Homeಮುಖಪುಟಮಹಾರಾಷ್ಟ್ರ: ಮಳೆಹಾನಿ ಪ್ರದೇಶಗಳಿಗೆ 10,000 ಕೋಟಿ ಪರಿಹಾರ ಪ್ಯಾಕೇಜ್

ಮಹಾರಾಷ್ಟ್ರ: ಮಳೆಹಾನಿ ಪ್ರದೇಶಗಳಿಗೆ 10,000 ಕೋಟಿ ಪರಿಹಾರ ಪ್ಯಾಕೇಜ್

ರೈತರಿಗೆ ಹೆಕ್ಟೇರಿಗೆ 6,800 ರೂ.ಗಳ ಪರಿಹಾರದ ಬದಲು, ಈ ಬಾರಿ ಅದನ್ನು ಹೆಕ್ಟೇರಿಗೆ 10,000 ರೂ.ಗೆ ಹೆಚ್ಚಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಕೂಡ ಇದೇ ರೀತಿ ಪರಿಹಾರ ಹೆಚ್ಚಿಸಲು ನಾನು ಒತ್ತಾಯಿಸುತ್ತೇನೆ.

- Advertisement -
- Advertisement -

ಮಹಾರಾಷ್ಟ್ರದಲ್ಲಿ ಮಹಾಮಳೆಯಿಂದ ನಲುಗಿರುವ ಭಾಗಗಳಿಗೆ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ 10,000 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದೆ. ದೀಪಾವಳಿ ಹಬ್ಬಕ್ಕೂ ಮೊದಲೇ ಪರಿಹಾರ ಮೊತ್ತ ವಿತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಕಚೇರಿ ದೃಢಪಡಿಸಿದೆ.

ಮಳೆಯಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿನ ಬೆಳೆ ಹಾನಿ, ಜೀವಹಾನಿ, ಮನೆ ಮತ್ತು ಕಟ್ಟಡಗಳಿಗೆ ಆಗಿರುವ ಹಾನಿ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಡೆಸಿದ ಕೆಲವೇ ದಿನಗಳ ನಂತರ 10,000 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಪ್ರಕಟಣೆ ಹೊರಬಿದ್ದಿದೆ.

ಮಹಾರಾಷ್ಟ್ರದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಸೋಯಾ ಬೀನ್, ಹತ್ತಿ, ಕಬ್ಬು, ದಾಳಿಂಬೆ ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿವೆ.  ಸೋಲಾಪುರ್, ಸಾಂಗ್ಲಿ, ಕೋಲ್ಹಾಪುರ್, ಸತಾರಾ, ಉಸ್ಮಾನಾಬಾದ್, ಬೀಡ್, ಔರಂಗಬಾದ್ ಹಾಗೂ ಲಾತುರ್‌ನ ರೈತರು ಈ ಬಾರಿ ಉತ್ತಮ ಫಸಲಿನ ನಿರೀಕ್ಷೆ ಮಾಡಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ CBI ಗೆ ನೀಡಿದ್ದ ತನಿಖಾ ’ಒಪ್ಪಿಗೆ’ಯನ್ನು ಹಿಂತೆಗೆದುಕೊಂಡ ಸರ್ಕಾರ

ಪರಿಹಾರ ಘೋಷಣೆ ನಂತರ, ಉದ್ಧವ್ ಠಾಕ್ರೆ, “ಪ್ರವಾಹ ಮತ್ತು ಮಳೆಯಿಂದ ಹಾನಿಗೊಳಗಾದವರಿಗೆ ಸಹಾಯ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಪರಿಶೀಲನಾ ಸಭೆಯ ನಂತರ, ರೈತರು ಮತ್ತು ಸಂತ್ರಸ್ತ ಜನರಿಗೆ ಜೊತೆಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ವಿವಿಧ ಕೆಲಸಗಳಿಗಾಗಿ 10,000 ಕೋಟಿ ರೂ. ಪರಿಹಾರ ಘೋಷಿಸಿದ್ದೇವೆ. ದೀಪಾವಳಿ ಹಬ್ಬಕ್ಕಿಂತ ಮೊದಲು ಈ ಪರಿಹಾರ ಪ್ಯಾಕೇಜ್ ತಲುಪಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

“ರೈತರಿಗೆ ಹೆಕ್ಟೇರಿಗೆ 6,800 ರೂ.ಗಳ ಪರಿಹಾರದ ಬದಲು, ಈ ಬಾರಿ ಅದನ್ನು ಹೆಕ್ಟೇರಿಗೆ 10,000 ರೂ.ಗೆ ಹೆಚ್ಚಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಕೂಡ ಇದೇ ರೀತಿ ಪರಿಹಾರ ಹೆಚ್ಚಿಸಲು ನಾನು ಒತ್ತಾಯಿಸುತ್ತೇನೆ. ಇಲ್ಲಿಯವರೆಗೆ, ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಜ್ಯ ಸರ್ಕಾರದಿಂದ ಸುಮಾರು 3,800 ಕೋಟಿ ರೂ. ಪರಿಹಾರ ನೀಡಿದ್ದೇವೆ” ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದರು.

ಇಂದು ಬೆಳಗ್ಗೆ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ30 ವರ್ಷದ ಯುವ ರೈತರೊಬ್ಬರು ಮಳೆಯಿಂದಾಗಿ ಬೆಳೆ ನಾಶವಾದ ಹಿನ್ನೆಲೆ ನೇಣಿಗೆ ಶರಣಾಗಿದ್ದರು.


ಇದನ್ನೂ ಓದಿ: ಭಾರೀ ಮಳೆ: ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ 83 ಜನರು ಬಲಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read