Homeಪುಸ್ತಕ ವಿಮರ್ಶೆಪುಸ್ತಕ ಪ್ರಬಂಧ; ಇರ್‍ವಿಂಗ್ ಸ್ಟೋನ್ ಅವರ LUST FOR LIFE - ಸೂರ್ಯಕಾಂತಿಗಳ ಮಡಿಲಲ್ಲಿ

ಪುಸ್ತಕ ಪ್ರಬಂಧ; ಇರ್‍ವಿಂಗ್ ಸ್ಟೋನ್ ಅವರ LUST FOR LIFE – ಸೂರ್ಯಕಾಂತಿಗಳ ಮಡಿಲಲ್ಲಿ

- Advertisement -
- Advertisement -

ಡಾ.ವಿಜಯಾ ಸುಬ್ಬರಾಜ್ ಅವರು ಇರ್‍ವಿಂಗ್ ಸ್ಟೋನ್‌ನ ಪ್ರಸಿದ್ಧವಾದ ಕಾದಂಬರಿ ’ಲಸ್ಟ್ ಫಾರ್ ಲೈಫ್’ ಎಂಬ ಕೃತಿಗೆ ’ಸೂರ್ಯಕಾಂತಿಗಳ ಮಡಿಲಲ್ಲಿ’ ಎಂಬ ಅರ್ಥಪೂರ್ಣ ಶೀರ್ಷಿಕೆ ನೀಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೋವಿಡ್ 19ರ ಎರಡನೇ ಅಲೆ ಬಂದಪ್ಪಳಿಸಲು ಲಾಕ್‌ಡೌನ್ ಘೋಷಿಸಲಾಯಿತು. ಆಗ ನನ್ನ ಬುಕ್‌ರ್‍ಯಾಕ್‌ನಲ್ಲಿ ಹುಡುಕಾಟ ಪುನಃ ಶುರುವಾಯಿತು. ಬೆಂದಕಾಡಿಗೆ ಮಳೆಬಿದ್ದಂತೆ ಇದೀಗ ಜೀವಕಾಮನೆಯನ್ನೇ ಭಟ್ಟಿ ಇಳಿಸಿದಂತಿರುವ ’ಸೂರ್ಯಕಾಂತಿಗಳ ಮಡಿಲಲ್ಲಿ’ ಪುಸ್ತಕ ಕಣ್ಣಿಗೆ ಬಿತ್ತು. ’ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ ಪ್ರಕಟಿಸಿರುವ (2015) ’ನಿಚ್ಚಂ ಪೊಸತಾದ’ ಈ ಕಾದಂಬರಿ ನನ್ನ ಕರತಲ ರಂಗಭೂಮಿಯಲ್ಲಿ ಪುನರಭಿನಯಿಸಲ್ಪಟ್ಟು ಅಂಕದ ಪರದೆ ಇಳಿದರೂ ಅಂತರ್‌ನೇತ್ರಕ್ಕೆ ಕಾಣಿಸುತ್ತಲೇ ಹೋಗುತ್ತಿದೆ; ಸೂರ್ಯಕಾಂತಿಗಳ ಮಡಿಲಿನಿಂದ ಜೀವಾಮೃತ ಧಾರೆಯನ್ನು ಎರೆಯುತ್ತಲೇ ಪ್ರವಹಿಸುತ್ತಿದೆ. ಹಾಗಾದರೆ ಏನಿದರ ಹೆಗ್ಗಳಿಕೆ?

ಇರ್‍ವಿಂಗ್ ಸ್ಟೋನ್‌

ಈ ಕಾದಂಬರಿಯ ಕಥಾನಾಯಕ ಯುಗ ಪ್ರವರ್ತಕ ಜಗದ್ವಿಖ್ಯಾತ ವರ್ಣಚಿತ್ರ ಕಲಾವಿದ ವಿನ್ಸೆಂಟ್ ವಾನ್ ಗೋ. ಆದರೆ ವಿನ್ಸೆಂಟ್‌ನ ಬದುಕು ಸರಳ ರೇಖಾತ್ಮಕವಲ್ಲ. ವಕ್ರೀಭವಿಸಿದ ಸಂಕೀರ್ಣ ಸೂರ್ಯಕಾಂತಿ ಸ್ವರೂಪದ್ದು. ವಿನ್ಸೆಂಟ್‌ನ ಆತ್ಮ ಬೆಂಕಿಯಲ್ಲಿ ಅರಳಿದ ಹೂವು. ಇದು ಪ್ರವಾಹಕ್ಕ ಎದುರಾಗಿ ಈಜುವ ಹತ್ತುಮೀನು. ಆ ಹತ್ತುಮೀನನ್ನು ಕತ್ತರಿಸಲು ಆಯಕಟ್ಟಿನ ಸ್ಥಳಗಳಲ್ಲಿ ಕತ್ತಿ ಹಿಡಿದು ನಿಂತ ಮೀಂಗುಲಿಗರಿಂದ ಅದು ತಪ್ಪಿಸಿಕೊಂಡು ಗುರಿಮುಟ್ಟಲು ಪಟ್ಟಪಾಡು ಇಟ್ಟಹೆಜ್ಜೆ ಎದೆ ಕರಗಿಸುವಂತಿದೆ. ಲೋಕಭಾವಿಸುವಂತೆ ಯಾವನೇ ಪ್ರತಿಭಾನ್ವಿತ ಕವಿ ಕಲಾವಿದನಿರಲಿ ಅವನಲ್ಲಿ ಕೆಲ ಪ್ರಮಾಣದ ಹುಚ್ಚುತನ (MADNESS) ಮನೆಮಾಡಿರುತ್ತದೆ. ಆದರೆ ಅದನ್ನು ಲೋಕಶಿಕ್ಷಣದ ಮೂಲಕ ಸರಿದಾರಿಗೆ ತಿರುಗಿಸಿದರೆ ಮಾತ್ರ ಬೆಳೆ ನಳನಳಿಸುತ್ತದೆ. ವಿನ್ಸೆಂಟ್ ವಾನ್ ಗೋನದು ಸಹ ಇಂಥ ವಿಕ್ಷಿಪ್ತ ಮನಃಸ್ಥಿತಿ. ಅವನ ಮನಸ್ಸು ಸುತ್ತಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಗೆ ಸದಾ ಸಿಡಿಮಿಡಿಗೊಳ್ಳುತ್ತದೆ. ಹಾಗೆ ನೋಡಿದರೆ ವಿನ್ಸೆಂಟ್ ಕಲಾವಿದರಲ್ಲಿ ಪ್ರಥಮ ಕಮ್ಯುನಿಸ್ಟ್ ಎನ್ನಬಹುದು. ಪ್ರತಿಕೂಲ ಪರಿಸ್ಥಿತಿಗೆ ಎದುರಾಗಿ ಹೋರಾಡುತ್ತ ಬದುಕಿನ ಋಜುತ್ವವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಾನೆ. ಅವನ ದಯೆ, ಕರುಣೆ, ಜೀವಾನುಕಂಪ ವಿಶ್ವಾತ್ಮಕ. ಅದಕ್ಕೆ ಅಡ್ಡಿಬರುವ ವಸ್ತು, ವಿಷಯ ವ್ಯಕ್ತಿಗಳ ವಿರುದ್ಧ ಹರಿಹಾಯ್ದು ದಂಗೆ ಏಳುತ್ತಾನೆ. ವಿನ್ಸೆಂಟ್ ವಾನ್ ಗೋನ ನವಸಮಾಜ ಪರಿಕಲ್ಪನೆಯು ಅವನ ಪ್ರತಿಯೊಂದು ಸ್ಕೆಚ್, ಲ್ಯಾಂಡ್‌ಸ್ಕೇಪ್, ವ್ಯಕ್ತಿಚಿತ್ರ, ನಿಸರ್ಗ ದೃಶ್ಯಗಳಲ್ಲಿ ಒಡಮೂಡಿ ಪ್ರತಿಬಿಂಬಿತವಾಗುತ್ತದೆ; ಸಂಚಲನಗೊಳ್ಳುತ್ತದೆ. ಅಲ್ಲಿ ಮಿಡಿಯುವ ಅವನ ಚೇತನಾತ್ಮಕ ಬೆಳಕು ಸೂಕ್ಷ್ಮ ಸಂವೇದನೆಯುಳ್ಳವರಿಗೆ ಮಾತ್ರ ನಿಲುಕುವಂತಹುದು. ಆ ಬೆಳಕು ಸದಾ ತುಳಿತಕ್ಕೊಳಗಾದ ಸಮಾಜದ ಕಡೆಗೇ ಕೇಂದ್ರೀಕೃತವಾಗಿರುತ್ತದೆ.

ವಿನ್ಸೆಂಟ್ ವಾನ್ ಗೋನನ್ನು ಸುತ್ತಣ ಸಮಾಜ ಅಪಾರ್ಥ ಮಾಡಿಕೊಂಡು ನಾಲಾಯಕ್ಕು ಎಂದು ತಿರಸ್ಕರಿಸುತ್ತದೆ. ಆದರೆ ಅವನ ಪ್ರೀತಿಯ ತಮ್ಮ ಥಿಯೋ ಮಾತ್ರ ಅಣ್ಣನ ಪ್ರತಿಭಾ ಸಂಪನ್ನತೆಯನ್ನರಿತು ಅವನ ಪೆಯಿಂಟಿಂಗ್ ಪ್ರತಿಭೆಯನ್ನು ಮನಗಂಡು ಆರ್ಥಿಕ ಬೆಂಬಲದೊಂದಿಗೆ ಪ್ರೋತ್ಸಾಹಿಸುತ್ತಾನೆ. ತಮ್ಮನ ಮೆಚ್ಚಿಗೆ ಪ್ರೋತ್ಸಾಹದ ಬಲದಿಂದ ವಾನ್‌ಗೋ ಚಿತ್ರಕಲೆಯನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತಾನೆ. ಅವನ ಕಲಾಕೃತಿಗಳನ್ನು ಸಮಕಾಲೀನ ಸಮಾಜ ಮೆಚ್ಚದಿದ್ದರೂ ಅವನು ಆವೇಶ ಬಂದವನಂತೆ ಅದಮ್ಯ ಹಂಬಲದಿಂದ ಸ್ಕೆಚಿಂಗ್, ಪೆಯಿಂಟಿಂಗ್‌ಗಳನ್ನು ಬಿಡಿಸುತ್ತಾ ಹೋಗುವನು.

ಜೀವನಾಂಶಕ್ಕೆ ತಮ್ಮ ಕಳಿಸುತ್ತಿದ್ದ 150 ಫ್ರಾಂಕ್‌ಗಳಲ್ಲಿ ಬಣ್ಣ ಬ್ರಷ್ ಕೊಂಡು, ರೂಪದರ್ಶಿಗಳಿಗೆ ಬಾಡಿಗೆ ಕೊಟ್ಟು, ಉಳಿದದ್ದರಲ್ಲಿ ಹೊಟ್ಟೆಬಟ್ಟೆ ಕಟ್ಟಿ, ತಮ್ಮನ ಹಳೆ ಪ್ಯಾಂಟ್ ಅಂಗಿಗಳನ್ನೇ ತೊಟ್ಟು, ದಾರುಣ ಬಡತನದಲ್ಲಿ ಕಾಲಾಯಾಪನೆ ಮಾಡುತ್ತಾನೆ. ತನ್ನ ದೈಹಿಕ ಮಾನಸಿಕ ಆಘಾತಗಳನ್ನು ಲೆಕ್ಕಿಸದೆ ಪೆಯಿಂಟಿಂಗ್‌ನಲ್ಲಿ ನಿರತನಾಗುತ್ತಾನೆ. “ಆದರೆ ಜಗತ್ತು ಈಗ ಅವನಿಗೆ ಕೊಟ್ಟಿರುವ ಮಾನ್ಯತೆಯಲ್ಲಿ ಎಳ್ಳಷ್ಟಾದರೂ ಅಂದಿಗೆ ಕೊಟ್ಟಿದ್ದರೆ ವಿನ್ಸೆಂಟ್ ಇನ್ನೆಷ್ಟು ಎತ್ತರಕ್ಕೆ ಏರಬಹುದಾಗಿತ್ತೋ
ಊಹಿಸುವುದೂ ಸಾಧ್ಯವಿಲ್ಲ” ಎಂಬ ಅನುವಾದಕರಾದ ಡಾ. ವಿಜಯಾ ಸುಬ್ಬರಾಜ್ ಅವರ ಮಾತು ಅಕ್ಷರಶಃ ನಿಜ.

ತನ್ನ ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಗಳನ್ನು ಅಭಿವ್ಯಕ್ತಿಗೊಳಿಸಲು ತನ್ನ ಒಲವಿನ ಬಣ್ಣಗಳನ್ನು ಬಳಸಿ ಸೂರ್ಯಕಾಂತಿಗಳ ವಿಶ್ವಾತ್ಮಕ ಬಣ್ಣವನ್ನು ಸೆರೆಹಿಡಿಯಲು ಹೊರಟ ಅದ್ವಿತೀಯ ವರ್ಣಚಿತ್ರ ಕಲಾವಿದ ವಿನ್ಸೆಂಟ್ ವಾನ್‌ಗೋ. ಈತ ಹುಟ್ಟಿದ್ದು ಹಾಲೆಂಡಿನ ’ಗ್ರೂಟ್-ಜುಂಡರ್ಟ್’ ಎಂಬ ಹಳ್ಳಿಯಲ್ಲಿ. ಇವನ ತಂದೆ ಥಿಯೋಡೊರಸ್, ತಾಯಿ ಅನ್ನಾ ಕಾರ್ನೇಲಿಯಾ. ತಂದೆ ಆ ಹಳ್ಳಿಯಲ್ಲಿ ಪಾದ್ರಿಯಾಗಿದ್ದ. ವಿನ್ಸೆಂಟ್ ಧಾರ್ಮಿಕ, ಸಾಂಪ್ರದಾಯಿಕ ಪರಿಸರದಲ್ಲಿ ಬೆಳೆದ ಹುಡುಗನಾಗಿದ್ದ. ಇವನದು ಹುಟ್ಟು ಭಾವುಕ ಪ್ರವೃತ್ತಿ. ಮೊದಮೊದಲು ಅವನಲ್ಲಿ ಆತ್ಮವಿಶ್ವಾಸವೇ ಇರುತ್ತಿರಲ್ಲಿಲ್ಲ. ಏನೋ ಒಂದು ಬಗೆಯ ಅಳುಕು; ಅಂಜಿಕೆ ಸೋಲುವ ಭಯ. ಮಗನನ್ನು ತಮ್ಮ ವಂಶದ ಒಬ್ಬ ಧರ್ಮಬೋಧಕ ಪಾದ್ರಿಯನ್ನಾಗಿ ಮಾಡುವ ಅಭಿಲಾಷೆ ತಂದೆಗೆ. ಆದರೆ ಅವರ ಆಸೆ ಕೈಗೂಡಲಿಲ್ಲ. ಕಡೆಗೆ ಬದುಕುವ ಮಾರ್ಗವಾಗಿ ಒಂದು ಉದ್ಯೋಗ ಎಂಬಂತೆ ಅವರ ಸಂಬಂಧಿಕರು ಪ್ಯಾರಿಸ್‌ನಲ್ಲಿ ನಡೆಸುತ್ತಿದ್ದ ಆರ್ಟ್ ಬಿಸಿನೆಸ್‌ನ ಗೋಪಿಲ್ಸ್ ಕಂಪನಿಯ ಲಂಡನ್ ಶಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡ. ವಿನ್ಸೆಂಟ್ ತಮ್ಮ ಥಿಯೋ ಈಗಾಗಲೇ ಪ್ಯಾರಿಸ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.

ಲಂಡನ್ ಶಾಖೆಯಲ್ಲಿದ್ದಾಗ ವಿನ್ಸೆಂಟ್ ಅಲ್ಲಿ ತಾನಿದ್ದ ಬಾಡಿಗೆ ಮನೆಯ ಹುಡುಗಿ ಉರ್ಸುಲಾ ಎಂಬುವಳ ಬೆನ್ನುಬಿದ್ದು ಅವಳನ್ನು ಪ್ರೀತಿಸಿದ. ಆದರೆ ಸಂಬಂಧ ಮುರಿದುಬಿದ್ದು ಬೇಸತ್ತು ಲಂಡನ್ ತೊರೆದು ತಮ್ಮನಿದ್ದ ಪ್ಯಾರಿಸ್‌ಗೆ ಹೋದ. ಅಲ್ಲಿಂದ ಅವನ ಅನೇಕ ರೀತಿಯ ಮಹತ್ವದ ದಿನಗಳ ಆರಂಭ; ಪೆಯಿಂಟಿಂಗ್ ಪ್ರವೃತ್ತಿಯ ಪ್ರಾರಂಭ. ಕೆಲವೇ ದಿನಗಳಲ್ಲಿ ಅವನಿಗೆ ಆರ್ಟ್‌ಡೀಲರ್ ವೃತ್ತಿಯಲ್ಲಿ ಆಸಕ್ತಿ ಇಲ್ಲವಾಯಿತು. ಕಳಪೆ ಕಲಾಕೃತಿಗಳನ್ನು ಕೊಳ್ಳುತ್ತಿದ್ದ ಶ್ರೀಮಂತ ವರ್ಗದವರ ಅಭಿರುಚಿಯನ್ನು ಕಂಡು ಕಸಿವಿಸಿಗೊಂಡ. ಮತ್ತೆ ಪಾದ್ರಿ ಆಗಬೇಕೆಂಬ ಆಸೆ ಮೊಳೆಯಿತು. ಧಾರ್ಮಿಕ ಬೋಧಕನಾಗಿ ಜನತಾಸೇವೆಯನ್ನು ಮಾಡುವುದರಲ್ಲಿ ಜೀವನದ ಸಾರ್ಥಕತೆಯಿದೆ ಎಂದು ಭಾವಿಸಿ ಅದಕ್ಕೆ ಬೇಕಾದ ಧರ್ಮಶಾಸ್ತ್ರಗಳ ಅಧ್ಯಯನ ಕೈಗೊಂಡ ಅಲ್ಲಿಂದ ಬೆಲ್ಜಿಯಂನ ’ಕಲ್ಲಿದ್ದಲು ಗಣಿಗಳ ಎದೆಬಗೆಯುತ್ತಾ’ ಇದ್ದ ಬೋರಿನೇಜ್ ಎಂಬ ಸ್ಥಳಕ್ಕೆ ಧರ್ಮಬೋಧಕನಾಗಿ ಬಂದ. ಆಗ ಅವನಿನ್ನೂ 26ರ ಹರೆಯ. ಅಲ್ಲಿ ಗಣಿ ಕಾರ್ಮಿಕರ ನರಕಸದೃಶ ದಾರುಣ ಬದುಕನ್ನು ಕಂಡು ಕಂಗಾಲಾದ.

ಎಳೆಯ ವಯಸ್ಸಿನ ಮಕ್ಕಳು, ವೃದ್ಧರು, ಹೆಂಗಸರು ಅಲ್ಲಿ ಕೂಲಿ ಮಾಡುತ್ತಿದ್ದರು. ಅವರ ಬದುಕಿನಲ್ಲಿ ಶಾಂತಿ ನೆಮ್ಮದಿಯನ್ನು ತರಲು ತಾನೂ ಅವರಲ್ಲಿ ಒಬ್ಬನಾಗಿ ಕಾಯಾ ವಾಚಾ ಮನಸಾ ದುಡಿದು ದಣಿದ. ಕಾರ್ಮಿಕರ ಕಷ್ಟಸುಖಗಳಲ್ಲಿ ಭಾಗಿಯಾಗಿ ಪ್ರವಾದಿ ಏಸುವಿನಂತೆ ಅವರ ಸೇವೆಯಲ್ಲಿ ನಿರತನಾದ. ’ಬಡವರಿಗೆ ನಿನ್ನಲ್ಲಿರುವುದನ್ನು ಹಂಚಿಕೋ’ ಎಂಬ ಕ್ರಿಸ್ತನ ವಾಣಿಯಂತೆ ಚಳಿಯಲ್ಲಿ ನಡುಗುತ್ತಿದ್ದ ರೋಗಿ ಕಂದಮ್ಮಗಳಿಗೆ, ತಾಯಂದಿರಿಗೆ ತನ್ನ ಬಟ್ಟೆಬರೆ ಕೋಟು ಎಲ್ಲವನ್ನೂ ತೆಗೆದು ಹೊದಿಸಿದ; ತಾನು ತಿನ್ನುತ್ತಿದ್ದ ಬ್ರೆಡ್ ಬಿಸಿನೀರು ಕೊಟ್ಟು ಉಪಚರಿಸಿದ. ಆ ಬಡ ಕಾರ್ಮಿಕರಂತೆ ತಾನೂ ಬದುಕಿದ. ಈ ಅವಧಿಯಲ್ಲಿ ಅವನಲ್ಲಿ ಸುಪ್ತವಾಗಿದ್ದ ಕಲಾವಿದ ಮೆಲ್ಲಮೆಲ್ಲನೆ ಕಣ್ಣು ತೆರೆಯಲು ಯತ್ನಿಸಿದ. ರೈತರ, ಕಾರ್ಮಿಕರ ಬದುಕು ಬವಣೆಗಳನ್ನು, ಅವರ ಬಡತನದ ಕಷ್ಟ ಕಾರ್ಪಣ್ಯಗಳನ್ನು, ಹಸಿವು, ರೋಗ, ದುಃಖ, ಸಾವುನೋವುಗಳನ್ನು ಹತ್ತಿರದಿಂದ ಕಂಡು ಅನುಕಂಪಶೀಲನಾದ. ಅಂತವರ ಬದುಕಿನ ದುಃಖನೋವುಗಳಿಗೆ ರೇಖಾತ್ಮಕ, ವರ್ಣನಾತ್ಮಕ ಅಭಿವ್ಯಕ್ತಿ ಕೊಡಲು ತವಕಿಸಿದ. ಆದರೆ ಅವನಿಗೆ ಈ ಸ್ಥಳದಲ್ಲಿಯೂ ನೆಲೆಯೂರಿ ನಿಲ್ಲಲಾಗಲಿಲ್ಲ. ಇವನ ನಡವಳಿಕೆಯ ಅತಿರೇಕಗಳು ಸಾಂಪ್ರದಾಯಿಕ ಧರ್ಮಬೋಧಕರ ಗೌರವ ಪ್ರತಿಷ್ಠೆಗಳಿಗೆ ಧಕ್ಕೆಯುಂಟುಮಾಡುತ್ತವೆ ಎಂಬ ಆರೋಪ ಹೊತ್ತು ಅವನು ಆ ’ಗಣಿಗಳ ಎದೆಬಗೆಯುವ’ ಸ್ಥಳದಿಂದ ಈ ಚೆಬರಬೇಕಾಯಿತು. ಚರ್ಚ್‌ಗಳ ಗೊಡ್ಡು ಧಾರ್ಮಿಕತೆಯನ್ನು ಅನಾವರಣ ಮಾಡುತ್ತದೆ ಈ ಸಂದರ್ಭ.

PC : Britannica, (ವಿನ್ಸೆಂಟ್ ವಾನ್ ಗೋ)

ಆತ ಬೋರಿನೇಜ್‌ನಿಂದ ಹೊರಬಂದದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ವಿನ್ಸೆಂಟ್ ಎಲ್ಲರಂತಲ್ಲ. ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿವ ಜೀವ ಅವನದು. ಮತ್ತೇನೋ ಮಹತ್ತರವಾದದ್ದನ್ನು ಸಾಧಿಸಬೇಕೆಂಬ ಅದಮ್ಯ ಛಲ; ಅದಕ್ಕಾಗಿಯೇ ಅವನ ತಮ್ಮ ಥಿಯೋನ ನಿರಂತರ ಒತ್ತಾಸೆ ಬೇರೆ. ಇದೆಲ್ಲವೂ ಒಟ್ಟಂದದಲ್ಲಿ ಒಂದುಗೂಡಿ ಕಲಾವಿದನಾಗುವತ್ತ ವಿನ್ಸೆಂಟ್ ಹೆಜ್ಜೆಹಾಕಿದ. ಆದರೆ ಆಗ ಮೂಡಿದ ರೇಖಾಚಿತ್ರಗಳು ವರ್ಣಚಿತ್ರಗಳು ಲ್ಯಾಂಡ್‌ಸ್ಕೇಪ್‌ಗಳು ಇತ್ಯಾದಿ ಇವು ಯಾವುವೂ ಅವನಿಗೆ ಸಮಾಧಾನ ತರಲಿಲ್ಲ; ಕಲಾವಿದ ಎಷ್ಟೇ ಪ್ರತಿಭಾವಂತನಾದರೂ ಅವನಿಗೆ ಎಷ್ಟೇ ಲೋಕಾನುಭವವಿದ್ದರೂ ವ್ಯುತ್ಪತ್ತಿ ಜ್ಞಾನ ಎಂದರೆ ಹಲವು ಅನ್ಯಜ್ಞಾನಶಿಸ್ತುಗಳ ಹಾಗೂ ಸತತಾಭ್ಯಾಸದ ಪರಿಶ್ರಮ ಬೇಕು. ಆದ್ದರಿಂದ ವಿನ್ಸೆಂಟ್ 1881ರಲ್ಲಿ ತನ್ನ ಇಪ್ಪತ್ತೇಳನೆಯ ವಯಸ್ಸಿಗೆ ತಂದೆ ತಾಯಿ ಇದ್ದ ಎಟ್ಟೆನ್ ಎಂಬಲ್ಲಿಗೆ ಬಂದು ಹಲವು ಹೊಸಹೊಸ ಪ್ರಯೋಗಗಳಲ್ಲಿ ನಿರತನಾದನು. ವಿಭಿನ್ನ ವ್ಯಕ್ತಿ/ವಸ್ತುಗಳ ಸ್ಕೆಚ್ ಹಾಕಲು, ಅವುಗಳಮೇಲೆ ಸ್ವಾಮ್ಯ ಸಾಧಿಸಲು ಅನಿವಾರ್ಯವಾದ ನೆಳಲು ಬೆಳಕಿನ ಷೇಡಿಂಗ್ ನೀಡಲು, ಮಾನವ ಅನಾಟಮಿ (ಶರೀರಶಾಸ್ತ್ರ) ಮುಂತಾದುವುಗಳ ಅಧ್ಯಯನಕ್ಕೆ ತೊಡಗಿಕೊಂಡನು.

ಬೋರಿನೇಜ್‌ನಲ್ಲಿ ಇದ್ದಾಗ ಅವನು ಗ್ರಾಮೀಣ ಬದುಕಿನ ಚಿತ್ರಣಕ್ಕೆ ಆದ್ಯತೆ ನೀಡಿದ್ದರೆ, ಈಗ ಎಟ್ಟೆನ್‌ನಲ್ಲಿ ರೂಪದರ್ಶಿಗಳನ್ನು ಎದುರಿಗಿಟ್ಟುಕ್ಕೊಂಡು ಹಲವಾರು ಭಾವಭಂಗಿಗಳ (ಫಿಗರ್‍ಸ್) ಮಾನವಾಕೃತಿಗಳನ್ನು ಮೂಡಿಸಲು ಹೊರಟ. “ಭೂಮಿ ಮತ್ತು ರೈತನ ಮಧ್ಯೆ ಅಂತರ ಇರಬಾರದು; ಅವು ಒಂದೇ ಸತ್ವದ ಎರಡು ಭಿನ್ನ ರೂಪಗಳು; ಒಂದು ಮತ್ತೊಂದರಲ್ಲಿ ಬೆರೆಯಬಹುದು; ಆದರೆ ಪ್ರತ್ಯೇಕಿಸಲು ಆಗದಷ್ಟು ಅನನ್ಯವಾಗಿ ಬೆಸೆದಿರುತ್ತವೆ” (ಪುಟ 139) ಎಂಬುದು ವಿನ್ಸೆಂಟ್‌ನ ತಿಳಿವಳಿಕೆ.

ಅದೇ 1881ರ ಕೊನೆಯಲ್ಲಿ ಹೇಗ್ ನಗರಕ್ಕೆ ಹೋಗಿ ಅಲ್ಲಿ ಯಶಸ್ವೀ ವರ್ಣಕಲಾವಿದನಾದ ತನ್ನ ಕಸಿನ್ ಮಾವ್ ಅವನಿಂದ ಕೆಲವು ಪಾಠಗಳನ್ನು ಕಲಿತ. ಆದರೆ ವಿನ್ಸೆಂಟ್‌ನ ಆ ಕಸಿನ್ ಇವನನ್ನು ಪಕ್ಕಾ ಶಿಷ್ಯನನ್ನಾಗಿ ಸ್ವೀಕರಿಸಲು ನಿರಾಕರಿಸಿದ. ಅದೇ ಸಮಯದಲ್ಲಿ ಎಟ್ಟೆನ್ನಿನಲ್ಲಿದ್ದ ವಿಧವೆ ಕೇ ಎಂಬ ಸುಂದರ ಯುವತಿಯಲ್ಲಿ ಅನುರಕ್ತನಾದ. ಅವಳ ಕೈಹಿಡಿದು ನನ್ನನ್ನು ವಿವಾಹವಾಗು ಎಂದು ಅಂಗಲಾಚಿದ. ಆದರೆ ಅವಳು “ಇದು ಎಂದಿಗೂ ಸಾಧ್ಯವಿಲ್ಲ, ಎಂದೆಂದಿಗೂ ಇಲ್ಲ ಎಂದು ನಿರಾಕರಿಸಿದಳು. ತನ್ನ ತಂದೆತಾಯಿಗಳಲ್ಲಿ ಮೊರೆಯಿಟ್ಟ. “ಕೇ ನಿನ್ನ ಫಸ್ಟ್ ಕಸಿನ್, (ದೊಡ್ಡಮ್ಮನ ಮಗಳು) ಅವಳೊಡನೆ ಲೈಂಗಿಕ ಸಂಬಂಧ ಧರ್ಮವಿರುದ್ಧ” ಎಂದು ಅವರು ನಿಷೇಧಿಸಿದರು. ಲಂಡನ್ನಿನಲ್ಲಿ ಈಗಾಗಲೇ ಆದ ಪ್ರೇಮಭಂಗ ಪ್ರಕರಣದಿಂದ ದುಃಖಿತನಾಗಿದ್ದ ವಿನ್ಸೆಂಟ್‌ಗೆ ಇದು ಎರಡನೇ ಆಘಾತವಾಗಿತ್ತು. ಬೈಬಲ್ಲಿನಲ್ಲಿ ’ಕಸಿನ್’ ಮದುವೆಗೆ ಒಪ್ಪಿಗೆ ಇದ್ದರೂ ಸಹ, ಸಂಪ್ರದಾಯಸ್ಥ ಸಮಾಜದ ಕಟ್ಟುಕಟ್ಟಳೆಗಳ ವಿರುದ್ಧ ಈತ ಬಂಡೆದ್ದು ನಿಂತ. ಆದರೆ ಅವನನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ.

ಅದೇ ಮನಃಸ್ಥಿತಿಯಲ್ಲಿ ಅವನು ಪುನಃ ಹೇಗ್ ತಲುಪಿದ. ಅಲ್ಲಿ ಕ್ರಿಸ್ಟೀನ್ ಎಂಬ ವೇಶ್ಯೆಯ ಕರುಣಾಜನಕ ಸ್ಥಿತಿಗೆ ಮರುಗಿ ಅವಳ ಜೊತೆಗೆ ಬದುಕಲು ಯತ್ನಿಸಿದ. ಅವಳಿಗಾಗಲೇ ಮೂರು ಮಕ್ಕಳು ಮತ್ತು ಗರ್ಭವತಿಯಾಗಿದ್ದಳು. ವಿನ್ಸೆಂಟ್ ಅವಳನ್ನು ರೂಪದರ್ಶಿಯನ್ನಾಗಿ ಮಾಡಿಕೊಂಡಿದ್ದಲ್ಲದೆ, ಮದುವೆ ಆಗುತ್ತೇನೆಂದು ಮಾತುಕೊಟ್ಟ. ಅವಳು ವಿನ್ಸೆಂಟ್ ಮನೆಯಲ್ಲೇ ಬಂದು ನೆಲೆಸಿ ಅವನೊಂದಿಗೆ ಸಂಸಾರವನ್ನೂ ಹೂಡಿದಳು. ಅವಳ ಹೆರಿಗೆ ಬಾಣಂತನವನ್ನೂ ಈತ ಮಾಡಿದ. ಆದರೆ ಥಿಯೋ ಕಳಿಸುತ್ತಿದ್ದ ಜೀವನಾಂಶದ ಮೊತ್ತ ಮನೆಖರ್ಚಿಗೂ ಬಣ್ಣಕುಂಚಗಳಿಗೂ ಸರಿದೂಗಿಸಲಾರದೆಹೋದ. ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಅವನ ಸ್ಥಿತಿ ಕಂಡು ವಿಮುಖಳಾದ ಕ್ರಿಸ್ಟೀನ್ ತನ್ನ ಮೊದಲಿನ ದಂಧೆಗೆ ಇಳಿದಳು. ವಿರಹ ವಿಹ್ವಲನಾದ ವಿನ್ಸೆಂಟ್ ಕಡೆಗೆ ಅವಳಿಂದ ದೂರವಾದ. ಅವನಲ್ಲಿ ಉತ್ಸಾಹ ಆಸಕ್ತಿಗಳು ಇಳಿಕೆಯಾದವು. ಅವನಿಗೆ ರೂಪದರ್ಶಿಗಳೂ ಸಿಗದಾದರು. ಪುನಃ ತಂದೆ ತಾಯಿ ಇದ್ದ ನ್ಯೂನೆನ್‌ಗೆ ಹೋದ. ಅಲ್ಲಿ ತನ್ನ ಚಿತ್ರಕಲೆಯನ್ನು ಏಕಾಗ್ರತೆಯಿಂದ ಆಸ್ವಾದಿಸುತ್ತಿದ್ದ ಮಾರ್ಗಾಟ್ ಎಂಬ ಯುವತಿಯನ್ನು ಪ್ರೀತಿಸಿದನಾದರೂ ಅವಳ ಮನೆಯವರ ಒಪ್ಪಿಗೆ ಸಿಗದೆ ಅದು ಮುರಿದುಬಿತ್ತು.

ನ್ಯೂನೆನ್‌ನಲ್ಲಿ ಜೀನ್ ಪ್ರಾಂಕ್ವಾ ಮತ್ತು ಮಿಲ್ಲೆಟ್ ಎಂಬುವರ ಪೇಂಟಿಂಗ್‌ಗಳ ಪರಿಚಯವಾಯಿತು. ಮಿಲೆಟ್ ಈಗಾಗಲೇ ಕೃಷಿಕರ ಜೀವನಚಿತ್ರಣದಿಂದ ಯೂರೋಪಿನಲ್ಲಿ ಮನೆಮಾತಾಗಿದ್ದ. ವಿನ್ಸೆಂಟ್‌ನ ಆಸಕ್ತಿ ಅತ್ತ ಹೊರಳಿತು. ಅಲ್ಲಿಯೇ ಕ್ಯಾಥೋಲಿಕ್ ಚರ್ಚಿನ ಒಂದು ಭಾಗವನ್ನು ಬಾಡಿಗೆ ಪಡೆದು ತನ್ನದೇ ಆದ ಒಂದು ಪೇಂಟಿಂಗ್ ಸ್ಟುಡಿಯೋ ಮಾಡಿಕೊಂಡು ಮಣ್ಣು ಮತ್ತು ಮನುಷ್ಯರ ಅವಿನಾಭಾವ ಸಂಬಂಧವನ್ನು ಕುರಿತು ವರ್ಣಗಳಲ್ಲಿ ಪ್ರತಿಮಿಸುತ್ತಾ ಹೋದ. ಮಣ್ಣಿನಲ್ಲಿ ದುಡಿಯುವ ರೈತರ ದೈಹಿಕ ಹಾಗೂ ಮಾನಸಿಕ ಚಲನಾತ್ಮಕ ಪ್ರತಿಬಿಂಬಗಳನ್ನು ತನ್ನ ಕಲಾಕೃತಿಗಳಲ್ಲಿ ಸೆರೆಹಿಡಿಯಲು ಸತತವಾಗಿ ಪ್ರಯತ್ನಿಸಿದ. ಅವನ ವರ್ಣಿಕೆಗಳು ಕೇವಲ ಯಥಾವತ್ತಾದ ಫೋಟೋಗಳಂತಲ್ಲ. ಅವು ಸಂಚಲನಗೊಳ್ಳುತ್ತಿರುವ ಆತ್ಮ ಸಂಗಾತಗಳು. ಈ ನಿಟ್ಟಿನಲ್ಲಿ ಅವನು ರಚಿಸಿರುವ 1885ರ ’ಪೊಟ್ಯಾಟೋ ಈಟರ್‍ಸ್’ (ಆಲೂಗಡ್ಡೆ ತಿನ್ನುವವರು) ಎಂಬ ಚಿತ್ರ ಬಹು ಮುಖ್ಯವೆನಿಸಿತು. ಅವನ ಕಾಲಾನಂತರ ಇದೊಂದು ಜಗದ್ವಿಖ್ಯಾತ ಕಲಾಕೃತಿಯಾಗಿ ಪರಿಣಮಿಸಿದೆ. ಇದರ ಬಗ್ಗೆ ವಿನ್ಸೆಂಟ್ ತಮ್ಮನಿಗೆ ಹೀಗೆ ಬರೆದಿದ್ದ; “ಚಿತ್ರದಲ್ಲಿ ಲಾಂದ್ರದ ಬೆಳಕಿನಡಿ ಆಲೂಗಡ್ಡೆ ತಿನ್ನುತ್ತಿರುವ ಆ ಮನುಷ್ಯರು ತಮ್ಮ ಕೈಗಳಿಂದಲೇ ಶ್ರಮದಿಂದ, ಪ್ರಾಮಾಣಿಕತೆಯಿಂದ ದುಡಿದು, ಭೂಮಿಯಿಂದ ಗಳಿಸಿದ ಆಹಾರ ಅದು ಎನ್ನುವುದನ್ನು ತೋರಿಸುತ್ತದೆ.” ಈ ಮಾತು ವಿನ್ಸೆಂಟ್ ಕಾಯಕಕ್ಕೆ ಕೊಟ್ಟ ಘನತೆಯ ಮಹತ್ವವನ್ನು ಸಾದರಪಡಿಸುತ್ತದೆ. ಜಗದ್ವಿಖ್ಯಾತ ವರ್ಣಚಿತ್ರ ಕಲಾವಿದ ಪಿಕಾಸೋ ಹೇಳಿದಂತೆ “ವರ್ಣಚಿತ್ರಗಳೆಂದರೆ ಐಷಾರಾಮಿ ಅಂತಃಪುರದ ಭಿತ್ತಿ/ಗೋಡೆಗಳ ಅಲಂಕರಣಕ್ಕಲ್ಲ, ಬಡವರ ಗುಡಿಸಲುಗಳ ಸ್ಫೂರ್ತಿಗೆ” ಎಂಬ ಮಾತು ನೆನಪಾಗುತ್ತದೆ.

ಆದರೆ ಇಂದು ಜಗತ್ತೇ ಕೊಂಡಾಡುವ ಇಂಥ ಇವನ ಅಸಾಮಾನ್ಯ ಕಲಾಕೃತಿಗಳು ಅವನು ಬದುಕಿದ್ದಾಗ ಯಾರ ಮೆಚ್ಚಿಗೆಯನ್ನೂ ಗಳಿಸಲಿಲ್ಲ. ಇದು ತನ್ನ ವೃತ್ತಿ ಬದುಕಿನ ಸೋಲು ಎಂದು ಆತ ಭಾವಿಸಿದ. ಆಗ ವಿನ್ಸೆಂಟ್ ಇನ್ನೂ ಹೆಚ್ಚಿನ ಅನುಭವ ತರಬೇತಿ ಬಯಸಿ 1886ರಲ್ಲಿ ಪ್ಯಾರಿಸಿಗೆ ಹೋದ.

ಅಲ್ಲಿ ತಮ್ಮ ಥಿಯೋನ ಜತೆಗೆ ಉಳಿದುಕೊಂಡ. ಆಗ ಅನೇಕ ಚಾರಿತ್ರಿಕ ಸನ್ನಿವೇಶಗಳು ಅವನ ಜೀವನದಲ್ಲಿ ಜರುಗಿಹೋದವು. ಅಲ್ಲಿ ತನ್ನ ಸಮಕಾಲೀನ ಮಹಾನ್ ಯುವ ಕಲಾವಿದರ ದೊಡ್ಡ ದಂಡೇ ಅವನಿಗೆ ಪರಿಚಯವಾಯಿತು. ಸೆಜಾನ್ನೆ. ಲಾಟ್ರೆಕ್, ಪಾಲ್ ಗಾಗಿನ್ ಮೊದಲಾದ ಇನ್ನೂ ಅನೇಕ ಕಲಾವಿದರ ಒಡನಾಟ ಸಾಧ್ಯವಾಯಿತು. ಇಂಪ್ರೆಶನಿಸಂ, ಇಂಪ್ರೆಶನಿಸ್ಟರ – ಆ ಕಲಾಶೈಲಿಯ ಕಲಾವಿದರು ಯಾರು, ಅದು ಏನೆಂಬುದರ ಸ್ವಷ್ಟ ಕಲ್ಪನೆ ಸಿಕ್ಕಿತು. ಆಗ ತನ್ನ ’ಪೊಟ್ಯಾಟೋ ಈಟರ್‍ಸ್’ ಅಂಥ ಚಿತ್ರಗಳ ಗಾಢ ಬಣ್ಣ ಸಾಂಪ್ರದಾಯಿಕವೆನಿಸಿತು. ಆದ್ದರಿಂದ ಇನ್ನೂ ಪ್ರಕಾಶಮಾನವಾದ, ಜೀವಂತವಾಗಿ ಕಾಣುವಂತ ಚಿತ್ರಗಳನ್ನು ಜಪಾನೀ ಮಾದರಿಯಲ್ಲಿ ರಚಿಸಲು ಮುಂದಾದ. ಗೆಳೆಯ ಪಾಲ್ ಗಾಗಿನ್, ಕ್ಯಾಮಿಲ್ ಪಸ್ಸ್‌ರೋ, ಕ್ಲಾಡ್ ಮೊನೆಟ್ ಮೊದಲಾದವರ ಜತೆಗೂಡಿ ಒಂದು ಆರ್ಟ್ ಸ್ಕೂಲ್ ತೆಗೆಯಬೇಕೆಂದು ಯೋಚಿಸಿದ. ಇದೇ ಯೋಚನೆಯಲ್ಲಿ ಆರ್ಲೆ ಎಂಬ ಸ್ಥಳಕ್ಕೆ ಬಂದ. ದಿನಕಳೆದಂತೆ ಅವನಲ್ಲಿ ಆತ್ಮವಿಶ್ವಾಸ ಹುಟ್ಟಿತು. ವಿನ್ಸೆಂಟ್ ಅಲ್ಲಿ ನೆಲೆಸಿದಾಗ ಅವನ ಗೆಳೆಯ ಪಾಲ್ ಗಾಗಿನ್ ಸಹ ಬಂದು ಕೂಡಿಕೊಂಡ. ಶ್ರೀಮಂತ ಕುಟುಂಬದಿಂದ ಬಂದ ಆತ್ಮೀಯ ಗೆಳೆಯನಿಗೆ ಶಕ್ತಿಮೀರಿ ಇರಲು ವ್ಯವಸ್ಥೆ ಮಾಡಿದ. ಗಾಗಿನ್ ಹಾಗು ವಿನ್ಸೆಂಟ್ ಜೊತೆಗಿದ್ದು ಒಂದೆರಡು ತಿಂಗಳು ಚಿತ್ರಕಲೆಯಲ್ಲಿ ತೊಡಗಿದ್ದರು. ಆದರೆ ಇಬ್ಬರದೂ ತದ್ವಿರುದ್ಧದ ಗುಣಸ್ವಭಾವಗಳು. ಒಂದು ಹಂತದಲ್ಲಿ ವಿನ್ಸೆಂಟ್‌ನ ಸಿಟ್ಟು ಮತ್ತು ಹತಾಶೆ ಅತಿರೇಕಕ್ಕೆ ಹೋಗಿ ಚಾಕುವಿನಿಂದ ಗಾಗಿನ್‌ಮೇಲೆ ಆಕ್ರಮಣಕ್ಕೆ ಯತ್ನಿಸಿದ. ಇವನನ್ನು ಒಂಟಿಯಾಗಿ ಬಿಡುವುದೇ ಲೇಸೆಂದು ಗಾಗಿನ್ ಪ್ಯಾರಿಸಿಗೆ ಹೊರಟುಹೋದ.

ಗೆಳೆಯನ ಗೈರುಹಾಜರಿಯಲ್ಲಿ ವಿನ್ಸೆಂಟ್‌ನ ಖಿನ್ನತೆ ಇನ್ನೂ ಹೆಚ್ಚಾಗಿ SCHIZOPHRENIA ಎಂಬ ಮನೋವ್ಯಾಧಿಗೆ ತುತ್ತಾಗಿ ಅದೇ ಚಾಕುವಿನಿಂದ ತನ್ನ ಎಡಕಿವಿಯನ್ನು ಕತ್ತರಿಸಿಕೊಂಡುಬಿಟ್ಟ. ಅಷ್ಟಲ್ಲದೆ ಅದನ್ನು ಪೇಪರಿನಲ್ಲಿ ಸುತ್ತಿಕೊಂಡು ಇಳಿಯುವ ನೆತ್ತರಿನಿಂದಲೇ ಹೋಟೆಲ್‌ಗೆ ಹೋಗಿ “ನಿನ್ನ ಕಿವಿ ಎಷ್ಟು ಚೆನ್ನಾಗಿದೆ ವಿನ್ಸೆಂಟ್? ನನಗೆ ಕೊಡುವೆಯಾ?” ಎಂದು ತಮಾಷೆ ಮಾಡಿದ್ದ ರಾಷೆಲ್ ಎಂಬ ಕಾಲ್‌ಗರ್ಲ್ ಹುಡುಗಿಯ ಕೈಗೆ ಹಾಕಿದ. ಅದ ಕಂಡವಳೇ ಅವಳು ಕಿಟಾರನೆ ಕಿರುಚಿ ಮೂರ್ಛೆ ಬಿದ್ದಳು. ಇತ್ತ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ ಇವನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಅವನು
ಚೇತರಿಸಿಕೊಂಡು ತನ್ನ ಮನೆಗೆ ಬಂದ ನಂತರ ಸುತ್ತಲಿನ ಮಕ್ಕಳೂ ಸಹ ಅವನನ್ನು ಹುಚ್ಚನೆಂದು ಗೇಲಿ ಮಾಡತೊಡಗಿದರು. ಇಂಥವನು ನಮ್ಮ ನೆರೆಯಲ್ಲಿ ಇರಬಾರದೆಂದು ಜನ ತಗಾದೆ ತೆಗೆದರು.

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಬಂದ ಥೀಯೋ ಇವನನ್ನು ವುವರ್‍ಸ್ ಎಂಬಲ್ಲಿ ಡಾಕ್ಟರ್ ಗ್ಯಾಷೆ ಎಂಬುವರ ಕಣ್ಗಾವಲಿನಲ್ಲಿ ಇರಲು ವ್ಯವಸ್ಥೆ ಮಾಡಿದ. ವುವರ್‍ಸ್‌ಗೆ ಬಂದ ನಂತರವೂ ಲ್ಯಾಂಡ್‌ಸ್ಕೇಪ್ ಚಿತ್ರಗಳನ್ನು ರಚಿಸಲು ಪ್ರಯತ್ನಿಸಿದ. ಆದರೆ ಅವನಿಗೆ ತನ್ನ ಚಿತ್ರಕಲಾ ಪ್ರತಿಭೆಯಲ್ಲಾ ಸೋರಿಹೋದಂತೆ ಭಾಸವಾಯಿತು. ಇನ್ನೂ ಹೆಚ್ಚಿನ ಪ್ರಯೋಗ ಹಾಗೂ ಸಾಧನೆ ಮಾಡಲು ಅವನಲ್ಲಿ ಆರೋಗ್ಯವಾಗಲೀ ಹುಮ್ಮಸ್ಸಾಗಲೀ ಇಲ್ಲವಾಯಿತು. ಒಂದು ದಿನ ತೀವ್ರ ಖಿನ್ನತೆಗೊಳಗಾದ ಅವನು, ಡಾಕ್ಟರ್ ಗ್ಯಾಷೆ ಕಣ್ಣುತಪ್ಪಿಸಿ ಊರ ಹೊರಗೆ ಹೋಗಿ “ನಾನು ಹತಾಶನಾಗಿದ್ದೇನೆ. ನನ್ನ ಭವಿಷ್ಯವೆಲ್ಲಾ ಬರೀ ಶೂನ್ಯ, ನನಗೆ ಬೇರೆ ದಾರಿ ಇಲ್ಲ” ಎಂದು ಗೀಚಿಟ್ಟು ಪಿಸ್ತೂಲಿನಿಂದ ಪಕ್ಕೆಗೆ ಗುಂಡು ಹಾರಿಸಿಕೊಂಡು ಹಾಗೇ ರೂಮಿಗೆ ಬಂದವನು “ಒಬ್ಬ ಕಲಾವಿದನಿಗೆ ಸಾವಿನ ನೋವು ಅನುಭವಿಸುವುದು ಅಷ್ಟೇನೂ ಕಷ್ಟಕರವಲ್ಲ” ಎಂದುಕೊಂಡು ಹಾಸಿಗೆ ಮೇಲೆ ಪೈಪ್ ಸೇದುತ್ತಾ ನರಳುತ್ತಾ ಒರಗಿದ. ಮರುದಿನ ಹೇಗೋ ಸುದ್ದಿ ತಿಳಿದು ಥಿಯೋ ಧಾವಿಸಿ ಬಂದ. ಆದರೆ ವಿನ್ಸೆಂಟ್ ಮೊದಲೇ ತುಂಬಾ ಕ್ಷೀಣನಾಗಿರುವುದರಿಂದ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲವೆಂದು ಡಾಕ್ಟರ್ ಕೈಚೆಲ್ಲಿದ್ದರು. ಇದಾದ ಎರಡುದಿನಗಳಲ್ಲಿ, ಜಗದಗಲ ಮುಗಿಲಗಲ, ತನ್ನ ಒಲವಿನ ಬಣ್ಣ! ಬಣ್ಣಗಳನ್ನು ಚೆಲ್ಲಿ ಚಿತ್ರಬಿಡಿಸಲು ಮಿಡಿಯುತ್ತಿದ್ದ ಕಲಾವಿದ ವಿನ್ಸೆಂಟ್ ವಾನ್‌ಗೋ ಕಣ್ಣುಮುಚ್ಚಿ ಚಿರಶಾಂತಿಗೆ ಹೋದ. ಥಿಯೋ ಅಣ್ಣನ ಅಗಲಿಕೆ ಸಹಿಸಲಾರದೆ ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ. ತನ್ನ ಪುಟ್ಟ ಮಗನಿಗೆ ವಿನ್ಸೆಂಟ್ ವಿಲ್ಲೆಮ್ ವಾನ್‌ಗೋ ಎಂದು ಹೆಸರಿಟ್ಟಿದ್ದ. ಇವರ ಪ್ರೀತಿ ವಾತ್ಸಲ್ಯಕ್ಕೆ ಸುಳಿವ ಶಾಸನವೆಂಬಂತೆ ಕಾದಂಬರಿಕಾರ ಇರ್ವಿಂಗ್ ಸ್ಟೋನ್ ವಿನ್ಸೆಂಟ್‌ನ ಅವಸಾನದ ಆ ಸನ್ನಿವೇಶವನ್ನು ಓದುಗರ ಎದೆ ಕರಗುವಂತೆ ಪುನರನುಭವಿಸಿ ಸೆರೆಹಿಡಿದಿದ್ದಾರೆ.

ಸಾಯುವಾಗ ವಿನ್ಸೆಂಟ್‌ಗೆ ಇನ್ನೂ 37 ವರ್ಷ. ಚಿತ್ರಕಲಾವಿದರೂ, ಸಂವೇದನಾಶೀಲ ಕಲಾ ವಿಮರ್ಶಕರೂ, ಕನ್ನಡದಲ್ಲಿ ವ್ಯಂಗ್ಯಚಿತ್ರ ಚರಿತ್ರೆಕಾರರೂ ಆಗಿರುವ ಗೆಳೆಯ ಡಾ. ಬಾಲಕೃಷ್ಣ ಅವರು ಪ್ರತಿಕ್ರಿಯಿಸಿರುವಂತೆ

“ವಿನ್ಸೆಂಟ್ ವಾನ್‌ಗೋ ಆತ್ಮಗಳೊಂದಿಗೆ ಸಂವಾದಿಸುವ ಕಲಾವಿದ”. ವಿನ್ಸೆಂಟ್ ವಾನ್‌ಗೋನ ಜೀವಿತಾವಧಿಯಲ್ಲಿ ಕೇವಲ ಒಂದೇಒಂದು ಕಲಾಕೃತಿ ಮಾತ್ರ ಮಾರಾಟವಾಯಿತು. ಇಂದು ಅವನ ನೂರಾರು ಕಲಾಕೃತಿಗಳ ಪ್ರಿಂಟ್‌ಗಳು ಜಗತ್ತಿನಾದ್ಯಂತ ಮಿಲಿಯನ್ ಡಾಲರ್‌ಗಳಿಗೆ ಮಾರಾಟವಾಗುತ್ತಿವೆ. ಇದೇನು ನಿಂತ ನೆಲದ ಗುಣವೋ ಬಂದ ಕಾಲ ಗುಣವೋ? ಪವಾಡವೇ ಸರಿ.

ವಿಜಯಾ ಸುಬ್ಬರಾಜ್

ವಿನ್ಸೆಂಟ್ ದಿನಾಲೂ 14 ರಿಂದ 18 ಗಂಟೆಗಳ ಕಾಲ ಒಂದೇಸಮನೆ ಚಿತ್ರ ಬಿಡಿಸುತ್ತಿದ್ದನಾದರೂ ತಮ್ಮ ಥಿಯೋನಿಗೆ ಕಾಗದ ಬರೆಯದೆ ಮಲಗಿದವನಲ್ಲ. ಅವನು ತನ್ನ ಭಾವನೆಗಳ ಬಗ್ಗೆ, ಕನಸುಗಳ ಬಗ್ಗೆ, ತನ್ನ ಬದುಕಿನ ಗೊತ್ತು ಗುರಿಗಳ ಬಗ್ಗೆ ತಿಳಿಯುವುದು ಅವನ ಪತ್ರಗಳಿಂದ. ಆ ಪತ್ರಗಳೇ ಅವನ ದುರಂತ ಆತ್ಮಕಥೆಯ
ವೃತ್ತಾಂತಗಳು. ವಿನ್ಸೆಂಟ್ ಕಳುಹಿಸುತ್ತಿದ್ದ ಚಿತ್ರಗಳನ್ನು ಪತ್ರಗಳನ್ನು ಥಿಯೋ ಜತನದಿಂದ ಪೇರಿಸಿಟ್ಟು ಕಾಪಾಡಿದ. ಅವನ ಈ ಪತ್ರಗಳು ಮೂರು ಸಂಪುಟಗಳಲ್ಲಿ 1970ರಲ್ಲಿ ಅಮೆರಿಕಾದಲ್ಲಿ ಪ್ರಕಟಗೊಂಡವು. ಕಲಾಜಗತ್ತಿಗೆ ಅವನ ವರ್ಣಚಿತ್ರಗಳು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವನ ಪತ್ರಗಳು ಉಡುಗೊರೆಯಾಗಿವೆ. ವಿನ್ಸೆಂಟ್ ಕೊನೆಕೊನೆಗೆ ತನಗೆ ಸಮಯವೇ ಇಲ್ಲವೇನೋ ಎಂಬಂತೆ ಅಥವಾ ಸಾವಿನ ಕೈಸನ್ನೆ ಅರಿತನೋ ಎಂಬಂತೆ, ಕೇವಲ ಹತ್ತು ವರ್ಷಗಳಲ್ಲಿ 800ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿದನಂತೆ.

ವಿನ್ಸೆಂಟ್ ವಾನ್‌ಗೋನ ಕೆಲವು ಅತ್ಯುತ್ತಮ ಕಲಾಕೃತಿಗಳೆಂದರೆ: ಡಾ. ಗ್ಯಾಷೆಟ್‌ರ ಭಾವಚಿತ್ರ, ಐರಿಸಸ್, ಸೂರ್ಯಕಾಂತಿ ಹೂ (ಸನ್ ಫ್ಲವರ್‍ಸ್), ಟ್ರಿಂಕ್ವೆಟೇಲ್ ಬ್ರಿಡ್ಜ್, ಲಿಡೆಲಿನ್ ರಾವೂಳ ಭಾವಚಿತ್ರ. ಇವು ಅತಿ ದೊಡ್ಡ ಮೊತ್ತಕ್ಕೆ ಹರಾಜಾಗಿವೆ.

ಕಡೆಯವರಾಗಿ “LUST FOR LIFE” ಕಾದಂಬರಿಯ ಲೇಖಕ ಇರ್‍ವಿಂಗ್ ಸ್ಟೋನ್ ಬಗ್ಗೆ ಒಂದೆರಡು ಮಾತು. ಈತ ಅಮೆರಿಕನ್ ಲೇಖಕ (1903-1989), ಸ್ಯಾನ್‌ಫ್ರಾನ್ಸಿಸ್ಕೋ ಜನ್ಮಸ್ಥಳ. “LUST FOR LIFE 1934ರಲ್ಲಿ ಪ್ರಕಟವಾಯಿತು. ಇದಲ್ಲದೆ ಈತ ಇನ್ನೊಬ್ಬ ಅದ್ಭುತ ಕಲಾವಿದ ಮೈಕೇಲ್ ಆಂಜೋಲೋನ ಜೀವನ ವೃತ್ತಾಂತ ಕುರಿತು “THE AGONY AND THE ECSTASY” (1961) ಎಂಬ ಕೃತಿಯನ್ನೂ ರಚಿಸಿದ್ದಾನೆ.

ಈ ಇಬ್ಬರು ಮಹಾನ್ ಕಲಾವಿದರ ಬಗ್ಗೆ ಕಾದಂಬರಿಗಳನ್ನು ರಚಿಸುವ ಮುನ್ನ ಇರ್‍ವಿಂಗ್ ಸ್ಟೋನ್ ಆ ಕಲಾವಿದರು ಬದುಕಿ ಬಾಳಿದ ಆ ಕಾಲಘಟ್ಟದ ಮತ್ತು ದೇಶಗಳ ಬಗ್ಗೆ, ಅವರಿದ್ದ ಪರಿಸರ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ತಲಸ್ಪರ್ಶಿಯಾದ ಅಧ್ಯಯನ ಮಾಡಿ ಸಮಕಾಲೀನ ಇತಿಹಾಸ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಂಗತಿಗಳನ್ನು ಕಲೆಹಾಕಿದ್ದಾರೆ. ಉದಾಹರಣೆಗೆ ’ಲಸ್ಟ್ ಫಾರ್ ಲೈಫ್’ ನಾವೆಲ್ಲಿನಲ್ಲಿ ಚಿತ್ರಿತವಾಗಿರುವ ಯೂರೋಪಿನ ಜನಜೀವನ, ರಾಜಕೀಯ ಹಾಗೂ ಧಾರ್ಮಿಕ ಸಂಗತಿಗಳನ್ನು ಸಮಕಾಲೀನ ಇತಿಹಾಸದ ಜೊತೆಜೊತೆಗೆ ಇಟ್ಟು ತಾಳೆ ನೋಡಬಹುದು. ಉದಯೋನ್ಮುಖ ದಂಗೆಕೋರ ಕಲಾವಿದ ವಿನ್ಸೆಂಟ್ ಓಡಾಡಿದ ವಾಸಮಾಡಿದ ಚರ್ಚ್, ಹೊಲತೋಟಗಳಿಗೆ ಲಾಳಿಯಾಡುವ ಕಾದಂಬರಿಯ ನೀಲನಕ್ಷೆಯನ್ನು ತೆಗೆದು ನೋಡಿದರೆ ಆ ಸೂಕ್ಷ್ಮಮತಿ ಕಲಾವಿದ ಹಾಗೆ ರೂಪುಗೊಳ್ಳಲು ಪ್ರೇರಣೆಕಾರಣಗಳೇನು ಎಂಬುದು ನಮಗೆ ಮನವರಿಕೆಯಾಗದಿರದು.

ಇರ್‍ವಿಂಗ್ ಸ್ಟೋನ್ ವಿನ್ಸೆಂಟ್‌ನಲ್ಲಿ ಪರಕಾಯ ಪ್ರವೇಶ ಮಾಡಿದವನಂತೆ, ತಲೆಮರೆಸಿಕೊಂಡವನಂತೆ ಆ ಪಾತ್ರದೊಂದಿಗೆ ತಾದಾತ್ಮ್ಯತೆಯನ್ನು ಬೆಳೆಸಿಕೊಳ್ಳುತ್ತಾರೆ. ವಿನ್ಸೆಂಟ್‌ನ ಕಣ್ಣಲ್ಲಿ ಕಣ್ಣಿಟ್ಟು ಅಂದಿನ ಕಲಾಪ್ರಪಂಚದ ಆಗುಹೋಗುಗಳನ್ನು ವಿಮರ್ಶಿಸುತ್ತಾರೆ. ಹೀಗಾಗಿ ಇರ್‍ವಿಂಗ್ ಸ್ಟೋನ್ ಜಾಗತಿಕ ಕಾದಂಬರಿಕಾರರ ಸಾಲಿನಲ್ಲಿ ಅಗ್ರಪಂಕ್ತಿಗೆ ನಿಲ್ಲಲು ಅರ್ಹರು

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...