Homeಕರ್ನಾಟಕಹಿಂದೂ, ಮುಸ್ಲಿಂ ಯುವ ಮಿತ್ರರಿಗೆ ಶಿಕ್ಷಣ ತಜ್ಞ ಎಂ.ಜಿ.ಹೆಗಡೆ ಪತ್ರ

ಹಿಂದೂ, ಮುಸ್ಲಿಂ ಯುವ ಮಿತ್ರರಿಗೆ ಶಿಕ್ಷಣ ತಜ್ಞ ಎಂ.ಜಿ.ಹೆಗಡೆ ಪತ್ರ

- Advertisement -
- Advertisement -

ಹಿಂದೂ ಮುಸ್ಲಿಂ ಯುವ ಮಿತ್ರರೇ, ನಾನು ಇತ್ತೀಚೆಗೆ ಕೋಮು ಗಲಭೆಯಾದರೆ, ಯಾರದರೂ ಸತ್ತರೆ ತೀರಾ ಭಾವನಾತ್ಮಕವಾಗಿ ಸ್ಪಂದಿಸುವುದನ್ನು ಕಡಿಮೆ ಮಾಡಿದ್ದೇನೆ. ಯಾಕೆಂದರೆ ಇವತ್ತು ಕೆಲವರು ಹೇಳುವುದನ್ನು ನಾನು 30 ವರ್ಷಗಳ ಹಿಂದೆ ಎಕಾಂಗಿಯಾಗಿ ಬೊಬ್ಬೆ ಹೊಡೆದು ಹೇಳಿದ್ದೆ. ಆಗ ಯಾರೂ ಕೂಡಾ ಅದನ್ನ ಕೇಳಿಸಿಕೊಳ್ಳಲಿಲ್ಲ. ಈಗ ಹೆಚ್ಚು ಜನರಿಗೆ ಅರ್ಥವಾದಂತಿದೆ.

ಬಡವರ ಮನೆಯ ಮಕ್ಕಳಿಗೆ ಮಾತ್ರ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದಲ್ಲಿ ಹೊಡೆದಾಡಿಕೊಳ್ಳುವ ಪರಿಸ್ಥಿತಿ ಯಾಕೆ? ಸಾಮಾಜಿಕವಾಗಿ ಆರ್ಥಿಕವಾಗಿ ಮೇಲೆ ಇರುವ ಯಾರಿಗೂ ಸಮಸ್ಯೆಗಳಾಗದ್ದು ಈ ಯುವಕರಿಗೇಕೆ ಸಮಸ್ಯೆ ಅಂತಾ ಕೇಳಿದ್ದೆ. ಹಿಂದೂ ಮುಸ್ಲಿಂನ ರಾಜಕೀಯ ನಾಯಕರ ಮನೆಯ ಮಕ್ಕಳು ಇಂತಹ ಸಂಘಟನೆಗಳಲ್ಲಿ ಕನಿಷ್ಠ ಸದಸ್ಯರಾಗಿಯೂ ಇರುವುದಿಲ್ಲ ಯಾಕೆ ಎಂದೂ ಕೇಳಿದ್ದೆ. ಈಗ ಅನೇಕರು ಈ ಪ್ರಶ್ನೆ ತಡವಾಗಿ ಕೇಳುತ್ತಿದ್ದಾರೆ. ಸಂತೋಷ.

ಹೀಗೆ ಹೇಳಿದ ತಕ್ಷಣ, “ಅರೇ ನಾವು ನಮ್ಮ ಧರ್ಮದ ಸಂಘಟನೆ ಮಾಡಿಕೊಳ್ಳುವುದು ತಪ್ಪಾ” ಅನ್ನುತ್ತೀರಿ. ಖಂಡಿತ ತಪ್ಪಲ್ಲ. ಅದು ನಿಮ್ಮ ನಿಮ್ಮ ಧರ್ಮದಲ್ಲಿನ ಉತ್ತಮ ವಿಷಯ ಪ್ರಚಾರಕ್ಕೆ, ಜೀವನ ಪದ್ಧತಿಯನ್ನು ಆದರ್ಶ ಮತ್ತು ಮೌಲ್ಯಗಳೊಂದಿಗೆ ಬದುಕಲು ಪ್ರೇರಣೆಯಾಗುವುದಕ್ಕೆ ಮತ್ತು ನಾವು ನಂಬುವ ದೇವರೊಂದಿಗೆ ಅನುಸಂಧಾನ ಮಾಡುವುದಕ್ಕೆ, ಮತೀಯ ಹೆಸರಲ್ಲಿ ಒಂದಿಷ್ಟು ಜನರ ಬದುಕು ಸರಿ ಮಾಡುವುದಕ್ಕೆ ಸಂಘಟನೆ ಮಾಡಿ. ಬೇಡ ಅನ್ನುವುದು ತಪ್ಪಾಗುತ್ತದೆ.

ನಮ್ಮ ಧರ್ಮದ ಅಳಿವು ಉಳಿವಿನ ಪ್ರಶ್ನೆ ಇದು. ಅದಕ್ಕಾಗಿ ಹೋರಾಟ ಮಾಡಲು, ಇದೊಂದು ಸೈನ್ಯ ಅಂತಿರಾ. ಸರಿ. ಧರ್ಮದ ಅಳಿವು ಉಳಿವಿನ ಪ್ರಶ್ನೆ ಅಂತಾದರೆ ಈ ಹೋರಾಟದಲ್ಲಿ ಶ್ರೀಮಂತರು, ಮೇಲ್ವರ್ಗದವರು, ಸನ್ಯಾಸಿಗಳು, ಪಾದ್ರಿಗಳು, ಮೌಲ್ವಿಗಳು ತಮ್ಮ ತಮ್ಮ ಧರ್ಮ ರಕ್ಷಣೆಗೆ ನಿಮ್ಮ ಜೊತೆ ಬೀದಿ ಹೋರಾಟಕ್ಕೆ ಯಾಕೆ ಬರುವುದಿಲ್ಲ? ನಿಮ್ಮ ಪರ ಕಿರಿಚಾಡುವ ಟಿವಿ ನಿರೂಪಕ ಯಾಕೆ ಬೀದಿಗಿಳಿಯಲಾರ. ಮತೀಯವಾಗಿ ಉದ್ರೇಕ ಹೇಳಿಕೆ ಕೊಡುವ ನಾಯಕನ ಕುಟುಂಬವನ್ನು ನೀವು ಹತ್ತಿರದಿಂದ ನೋಡಿದ್ದೀರಿ.

ಇದನ್ನೂ ಓದಿರಿ: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ನಡುವೆ ಶವಯಾತ್ರೆ: ಈಶ್ವರಪ್ಪ, ರಾಘವೇಂದ್ರ ವಿರುದ್ಧ ದೂರು ದಾಖಲು

ನಿಮ್ಮ ಬಳಿಯೇ ಇರುವ ಜನಪ್ರತಿನಿಧಿ ಅಥವಾ ಮತೀಯ ಸಂಘಟನೆಗಳ ಉನ್ನತ ನಾಯಕರನ್ನು ನೋಡಿ. ಅವರುಗಳ ಮನೆ, ವೈಭೋಗ, ಮಕ್ಕಳ ಉನ್ನತ ಶಿಕ್ಷಣ, ವ್ಯಾಪಾರ ವಹಿವಾಟು- ಅದು ನಿಮಗಿಲ್ಲ. ನಿಮ್ಮ ಹೋರಾಟದಲ್ಲಿ ಅವರಿಲ್ಲ. ಯಾಕೆ ಅಂತಾ ಯೋಚನೆ ಮಾಡಿದ್ದೀರಾ? ಹಾಗಾದರೆ ನೀವು ಕೆರಳಿ ಹೊಡೆದಾಡುವ ಮತೀಯ ಸಮಸ್ಯೆ ಅವರಿಗ್ಯಾರಿಗೂ ಇಲ್ಲವೆ? ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ.

ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಹುರಿದುಂಬಿಸುವವರ ವಾಲ್ ಗಳನ್ನು ನೋಡಿ ಬನ್ನಿ. ಅಸಲಿಗೆ ಗಲಾಟೆಯಾದಾಗ ಅವರು ಮನೆ ಬಾಗಿಲು ಹಾಕಿ ಒಳಗಿರುವ ಜನರೇ ಜಾಸ್ತಿ. ಅವರ ವಾಲ್ ಪೋಟೋ ನೋಡಿ. ಆಧುನಿಕತೆ ಪಾಶ್ಚಿಮಾತ್ಯ ಎಲ್ಲ ಸುಖ ಅನುಭವಿಸುತ್ತ, ವಿದೇಶದಲ್ಲಿ ಮಕ್ಕಳನ್ನು ಸುಖವಾಗಿಡುವ ಜನ (ಹೀಗೆ ಮಾಡುವವರ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ತಾವು ಹಾಗಿದ್ದುಕೊಂಡು ಬೇರೆಯವರ ಮಕ್ಕಳನ್ನು ದಾರಿಗೆ ತಳ್ಳುವವರ ವಿರೋಧಿ ನಾನು). ಇಂಥವರು ನಿಮ್ಮ ಜೊತೆ ಬೀದಿ ಹೋರಾಟಕ್ಕೆ ಬಂದದ್ದು ಉಂಟಾ?

ಒಂದಿಷ್ಟು ಸಮಸ್ಯೆ ಇದೆ. ಮುಸ್ಲಿಮರು ಹಿಂದೂಗಳನ್ನು ಆಕ್ರಮಿಸಿ ಇದನ್ನು ಮುಸ್ಲಿಂ ರಾಷ್ಟ್ರ ಮಾಡುತ್ತಾರೆ ಅನ್ನುವುದು ಕೆಲವರ ಭಯ. ಹಿಂದೂಗಳು ಮುಸ್ಲಿಂ, ಕ್ರೈಸ್ತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುತ್ತಾರೆ ಅನ್ನುವ ಭಯ. ಈ ಭಯಕ್ಕೆ ಮೂಲ ಯಾವುದು? ಕಾರಣಗಳೇನು? ಅದು ನಿಜವೇ ಆಗಿದ್ದರೆ ಅದಕ್ಕೆ ಪರಿಹಾರವೇನು ಅನ್ನುವ ಪ್ರಶ್ನೆಗೆ ಇಡೀ ಹಿಂದೂ ಜನಾಂಗ, ಮುಸ್ಲಿಂ ಜನಾಂಗ, ಕ್ರೈಸ್ತ ಸಮಾಜ ಸಾಮೂಹಿಕವಾಗಿ ಉತ್ತರದಾಯಿತ್ವವಾಗಬೇಕಲ್ಲವೇ? ನೀವು ಮಾತ್ರ ಬಲಿಯಾಗುವುದು ಯಾಕೆ?

ನಿಮ್ಮಲ್ಲೊಂದು ಹೆಣ ಸುಟ್ಟು ಭಸ್ಮವಾಗುವ ಮುನ್ನವೇ, ಅಲ್ಲೆಲ್ಲೋ ವೇದಿಕೆಯಲ್ಲಿ ಎಲ್ಲಾ ಧರ್ಮದ ಗುರುಗಳೂ ಒಟ್ಟಾಗಿ ಕೂತು ಖುುಷಿಯಾಗಿ ಮಾತನಾಡುವುದನ್ನು ನೋಡಿದೆ. ಇನ್ನೆಲ್ಲೋ ಕಾರ್ಯಕ್ರಮದಲ್ಲಿ ವಿವಿಧ ಧರ್ಮದ ರಾಜಕೀಯ ನಾಯಕರು ಊಟ ಮಾಡುವುದನ್ನೂ ನೋಡಿದೆ.

ಇದನ್ನೂ ಓದಿರಿ: ಶಿವಮೊಗ್ಗ: ಹರ್ಷ ಕೊಲೆ ಪ್ರಕರಣದಲ್ಲಿ ಮತ್ತೆ 12 ಮಂದಿ ಪೊಲೀಸ್ ವಶಕ್ಕೆ- ಆರಗ ಜ್ಞಾನೇಂದ್ರ

ನೀವು ಹೇಳುವ ಸಮಸ್ಯೆಯ ಹೋರಾಟಕ್ಕೆ ಸ್ವಾಮಿಗಳು, ಫಾದರ್‌ಗಳು, ಮೌಲ್ವಿಗಳು, ಬರುವುದಿಲ್ಲ. ಅವರು ಪರಸ್ಪರ ಅನ್ಯೋನ್ಯವಾಗಿರುವುದನ್ನೂ ನೋಡಿದೆ. ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಕೋಟಿಗಟ್ಟಲೇ ಪರಸ್ಪರ ವ್ಯವಹಾರ ಮಾಡುವವರು ಮಾಡುತ್ತಲೇ ಇರುವುದನ್ನು, ರಾತ್ರಿ ಡೀಲ್ ಗಳನ್ನೂ ನೋಡಿದೆ. ಹೀಗೆ ನೋಡಿ ಅರ್ಥವಾದಾಗ ನಿಮ್ಮಂತೆ ಯೋಚಿಸುತ್ತಿದ್ದ ನಾನು 30 ವರ್ಷಗಳ ಹಿಂದೆ ಎಲ್ಲವನ್ನೂ ಬಿಟ್ಟೆ.

ಸಮಾಜದಲ್ಲಿ ಯಾರಿಗೂ ಇಲ್ಲದ ಸಮಸ್ಯೆ ನಿಮ್ಮ ತಲೆಗೆ ಕಟ್ಟುವವರು ಯಾರು? ಹಾಗೇ ಸಮಸ್ಯೆ ಹೊತ್ತುಕೊಂಡು ಹೊಡೆದಾಡಿ ಸಾಯುವ ನೀವು ಯಾರು?- ಪ್ರಶ್ನಿಸಿಕೊಳ್ಳಿ. ಧರ್ಮಕ್ಕೆ ಸಮಸ್ಯೆ ಬಂದರೆ ಅದನ್ನು ಸರಿಮಾಡಬೇಕಾದುದು ಮಠ, ಚರ್ಚ್, ಮಸೀದಿಗಳು, ಸರ್ಕಾರಗಳು. ಪೂರ್ಣ ಸಮಾಜದ ಹೊಣೆಗಾರಿಕೆ ಅದು.
ಅವರು ಇರೋದು ಯಾಕೆ? ಅವರು ಜವಾಬ್ದಾರಿ ತೆಗೆದುಕೊಳ್ಳಬೇಕಲ್ಲವೇ?

ಒಮ್ಮೆ ಪರೀಕ್ಷಿಸುವುದಕ್ಕಾಗಿ ಇದನ್ನು ಮಾಡಿ ನೋಡಿ. ನೀವು ಬೀದಿಗಿಳಿದು ಹೋರಾಟಕ್ಕೆ ಹೋಗುವ ಸಂಗತಿಗಳನ್ನು ತಿಳಿಸಿ, ನಿಮ್ಮ ನಾಯಕರ ಮನೆಯ ಸದಸ್ಯರನ್ನು, ರಾಜಕೀಯ ಮುಖಂಡರ ಮನೆಯ ಸದಸ್ಯರನ್ನು , ಫೇಸ್‌ಬುಕ್‌ ನಲ್ಲಿ ಕುಟ್ಟುವ ಅಂಕಲ್, ಆಂಟಿ, ಬ್ರೋ, ಸಿಸ್‌ಗಳನ್ನು, ಟಿವಿ ಲಿ ಅರಚುವವರ ಮನೆಯ ಮಕ್ಕಳನ್ನು ಒಮ್ಮೆ ಕರೆದು ನೋಡಿ. ಎಲ್ಲರೂ ಬಂದರೆ ಸೂಪರ್. ಹೋರಾಡಿ.

ಒಂದು ಮಾತು. ನೀವು ನಿಮ್ಮ ಊರಿನಲ್ಲಿ ಇಂತಹ ಬೀದಿ ಹೋರಾಟಕ್ಕೆ ಹೋಗುವಾಗ, ನಿಮ್ಮ ಊರಿನ ಜನಸಂಖ್ಯೆ ಲೆಕ್ಕ ಹಾಕಿ. ನೀವು ಎಷ್ಟು ಜನ ಅಂತಾ ನೋಡಿ. 25 ಲಕ್ಷ ಜನಸಂಖ್ಯೆಯ ಜಿಲ್ಲೆಯಲ್ಲಿ ಇಂತಹ ಹೋರಾಟಕ್ಕೆ ಬರುವವರು ಕೇವಲ ನೂರು, ಸಾವಿರ. ಅಂದರೆ ಇಡೀ ಸಮಾಜಕ್ಕೆ ಇಲ್ಲದ ಮಂಡೆ ಬಿಸಿ ನಿಮಗೆ ಮಾತ್ರ. ದೇಶದ ಸೈನ್ಯದಲ್ಲಿ ಯೋಧರಾಗಿ ಸಾಯುವುದು ಶ್ರೇಷ್ಠ. ಆದರೆ ಇಂತಹ ಹೊಡೆದಾಟದಲ್ಲಿ ಸೈನಿಕನಾಗಿ ಸಾಯುವುದಲ್ಲ. ಬೇರೆಯವರ ಬೇಳೆ ಬೇಯಿಸಿಕೊಳ್ಳಲು ನೀವು ಬಲಿಯಾಗುವುದು.

ನಾನು ನನ್ನ ಮಕ್ಕಳನ್ನು ಕಳಿಸುವುದಿಲ್ಲ. ಅವರು ಒಳ್ಳೆಯ ಉದ್ಯೋಗ ಮಾಡಿ, ಸಮಾಜಕ್ಕೆ ಎನಾದರೂ ನೀಡಲಿ ಎಂದು ಬಯಸುವೆ. ಅದಕ್ಕೆ ನೀವೂ ಹಾಗೇ ಆಗಬೇಕೆಂಬ ಹಾರೈಕೆ. ನಿಮ್ಮ ನಿಮ್ಮ ಧರ್ಮದ ಪುನರುತ್ಥಾನ , ಪ್ರಚಾರ, ಅಭಿವೃದ್ಧಿಗೆ ಸಾವಿರ ಸಭ್ಯ ದಾರಿಗಳಿದೆ. ನಿಮ್ಮ ಮರಣದಿಂದ ಏನೂ ಆಗುವುದಿಲ್ಲ.

  • ಎಂ.ಜಿ.ಹೆಗಡೆ, ಶಿಕ್ಷಣ ತಜ್ಞರು
    ಹಾಗೂ ಕರಾವಳಿ ಭಾಗದ ಹಿರಿಯ ಸಾಮಾಜಿಕ ಹೋರಾಟಗಾರರು

ಇದನ್ನೂ ಓದಿರಿ: ಹರ್ಷ ಕೊಲೆ ಪ್ರಕರಣ: ಸರ್ಕಾರ ಎಸಗುತ್ತಿರುವ ಲೋಪಗಳತ್ತ ಜನಾಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...