Homeಮುಖಪುಟಪ್ರತಿಭಟಿಸುವುದು ಭಯೋತ್ಪಾದನೆಯಲ್ಲ ಎಂದ ದೆಹಲಿ ಹೈಕೋರ್ಟ್: ಸ್ವಾಗತಿಸಿದ ನ್ಯಾಯವಾದಿಗಳು ಮತ್ತು ಕಾನೂನು ತಜ್ಞರು

ಪ್ರತಿಭಟಿಸುವುದು ಭಯೋತ್ಪಾದನೆಯಲ್ಲ ಎಂದ ದೆಹಲಿ ಹೈಕೋರ್ಟ್: ಸ್ವಾಗತಿಸಿದ ನ್ಯಾಯವಾದಿಗಳು ಮತ್ತು ಕಾನೂನು ತಜ್ಞರು

- Advertisement -
- Advertisement -

ದೆಹಲಿ ಹೈಕೋರ್ಟ್‌ ಕಳೆದ ಕೆಲವು ದಿನಗಳಿಂದ CAA ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. CAA ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ ಕಾರ್ಯಕರ್ತರು ಮತ್ತು ಹೋರಾಟಗಾರರನ್ನು ಕೇಂದ್ರ ಸರ್ಕಾರ UAPA ಕಾಯ್ದೆಯಡಿ ಬಂಧಿಸಿರುವುದನ್ನು ದೆಹಲಿ ಹೈಕೋರ್ಟ್‌ ಈ ಸಂದರ್ಭದಲ್ಲಿ ವ್ಯಾಪಕವಾಗಿ ಖಂಡಿಸಿದೆ. ‘ಸಂವಿಧಾನದತ್ತ ಪ್ರತಿಭಟನೆಯ ಹಕ್ಕು ಕಸಿದುಕೊಂಡು, UAPA ಅಡಿಯಲ್ಲಿ ಅದನ್ನು ಭಯೋತ್ಪಾದನೆ ಎಂದು ಪರಿಗಣಿಸಲಾಗದು’ ಎಂದ ದೆಹಲಿ ಹೈಕೋರ್ಟ್ ಮೂವರು ಕಾರ್ಯಕರ್ತರಿಗೆ ಜಾಮೀನು ನೀಡಿದೆ. ದೇಶದ ಅನೇಕ ನ್ಯಾಯವಾದಿಗಳು ಮತ್ತು ಮಾನವ ಹಕ್ಕು ಹೋರಾಟಗಾರರು ದೆಹಲಿ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿ ಉಚ್ಛ ನ್ಯಾಯಾಲಯವು ಸರ್ಕಾರವನ್ನು ಮತ್ತು ವ್ಯವಸ್ಥೆಯನ್ನು ಟೀಕಿಸುವುದನ್ನು ದೇಶದ್ರೋಹವೆಂದು ಪರಿಗಣಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಕೇಂದ್ರ ಸರ್ಕಾರ ಕಾನೂನುಗಳನ್ನು ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿದೆ. ದೇಶಾದ್ಯಂತ ಅನೇಕ ನ್ಯಾಯವಾದಿಗಳು ಮತ್ತು ಕಾನೂನು ತಜ್ಞರು ದೆಹಲಿ ನ್ಯಾಯಾಲಯವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಮದನ್‌ ಬಿ ಲೋಕೂರ್ ಅವರು ಸಹ ದೆಹಲಿ ಹೈ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಸರ್ಕಾರದ ವಿರುದ್ಧದ ಟೀಕೆಗೂ ದೇಶದ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಕ್ಕೂ ನಡುವೆ ಇರುವ ವ್ಯತ್ಯಾಸವನ್ನು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರಾಳ UAPA ಮತ್ತು ದೇಶದ್ರೋಹದ ಕಾನೂನುಗಳು ಇರುವುದು ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಲಿಕ್ಕಾಗಿ. ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸಲು ಜಾರಿ ಮಾಡಿದ ಇಂತಹ ಕರಾಳ ಕಾಯ್ದೆಗಳನ್ನು ದೇಶದಲ್ಲಿ ಸರ್ಕಾರಗಳು ತನ್ನ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರಂತ. ಈ ಕರಾಳ ಕಾನೂನುಗಳನ್ನು ಅತ್ಯಂತ ಅಪರೂಪದ ಸಂದರ್ಭದಲ್ಲಿ ಬಳಕೆ ಮಾಡಬೇಕೆಂದು ಈ ಹಿಂದೆಯೂ ನ್ಯಾಯಾಲಯಗಳು ಹೇಳಿವೆ. ದೆಹಲಿ ಹೈಕೋರ್ಟ್ ಒಂದು ಹೆಜ್ಜೆ ಮುಂದೆ ಹೋಗಿ ಸ್ಪಷ್ಟ ಶಬ್ಧಗಳಲ್ಲಿ ಹೋರಾಟಗಾರರ ಮೇಲೆ UAPA  ಕಾಯ್ದೆ ಬಳಕೆಯನ್ನು ಖಂಡಿಸಿದೆ. ದೆಹಲಿ ನ್ಯಾಯಾಲಯದ ಹಾದಿಯಲ್ಲಿಯೇ ಇತರ ಹೈಕೋರ್ಟ್‌ಗಳು ಶೀಘ್ರವೇ ಹೆಜ್ಜೆ ಇಡುವಂತಾಗಬೇಕು. ಅತ್ಯಂತ ಪ್ರಬಲವಾದ ಸಾಕ್ಷಿಗಳಿದ್ದರೆ ಮಾತ್ರ UAPA ಕಾಯ್ದೆಯನ್ನು ಬಳಕೆ ಮಾಡಬೇಕು ಎಂದು ಜಸ್ಟಿಸ್ ಮದನ್ ಬಿ ಲೋಕೋರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ :ಬಿಬಿಸಿ ಪತ್ರಕರ್ತನ್ನು ಬೆನ್ನಟ್ಟಿ ‘ದೇಶದ್ರೋಹಿ’ ಎಂದ ಪ್ರತಿಭಟನಾಕಾರರು!

ದೆಹಲಿ ಹೈಕೋರ್ಟ್ ಹೊಸದಾಗಿ ಏನನ್ನೂ ಹೇಳಿಲ್ಲ. ಇರುವ ಕಾನೂನುಗಳನ್ನು ನಿರ್ದಿಷ್ಟ ಪ್ರಕರಣಕ್ಕೆ ಅನ್ವಯಿಸಿದೆ. ನ್ಯಾಯಾಂಗವು ಕಾರ್ಯಶೀಲವಾಗಿ ಮತ್ತು ಪ್ರಗತಿಪರವಾಗಿ ವರ್ತಿಸಿದೆ. ಹೋರಾಟಗಾರರು ಈಗಾಗಲೇ 1 ವರ್ಷವನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ಹಿರಿಯ ನ್ಯಾಯವಾದಿ ದುಶ್ಯಂತ್ ದವೆ ಅವರು ತಿಳಿಸಿದ್ದಾರೆ.

ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನಾವು UAPA ನಂತಹ ಕರಾಳ ಕಾನೂನುಗಳನ್ನು ಹೋರಾಟಗಾರರ ವಿರುದ್ಧ ಬಳಸಿಕೊಂಡರೆ ದೇಶವನ್ನು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲು ಸಾಧ್ಯವಾಗುವುದಿಲ್ಲ ಎಂದು ದುಶ್ಯಂತ್ ದವೆ ದೆಹಲಿ ನ್ಯಾಯಾಲಯದ ತೀರ್ಪಿನ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸರ್ಕಾರವೊಂದೆ UAPA ಕಾನೂನನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಕಾಂಗ್ರೆಸ್ ಕೂಡ POTA ಕಾಯ್ದೆಯ ಮೂಲಕ ಹಿಂದೆ ನೂರಾರು ಜನರನ್ನು ಜೈಲಿಗೆ ಕಳುಹಿಸಿತ್ತು ಎಂದು ದುಶ್ಯಂತ್ ದವೆ ನೆನಪಿಸಿಕೊಂಡಿದ್ದಾರೆ.

ದೆಹಲಿ ಹೈಕೋರ್ಟ್ ತೀರ್ಪು ಅತ್ಯಂತ ಮಹತ್ವವಾದದ್ದು.  ದೇಶದಲ್ಲಿ ಎಲ್ಲರ ಮೇಲೂ ದೇಸದ್ರೋಹದ ಕಾನೂನು ಬಳಕೆಯಾಗುತ್ತಿರುವ ಹೊತ್ತಿನಲ್ಲಿ ದೆಹಲಿ ಹೈಕೋರ್ಟ್ ತೀರ್ಪು ದೊಡ್ಡ ಮೈಲಿಗಲ್ಲಾಗಿದೆ ಎಂದು ನ್ಯಾಯವಾದಿ ವೃಂದಾ ಗ್ರೋವರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಪೊಲೀಸರು ಹೋರಾಟಗಾರರ ಮೇಲೆ ಕರಾಳ UAPA ಮತ್ತು ದೇಶದ್ರೋಹದ ಪ್ರಕರಣವನ್ನು ದಾಖಲಿಸುತ್ತಿರುವುದನ್ನು ನೋಡಿದ್ದೇವೆ. ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ಸಾಮಾನ್ಯ ಸಂದರ್ಭದಲ್ಲಿ ಬಳಸಿಕೊಳ್ಳುವುದನ್ನು ದೆಹಲಿ ಹೈಕೋರ್ಟ್ ಖಂಡಿಸಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಸರ್ಕಾರದ ನೀತಿ ನಿಯಮಮಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ಅದನ್ನು UAPA ಮೂಲಕ ಮೊಟಕುಗಳಿಸಲು ಸಾಧ್ಯವಿಲ್ಲ. ತ್ವರಿತವಾಗಿ ವಿಚಾರಣೆ ನಡೆಸಲು ಸಾಧ್ಯವಿಲ್ಲವಾದರೆ ಆರೋಪಿಗಳಿಗೆ ಜಾಮೀನು ಸಿಗಬೇಕು ಎಂದು ಹೈ ಕೋರ್ಟ್ ಹೇಳಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು ವೃಂದಾ ಗ್ರೋವರ್ ಹೈ ಕೋರ್ಟ್‌ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಭಯೋತ್ಪಾದನಾ ವಿರೋಧಿ ಕಾನೂನುಗಳು ಅತ್ಯಂತ ಕಠಿಣವಾಗಿರುತ್ತವೆ. ಅವು ಉಗ್ರಗಾಮಿ ಚಟುವಟಿಕೆಗಳನ್ನು ನಿಯಂತ್ರಿಸಲು ರೋಪಿಸಿದ ಕಾನೂನುಗಳಾಗಿರುತ್ತವೆ. ಸರ್ಕಾರ ಜನರ ಟೀಕೆ, ಭಿನ್ನಾಭಿಪ್ರಾಯಗಳನ್ನು  ಭಯೋತ್ಪಾದನಾ ಕೃತ್ಯ ಎಂದು ಪರಿಗಣಿಸಬಾರದು. ಜನರ ಸಂವಿಧಾನಬದ್ದ ಹಕ್ಕು ಮತ್ತು ಸರ್ಕಾರದ ಬಯಕೆಗಳ ನಡುವೆ ಸ್ಪಷ್ಟ ಗೆರೆಗಳನ್ನು ಸರ್ಕಾರ ಗುರುತಿಸಬೇಕು ಎಂದು ಹಿರಿಯ ನ್ಯಾಯವಾದಿ ಗೀತಾ ಲುತ್ರಾ ಪ್ರತಿಕ್ರಿಯಿಸಿದ್ದಾರೆ.

UAPA ಬಳಕೆಯನ್ನು ಅತ್ಯಂತ ವಿವೇಚನೆಯಿಂದ ಮಾಡಬೇಕು. ಕಾನೂನು ದುರ್ಬಳಕೆಯಾಗುತ್ತಿದೆ ಎಂಬ ಕಾರಣಕ್ಕೆ ಕಾನೂನನ್ನು ರದ್ದು ಮಾಡಲು ಸಾಧ್ಯವಿಲ್ಲ. ಆದರೆ ನ್ಯಾಯಾಲಯಗಳು UAPA ಮತ್ತು ದೇಶದ್ರೋಹದ ಕಾನೂನುಗಳನ್ನು ಯಾವ ಸಂದರ್ಭದಲ್ಲಿ ಬಳಸಿಕೊಳ್ಳಬಹುದೆಂದು ನ್ಯಾಯಾಲಯಗಳು ಸರಿಯಾದ ಮಾರ್ಗಸೂಚಿಗಳನ್ನು ಹಾಕಬೇಕು ಎಂದು ಕಾನೂನು ಆಯೋಗದ ಮಾಜಿ ಅಧ್ಯಕ್ಷ ಬಿ.ಎಸ್. ಚೌಹಾಣ್ UAPA ಕಾನೂನಿನ ಬಳಕೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ :ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಮಂಡ್ಯದಲ್ಲಿ ಈಡುಗಾಯಿ ಸೇವೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...