BJP ಸರ್ಕಾರ ಕೂಡಾ ದೇಶ ವಿರೋಧಿಯೆ? - RSS ಮುಖವಾಣಿ ಪಾಂಚಜನ್ಯಕ್ಕೆ ರಘುರಾಮ ರಾಜನ್ ಪ್ರಶ್ನೆ | NaanuGauri

ತೆರಿಗೆ ಸಲ್ಲಿಕೆಯ ವೆಬ್‌ಸೈಟ್‌ನಲ್ಲಿ ಲೋಪದೋಷ ಇರುವುದಕ್ಕಾಗಿ ಇನ್ಫೋಸಿಸ್‌ ಸಂಸ್ಥೆಯನ್ನು ‘ದೇಶ ವಿರೋಧಿ’ ಎಂದು ಕರೆದಿರುವ ಆರೆಸ್ಸೆಸ್‌ ಮುಖ್ಯವಾಣಿ ಪಾಂಚಜನ್ಯವನ್ನು, ಆರ್‌ಬಿಐನ ಮಾಜಿ ಗವರ್ನರ್‌ ಡಾ. ರಘುರಾಮ ರಾಜನ್‌ ಅವರು ಟೀಕಿಸಿದ್ದಾರೆ. ಈ ಬಗ್ಗೆ ಪತ್ರಿಕೆಯನ್ನು ಪ್ರಶ್ನಿಸಿರುವ ಅವರು, ಕೊರೊನಾ ಲಸಿಕೆ ನೀಡುವಲ್ಲಿ ಒಕ್ಕೂಟ ಸರ್ಕಾರ ಕೂಡಾ ಕಳಪೆ ಪ್ರದರ್ಶನ ನೀಡಿದೆ, ಅದನ್ನು ಕೂಡಾ ರಾಷ್ಟ್ರ ವಿರೋಧಿ ಎಂದು ಕರೆಯುತ್ತಾರೆಯೇ ಎಂದು ಕೇಳಿದ್ದಾರೆ.

ಖ್ಯಾತ ಅರ್ಥಶಾಸ್ತ್ರಜ್ಞರಾಗಿರುವ ರಘುರಾಮ ರಾಜನ್‌ ಅವರು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಖಾಸಗಿ ವಲಯದ ಸಂಸ್ಥೆಗಳು ಸರ್ಕಾರಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಆಕ್ರೋಶವನ್ನು ಎದುರಿಸುತ್ತಿವೆ. ಜೊತೆಗೆ ಹಲವಾರು ಖಾಸಗಿ ಸಂಸ್ಥೆಗಳು ಮುಚ್ಚಿವೆ. ಈ ಪಟ್ಟಿಗೆ ತೀರಾ ಇತ್ತೀಚಿನ ಉದಾಹರಣೆಯಾಗಿದೆ ಇನ್ಫೋಸಿಸ್.

ಇದನ್ನೂ ಓದಿ: ‘ಇನ್ಫೋಸಿಸ್‌ ಎಡಪಂಥೀಯರಿಗೆ ಸಹಾಯ ಮಾಡುತ್ತಿದೆ’ – ಆರೆಸ್ಸೆಸ್‌‌ ಮುಖವಾಣಿ ಪತ್ರಿಕೆ ಆಕ್ರೋಶ

“ಲಸಿಕೆ ನೀಡುವಲ್ಲಿ ಉತ್ತಮ ಕೆಲಸ ಮಾಡದ ಸರ್ಕಾರವನ್ನು ನೀವು ದೇಶವಿರೋಧಿ ಎಂದು ಆರೋಪಿಸುತ್ತೀರಾ? ನೀವು ತಪ್ಪಾಗಿದೆ ಎಂದು ಹೇಳುತ್ತೀರಿ, ಹಾಗೆಯೆ ಜನರು ಕೂಡಾ ತಪ್ಪುಗಳನ್ನು ಮಾಡುತ್ತಾರೆ” ಎಂದು ರಘುರಾಮ ರಾಜನ್ ಹೇಳಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಉಲ್ಲೇಖಿಸಿ ಮಾತನಾಡಿದ ಅವರು, “ಜಿಎಸ್‌ಟಿ ಜಾರಿಮಾಡಿರುವುದನ್ನು ಅದ್ಭುತವಾಗಿದೆ ಎಂದು ನಾನು ಭಾವಿಸುವುದಿಲ್ಲ. ಅದನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು…ಆದರೆ ಆ ತಪ್ಪುಗಳಿಂದ ಕಲಿಯಿರಿ ಮತ್ತು ನಿಮ್ಮ ಸ್ವಂತ ಪೂರ್ವಾಗ್ರಹಗಳನ್ನು ಹೊರಹಾಕಲು ಅದನ್ನು ವೇದಿಕೆಯಾಗಿ ಬಳಸಬೇಡಿ” ಎಂದು ರಘುರಾಮ ಅವರು ಹೇಳಿದ್ದಾರೆ.

ಆರೆಸ್ಸೆಸ್‌ ಮುಖವಾಣಿ ಆಗಿರುವ ಪಾಂಚಜನ್ಯ ಪತ್ರಿಕೆಯು, ಇನ್ಫೋಸಿಸ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಒಕ್ಕೂಟ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ನೂತನ ಆದಾಯ ತೆರಿಗೆ ಪೋರ್ಟಲ್‌ಗಳು ಗೊಂದಲಕಾರಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಮಗು ಕನಸು ಕಾಣುವ-ಚಿಂತಿಸುವ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಹೋರಾಟದ ಸುತ್ತ

ಇದು ದೇಶದಾದ್ಯಂತ ಭಾರಿ ಚರ್ಚೆಯನ್ನೂ ಹುಟ್ಟುಹಾಕಿತ್ತು. ಪಾಂಚಜನ್ಯ ತನ್ನ ಸೆ.5ರ ಸಂಚಿಕೆಯಲ್ಲಿ ಈ ಕುರಿತು ಪ್ರಧಾನ ಲೇಖನ ಬರೆದಿದ್ದು, ಮುಖಪುಟದಲ್ಲಿ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಭಾವಚಿತ್ರ ಹಾಗೂ ’ಸಾಖ್‌ ಔರ್‌ ಆಘಾತ್‌’ (ಖ್ಯಾತಿ ಮತ್ತು ಅಘಾತ) ಎಂಬ ಶೀರ್ಷಿಕೆಯನ್ನು ನೀಡಲಾಗಿದೆ ಎಂಬುದಾಗಿ ದಿ ಹಿಂದೂ ವರದಿ ಮಾಡಿದೆ.

ಇನ್ಫೋಸಿಸ್‌ ರೂಪಿಸಿರುವ ಈ ಪೋರ್ಟಲ್‌ಗಳು ಕಳಪೆಯಾಗಿದ್ದು, ತೆರಿಗೆ ಸಂಗ್ರಹವನ್ನು ತಗ್ಗಿಸುವಂತಿವೆ. ವ್ಯವಸ್ಥೆಯನ್ನು ಸುಲಭಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲೆಂದು ಸರ್ಕಾರ ಗುತ್ತಿಗೆ ನೀಡಿದರೆ, ವ್ಯವಸ್ಥೆಯನ್ನೇ ಗೊಂದಲಕಾರಿ ಮಾಡಲಾಗಿದೆ. ಸರ್ಕಾರ ಅನುಸರಿಸುವ ಕಡಿಮೆ ಮಟ್ಟದ ವಾಣಿಜ್ಯ ಹರಾಜು ಪ್ರಕ್ರಿಯೆ ಕುರಿತೂ ಪಾಂಚಜನ್ಯ ಪ್ರಶ್ನೆ ಎತ್ತಿದ್ದು, “ಇನ್ಫೋಸಿಸ್‌ ತನ್ನ ವಿದೇಶಿ ಗ್ರಾಹಕರಿಗೂ ಇದೇ ರೀತಿಯ ಕಳಪೆ ಸೇವೆಯನ್ನೇ ನೀಡುತ್ತದೆಯೇ?” ಎಂದೂ ಪ್ರಶ್ನಿಸಿದೆ.

ಜೊತೆಗೆ, “ಮೋದಿ ಸರ್ಕಾರವನ್ನು ಟೀಕಿಸುವ ಎಡಪಂಥೀಯ ಶಕ್ತಿಗಳಿಗೆ, ಸತ್ಯ ಶೋಧಕ ಸಂಸ್ಥೆಗಳಿಗೆ, ಸುದ್ದಿ ಪೋರ್ಟಲ್‌ಗಳಿಗೆ ಇನ್ಫೋಸಿಸ್‌ ಸಂಸ್ಥೆಯು ಹಣಕಾಸು ಒದಗಿಸುತ್ತಿದೆ” ಎಂದು ಪಾಂಚಜನ್ಯ ಆರೋಪಿಸಿದೆ. ಇನ್ಫೋಸಿಸ್‌ ಇತ್ತ ಸರ್ಕಾರದ ಪೋರ್ಟಲ್‌ ಅನ್ನೂ ನಿರ್ವಹಿಸುತ್ತಿರುವುದು ಪೋರ್ಟಲ್‌ನ ಸುರಕ್ಷತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅದು ಸಂಶಯ ವ್ಯಕ್ತಪಡಿಸಿತ್ತು.

ಈ ನಡುವೆ ಆರೆಸ್ಸೆಸ್‌ ಈ ಲೇಖನದಿಂದ ಅಂತರ ಕಾಯ್ದುಕೊಂಡಿದೆ. ಇದು ವ್ಯಕ್ತಿಗತ ಲೇಖನವಾಗಿದ್ದು, ಇದಕ್ಕೂ ಆರೆಸ್ಸೆಸ್‌ಗೂ ಯಾವುದೆ ಸಂಬಂಧವಿಲ್ಲ ಎಂದು ಅದು ಹೇಳಿದೆ.

ಇದನ್ನೂ ಓದಿ: ಅನಂತ್ ಕುಮಾರ್ ಹೆಗಡೆಯ ಹರಕುಬಾಯಿ, ಜಗ್ಗೇಶ್ ಮಾತಿಗೆ ತಾತ್ಕಾಲಿಕವಾಗಿ ಬಿತ್ತು ಬ್ರೇಕ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here