ರಾಜ್ಯದ ಖಾಸಗಿ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನಿಗದಿಪಡಿಸುವ ರಾಜ್ಯ ಸಚಿವ ಸಂಪುಟ ಅನುಮೋದಿಸಿದ ಕರಡು ಮಸೂದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು (ಆ.6) ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠವು ಡಾ. ಅಮೃತಲಕ್ಷ್ಮಿ ಆರ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಸಾಂವಿಧಾನಿಕ ಸವಾಲುಗಳು ಇತ್ಯರ್ಥವಾಗುವವರೆಗೆ ಮಸೂದೆಯನ್ನು ಹಿಂಪಡೆಯಲು ಮತ್ತು ಅದರ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು.
ರಾಜ್ಯದ ಖಾಸಗಿ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇಖಡ 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.
ಅರ್ಜಿದಾರರು, ಹರಿಯಾಣ ಸರ್ಕಾರ vs ಐಎಂಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್ ಮತ್ತು ಇತರರ ಪ್ರಕರಣವನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ, 30 ಸಾವಿರ ರೂಪಾಯಿಗಿಂತ ಕಡಿಮೆ ವೇತನ ಪಡೆಯುವ ಸ್ಥಳೀಯರಿಗೆ ಖಾಸಗಿ ಕಂಪನಿಗಳಲ್ಲಿ ಶೇ.75 ಮೀಸಲಾತಿ ಕಲ್ಪಿಸುವ ಹರಿಯಾಣ ಸರ್ಕಾರದ ಆದೇಶ ‘ಅಸಂವಿಧಾನಿಕ’ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿತ್ತು.
ಅರ್ಜಿದಾರರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಅವರು ನೀತಿ ಆಯೋಗದ ಬದಲಾವಣೆಯ ಪ್ರಾದೇಶಿಕ ಮಾರ್ಗದರ್ಶಕರಾಗಿದ್ದಾರೆ. ಆಕ್ಷೇಪಿಸಲಾದ ಮಸೂದೆಯ ಕಾರಣದಿಂದಾಗಿ, ಅವರ ಉದ್ಯೋಗವನ್ನು ಪುನರಾರಂಭಿಸುವ ಅವಕಾಶಕ್ಕೆ ಅಡ್ಡಿಯಾಗುತ್ತದೆ ಎಂದು ಸರ್ಕಾರಿ ವಕೀಲರು ಗಮನಸೆಳೆದರು.
ಇದಕ್ಕೆ ನ್ಯಾಯಾಲಯವು, ಅರ್ಜಿ ಸಲ್ಲಿಕೆಯ ಹಿಂದೆ ಅರ್ಜಿದಾರರ ವೈಯಕ್ತಿಕ ಹಿತಾಸಕ್ತಿಯ ನಿರ್ದಿಷ್ಟ ಅಂಶವಿದೆ ಎಂದು ಹೇಳಿತು ಮತ್ತು ಅರ್ಜಿದಾರರಿಗೆ 5,000 ರೂ. ದಂಡ ವಿಧಿಸಿತು.
ಆದರೆ, ಅರ್ಜಿದಾರರ ಪರ ವಕೀಲರು, ತನ್ನ ಕಕ್ಷಿದಾರರು ಗರ್ಭಿಣಿ ಮಹಿಳೆಯಾಗಿದ್ದು ಅರ್ಜಿಯಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿಯ ಉದ್ದೇಶ ಇಲ್ಲ ಎಂದರು. ನಂತರ ನ್ಯಾಯಾಲಯ ದಂಡ ವಿಧಿಸುವ ನಿರ್ಧಾರವನ್ನು ಹಿಂತೆಗೆದುಕೊಂಡಿತು.
ಖಾಸಗಿ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನಿಗದಿಪಡಿಸುವ ಮಸೂದೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆದರೆ, ಅದರ ಮಂಡನೆಗೆ ಮುನ್ನ ಖಾಸಗಿ ವಲಯದಿಂದ ವಿರೋಧ ವ್ಯಕ್ತವಾದ ಹಿನ್ನೆಲೆ, ಸರ್ಕಾರ ಮಸೂದೆಯನ್ನು ತಾತ್ಕಾಲಿವಾಗಿ ತಡೆ ಹಿಡಿದಿದೆ.
ಇದನ್ನೂ ಓದಿ : ವಾಲ್ಮೀಕಿ ನಿಗಮ ಹಗರಣ: ಪ್ರಾಥಮಿಕ ಚಾರ್ಜ್‌ಶೀಟ್‌ನಿಂದ ನಾಗೇಂದ್ರ ಹೆಸರು ಕೈಬಿಟ್ಟ ಎಸ್‌ಐಟಿ?