Homeಚಳವಳಿಚಳುವಳಿಯನ್ನು ಹೃದಯದ ಭಾಷೆಯಲ್ಲಿ ಮಂಡಿಸುವ 'ಕದನ ಕಣ'

ಚಳುವಳಿಯನ್ನು ಹೃದಯದ ಭಾಷೆಯಲ್ಲಿ ಮಂಡಿಸುವ ‘ಕದನ ಕಣ’

- Advertisement -
- Advertisement -

ಕಳೆದ ವರ್ಷ ಅಂದರೆ 2020 ರ ಸೆಪ್ಟೆಂಬರ್ 17 ರಂದು ಕೇಂದ್ರ ಸರ್ಕಾರ ಮೂರು ಅನಾಹುತಕಾರೀ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಇದರ ವಿರುದ್ಧ 2020 ನವೆಂಬರ್ 26 ರಂದು ರೈತ ಒಕ್ಕೂಟಗಳು ದೆಹಲಿ ಗಡಿಗಳಲ್ಲಿ ಬೃಹತ್ ಹೋರಾಟ ಆರಂಭಿಸಿದ್ದರು. ರೈತ ಹೋರಾಟಕ್ಕೆ 2021 ನವೆಂಬರ್ 26 ಕ್ಕೆ ಒಂದು ವರ್ಷ ಅವಧಿ ತುಂಬುತ್ತಿತ್ತು, ಅದಕ್ಕಿಂತ ಒಂದು ವಾರ ಮೊದಲೇ ಅಂದರೆ ನವೆಂಬರ್ 19 ರಂದು ರಾಷ್ಟ್ರೀಯ ಭಾಷಣದಲ್ಲಿ ಪ್ರಧಾನಿಯವರು, ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಿದೆ ಎಂದು ಘೋಷಿಸಿದರು. ಕೃಷಿ ಭೂಮಿಯ ಖಾಸಗೀಕರಣವು ಭಾರತದಂಥ ಅಭಿವೃದ್ಧಿಶೀಲ ದೇಶದಲ್ಲಿ ಉಂಟು ಮಾಡಬಹುದಾದ ದುಷ್ಪರಿಣಾಮಗಳ ಬಗ್ಗೆ ಎಲ್ಲೆಡೆಯೂ ಚರ್ಚೆ ನಡೆಯುತ್ತಿದ್ದ ಸಮಯದಲ್ಲೇ, ರಾಜ್ಯ ಸಭೆ, ಲೋಕಸಭೆ, ರೈತರು, ಕೃಷಿ ತಜ್ಞರು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಯಾವುದೇ ಮುಕ್ತವಾದ ಚರ್ಚೆ ಮಾಡದೇ, ಮಂಡಿಸಿದ ಈ ಮೂರು ಕಾನೂನುಗಳು ರೈತರಿಗೂ ಕೃಷಿಗೂ ಆ ಮೂಲಕ ದೇಶಕ್ಕೂ ಮಾರಕವಾದದ್ದಾಗಿತ್ತು.

ಈ ಸುಸಂದರ್ಭದಲ್ಲಿ ರೈತ ಹೋರಾಟಗಾರ ಎಚ್ ಆರ್ ನವೀನ್ ಕುಮಾರ್ ಬರೆದ ಈ ‘ಕದನ ಕಣ’ ಕೃತಿಯ ಓದು ತುಂಬ ಮಹತ್ವದ್ದು ಅನ್ನಿಸಿದೆ. ದೆಹಲಿಯ ಗಡಿಗಳಲ್ಲಿ ಹೋರಾಟ ನಿರತ ರೈತರೊಂದಿಗಿನ ಒಂದು ವಾರ ಕಾಲದ ಪ್ರತ್ಯಕ್ಷದರ್ಶಿ ಅನುಭವವನ್ನು ಕಾಣಿಸುವ ಕೃತಿಯಿದು. ‘ಕರ್ನಾಟಕ ಪ್ರಾಂತ ರೈತ ಸಂಘ’ವನ್ನು ಪ್ರತಿನಿಧಿಸಿ, ನವೀನ್ ಕುಮಾರ್ ತಮ್ಮ ಗೆಳೆಯ ಜಗದೀಶ ಸೂರ್ಯರೊಡಗೂಡಿ ಆಂದೋಲನದಲ್ಲಿ ಭಾಗವಹಿಸಿದ ಕಥನವನ್ನು ಈ ‘ಕದನ ಕಣ’ ಒಳಗೊಂಡಿದೆ. ಓದಿ ಮುಗಿದ ನಂತರ ‘ಈ ಕೃತಿ ಚಳುವಳಿಯನ್ನು ಹೃದಯದ ಭಾಷೆಯಲ್ಲಿ ಮಂಡಿಸುತ್ತದೆ’ ಎನ್ನುವ ಬಿಳಿಮಲೆಯವರ ಇಲ್ಲಿಯ ಮಾತು ತುಂಬ ಸೂಕ್ತವಾದದ್ದು ಅನ್ನಿಸಿತು.

ಎಚ್ ಆರ್ ನವೀನ್ ಕುಮಾರ್

ದೆಹಲಿಯ ಸಿಂಘು ಗಡಿಯಲ್ಲಿ ನವೀನರೊಂದಿಗೆ ಹೆಜ್ಜೆ ಹಾಕಿದ, ದೆಹಲಿಯಲ್ಲಿಯೇ ಇದ್ದು ರೈತ ಚಳುವಳಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ ಚಿಂತಕ ಪುರುಷೋತ್ತಮ ಬಿಳಿಮಲೆಯವರು ಇಲ್ಲಿ ಅರ್ಥಪೂರ್ಣ ಮುನ್ನುಡಿ ಬರೆಯುತ್ತಲೇ ಮೂರು ರೈತ ವಿರೋಧಿ ಕಾಯಿದೆಯ ಕುರಿತು ಸವಿವರವಾಗಿ ವಿಶ್ಲೇಷಿಸಿದ್ದಾರೆ. ಅವರು ವಿಂಗಡಿಸಿದಂತೆ ಈ ರೈತ ವಿರೋಧಿ ಕಾನೂನುಗಳು ಯಾವುವೆಂದರೆ, ಮೊದಲನೆಯದು- ಎ.ಪಿ.ಎಂ.ಸಿಗಳನ್ನು ಸ್ಥಗಿತಗೊಳಿಸುವ ಗುಣ ಹೊಂದಿದ ‘ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಕಾನೂನು’ ಎರಡನೆಯದು- ಎಜೆಂಟರು ಯಾವುದೇ ಕಾನೂನು ಕ್ರಮದ ಭಯವಿಲ್ಲದೇ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡಲು ಅವಕಾಶ ಮಾಡಿಕೊಡುವ ಹಾಗೂ ರೈತನಿಗೆ ಅನ್ಯಾಯವಾದರೆ, ಆತ ನ್ಯಾಯಾಲಯಕ್ಕೆ ಹೋಗದಂತೆಯೂ ತಡೆಯುವ ‘ಅಗತ್ಯ ವಸ್ತುಗಳ ಸುಗ್ರೀವಾಜ್ಞೆ ಕಾಯ್ದೆ’ ಮೂರನೆಯದು- ಕಾರ್ಪೋರೇಟ್ ಕಂಪನಿಗಳು ಕೃಷಿಗೆ ಪ್ರವೇಶಿಸಲು ಒಂದು ಚೌಕಟ್ಟನ್ನು ಒದಗಿಸುವ ‘ರೈತರ ಬೆಲೆಗಳ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ’ ಇವೆಲ್ಲವೂ ಪರೋಕ್ಷವಾಗಿ ತಮ್ಮದೇ ಜಮೀನಿಗೆ ರೈತರು ತಾವೇ ಕೂಲಿಯಾಳುಗಳಾಗುವಂತೆ ಮಾಡುತ್ತದೆ. ಕ್ಷಿಪ್ರ ಹಣ ಮಾಡುವ ಆತುರದಲ್ಲಿ ಕಾರ್ಪೋರೇಟ್ ಕಂಪನಿಗಳು ಹೆಚ್ಚು ಉತ್ಪಾದಿಸಲು ಬಗೆಬಗೆಯ ರಸಾಯನಿಕಗಳನ್ನು ಬಳಸಿ, ಭೂಮಿಯನ್ನು ಬಂಜರುಗೊಳಿಸುತ್ತದೆ. ಪಂಜಾಬ, ಹರಿಯಾಣಾಗಳಲ್ಲಿ ಈಗ ಆದದ್ದು ಇದುವೇ. ಹಾಗಾಗಿ ಅಲ್ಲಿಯ ರೈತರು ಎಚ್ಚೆತ್ತಿದ್ದಾರೆ. ಆದರೆ ಉಳಿದವರಿಗೆ ಆ ಅಪಾಯದ ಅರಿವಿದ್ದಂತಿಲ್ಲ ಎಂಬ ಅಭಿಪ್ರಾಯವನ್ನು ಚಿಂತಕ ಬಿಳಿಮಲೆಯವರು ವ್ಯಕ್ತಪಡಿಸಿದ್ದಾರೆ. ಇವೆಲ್ಲ ಕೃಷಿಯನ್ನು ಪ್ರೀತಿಸುವ ಯಾರಿಗಾದರೂ ಮೈ ಉರಿಯುವ ಸಂಗತಿಗಳೇ.

ತಮ್ಮದೇ ದೇಶದ ರಾಜಧಾನಿಗೆ ಪ್ರವೇಶ ನಿರಾಕರಿಸಲ್ಪಟ್ಟ ರೈತರು ಅದರ ಗಡಿಗಳಿಂದಲೇ ಅದಕ್ಕೆ ಸವಾಲು ಹಾಕಿರುವ ‘ಒಂದು ಐತಿಹಾಸಿಕ ಚಳುವಳಿ ಮೂಡಿ ಬಂದ ಮತ್ತು ಅಚ್ಚುಕಟ್ಟಾಗಿ ದೀರ್ಘಕಾಲ ನಡೆಯುತ್ತಿರುವುದರ ಹಿಂದಿನ ಸಂಗತಿಗಳನ್ನು ಹುಡುಕುವ ಪ್ರಯತ್ನವಿದು’ ಎನ್ನುವ ಲೇಖಕ ನವೀನ್ ಕುಮಾರ್ ಇಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಸಂಘಟನೆಗಳ ನೇತೃತ್ವವಿದ್ದುದನ್ನು ಸ್ಮರಿಸುತ್ತಾರೆ. ಸರಕಾರವೇ ಭಯಬೀಳುವಷ್ಟು ರೈತ ಟ್ರ್ಯಾಕ್ಟರ್‌ಗಳ ಸಂಖ್ಯೆ, 22 ಕೀಮೀ ಉದ್ದಕ್ಕೆ 60 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಬೀಡು ಬಿಟ್ಟಿದ್ದ ಸಿಂಘು ಗಡಿ, ‘ಘರ್ ವಾಪಸಿ’ ಎಂಬ ಸುಪ್ರಿಂ ಕೋರ್ಟ ಮಾತಿಗೆ ಕಿವಿಗೊಡದೇ, ಕೊವಿಡ್‌ನಂತಹ ಪ್ರಕೃತಿ ಮತ್ತು ತಡೆಗೋಡೆಯಂತಹ ಪ್ರಭುತ್ವ ನಿರ್ಮಿತ ಸವಾಲುಗಳನ್ನು ಮೀರಿ ಮುನ್ನಡೆದ ಚಳುವಳಿ, ದೆಹಲಿಯ ಒಳ ನುಗ್ಗದಂತೆ ಗಡಿಗಳಲ್ಲಿ ಅನ್ನದಾತನ ಎದೆಗೆ ಗುರಿ ಮಾಡಿದ್ದ ಬಂದೂಕು ಲಾಠಿ ಜಲಫಿರಂಗಿ, ಸಿಆರ್‌ಪಿಎಫ್ ವಾಹನಗಳ ಜೊತೆ ಟಿಯರ್ ಶೆಲ್ಸ್, ಪೊಲೀಸರು ಮತ್ತು ಪ್ಯಾರ ಮಿಲಿಟರಿ ಪಡೆ,. ಹೀಗೆ ಎಷ್ಟೆಲ್ಲ ವಿಷಯಗಳು ಇಲ್ಲಿವೆ.

ರೈತರು ಸಂಪೂರ್ಣ ತಮ್ಮ ವಶಕ್ಕೆ ಪಡೆದಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ, ರಸ್ತೆಗಳ ಮೇಲೆ ನಿಲ್ಲಿಸಿದ ಟ್ರ್ಯಾಕ್ಟರ್‌ಗಳಲ್ಲೇ ರೂಪಿಸಿಕೊಂಡ ಮನೆಗಳು, ಚಳುವಳಿಯನ್ನು ಒಂದು ಜಾತ್ರಾ ಮಹೋತ್ಸವದಂತೆ ಸಂಭ್ರಮಿಸುವ ರೈತರು, ಸ್ವಯಂ ಸೇವಕರು ಸೇವೆಯ ಹೆಸರಿನಲ್ಲಿ ಮಾಡುತ್ತಿದ್ದ, ನಿರಂತರ ದಾಸೋಹಕ್ಕಾಗಿ ಲೆಕ್ಕವಿಲ್ಲದಷ್ಟು ಅಡುಗೆ ಮನೆಗಳು, ಆರೋಗ್ಯ ಚಿಕಿತ್ಸಾ ಕೇಂದ್ರಗಳು, ಮೆಡಿಕಲ್ ಶಾಪ್, ಟೀ ಸ್ಟಾಲ್, ಪಾಯಸದ ಸ್ಟಾಲ್, ಬಟ್ಟೆಗಳನ್ನು ತೊಳೆದುಕೊಡುವ ಲಾಂಡ್ರಿಗಳು, ಅಲ್ಲಲ್ಲಿ ಪುಸ್ತಕದಂಗಡಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಪ್ರವಚನಗಳು, ದಿಲ್ಲಿ ರಾಜ್ಯ ಸರ್ಕಾರ ಕಳುಹಿಸಿದ ಶೌಚಾಲಯದ ನೂರಾರು ಗಾಡಿಗಳು, ಕಾರಿನ ಎದುರು ರಾಜಕಾರಣಿಗಳ ಪ್ರತಿಕೃತಿ ಮಾಡಿ ಅವರ ಕರಾಳ ಮುಖಗಳ ಗುಣಗಾನ ಮಾಡುತ್ತಿದ್ದ ಕಾರನ್ನೇ ಮನೆಯನ್ನಾಗಿ ಮಾಡಿಕೊಂಡ ವ್ಯಕ್ತಿಗಳು, ಬೆದರುಗೊಂಬೆಗಳಿಗೆ ಮಸಿಬಳಿದು ಹಲವು ರಾಜಕಾರಣಿಗಳ ಭಾವಚಿತ್ರಗಳನ್ನು ನೇತು ಹಾಕಿದ್ದ ಮೊಹಾಲಿಯಾ ಹಿರಿಯ ಹರ್ಬಿಂದರ್ ಸಿಂಗ್,. ಹೀಗೆ ಅಲ್ಲಿಯ ವಿವರಣೆಗಳು ಓದುಗರ ಮೈದುಂಬುತ್ತ ಹೋಗುತ್ತವೆ.

ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್‌ರಿಂದ ಲೇಖಕರು ಪಡೆದ ಮಾಹಿತಿಯ ಪ್ರಕಾರ, ಈ ಪ್ರತಿಭಟನೆ ಆರಂಭವಾದಾಗಿನಿಂದ ದೇಶಾದ್ಯಂತ ವ್ಯಾಪಕ ಸಹಾಯದ ನೆರವು ಹರಿದು ಬರುತ್ತಿರುವುದರ, ದೆಹಲಿಯ ಸುತ್ತಲಿನ ಪ್ರದೇಶದ ರೈತರು ತಾವು ಬೆಳೆದ ತರಕಾರಿ, ಹಾಲು ಗೋದಿ ಅಕ್ಕಿ ಅಷ್ಟೇ ಅಲ್ಲದೇ ಹಾಸಿಗೆ ಹೊದಿಕೆಗಳನ್ನೂ ಕೂಡ ಕೊಡುಗೆಯಾಗಿ ನೀಡುತ್ತಿದ್ದುದರ, ಉಳಿದ ಅಗತ್ಯತೆಗಳನ್ನು ಸಂಘಟನೆಗಳು ಪೂರೈಸುತ್ತಿರುವುದರ ಕುರಿತು ತಿಳಿದಾಗ ನಮ್ಮಲ್ಲಿಯೂ ಹೋರಾಟದ ಕಿಡಿಗಳು ಜಾಗ್ರತಗೊಳ್ಳದೇ ಇರಲಾರವು. ಅಷ್ಟಲ್ಲದೇ ಸಿಖ್ ಸಮುದಾಯದ ಗುರುದ್ವಾರದ ಲಂಗರ್‌ಗಳಲ್ಲಿ ಸೇರಿದ ದಾಸೋಹದ ಆಹಾರ ಧಾನ್ಯ ಸಂಗ್ರಹ ಇನ್ನೂ ಮುಂದಿನ ಆರು ತಿಂಗಳಿಗಾಗುವಷ್ಟಿತ್ತು ಎಂಬುದನ್ನು ಗಮನಿಸಿದಾಗ, ಕೇಂದ್ರವು ಈ ಕಾಯ್ದೆಗಳನ್ನು ಹಿಂತೆಗೆದುಕೊಳ್ಳದಿದ್ದಲ್ಲಿ ರೈತರ ಹೋರಾಟ ಇನ್ನೂ ಮುಂದುವರೆಯುತ್ತಿತ್ತು ಎಂಬುದನ್ನು ತೋರುತ್ತದೆ. ನೂರಾರು ಜನರು ಎದುರಿಗೆ ಕುಳಿತು ಕೇಳುವ ವೇದಿಕೆಯ ಮಹಿಳೆಯೊಬ್ಬರು ಆಡಿದ ‘ಇಲ್ಲಿ ಪ್ರಧಾನಿಗಳು ರಾಷ್ಟ್ರಪತಿಗಳು ಎಷ್ಟು ಜನ ಬೇಕಾದರೂ ಬಂದು ಹೋಗಬಹುದು, ಆದರೆ ದೇಶ ಮಾತ್ರ ಒಂದೇ. ಅದು ಹಾಗೇ ಇರುತ್ತದೆ. ಆ ದೇಶಕ್ಕಾಗಿ ನಮ್ಮ ಹೋರಾಟ’ ಎಂಬ ಅರಿವಿನ ಮಾತುಗಳು ರೈತರಲ್ಲಿ ಆತ್ಮವಿಶ್ವಾಸ ತುಂಬುವಂಥದ್ದು.

ಬಿಲ್ ಪಾವತಿಸಿಯೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದ ಪ್ರತಿಯೊಂದು ಟೆಂಟ್‌ಗಳ ಒಳಗೂ ಮೊಬೈಲ್ ಚಾರ್ಜರ್ ಪಾಯಿಂಟ್‌ಗಳು, ಪ್ರತಿಭಟನಕಾರರಿಗೆ ಸರಬರಾಜಾಗುತ್ತಿದ್ದ ಶೂಸ್, ಕಾಲುಚೀಲಗಳು, ಪೇಸ್ಟ್, ಬಟ್ಟೆ ಸೋಪು, ಮೈಸೋಪು, ಮಹಿಳೆಯರ ಸ್ಯಾನಿಟರಿ ಪ್ಯಾಡ್‌ಗಳು, ಟೋಪಿ, ಬ್ಲಾಂಕೆಟ್, ಒಳ ಉಡುಪುಗಳನ್ನು ಶಿಸ್ತುಬದ್ಧ ಸರದಿ ಸಾಲಿನಲ್ಲಿ ನಿಂತು ಪಡೆಯುತ್ತಿದ್ದ ರೈತರ ಚಿತ್ರ, ಬೆಳಗಿನ ಹೊತ್ತು ಟೆಂಟ್ ಎದುರು ಬೆಂಕಿ ನಿರ್ಮಿಸಿಕೊಂಡು ಚಳಿ ಕಾಯಿಸುತ್ತ ಪ್ರತಿಯೊಬ್ಬರೂ ಪತ್ರಿಕೆ ಓದುತ್ತ ಹಿಂದಿನ ದಿನದ ಸುದ್ದಿಗಳನ್ನು ಓದಿ, ವಿಚಾರ ವಿನಿಮಯ ನಡೆಸುವ ಚಳುವಳಿಕಾರರ ಬದ್ಧತೆ, ಅಲ್ಲಲ್ಲಿ ರೈತರ ಉಪವಾಸ ಸತ್ಯಾಗ್ರಹ, ಪಂಜಿನ ಮೆರವಣಿಗೆ, ಟ್ರ್ಯಾಕ್ಟರ್‌ ರ‍್ಯಾಲಿ ಮತ್ತು ರೈತರ ಪರೇಡ್, ರೈತರ ಸಮಸ್ಯೆ ಬಿಂಬಿಸುವ ಸ್ಥಬ್ದ ಚಿತ್ರ, ಮಾನವ ಸರಪಳಿಯಂತಹ ದಿನಕ್ಕೊಂದು ಸಂಘಟನೆಗಳ ವಿನೂತನ ಮಾದರಿಯ ಪ್ರತಿಭಟನೆಗಳಲ್ಲದೇ ಹುತಾತ್ಮರಾದ ರೈತರಿಗೆ ಗೌರವ ಸಲ್ಲಿಕೆಯ ಕಾರ್ಯಕ್ರಮವೂ ಅಲ್ಲಿ ನಡೆದಿದ್ದ ವಿವರಗಳನ್ನು ಲೇಖಕರು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಚಳುವಳಿಕಾರರು ಹೋರಾಟದ ಸಂದರ್ಭದಲ್ಲಿ ತಮ್ಮ ಮನೆಯ ಮಕ್ಕಳನ್ನೂ ಕರೆತರುವ ಕುರಿತು ಲೇಖಕರು ಪ್ರಶ್ನಿಸಿದಾಗ, ರೈತ ಚಳುವಳಿಗಳ ಕುರಿತು ಮಕ್ಕಳಲ್ಲಿ ಸರಿಯಾದ ತಿಳಿವಳಿಕೆ ಮೂಡಿಸಲು, ಇಂಥ ಚಳುವಳಿಗಳನ್ನು ಭವಿಷ್ಯದಲ್ಲಿ ಅವರು ಮುಂದುವರೆಸಿಕೊಂಡು ಹೋಗುವ ಸ್ಪೂರ್ತಿಗಾಗಿ, ಮತ್ತು ಇವೆಲ್ಲ ಒಂದು ಹೆಮ್ಮೆಯ ಸಂಗತಿ ಎಂದು ಮನದಟ್ಟು ಮಾಡಿಸಲು ಕರೆತರುತ್ತೇವೆ ಎಂಬ ರೈತರು ಕೊಟ್ಟ ಉತ್ತರಗಳು ನಮಗೆಲ್ಲ ಒಂದು ಮಾದರಿಯಾಗಬೇಕಿದೆ. ಜಾತಿ ಮತ ಭೇದವಿಲ್ಲದೇ ಪರಸ್ಪರ ಕೈಜೋಡಿಸಿದ ಉದಾಹರಣೆಯೆಂದರೆ, ರಾಜಸ್ಥಾನದ ಮುಸ್ಲಿಂ ಸಮುದಾಯದ ಸಂಘಟನೆಯೊಂದು ಚಳುವಳಿ ನಿರತರಿಗೆ ನಿರಂತರವಾಗಿ ಹಣ್ಣು ಊಟ ತಿಂಡಿ ಚಹ ಒದಗಿಸುವ ಮೂಲಕ ಕದನ ಕಣವನ್ನು ಒಂದು ಸೌಹಾರ್ದತೆಯ ಬೀಡಾಗಿಸಿರುವುದು, ‘ಕರ್ನಾಟಕದ ಮಿಡಿಯಾದವರು ತಮ್ಮ ಬಗ್ಗೆ ಸುದ್ದಿ ಮಾಡುತ್ತಿವೆಯೇ?’ ಎಂದು ಹೋರಾಟ ನಿರತ ರೈತರು ಕೇಳಿದ ಮುಗ್ಧ ಪ್ರಶ್ನೆಯೂ ಅಷ್ಟೇ ಆಪ್ತವಾಗಿದೆ. ಮಾಧ್ಯಮಗಳು ಸರ್ಕಾರದ ಪರ ಇದ್ದುಬಿಟ್ಟರೆ ಪ್ರಜಾಪ್ರಭುತ್ವದ ಆಶಯಗಳನ್ನು ಕಾಪಾಡುವವರು ಯಾರು ? ಅವು ವಿರೋಧ ಪಕ್ಷದ ಕೆಲಸ ಮಾಡಬೇಕಿತ್ತಲ್ಲವೇ? ಎಂಬಂತಹ ಕಟು ವಾಸ್ತವದ ಪ್ರಶ್ನೆಯನ್ನು ನವೀನ್ ಇಲ್ಲಿ ಎತ್ತುತ್ತಾರೆ. ರೈತ ಬಾಂಧವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವವರ ಮೇಲೆ ಪ್ರಭುತ್ವ ದಾಖಲಿಸಿದ ವಿನಾಕಾರಣ ಮೊಕದ್ದಮೆಯ ಕುರಿತೂ ಇಲ್ಲಿ ಪ್ರಸ್ತಾಪವಿದೆ.

ಆದರೆ ಹೋರಾಟದ ಯಶಸ್ಸಿಗೆ ಹಲವು ಕಾರಣಗಳು.. ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ರೈತರ ಜೊತೆ ಇಪ್ಪತ್ತು ಮಾಜಿ ಸೈನಿಕರು ಕೂಡ ಆಸಕ್ತಿಯಿಂದ ಪಾಲ್ಗೊಂಡಿದ್ದದಲ್ಲದೇ, ಚಳುವಳಿಗೆ ಬಲ ಒದಗಿ ಬರುವಂತೆ ಸಂಘಟನೆಗಳ ಎಲ್ಲ ಮುಖಂಡರೂ ಸಹ ಯಾವುದೇ ಮೆಲುಕೀಳಿನ ಭಾವನೆಗಳಿಲ್ಲದೇ ಸಾಮಾನ್ಯರಂತೆಯೇ ಎಲ್ಲ ರೈತರೊಂದಿಗೇ ಉಳಿದುಕೊಳ್ಳುತ್ತಿದ್ದುದು, ತಮ್ಮಲ್ಲಿಯ ಒಗ್ಗಟ್ಟು ಮುರಿಯದ ಹಾಗೆ ಪ್ರತಿಭಟನಾಕರರು ಸುಳ್ಳು ಸುದ್ದಿ ಬಿತ್ತರಿಸುವ ಟೀವಿಗಳನ್ನು ವೀಕ್ಷಿಸದೇ ಇದ್ದುದು, ದೆಹಲಿ ಗಡಿಯಿಂದ ಈಚೆಗೆ ಸಾಸಿವೆ ನೆಲಗಡಲೆ ಬೆಳೆದು ಸ್ವಲ್ಪ ದಿನಗಳ ಕಾಲ ಚಳುವಳಿಯಲ್ಲಿ ಭಾಗವಹಿಸಿ ಪುನಃ ಮರಳಿ ತಮ್ಮ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುವ ರೈತರು, ಎಲ್ಲೆಡೆ ಐ ಲವ್ ಖೇತಿ (ನಾನು ಕೃಷಿಯನ್ನು ಪ್ರೀತಿಸುತ್ತೇನೆ) ಘೋಷವಾಕ್ಯದೊಂದಿಗೆ ಶಾಂತಿಯುತವಾಗಿ ಮುನ್ನುಗ್ಗುವ ರೈತರು. ರೈತ ವಿರೋಧಿ ಕೃಷಿ ಕಾಯ್ದೆಗಳ ಪ್ರತಿಗಳನ್ನು ಸಂಕ್ರಾಂತಿಯ ದಿನ ಬೆಂಕಿಯಲ್ಲಿ ಸುಟ್ಟು ಮಾಡಿದ ಪ್ರತಿಭಟನೆ, ‘ಕೃಷಿ ಉಳಿಸಿ ಪ್ರಜಾಪ್ರಭುತ್ವ ಉಳಿಸಿ’ ದಿನ, ‘ನಾವು ದೇಶದ ಗಡಿಗಳನ್ನು ಕಾಯುತ್ತೇವೆ, ರೈತರು ದೇಶದ ಒಳಗೆ ಕಾಯುತ್ತಾರೆ, ರೈತರು ಸಂಕಷ್ಟದಲ್ಲಿರುವಾಗ ನಾವು ಗಡಿ ಕಾಯುವುದು ವ್ಯರ್ಥ’ ಎನ್ನುವ ರಾಜಸ್ಥಾನದ ಸಿಕಾರ್ ಜಿಲ್ಲೆಯ ಅಮರ್‌ಜಿತ್ ಸಿಂಗ್ ಎಂಬ ಮಾಜಿ ಸೈನಿಕರ ಕಳಕಳಿ, ಒಂದೇ ಎರಡೇ ಬರೆಯ ತೊಡಗಿದರೆ ಇಂಥವೇ ಹಲವು ಸಂಗತಿಗಳನ್ನು ಲೇಖಕ ನವೀನ್ ಕುಮಾರ್ ಆಪ್ಯಾಯಮಾನವಾಗಿ ತೆರೆದಿಡುತ್ತಾರೆ.

ದೆಹಲಿಯನ್ನು ಪ್ರವೇಶಿಸದ ಹಾಗೆ ನಿರ್ಮಿಸಿದ ತಡೆಗೋಡೆಯ ಕುರಿತು ರೈತರು ‘ಮನುಷ್ಯರೇ ಕಟ್ಟಿದ ತಡೆಗೋಡೆ ದಾಟುವುದು ನಮಗೇನೂ ಕಷ್ಟವಲ್ಲ, ಆದರೆ ನಾವು ಶಾಂತಿಗೆ ಭಂಗ ತರುವುದಿಲ್ಲ’ ಎನ್ನುತ್ತಿದ್ದುದು ಅವರ ಅಗಾದ ಸಹನೆಯನ್ನು ಬಿಂಬಿಸುತ್ತಿದೆ. ಈ ಹೋರಾಟವು ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿಕೊಟ್ಟಿದೆ ಆದರೆ ‘ಚಳುವಳಿ ನಿರತ ರೈತರಿಗೆ ನಮ್ಮೂರಿನಿಂದ ಹಾಲು ಒದಗಿಸುತ್ತೇವೆ’ ಎಂದು ಹೇಳಿದ ಅಲ್ಲಿಯ ಯುವಕನೊಬ್ಬ ಕೇಳಿದ ಕೊನೆಯ ಪ್ರಶ್ನೆಯೊಂದು ಇಲ್ಲಿ ತುಂಬ ಚಿಂತನೆಗೆ ಹಚ್ಚುವಂತಿದೆ, ‘ಒಂದು ವೇಳೆ ಈ ಕಾನೂನುಗಳು ರದ್ದಾದರೆ ರೈತರ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆಯಾ?’ ಆ ಪ್ರಶ್ನೆಗೆ ಅನುಗುಣವಾಗಿ ಲೇಖಕರು ‘ರೈತ ಪರವಾದ ಪರ್ಯಾಯ ಕೃಷಿ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ’ ಎನ್ನುತ್ತಾರೆ. ಇದು ಇನ್ನೊಂದೇ ಆದ ರೈತ ಪಯಣದ ದಾರಿ.

ಆದರೆ ಭಾರತ ಸ್ವಾತಂತ್ರ್ಯಾನಂತರ ಇತಿಹಾಸದಲ್ಲಿ ಇಷ್ಟು ದೀರ್ಘ ಮತ್ತು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ ರೈತ ಚಳುವಳಿಯನ್ನು ಈ ದೇಶ ಕಂಡಿರಲಿಲ್ಲ. ಕೇವಲ ಮನವಿ ಪತ್ರಗಳಿಗೆ ಹೋರಾಟವು ಸೀಮಿತವಾಗಿರುವ ಈ ಸಂದರ್ಭದಲ್ಲಿ ಚಳುವಳಿಗಳನ್ನು ಹೀಗೆ ನಡೆಸಿದರೆ, ಆಳುವ ವರ್ಗವನ್ನು ಮಣಿಸಲು ಸಾಧ್ಯ. ಎಂಬುದನ್ನು ಈ ಹೋರಾಟವು ಜಗತ್ತಿಗೆ ತೋರಿಸಿಕೊಟ್ಟಿದೆ. ಇಲ್ಲಿ ಹರಿಯಾಣ, ಪಂಜಾಬ, ರಾಜಸ್ಥಾನ, ಓಡಿಸ್ಸಾ, ಕೇರಳ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಮತ್ತು ಕರ್ನಾಟಕ ರಾಜ್ಯಗಳಿಂದ ರೈತರು ಕೂಲಿಕಾರರು ವಿದ್ಯಾರ್ಥಿಗಳು ಯುವ ಜನರು ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಇದು ಉತ್ತರ ಭಾರತದ ರೈತರ ಪ್ರತಿಭಟನೆ ಮಾತ್ರವಲ್ಲ ಇಡೀ ದೇಶದ ರೈತರ ಪ್ರತಿಭಟನೆಯೇ ಆಗಿತ್ತು ಎನ್ನುತ್ತಾರೆ ನವೀನ್.

ದೆಹಲಿ
PC: yahoo

ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಚಳುವಳಿಯಲ್ಲಿ ಮಡಿದ ರೈತರ ಗ್ರಾಮಗಳಿಂದ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ರೈತ ಹೋರಾಟದ ಸ್ಥಳಗಳಿಂದ ಸಂಗ್ರಹಿಸಿದ ಮಣ್ಣಿನಿಂದ ಗಡಿಗೆಗಳ ಕಲಾಕೃತಿಯನ್ನು ಸಿದ್ಧಪಡಿಸಿ ಶಹಜಹಾಂಪುರ ಗಡಿಯಲ್ಲಿ ರೈತರ ಹುತಾತ್ಮ ಸ್ಮಾರಕವನ್ನು ನಿರ್ಮಿಸಲಾಗಿದೆ. ಅದರಲ್ಲಿ ನಮ್ಮ ಕರ್ನಾಟಕದ ಕಾಗೋಡು ಮತ್ತು ನರಗುಂದದ ಮಣ್ಣುಗಳೂ ಸೇರ್ಪಡೆಯಾಗಿವೆ. ಅಂಥದೊಂದು ಭಾವಪೂರ್ಣ ಚಿತ್ರವೂ ಕೃತಿಯ ಮೊದಲ ಪಟದಲ್ಲೇ ನಮಗೆ ಸಿಗುತ್ತದೆ. ಕೃತಿಯುದ್ದಕ್ಕೂ ನೂರಾರು ಮನಮಿಡಿಯುವ ಹೋರಾಟದ ಭಾವಚಿತ್ರಗಳನ್ನು ನಾವು ಕಾಣಬಹುದು. ದೇಶ-ವಿದೇಶದ ಮಾಧ್ಯಮಗಳು ಈ ರೈತ ಚಳುವಳಿಯನ್ನು ‘ಕಿಸಾನ್ ಕಮ್ಯೂನ್’ ಎಂದು ವರ್ಣಿಸಿದೆ. ಅಂತರಾಷ್ಟ್ರೀಯ ಖ್ಯಾತಿಯ ಭಾಷಾ ಶಾಸ್ತ್ರಜ್ಞ ನೋಮ್ ಚೋಮ್ಸ್ಕಿ ‘ಕಾರ್ಗತ್ತಲ ಸಮಯದಲ್ಲಿ ಒಂದು ಆಶಾಕಿರಣ’ ಎಂದು ಪ್ರಶಂಸಿದ್ದನ್ನು ಕೂಡ ನಾವಿಲ್ಲಿ ನೆನೆಯಬಹುದು,

ರೈತರ ಕದನ ಕಣಗಳಾಗಿದ್ದ ಸಿಂಘು ಟಿಕ್ರಿ ಫಲ್ವಲ್ ಮುಂತಾದ ದೆಹಲಿ ಗಡಿಬಿಂದುಗಳ ನಕಾಶೆಯೂ ಇಲ್ಲಿ ಸಿಗುತ್ತದೆ. ರೈತ ಚಳುವಳಿಯಲ್ಲಿ ಮಾರ್ಗದರ್ಶಕರಾಗಿದ್ದ ಕಾಮ್ರೆಡ್ ಮಾರುತಿ ಮಾನ್ಪಡೆ ಹಾಗೂ ಸಹಯಾನಿ ವಿಠ್ಠಲ ಭಂಡಾರಿಯವರಿಗೆ ಈ ಕೃತಿಯನ್ನು ಅರ್ಪಿಸಿದ್ದು ಅರ್ಥಪೂರ್ಣವಾಗಿದೆ. ಲೇಖಕ ನವೀನ್‌ಕುಮಾರ್ ಅವರೇ ರಚಿಸಿದ ‘ಕರಾಳ ಶಾಸನ ಉರುಳಲೇಬೇಕು’ ಎಂಬ ಹೋರಾಟದ ಗೀತೆಯನ್ನೂ ನಾವಿಲ್ಲಿ ಓದಬಹುದು. ದೆಹಲಿಯ ರೈಲಿನಲ್ಲಿ ಒಬ್ಬ ಮಹಿಳೆಯ ಬ್ಯಾಗು ಕಳ್ಳತನವಾದ ಘಟನೆಯನ್ನು ಹೇಳುತ್ತ ನವೀನ್, ಎ.ಸಿ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಶಸ್ತ್ರಸಜ್ಜಿತ ಕಾವಲುಗಾರರಿದ್ದು ಎರಡನೇ ದರ್ಜೆಯಲ್ಲಿ ಪ್ರಯಾಣಿಸುವವರಿಗೆ ಯಾವುದೇ ರೀತಿಯ ಸುರಕ್ಷತತೆಯೂ ಇಲ್ಲದಿರುವ ಕುರಿತು ಕೂಡ ಸೂಕ್ಷ್ಮವಾಗಿ ಚರ್ಚೆಗೆ ತರುತ್ತಾರೆ. ಈ ಎರಡನೇ ಆವೃತ್ತಿಯ ಪುಸ್ತಕವನ್ನೂ ಕ್ರಿಯಾಮಾಧ್ಯಮ ಪ್ರಕಟಿಸಿದೆ. ಕದನ ಕಣ ಲೇಖಕರಿಗಷ್ಟೇ ಅಲ್ಲ ಓದುಗರಲ್ಲೂ ಒಂದು ಸಾರ್ಥಕ ಅನುಭವವನ್ನು ಸೃಷ್ಟಿಸುವಂಥದ್ದು, ಇಂಥ ಬರೆವಣಿಗೆಯ ಕೆಲಸ ಶ್ಲಾಘನೀಯವೂ ಆಗಿದೆ.

-ಸುನಂದಾ ಕಡಮೆ

(ಮೂಲತಃ ಉತ್ತರ ಕನ್ನಡದವರಾದ ಸುನಂದಾ ಕಡಮೆಯವರು ಸ್ತ್ರೀವಾದಿಗಳು ಮತ್ತು ಖ್ಯಾತ ಬರಹಗಾರರು. ಬರೀ ಎರಡು ರೆಕ್ಕೆ, ದೋಣಿ ನಡೆಸ ಹುಟ್ಟು, ಕಾದು ಕೂತಿದೆ ತೀರ, ಎಳನೀರು ಎಂಬ ಕಾದಂಬರಿಗಳನ್ನು ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಎಂಬ ಕಥಾಸಂಕಲನಗಳನ್ನು ಮತ್ತು ಸೀಳು ದಾರಿ ಎಂಬ ಕವನ ಸಂಕಲನವನ್ನು ರಚಿಸಿದ್ದಾರೆ. ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.)


ಇದನ್ನೂ ಓದಿ: ನಾನು, ಕನ್ನಡ ಮತ್ತು ಕವಿಗೋಷ್ಠಿ: ಪ್ರಕಾಶ ಕಡಮೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...