Homeಕರ್ನಾಟಕ‘ಲವ್‌ ಜಿಹಾದ್‌’ಗೆ ‘ಲವ್‌ ಕೇಸರಿ’ ಅಂತೆ, ವಿರಕ್ತಿಯ ಕೇಸರಿ ಮತ್ತು ಲವ್ ಹೇಗೆ ಕೂಡುತ್ತವೆ?: ದೇಮ

‘ಲವ್‌ ಜಿಹಾದ್‌’ಗೆ ‘ಲವ್‌ ಕೇಸರಿ’ ಅಂತೆ, ವಿರಕ್ತಿಯ ಕೇಸರಿ ಮತ್ತು ಲವ್ ಹೇಗೆ ಕೂಡುತ್ತವೆ?: ದೇಮ

“ಇಂದು ಮಾಧ್ಯಮ ಕ್ಷೇತ್ರವು ಸಮಸ್ಯೆಗಳನ್ನು ವರದಿ ಮಾಡುತ್ತಿವೆಯೊ? ಅಥವಾ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆಯೊ ಗೊತ್ತೇ ಆಗುತ್ತಿಲ್ಲ”

- Advertisement -
- Advertisement -

“ಇತ್ತೀಚೆಗೆ ’ಲವ್ ಕೇಸರಿ’ ಅಂತ ರಂಗಪ್ರವೇಶ ಮಾಡಿದೆ. ಕೇಸರಿ ಅಂದರೆ ವಿರಕ್ತ! ಈ ಲವ್ ಮತ್ತು ಆ ವಿರಕ್ತಿ ಹೇಗೆ ಕೂಡುತ್ತವೆ? ವಿರಕ್ತಿ ಇರುವವರನ್ನು ಲವ್ ಮಾಡಿದರೆ, ಮಾಡಿದವರ ಪಾಡೇನು? ಜೊತೆಗೆ ಇದು ಗಂಡಸರ ಸಮಸ್ಯೆಯಾಗಿಬಿಟ್ಟಿದೆ” ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದರು.

ಜನನುಡಿ ಬಳಗ ಹಾಗೂ ಅಹರ್ನಿಶಿ ಪ್ರಕಾಶನದ ವತಿಯಿಂದ ಶನಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮುಂಗಾರು ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳ ಸಂಕಲನ- ಬೇರೆಯೇ ಮಾತು- ಕೃತಿ ಬಿಡುಗಡೆ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ಟಿ.ವಿ.ಯಲ್ಲಿ ಕತ್ತಿ ಝಳಪಿಸುತ್ತಾ ’ಲವ್ ಕೇಸರಿ ಸುದ್ದಿ’ ಬರುತ್ತಿತ್ತು. ’ಲವ್ ಜಿಹಾದ್’ಅನ್ನು ’ಅವರು’ ಮಾಡುತ್ತಾರೆಂದು ’ಇವರೇ’ ಆರೋಪಿಸಿ ಅದಕ್ಕೆ ಪ್ರತಿಯಾಗಿ ’ಇವರು’ ಲವ್ ಕೇಸರಿ ಮಾಡಿ ಎಂದು ಅಬ್ಬರಿಸುತ್ತಿದ್ದರು. ’ಅವರು’ ಕಳ್ಳತನ ಮಾಡುತ್ತಾರೆಂದು ’ಇವರೇ’ ಆರೋಪಿಸಿ ’ಇವರು’ ದರೋಡೆ ಮಾಡಬೇಕು ಎಂಬಂತಿತ್ತು ಆ ವಾದ ಎಂದು ಅಭಿಪ್ರಾಯಪಟ್ಟರು.

“ಹೆಂಗಪ್ಪ ಇದು? ’ಲವ್ ಜಿಹಾದ್’ ಅಂತೆ, ಲವ್ ಅಂದರೆ ಎಲ್ಲರಿಗೂ ಗೊತ್ತು. ಜಿಹಾದ್ ಅಂದರೆ ಧರ್ಮ ಯುದ್ಧ ಅಂತೆ! ನಿಜವಾದ ಲವ್ ಧರ್ಮವನ್ನೂ ಮೀರುತ್ತದೆ. ಇನ್ನು ಲವ್ ಮತ್ತು ಯುದ್ಧ ಅಜಗಜಾಂತರ ಕ್ರಿಯೆಗಳು. ಹಾಗೇ ಇತ್ತೀಚೆಗೆ ’ಲವ್ ಕೇಸರಿ’ ಅಂತ ರಂಗಪ್ರವೇಶ ಮಾಡಿದೆ. ಕೇಸರಿ ಅಂದರೆ ವಿರಕ್ತ! ಈ ಲವ್ ಮತ್ತು ಆ ವಿರಕ್ತಿ ಹೇಗೆ ಕೂಡುತ್ತವೆ?” ಎಂದು ಪ್ರಶ್ನಿಸಿದರು.

“ಇದು ಗಂಡಸರ ಸಮಸ್ಯೆಯಾಗಿಬಿಟ್ಟಿದೆ. ಹೆಣ್ಣೆಂದರೆ ಮನಸ್ಸೆ ಇಲ್ಲದ ಕೀಲುಗೊಂಬೆ ಅಂತ ಈ ಗಂಡಸರು ಅಂದುಕೊಂಡಂತಿದೆ- ಹೀಗೆಲ್ಲಾ ಧರ್ಮ ಸೂಕ್ಷ್ಮತೆಯ ಚಿಂತೆ ಮಾಡುತ್ತಾ ನನ್ನ ತಲೆ ಕೆಟ್ಟು ಎಕ್ಕುಟ್ಟೋಗಿತ್ತು” ಎಂದು ತಿಳಿಸಿದ ಅವರು, ಕಿಡಿಗೇಡಿ ಹುಡುಗನೊಬ್ಬನ ಕವನ ಓದಿದರು.

ಈ ಟೈಮ್‍ನಲ್ಲೇ ನನಗೊಬ್ಬ ಕಿಡಿಗೇಡಿ ಹುಡುಗ ಫೋನ್ ಮಾಡಿ ತನ್ನ ಪರಿಚಯ ಮಾಡಿಕೊಂಡು, ‘ಸರ್, ನಾನು ನಿಮ್ಮ ಅಭಿಮಾನಿ’ ಅಂದ. ‘ಆಯ್ತಪ್ತ ಆಯ್ತು ಏನ್ ಸಮಾಚಾರ?’ ಎಂದೆ. ‘ನಾನೊಂದು ಪದ್ಯ ಹಾಡ್ತೀನಿ, ನಮ್ ಕಡೇದು, ನನ್ನ ಹೆಸರನ್ನು ಯಾರಿಗೂ ಹೇಳಬಾರದು’ ಅಂದುದಕ್ಕೆ ‘ಆಯ್ತು, ನಾನು ಬೇರೆಯವರಿಗೆ ಹೇಳಿದರೆ ಒಂದು ಲಕ್ಷ ಕೋಡ್ತೀನಿ, ಟ್ರಾಫಿಕ್‍ನಲ್ಲಿದ್ದೇನೆ, ಬೇಗ ಹಾಡ್ರಪ್ಪ’ ಎಂದು ಮನೆಯಲ್ಲೇ ಕೂತು ಅಂದೆ. ಅವನು ಜಾನಪದ ಮಟ್ಟಲ್ಲಿ ಹಾಡಿದ. ನಾನು ಅವನಿಗೆ ‘ಶರಣಾದೆ’ ಎಂದೆ. ಯಾಕೆಂದರೆ ಅವನು ಹಾಡಿದ್ದು ‘ಲವ್ ಕೇಸರಿ’, ‘ಲವ್ ಜಿಹಾದ್’ ಗೆ ಉತ್ತರವಾಗಿತ್ತು ಎಂದು ತಿಳಿಸಿದರು.

ಮಾವಾ, ಮಾವಾ ಕೇಳೊ ಮಂಗ್ಯಾ
ಕತ್ತಿ ಝಳಪಿಸುತ ಬಂದು, ನನ ಮುಂದನಿಂದು
ಹಿಂಗ ಲವ್ ಮಾಡು ಲವ್ ಮಾಡು ಅಂದರ
ಹೆಂಗ ಮಾಡಲೊ ಲವ್ವ, ಹೆಂಗ ಮಾಡಲೊ ಲವ್ವ
ನಿನ್ನ ಎದೆಯೊಳಗ ಇಲ್ಲದ ಲವ್ವ, ಮಾಡೆಂದರ ಹೆಂಗ ಮಾಡಲೋ ಲವ್ವ

ಲವ್ ಲವ್ ಅಂದರ ಏನು ಮಾವ ಏನು ಮಾವ?
ಕೇಳೊ ಮಾವಾ ಹೇಳುತೀನಿ, ನಾ ಹೇಳಿದ ಮೇಲ ನೀ ಕೇಳು
ಲವ್ವಲ್ಲಿ ಯುದ್ಧ ಯಾಕೋ ಮಾವ, ಲವ್ವೇ ಧರ್ಮವು ಕೇಳು
ಲವ್ವಂದರ ಕಾಮಾನಬಿಲ್ಲು, ಅದರೊಳಗೈತಿ ರಂಗು ರಂಗೇಳು
ಏಕ ಬಣ್ಣವಾದರದು ವಾಕರಿಕೆಯೊ, ಬಣ್ಣಬಣ್ಣದ ಓಕುಳಿಯೇ ಲವ್ವು,

ಮಾವ, ರಂಗುರಂಗಲ್ಲಿ ಬಾರೊ, ಕತ್ತಿ ಮುರಿದೆಸದು ಬಾರೋ
ಲವ್ವು ಮಾಡೋಣು ಬಾರೊ, ಓಕುಳಿಯ ಆಡೋಣು ಬಾರೊ

“ಇಂಥ ಸಂಕಷ್ಟದಲ್ಲಿ ಆ ಕಿಡಿಗೇಡಿ ಹುಡುಗನ ಜಾನಪದ ಮಟ್ಟು ಬಂದು ನನ್ನ ತಲೆ ನೇವರಿಸಿ ಸಾಂತ್ವಾನ ನೀಡಿತು. ಅದಕ್ಕಾಗಿ ಅವನಿಗೆ ಕೃತಜ್ಞತೆಗಳ” ಎಂದರು.

ವಡ್ಡರ್ಸೆಯವರನ್ನು ನೆನೆದ ಅವರು, “ಇವತ್ತು ಕಣ್ಮರೆಯಾಗುತ್ತಿರುವ ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದರು. ದಲಿತರು, ಹಿಂದುಳಿದವರು, ಹಳ್ಳಿಗರು, ಅಸಹಾಯಕರು ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸುವಂತಾಗಬೇಕೆಂದು ತಹತಹಿಸುತ್ತಿದ್ದರು. ಇದನ್ನೇ ತನ್ನ ಕಾರ್‍ಯಕ್ಷೇತ್ರದಲ್ಲೂ ಅಳವಡಿಸಿಕೊಂಡಿದ್ದ ವಡ್ಡರ್ಸೆಯವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯಕ್ಕೆ ಸೇರಿದವರು. ಈಗ ಅವರು ಇಲ್ಲ. ಬಂಟರೂ ನೆನಪಿಸಿಕೊಳ್ಳುತ್ತಿಲ್ಲ. ಶೆಟ್ಟರು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದ ತಳಸಮುದಾಯದವರೂ ನೆನಪಿಸಿಕೊಳ್ಳುತ್ತಿಲ್ಲ” ಎಂದು ವಿವಾದಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದನ್ನೂ ಓದಿರಿ: ಕೇಜ್ರಿವಾಲ್‌ ಮನೆಗೆ ಹಾನಿ ಮಾಡಿದ ಕಾರ್ಯಕರ್ತರಿಗೆ ಬಿಜೆಪಿ ಸನ್ಮಾನ

ಇಂದಿನ ನಮ್ಮ ಮಾಧ್ಯಮ ಕ್ಷೇತ್ರ ಅದರಲ್ಲೂ ದೃಶ್ಯ ಮಾಧ್ಯಮ ಕ್ಷೇತ್ರದ ಅವನತಿ ಕಂಡು ದುಃಖಿತನಾಗಿ ನನ್ನ ಸುಪ್ತಮನಸ್ಸು ರಘುರಾಮ ಶೆಟ್ಟರಿಗೆ ನಾಯಕ ಪಟ್ಟವನ್ನೆ ಆಯ್ಕೆ ಮಾಡಿತ್ತೇನೊ ಎಂದೆನಿಸುತ್ತದೆ. ಇರಲಿ, ಇದು ಮುಖ್ಯವೇ ಅಲ್ಲ. ಇಂದು ಮಾಧ್ಯಮ ಕ್ಷೇತ್ರವು ಸಮಸ್ಯೆಗಳನ್ನು ವರದಿ ಮಾಡುತ್ತಿವೆಯೊ? ಅಥವಾ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆಯೊ ಗೊತ್ತೇ ಆಗುತ್ತಿಲ್ಲ. ಉದಾಹರಣೆಗೆ ಹಿಜಾಬ್ ಕೇಸ್‌ನಲ್ಲಿ ನಿಜವಾದ ಸಮಸ್ಯೆಯ ಪಾಲೆಷ್ಟು, ಇದನ್ನು ಸಮಸ್ಯಾತ್ಮಕ ಮಾಡಿದ ಮಾಧ್ಯಮಗಳ ಪಾಲೆಷ್ಟು? ನಿರ್ಧರಿಸಿ ಹೇಳುತ್ತೀರಾ? ಇದೇ ರೀತಿ ಅನೇಕಾನೇಕ ಉದಾಹರಣೆಗಳನ್ನು ಹೇಳಬಹುದು. ಮಾಧ್ಯಮ ಕ್ಷೇತ್ರ ತನ್ನ ನೀತಿ, ನಿಯಮ, ಸಂಯಮ, ಮಾನ ಮಾರ್‍ಯದೆ, ಘನತೆಗಳನ್ನು ತಾನೇ ತುಳಿದು ನಿಂತಿದೆ. ಇಂಥ ಸಂದರ್ಭದಲ್ಲಿ ರಘುರಾಮ ಶೆಟ್ಟರು ನೆನಪಾಗುತ್ತಾರೆ. ನೆನಪಾಗಬೇಕೂ ಕೂಡ. ಅವರ ಕನಸು ’ಓದುಗ ಒಡೆತನದ ಮಾಧ್ಯಮ’ದ ಪ್ರಯತ್ನ ಇಂದಾದರೂ ನನಸಾಗಬೇಕಾಗಿದೆ ಎಂದು ಆಶಿಸಿದರು.

ನನಗೂ ಈಗಲೂ ಒಂದು ಕನ್‌ಫ್ಯೂಷನ್ – ಗೊಂದಲ ಇದೆ. ಈ ರಘುರಾಮಶೆಟ್ಟರು ನಾಯಕನೋ ಅಥವಾ ದುರಂತ ನಾಯಕನೋ ಅಂತ. ಒಂದು ದೊಡ್ಡ ಕನಸನ್ನು ಕಂಡು ಅದಕ್ಕೊಂದು ಮನೆ ಕಟ್ಟಿ, ಆ ಮನೆಯ ಭಾರವನ್ನು ಹೊತ್ತು, ಅದು ಕುಸಿಯುತ್ತಿದ್ದರೂ ಛಲ ಬಿಡದೆ ನೆಲಕಚ್ಚುತ್ತಾರಲ್ಲ ಇದನ್ನು ನೋಡಿದರೆ ದುರಂತ ನಾಯಕ ಎಂದೆನ್ನಿಸುತ್ತದೆ. ಆದರೆ ಅದೇ ಆ ಕ್ಷಣದಲ್ಲೆ, ಈ ವಡ್ಡರ್ಸೆ ರಘುರಾಮಶೆಟ್ಟಿ ಎಂಬ ಸಾಹಸಿಗ ’ಮುಂಗಾರು’ ಪ್ರಕಾಶನ ಸಂಸ್ಥೆ ಎಂಬ ಓದುಗರೇ ಮಾಲೀಕರಾಗಿದ್ದ ಪಬ್ಲಿಕ್ ಲಿಮಿಡೆಟ್ ಕಂಪನಿ ರಚಿಸಿ, ಓದುಗರ ಒಡೆತನದ ಸಂಸ್ಥೆ ಕಟ್ಟುತ್ತಾರಲ್ಲ – ಇದು ಇಂದು ಮಾಡಬೇಕಾಗಿರುವ ಸಾಹಸವಾಗೇ ಉಳಿದಿದೆ. ಈ ಸಂಪತ್ತನ್ನು ರಘುರಾಮಶೆಟ್ಟರು ನಾಡಿಗೆ ಬಿಟ್ಟು ಹೋಗಿದ್ದಾರೆ. ಇದನ್ನು ನೆನೆದು, ನಾಯಕಪಟ್ಟ ಮತ್ತು ದುರಂತ ನಾಯಕಪಟ್ಟ ಈ ಎರಡನ್ನೂ ತಕ್ಕಡಿಯಲ್ಲಿಟ್ಟು ತೂಗಿದಾಗ, ತಕ್ಕಡಿ ಮೇಲೆ ಕೆಳಗೆ ತೂಗಿ ತೂಗಿ, ನಾಯಕಪಟ್ಟ ಒಂದು ಗುಲಗಂಜಿ ತೂಕ ಹೆಚ್ಚಾಗಿ ತೂಗಿ, ಗೆದ್ದು ನಿಲ್ಲುತ್ತದೆ ಎಂದರು.

ಇದನ್ನೂ ಓದಿರಿ: ಶಾಸಕ ಎನ್‌.ಮಹೇಶ್‌ ಸೂಚನೆ ಮೇರೆಗೆ ದಲಿತ ವ್ಯಕ್ತಿಯ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ; ಆರೋಪ

“ಈಗೊಂದು ವಿಸ್ಮಯ ಹೇಳಿ ನನ್ನ ಮಾತು ಮುಗಿಸುತ್ತೇನೆ. ಎಲ್ಲರಿಗೂ ಗೊತ್ತಿದೆ. ಅಸಮಾನತೆ ಮೌಲ್ಯದ ಚಾತುರ್‍ವರ್ಣದ ಹಿಂದೂ ಗುಂಪಿನ ಪ್ರತಿಪಾದಕ ಆರ್‌ಎಸ್‌ಎಸ್‌ನ ಶ್ರೀ ಗೋಲ್ವಾಲ್ಕರ್ ಹಾಗೂ ಹಿಂಸಾಮೂರ್ತಿ ಶ್ರೀ ನಾಥುರಾಂ ಗೋಡ್ಸೆಯರ ಕುಮೌಲ್ಯಗಳನ್ನು ಭಾರತದಲ್ಲೆಡೆ ಬಿತ್ತಿ ಬೆಳೆಯಲು ನಾಗಪುರ್ ಆರ್‌ಎಸ್‌ಎಸ್ ಅವಿರತ ಪ್ರಯತ್ನಿಸುತ್ತಲೇ ಇದೆ” ಎಂದು ಎಚ್ಚರಿಸಿದರು.

“ಭಾರತದ ತುಂಬೆಲ್ಲಾ ಗೋಲ್ವಾಲ್ಕರ್ ಮತ್ತು ಗೋಡ್ಸೆ ನಿರ್ಮಾಣ ಮಾಡಲು ಸ್ಥಳಾವಕಾಶಕ್ಕಾಗಿ ಈ ಚಾತುರ್‍ವರ್ಣದ ಹಿಂದೂ ಗುಂಪು, ಭಾರತವನ್ನೆಲ್ಲಾ ಆವರಿಸಿಕೊಂಡಿರುವ ಗಾಂಧಿ ಮತ್ತು ಅಂಬೇಡ್ಕರ್‌ರನ್ನು ನಿರ್ನಾಮ ಮಾಡಲು ಸತತವಾಗಿ ಗಾಂಧಿ ಅಂಬೇಡ್ಕರ್ ಎಂಬ ಆಲ ಮತ್ತು ಅರಳಿಮರಗಳನ್ನು ಕೊಚ್ಚಿ ತರಿದು ಕತ್ತರಿಸಿ ತುಳಿದು ಏನೆಲ್ಲಾ ಮಾಡುತ್ತಿದೆ. ಆದರೂ, ಆದರೂನುವೆ ಪೌರತ್ವ ಕಾಯ್ದೆ ತಿದ್ದುಪಡಿ (ಸಿಎಎ, ಎನ್‌ಆರ್‌ಸಿ) ಸಂದರ್ಭ ಬುಗಿಲೆದ್ದಾಗ ಅದರೊಳಗಿಂದ ಮೂಡಿದ ಗಾಂಧಿ ಅಂಬೇಡ್ಕರ್ ಪ್ರಭಾವಳಿ ಭಾರತದ ತುಂಬಾ ಆವರಿಸಿಕೊಳ್ಳುವ ಪರಿ, ಇದೇನು ಚೋದ್ಯ! ಆಗ ಜನರ ಬೇಗುದಿಗೆ ಗಾಂಧಿ ಅಂಬೇಡ್ಕರ್ ಸಾಂತ್ವನ ನೀಡಿದರೆ? ಗಾಂಧಿಯವರನ್ನು ಕಡೆದು ಸತ್ವವನ್ನಷ್ಟೇ ತೆಗೆದಿಟ್ಟುಕೊಂಡು ಪ್ರತಿಮೆ ಮಾಡಿ ನಿಲ್ಲಿಸಿದರೆ ಅದರೊಳಗಿಂದ ’ಸಹನೆ ಮತ್ತು ಪ್ರೀತಿ’ ಸೂಸುತ್ತದೆ. ಹಾಗೆ ಅಂಬೇಡ್ಕರ್‌ಗಾಗಿಯೂ ಈ ನೆಲ ಕಾತರಿಸುತ್ತಿದೆ. ನ್ಯಾಯಕ್ಕೆ ನ್ಯಾಯದ ಹಕ್ಕೇ ಇಲ್ಲದ ಸಂದರ್ಭದಲ್ಲಿ ನ್ಯಾಯಕ್ಕೇನೇ ನ್ಯಾಯದ ಹಕ್ಕು ಸಿಗುವಂತಾಗಲು ಕಾರಣರು ಅಂಬೇಡ್ಕರ್. ಅಂಬೇಡ್ಕರ್‌ರನ್ನು ಕಡೆದು ಸತ್ವವನ್ನಷ್ಟೆ ತೆಗೆದಿಟ್ಟುಕೊಂಡು ಪ್ರತಿಮೆ ಮಾಡಿ ನಿಲ್ಲಿಸಿದರೆ ಅದರೊಳಗಿಂದ ನ್ಯಾಯ, ಸಮಾನತೆ ಸೂಸುತ್ತದೆ. ಸಹನೆ, ಪ್ರೀತಿ, ನ್ಯಾಯ ಸಮಾನತೆಯ ಜಲಕ್ಕಾಗಿ ಭಾರತದ ನೆಲ ಚಾತಕ ಪಕ್ಷಿಯಂತೆ ಕಾಯುತ್ತಿಲ್ಲವೆ?” ಎಂದು ಕೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಲೇಖಕರಾದ ಡಾ.ಕೆ.ಮರುಳಸಿದ್ದಪ್ಪ, ಕೆ.ಪುಟ್ಟಸ್ವಾಮಿ, ಬೇರೆಯ ಮಾತು ಕೃತಿ ಸಂಪಾದಕರಾದ ದಿನೇಶ್‌ ಅಮಿನ್‌ಮಟ್ಟು, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ, ವಕೀಲರಾದ ಅನಂತ ನಾಯಕ್‌ ಹಾಜರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅತ್ಯುತಮವಾದ ಲೇಖನ. ಶರಣು ಶರಣಾರ್ಥಿಗಳು.. ಗೌರಿ ಲಂಕೇಶ ಅವರಿಗೆ

LEAVE A REPLY

Please enter your comment!
Please enter your name here

- Advertisment -

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...