೆ, ತಾಯ್ತತನದ ಭದ್ರತೆಯಿಂದಾಗಿ ಹೈನುಗಾರಿಕೆಯೊಂದಿಗೆ, ಮೇಳಿ ಹಿಡಿದು ಸಾಲು ಹೊಡೆಯುವುದಾಗಲೀ, ಕುಂಟೆ ಹೊಡೆಯುವುದಾಗಲೀ, ಎಲ್ಲವನ್ನು ಯಾವುದೇ ಗಂಡಸಿಗೆ ಕಡಿಮೆ ಇಲ್ಲದಂತೆ 8-9 ವರ್ಷಗಳಿಂದ ಮಾಡಿಕೊಂಡು ಹೋಗುತ್ತಿರುವುದು ಅನುಕರಣೀಯವೇ ಸರಿ. ಹೊರಲಾರದ ಇಂಥ ಹೊರೆ ಹೊತ್ತು ಬದುಕು ಸಾಗಿಸುತ್ತಿರುವ ನಂಜಮ್ಮಳ ಬದುಕನ್ನು ಪದಗಳಲ್ಲಿ ತೆರೆದಿಡಲಾದಿತೇ?

ಇಲ್ಲಿ ಪದ್ಮ ಮತ್ತು ನಂಜಮ್ಮ ಸಾಂಕೇತಿಕವಷ್ಟೇ. ಕಳೆದ ಎರಡು ವರ್ಷಗಳ ಹಿಂದೆ ‘ಡೌನ್ ಟು ಆರ್ಥ್’ ಪತ್ರಿಕೆ ದಾಖಲಿಸಿದ ವರದಿಯಂತೆ ಒಂದು ಬೆಳೆಯ ಅವಧಿಯಲ್ಲಿ ಮಹಿಳೆಯರು 3300 ಗಂಟೆಗಳ ಕಾಲ ಕೆಲಸ ಮಾಡಿದರೆ ಪುರುಷರು 1860 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದರ ಜೊತೆ ಜೊತೆಗೆ ಅವಳು ಮನೆಯ ಹಿರಿಯರ ಮತ್ತು ಮಕ್ಕಳ ಜವಾಬ್ದಾರಿ, ಹೈನುಗಾರಿಕೆ ಮತ್ತು ಮನೆಯ ಕೆಲಸವನ್ನು ಮಾಡಲೇಬೇಕಾಗಿದೆ. ಹೈನುಗಾರಿಕೆಯಲ್ಲಿ ನಮ್ಮ ದೇಶದ 65 ಕೋಟಿ ಮಹಿಳೆಯರು ತೊಡಗಿಸಿಕೊಂಡರೆ 15 ಕೋಟಿ ಪುರುಷರು ಹೈನುಗಾರಿಕೆ ಮಾಡುತ್ತಿರುವ ವರದಿಗಳು ನಮ್ಮ ಮುಂದಿದೆ. ಕೃಷಿಯಲ್ಲಿ ಮಹಿಳೆಯರು ಬಹಳ ಗಟ್ಟಿಯಾಗಿ ದುಡಿಯುತ್ತಿರುವುದರಿಂದಲೇ ಈ ದೇಶದಲ್ಲಿ ಕಳೆದ ಸಾಲಿನಲ್ಲಿ 285 ದಶಲಕ್ಷ ಟನ್ ಆಹಾರ ಉತ್ಪಾದನೆಯಾಗಿದೆ ಎಂದರೆ ತಪ್ಪಾಗಲಾರದು ಮತ್ತು ಉತ್ಪ್ರೇಕ್ಷೆಯೂ ಆಗದು. ದುಡಿಯುವ ರೈತ ಮಹಿಳೆಗೆ ಆರ್ಥಿಕ ನ್ಯಾಯ ಮಾತ್ರ ಇನ್ನೂ ಸಿಕ್ಕಿಲ್ಲ. ಮಾರಾಟದ ಸಂಕಷ್ಟಗಳು ಅವಳನ್ನು ಮಾರುಕಟ್ಟೆಯಿಂದ ದೂರವೇ ಉಳಿಸಿದೆ. ಬಹುತೇಕ ಕೃಷಿ ಉತ್ಪನ್ನಗಳನ್ನು ಪುರುಷರೇ ಮಾರಾಟ ಮಾಡುವುದರಿಂದ ಬಹುತೇಕ ರೈತ ಮಹಿಳೆಯರು ಇಂದಿಗೂ ಕೈ ಒಡ್ಡುವ ಪರಿಸ್ಥಿತಿಯಲ್ಲೆ ನೋಯುತ್ತಿದ್ದಾರೆ. ಇದರೊಟ್ಟಿಗೆ ರೈತ ಪುರುಷನ ಮೂಲಕವೇ ರೈತ ಮಹಿಳೆ ಗುರುತಿಸಲ್ಪಡುವುದರಿಂದ ಸಾಮಾಜಿಕವಾಗಿಯೂ ಅವಳನ್ನು ಕಡೆಗಣಿಸಲಾಗಿದೆ.

ಇದೆಲ್ಲವೂ ಈಗಾಗಲೇ ಕೃಷಿಯಲ್ಲಿ ತೊಡಗಿರುವ ಮಹಿಳೆಯರ ಕಥನವಾದರೆ, ಇದಕ್ಕೆ ಇನ್ನೊಂದು ಮುಖವೂ ಇದೆ. ಯೋಗ್ಯನಿದ್ದರೂ ರೈತ ಯುವಕನನ್ನು ಮದುವೆಯಾಗಲೂ ಹುಡುಗಿಯರು ಇಂದು ಒಪ್ಪುತ್ತಿಲ್ಲಾ. ಈ ಕಾರಣದಿಂದಲೂ ಇಂದಿನ ರೈತರ ಮಕ್ಕಳು ಕೃಷಿಗೆ ಬೆನ್ನು ಹಾಕಿ ವಲಸೆಯ ಹಾದಿ ಹಿಡಿದಿದ್ದಾರೆ. ಗ್ರಾಮಗಳಲ್ಲಿಂದು ಯುವಕರನ್ನು ಕಾಣುವುದು ವಿರಳವಾಗಿದೆ. ಅಲ್ಲದೇ ಬಹುತೇಕ ರೈತ ಮಹಿಳೆಯರು ಕೂಡಾ ತಮ್ಮದೊಂದಿಷ್ಟು ಭೂಮಿಯನ್ನು ಮಾರಿಯಾದರೂ ಸರಿ ನಗರವಾಸಿ ಹುಡುಗನಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಬಯಸುತ್ತಾರೆ. ತಾನು ಅನುಭವಿಸುತ್ತಿರುವುದು ತನ್ನ ಮಗಳಿಗೆ ಬೇಡ ಏಂಬುದು ಇದಕ್ಕೆ ಕಾರಣವಿರಬಹುದು. ನಗರ ಬದುಕಿನ ಆಕರ್ಷಣೆ ಮತ್ತು ಹಳ್ಳಿಗಳಲ್ಲಿ ಕನಿಷ್ಠ ರಸ್ತೆ, ಸಾರಿಗೆ, ಆಸ್ಪತ್ರೆ, ವಿದ್ಯುತ್, ನೀರಿನಂಥ ಮೂಲಭೂತ ಅವಶ್ಯಕತೆಗಳ ಕೊರತೆಯು ಇದಕ್ಕೆ ಕಾರಣ.

ಇಲ್ಲಿ ಉದಾಹರಣೆ ಕೊಟ್ಟಿರುವ ಪದ್ಮ ಸಹಾ ‘ಉಣ್ಣುವುದಕ್ಕೂ’ ಸಮಯವಿಲ್ಲದಂತೆ ದುಡಿದರೂ ಸರಿ ಮಗಳನ್ನು ಕೃಷಿಕರಲ್ಲದವನಿಗೇ ಮದುವೆ ಮಾಡಲು ಸಂಕಲ್ಪವನ್ನು ಮಾಡಿದ್ದಾಳೆ. ಇಂಥವರ ಸಂಖ್ಯೆಯು ಅಪಾರವಾಗುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆಯು ಹೌದು. ಇಂದು ಬಹುತೇಕ ಗ್ರಾಮಗಳಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ರೈತರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಇದರ ಹಿಂದೆ ‘ಅವಳ ಕಾಲ ಮೇಲೆ ಅವಳು ನಿಲ್ಲಲಿ’ ಎನ್ನುವುದರ ಜೊತೆ ಜೊತೆಗೆ ಓದಿದರೆ ನೌಕರಿಯಲ್ಲಿರುವ ಗಂಡು ಮದುವೆಗೆ ಮುಂದೆ ಬಂದಾನು ಎಂಬುದು ಇದೆ.

‘ಮಗ ಸತ್ತರೆ ಮನೆ ಹಾಳೂ, ಸೊಸೆ ಸತ್ತರೆ ಸೋಬಾನೆ ಹೇಳೂ’ ಎಂಬ ನುಡಿಗಟ್ಟೊಂದಿತ್ತು. ಈಗ ಸೊಸೆ ಸತ್ತರೆ ಮಗನಿಗೆ ಎರಡನೇ ಮದುವೆ ಮಾಡುವುದರಿಲಿ ಮೊದಲ ಮದುವೆಗೇ ಹೆಣ್ಣು ಸಿಗುತ್ತಿಲ್ಲಾ ಎಂಬ ಪರಿಸ್ಥಿತಿ ಬಂದಾಗಿದೆ. ಹಾಗೆಯೇ ‘ಮಗ ಸತ್ತರೆ ಮನೆ ಹಾಳು’ ಎಂಬ ನುಡಿಯನ್ನು ಕೂಡಾ ನಮ್ಮ ಲಕ್ಷಾಂತರ ಒಂಟಿ ರೈತ ಮಹಿಳೆಯರು ಮನೆ ನಡೆಸುವ ಮೂಲಕ ಸುಳ್ಳಾಗಿಸಿದ್ದಾರೆ. ತಮ್ಮೆಲ್ಲ ನೋವು ನಿಟ್ಟುಸಿರಿನಲ್ಲೂ ‘ಅಯ್ಯೋ ಬಿಡಕ್ಕ ನಾನು ತೇದಿದ್ದಿನಿ, ಅವನ ಬದಲಿಗೆ ನಾನೇ ಸತ್ತೋಗಿದ್ದರೆ ನನ್ನ ಮಕ್ಕಳು ಯಾರ್ಯಾರಾ ಕಾಲಡಿಲಿ ಇರುತ್ತಿದ್ದರೂ……..’ ಎನ್ನುತ್ತಾ ತಮ್ಮ ನೋವಿಗೆ ತಾವೇ ಸಮಾಧಾನ ಹೇಳಿಕೊಳ್ಳುತ್ತಾರೆ.

ಮಹಿಳೆಯರು ಒಳ್ಳೆಯ ಆರ್ಥಿಕ ನಿರ್ವಹಣಾಕಾರರು ಹೌದು. ಹಾಗೆಯೇ ದುಶ್ಚಟಗಳಿಂದಲೂ ಹೊರತಾದವರು. ಹೆಚ್ಚೆಂದರೇ ಹೊಗೆಸೊಪ್ಪಿಗೆ ಸೀಮಿತವಾಗುವ ಚಟ. ಸ್ತ್ರೀಶಕ್ತಿ ಸಂಘಗಳಲ್ಲಿ ಮಹಿಳೆ ಗಂಡನಿಗೆ ಹಣ ತೆಗೆದುಕೊಟ್ಟು ಅವನು ತೀರಿಸುವ ಜವಾಬ್ದಾರಿಯಿಂದ ನುಣುಚಿಕೊಂಡಾಗ ತಾನೇ ವ್ಯವಸ್ಥಿತವಾಗಿ ತೀರಿಸುತ್ತಿರುವ ಪ್ರಕರಣಗಳು ಇಂದು ಸಾಮಾನ್ಯವಾಗುತ್ತಿದೆ.

ಇಂಥ ಮಹಿಳೆಯ ರಟ್ಟೆಗೆ ಬಲತುಂಬಿದರೆ, ಕೃಷಿಯು ಉಳಿದೀತು. ಯಾರು, ಹೇಗೆ ಬಲ ತುಂಬಬೇಕು? ಎಂಬ ಪ್ರಶ್ನೆ ದೊಡ್ಡದೆ. ಸ್ವಉದ್ಯೋಗ ಮಾಡುವ ಮಹಿಳೆಯರಲ್ಲಿ ಶೇ.48ರಷ್ಟು ರೈತ ಮಹಿಳೆಯರೇ ಇದ್ದಾರೆ. ಸರ್ಕಾರ, ಸಂಘ ಸಂಸ್ಥೆಗಳು, ಸಮಾಜ ಈ ರೈತ ಮಹಿಳೆಯರ ಬದುಕು ಸಹನೀಯವು, ಸಂಭ್ರಮದಾಯಕವು ಆಗುವಂತಹಾ ಕಾರ್ಯಕ್ರಮಗಳನ್ನು ಜಾರಿಗೆ ತಂದಲ್ಲಿ ರೈತ ಮಹಿಳೆ ಕೃಷಿಯಲ್ಲೆ ನಿಂತಾಳು ಅಥವಾ ಕೃಷಿಗೆ ಹೊಸಬಳು ಬಂದಾಳು. ಸ್ತ್ರೀ ಶಕ್ತಿ ಸಂಘಗಳನ್ನು ಬಲಪಡಿಸುವುದಕ್ಕಿಂತ ಹೆಚ್ಚಾಗಿ ಹಾಲಿನ ಮಾರುಕಟ್ಟೆ ಹೇಗೆ ರೈತ ಮಹಿಳೆಯ ಕೈಗೆ ನಿಲುಕಿದೆಯೋ ಹಾಗೆ ಕೃಷಿಯ ಎಲ್ಲಾ ಉತ್ಪನ್ನಗಳ ಮಾರುಕಟ್ಟೆ ಅವಳ ಕೈಗೆ ನಿಲುಕುವಂತಾಗಬೇಕಾದು ಬಹಳ ಮುಖ್ಯ. ಏಕೆಂದರೆ ಹಾಲಿನ ಹಣ ನೇರವಾಗಿ ರೈತ ಮಹಿಳೆಯ ಕೈಗೆ ಹೋಗುವುದಲ್ಲದೇ ಮಾರಾಟ ಕೇಂದ್ರವು ಅವಳ ಕೈಗೆಟುಕುತ್ತಿದೆ. ಬೇರೆಲ್ಲಾ ಕೃಷಿ ಉತ್ಪನ್ನಗಳಿಗೆ ಈ ಹಾಲಿನ ಮಾರುಕಟ್ಟೆ ಮಾದರಿಯಾಗಬೇಕು.

ಗ್ರಾಮಗಳಲ್ಲಿನ ಉತ್ಪನ್ನಗಳು ಅಲ್ಲೆ ಮೌಲ್ಯವರ್ಧಿತವಾಗಿ ಮಾರುಕಟ್ಟೆ ಪ್ರವೇಶಿಸಿದರೆ ಬೆಲೆ ನಿಗದಿಯ ಹಕ್ಕು ಬೆಳೆದವರಿಗೆ ಇರುತ್ತದೆ. ಕೃಷಿ ಲಾಭದಾಯಕವಾಗುತ್ತದೆ. ಅದರಲ್ಲೂ ಸಹಕಾರಿ ಕ್ಷೇತ್ರದಲ್ಲಿ ಈ ಯೋಜನೆ ಜಾರಿಯಾದರೆ ಉದ್ಯೋಗ ಸೃಷ್ಟಿಯಾಗಿ ವಲಸೆ ಹೋದ ಯುವಕರು ಆದಾಯದ ಭದ್ರತೆಯಿಂದಾಗಿ ಗ್ರಾಮಗಳಿಗೆ ಮರಳುತ್ತಾರೆ. ಬಹಳ ಮುಖ್ಯವಾಗಿ ರಾಸಾಯನಿಕ ಮುಕ್ತ ಕೃಷಿಯಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಇರುವುದರಿಂದ ಇದನ್ನು ಪ್ರೋತ್ಸಾಹಿಸಿದರೆ ಕೃಷಿಕರು ಸದೃಢರಾಗಿ ಕೃಷಿಯಲ್ಲೆ ಉಳಿಯುತ್ತಾರೆ. ನೆರೆಯ ಆಂಧ್ರ, ಕೇರಳ, ಮಣಿಪುರದ ಸರ್ಕಾರಗಳು ಇದನ್ನು ಕಾರ್ಯರೂಪಕ್ಕೆ ತಂದಿವೆ. ಇದಕ್ಕಾಗಿ ಮಹಿಳೆಯರ ಸಂಘಟನೆ ಮತ್ತು ಗುಂಪುಗಳಲ್ಲಿ ಚರ್ಚೆಗಳು ಬಹಳ ಮುಖ್ಯ. ತರಬೇತಿಯೂ ಅಗತ್ಯ.

ದೇಶದ ಆಹಾರ ಸಾರ್ವಭೌಮತ್ವಕ್ಕಾಗಿ ದುಡಿಯುವ ರೈತ ಮಹಿಳೆಯರ ಹಕ್ಕುಗಳಿಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲೂ ಕೆಲವು ಸಂಘಟನೆಗಳು ಕೆಲಸ ಮಾಡುತ್ತಿವೆ. ಎಲ್.ವಿ.ಸಿ- ಲಾ ವಯಾ ಕ್ಯಾಂಪಸ್ಸಿನಾದಂಥ ಸಂಘಟನೆಯಲ್ಲಿ ಕಡ್ಡಾಯವಾಗಿ ಶೇ.50ರಷ್ಟು ಮಹಿಳೆಯರು ಎಲ್ಲಾ ಹಂತದಲ್ಲೂ ಇರಬೇಕು. ಆದಾಗದಿದ್ದರೆ ಅಂಥ ಜಾಗಗಳನ್ನು ಖಾಲಿ ಬಿಡಲಾಗುತ್ತದೆ. ತೀರ್ಮಾನ ಮಾಡುವಲ್ಲೂ ಕಾರ್ಯರೂಪಕ್ಕೆ ತರುವಲ್ಲಿ ಮಹಿಳೆಗೆ ಸಮಾನ ಪ್ರಾಮುಖ್ಯತೆ ನೀಡಿದೆ. ಇಂಥ ಸಂಘಟನೆಗಳ ಕಾರ್ಯಸೂಚಿ ಸ್ಥಳೀಯವಾಗಿಯೂ ಕಾರ್ಯರೂಪಕ್ಕೆ ಬರುವಂತಾಗಬೇಕು. ಇದರಿಂದ ರೈತ ಮಹಿಳೆಗೆ ಸಮಾನ ಪ್ರಾಮುಖ್ಯತೆ ನೀಡಿದಂತಾಗುತ್ತದೆ. ಇಂಥ ಸಂಘಟನೆಗಳ ಕಾರ್ಯಸೂಚಿ ಸ್ಥಳೀಯವಾಗಿಯು ಕಾರ್ಯರೂಪಕ್ಕೆ ಬರುವಂತಾಗಬೇಕು. ಇದರಿಂದ ರೈತ ಮಹಿಳೆಗೆ ಶಕ್ತಿ ಬರುವುದಷ್ಟೇ ಅಲ್ಲಾ, ಅವಳೂ ಉಳಿದು ದೇಶದ ಆಹಾರ ಭದ್ರತೆಯು ಉಳಿಯುತ್ತದೆ.

5-6 ಕಿ.ಮೀ ಕ್ರಮಿಸಿದರೂ ಸಿಗದ ಆಸ್ಪತ್ರೆ, ಅಷ್ಟು ದೂರ ಹೋಗಲು ಕೂಡ ಸಾರಿಗೆ ಸೌಲಭ್ಯವಿಲ್ಲದಿರುವುದು, ಕುಡಿಯಲು ಶುದ್ಧ ನೀರು ಸಿಗದಿರುವುದು- ಇಂತಹ ಸ್ಥಿತಿಯಲ್ಲಿನ ಗ್ರಾಮಗಳ ಸಂಖ್ಯೆ ಸಾವಿರಾರು. ರೈತರ ಮಕ್ಕಳು ರೈತರಾಗಿ ಉಳಿಯಲು ಇಚ್ಛಿಸುತ್ತಿಲ್ಲ. ಉಳಿದಿರುವ ರೈತ ಮಹಿಳೆ ಒಂಟಿಯಾಗುತ್ತಿದ್ದಾಳೆ. ಹೀಗೆ ಮುಂದುವರಿದರೆ, ಕೃಷಿಗೆ ಮುಂದಿನ ತಲೆಮಾರಿನ ರೈತ ಮಹಿಳೆ ಬಾರದಿದ್ದರೆ ದೇಶದ ಕೃಷಿ ನಡೆಯುವುದಿಲ್ಲ. ಕೃಷಿಯಲ್ಲಿ, ಗ್ರಾಮೀಣ ಭಾಗದಲ್ಲಿ ರೈತಾಪಿ ಅದರಲ್ಲೂ ಹೆಣ್ಣುಮಕ್ಕಳು ಉಳಿಯಬೇಕೆಂದು ಸಮಾಜ ಬಯಸುವುದಾದಲ್ಲಿ ಇವೆಲ್ಲಾ ಸಮಸ್ಯೆಗಳನ್ನೂ ಬಗೆಹರಿಸಿಕೊಡಬೇಕೆಂದು ಅನ್ನ ಉಣ್ಣುವವರೆಲ್ಲರೂ ಆಲೋಚಿಸಿ ಕಾರ್ಯರೂಪಕ್ಕೆ ತರಬೇಕಾಗುತ್ತದೆ.

– ನಂದಿನಿ ಜಯರಾಂ, ಕೆ.ಆರ್.ಪೇಟೆ. ಸ್ವತಃ ಕೃಷಿಯಲ್ಲಿ ತೊಡಗಿಕೊಂಡಿರುವುದಲ್ಲದೇ ರೈತ ಸಂಘಟನೆಯಲ್ಲೂ ತೊಡಗಿಕೊಂಡು ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ರೈತಸಂಘವನ್ನು ಪ್ರತಿನಿಧಿಸಿದ್ದಾರೆ.


ಇದನ್ನು ಓದಿ:  ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...