Homeಕರ್ನಾಟಕಐ.ಎಂ.ಎ ಗೋಲ್‍ಮಾಲ್: ರೋಷನ್ ಬೇಗ್ ಹಣಿಯಲು ನಡೆಯಿತಾ ಪೊಲಿಟಿಕಲ್ ಕಮಾಲ್?

ಐ.ಎಂ.ಎ ಗೋಲ್‍ಮಾಲ್: ರೋಷನ್ ಬೇಗ್ ಹಣಿಯಲು ನಡೆಯಿತಾ ಪೊಲಿಟಿಕಲ್ ಕಮಾಲ್?

ಎರಡು ದಿನಗಳ ಹಿಂದಷ್ಟೇ ಆತನನ್ನು ತಮ್ಮ ಕಸ್ಟಡಿಯಲ್ಲಿ ಕೂರಿಸಿಕೊಂಡು `ವಿಚಾರಣೆ’ ನಡೆಸಿದ್ದ ಅಲೋಕ್ ಕುಮಾರ್‍ರಿಗೆ ದಿಢೀರ್ ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಹುದ್ದೆ `ಒಲಿದು’ ಬಂದಿರುವುದಕ್ಕೂ ಏನಾದರೂ ಸಂಬಂಧವಿದೆಯಾ ಅನ್ನೋ ಪ್ರಶ್ನೆಯಿಂದ ಈ ಅನುಮಾನದ ಪಯಣ ಶುರುವಾಗುತ್ತದೆ

- Advertisement -
- Advertisement -

| ಸುನೀಲ್ ಶಿರಸಂಗಿ ಮತ್ತು ಗಿರೀಶ್ ತಾಳಿಕಟ್ಟೆ |

ಅನಾಮತ್ತು ಮೂವತ್ತೈದು ಸಾವಿರ ಜನರಿಗೆ (ಇದು ಹೆಚ್ಚಾಗಲೂಬಹುದು) ಉಂಡೆನಾಮ ತೀಡಿದ ಐಎಂಎ ಗೋಲ್‍ಮಾಲ್ ಪ್ರಕರಣ ಮೇಲ್ನೋಟಕ್ಕೆ ಕಾಣುವಷ್ಟು ಸಲೀಸಾಗಿಲ್ಲ. ಇದರ ಹಿಂದೆ ನಾನಾ ಬಗೆಯ ರಾಜಕೀಯ ಸಿಕ್ಕುಗಳಿರೋದು ನಿಧಾನಕ್ಕೆ ಬೆಳಕಿಗೆ ಬರುತ್ತಿವೆ. ಇದು ಮನ್ಸೂರ್ ಕುರಾನ್ ಹೆಸರಲ್ಲಿ ಮುಗ್ದ ಜನರಿಗೆ ಮಾಡಿದ ಚೀಟಿಂಗ್ ಆದ್ರೆ, ರಾಜಕಾರಣಿಗಳು ಜನಾಬ್ ರೋಶನ್ ಬೇಗ್ ಇಟ್ಟ ಫಿಟ್ಟಿಂಗ್..

ಮೊಹ್ಮದ್ ಮನ್ಸೂರ್ ಖಾನ್ ಅನ್ನೋ ಏ-ವನ್ ವಂಚಕ `ಹಲಾಲ್ ಹೂಡಿಕೆ’ ಹೆಸರಲ್ಲಿ ಸಾವಿರಾರು ಕೋಟಿಗಳನ್ನು ಸ್ವಾಹ ಮಾಡಿ ನಾಪತ್ತೆಯಾಗಿರೋದು ಬಹುದೊಡ್ಡ `ಚಿಟ್‍ಫಂಡ್’ ಹಗರಣ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಜೊತೆಗೆ, ಇಂಥಾ ಬಹುಕೋಟಿ ಹಗರಣಗಳಲ್ಲಿ ಸಹಜಸತ್ಯ ಎನ್ನುವಂತೆ ದೊಡ್ಡದೊಡ್ಡ ರಾಜಕಾರಣಿಗಳು, ಸರ್ಕಾರದ ಉನ್ನತ ಅಧಿಕಾರಿಗಳು, ಲೋಕಲ್ ಪೊಲೀಸಿನವರು ಫಲ ಉಂಡು ಸಾಥ್ ಕೊಟ್ಟಿರುತ್ತಾರೆ ಎಂಬ ಅನುಮಾನ ವ್ಯಕ್ತಪಡಿಸುವುದಕ್ಕೂ ಇಲ್ಲಿ ಸಾಕಷ್ಟು ಸ್ಪೇಸ್ ಇದೆ. ಆದರೆ ಅದನ್ನೂ ಮೀರಿದ ಒಂದು ರಾಜಕೀಯ ಚದುರಂಗದಾಟ ಈಗೀಗ ಬಯಲಾಗುತ್ತಿದೆ.

ಜೂನ್ 10ನೇ ತಾರೀಖು ಪೊಲೀಸ್ ಕಮೀಷನರಿಗೆ ಬಂದು ತಲುಪಿದ ಮನ್ಸೂರ್ ಖಾನ್‍ನದ್ದು ಎನ್ನಲಾದ ಆಡಿಯೋ ದೊಡ್ಡ ರಾದ್ಧಾಂತ ಸೃಷ್ಟಿಸುವುದಕ್ಕೂ ಕೆಲದಿನಗಳ ಹಿಂದೆ ಬಿಡಿಬಿಡಿಯಾಗಿ ನಡೆದ ಘಟನೆಗಳನ್ನು ಸಾಲಾಗಿ ಪೋಣಿಸಿ ನೋಡಿದರೆ, ಇದರಲ್ಲಿ ರಾಜಕಾರಣಿಗಳು ಭಾಗಿಯಾಗಿರುವುದು ಮಾತ್ರವಲ್ಲ ಒಂದು ಸೂಕ್ಷ್ಮ ರಾಜಕಾರಣವೇ ಆಪರೇಟ್ ಆಗಿರುವ ಅನುಮಾನಗಳು ದಟ್ಟವಾಗುತ್ತವೆ. ನೋ ಡೌಟ್, ಮನ್ಸೂರ್ ಖಾನ್ ಸಾವಿರಾರು ಜನರಿಗೆ ಮುಂಡಾಯಿಸಿದ್ದಾನೆ. ಅವನಿಗೆ ಶಿಕ್ಷೆಯಾಗಲೇಬೇಕು, ಹಣ ಹೂಡಿದವರಿಗೆ ನ್ಯಾಯ ಸಿಗಲೇಬೇಕು. ಆದರೆ ಈ ಫೈನಾನ್ಷಿಯಲ್ ಆಯಾಮದ ಹೊರತಾಗಿ ಇಲ್ಲಿ ಬೆಸೆದುಕೊಂಡಿರುವ ರಾಜಕಾರಣವನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲದೆ ಹೋದರೆ ಇದೀಗ ಮತ್ತೊಂದು `ಚಿಟ್‍ಫಂಡ್’ ಹಗರಣವಾಗಿ ಮುಚ್ಚಿಹೊಗುವ ಸಾಧ್ಯತೆ ಹೆಚ್ಚಾಗಿದೆ..

ಲೋಕಸಭಾ ಎಲೆಕ್ಷನ್‍ನಲ್ಲಿ ಎಂಪಿ ಟಿಕೆಟ್ ಸಿಗದಿದ್ದಕ್ಕೆ ಹಾಗೂ ಮಂತ್ರಿಗಿರಿಗೆ ತನ್ನನ್ನು ಪರಿಗಣಿಸದಿದ್ದಕ್ಕೆ ಸಿಟ್ಟಿಗೆದ್ದ ಶಿವಾಜಿನಗರದ ಶಾಸಕ ರೋಷನ್ ಬೇಗ್ ಕಾಂಗ್ರೆಸ್ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸುವುದಕ್ಕೂ, ಈ ಪ್ರಕರಣ ಬೆಳಕಿಗೆ ಬರುವುದಕ್ಕೂ, ವಂಚಕ ಮನ್ಸೂರ್ ಖಾನ್ ದೇಶ ಬಿಡುವುದಕ್ಕೂ ಎರಡು ದಿನಗಳ ಹಿಂದಷ್ಟೇ ಆತನನ್ನು ತಮ್ಮ ಕಸ್ಟಡಿಯಲ್ಲಿ ಕೂರಿಸಿಕೊಂಡು `ವಿಚಾರಣೆ’ ನಡೆಸಿದ್ದ ಅಲೋಕ್ ಕುಮಾರ್‍ರಿಗೆ ದಿಢೀರ್ ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಹುದ್ದೆ `ಒಲಿದು’ ಬಂದಿರುವುದಕ್ಕೂ ಏನಾದರೂ ಸಂಬಂಧವಿದೆಯಾ ಅನ್ನೋ ಪ್ರಶ್ನೆಯಿಂದ ಈ ಅನುಮಾನದ ಪಯಣ ಶುರುವಾಗುತ್ತದೆ.

ಹೌದು, ಮನ್ಸೂರ್ ಖಾನ್‍ನ ಐಎಂಎ ವ್ಯವಹಾರದ ಮೇಲೆ ಇದೇ ಮೊದಲ ಬಾರಿ ಅಪಸ್ವರ ಕೇಳಿಬಂದಿದ್ದಲ್ಲ. ಕಳೆದ ಕೆಲ ವರ್ಷಗಳಿಂದಲೇ ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾಗಿ ರಾಜ್ಯ ಸರ್ಕಾರವನ್ನು ಎಚ್ಚರಿಸುತ್ತಲೇ ಬಂದಿತ್ತು. ಆತನ ವ್ಯವಹಾರ ಪಾರದರ್ಶಕವಾಗಿಲ್ಲ, ಕಣ್ಣಿಡಿ ಎಂದು ನಾಲ್ಕೈದು ಬಾರಿ ಆರ್‍ಬಿಐ ನೋಟಿಸ್ ಕಳಿಸಿದರೂ ಮನ್ಸೂರ್ ಖಾನ್‍ನ ಕುರಿತು ರಾಜ್ಯ ಸರ್ಕಾರ ಯಾವ ಕಠಿಣ ನಿರ್ಧಾರವನ್ನೂ ತೆಗೆದುಕೊಂಡಿರಲಿಲ್ಲ. ಸರ್ಕಾರದ ಮಟ್ಟದಲ್ಲಿ ಮನ್ಸೂರ್ ಖಾನ್‍ಗೆ ರಕ್ಷಣೆ ಸಿಗುತ್ತಾ ಬಂದದ್ದನ್ನೂ ಆ ರಕ್ಷಣೆಯ ಹಿಂದೆ ರೋಷನ್ ಬೇಗ್‍ರ ಪ್ರಭಾವ ಕೆಲಸ ಮಾಡಿದ್ದನ್ನು ಅರ್ಥ ಮಾಡಿಕೊಂಡಾಗ, ರೋಷನ್ ಬೇಗ್ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿಬಿದ್ದ ಈ ಸಂದರ್ಭದಲ್ಲಿ ಸರ್ಕಾರದ ಯಂತ್ರಾಂಗ ಅವನ ಮೇಲೆ ಮುರಕೊಂಡು ಬಿದ್ದಿರೋದು ಕಾಕತಾಳೀಯ ಎನಿಸುವುದಿಲ್ಲ.

ಆರ್‍ಬಿಐನ ವಾರ್ನಿಂಗ್ ಹೊರತಾಗಿಯೂ ರೋಷನ್ ಬೇಗ್ ಕೃಪಾಶೀರ್ವಾದದಿಂದ ಮನ್ಸೂರ್ ಖಾನ್ ಹೇಗೆ ಬಚಾವಾಗುತ್ತಾ ಬಂದ ಅನ್ನೋದನ್ನು ಮೊದಲು ನೋಡೋಣ. 2016ರ ಆಗಸ್ಟ್ 12ರಂದು ಪೊಲೀಸ್ ಡಿಐಜಿಗೆ ಪತ್ರ ಬರೆಯುವ ಆರ್‍ಬಿಐ ಮನ್ಸೂರ್ ಖಾನ್‍ನ ಐ ಮಾನಿಟರಿ ಅಡ್ವೈಸರಿ (ಐ.ಎಂ.ಎ) ಕಂಪನಿಯು ಅಕ್ರಮವಾಗಿ ಜನರಿಂದ ಹಣ ಸಂಗ್ರಹಿಸುತ್ತಿದೆ ಈ ಬಗ್ಗೆ ತನಿಖೆ ನಡೆಸುವಂತೆ ಹೇಳಿತ್ತು. ಆಗಿನ್ನು ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರಲ್ಲದೆ, ರೋಷನ್ ಬೇಗ್ ಕೂಡಾ ಮಂತ್ರಿಯಾಗಿದ್ದರು. ತನಿಖೆ ನಡೆಸುವ ಅಪರಾಧ ವಿಭಾಗದ ಎಸಿಪಿ ನೇತೃತ್ವದ ತಂಡ, ಐ.ಎಂ.ಎ ಆರ್ ಓ ಸಿ ಅಡಿಯಲ್ಲಿ ಸ್ಥಾಪಿತವಾಗಿರುವುದರಿಂದ ಜೊತೆಗೆ ಐಎಂಎ ಕಂಪನಿ ವಿರುದ್ಧ ಯಾವ ದೂರುಗಳೂ ಇಲ್ಲದಿರುವುದರಿಂದ `ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ’ (ಕೆ.ಪಿ.ಐ.ಡಿ) ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲು ಬರುವುದಿಲ್ಲವೆಂದು ಕ್ಲೀನ್‍ಚಿಟ್ ನೀಡಿ ಸುಮ್ಮನಾಗಿತ್ತು. ಮನ್ಸೂರ್ ಖಾನ್‍ಗೆ ಈ ಕ್ಲೀನ್‍ಚಿಟ್ ಸಿಗುವುದರ ಹಿಂದೆ ರೋಷನ್ ಬೇಗ್‍ರ ಪ್ರಭಾವ ಕೆಲಸ ಮಾಡಿರುವುದನ್ನು ಮೂಲಗಳು ಸ್ಪಷ್ಟಪಡಿಸುತ್ತವೆ.

ಆರ್‍ಬಿಐನ ಸತತ ಎಚ್ಚರಿಕೆಯ ನಂತರ ಕುಂಭಕರ್ಣನ ನಿದ್ದೆಯಿಂದ ಎದ್ದು 2018ರ ಆಗಸ್ಟ್ 1ರಂದು ಸಭೆ ಸೇರುವ ರಾಜ್ಯಮಟ್ಟದ ಸಂಯೋಜಕ ಸಮಿತಿ (ಎಸ್.ಎಲ್.ಸಿ.ಸಿ), ಕಂದಾಯ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿ ಡಿಸಿ ಅಥವಾ ಎಸಿಗಳ ನೇತೃತ್ವದಲ್ಲಿ ಇಂಥಾ `ಪೂಂಜಿ ಕಂಪನಿ’ಗಳ ವಿರುದ್ಧ ತನಿಖೆ ನಡೆಸಲು ತಿಳಿಸಿತ್ತು. ಅಂದಹಾಗೆ ಈ ಸಂಯೋಜನ ಸಮಿತಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳಲ್ಲದೆ ಆರ್‍ಬಿಐ ಮತ್ತು ಸೆಬಿ (ಸೆಕ್ಯೂರಿಟೀಸ್ ಅಂಡ್ ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯಾ)ದ ಪ್ರತಿನಿಧಿಗಳೂ ಇರುತ್ತಾರೆ. ಅವರೆಲ್ಲರ ಅಭಿಪ್ರಾಯದ ಮೇಲೆ ಆ ನಿರ್ಧಾರಕ್ಕೆ ಬರಲಾಗಿತ್ತು. ಮುಖ್ಯವಾಗಿ ಮನ್ಸೂರ್ ಖಾನನ ಐ.ಎಂ.ಎ ಕಂಪನಿಯೇ ಆ ಸಭೆಯ ಟಾರ್ಗೆಟ್ ಆಗಿತ್ತು ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ…

ಆಗ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕುವ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು 2018ರ ಸೆಪ್ಟೆಂಬರ್ 14ರಂದು ಬೆಂಗಳೂರು ಗ್ರಾಮಾಂತರ ಡಿಸಿಗೆ ಪತ್ರ ಬರೆದು ಮುಟ್ಟುಗೋಲು ಹಾಕಿಕೊಳ್ಳುವುದಕ್ಕಾಗಿ ಐ.ಎಂ.ಎ ಆಸ್ತಿಗಳನ್ನು ಸರ್ವೇ ಮಾಡಿ ಕ್ರಮ ಕೈಗೊಳ್ಳುವಂತೆ ತಿಳಿಸುತ್ತಾರೆ. ಅದರನ್ವಯ ಐ.ಎಂ.ಎ ಆಸ್ತಿಗಳನ್ನು ಸರ್ವೇ ಮಾಡುವ ಬೆಂಗಳೂರು ಉತ್ತರ ಉಪವಲಯದ ಸಹಾಯಕ ಆಯುಕ್ತ ಎಲ್.ಸಿ.ನಾಗರಾಜ್‍ರವರು ಕಳೆದ ವರ್ಷದ ನವೆಂಬರ್ 11ರಂದು `ವ್ಯವಹಾರ ಪಾರದರ್ಶಕವಾಗಿಲ್ಲದ ಕಾರಣಕ್ಕೆ ಐಎಂಎ ಮತ್ತದರ 16 ಪಾಲುದಾರ ಕಂಪನಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂಬುದಾಗಿ ಸಾರ್ವಜನಿಕ ನೋಟಿಸ್ ನೀಡಿದ್ದರು.

ವಿಪರ್ಯಾಸವೆಂದರೆ, ಅದಾದ ಹನ್ನೊಂದು ದಿನಕ್ಕೆ ಸರಿಯಾಗಿ ಅಂದರೆ 22 ನವೆಂಬರ್ 2018ರಂದು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶಿವಾಜಿನಗರದ `ವಿರಿಂಜಿಪುರಂ ಕೆಟ್ನಲ್ (ವಿ.ಕೆ.) ಒಬೈದುಲ್ಲಾ’ ಶಾಲೆಯಲ್ಲಿ ನಡೆದ 105ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿಗೆ ಅವರನ್ನು ಕರೆತಂದದ್ದು ಶಾಸಕ ರೋಷನ್ ಬೇಗ್. ಇಂಟರೆಸ್ಟಿಂಗ್ ವಿಚಾರ ಅಂದ್ರೆ, ಆ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅತ್ಯಾಧುನಿಕವಾಗಿ ಅಭಿವೃದ್ಧಿ ಮಾಡಿದ್ದು ಇದೇ ಐ.ಎ.ಎಂ ಚಾರಿಟೆಬಲ್ ಸಂಸ್ಥೆಯ ಮನ್ಸೂರ್ ಖಾನ್! ಶಾಲೆಯ ಕಾರ್ಯಕ್ರಮ ಕೇವಲ ಮೇಲುನೋಟಕ್ಕೆ, ಮನ್ಸೂರ್ ಖಾನ್ ನನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪರಿಚಯಿಸುವುದೆ ಮುಖ್ಯವಾಗಿತ್ತು. ಬಲೆಯಲ್ಲಿ ಬಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯ, ಕೇವಲ ಹನ್ನೊಂದು ದಿನಗಳ ಹಿಂದೆ ಅವ್ಯವಹಾರದ ಕಾರಣಕ್ಕೆ ಸರ್ಕಾರದಿಂದ ಆಸ್ತಿ ಮುಟ್ಟುಗೋಲಿನ ಸಾರ್ವಜನಿಕ ನೋಟಿಸಿಗೆ ತುತ್ತಾದ ಸಂಸ್ಥೆಯನ್ನು ಅವತ್ತು ಹಾಡಿ ಹೊಗಳಿ, ಮನ್ಸೂರ್ ಖಾನ್‍ಗೆ `ಅತ್ಯುತ್ತಮ ಕೆಲಸ ಮಾಡುತ್ತಿದ್ದೀರಿ, ನಿಮ್ಮ ಸೇವೆಯನ್ನು ಹೀಗೇ ಮುಂದುವರೆಸಿ’ ಎಂಬ ಪ್ರಶಸ್ತಿ ಪತ್ರವನ್ನೂ ನೀಡಿದ್ದರು. ಶಾಲೆ ಅಭಿವೃದ್ಧಿ ಮಾಡಿದ್ದು ಅತ್ಯುತ್ತಮ ಕೆಲಸವೇ ಇರಬಹುದು, ಆದರೆ ಒಬ್ಬ ಮುಖ್ಯಮಂತ್ರಿಯಾದವರಿಗೆ ಅಂತಹ ಸಂಸ್ಥೆಯ ಹಿನ್ನೆಲೆಯ ಅರಿವೂ ಇರಬೇಕಾಗುತ್ತದೆ. ಯಾಕೆಂದರೆ ಬಹಳಷ್ಟು ಬಹುಕೋಟಿ ವಂಚಕರು ನುಸುಳಿಕೊಳ್ಳುವುದೇ ಇಂಥಾ `ಧರ್ಮಾರ್ಥ ಸೇವೆ’ಗಳ ಮುಖವಾಡದ ಮರೆಯಲ್ಲಿ ಅನ್ನುವುದು ಮುಖ್ಯಮಂತ್ರಿಯಾದವರಿಗೆ ತಿಳಿಯದ ವಿಷಯವಲ್ಲ.

ಅಂದಹಾಗೆ, ಸೌಲಭ್ಯಗಳಿಲ್ಲದ ಈ ಶಾಲೆಯನ್ನು ಸರ್ಕಾರದ ಜೊತೆಗಿನ ಎಂ.ಒ.ಯು ಒಡಂಬಡಿಕೆ ಮೂಲಕ ಅಭಿವೃದ್ಧಿ ಪಡಿಸಿದ ಮನ್ಸೂರ್ ಖಾನ್ 2017ರ ಜೂನ್‍ನಲ್ಲಿ ಅದರ ಉದ್ಘಾಟನೆಗೆಂದು ಕರೆಸಿದ್ದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು. ರೋಷನ್ ಬೇಗ್, ಸಿದ್ರಾಮಯ್ಯ ನಡುವೆ ಬಾಂಧವ್ಯ ಈಗಿನಂತೆ ಆಗಿನ್ನು ಹದಗೆಟ್ಟಿರಲಿಲ್ಲ. ಇಬ್ಬರೂ ಜೊತೆಜೊತೆಯಾಗಿಯೇ ಹೆಜ್ಜೆಹಾಕಿ, ಶಾಲೆಯ ನವೀಕರಣ ಕಂಡು ಮನ್ಸೂರ್ ಖಾನ್‍ನ ಬೆನ್ನುತಟ್ಟಿ ಹೋಗಿದ್ದರು.

ಅವತ್ತು ಸಿಎಂ ಕುಮಾರಸ್ವಾಮಿಯವರು ಹಾಗೆಲ್ಲ ಹಾಡಿಹೊಗಳಿದ ಪರಿಣಾಮವೋ ಏನೋ ಆ ವಾರ್ಷಿಕೋತ್ಸವ ಮುಗಿದು ಒಂದೂವರೆ ತಿಂಗಳು ಮುಗಿಯುವುದರೊಳಗೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹಾಯಕ ಆಯುಕ್ತರಿಗೆ ನೀಡಿದ್ದ ಅಧಿಕಾರವನ್ನೇ ರಾಜ್ಯ ಸರ್ಕಾರ ವಾಪಾಸ್ ಪಡೆದುಬಿಡುತ್ತೆ! ಅಷ್ಟೇ ಅಲ್ಲ, ಮುಟ್ಟುಗೋಲಿಗೆ ನೋಟಿಸ್ ಕೊಟ್ಟಿದ್ದ ಸಹಾಯಕ ಆಯುಕ್ತರೇ 08.03.2019ರಂದು ವರದಿಯೊಂದನ್ನು ಸಲ್ಲಿಸಿ ಕೆ.ಪಿ.ಐ.ಡಿ ಕಾಯ್ದೆಯ ಪ್ರಕಾರ ಐ.ಎಂ.ಎ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದುಬಿಡುತ್ತಾರೆ!! ಅಲ್ಲಿಗೆ ಮನ್ಸೂರ್ ಖಾನ್ ಮತ್ತೊಮ್ಮೆ ಸೇಫಾಗಿದ್ದ. ರೋಷನ್ ಬೇಗ್‍ರ ಕೃಪಾಶೀರ್ವಾದದ ಜೊತೆಗೆ ಸಿಎಂ ಕುಮಾರಸ್ವಾಮಿಯವರ ಬೆಂಬಲವು ದೊರೆಯುತ್ತದೆ..

ಅಷ್ಟರಲ್ಲಾಗಲೆ ಮನ್ಸೂರ್ ಖಾನ್‍ನ ಕಂಪನಿ ದೊಡ್ಡ ಲುಕ್ಸಾನಿಗೆ ಸಿಲುಕಿಕೊಂಡಿತ್ತು. ಹಣ ಹೂಡಿದವರಿಗೆ ಕೊಟ್ಟ ಮಾತಿನಂತೆ ತಿಂಗಳ ಬಡ್ಡಿ ಪಾವತಿಯಾಗದೆ ಅವರು ಕಂಪನಿಗೆ ಅಲೆದಾಡಲು ಶುರು ಮಾಡಿದ್ದರು. 2016ರಿಂದೀಚೆಗೆ ಐಟಿ ರಿಟರ್ನ್ ಮಾಡದಿದ್ದ ಮನ್ಸೂರ್ ಖಾನ್ ಹಣದ ಮುಗ್ಗಟ್ಟಿನಿಂದ ಪಾರಾಗಲು ಕೈಯೊಡ್ಡಿದ್ದು ಜನಾಬ್ ರೋಷನ್ ಬೇಗ್ ಮುಂದೆ.. ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಮನ್ಸೂರ್‍ಗೆ ತುರ್ತಾಗಿ 600 ಕೋಟಿಯ ದೊಡ್ಡ ಮೊತ್ತ ಬೇಕಾಗಿತ್ತು. ಅಲ್ಪ ಸ್ವಲ್ಪ ಸಹಾಯ ಮಾಡಿದ್ದ ರೋಷನ್ ಬೇಗ್ ಮಾಸ್ಟರ್ ಪ್ಲಾನ್ ಮಾಡುತ್ತಾರೆ.. ಅದೇ ಬ್ಯಾಂಕ್ ಸಾಲ.. ಬ್ಯಾಂಕ್‍ಗಳ ಬಳಿ ಸಾಲ ಕೇಳಲು ಮುಂದಾದಾಗ, ಈಗಾಗಲೇ ಆರ್.ಬಿ.ಐ.ನ ಕಣ್ಗಾವಲಿಗೆ ತುತ್ತಾಗಿರುವ ಹಾಗೂ ಆಸ್ತಿ ಮುಟ್ಟುಗೋಲಿನ ಪಬ್ಲಿಕ್ ನೋಟಿಸ್‍ಗೆ ಈಡಾಗಿದ್ದ ಮನ್ಸೂರ್ ಖಾನ್‍ಗೆ ಸಾಲ ಕೊಡುವ ರಿಸ್ಕ್ ತೆಗೆದುಕೊಳ್ಳದ ಬ್ಯಾಂಕ್ ಸಿಬ್ಬಂದಿ, ರಾಜ್ಯ ಸರ್ಕಾರದ ಕಂದಾಯ ಇಲಾಖೆಯಿಂದ ಎನ್.ಒ.ಸಿ ಪಡೆದು ಬರುವಂತೆ ಸಾಗ ಹಾಕಿದ್ದರು.

ಎನ್.ಒ.ಸಿ ಸಿಕ್ಕರೆ ಸಾಲ ಸಿಕ್ಕೇ ಬಿಡುತ್ತೆ ಎಂಬ ಹುಮ್ಮಸ್ಸಿನಲ್ಲಿ ರೋಷನ್ ಬೇಗ್, ಮನ್ಸೂರ್ ಖಾನ್‍ನನ್ನು ಕರೆದುಕೊಂಡು ಎಡತಾಕಿದ್ದು ಕಂದಾಯ ಮಂತ್ರಿ ಆರ್.ವಿ.ದೇಶಪಾಂಡೆಯನ್ನು! `ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ವಿ ಶಿವಶಂಕರ್‍ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ದೇಶಪಾಂಡೆಯವರು ಇದನ್ನು ಒಪ್ಪಿಕೊಂಡಿದ್ದಾರೆ. “ರೋಷನ್ ಬೇಗ್, ಮನ್ಸೂರ್ ಖಾನ್‍ನನ್ನು ನನ್ನ ಬಳಿ ಕರೆತಂದದ್ದು ನಿಜ. ಆದರೆ ನಾನು ಕಾನೂನು ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವೋ ಅಷ್ಟು ಮಾತ್ರ ಸಹಾಯ ಮಾಡಬಲ್ಲೆ ಎಂದು ಹೇಳಿದೆ” ಎನ್ನುವುದು ಆರ್ವಿಯವರ ಒಟ್ಟಾರೆ ಸಾರಾಂಶ. ಆದರೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಖತ್ರಿಯವರು ಮೇಲೆ ಎನ್‍ಒಸಿ ನೀಡಲು ಕಂದಾಯ ಮಂತ್ರಿ ಆರ್.ವಿ.ದೇಶಪಾಂಡೆ ಮತ್ತು ಸಿಎಂ ಕುಮಾರಸ್ವಾಮಿಯವರ ಒತ್ತಡ ಹಾಕಿದ್ದಕ್ಕೆ ವಿಧಾನಸೌಧದ ಕಲ್ಲುಗಳು ಸಾಕ್ಷಿ ನೀಡುತ್ತವೆ.. ಆದರೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಖತ್ರಿಯವರು ಒತ್ತಡದಿಂದ ಪಾರಾಗಲು ಮತ್ತು ಕೇಸ್ ನಲ್ಲಿ ತಮ್ಮ ಹೆಸರು ಬರುವುದು ಬೇಡವೆಂದು ಐ.ಎಂ.ಎ ಫೈಲ್‍ನ್ನು ಸಲಹೆ ಕೇಳಿ ಕಾನೂನು ಇಲಾಖೆಗೆ ಸಾಗಹಾಕುತ್ತಾರೆ.. ಯಾಕೆಂದರೆ ಸಲಹೆ ಕೇಳಿ ಕಳಿಸಿದ ಫೈಲಿನಲ್ಲಿ ಕೆ.ಪಿ.ಐ.ಡಿ ಕಾಯ್ದೆಗೆ ಸಂಬಂಧಪಟ್ಟ ಕಾಗದಪತ್ರಗಳಿದ್ದವೇ ಹೊರತು, ಸಾಲ ಬೇಡಿದ್ದ ಐ.ಎಂ.ಎ.ಗೆ ಸಂಬಂಧಿಸಿದ ಯಾವ ದಾಖಲೆಪತ್ರಗಳೂ ಇರಲಿಲ್ಲ. ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎ.ವಿ.ಶ್ರೀನಾಥ್‍ರವರು ನೀಡಿದ ಪ್ರತ್ಯುತ್ತರದಲ್ಲಿ ಇದು ಸ್ಪಷ್ಟವಾಗಿ ನಮೂದಾಗಿದೆ. ಅಂದರೆ, ಐ.ಎಂ.ಎ.ಗೆ ಎನ್.ಒ.ಸಿ ಕೊಟ್ಟೇ ತೀರಬೇಕೆಂದು ತಮ್ಮ ಮೇಲೆ ಬಂದ ಒತ್ತಡದಿಂದ ಪಾರಾಗಲು ರಾಜಕುಮಾರ್ ಖತ್ರಿಯವರು ಕಾನೂನು ಇಲಾಖೆಯ ನೆಪ ಹೇಳಿ, ಫೈಲನ್ನು ಅತ್ತ ಸಾಗ ಹಾಕಿದ್ದಾರೆ. ಹೇಗೂ ಆರ್.ಬಿ.ಐ. ನಿಗಾವಣೆಗೆ ತುತ್ತಾಗಿರುವ ಮನ್ಸೂರ್ ಖಾನ್‍ಗೆ ಎನ್.ಒ.ಸಿ ಕೊಡಬೇಡಿ ಎಂದು ಕಾನೂನು ಇಲಾಖೆ ಸಲಹೆ ಕೊಡುತ್ತೆ. ಅದನ್ನೇ ಮುಂದಿಟ್ಟುಕೊಂಡು ತಾನು ಒತ್ತಡದಿಂದ ಪಾರಾಗಬಹುದು ಎನ್ನುವುದು ಆ ಐ.ಎ.ಎಸ್. ಅಧಿಕಾರಿಯ ಉಪಾಯ. ಅದಕ್ಕೇ ಆ ಫೈಲನ್ನು ಸೀರಿಯಸ್ಸಾಗಿ ಪರಿಗಣಿಸದೆ, ಅದು ರಿಜೆಕ್ಟ್ ಆಗುವಂತೆ ಐ.ಎಂ.ಎ.ಗೆ ಸಂಬಂಧಿಸಿದ ಯಾವ ದಾಖಲಾತಿಗಳನ್ನೂ ಇಡದೆ ಕಾನೂನು ಇಲಾಖೆಯ ವಿಶೇಷ ಗಮನ ಸೆಳೆಯುವ ಕೆಲಸ ಮಾಡಿದ್ದರು. ಅದು ಯಶಸ್ವಿಯೂ ಆಯ್ತು. ಇಲ್ಲಿ ಒತ್ತಡ ಕಂದಾಯ ಮಂತ್ರಿಯಿಂದ, ರೋಷನ್ ಬೇಗ್‍ರಿಂದ ಅಷ್ಟೇ ಅಲ್ಲ ಸ್ವತ: ಸಿಎಂ ಕುಮಾರಸ್ವಾಮಿಯವರಿಂದ ಬಂದಿತ್ತೊ ಅನ್ನುತ್ತವೆ ಮೂಲಗಳು..

ಯಾವಾಗ ಎನ್.ಒ.ಸಿ ಸಿಗದೆ ಬ್ಯಾಂಕ್ ಲೋನ್ ಕೂಡಾ ಕೈತಪ್ಪಿತೊ, ಆಗ ಮನ್ಸೂರ್ ಖಾನ್‍ನ ಆರ್ಥಿಕ ಮುಗ್ಗಟ್ಟು ಮೌಂಟ್ ಎವರೆಸ್ಟ್ ಏರಿ ಕುಳಿತುಬಿಟ್ಟಿತು. ಅದೇವೇಳೆಗೆ ಲೋಕಸಭಾ ಎಲೆಕ್ಷನ್‍ನಲ್ಲಿ ಸ್ಪರ್ಧಿಸುವ ಹುಕಿ ರೋಷನ್ ಬೇಗ್‍ರಿಗೆ ಜೋರಾಗಿತ್ತು. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೇಟ್‍ಗಾಗಿ ಹರಸಾಹಸ ಪಡುತ್ತಿದ್ದರು. ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದರು… ಈಗ ಆಡಿಯೋದಲ್ಲಿ ಕೇಳಿಬಂದಿರುವ ಆರೋಪವನ್ನು ಪರಿಗಣಿಸುವುದಾದರೆ ಆ ಹಣವನ್ನು ಮನ್ಸೂರ್ ಖಾನ್‍ನೇ ಫೈನಾನ್ಸ್ ಮಾಡಿದ್ದರು ಎನ್ನುತ್ತಾರೆ ಖಾನ್‍ರ ಬಲಗೈ ಬಂಟರು.. ಆದರೆ ಕಾಂಗ್ರೆಸ್ ಟಿಕೆಟ್ ರಿಜ್ವಾನ್ ಅರ್ಷದ್ ಪಾಲಾಯಿತು.

ಇತ್ತ ಹಣವೂ ಇಲ್ಲ, ಅತ್ತ ಟಿಕೆಟೂ ಇಲ್ಲ, ಕಡೇಪಕ್ಷ ರಾಜ್ಯ ಸರ್ಕಾರದಲ್ಲಿ ಮಂತ್ರಿಗಿರಿಯೂ ಇಲ್ಲದಂತಾದ ರೋಷನ್ ಬೇಗ್ ಸಹಜವಾಗಿಯೇ ಅಪ್‍ಸೆಟ್ ಆಗಿ ಕಾಂಗ್ರೆಸ್ ನಾಯಕರ, ಮುಖ್ಯವಾಗಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಉಸ್ತುವಾರಿ ವೇಣುಗೋಪಲ್ ವಿರುದ್ಧ ಬಹಿರಂಗ ಸಮರಕ್ಕಿಳಿದರು. ಇವರೇ ತನಗೆ ಟಿಕೆಟ್ ತಪ್ಪಿಸಿದರು ಎಂಬ ಸಿಟ್ಟಿನಲ್ಲಿ ಸಿದ್ರಾಮಯ್ಯನನ್ನು `ದುರಹಂಕಾರಿ’ ಎಂದು ಕರೆದರೆ ವೇಣುಗೋಪಾಲ್‍ರನ್ನು `ಬಫೂನ್’ ಎಂದು ಲೇವಡಿ ಮಾಡಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟುಮಾಡಬೇಕೆನ್ನುವ ಕಾರಣಕ್ಕೇ ಮೋದಿಯನ್ನು ಮತ್ತು ಮೋದಿ ಸಂಪುಟವನ್ನು ಕೊಂಡಾಡುವುದಕ್ಕೂ ಶುರು ಮಾಡಿದ್ದರು.

ಈ ಹಂತದಲ್ಲೆ ನೋಡಿ, ಐ.ಎಂ.ಎ ಹಗರಣ ಬೆಳಕಿಗೆ ಬಂದು ಮನ್ಸೂರ್ ಖಾನ್ ದೇಶಬಿಟ್ಟು ಪರಾರಿಯಾದದ್ದು; ರೋಷನ್ ಬೇಗ್‍ರ ಇನ್ವಾಲ್ವ್‍ಮೆಂಟ್ ಇರುವ ಇಡೀ ಪ್ರಕರಣದ ತನಿಖೆ ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುವ ಎಸ್.ಐ.ಟಿ. ತೆಕ್ಕೆಗೆ ಬಂದು ಬಿದ್ದದ್ದು!!
ರೋಚಕ ಪ್ರಶ್ನೆ ಭುಗಿಲೇಳುವುದೇ ಈಗ. ಆರ್.ಬಿ.ಐ ಪದೇಪದೇ ನೋಟಿಸ್ ಕೊಟ್ಟು, ಕಂದಾಯ ಇಲಾಖೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನೋಟಿಸ್ ಕೂಡಾ ಕೊಟ್ಟಿದ್ದ `ಅತಿ ವಿವಾದಿತ’ ವ್ಯಕ್ತಿಯೊಬ್ಬ ಅಧಿಕಾರಶಾಹಿಗಳ ಅಷ್ಟು ಸುಲಭವಾಗಿ ದೇಶ ಬಿಟ್ಟು ಪರಾರಿಯಾಗಲು ಸಾಧ್ಯವೇ? ಈ ಪ್ರಶ್ನೆಗೂ ಒಂದು ಕಾರಣವಿದೆ. ಈಗಿರುವ ಮಾಹಿತಿಗಳ ಪ್ರಕಾರ, ಆತ ದುಬೈಗೆ ವಿಮಾನ ಹತ್ತಿದ್ದು ಜೂನ್ 8ರ (ಶನಿವಾರ) ಸಂಜೆ 6.30ರಿಂದ 8.30ರ ನಡುವೆ. ಆದರೆ ಅದಕ್ಕೂ ಎರಡು ದಿನಗಳ ಹಿಂದಷ್ಟೇ ಸಿಸಿಬಿ ಪೊಲೀಸರು ಮನ್ಸೂರ್ ಖಾನ್‍ನ್ನು ತಮ್ಮ ಕಚೇರಿಗೆ ಕರೆಸಿಕೊಂಡು `ಗ್ರಿಲ್’ ಮಾಡಿದ್ದರು. ಹಾಗೆ ಕರೆಸಿಕೊಳ್ಳುವುದಕ್ಕೆ ಸಿಸಿಬಿ ಪೊಲೀಸರು ಎರಡು ಕಾರಣ ಕೊಡುತ್ತಾರೆ.

ಆಗಿನ್ನು ಅಪರಾಧ ವಿಭಾಗದ ಹೆಚ್ಚುವರಿ ಕಮೀಷನರ್ ಹುದ್ದೆಯಲ್ಲಿದ್ದ ಅಲೋಕ್ ಕುಮಾರ್‍ರವರು `ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ಪ್ರತಿಕ್ರಿಯೆ ಕೊಡುತ್ತಾ “ಡಿಜಿ ಮತ್ತು ಐಜಿಪಿ ನೀಲಮಣಿಯವರು ನಿರ್ದೇಶನ ಕೊಟ್ಟಿದ್ದರಿಂದ ನಾವು ಜೂನ್ 6ನೇ ತಾರೀಖು ವಿಚಾರಣೆಗೆ ಕರೆಸಿಕೊಂಡಿದ್ದೆವು. ಅವನ ಕಂಪನಿಗಳ ಬ್ಯಾಲೆನ್ಸ್ ಶೀಟ್ ಕೊಡುವಂತೆ ಕೇಳಿದೆವು. ಆದರೆ ತನ್ನ ಆಡಿಟರ್ ಜೊತೆ ಬಂದಿದ್ದ ಆತ ಜೂನ್ 9ನೇ ತಾರೀಕು ಮತ್ತೆ ಹಾಜರಾಗಿ ಎಲ್ಲವನ್ನೂ ಸಲ್ಲಿಸುವುದಾಗಿ ಹೇಳಿದ” ಎಂದು ಹೇಳಿದರೆ, ಮತ್ತೊಬ್ಬ ಪೊಲೀಸ್ ಅಧಿಕಾರಿ “ಮನ್ಸೂರ್ ಖಾನ್ ಈ ಹಿಂದೆ ಒಂದು ಖಾಸಗಿ ಟಿವಿ ಚಾನೆಲ್ ತನ್ನ “ಪವರ್” ನಿಂದ ತನ್ನನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿರುವುದಾಗಿ ದೂರು ಕೊಟ್ಟಿದ್ದ. ಐ.ಎಂ.ಎ ವಿಚಾರವಲ್ಲದೆ ಆ ಕೇಸಿನ ಬಗ್ಗೆಯೂ ಮಾಹಿತಿ ಪಡೆಯಲಾಯ್ತು ಎಂದು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ. ಆದರೆ ಖಾಸಗಿ ಟಿವಿ ಚಾನೆಲ್ ಮೇಲೆ ಈವರೆಗು ಪೊಲೀಸ್‍ನವರು ಕ್ರಮಕೈಗೊಂಡಿಲ್ಲ…

ಅಂದರೆ ಪೊಲೀಸರಿಗೆ ಇವನ ಸಾವಿರಾರು ಕೋಟಿ ಅವ್ಯವಹಾರದ ಬಗ್ಗೆ ಸ್ಪಷ್ಟ ಮಾಹಿತಿ ಇತ್ತು. ಅವನ ಚಲನವಲನಗಳನ್ನು ಗಮನಿಸಲು ಶುರು ಮಾಡಿದ್ದರು ಎಂಬುದು ಖಾತ್ರಿಯಾಗುತ್ತದೆ. ಇಂಥಾ ಬಹುಕೋಟಿ ವಂಚಕರ ಸುಲಭ ಎಸ್ಕೇಪ್ ಮಾರ್ಗವೆಂದರೆ ದೇಶ ಬಿಟ್ಟು ಪರಾರಿಯಾಗುವುದು ಎಂಬ ಅಂದಾಜು ಪೊಲೀಸರಿಗೆ ಇದ್ದೇ ಇರುತ್ತೆ. ಹಾಗಿದ್ದಾಗ 9ನೇ ತಾರೀಖು ಹಾಜರಾಗುತ್ತೇನೆ ಎಂದು ಹೇಳಿ ಯಾವ ದಾಖಲೆಯನ್ನೂ ಕೊಡದೆ ಸಿಸಿಬಿ ಕಚೇರಿಯಿಂದ ಸುಲಭವಾಗಿ ವಾಪಾಸು ಬಂದ ಮನ್ಸೂರ್ ಖಾನ್ ಮೇಲೆ ಪೊಲೀಸರು ಕಣ್ಣಿಟ್ಟಿರಲಿಲ್ಲವೇ? ಜೂನ್ 9ರಂದು ಮನ್ಸೂರ್ ಖಾನ್‍ನ ಬಿಸಿನೆಸ್ ಪಾಟ್ರ್ನರ್ ಮಹಮದ್ ಖಾಲೀದ್ ಅಹ್ಮದ್ ಎಂಬಾತ `ಮನ್ಸೂರ್ ತನಗೆ 4.8 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ’ ಎಂಬ ದೂರು ಕೊಟ್ಟರೂ, ಜೂನ್ 9ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದ ಮನ್ಸೂರ್ ಬರದೇಹೋದರೂ ಪೊಲೀಸರು ತರಾತುರಿಯನ್ನೇ ತೋರದಿದ್ದುದು ಯಾಕೆ? ಮಾರನೇ ದಿನ ಜೂನ್ 10ರಂದು ಮನ್ಸೂರ್ ಖಾನ್‍ನದ್ದು ಎಂದು ಹೇಳಲಾಗುವ ಆಡಿಯೋ ಕ್ಲಿಪ್ ತಲುಪಿದ ಮೇಲಷ್ಟೆ ಪೊಲೀಸರು ಎಚ್ಚೆತ್ತುಕೊಂಡದ್ದು!

ಐ.ಎಂ.ಎ ವಿರುದ್ಧ ದೂರು ಸಲ್ಲಿಸಲು ಸಾಲುಗಟ್ಟಿ ನಿಲ್ಲುತ್ತಿರುವ ಹೂಡಿಕೆದಾರರ ನಡುವೆ ಈ ಪ್ರಶ್ನೆ ಗಿರಕಿ ಹೊಡೆಯುತ್ತಿದ್ದು, ಅವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಯಾಕೆಂದರೆ, ಈ ಪ್ರಶ್ನೆಗೆ ಒಂದು ಉತ್ತರವೂ ಅವರ ನಡುವೆ ಸರಿದಾಡುತ್ತಿದೆ. ಅದರ ಪ್ರಕಾರ, ಜೂನ್ 6ನೇ ತಾರೀಕು ವಿಚಾರಣೆಗೆಂದು ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಪೊಲೀಸರೇ ಮನ್ಸೂರ್ ಖಾನ್‍ನನ್ನು ಬೆದರಿಸಿ ಈ ಆಡಿಯೋ ರೆಕಾರ್ಡ್ ಮಾಡಿಸಿಕೊಂಡಿದ್ದಾರೆ, ನಂತರ ಅವನು ವಿದೇಶಕ್ಕೆ ಪರಾರಿಯಾಗಿ ಸೇಫಾಗಿ ದುಬೈನಲ್ಲಿ ಲ್ಯಾಂಡಾದ ನಂತರ ಅದು ತಮಗೆ ತಲುಪುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಉತ್ತರಕ್ಕೆ ಅವರು ಕೊಟ್ಟುಕೊಳ್ಳುತ್ತಿರುವ ವಿವರಣೆಯೂ ಇಂಟರೆಸ್ಟಿಂಗ್ ಆಗಿದೆ. ಆಡಿಯೋದಲ್ಲಿ ಮನ್ಸೂರ್ ಖಾನ್ ನೇರವಾಗಿ ರೋಷನ್ ಬೇಗ್ ಮೇಲೆ ಆರೋಪ ಮಾಡಿದ್ದಾನೆ. ಆದರೆ 2016ರಲ್ಲಿ ಮನ್ಸೂರ್ ಐ.ಎಂ.ಎ ಕಂಪನಿ ತೆರೆದಾಗಿನಿಂದಲೂ ಆತನ ಬೆನ್ನಿಗೆ ನಿಂತದ್ದು ರೋಷನ್ ಬೇಗ್, ಹಾಗಿದ್ದೂ ರೋಷನ್ ಬೇಗ್ ಮೇಲೆ ಆರೋಪ ಮಾಡಿ ಪರಾರಿಯಾಗುತ್ತಾನೆ ಅಂದ್ರೆ ಏನರ್ಥ? ಅಲೋಕ್ ಕುಮಾರ್ ಇಷ್ಟೆಲ್ಲ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದಕ್ಕೆ ಪ್ರತಿಫಲವಾಗಿಯೇ ಅವರಿಗೆ ಬೆಂಗಳೂರು ಸಿಟಿ ಕಮೀಷನರ್ ಆಗಿ ಪ್ರಮೋಷನ್ ಕೊಟ್ಟಿದ್ದಾರೆ…. ಹೀಗೆ ಆ ಜನ ಮಾತಾಡಿಕೊಳ್ಳುವ ಯಾವುದನ್ನೂ ತಳ್ಳಿ ಹಾಕಲಿಕ್ಕಾಗುವುದಿಲ್ಲ. ಯಾಕೆಂದರೆ, ಸತ್ಯ ಏನೆಂಬುದು ಸ್ಪಷ್ಟವಾಗಿ ಸಾಬೀತಾಗುವವರೆಗೆ ಸಾಕಷ್ಟು ಪ್ರಶ್ನೆಗಳ ಬಲವಿರುವ ಇಂಥಾ ಅಭಿಪ್ರಾಯಗಳಿಗೂ ಜೀವವಿರುತ್ತದೆ. ತಮ್ಮ ಹಣ ವಂಚಿಸಿ ದುಬೈಗೆ ಹೆಂಡತಿ ಮಕ್ಕಳು ಸಮೇತ ಓಡಿಹೋಗಿರುವ ಮನ್ಸೂರ್ ಖಾನ್‍ನ ವಿರುದ್ಧ ಸಿಟ್ಟಾಗುವ ಬದಲು ಹಣ ಕಟ್ಟಿದ ಕೆಲ ಬಡಪಾಯಿಗಳು ಈಗಲೂ `ಮನ್ಸೂರ್ ಖಾನ್ ತುಂಬಾ ಒಳ್ಳೆಯ ಮನುಷ್ಯ. ನಮ್ಮ ಜೊತೆ ಕೂತು ಮಾತಾಡಿದ್ದ. ನಮ್ಮ ಕಷ್ಟಗಳ ಬಗ್ಗೆ ಕನಿಕರ ತೋರಿದ್ದ. ಖಂಡಿತ ವಾಪಾಸ್ ಬಂದೇಬರುತ್ತಾನೆ. ನಮ್ಮ ಹಣ ವಾಪಾಸ್ ಕೊಟ್ಟೇ ಕೊಡುತ್ತಾನೆ. ಮೋಸ ಮಾಡುವುದಿಲ್ಲ’ ಎಂಬ ಮಾತುಗಳನ್ನಾಡುತ್ತಿರೋದು, ಆತ ಇಂಥಾ ರಾಜಕೀಯ ಚಕ್ರವ್ಯೂಹದ ಬಲಿಪಶು ಆಗಿದ್ದಾನೆ ಎಂಬ ಅಭಿಪ್ರಾಯ ಅವರೊಳಗೆ ಗಟ್ಟಿಯಾಗಿರುವುದರಿಂದಲೇ!

ಆದರೆ ಒಂದಂತೂ ಸತ್ಯ, ಕಾಂಗ್ರೆಸ್ ನಾಯಕರ ವಿರುದ್ಧ `ರೆಬೆಲ್’ ಬಾವುಟ ಹಾರಾಡಿಸುತ್ತಿದ್ದ ಶಿವಾಜಿನಗರದ ಶಾಸಕ ರೋಷನ್ ಬೇಗ್ ಈ ಐ.ಎಂ.ಎ ಪ್ರಕರಣದಿಂದ ಗಾಳಿ ತೆಗೆದ ಬಲೂನಾಗಿರುವುದು ಮಾತ್ರ ಸತ್ಯ.

ಧರ್ಮದ ಹೆಸರಲ್ಲಿ ದೋಖೇಬಾಜಿ

ಅಸಲಿಗೆ ಐಎಂಎ ಕಂಪನಿಯ ಮನ್ಸೂರ್ ಟಾರ್ಗೆಟ್ ಮಾಡಿದ್ದು ತನ್ನ ಸಮುದಾಯದವರನ್ನೇ ಅನ್ನೋದು ಕುತೂಹಲಕಾರಿಯಾದ ಸಂಗತಿಯಾಗಿದೆ. ಆಭರಣಗಳಲ್ಲಿಯೂ ಮುಸ್ಲಿಂ ಆಭರಣ ಅಂತ ಡಿವೈಡ್ ಮಾಡಿ ಮಾರಾಟ ಮಾಡುತ್ತಿದ್ದನು. ಈತನ ಜ್ಯುವೆಲ್ಲರಿ ಶಾಪ್‍ಗೆ ಮುಸ್ಲಿಂ ಮಹಿಳೆಯರು ಬಿಟ್ಟರೆ ಅನ್ಯ ಧರ್ಮದವರು ಹೋಗುತ್ತಿದ್ದದ್ದು ತೀರ ಕಡಿಮೆ. ಇದಕ್ಕೆ ಕಾರಣ ಇಲ್ಲದಿಲ್ಲ.. ಕುರಾನಿನ ಪ್ರಕಾರ ಮುಸ್ಲಿಂರು ಬಡ್ಡಿ ಹಣವನ್ನು ತೆಗೆದುಕೊಳ್ಳುವಂತಿಲ್ಲ ಅದು ಹರಾಮ, ಅದಕ್ಕಾಗಿ ಐಎಂಎ ಕಂಪನಿಯ ಮನ್ಸೂರ್ ಇದು ಹರಾಮ ಅಲ್ಲ ಇದು ಹಲಾಲ ಹಣ, ನೀವು ನನ್ನ ಪಾಲುದಾರರು ನಿಮಗೆ ನಾನು ಬಡ್ಡಿ ನೀಡುವುದಿಲ್ಲ, ಲಾಭದಲ್ಲಿ ಪಾಲು ನೀಡುತ್ತೇನೆ ಎಂದು ಅಮಾಯಕ ಮುಸ್ಲಿಂರನ್ನು ನಂಬಿಸಿದ್ದ…

ಈ ರೀತಿ ಅಮಾಯಕರನ್ನು ನಂಬಿಸಲು ಮನ್ಸೂರ್ ಖಾನ್ ಬೆನ್ನಿಗೆ ನಿಂತಿದ್ದು ಜನಾಬ್ ರೋಶನ್ ಬೇಗ್ ಸಾಹೇಬ್ರು.. ಒಬ್ಬ ರಾಜಕಾರಣಿ ಆರ್ಥಿಕ ಲಾಭಕ್ಕಾಗಿ ಅವ್ಯವಹಾರಕ್ಕೆ ಕೈ ಜೋಡಿಸಿದರೆ ಆಶ್ಚರ್ಯವಲ್ಲ.. ಆದರೆ ಧರ್ಮ ಗುರುಗಳು ಆರ್ಥಿಕ ಹಗರಣಗಳೀಗೆ ಸಾಥ ನೀಡಿದರೆ. ಇಲ್ಲಿ ಆಗಿರುವುದು ಅದೇ.. ಮನ್ಸೂರ್ ಖಾನ್‍ರ ಐಎಂಎ ಕಂಪನಿ ಇಸ್ಲಾಂ ಧರ್ಮದ ನೀತಿಯಲ್ಲಿ ನಡೆಯುತ್ತಿದೆ. ಇದು ಹರಾಮ ಅಲ್ಲ, ಹಲಾಲ ಹಣವೆಂದು ಅಮಾಯಕ ಮುಸ್ಲಿಂರನ್ನು ನಂಬಿಸಿದ್ದು ಧರ್ಮ ಗುರುಗಳೆ.. ಮೂವರು ಮೌಲ್ವಿಗಳು ಶುಭ ಶುಕ್ರವಾರದ ನಮಾಜಿನ ನಂತರ ಶಾಸಕ ರೋಶನ್ ಬೇಗ್ ಅಣತಿಯಂತೆ ಐಎಂಎ ಕಂಪನಿಯ ಪರವಾಗಿ ಪ್ರಕಟಣೆ ನೀಡುತ್ತಿದ್ದರು. ಅಲ್ಲಿಯವರೆಗೆ ಕುಂಟುತ್ತಾ ಸಾಗುತ್ತಿದ್ದ ಐಎಂಎ ಕಂಪನಿಗೆ ಮೌಲ್ವಿಗಳ ಬೆಂಬಲದ ನಂತರ ಹಣದ ಹೊಳೆಯೆ ಹರಿದು ಬಂತು .. ಹಣದ ಹೊಳೆಯಲ್ಲಿ ತೆಲುತ್ತಿದ ಮನ್ಸೂರ್ ಖಾನ್ ನನ್ನು ಬೆನ್ನುಬಿದ್ದ ರೋಶನ್ ಬೇಗ್, ಜಮೀರ್ ಅಹಮ್ಮದ್‍ರಂತಹ ಮುಸ್ಲಿಂ ನಾಯಕರು ಆತನ ಹಣವನ್ನು ಹರಿದು ತಿಂದರು..

ಇದು ಒಂದು ಐಎಂಎ ಕಂಪನಿಯ ಕಥೆಯಲ್ಲ, ಇದರ ಮೊದಲ ಬಂದ ಆಂಬಿಡೆಂಟ್ ಕಂಪನೀಯ ಮಾಲಿಕರು ಮುಸ್ಲಿಂರೆ, ವಂಚನೆಗೆ ಒಳಗಾದವರು ಅಮಾಯಕ ಮುಸ್ಲಿಂರೆ.. ನೌವೇರಾ ಶೇಖ್ ಮಾಡಿದ್ದು ಇದನ್ನೆ.. ಒಂದೆಡೆ ಧರ್ಮದ ಹೆಸರಿನಲ್ಲಿ, ಹುಸಿ ರಾಷ್ಟ್ರಪ್ರೇಮದ ಹೆಸರಿನಲ್ಲಿ ರಾಜಕೀಯ ಕೆಸೆರೆರಚಾಟ ನಡೆಯುತ್ತಿರುವಾಗ, ಇನ್ನೊಂದೆಡೆ  ಸದ್ದಿಲ್ಲದೆ ಧರ್ಮದ ಹೆಸರಿನಲ್ಲಿ ಧಾರ್ಮಿಕ ನಾಯಕರ ಬೆಂಬಲದೊಂದಿಗೆ ಅವ್ಯವಹಾರಗಳು ನಡೆಯುತ್ತಿರುವುದು ದೊಡ್ಡ ಗಂಡಾಂತರದ ಸೂಚನೆಯಲ್ಲವೆ..

ಜಮೀರ್ ಪಾತ್ರವೇನು?

ಐ.ಎಂ.ಎ ಪ್ರಕರಣದಲ್ಲಿ ಹಾಲಿ ರೇಷನ್ ಮಂತ್ರಿ ಜಮೀರ್ ಅಹ್ಮದ್ ಖಾನ್ ಹೆಸರೂ ಕೇಳಿಬರುತ್ತಿದೆ. ಇದು ಮುಸ್ಲಿಂ ಸಮುದಾಯದ ಸುತ್ತಲೇ ಗಿರಕಿ ಹೊಡೆಯುತ್ತಿರುವ ಬಹುಕೋಟಿ ವಂಚನೆ ಪ್ರಕರಣವಾದ್ದರಿಂದ ಸಹಜವಾಗಿಯೇ ಮುಸ್ಲಿಂ ಸಮುದಾಯದ ಘಟಾನುಘಟಿಗಳ ಸಂಪರ್ಕ, ಸಹವಾಸ ಇದ್ದೇ ಇರಬಹುದು. ಅದೂ ಮುಸ್ಲಿಂ ಸಮುದಾಯದ ಲೀಡರ್ ಆಗಿ ಗುರುತಿಸಿಕೊಳ್ಳಲು ಜಮೀರ್ ಹೆಣಗಾಡುತ್ತಿರುವ ಸಂದರ್ಭದಲ್ಲಿ ಇಂಥಾ ದುಡ್ಡಿನ ಕುಳಗಳ ಸ್ನೇಹ, ವ್ಯವಹಾರವನ್ನು ತಳ್ಳಿಹಾಕಲಿಕ್ಕಾಗುವುದಿಲ್ಲ. ಅದರಲ್ಲೂ ಜಮೀರ್ ಅಹ್ಮದ್ ಖಾನ್‍ರ `ವ್ಯವಹಾರ ವೈಖರಿ’ಗಳು ಎಂತವು ಎಂಬುದನ್ನು ಹತ್ತಿರದಿಂದ ಬಲ್ಲವರು ಐ.ಎಂ.ಎ ಹಗರಣದಲ್ಲಿ ಜಮೀರ್‍ಗೂ ಪಾಲು ತಲುಪಿರುವ ಸಾಧ್ಯತೆಯನ್ನು ತಳ್ಳಿ ಹಾಕಲಿಕ್ಕಾಗುವುದಿಲ್ಲ. ಸ್ವತಃ ಜಮೀರ್, ತನಗೂ ಮನ್ಸೂರ್‍ಗು ಆಸ್ತಿ ಖರೀದಿಯ ವ್ಯವಹಾರ ಇದ್ದದ್ದು ನಿಜ ಆದರೆ ಅದೆಲ್ಲವೂ ಬ್ಯಾಂಕ್ ವಹಿವಾಟಿನ ಮೂಲಕವೇ ನಡೆದಿದೆ ಎಂದು ಹೇಳಿಕೊಂಡಿದ್ದಾರೆ.

ಆದರೂ ಇಲ್ಲಿ ಅವರ ಹೆಸರು ರೋಷನ್ ಬೇಗ್ ಪಾತ್ರವನ್ನೂ ಓವರ್‍ಟೇಕ್ ಮಾಡಿ ಕೇಳಿಬರುತ್ತಿರೋದರಲ್ಲಿ ಒಂದಷ್ಟು ಪೊಲಿಟಿಕಲ್ ಅತಿಶಯೋಕ್ತಿಗಳಿರಬಹುದು ಅಷ್ಟೇ. ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ `ಆಪರೇಷನ್’ ಹೋರಾಟವನ್ನು ಬದಿಗಿರಿಸಿ `ರಚನಾತ್ಮಕ’ ವಿರೋಧ ಪಕ್ಷದ ಹೋರಾಟ ಶುರು ಮಾಡಿಕೊಂಡಿರುವ ಬಿಜೆಪಿಗೆ ಈ ಐ.ಎಂ.ಎ ಅಸ್ತ್ರ ಎಷ್ಟು ಪರಿಣಾಮಕಾರಿಯಾದದ್ದು ಎಂಬ ಅರಿವಿದೆ. 2013ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಯಲಿಗೆ ಬಂದ ಶಾರದಾ ಚಿಟ್ ಫಂಡ್ ಹಗರಣ ಮಮತಾ ಬ್ಯಾನರ್ಜಿಯ ಟಿ.ಎಂ.ಸಿ.ಯನ್ನು ಯಾವ ಪರಿ ಕಾಡುತ್ತಿದೆ ಅನ್ನೋದು ಬಿಜೆಪಿಗೆ ಗೊತ್ತಿಲ್ಲದಿಲ್ಲ. ಲೋಕಸಭಾ ಚುನಾವಣೆಯಲ್ಲಿ ದೀದಿ ಹೈರಾಣು ಸ್ಥಿತಿ ತಲುಪಿರುವಲ್ಲಿ ಅದರ ಕೊಡುಗೆಯೂ ಇದೆ.

ಹಾಗಾಗಿ ಐ.ಎಂ.ಎ ಹಗರಣವನ್ನು ಮೈತ್ರಿ ಸರ್ಕಾರದ ಮುಖಕ್ಕೆ ಮಸಿ ಬಳಿಯಲು ಬಳಸಿಕೊಳ್ಳಬೇಕೆನ್ನುವುದು ವಿರೋಧ ಪಕ್ಷವಾಗಿ ಬಿಜೆಪಿಯ ಸಹಜ ಇರಾದೆ. ಆ ಕೆಲಸ ಮಾಡಬೇಕೆಂದರೆ ಸರ್ಕಾರ ಮತ್ತು ಐ.ಎಂ.ಎ ನಡುವಿನ ಕೊಂಡಿಯಾಗಿ ಯಾರಿರುವರೋ ಅವರ ಮೂಲಕ ಸರ್ಕಾರದ ಮೇಲೆ ದಾಳಿ ಮಾಡಬಹುದು. ಆ ಕೊಂಡಿ ಸರ್ಕಾರದಲ್ಲಿ ಎಷ್ಟು ಪ್ರಭಾವಿ ಹುದ್ದೆಯಲ್ಲಿರುತ್ತೋ, ಅಷ್ಟೇ ಪರಿಣಾಮಕಾರಿಯಾಗಿ ಸರ್ಕಾರದ ಹೆಸರು ಹಾಳಾಗುತ್ತೆ. ಆದರೆ ಆ ಕೊಂಡಿಯಾಗುವ ಎಲ್ಲಾ ಅನುಮಾನಗಳೂ ಬೊಟ್ಟು ಮಾಡುತ್ತಿರೋದು ರೋಷನ್ ಬೇಗ್‍ರತ್ತ. ಅವರು ಈಗ ಸರ್ಕಾರದ ಭಾಗವೂ ಅಲ್ಲ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸಿಪಾಯಿಯಾಗಿಯೂ ಉಳಿದಿಲ್ಲ. ಹಾಗೆ ನೋಡಿದರೆ, ಕಾಂಗ್ರೆಸ್ ನಾಯಕರನ್ನು ಹೀಗಳೆದು, ಮೋದಿಯವರನ್ನು ಹೊಗಳಿದಾಗಲೇ ಅವರು ಬಿಜೆಪಿ ಸೇರಿಬಿಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ರೋಷನ್ ಬೇಗ್‍ರಿಂದ ಬಿಜೆಪಿಗೆ ಅನುಕೂಲವಾಗುತ್ತಿರುವುದೇ ಹೆಚ್ಚು. ಕಾಂಗ್ರೆಸ್‍ಗೆ ಹೆಚ್ಚೂಕಮ್ಮಿ ಬೇಡವಾಗಿರುವ ರೋಷನ್ ಬೇಗ್ ಮೇಲೆ ದಾಳಿ ಮಾಡಿದರೆ ಕಾಂಗ್ರೆಸ್ಸಿಗಾಗಲಿ, ಸರ್ಕಾರಕ್ಕಾಗಲಿ ಕೆಟ್ಟ ಹೆಸರಿಗಿಂತ ಲಾಭವೇ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಅವರನ್ನು ದಾಳವಾಗಿಸಿಕೊಳ್ಳುವುದಕ್ಕಿಂತ ಸರ್ಕಾರದಲ್ಲಿ ಮಂತ್ರಿಯಾಗಿರುವ ಮುಸ್ಲಿಂ ಸಮುದಾಯದ ಜಮೀರ್ ಅಹ್ಮದ್‍ರನ್ನು ಐ.ಎಂ.ಎ.ಗೆ ತಳುಕು ಹಾಕಿ ದಾಳಿ ಮಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದು ಖಂಡಿತ ಎಂಬ ಲೆಕ್ಕಾಚಾರವೇ ಜಮೀರ್ ಹೆಸರು ಹೆಚ್ಚೆಚ್ಚು ಚಲಾವಣೆಗೆ ಬರುತ್ತಿದೆ. ಹೇಗೂ ಇಂಥಾ ಅನುಮಾನಗಳು ದಟ್ಟವಾಗಲು ಜಮೀರ್-ಮನ್ಸೂರ್ ನಡುವಿನ ಕೊಡುಕೊಳ್ಳುವಿಕೆಗಳು ಇದ್ದೇ ಇದ್ದವಲ್ಲ!

ಕನ್ನಡ ಟಿವಿಗಳ ಪಾತ್ರವಿದೆ
ಆಂಬಿಡೆಂಟ್ ಹಗರಣ ಮತ್ತು ಐಎಂಎ ಹಗರಣಗಳಲ್ಲಿ ಮಾಧ್ಯಮಗಳ ಪಾಲಿರುವುದು ಸಹ ಕೇಳಿಬರುತ್ತಿದೆ. ಆಂಬಿಡೆಂಟ್ ಹಗರಣದಲ್ಲಿ ಪಬ್ಲಿಕ್ ರಂಗಣ್ಣ ಮತ್ತು ಆತನ ಸಹಚರರು ಭಾಗಿಯಾಗಿದ್ದರೆಂಬ ಮಾತು ಕೇಳಿಬಂದಷ್ಟೇ ವೇಗವಾಗಿ ಅವರು ಅದರಿಂದ ಪಾರಾಗಿದ್ದರು. ಇವರು ಪಾರಾಗಲು ದೇವೇಗೌಡ ಮತ್ತು ಕುಮಾರಸ್ವಾಮಿಯವರು ಕೃಪಕಟಾಕ್ಷವಿತ್ತು ಎನ್ನಲಾಗಿದೆ. ಸದರಿ ಐಎಂಎ ಹಗರಣದಲ್ಲಿ ಬಿಟಿವಿಯವರು ತಿಂದು ತೇಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಸತ್ಯವೋ ಸುಳ್ಳೋ ಎಂದು ಮನ್ಸೂರ್ ಖಾನ್ ಬಂದೇ ಹೇಳಬೇಕಾಗಿದೆ. ಆದರೆ ದೇಶದ ನಾಲ್ಕನೇಯ ಅಂಗವಾದ ಮಾಧ್ಯಮಗಳೇ ಇಂತಹ ಲೂಟಿಗಳಿಗೆ ಸಹಕರಿಸಿದರೆ ಗತಿಯೇನು? ಇಂತಹ ಹಗರಣಗಳು ಕೈ ಮೀರುವ ಮುನ್ನವೇ ತಿಳಿದಿದ್ದ ಮಾಧ್ಯಮಗಳು ಅವನ್ನು ಬಯಲಿಗೆಳೆದು ಅನಾಹುತ ತಪ್ಪಿಸುವುದನ್ನು ಬಿಟ್ಟು ಹಗರಣದಲ್ಲಿ ಕೈಜೋಡಿಸಿ ಅಮಾಯಕರ ಹಣವನ್ನು ತಿಂದು ತೇಗುತ್ತಿರುವುದು ದೊಡ್ಡ ದುರಂತವಾಗಿದೆ. ಸಮರ್ಪಕ ತನಿಖೆ ನಡೆದು ಇದರಲ್ಲಿ ಕೈಜೋಡಿಸಿದ ಮಾಧ್ಯಮಗಳಿಗೂ ಶಿಕ್ಷೆಯಾಗಬೇಕಿದೆ. ಇಲ್ಲದಿದ್ದರೆ ಜನ ಮತ್ತಷ್ಟು ಹತಾಶರಾಗುವ ದುಸ್ಥಿತಿ ಬರಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಬಡವರೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ..’; ಪ್ರಧಾನಿ ಮೋದಿ...

0
'ದೇಶದ ಬಡವರು ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ. 'ಪ್ರತಿಪಕ್ಷಗಳ ಇಂಡಿಯಾ...