ಕೊರೊನಾ ಸಾವುಗಳಿಗೆ ಕೊನೆಯಿಲ್ಲವೇ? ಮನಸ್ಸು ಮಾಡಿದರೆ ಜೀವ ಉಳಿಸಬಹುದಲ್ಲವೇ?
PC: Mumbai Mirror

ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಪ್ರತಿದಿನ ಒಂದು ಲಕ್ಷದಷ್ಟು ಹೆಚ್ಚಾಗುತ್ತಲೇ ಇದೆ. ಗುಣಮುಖರಾಗುತ್ತಿರುವವರ ಸಂಖ್ಯೆಯೂ ಸಾಕಷ್ಟಿದೆ ಎಂದು ಸರ್ಕಾರ ವಾದಿಸುತ್ತಿದೆ. ಆದರೆ ಪ್ರತಿದಿನ ಸಾವಿರಕ್ಕೂ ಹೆಚ್ಚು ಜನರ ಸಾವುಗಳಿಗೆ, ಅದರಲ್ಲಿಯೂ ಯುವವಯಸ್ಸಿನವರು ನಿಧನ ಹೊಂದುತ್ತಿರುವುದು ಆತಂಕಕಾರಿ ವಿಚಾರವಾಗಿದೆ.

ಸೋಂಕಿನ ತೀವ್ರತೆಯ ಅರಿವಾಗಿ 6 ತಿಂಗಳು ಕಳೆದಿದ್ದರೂ ಸಹ ಇಂದಿಗೂ ಆಸ್ಪತ್ರೆಯಲ್ಲಿ ಬೆಡ್ ಸಿಗದೆ, ವೆಂಟಿಲೇಟರ್ ಸಿಗದೇ ಪ್ರಾಣ ಬಿಡುತ್ತಿರುವವರ ಸಂಖ್ಯೆಯೇನೂ ಕಮ್ಮಿ ಇಲ್ಲ ಎಂದರೆ, ಈ ಸಾವುಗಳಿಗೆ ಉತ್ತರಿಸುವವರಾರು? ಕೇಂದ್ರ ರಾಜ್ಯ ಸರ್ಕಾರಗಳೆರಡೂ, ಕೊರೊನಾವನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವಾಗಲೂ ಇತ್ತ ಜನರು ತಮ್ಮ ಅಮೂಲ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂತಹ ಪ್ರಕರಣಗಳ ಬೆಳಕು ಚೆಲ್ಲವ ವರದಿ ಇಲ್ಲಿದೆ.

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಕನ್ನಡಪ್ರಭ ಪತ್ರಿಕೆಯ ಕೊರೊನಾ ಸೋಂಕಿತ ವರದಿಗಾರರೊಬ್ಬರಿಗೆ ಸರಿಯಾದ ಚಿಕಿತ್ಸೆ ಸಿಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಕೊರೊನಾ ಪರೀಕ್ಷೆ: ವರದಿ ಬರುವುದು ತಡವಾದಷ್ಟು ಹೆಚ್ಚು ಜನರಿಗೆ ಸೋಂಕು- ವೈದ್ಯರ ಎಚ್ಚರಿಕೆಯ ವಿಡಿಯೋ ವೈರಲ್

“ಕೊರೊನಾ ದೃಢಪಟ್ಟನಂತರ ಪತ್ರಕರ್ತನಿಗೆ ಉಸಿರಾಟದ ತೊಂದರೆ ಉಂಟಾಯಿತು. ಆದರೆ ಕೆ.ಆರ್.ಪೇಟೆಯಲ್ಲಿ ಒಂದೂ ಕೂಡ ವೆಂಟಿಲೇಟರ್ ಇಲ್ಲ. ತಾಲ್ಲೂಕು ಆರೋಗ್ಯ ಅಧಿಕಾರಿಯ ಬಳಿ ಕೂಡಾ ಮಂಡ್ಯ ಜಿಲ್ಲೆಯಲ್ಲಿ ವೆಂಟಿಲೇಟರ್ ಸೌಲಭ್ಯ ಇದೆಯೋ ಇಲ್ಲವೋ ಎಂಬ ಮಾಹಿತಿಯೂ ಇಲ್ಲ. ವಿಷಯ ತಿಳಿದ ನಂತರ ಅವರನ್ನು ಮೈಸೂರಿನ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಎಂದು ತಹಶೀಲ್ದಾರ್ ಹೇಳಿದರು. ಆದರೆ ಅಲ್ಲಿಯೂ ಕೂಡ ಹಾಸಿಗೆಗಳಿಲ್ಲ ಎಂದರು. ನಂತರ ಬೆಂಗಳೂರಿನ ಜಯನಗರದಲ್ಲಿರುವ ಬಿಗ್ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅಲ್ಲಿ ಹಣ ಕಟ್ಟಿದರೆ ಮಾತ್ರ ಚಿಕಿತ್ಸೆ ಆರಂಭಿಸುತ್ತೇವೆ ಎಂದರು. ಅನಂತರ ಆರೋಗ್ಯ ಸಚಿವರಿಂದ ಕರೆ ಮಾಡಿಸಿದರೂ ಸ್ಪಂದಿಸದ ವೈದ್ಯರು, ‘ರಾಜಕಾರಣಿಗಳಿಂದ ಕರೆ ಮಾಡಿಸಿದರೆ ಚಿಕಿತ್ಸೆ ಕೊಡಲಾಗುವುದಿಲ್ಲ, ಮೊದಲು ಹಣ ಕಟ್ಟಿ’ ಎಂದು ತಾಕೀತು ಮಾಡಿದರು. ನಂತರ ಸಾರ್ವಜನಿಕರ ಬಳಿ ಮತ್ತು ಕುಟುಂಬದವರು ಕಷ್ಟಪಟ್ಟು ಹಣ ಹೊಂದಿಸಿ ಕಟ್ಟಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪತ್ರಕರ್ತರು ಮೊನ್ನೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿದ್ದ ಕೆಲವೇ ದಿನಕ್ಕೆ ಸುಮಾರು 6.5 ಲಕ್ಷ ಹಣ ಕಟ್ಟಿಸಿಕೊಂಡಿದ್ದಾರೆ. ಸತ್ತ ನಂತರವೂ ಹಣ ಕಟ್ಟಿ ಎಂದು ಒತ್ತಾಯಿಸಿದ್ದರು” ಇವು ಮೃತ ಸೋಂಕಿತನ ಸ್ನೇಹಿತರೊಬ್ಬರ ನೋವಿನ ನುಡಿಗಳು.

“ಮಂಡ್ಯದಲ್ಲಿ ಎಲ್ಲಾ ಸೌಲಭ್ಯಗಳೂ ಇದೆ. ಯಾವುದೇ ತೊಂದರೆಗಳಿಲ್ಲ ಎಂದು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಿಂದ ಹಿಡಿದು ಸಚಿವರವರೆಗೆ ಎಲ್ಲರೂ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಸೋಂಕಿತರ ಸಂಕಷ್ಟ ಕೇಳುವವರೇ ಇಲ್ಲ. ತಾಲ್ಲೂಕೂ ಕೇಂದ್ರ ಕೆ.ಆರ್ ಪೇಟೆಯಲ್ಲಿ ವೆಂಟಿಲೇಟರ್ ಸೌಲಭ್ಯವಿದ್ದಿದ್ದರೆ ನಾವು ಪತ್ರಕರ್ತನನ್ನು ಉಳಿಸಿಕೊಳ್ಳಬಹುದಿತ್ತು” ಎಂದು ಹೆಸರು ಹೇಳದ ಪ್ರಾಧ್ಯಾಪಕರೊಬ್ಬರು ಹೇಳಿದರು.

ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?

ಮತ್ತೊಂದು ಘಟನೆಯಲ್ಲಿ, “ಮದ್ದೂರಿನ ಎಲ್ಐಸಿಯ ಮ್ಯಾನೇಜರ್ ಡಿ.ಸುರೇಶ್ ಕುಮಾರ್ ಎಂಬುವವರು, ತನಗೆ ಆರೋಗ್ಯ ಸರಿಯಿಲ್ಲವೆಂದು ರಜೆ ಕೇಳಿದರೂ ಸಹ ರಜೆ ನೀಡಿರಲಿಲ್ಲ. ನಂತರ ಆರೋಗ್ಯ ತುಂಬಾ ಹದಗೆಟ್ಟಾಗ, ಸ್ವತಃ ಬೆಂಗಳೂರಿಗೆ ಬಂದು ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಅಷ್ಟರಲ್ಲಾಗಲೆ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿತ್ತು. ಆದರೂ ಕೊರೊನಾ ಪರೀಕ್ಷೆಯ ವರದಿ ಬರದೇ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವರದಿ ಬರಲು 3 ದಿನಗಳಾಗಿದೆ. ಸೋಂಕು ದೃಢಪಟ್ಟ ನಂತರವೂ ಹಾಸಿಗೆಯಿಲ್ಲ ಎಂಬ ನೆಪವೊಡ್ಡಿ ಆಸ್ಪತ್ರೆಗೆ ದಾಖಲು ಮಾಡಿಕೊಂಡಿರಲಿಲ್ಲ. ಹಲವು ಖಾಸಗೀ ಆಸ್ಪತ್ರೆಗಳಿಗೆ ಅಲೆದಾಡಿದರೂ ಹಾಸಿಗೆ ಸಿಕ್ಕಿರಲಿಲ್ಲ. ಕೊನೆಗೂ ಒಂದು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದಾರೆ. ಆದರೆ ಕೇವಲ ಎರಡೇ ದಿನಗಳಲ್ಲಿ ಆತ ಸಾವನ್ನಪ್ಪಿದ್ದಾನೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘ, ಮದ್ದೂರು ತಾಲ್ಲೂಕಿನ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಹೇಳಿದರು.

ಬೆಂಗಳೂರಿನಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಿನ್ನೆ ರಾಜಧಾನಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಆದರೂ ಕೂಡ ಸರ್ಕಾರ ಐಸಿಯು ಮತ್ತು ಐಸಿಯು ವೆಂಟಿಲೇಟರ್‌ಗಳ ಕೊರತೆಯನ್ನು ನೀಗಿಸಲಾಗಿಲ್ಲ.
ಬೆಡ್‌ಗಳ ಕೊರತೆ ಶುರುವಾಗಿ ಐದು ತಿಂಗಳಾದರೂ ಈವರೆಗೆ ಬಿಬಿಎಂಪಿ ಸೂಕ್ತ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: ಕೊರೊನಾ ಲಾಕ್‌ಡೌನ್; ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸುಳ್ಳುಸುದ್ಧಿಗಳೇ ಕಾರಣ: ಕೇಂದ್ರ ಸರ್ಕಾರ

‘ಬೆಡ್ ಇಲ್ಲದ ಕಾರಣ 46 ವರ್ಷದ ಸೋಂಕಿತ ವ್ಯಕ್ತಿ ಬಲಿಯಾಗಿದ್ದಾರೆ. ಆ ರೋಗಿಯನ್ನು ಬೊಮ್ಮನಹಳ್ಳಿಯ ಖಾಸಗಿ ಆಸ್ಪತ್ರೆಗೆ ಸರ್ಕಾರಿ ಕೋಟ ಅಡಿಯಲ್ಲಿ ಕಳುಹಿಸಲಾಗಿತ್ತು. ಆದರೆ, ರಾತ್ರಿ ಅವರ ಪರಿಸ್ಥಿತಿ ಹದಗೆಟ್ಟರೂ ಆಸ್ಪತ್ರೆ ಸಿಬ್ಬಂದಿ ಭಯದಿಂದ ರೋಗಿಯನ್ನು ದೂರವೇ ಇಟ್ಟಿದ್ದಾರೆ. ರೋಗಿಯ ಆಕ್ಸಿಜನ್ ಲೆವೆಲ್ 40% ಗೆ ಇಳಿದಿದ್ದರೂ ಆಸ್ಪತ್ರೆ ಬೆಡ್ ವ್ಯವಸ್ಥೆ ಮಾಡಲಿಲ್ಲ. ಬದಲಾಗಿ ಆಪೊಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದರು. ಆದರೆ ಮಾರ್ಗ ಮಧ್ಯೆಯೇ ರೋಗಿ ಸಾವನ್ನಪ್ಪಿದ್ದಾರೆ’ ಎಂದು ಮರ್ಸಿ ಏಂಜಲ್ಸ್ ಎಂಬ ಎನ್‌ಜಿಒದ ತೌಸೀಫ್ ಅಹ್ಮದ್ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಸರ್ಕಾರದ ಮಾಹಿತಿಯ ಪ್ರಕಾರ, ನಗರದ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ 144 ಐಸಿಯು ವೆಂಟಿಲೇಟರ್ ಹಾಸಿಗೆಗಳಿವೆ. ಜೊತೆಗೆ ಖಾಸಗಿ ಆಸ್ಪತ್ರೆಗಳು ಅಥವಾ ವೈದ್ಯಕೀಯ ಕಾಲೇಜುಗಳಲ್ಲಿ 418 ಹಾಸಿಗೆಗಳಿವೆ. ಆದರೂ ಕೊರೊನಾ ರೋಗಿಗಳಿಗೆ ಮಾತ್ರ ಹಾಸಿಗೆಗಳು ಸಿಗುತ್ತಿಲ್ಲ ಎಂದರೆ ಇದು ಎಂತಹ ನಿರ್ವಹಣೆ?

ಇದು ಕೇವಲ ಕರ್ನಾಟದಕ ಕತೆಯಷ್ಟೇ ಅಲ್ಲ. ಹೈದರಾಬಾದಿನ ಬ್ಯಾಂಕ್ ಉದ್ಯೋಗಿಯೊಬ್ಬರಿಗೂ ಸಹ ಸೋಂಕು ತಗುಲಿದೆ. ಆದರೆ ಅವರಿಗೆ ರಜೆ ಸಿಗದ ಕಾರಣ ಚಿಕಿತ್ಸೆ ತೆಗೆದುಕೊಳ್ಳಲಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಮ್ಮ ಸರ್ಕಾರಗಳು ಈ ವಿಷಯದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳುವುದು ಯಾವಾಗ? ಸ್ವಲ್ಪ ಮುನ್ನೆಚ್ಚರಿಕ್ಕೆ ಕಾಳಜಿ ವಹಿಸಿದ್ದರೆ ಈ ಅನ್ಯಾಯದ ಸಾವುಗಳನ್ನ ತಡೆಗಟ್ಟಬಹುದಿತ್ತಲ್ಲವೇ? ಈ ಸಾವುಗಳಿಗೆ ಯಾರು ಹೊಣೆ?


ಇದನ್ನೂ ಓದಿ: ಕೊರೊನಾ ಕಾಲದಲ್ಲೂ ನಿಲ್ಲದ ಸುಲಿಗೆ; ಖಾಸಗಿ ಶಾಲೆಗಳಲ್ಲಿ ‘ಕೋವಿಡ್ ಫೀಸ್’ ವಸೂಲಿ ಆರಂಭ

LEAVE A REPLY

Please enter your comment!
Please enter your name here