ಪ್ರೀತಿ ಕೊಂದ ಜಾತಿ… ಜಾತಿಯನ್ನು ಕೊಲ್ಲುವುದು ಯಾವಾಗ?

ಘಟನೆ ನಡೆದು ಕೇವಲ 4 ದಿನಗಳಾಗಿವೆ. ಆಗಲೇ ತೆಲಂಗಾಣವೂ ಸೇರಿದಂತೆ ದೇಶಾದ್ಯಂತ ಜನರು ಕಂಬನಿ ಮಿಡಿದಿದ್ದಾರೆ. ಹತ್ಯೆಗೀಡಾದ ಪ್ರಣಯ್‍ನ ಪ್ರಿಯ ಪತ್ನಿ ಅಮೃತಾ ತೆರೆದ ‘ಜಸ್ಟೀಸ್ ಫಾರ್ ಪ್ರಣಯ್’ ಫೇಸ್‍ಬುಕ್ ಪುಟದ ಪ್ರಕಾರ ವಿದೇಶಗಳಲ್ಲೂ ಸಾರ್ವಜನಿಕ ಸಂತಾಪ ಮತ್ತು ಪ್ರತಿಭಟನೆ ನಡೆದಿದೆ.

ಪ್ರಣಯ್ ಎಂಬ ದಲಿತ ಹುಡುಗ, ಅಮೃತಾ ಎಂಬ ಮೇಲ್ಜಾತಿಯ ಹುಡುಗಿಯನ್ನು ಮದುವೆಯಾದದ್ದಕ್ಕಾಗಿ, ಅಮೃತಾಳ ತಂದೆ ಮಾರುತಿರಾವ್ ಕೊಲೆ ಮಾಡಿಸಿದ್ದು ಎಂಬಲ್ಲಿಂದ ಎಲ್ಲಾ ವಿವರಗಳು ಈಗಾಗಲೇ ಓದಿರುತ್ತೀರಿ.
ಪ್ರಶ್ನೆಯಿರುವುದು ಈ ಲೇಖನ ಮಾಡುವುದರ ಜೊತೆಗೆ ‘ಪತ್ರಿಕೆ’ಯ ಜವಾಬ್ದಾರಿ ಮುಗಿದು ಹೋಗುತ್ತದೆಯೇ?

ಫೇಸ್‍ಬುಕ್‍ನಲ್ಲಿ ಆಕ್ರೋಶ, ಕಂಬನಿ ತೋರಿದಾಗ ಮುಗಿದು ಹೋಗುವಂತೆ. ಈಗೀಗ ಅಭಿವ್ಯಕ್ತಿಗೆ ಹೊಸ ದಾರಿಗಳು ಇವೆ. ಫೇಸ್‍ಬುಕ್, ವಾಟ್ಸಾಪ್ ಡಿಪಿ (ಪ್ರೊಫೈಲ್ ಚಿತ್ರ) ಬದಲಿಸುವುದ, ಪೋಸ್ಟರ್ ಮಾಡಿ ಹಂಚಿಕೊಳ್ಳುವುದು. ತಾರಾಮಾರಾ ವ್ಯವಸ್ಥೆಯನ್ನು ಬಯ್ದುಕೊಳ್ಳುವುದು. ನಂತರ ಇನ್ನೊಂದು ಇಂತಹ ಘಟನೆ ನಡೆಯುವವರೆಗೆ ನಡುವೆ ಅದೂ ಇದೂ ಮಾಡಿಕೊಳ್ಳುವುದು. ಮತ್ತೊಂದು ಭೀಕರ ಘಟನೆ ನಡೆದಾಗ ಎಲ್ಲವೂ ಪುನರಾವರ್ತನೆ.

ಹಾಗಾಗಬಾರದೆಂದರೆ ಇನ್ನಷ್ಟು ಆಳಕ್ಕೆ ಹೋಗುವ ಅಗತ್ಯವಿದೆ. ಈ ರೀತಿಯ ಜಾತಿ ಹತ್ಯೆಯಾಗುತ್ತಿರುವ ಸಂದರ್ಭದಲ್ಲೇ, ಎಸ್‍ಸಿ-ಎಸ್‍ಟಿ ಅಟ್ರಾಸಿಟಿ ಕಾಯ್ದೆ ದುರ್ಬಲವಾಗುತ್ತಿದೆ. ಅಕ್ಷರದ ಅರಿವನ್ನೂ ಶೋಷಿತ ಸಮುದಾಯಗಳು ಪಡೆದುಕೊಳ್ಳಲು ಒದ್ದಾಡಬೇಕಾದ ಸ್ಥಿತಿ ಇನ್ನೂ ಇರುವಾಗಲೇ, ಮೀಸಲಾತಿ ತೆಗೆಯಿರಿ ಎಂದು ಕೂಗಾಡುವ ಮನಸ್ಸುಗಳು ಇವೆ. ಇದನ್ನು ಎಲ್ಲಿಂದ ಬದಲಿಸುವುದು? ಹಾಗೆಯೇ ಅದೆಷ್ಟನೇ ಬಾರಿಯೋ, ಕಮ್ಯುನಿಸ್ಟರು ಮತ್ತು ಅಂಬೇಡ್ಕರ್‌ವಾದಿಗಳು ಚರ್ಚೆ ಕನ್ನಡ ಫೇಸ್‍ಬುಕ್ ವಲಯದಲ್ಲಿ ಶುರುವಾಗಿದೆ. ಅದು ಮುಗಿಯುವುದೂ ಕಷ್ಟ.

ಇದು ಮತ್ತೊಂದು ಹತಾಶೆಯ ಸಂದರ್ಭ ವಾಗಬಾರದು ಎಂಬ ಕಾರಣಕ್ಕೆ ಪತ್ರಿಕೆಯು ವಿವಿಧ ಹಿನ್ನೆಲೆಗಳಿಗೆ ಸೇರಿದ ಮೂವರಿಂದ ಈ ಹೊತ್ತಿನ ಮಾತುಗಳನ್ನು ಬರೆದುಕೊಡುವಂತೆ ಕೇಳಿತು. ಈ ಅಂಶಗಳ ಕುರಿತು ಚರ್ಚೆಯಾಗಬೇಕೆಂದು ಬಯಸುತ್ತೇವೆ. ಆದರೆ, ಈ ಚರ್ಚೆಯು ಆಳಕ್ಕೆ ಹೋಗಬೇಕು; ಪರಿಹಾರದ ಕುರಿತು ಸಾಗಬೇಕು. ಸಾಮೂಹಿಕ ಕ್ರಿಯಾಶೀಲತೆಯ ಮೂಲಕ ದಾರಿ ಕಂಡುಕೊಳ್ಳುವಂತೆ ಆಗಬೇಕು.

ಇಲ್ಲದಿದ್ದರೆ, ತನ್ನ ತಂದೆಯಿಂದಲೇ ಕೊಲೆಗೀಡಾದ ಮಂಡ್ಯ ಜಿಲ್ಲೆ ಆಬಲವಾಡಿ ಸುವರ್ಣಳ ಕೇಸಿನಲ್ಲಿ ಆದಂತೆ ಆಗಿಬಿಡಬಹುದು. ಘಟನೆಯ ತರುವಾಯ ಅದನ್ನು ಹೊರತರುವಲ್ಲಿ ಕೆಲವು ಸಂಘಟನೆಗಳ ಬೆಂಬಲವಿದ್ದೂ, ಬಲಾಢ್ಯ ಕೊಲೆಗಡುಕ ತಂದೆಯ ಬಂಧನವಾಗಿದ್ದಾಗ್ಯೂ ನಿಧಾನಕ್ಕೆ ಮೊಕದ್ದಮೆಯ ವಿಚಾರಣೆಯು ನಿರಾಶಾದಾಯಕವಾಗಿ ಸಾಗುತ್ತಿದೆ. ಕೆಲವೇ ತಿಂಗಳಲ್ಲಿ ಜಾಮೀನು ಸಿಕ್ಕಿಬಿಟ್ಟಿತು. ಜಾಮೀನಾದ ನಂತರ ಹಳ್ಳಿಗೆ ಹೋಗಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ. ನಂತರ ಜಾಮೀನು ರದ್ದಾದರೂ, ಇನ್ನೊಂದಷ್ಟು ದಿನಗಳ ನಂತರ ಜೈಲಿನಿಂದ ಹೊರಗೆ ಬರಲು ಸಾಧ್ಯವಾಯಿತು. ‘ಮರ್ಯಾದೆ ಸ್ಥಿರಗೊಂಡಿತು’. ಅಂತಿಮವಾಗಿ ಕಂಬಾಲಪಲ್ಲಿಯಲ್ಲಿ ಆದಂತೆ ಇಲ್ಲಿಯೂ ಸಾಕ್ಷಿಗಳೇ ಉಲ್ಟಾ ಹೊಡೆಯಬಹುದು.

ಇದನ್ನೂ ಓದಿ; ಅಂತರ್ಜಾತಿ ವಿವಾಹದಿಂದ ಹತ್ಯೆಯಾದ ಪ್ರಣಯ್ ಹೆಂಡತಿ ಅಮೃತಗೆ ತಂದೆಯಿಂದ ಮತ್ತೆ ಬೆದರಿಕೆ: ದೂರು ದಾಖಲು

ಹಾಗಾದರೆ ಈ ಜಾತಿ ಹತ್ಯೆಗಳಿಗೆ ನಿಜಕ್ಕೂ ಶಿಕ್ಷೆ ಹೇಗೆ ಆಗುತ್ತದೆ? ಇದು ಕೇವಲ ನ್ಯಾಯಾಲಯಗಳಲ್ಲಿ ಬಗೆಹರಿಯುವ ವಿಷಯ ಅಲ್ಲ ಎಂದಾದಲ್ಲಿ ಸಮಾಜದಲ್ಲಿ ಬಗೆಹರಿಸುವ ವಿಧಾನ ಯಾವುದು ಎಂಬುದನ್ನು ಮನುಷ್ಯ ಧರ್ಮದ ಮೇಲೆ ವಿಶ್ವಾಸವುಳ್ಳ ಎಲ್ಲರೂ ಚಿಂತಿಸಬೇಕು. ಅಂತಹ ಚರ್ಚೆಯನ್ನಷ್ಟೇ ಈ ಸಂಚಿಕೆಯಲ್ಲಿ ಆರಂಭಿಸಲಾಗಿದೆ. ಸಾಂದರ್ಭಿಕವಾದ ಬರಹಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಇದರೊಂದಿಗೆ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ಏಕೆಂದರೆ ಇಂತಹ ಹತ್ಯೆಗಳು ಇದೊಂದೇ ಅಲ್ಲ. ಅವೂ ಇದರೊಂದಿಗೆ ಮುಗಿಯುವುದಿಲ್ಲ.

 

ಗಂಡನ ಕೊಲೆಯ ವಿರುದ್ಧ ಅಮೃತಾಳ ಅಭಿಯಾನ

ಎಲ್ಲರೂ ತಾಯಿಯ ಪ್ರೀತಿಯ ಬಗ್ಗೆಯೇ ಮಾತಾಡುತ್ತಾರೆ; ತಂದೆಯ ತ್ಯಾಗದ ಬಗ್ಗೆ ಯಾರು ಮಾತನಾಡುವುದಿಲ್ಲ’ ಎಂದು ಸೆಪ್ಟೆಂಬರ್ 9ರಂದು ಫಾಧರ್‌ ಡೇಯಂದು ತನ್ನ ಫೇಸ್‍ಬುಕ್ ವಾಲ್ ಮೇಲೆ ಬರೆದುಕೊಂಡಿದ್ದಳು ಅಮೃತಾ. ಅವಳ ಗಂಡ ಪ್ರಣಯ್‍ನನ್ನು, ಆಕೆಯ ಎದುರಿಗೇ ಅದೇ ತಂದೆ ಸೆ.16ರಂದು ಕೊಲ್ಲಿಸಿದ.

ತಂದೆಯೊಂದಿಗೆ ಅಮೃತ

 

ಪ್ರಣಯ್ ಗರ್ಭಿಣಿಯಾದ ತನ್ನ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಸಮಯವನ್ನು ಕಾದು ನೋಡಿ ಅವನ ಮೇಲೆ ದಾಳಿಮಾಡಿ ಮಚ್ಚಿನಲ್ಲಿ ಕೊಚ್ಚಿ ಭೀಕರವಾಗಿ ಕೊಂದು ಹಾಕಿದ್ದಾರೆ. ಈ ಹತ್ಯೆಗೆ ಹುಡುಗಿಯ ತಂದೆ ಮಾರುತಿರಾವ್ ಒಂದು ಕೋಟಿ ರೂಪಾಯಿಗಳ ಸುಪಾರಿ ಕೊಟ್ಟಿದ್ದೆ ಎಂಬ ಹೇಳಿಕೆ ಕೊಟ್ಟಿದ್ದಾನೆ.

ಕೇವಲ 7 ದಿನಗಳ ಹಿಂದೆಯಷ್ಟೇ ತಂದೆಯ ತ್ಯಾಗದ ಕುರಿತು ಸಾರ್ವಜನಿಕವಾಗಿ ಅಮೃತಾ ಬರೆದ ಪೋಸ್ಟಿಗೆ ಈಗ ನೂರಾರು ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಆಕೆ ಬರೆದ ಪೋಸ್ಟನ್ನು ನೋಡಿದರೆ ಎಂತವರಿಗಾದರೂ ಕಣ್ಣುತುಂಬಿ ಬರುವುದಂತೂ ನಿಜ. ಆದರೆ ಆ ಕಟುಕ ತಂದೆಯ ಮನಸ್ಸು ಮಾತ್ರ ಕರಗದೇ ಇರುವುದು ಜಡ್ಡುಗಟ್ಟಿದ ಜಾತಿ ರೋಗದ ಮತ್ತು ಜಾತಿಯು ಪ್ರತಿಷ್ಠೆಯ ಸಂಕೇತವಾಗಿರುವುದರ ಕುರುಹಾಗಿದೆ.

ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಇದು ಅಂತರ್ಜಾತಿ ಮದುವೆಯನ್ನು ಒಪ್ಪದ ಮೇಲ್ಜಾತಿಯ ಶ್ರೀಮಂತ ಕುಟುಂಬದ ಯಜಮಾನ ನಡೆಸಿರುವ ಘೋರ ಹತ್ಯೆ. ಆ ಕುರಿತ ವಿವರಗಳು ಈಗಾಗಲೇ ಫೇಸ್‍ಬುಕ್ ಮೂಲಕ ಎಲ್ಲರಿಗೂ ಗೊತ್ತಿದೆ. ಆದರೆ, ತನ್ನ ಫೇಸ್‍ಬುಕ್‍ನಲ್ಲಿ ಏನು ಬರೆದುಕೊಂಡಿದ್ದಳು ಎಂಬುದು ಇಡೀ ದುರಂತ ಕಥಾನಕದ ಇತರ ಮಗ್ಗುಲುಗಳನ್ನೂ ತೋರಿಸುತ್ತದೆ.

ತಾನು ‘ಕೆಳ’ಜಾತಿಯ ಪ್ರಣಯ್‍ನನ್ನು ಮದುವೆಯಾದ ಕಾರಣಕ್ಕೆ ತಂದೆ ಮುನಿಸಿಕೊಂಡರೂ ಸಹ ಆಕೆ ತನ್ನ ಫೇಸ್‍ಬುಕ್ ಖಾತೆಯಲ್ಲಿ ತಂದೆಯ ಜನುಮದಿನಕ್ಕೆ ಶುಭ ಕೋರಿದ್ದಾಳೆ. ಅಷ್ಟೇ ಅಲ್ಲದೇ ತಂದೆ ಮತ್ತು ಮಗಳ ಸಂಬಂಧದ ಬಗ್ಗೆಯು ಕೆಲವು ಭಾವನಾತ್ಮಕ ವಿಡಿಯೋಗಳನ್ನು ಕೂಡ ಶೇರ್ ಮಾಡಿದ್ದಾಳೆ.

ಪ್ರಣಯ್ ಮತ್ತು ಅಮೃತ ವರ್ಷಿಣಿ ಒಂಬತ್ತನೇ ತರಗತಿಯಿಂದ ಕ್ಲಾಸ್‍ಮೇಟ್ಸ್ ಮತ್ತು ಬಿ.ಟೆಕ್ ಮುಗಿಸಿದ ನಂತರ ಅವರ ಪ್ರೀತಿಯು ಮದುವೆಯವರೆಗೆ ಹೋಗಿದೆ. ತಮ್ಮಿಬ್ಬರ ಚಿಕ್ಕವಯಸ್ಸಿನ ಫೋಟೋಗಳನ್ನೂ ಷೇರ್ ಮಾಡಿರುವ ಅಮೃತಾ ಆತನನ್ನು ಹಚ್ಚಿಕೊಂಡಿರುವುದು ಎದ್ದು ಕಾಣುತ್ತದೆ.

ತೆಲುಗು ಸಿನೆಮಾದ ಗಾಢ ಪ್ರಭಾವ ಇವರ ಮೇಲಿರುವುದು ಎದ್ದು ಕಾಣುತ್ತದೆ. ಇವರು ಮಾಡಿರುವ ತೆಲುಗು ಸಿನೆಮಾಗಳ ಕೆಲವು ಡಬ್‍ಸ್ಮಾಷ್‍ಗಳು ಮತ್ತು ಅಮೃತ ಹಾಕಿದ ತಮ್ಮ ಜೋಡಿಯ ಮುದ್ದಾದ ಫೋಟೋಗಳ ಮೇಲೆ ಬರೆದ ತಲೆ ಬರಹಗಳು ಅವರು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದನ್ನೂ ಹೇಳುತ್ತವೆ.
ಹಾಗೆಯೇ ಈ ಕಾಲದಲ್ಲಿನ ಶ್ರೀಮಂತರ ಮತ್ತು ಮೇಲ್ಮಧ್ಯಮ ವರ್ಗದ ಮದುವೆಯ ಭಾಗವಾಗಿರುವ ಪ್ರೀ ವೆಡ್ಡಿಂಗ್ ಶೂಟ್ ಸಹಾ ಈಕೆಯ ಫೇಸ್‍ಬುಕ್‍ನಲ್ಲಿ ಬಿತ್ತರವಾಗಿದೆ.

ಅದನ್ನು ಸಾಕಷ್ಟು ಜನ ನೋಡಿದ್ಧಾರೆ. ಈ ವಿಡಿಯೋಗೆ ಹೆಚ್ಚು ಲೈಕ್ಸ್ ಬಂದಿರುವುದನ್ನು ನೋಡಿದ ಅಮೃತಾಳ ತಂದೆ, ನಿನ್ನ ಗಂಡನ ಸಾವಿನ ವಿಡಿಯೋ ಕೂಡ ಇದಕ್ಕಿಂತ ಹೆಚ್ಚು ಜನ ನೋಡುತ್ತಾರೆ ಎಂದಿದ್ದನಂತೆ. ಈ ವಿಡಿಯೋ ನೋಡಿ ಮಾರುತಿರಾವ್ ಮತ್ತಷ್ಟು ಕೆರಳಿದ್ದನೆಂದು ಹೇಳುವ ವಿಡಿಯೋ ಈಗಾಗಲೇ ಯೂಟ್ಯೂಬ್‍ನಲ್ಲಿ ಓಡಾಡುತ್ತಿದೆ. ಸರಿಯೋ ತಪ್ಪೋ, ಇಂದಿನ ಯುವಜನರ ಮನೋಭಾವ, ಮದುವೆಯ ಮಾರುಕಟ್ಟೆ, ಸಿನೆಮಾ ಸಂಸ್ಕೃತಿಯ ಪ್ರಭಾವ ಎಲ್ಲವೂ ಫೇಸ್‍ಬುಕ್‍ನಲ್ಲಿ ಎದ್ದು ಕಾಣುತ್ತದೆ.

ತನ್ನ ಪ್ರೇಮಿಯೆಡೆಗಿನ ಪ್ರೀತಿಯೂ ಉತ್ಕಟವಾಗಿ ಮತ್ತು ಎಂದೆಂದೂ ಬಿಟ್ಟಿರಲಾರೆನೆಂಬ ಭಾವವನ್ನು ಹಲವು ಪೋಸ್ಟ್‌ಗಳಲ್ಲಿ ಅವರು ವ್ಯಕ್ತಪಡಿಸುತ್ತಾರೆ; ಅದೇ ರೀತಿಯಲ್ಲಿ ತಂದೆಯ ಕುರಿತ ಉತ್ಕಟ ಅಭಿಮಾನವೂ ಫೇಸ್‍ಬುಕ್‍ನಲ್ಲೇ ಕಾಣುತ್ತದೆ.

ತನ್ನ ಗಂಡನ ಹತ್ಯೆಯ ನಂತರ ತಂದೆಯ ಕುರಿತು ಆಕ್ರೋಶಭರಿತಳಾಗಿರುವ ಅಮೃತ ‘ಜಸ್ಟೀಸ್ ಫಾರ್ ಪ್ರಣಯ್’ ಎಂಬ ಪೇಸ್‍ಬುಕ್ ಪೇಜ್ ತೆರೆದು, ತನ್ನ ತಂದೆಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದಾಳೆ. ಅಲ್ಲೂ ಮೂರು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಒಂದು, ಅಮೃತಾ ಮತ್ತು ಪ್ರಣಯ್‍ರ ಮುಗ್ಧ ಪ್ರೀತಿಯ ಪರವಾಗಿ ದನಿಯೆತ್ತಿ ಸಹಾನುಭೂತಿ ವ್ಯಕ್ತಪಡಿಸಿ ಸಂತಾಪ ಸೂಚಿಸುವ ಬಹುತೇಕರು. ಎರಡು, ನಿನ್ನಿಂದ ಮತ್ತು ನಿನ್ನಂತಹ ಜಾತಿಯ ಜನರಿಂದ ಪ್ರಣಯ್ ಥರದವರು ಕೊಲೆಯಾಗುತ್ತಿದ್ದಾರೆ; ನೀನು ನಿನ್ನ ಪಾಡಿಗಿರು ಎಂದು ಹೇಳುವ ಪ್ರಣಯ್‍ನ ಪರವಾಗಿ ನಿಂತ ಬೆರಳೆಣಿಕೆಯವರು. ಮೂರು, ಮೀಸಲಾತಿ ತೆಗೆಯಲು ಹೋರಾಡು; ಆಗಲೇ ಜಾತಿಯೂ ಹೋಗುತ್ತೆ ಎಂದು ಹೇಳುವ ಕೆಲವರು.

ಪ್ರೀತಿ, ದ್ವೇಷ, ಹೋರಾಟ, ಕ್ರೌರ್ಯ ಎಲ್ಲವೂ ಸಾಮಾಜಿಕ ಜಾಲತಾಣಗಳ ಭಾಗವಾಗುತ್ತಿರುವ ದಿನಗಳಲ್ಲಿ ನಮ್ಮೆಲ್ಲರ ಬದುಕಿನ ಮೇಲೂ ಸಮಾಜದ ಪ್ರಭಾವ ಮತ್ತಷ್ಟು ಹೆಚ್ಚಾಗುತ್ತದೆ. ಅದೇ ಸಮಾಜದಲ್ಲಿ ಎಲ್ಲವೂ ಮಾಡ್ರನ್ ಆಗುತ್ತಾ, ಜಾತಿಯ ವಿಷಯದಲ್ಲಿ ಮಾತ್ರ ಹಿಂದುಳಿಯುತ್ತಿರುವುದು ವಿಪರ್ಯಾಸ.

– ಅನಿಲ್‍ಕುಮಾರ್ ಚಿಕ್ಕದಾಳವಟ್ಟ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here