Homeಮುಖಪುಟಶಿಕ್ಷಣ ಮಾಧ್ಯಮದಲ್ಲಿ ಹಿಂದಿ ಹೇರಿಕೆ: ಕೇಂದ್ರದ ನಡೆ ವಿರೋಧಿಸಿದ ಸ್ಟಾಲಿನ್ ಜೊತೆಗೂಡಿದ ಕೇರಳ ಸಿಎಂ

ಶಿಕ್ಷಣ ಮಾಧ್ಯಮದಲ್ಲಿ ಹಿಂದಿ ಹೇರಿಕೆ: ಕೇಂದ್ರದ ನಡೆ ವಿರೋಧಿಸಿದ ಸ್ಟಾಲಿನ್ ಜೊತೆಗೂಡಿದ ಕೇರಳ ಸಿಎಂ

- Advertisement -
- Advertisement -

ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡುವ ಸಂಸದೀಯ ಸಮಿತಿಯ ಶಿಫಾರಸನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಮಂತ್ರಿಗೆ ಮಂಗಳವಾರ ಪತ್ರ ಬರೆದು ಅವರ ಮಧ್ಯಸ್ಥಿಕೆಯನ್ನು ಕೋರಿದ್ದಾರೆ. ಈ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಪಿಣರಾಯಿ ಧ್ವನಿಗೂಡಿಸಿದ್ದಾರೆ.

ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಐಐಟಿಗಳಂತಹ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವು ಹಿಂದಿ ಮತ್ತು ಭಾರತದ ಇತರ ಭಾಗಗಳಲ್ಲಿ ಆಯಾ ಸ್ಥಳೀಯ ಭಾಷೆಯಾಗಿರಬೇಕು ಎಂದು ಸಂಸದೀಯ ಸಮಿತಿಯು ಇತ್ತೀಚೆಗೆ ಶಿಫಾರಸು ಮಾಡಿತ್ತು. ಸಮಿತಿಯು ಇಂಗ್ಲಿಷ್ ಬಳಕೆಯನ್ನು ಐಚ್ಛಿಕವಾಗಿ ಮಾಡಬೇಕು ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ದೇಶದಲ್ಲಿ ಹಲವು ಭಾಷೆಗಳಿವೆ, ಒಂದೇ ಭಾಷೆಯನ್ನು ದೇಶದ ಭಾಷೆ ಎಂದು ಕರೆಯಲಾಗದ ಕಾರಣ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಹಿಂದಿಯನ್ನು ಮುಖ್ಯ ಬೋಧನಾ ಭಾಷೆಯಾಗಿ ಹೇರಲು ಸಾಧ್ಯವಿಲ್ಲ” ಪಿಣರಾಯಿ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಹಿಂದಿಯೊಂದನ್ನೆ ರಾಷ್ಟ್ರಭಾಷೆ ಮಾಡಲು ಸಾಧ್ಯವಿಲ್ಲ: ಶಿಕ್ಷಣ ತಜ್ಞರೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿ

ದೇಶದ ಯುವಕರು ಸರ್ಕಾರಿ ವಲಯದಲ್ಲಿ ಸೀಮಿತ ಉದ್ಯೋಗಾವಕಾಶಗಳನ್ನು ಹೊಂದಿದ್ದಾರೆ ಎಂಬುದರ ಬಗ್ಗೆ ಗಮನಸೆಳೆದ ಕೇರಳ ಸಿಎಂ, ಅವರಲ್ಲಿ ಗಣನೀಯ ವರ್ಗವನ್ನು ತುಲನಾತ್ಮಕವಾಗಿ ಅನಾನುಕೂಲಕ್ಕೆ ಒಳಪಡಿಸುವ ಯಾವುದೇ ಪ್ರಯತ್ನವು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

“ನಮ್ಮ ದೇಶದ ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾರ್ಥಿಗಳು ಈ ವಿಷಯದಲ್ಲಿ ತಮ್ಮ ಗಂಭೀರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಭಾರತ ಸರ್ಕಾರದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಭಾಷೆಗಳಲ್ಲಿ ನೀಡಬಹುದು ಎಂದು ನಾನು ಸೂಚಿಸಲು ಈ ಅವಕಾಶವನ್ನು ಬಳಸುತ್ತೇನೆ” ಎಂದು ಪಿಣರಾಯಿ ವಿಜಯನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಯುವ ಪೀಳಿಗೆಯು ತಮ್ಮ ಮಾತೃಭಾಷೆಯ ಹೊರತಾಗಿ ಬೇರೆ ಭಾಷೆಗಳನ್ನು ಕಲಿಯಲು ಪ್ರೋತ್ಸಾಹಿಸಬೇಕಾದರೂ, “ಭಾಷೆಯ ಹೇರಿಕೆ” ಎಂದು ದೂರದಿಂದಲೂ ಗ್ರಹಿಸಬಹುದಾದ ಯಾವುದೇ ಪ್ರಯತ್ನವು ಸಾಮಾನ್ಯ ಜನರಲ್ಲಿ ಮತ್ತು ನಿರ್ದಿಷ್ಟವಾಗಿ ಉದ್ಯೋಗಾಕಾಂಕ್ಷಿಗಳಲ್ಲಿ ಆತಂಕವನ್ನು ಉಂಟುಮಾಡುತ್ತದೆ ಎಂದು ಪಿಣರಾಯಿ ಹೇಳಿದ್ದಾರೆ.

ಇದನ್ನೂ ಓದಿ: ಹಿಂದಿ ದಿವಸ ಆಚರಣೆ ವಿರೋಧಿಸಿ ಮುಖ್ಯಮಂತ್ರಿಗೆ ಕುಮಾರಸ್ವಾಮಿ ಪತ್ರ

“ಅಗತ್ಯ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಗೌರವಾನ್ವಿತ ಪ್ರಧಾನ ಮಂತ್ರಿಗಳು ಆದಷ್ಟು ಬೇಗ ಮಧ್ಯಪ್ರವೇಶಿಸಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಪಿಣರಾಯಿ ಹೇಳಿದ್ದಾರೆ.

ನಮ್ಮ ರಾಷ್ಟ್ರವು ವಿವಿಧತೆಯಲ್ಲಿ ಏಕತೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸಾಂಸ್ಕೃತಿಕ, ಭಾಷಾ ಮತ್ತು ಧಾರ್ಮಿಕ ವೈವಿಧ್ಯಗಳ ನಡುವೆ ಸಹೋದರತ್ವದ ಭಾವನೆಯೊಂದಿಗೆ ನಾವು ಒಂದೇ ರಾಷ್ಟ್ರವಾಗಿದ್ದೇವೆ ಎಂದು ಅವರು ಹೇಳಿದ್ದಾರೆ. “ನಮ್ಮ ಉನ್ನತ ಕಲಿಕಾ ಕೇಂದ್ರಗಳಲ್ಲಿ ಹಿಂದಿಯನ್ನು ಮುಖ್ಯ ಬೋಧನಾ ಭಾಷೆಯನ್ನಾಗಿ ಹೇರಲು ಸಾಧ್ಯವಿಲ್ಲ. ಶೈಕ್ಷಣಿಕ ವಲಯದಲ್ಲಿ ರಾಜ್ಯ ನಿರ್ದಿಷ್ಟ ಅಂಶಗಳನ್ನು ಗುರುತಿಸಬೇಕು. ಈ ವಿಷಯದಲ್ಲಿ ಆತುರದ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಂವಿಧಾನದ ನಿರ್ದಿಷ್ಟಪಡಿಸಿದ ಎಲ್ಲಾ ರಾಷ್ಟ್ರೀಯ ಭಾಷೆಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದ್ದು,“ಯಾವುದೇ ಭಾಷೆಯನ್ನು ಇತರ ಭಾಷೆಗಳಿಗಿಂತ ಬೋಧನಾ ಮಾಧ್ಯಮವಾಗಿ ಆದ್ಯತೆ ನೀಡಬಾರದು ಎಂದು ನಾನು ವಿನಂತಿಸುತ್ತೇನೆ. ಇದು ನಮ್ಮ ಸಹಕಾರಿ ಫೆಡರಲ್ ವ್ಯವಸ್ಥೆಗೆ ಒಳ್ಳೆಯದಲ್ಲ” ಎಂದು ಪಿಣರಾಯಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರೇ ‘ಹಿಂದಿ ರಾಷ್ಟ್ರಭಾಷೆ’ ಎಂಬ ಭ್ರಮೆಯಿಂದ ಹೊರಬನ್ನಿ: ಸಿದ್ದರಾಮಯ್ಯ

ತಮಿಳುನಾಡು ಸಿಎಂ ಸ್ಟಾಲಿನ್ ಕೂಡಾ ಕೇಂದ್ರ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಹಿಂದಿಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಯತ್ನವು ನಮ್ಮ ಮೇಲೆ ಮತ್ತೊಂದು ಭಾಷಾಯುದ್ಧ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಹಿಂದಿಯನ್ನು ಹೇರುವ ಯಾವುದೇ ಕ್ರಮವು ಹಿಂದಿ ಮಾತನಾಡದ ನಾಗರಿಕರು ಮತ್ತು ಪ್ರದೇಶಗಳನ್ನು ಎರಡನೆ ದರ್ಜೆಯ ಸ್ಥಾನಮಾನಕ್ಕೆ ತಳ್ಳುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಹಿಂದಿ ಮಾತನಾಡದ ನಾಗರಿಕರ ಜನಸಂಖ್ಯೆ ದೇಶದಲ್ಲಿ ಹೆಚ್ಚಿದೆ ಎಂದು ಹೇಳಿರುವ ಸ್ಟಾಲಿನ್‌, ಬೋಧನಾ ಮಾಧ್ಯಮವಾಗಿ ಇಂಗ್ಲಿಷ್ ಅನ್ನು ತೆಗೆದುಹಾಕುವ ಪ್ರಸ್ತಾಪವನ್ನು ವಿರೋಧಿಸಿದ್ದಾರೆ. ಕೇರಳದ ಆಡಳಿತಾರೂಢ ಸಿಪಿಐ(ಎಂ) ಕೂಡಾ ಸಂಸದೀಯ ಸಮಿತಿಯ ಶಿಫಾರಸನ್ನು ವಿರೋಧಿಸಿದ್ದು, ಇದು ಸಂವಿಧಾನದ ಆಶಯ ಮತ್ತು ದೇಶದ ಭಾಷಾ ವೈವಿಧ್ಯತೆಗೆ ವಿರುದ್ಧವಾಗಿದೆ ಎಂದು ಹೇಳಿದೆ.

ಕಳೆದ ತಿಂಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ತನ್ನ 11 ನೇ ವರದಿಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿಯು ಎಲ್ಲಾ ರಾಜ್ಯಗಳಲ್ಲಿ ಇಂಗ್ಲಿಷ್‌ಗಿಂತ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡಿದೆ. ಸಮಿತಿಯು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯ ಪ್ರಕಾರ ಶಿಫಾರಸುಗಳನ್ನು ರೂಪಿಸಿದ್ದು, ಬೋಧನಾ ಮಾಧ್ಯಮವು ಅಧಿಕೃತ ಅಥವಾ ಪ್ರಾದೇಶಿಕ ಭಾಷೆಯಾಗಿರಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: ಬಹುಜನ ಭಾರತ; ಇಂಗ್ಲಿಷ್ ಜೊತೆ ಹಿಂದಿಯೂ ಆಡಳಿತ ಭಾಷೆಯೇ ವಿನಾ ರಾಷ್ಟ್ರಭಾಷೆ ಅಲ್ಲ

ಹಿಂದಿ ಮಾತನಾಡುವ ರಾಜ್ಯಗಳಲ್ಲಿನ ಐಐಟಿಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ಬೋಧನಾ ಮಾಧ್ಯಮವು ಹಿಂದಿ ಭಾಷೆಯಾಗಿರಬೇಕು ಮತ್ತು ಭಾರತದ ಇತರ ಭಾಗಗಳಲ್ಲಿ ಆಯಾ ಸ್ಥಳೀಯ ಭಾಷೆಯಾಗಿರಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ಹಿಂದಿ ಬಳಕೆಯ ಆಧಾರದ ಮೇಲೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಮೂರು ಗುಂಪುಗಳಾಗಿ (ಪ್ರದೇಶಗಳು) ವಿಂಗಡಿಸಲಾಗಿದೆ.

ಹಿಂದಿ ಭಾಷಿಕ ರಾಜ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಹಿಂದಿಯಲ್ಲಿ ಕೆಲಸ ಮಾಡದ ಕೇಂದ್ರ ಸರ್ಕಾರದ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಎಚ್ಚರಿಕೆ ನೀಡಬೇಕು ಮತ್ತು ಎಚ್ಚರಿಕೆಯ ಹೊರತಾಗಿಯೂ ಅವರು ಕಾರ್ಯನಿರ್ವಹಿಸದಿದ್ದರೆ, ಅದನ್ನು ಅವರ ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿಯಲ್ಲಿ (ಎಪಿಎಆರ್) ಉಲ್ಲೇಖಿಸಬೇಕು ಎಂದು ಸಮಿತಿ ಹೇಳಿದೆ.

ಇದನ್ನೂ ಓದಿ: ಮಣಿಪುರ: ಹಿಂದಿ ಹೇರಿಕೆ ಖಂಡಿಸಿ ಶಾರನ್ನು ಟೀಕಿಸಿದ್ದಕ್ಕೆ ಕಾಂಗ್ರೆಸ್‌ ವಕ್ತಾರನ ಮೇಲೆ ದೇಶದ್ರೋಹ ಪ್ರಕರಣ ದಾಖಲು

ಕೇಂದ್ರ ಸರ್ಕಾರದ ಕಚೇರಿಗಳು, ಸಚಿವಾಲಯಗಳು ಅಥವಾ ಇಲಾಖೆಗಳ ಪತ್ರಗಳು, ಫ್ಯಾಕ್ಸ್‌ಗಳು ಮತ್ತು ಇಮೇಲ್‌ಗಳಂತಹ ಸಂವಹನವು ಹಿಂದಿ ಅಥವಾ ಸ್ಥಳೀಯ ಭಾಷೆಗಳಲ್ಲಿ ನಡೆಯಬೇಕು. ಕೇಂದ್ರ ಸರ್ಕಾರ ಆಯೋಜಿಸುವ ಯಾವುದೇ ಕಾರ್ಯಕ್ರಮಗಳು ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿರಬೇಕು ಎಂದು ಅದು ಶಿಫಾರಸ್ಸು ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕರ್ನಾಟಕ ಸರ್ಕಾರ ಏನು ಗೆಣಸು ತಿನ್ನುತ್ತಾ ಇದೆಯೇ,ಇವರಾರಿಗೂ ಕನ್ನಡದ ಬಗ್ಗೆ ಅಭಿಮಾನವಿಲ್ಲವೇ? ನಾಡು ನುಡಿ ಸಂಸ್ಕೃತಿ ಉಳಿಸಿಕೊಳ್ಳೋ ಯೋಗ್ಯತೆ ಮತ್ತು ದಮ್ಮು ಇಲ್ಲದಿದ್ದರೆ ನಿಮಗೇಕೆ ಅಧಿಕಾರ? ಅಧಿಕಾರ ಬಿಟ್ಟು ತೊಲಗಿ,ಇಲ್ಲವೇ ಜನರೆ ಮನೆಗೆ ಕಳಿಸುತ್ತಾರೆ.

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...