Homeಚಳವಳಿಲಕ್ನೋದಲ್ಲಿ ಕಿಸಾನ್ ಮಹಾಪಂಚಾಯತ್: ಬಿಜೆಪಿ ವಿರುದ್ಧ ರೈತರ ಸಮರ

ಲಕ್ನೋದಲ್ಲಿ ಕಿಸಾನ್ ಮಹಾಪಂಚಾಯತ್: ಬಿಜೆಪಿ ವಿರುದ್ಧ ರೈತರ ಸಮರ

ಸಂಯುಕ್ತ ಕಿಸಾನ್ ಮೋರ್ಚಾದ ಈ ಮಹಾಪಂಚಾಯತ್ ರೈತ ವಿರೋಧಿ ಸರ್ಕಾರ ಮತ್ತು ಮೂರು ಕರಾಳ ಕಾನೂನುಗಳ ಶವಪೆಟ್ಟಿಗೆಗೆ ಕೊನೆಯ ಮೊಳೆ - ರಾಕೇಶ್ ಟಿಕಾಯತ್

- Advertisement -
- Advertisement -

ಒಕ್ಕೂಟ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಮತ್ತು ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಕಾನೂನುಗಳ ಜಾರಿಗೆ ಬಿಜೆಪಿಯೇ ನೇರ ಕಾರಣ ಎಂದು ಆರೋಪಿಸಿರುವ ರೈತರು ಬಿಜೆಪಿಯನ್ನು ರಾಜಕೀಯವಾಗಿ ಸೋಲಿಸಲು ಸಜ್ಜಾಗಿದ್ದಾರೆ.

ಇತ್ತೀಚಿನ ಉಪ ಚುನಾವಣೆಗಳಲ್ಲಿ ಬಿಜೆಪಿ ಪಕ್ಷಕ್ಕಾದ ಸೋಲು ರೈತರನ್ನು ಹುರದುಂಬಿಸಿದೆ. ಈಗ ಬಿಜೆಪಿ ಆಳ್ವಿಕೆಯಲ್ಲಿರುವ ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ರಾಜಧಾನಿಗೆ ಲಗ್ಗೆಯಿಡಲು ರೈತರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 22 ರಂದು ಲಕ್ನೋದಲ್ಲಿ ಐತಿಹಾಸಿನ ಕಿಸಾನ್ ಮಹಾಪಂಚಾಯತ್ ಆಯೋಜಿಸಲಾಗಿದೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

2022 ರ ಆರಂಭದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಅದಕ್ಕೆ ಪೂರ್ವಭಾವಿಯಾಗಿ ರೈತ ಹೋರಾಟದ ಚಟುವಟಿಕೆಗಳು ಗರಿಗೆದರಿವೆ. ಈ ಮಹಾಪಂಚಾಯತ್ ಸರ್ಕಾರದ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆ ಎಂದು ಸಾಬೀತು ಮಾಡುತ್ತೇವೆ ಎಂದು ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ನವೆಂಬರ್ 22 ರಂದು ಲಕ್ನೋದಲ್ಲಿ ಆಯೋಜಿಸಲಾದ ಕಿಸಾನ್ ಮಹಾಪಂಚಾಯತ್ ಐತಿಹಾಸಿಕವಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ ಈ ಮಹಾಪಂಚಾಯತ್ ರೈತ ವಿರೋಧಿ ಸರ್ಕಾರ ಮತ್ತು ಮೂರು ಕರಾಳ ಕಾನೂನುಗಳ ಶವಪೆಟ್ಟಿಗೆಗೆ ಕೊನೆಯ ಮೊಳೆ ಎಂದು ಸಾಬೀತುಪಡಿಸುತ್ತದೆ. ಈಗ ಪೂರ್ವಾಂಚಲದಲ್ಲೂ ಅನ್ನದಾತರ ಚಳವಳಿ ತೀವ್ರಗೊಳ್ಳಲಿದೆ” ಎಂದು ತಿಳಿಸಿದ್ದಾರೆ.

14 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 30 ವಿಧಾನಸಭಾ ಕ್ಷೇತ್ರಗಳು, ಮೂರು ಲೋಕಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ಉಪಚುನಾವಣೆ ನಡೆದಿತ್ತು. 7 ವಿಧಾನಸಭಾ ಮತ್ತು ಒಂದು ಲೋಕಸಭಾ ಹೊರತುಪಡಿಸಿ ಉಳಿದೆಲ್ಲಾ ಕಡೆ ಬಿಜೆಪಿ ಸೋಲನ್ನು ಅನುಭವಿಸಿತ್ತು. “ಈ ಫಲಿತಾಂಶವು ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ನೀಡಿದ ಉತ್ತರವಾಗಿದೆ. ರೈತ ವಿರೋಧಿ ಕಾಯ್ದೆಗಳಿಗೆ ಉತ್ತರವನ್ನು ಉಪಚುನಾವಣೆಯ ಮೂಲಕ ಜನತೆ ನೀಡಿದ್ದಾರೆ. ಇದು ಬಿಜೆಪಿಗೆ ಎಚ್ಚರಿಕೆಯ ಕರೆಘಂಟೆಯಾಗಿದೆ. ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ತಾನದ ಫಲಿತಾಂಶಗಳು ಬಿಜೆಪಿಯ ವಿರುದ್ಧವಾಗಿ ಬಂದಿವೆ” ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಪ್ರತಿಕ್ರಿಯಿಸಿತ್ತು.

ಮಿಷನ್ ಉತ್ತರ ಪ್ರದೇಶ ಮತ್ತು ಉತ್ತರ ಖಂಡ

ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದಿಚೆರಿ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಿತ್ತು. ಅಸ್ಸಾಂ ಮತ್ತು ಪುದಿಚೆರಿ ಬಿಟ್ಟರೆ ಉಳಿದೆಲ್ಲ ಕಡೆ ಬಿಜೆಪಿ ಸೋಲನ್ನು ಅನುಭವಿಸಿತ್ತು. ಇದರ ನಂತರ ಸಂಯುಕ್ತ ಕಿಸಾನ್ ಮೋರ್ಚಾ ಮಿಷನ್ ಉತ್ತರ ಪ್ರದೇಶ ಮತ್ತು ಉತ್ತರ ಖಂಡ ಯೋಜನೆ ಘೋಷಿಸಿದೆ. 2022 ರಲ್ಲಿ ಚುನಾವಣೆ ನಡೆಯಲಿರುವ ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಸೋಲಿಸುವುದಾಗಿ ರೈತರು ಘೋಷಿಸಿದ್ದಾರೆ.

ಬಿಜೆಪಿಯನ್ನು ತಿರಸ್ಕರಿಸುವಂತೆ ಉತ್ತರಪ್ರದೇಶ ಮತ್ತು ಉತ್ತರ ಖಂಡದ ರೈತರನ್ನು ಮನವೊಲಿಸುವುದು ಇದರ ಗುರಿಯಾಗಿದೆ. ಪ್ರಸ್ತುತ ಪಶ್ಚಿಮ ಉತ್ತರ ಪ್ರದೇಶ ಮತ್ತು ದಕ್ಷಿಣ ಉತ್ತರ ಖಂಡದಲ್ಲಿ ಮಾತ್ರ ರೈತಾಂದೋಲನ ವ್ಯಾಪಕತೆಯನ್ನು ಹೊಂದಿದೆ. ಇದನ್ನು ಎರಡೂ ರಾಜ್ಯಗಳುದ್ದಕ್ಕೂ ವಿಸ್ತರಿಸುವುದು ಈ ‘ಮಿಷನ್ ಯುಪಿ-ಯುಕೆ’ಯ ಗುರಿಯಾಗಿದೆ.

ರೈತ ಮುಖಂಡ ಯೋಗೇಂದ್ರ ಯಾದವ್ ಮಾತನಾಡಿ, “ನಾವೀಗ ಈ ಪ್ರತಿಭಟನೆಯನ್ನು ರಾಷ್ಟ್ರಾದ್ಯಂತ ವಿಸ್ತರಿಸುವ ಹಂತಕ್ಕೆ ಬಂದಿದ್ದೇವೆ. ಒಂದು ಚಿಕ್ಕ ಭಾಗದಿಂದ ಇಡೀ ದೇಶಕ್ಕೆ ಹೋರಾಟ ವಿಸ್ತರಿಸುತ್ತಿದೆ. ಉತ್ತರ ಭಾರತದಲ್ಲಿ ಅದರಲ್ಲೂ ಪಂಜಾಬ್, ಹರಿಯಾಣ, ರಾಜಸ್ತಾನ, ಉತ್ತರಾಖಂಡ, ಉತ್ತರ ಪ್ರದೇಶಗಳಲ್ಲಿ ರೈತ ಪ್ರತಿಭಟನೆ ತಾನಾಗೇ ವಿಸ್ತರಿಸಿದೆ. ಈಗ ಈ ಪ್ರತಿಭಟನೆ ದೇಶಾದ್ಯಂತ ವಿಸ್ತರಿಸಬೇಕಿದೆ. ಅದರ ಭಾಗವಾಗಿ ಮಿಷನ್ ಉತ್ತರ ಪ್ರದೇಶ, ಮಿಷನ್ ಉತ್ತರಖಂಡ ಯೋಜನೆ ಘೋಷಿಸಿದ್ದೇವೆ ಎಂದಿದ್ದರು.

ಪಂಜಾಬ್‌

ಪಂಜಾಬಿನ ಚುನಾವಣೆಗೆ ಇದೇ ರಣನೀತಿ ಅನ್ವಯವಾಗುವುದಿಲ್ಲ ಎನ್ನುತ್ತಾರೆ ರೈತ ಮುಖಂಡರು. ಏಕೆಂದರೆ ಅಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಅಕಾಲಿ ದಳ ಇಂದು ಪ್ರತಿಸ್ಪರ್ಧಿಯಾಗೇ ಉಳಿದಿಲ್ಲ. ಪಂಜಾಬ್ ಮತ್ತು ಹರ್ಯಾಣ ಎರಡೂ ರಾಜ್ಯಗಳಲ್ಲಿ ಬಿಜೆಪಿ ನಾಮಾವಶೇಷವಾಗಿಬಿಟ್ಟಿದೆ. ರೈತಾಂದೋಲನ ಈಗಾಗಲೇ ಇದನ್ನು ಆಗುಮಾಡಿಬಿಟ್ಟಿದೆ. ಬಿಜೆಪಿಯನ್ನು ಸೋಲಿಸಿ ಎಂಬ ಕರೆಗೆ ವಿಶೇಷ ಅರ್ಥವೇನಿಲ್ಲ. ಪಂಜಾಬಿನಲ್ಲಿ ಈ ಬಾರಿಯ ಸ್ಪರ್ಧೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ನಡೆಯಲಿದೆ. ಯಾರನ್ನು ಸೋಲಿಸಬೇಕು? ಎಂಬುದು ಇಲ್ಲಿ ಮುಖ್ಯವಲ್ಲದಿರುವುದರಿಂದ ಯಾರನ್ನು ಗೆಲ್ಲಿಸಬೇಕು? ಎಂಬ ಚರ್ಚೆ ರಾಜಕೀಯ ನಿಲುವುಗಳ ಕೇಂದ್ರವಾಗಲಿದೆ. ಈ ಚರ್ಚೆ ಮತ್ತು ನಿಲುವುಗಳು ಭಿನ್ನ ಅಭಿಪ್ರಾಯಗಳಾಗಿ ಮೂಡಿ, ಭಿನ್ನಾಭಿಪ್ರಾಯಗಳಾಗಿ ಬೆಳೆಯುವ ಸಾಧ್ಯತೆ ಇದೆ. ರೈತಾಂದೋಲನದ ಐಕ್ಯತೆಗೆ ಧಕ್ಕೆ ತರುವ ಎಲ್ಲಾ ಸಾಧ್ಯತೆ ಇದೆ. ಈ ಅನಾಹುತವನ್ನು ತಡೆಯುವ ಬಗೆ ಹೇಗೆ ಎಂಬ ಚಿಂತೆ ರೈತ ಮುಂದಾಳುಗಳನ್ನು ಕಾಡುತ್ತಿದೆ. ಐಕ್ಯತೆಯನ್ನು ಕಾಯ್ದಿಟ್ಟುಕೊಳ್ಳಲು “ನೋ ಎಲೆಕ್ಷನ್ ಟಿಲ್ ರೆಸೊಲೂಷನ್” ಎಂಬ ಕರೆಕೊಡುವ ಕುರಿತು ಚಿಂತನೆ ನಡೆದಿದೆ. ಅಂದರೆ ರೈತರ ಪ್ರಶ್ನೆ ಬಗೆಹರಿಯುವ ತನಕ ಪಂಜಾಬಿನಲ್ಲಿ ಚುನಾವಣೆಯೇ ಬೇಡ ಎಂಬ ನಿಲುವನ್ನು ತಾಳಬೇಕು ಎಂಬುದು ಕೆಲವು ಮುಖಂಡರ ಪ್ರಸ್ತಾಪವಾಗಿದೆ. ಇದಿನ್ನು ಪಂಜಾಬಿನ 32 ರೈತ ಸಂಘಟನೆಗಳ ಒಕ್ಕೂಟದಲ್ಲಿ ಚರ್ಚೆಯಾಗಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ. ಒಂದು ವೇಳೆ ರೈತ ಸಂಘಟನೆಗಳು ಏಕಾಭಿಪ್ರಾಯಕ್ಕೆ ತಲುಪಿದಲ್ಲಿ ಇದೊಂದು ಹೊಸ ರೀತಿಯ ರಾಜಕಾರಣಕ್ಕೆ ದಾರಿಮಾಡಲಿದೆ. ರೈತರ ಮಾತನ್ನು ಧಿಕ್ಕರಿಸಿ ಚುನಾವಣೆಗೆ ಹೋಗುವ ಧೈರ್ಯವನ್ನು ಕಾಂಗ್ರೆಸ್ ಆಗಲೀ, ಆಮ್ ಆದ್ಮಿ ಪಾರ್ಟಿಯಾಗಲೀ ತೋರಲು ಸಾಧ್ಯವೇ ಇಲ್ಲ. ಪ್ರತಿಪಕ್ಷಗಳು ಚುನಾವಣೆಗಳನ್ನು ಬಹಿಷ್ಕರಿಸಿದರೆ ಬಿಜೆಪಿ ಮತ್ತು ಅಕಾಲಿದಳಗಳು ಇಕ್ಕಟ್ಟಿಗೆ ಸಿಲುಕುತ್ತವೆ. ಬಲವಂತವಾಗಿ ಚುನಾವಣೆ ಮಾಡಿಸಲು ಹೊರಟರೆ ತೀವ್ರ ಸ್ವರೂಪದ ರೈತ ಪ್ರತಿರೋಧವನ್ನು ಎದುರಿಸಬೇಕಾಗಿ ಬರಲಿದೆ. ಏನಾಗಲಿದೆ ಕಾದು ನೋಡಬೇಕಿದೆ.


ಇದನ್ನೂ ಓದಿ: ರೈತಾಂದೋಲನ ಮುಂದೇನು? – ನೂರ್ ಶ್ರೀಧರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ ಜನರ ಮನಸ್ಸಿನಲ್ಲಿ ಅಪನಂಬಿಕೆ ಸೃಷ್ಟಿಸಿದೆ: ಅಖಿಲೇಶ್ ಯಾದವ್

0
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ ಬಳಕೆಗೆ ಆಗ್ರಹಿಸಿದ್ದು, ಇವಿಎಂಗಳನ್ನು ನೇರವಾಗಿ ಉಲ್ಲೇಖಿಸದೆ ಈ ಯಂತ್ರಗಳು ಮತ್ತು ಮತದಾನದ ಫಲಿತಾಂಶಗಳು ಜನರ ಮನಸ್ಸಿನಲ್ಲಿ ಅಪನಂಬಿಕೆಯ ಭಾವನೆಯನ್ನು ಮೂಡಿಸಿವೆ...