Homeಮುಖಪುಟ2021ರ ವಿಜ್ಞಾನ ಲೋಕ ಕಂಡ ಮಹತ್ವದ ಬೆಳವಣಿಗೆಗಳು

2021ರ ವಿಜ್ಞಾನ ಲೋಕ ಕಂಡ ಮಹತ್ವದ ಬೆಳವಣಿಗೆಗಳು

- Advertisement -
- Advertisement -

ಡಿಸೆಂಬರ್ 11, 1954ರಂದು ಸ್ವೀಡನ್‌ನಲ್ಲಿ ನಡೆದ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೌತ ವಿಜ್ಞಾನದಲ್ಲಿ ಪ್ರಶಸ್ತಿ ಪಡೆದ ಗಣಿತಜ್ಞ ಮ್ಯಾಕ್ಸ್ ಬಾರ್ನ್ ತಮ್ಮ ನೊಬೆಲ್ ಉಪನ್ಯಾಸವನ್ನು ಹೀಗೆ ಪ್ರಾರಂಭಿಸಿದರು: “The work, for which I have had the honour to be awarded the Nobel Prize for 1954, contains no discovery of a fresh natural phenomenon, but rather the basis for a new mode of thought in regard to natural phenomena”. ಇದು ಜಗತ್ತಿನಲ್ಲಿ ನಡೆಯುವ ನೈಸರ್ಗಿಕ ವಿದ್ಯಮಾನಗಳ ವೈಜ್ಞಾನಿಕ ವಿವರಣೆಗೆ ಹೊಸ ರೀತಿಯ ದೃಷ್ಟಿಕೋನಗಳನ್ನು ಹುಡುಕಿಕೊಂಡಾಗ ಹೊಸ ವಿಜ್ಞಾನ ಉಗಮವಾಗಿ ಮುಂದುವರಿಯತ್ತದೆ ಎನ್ನುವುದನ್ನು ತಿಳಿಸುವಂತಿತ್ತು. ವಿಜ್ಞಾನಕ್ಕೆ ಒಳ್ಳೆಯದು, ಕೆಟ್ಟದ್ದು, ಉಪಯೋಗ, ಅನುಪಯೋಗ ಎಂಬುದು ಇರುವುದಿಲ್ಲ. ಅದು ಒಂದು ವಿದ್ಯಮಾನವನ್ನು ಹೇಗೆ ನಡೆಯುತ್ತದೆ ಎನ್ನುವುದನ್ನು ಹೇಳುತ್ತೆ ಮತ್ತು ನಿಖರವಾಗಿ (ಕೆಲವೊಮ್ಮೆ ಅಸ್ಪಷ್ಟವಾಗಿ) ಅಂತಹ ಮುಂದಿನ ವಿದ್ಯಮಾನಗಳ ಚಟುವಟಿಕೆಗಳನ್ನು ಊಹಿಸುತ್ತೆ. ಮನುಷ್ಯರಾದ ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗಳನ್ನು ಹೇಗೆ ವಿಶ್ಲೇಷಿಸುತ್ತೇವೆ ಮತ್ತು ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಆದರೆ, ಇಂದಿನ ದಿನಗಳಲ್ಲಿ ಅತಿ ಶ್ರೀಮಂತ ಬಂಡವಾಳಶಾಹಿಗಳು ವಿಜ್ಞಾನದ ಸಂಶೋಧನೆಗಳು ಹಾಗು ತಂತ್ರಜ್ಞಾನಗಳಲ್ಲಿ ಹೆಚ್ಚು ಬಂಡವಾಳ ಹೂಡಿಕೆ ಮಾಡಿ, ಉಳ್ಳವರಿಗೆ ಮಾತ್ರ ಪ್ರಪಂಚವನ್ನು ರೀಡೈಸೈನ್ ಮಾಡಲು (ಮಾಡುವಂತೆ) ಮುನ್ನುಗ್ಗುತ್ತಿರುವುದು ಕಳವಳಕಾರಿ ಅಂಶ.

ಮ್ಯಾಕ್ಸ್ ಬಾರ್ನ್

ಎರಡು ಹೊತ್ತು ಊಟ ಇಲ್ಲದಿರುವರ ಮುಂದೆ, ಅದನ್ನು ಆಗ್ರಹಿಸಲು ಕೂಡ ದನಿ ಇಲ್ಲದಿರುವವರ ಮುಂದೆ, ಹೊಟ್ಟೆ ತುಂಬಿರುವವರು ಹೋಗಿ ಚಂದ್ರನ ಮೇಲೆ ಮನುಷ್ಯನು ಕಾಲಿಟ್ಟಿದ್ದಾನೆ, ಭೂಮಿಯಲ್ಲಿ ಏನಾದರೂ ಸಮಸ್ಯೆ ಆದರೆ ಚಂದ್ರನಲ್ಲಿಗೆ ಹೋಗಿ ಬದುಕುವ ತಂತ್ರಜ್ಞಾನ ನಿರ್ಮಿಸಿಕೊಂಡಿದ್ದೇವೆ ಎಂದು ಹೇಳಿದರೆ ಹೇಗಿರುತ್ತದೆ? ಹಾಗಾದರೆ, ಚಂದ್ರನ ಮೇಲೆ ಮನುಷ್ಯರು ಇಳಿದಿದ್ದು ತಪ್ಪಾ, ಹೊಸ ತಂತ್ರಜ್ಞಾನದ ಅನ್ವೇಷಣೆ ತಪ್ಪಾ ಎಂದು ಪ್ರಶ್ನಿಸಿಕೊಂಡರೆ, ಇವೆಲ್ಲವಕ್ಕೆ ಹೇಗೆ ಆರ್ಥಿಕ ಮತ್ತು ಭೌತಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಯಶಸ್ವಿಯಾದೆವೋ, ಅಷ್ಟೇ ಜವಾಬ್ದಾರಿಯಿಂದ ಮತ್ತು ವೈಜ್ಞಾನಿಕ ದೃಷ್ಟಿಕೋನಗಳಿಂದ ಇತರ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಭುತ್ವಗಳು ಕ್ರಮ ಕೈಗೊಂಡಿವೆಯೇ ಎಂಬುದನ್ನೂ ನೋಡಬೇಕಿದೆ. ಇದರ ಉತ್ತರ ಅಸಮಾನತೆಯದ್ದಾದರೆ ಅದು ಅಮಾನವೀಯವಾದದ್ದೂ ಹೌದು. ಹೀಗಿದ್ದರೂ, ಪ್ರಕೃತಿಯಲ್ಲಿ ನದಿಗಳ ನೈಸರ್ಗಿಕ ಹರಿವು ಎಷ್ಟು ಮುಖ್ಯವೋ, ಮಾನವನಿಗೆ ವಿಜ್ಞಾನ ಬೆಳವಣಿಗೆಯ ಹರಿವು ಮತ್ತು ಅರಿವು ಅಷ್ಟೇ ಮುಖ್ಯ ಮತ್ತು ಅಗತ್ಯ. ನಾವುಗಳು ಹೊಸ ಸಂಶೋಧನೆಗಳಿಂದ, ಹೊಸ ವಿಚಾರಗಳಿಂದ, ಹೊಸ ತಂತ್ರಜ್ಞಾನಗಳಿಂದ ನಮ್ಮ ಕುತೂಹಲಗಳನ್ನು ತಣಿಸಿಕೊಳ್ಳುತ್ತಾ, ನಮ್ಮ ಕುರುಡು ನಂಬಿಕೆಗಳನ್ನು ಕಳೆದುಕೊಳ್ಳುತ್ತಾ, ಬೆಳಕು ಚೆಲ್ಲುತ್ತಾ ಹೊಸ ಮಾರ್ಗಗಳನ್ನು ಸೃಷ್ಟಿಸಿಕೊಂಡು ಮುಂದೆ ಸಾಗಬೇಕಿದೆ. ಕಳೆದ ಎರಡು ವರ್ಷಗಳಿಂದಲೂ ನಾವು ಹೋರಾಡುತ್ತಿರುವುದು ಕಣ್ಣಿಗೆ ಕಾಣದಿರುವ ಸೂಕ್ಷ್ಮ ವೈರಾಣುವಿನ ಜೊತೆ. ಜನ ಸಮುದಾಯಗಳಲ್ಲಿ ವೈಚಾರಿಕತೆಯ ದೃಷ್ಟಿಯಿಂದ ಅರೋಗ್ಯದ ಅರಿವು ಮೂಡಿಸಿ, ಅಗತ್ಯ ಸೌಲಭ್ಯಗಳು ಅಗತ್ಯ ಸಮಯದಲ್ಲಿ ಸಿಗುವಂತೆ ಸರ್ಕಾರಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗ ಮಾತ್ರ ಈ ಹೋರಾಟದಲ್ಲಿ ಗೆಲುವು ಸಾಧ್ಯ. ಕೋವಿಡ್ ಹೊರತಾಗಿ, ಕೋವಿಡ್ ಹೋರಾಟದ ಜೊತೆಗೆ, 2021ರಲ್ಲಿನ ಕೆಲವು ವಿಜ್ಞಾನ ಚಟುವಟಿಕೆಗಳ ಬಗ್ಗೆ ಒಂದು ಸಣ್ಣ ದರ್ಶನ ಇಲ್ಲಿದೆ.

ನೀಗೀತೇ ಬಾಯಾರಿಕೆ?

ಭೂಮಿಯಲ್ಲಿ ಶೇ. 0.3ರಷ್ಟು ಮಾತ್ರ ಕುಡಿಯಲು ಯೋಗ್ಯವಾದ ನೀರಿದ್ದು, ಉಳಿದ ಶೇ. 99.7ರಷ್ಟು ನೀರು, ಸಮುದ್ರದಲ್ಲಿ, ವಾತಾವರಣದಲ್ಲಿ, ಮಣ್ಣಿನಲ್ಲಿ, ಶೀತಲ ಪ್ರದೇಶಗಳ ಮಂಜುಗಡ್ಡೆಗಳಲ್ಲಿ ಇದೆ. ಜಗತ್ತಿನ ಜನಸಂಖ್ಯೆಯು ಹೆಚ್ಚಾದಂತೆ ಶುದ್ಧ ಕುಡಿಯುವ ನೀರಿನ ಅಗತ್ಯತೆಯು ಹೆಚ್ಚಾಗುತ್ತದೆ. ಕೇವಲ ನೈಸರ್ಗಿಕವಾಗಿ ಸಿಗುವ ಕುಡಿಯುವ ನೀರಿನ ಮೇಲೆ ಅವಲಂಬಿತವಾಗುವುದರಿಂದ ಪ್ರಪಂಚದ ಬಾಯಾರಿಕೆ ನೀಗಿಸುವುದು ಕಷ್ಟ. ಈ ನಿಟ್ಟಿನಲ್ಲಿ ಈಗಾಗಲೇ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಸೌಲಭ್ಯವು ನಮ್ಮಲ್ಲಿ ಇದೆ. ಇದನ್ನು ಉಪ್ಪುತೆಗೆತ ಪ್ರಕ್ರಿಯೆ (Desalination Process) ಎಂದು ಕರೆಯುತ್ತೇವೆ. ಮಾರುಕಟ್ಟೆಯಲ್ಲಿ ಇವು Reverse Osmosis (RO) Purifier ಉಪಕರಣಗಳಾಗಿ ಲಭ್ಯವಿವೆ. ಆದರೆ, ಇದಕ್ಕೆ ವಿದ್ಯುತ್ ಶಕ್ತಿಯ ಅವಶ್ಯಕತೆ ಇದೆ. ವಿದ್ಯುತ್ ಶಕ್ತಿ ಸೌಲಭ್ಯವಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಹಾಗೂ ಇತರೆ ಹಿಂದುಳಿದ ಪ್ರದೇಶಗಳಲ್ಲಿ ಇಂತಹ ಸೌಲಭ್ಯವನ್ನು ಕಲ್ಪಿಸುವುದು ಕಷ್ಟ. ಈಗ ವಿಜ್ಞಾನಿಗಳು ವಿದ್ಯುತ್ ಶಕ್ತಿ ಇಲ್ಲದೆಯೇ ಸಮುದ್ರದ ನೀರಿನ ಉಪ್ಪುತೆಗೆತ ಪ್ರಕ್ರಿಯೆಯನ್ನು ಮಾಡುವ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಎಲೆಕ್ಟ್ರೋ ಆಕ್ಟಿವ್ ಬ್ಯಾಕ್ಟೀರಿಯ ಸಹಾಯದಿಂದ ಉಪ್ಪು ನೀರನ್ನು ಕುಡಿಯು ನೀರನ್ನಾಗಿ ಪರಿವರ್ತಿಸುವುದನ್ನು ಕಂಡುಹಿಡಿದಿದ್ದಾರೆ. ಇದನ್ನು Microbial Desalination Cells- MDC ತಂತ್ರಜ್ಞಾನ ಎಂದು ಕರೆದಿದ್ದಾರೆ. ಇಂತಹ ತಂತ್ರಜ್ಞಾನದಲ್ಲಿ ಉಪಕರಣಗಳು ಸಿದ್ಧವಾದರೆ, ವಿದ್ಯುತ್ ಶಕ್ತಿ ಇಲ್ಲದ ಗ್ರಾಮೀಣ ಭಾಗದಲ್ಲಿ ಕೂಡ ಇದನ್ನು ಅಳವಡಿಸಿ ಜನರ ಬಾಯಾರಿಕೆಯನ್ನು ನೀಗಿಸಬಹುದಾಗಿರುತ್ತದೆ.

ನ್ಯಾನೋ ರೋಬೋಟ್ ಮತ್ತು Cancer Cells

ಈ ಶತಮಾನದ ಪ್ರಾರಂಭ ಸಂಪೂರ್ಣ ನ್ಯಾನೋ ತಂತ್ರಜ್ಞಾನದಿಂದ ಆವರಿಸಿಕೊಂಡಿದೆ! ಅಂದರೆ, ವಿಜ್ಞಾನದ ಎಲ್ಲ ವಲಯಗಳಲ್ಲೂ ನ್ಯಾನೋ ತಂತ್ರಜ್ಞಾನವನ್ನು ಅಳವಡಿಸುವ ಅಧ್ಯಯನಗಳು ಕ್ಷಿಪ್ರ ಗತಿಯಲ್ಲಿ ನಡೆಯುತ್ತಿವೆ. ಇಂತಹ ಹಲವು ಅಧ್ಯಯನಗಳು ಇನ್ನೂ ಸಂಶೋಧನಾ ಲ್ಯಾಬ್‌ನ ನಾಲ್ಕು ಗೋಡೆಗಳ ಮಧ್ಯೆ ಇದ್ದರೂ, ಇದರ ಭವಿಷ್ಯದ ಉಪಯೋಗಗಳು ಕಲ್ಪನೆಗೆ ಮೀರಿದ್ದಾಗಿದೆ ಎಂದು ಊಹಿಸಲಾಗಿದೆ. ಈಗ ನ್ಯಾನೋ ರೋಬೋಟ್‌ಗಳನ್ನು ಕ್ಯಾನ್ಸರ್ ಜೀವಕೋಶಗಳ ನಾಶಕ್ಕೂ ಬಳಸಿಕೊಳ್ಳುವ ಸಂಶೋಧನೆ ಪ್ರಗತಿಯಲ್ಲಿದೆ. ಸಾಮಾನ್ಯವಾಗಿ ಔಷಧಗಳನ್ನು ಇಂಜೆಕ್ಟ್ ಮಾಡಿದಾಗ, ಈ ಔಷಧಗಳು ರಕ್ತದೊಂದಿಗೆ ಚಲಿಸಿ ತೊಂದರೆ ಇರುವ ಜೀವಕೋಶಗಳನ್ನು ತಲುಪಬೇಕಾಗಿರುತ್ತದೆ. ಕೆಲವು ಜೀವಕೋಶಗಳಲ್ಲಿನ ನ್ಯೂನತೆಗಳನ್ನು (ಉದಾ: ಮೆದುಳಿನಲ್ಲಿ ನ್ಯೂನತೆ ಉಂಟಾಗುವ ಜೀವಕೋಶಗಳಿಗೆ) ಇಂತಹ ಸಾಂಪ್ರದಾಯಿಕ ರೀತಿಗಳಿಂದ ಸರಿಪಡಿಸುವುದು ಕಷ್ಟ. ಈ ಕಾರಣದಿಂದ ಔಷಧಗಳನ್ನು ನ್ಯಾನೋ ರೋಬೋಟ್ ಸಹಾಯದಿಂದ ನಿಗದಿತ ಸ್ಥಳಕ್ಕೆ ತಲುಪಿಸುವ ಪ್ರಯೋಗಗಳನ್ನು ಈಗಾಗಲೇ ಮಾಡಲಾಗುತ್ತಿದೆ. ಕೆಂಪು ರಕ್ತ ಕಣಗಳಿಗಿಂತಲೂ 10 ಪಟ್ಟು ಚಿಕ್ಕದಾಗಿರುವ ನ್ಯಾನೋ ರೋಬೋಟ್‌ಗಳನ್ನು ನಿಗದಿತ ಜೀವಕೋಶಗಳಿಗೆ ತಲುಪಿಸಲು ultrasound ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಈ ತಂತ್ರಜ್ಞಾನದಿಂದಿ ಕ್ಯಾನ್ಸರ್ ಸಂಬಂಧಿತ ಔಷಧಗಳನ್ನು ನ್ಯಾನೋ ರೋಬೋಟ್‌ನಲ್ಲಿರಿಸಿ, ನ್ಯೂನತೆ ಇರುವ ಜೀವಕೋಶಗಳಿಗೆ ಅತ್ಯಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಬಹುದಾಗಿದೆ.

ಹವಾಮಾನ ವಿಜ್ಞಾನಿಗಳಿಗೆ ಒಲಿದ ಪ್ರಥಮ ನೊಬೆಲ್ ಪ್ರಶಸ್ತಿ!

ಸೌರಮಂಡಲದಲ್ಲಿ ಭೂಮಿಯ ಹೆಗ್ಗುರುತೆಂದರೆ ಇಲ್ಲಿರುವ ಜೀವವೈವಿಧ್ಯ. ಆದರೆ ಇತ್ತೀಚೆಗೆ ಈ ಜೀವವೈವಿಧ್ಯದ ಮೇಲೆ ಅಡ್ಡ ಪರಿಣಾಮಗಳು ಉಂಟಾಗಿ ಹಲವು ಜೀವಿಗಳು ಅಳಿವಿನ ಅಂಚಿನಲ್ಲಿವೆ. ಅತಿಯಾದ ನಗರೀಕರಣ, ಮಾಲಿನ್ಯ, ಅರಣ್ಯ ನಾಶಹೀ॒ಗೆ ಕಾರಣಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪರಿಸರದ ಮೇಲೆ ನಡೆದಿರುವ ಇಂತಹ ಶೋಷಣೆಯಿಂದ ಜಾಗತಿಕ ಹವಾಮಾನ ಬದಲಾಗಿ, ಜಾಗತಿಕ
ತಾಪಮಾನದ ಏರಿಕೆಗೂ ಕಾರಣವಾಗುತ್ತಿದೆ. ಭೂಮಿಯಲ್ಲಿರುವ ಜೀವವೈಧ್ಯತೆ ಮತ್ತು ಹವಾಮಾನ ಪರಸ್ಪರ ಸಂಬಂಧ ಹೊಂದಿವೆ. ಈ ಕಾರಣದಿಂದ ಜಾಗತಿಕ ತಾಪಮಾನ ಏರಿಕೆ ಜೀವಿಗಳ ನೈಸರ್ಗಿಕ ವಾಸಸ್ಥಾನದ ಮೇಲೆ ಅಡ್ಡ ಪರಿಣಾಮ ಬೀರುತ್ತಿದ್ದು, ಎಷ್ಟೋ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಜಾಗತಿಕ ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ತೆಗಿದುಕೊಳ್ಳದೆ ಹೋದರೆ ಭೂಮಿಯಲ್ಲಿನ ಜೀವವೈವಿಧ್ಯತೆಯು ನಾಶವಾಗುವ ಹಂತಕ್ಕೆ ತಲುಪಬಹುದು ಎಂದು ಊಹಿಸಲಾಗಿದೆ. ಈ ಕಾರಣದಿಂದ, ನಮ್ಮ ದೇಶದಲ್ಲಿಯೂ ಸೇರಿದಂತೆ ಹಲವು ದೇಶಗಳಲ್ಲಿ ಜೀವವೈವಿಧ್ಯತೆ ಹಾಗೂ ಹವಾಮಾನ ಬದಲಾಗುವಿಕೆ ಸಂಬಂಧಿಸಿದಂತೆ, ಕಾಡುಗಳು ಮತ್ತು ಜೌಗು ಪ್ರದೇಶವನ್ನು ಸಂರಕ್ಷಿಸುವುದು ಹಾಗೂ ಮರು ಸ್ಥಾಪಿಸುವುದು, ಹಸಿರು ತಂತ್ರಜ್ಞಾನದಿಂದ ನಗರ ಪ್ರದೇಶವನ್ನು ನಿರ್ಮಿಸುವುದು, ಸುಸ್ಥಿರ ಕೃಷಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಅಧ್ಯಯನ-ಸಂಶೋಧನೆಗಳು ನಡೆಯುತ್ತಿದ್ದು, ಇದು ಕಾರ್ಯಗತವಾಗುವಂತೆ ಸರ್ಕಾರಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ವರ್ಷದ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಹವಾಮಾನ ವಿಜ್ಞಾನಿಗಳಾದ ಸೊಕುರೊ ಮನಾಬೆ, ಕ್ಲೌಸ್ ಹೆಸಲ್ಮನ್ ಹಾಗೂ ಜಾರ್ಜಿಯೋ ಪರಿಸಿರವರಿಗೆ ನೀಡಲಾಗಿದೆ. ಇದೇ ಪ್ರಥಮ ಬಾರಿಗೆ ಹವಾಮಾನ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಸಮಿತಿಯು ತಿಳಿಸಿದೆ (ಅಮೆರಿಕದ ಅಲ್ ಗೋರ್ ನೀಡಿದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹೊರತುಪಡಿಸಿ). ಈ ಪ್ರಶಸ್ತಿ ಪುರಸ್ಕರಿಸಿರುವ ಅಧ್ಯಯನಗಳು ಇಂದಿನ ಹವಾಮಾನದ ವೈಪರೀತ್ಯವನ್ನು ಸರಿಪಡಿಸುವ ಹಾಗೂ ಹಸಿರು ಮನೆ ಪರಿಣಾಮವನ್ನು ತಡೆಯಲು ಕೈಗೊಳ್ಳಲೇಬೇಕಾದ ಕ್ರಮಗಳ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

ಕಪ್ಪು ರಂಧ್ರದ “ಹೊಳೆಯುವ ಪ್ರತಿಧ್ವನಿ” (Luminous Echoes)

ಖಗೋಳ ವಿಜ್ಞಾನಿಗಳು 800 ಜೋತಿರ್ವಷ ದೂರವಿರುವ, ಸೂರ್ಯನಿಗಿಂತಲೂ 10 ಲಕ್ಷ ಪಟ್ಟು ಹೆಚ್ಚು ದ್ರವ್ಯರಾಶಿ ಹೊಂದಿರುವ ಒಂದು ಕಪ್ಪು ರಂಧ್ರವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ, ಅದರ ಸುತ್ತ ಬೆಳಕನ್ನು ವೀಕ್ಷಿಸಿದರು. ಇದನ್ನು ಸೂಕ್ಷ್ಮ ವೈಜ್ಞಾನಿಕ ವಿಧಾನಗಳಿಂದ ಅಧ್ಯಯನ ಮಾಡಿದಾಗ ತಿಳಿದ ವಿಚಾರವೆಂದರೆ, ಈ ಬೆಳಕು ಬರುತ್ತಿರುವುದು ಕಪ್ಪು ರಂಧ್ರದಿಂದ ಅಲ್ಲಾ, ಬದಲಾಗಿ ಕಪ್ಪು ರಂಧ್ರದ ಹಿಂದೆ ಇರುವ ಕಾಯಗಳಿಂದ ಎನ್ನುವ ವಿಚಾರ. ಐನ್‌ಸ್ಟೈನ್‌ನ ಸಾಮಾನ್ಯ ಸಾಪೇಕ್ಷ ಸಿದ್ಧಾಂತದ ಪ್ರಕಾರ ತೀವ್ರವಾದ ಗುರುತ್ವ ಬಲ ಇರುವ ಕಾಯದ ಬಳಿ ಬೆಳಕು ನೇರವಾಗಿ ಚಲಿಸದೆ ಬಾಗುತ್ತದೆ. ಹೀಗೆ ಕಪ್ಪು ರಂಧ್ರದ ಹಿಂದೆ ಇರುವ ಕಾಯಗಳಿಂದ ಬಂದ ಬೆಳಕು ಕಪ್ಪು ರಂಧ್ರದ ಬಳಿ ಬಾಗಿ ಭೂಮಿಗೆ ತಲುಪುತ್ತಿದೆ. ಹೀಗಾಗಿ, ಕಪ್ಪು ರಂಧ್ರ ಅಡ್ಡ ಇದ್ದರೂ, ಅದರ ಹಿಂದೆ ಇರುವ ಕಾಯವನ್ನು ಅಥವಾ ಅದರ ಬೆಳಕನ್ನು ನಾವು ನೋಡಬಹುದು. ಇದನ್ನೇ “Gravitational Lensing Effect” ಎಂದು ಕರೆಯುತ್ತಾರೆ. ಮುಂದಿನ ದಿನಗಳಲ್ಲಿ ಕಪ್ಪು ರಂಧ್ರದ ಬಗ್ಗೆ ಇನ್ನಷ್ಟು ವಿಸ್ಮಯಕಾರಿ ಅಂಶಗಳನ್ನು ಬಯಲಿಗೆಳೆಯುವ ದಿನಗಳಿಗೆ ಈ ಸಂಶೋಧನೆ ಮುನ್ನುಡಿ ಬರೆದಿದೆ.

ಅನ್ಯಗ್ರಹದ ಮೊದಲ ವೈಮಾನಿಕ ಹಾರಾಟ

ನಾಸಾ ಬಾಹ್ಯಾಕಾಶ ಸಂಸ್ಥೆಯು ಜುಲೈ 30, 2020ರಂದು ಅಟ್ಲಾಸ್ ಗಿ 541 ರಾಕೆಟ್‌ನಲ್ಲಿ ಪರ್ಸಿವರೆನ್ಸ್ ಎಂಬ ರೋವರ್‌ಅನ್ನು ಮಂಗಳ ಗ್ರಹಕ್ಕೆ ಕಳುಹಿಸಿತು. ಈ ರೋವರ್ ಸುಮಾರು ಏಳು ತಿಂಗಳಲ್ಲಿ, 48 ಕೋಟಿ ಕಿಲೋಮೀಟರ್ ಸಂಚರಿಸಿ ಫೆಬ್ರವರಿ 18, 2021ರಂದು ಸುರಕ್ಷಿತವಾಗಿ ಮಂಗಳನ ಮೇಲೆ ಇಳಿಯಿತು. ಪರ್ಸಿವರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಹಿಂದೆಂದೋ ಇದ್ದಿರಬಹುದಾದ ಜೀವಿಗಳು ಹೇಗಿದ್ದಿರಬಹುದು ಎಂಬ ಅಂಶವನ್ನು ಅನ್ವೇಷಣೆ ಮಾಡುವ ಉದ್ದೇಶ ಹೊಂದಿದೆ. ಇದರ ಜೊತೆಗೆ ಪರ್ಸಿವರೆನ್ಸ್ ರೋವರ್‌ನ ಹೊಟ್ಟೆಯಲ್ಲಿ 1.8 ಕಿಲೋಗ್ರಾಂ ತೂಕದ ಸಣ್ಣ ಮಾರ್ಸ್ ಹೆಲಿಕಾಪ್ಟರ್ ಒಂದಿತ್ತು. ಇದನ್ನು ಇಂಜೆನ್ಯುಟಿ (Ingenuity) ಎಂದು ಕರೆಯಲಾಗಿದೆ. ಪ್ರಥಮ ಬಾರಿಗೆ ಅನ್ಯಗ್ರಹದಲ್ಲಿ ವೈಮಾನಿಕ ಸಂಚಾರ ನಡೆಸಲು ಅನುವಾಗುವಂತೆ ಪ್ರಾಯೋಗಿಕವಾಗಿ ಈ ಪುಟ್ಟ ಹೆಲಿಕಾಪ್ಟರ್‌ಅನ್ನು, ನಾಸಾ ಮಂಗಳ ಗ್ರಹಕ್ಕೆ ಪರ್ಸಿವರೆನ್ಸ್ ರೋವರ್‌ನಲ್ಲಿ ಕಳುಹಿಸಿತ್ತು. ಈ ಇಂಜೆನ್ಯುಟಿ ಏಪ್ರಿಲ್ 19ರಂದು ಸ್ವಯಂಚಾಲಿತವಾಗಿ ನಿರ್ದಿಷ್ಟ ಎತ್ತರಕ್ಕೆ ಹಾರಿ ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ಸಿದ್ಧಪಡಿಸಿದ್ದ ಕೋಡೆಡ್ ಮಾಹಿತಿಯನ್ನು ಡೀಪ್ ಸ್ಪೇಸ್ ನೆಟ್‌ವರ್ಕ್ ಆಂಟೆನಾ ಸಹಾಯದಿಂದ ವಿಜ್ಞಾನಿಗಳು ಕಳುಹಿಸಿದ್ದರು. ಈ ಘಟನೆಯನ್ನು ಅಲ್ಲೇ ದೂರದಲ್ಲಿದ್ದ ಪರ್ಸಿವರೆನ್ಸ್ ರೋವರ್ ತನ್ನ ಕ್ಯಾಮರಾದಿಂದ ವೀಕ್ಷಣೆ ಮಾಡುವ ವ್ಯವಸ್ಥೆ ರೂಪಿಸಲಾಗಿತ್ತು. ಇಂಜೆನ್ಯುಟಿಯು ಮಂಗಳನ ಮೇಲ್ಮೈನಿಂದ 3 ಮೀಟರ್ ಹಾರಿ, ಸ್ವಲ್ಪ ಹೊತ್ತು ಗಾಳಿಯಲ್ಲಿದ್ದು ನಂತರ ನೆಲಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದನ್ನು ತಾನು ತೆಗೆದಿದ್ದ ವಿಡಿಯೋ ಮುಖಾಂತರ ಪರ್ಸಿವರೆನ್ಸ್ ರೋವರ್ ದೃಢೀಕರಿಸಿತು. ಮಾನವನ ಇತಿಹಾಸದಲ್ಲಿಯೇ ಅನ್ಯಗ್ರಹದಲ್ಲಿ ನಿಯಂತ್ರಿತ ವೈಮಾನಿಕ ಹಾರಾಟ ನಡೆಸಿರುವುದು ಇದೆ ಮೊದಲನೆಯದು. ಸದ್ಯಕ್ಕೆ ಈ ಹಾರಾಟ ಚಿಕ್ಕದಾದರೂ ಮುಂದಿನ ದಶಕದಲ್ಲಿ ಇತರ ಗ್ರಹಗಳ ಮೇಲೂ ಹಾರಲು ಯೋಗ್ಯವಾದ ಹೆಲಿಕಾಪ್ಟರ್ ಮತ್ತು ವಿಮಾನಗಳನ್ನು ತಯಾರಿಸುವುದಕ್ಕೆ ಇಟ್ಟ ಮೊದಲ ಚಾರಿತ್ರಿಕ ಹೆಜ್ಜೆಗೆ ಈ ಘಟನೆಯು ಸಾಕ್ಷಿಯಾಯಿತು.

Golden Eye in Sky | ಅಂತರಿಕ್ಷಕ್ಕೆ ಹಾರಿದ ಅತ್ಯಂತ ದೊಡ್ಡದಾದ ದೂರದರ್ಶಕ

ಡಿಸೆಂಬರ್ 25ರ ಕ್ರಿಸ್‌ಮಸ್‌ನಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನದ ಗಯಾನ ಸ್ಪೇಸ್ ಸೆಂಟರ್‌ನಿಂದ ಏರಿಯನ್ 5 ರಾಕೆಟ್‌ನಲ್ಲಿ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ಅನ್ನು ನಭಕ್ಕೆ ಕಳುಹಿಸಲಾಯಿತು. ಇದುವರೆಗೂ ಮಾನವನು ಅಂತರಿಕ್ಷಕ್ಕೆ ಕಳುಹಿಸಿರುವ ಅತ್ಯಂತ ದೊಡ್ಡದಾದ ದೂರದರ್ಶಕ ಇದು. ಹಬಲ್ ದೂರದರ್ಶಕದ ದರ್ಪಣಕ್ಕಿಂತಲೂ ಸುಮಾರು 6 ಪಟ್ಟು ಹೆಚ್ಚು ಬೆಳಕನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಈ ಜೇಮ್ಸ್ ವೆಬ್ ಟೆಲಿಸ್ಕೋಪ್ ಹೊಂದಿದೆ. ಈ ದೂರದರ್ಶಕ ಅವೆಗೆಂಪು (Infrared Radiation) ಕಿರಣಗಳಲ್ಲಿ ಕೆಲಸ ಮಾಡುತ್ತದೆ. ಈ ದೂರದರ್ಶಕದ ಪ್ರಮುಖ ಉದ್ದೇಶ 13.5 ಬಿಲಿಯನ್ ವರ್ಷಗಳ ಹಿಂದೆ ನಡೆದ ಬಿಗ್ ಬ್ಯಾಂಗ್‌ನ (ಮಹಾ ಸ್ಫೋಟದ) ಯೌವ್ವನದ ಸ್ಥಿತಿಯನ್ನು ನೋಡಿ ತಿಳಿಯುವುದು. ಬಿಗ್‌ಬ್ಯಾಂಗ್ ಆದ ನಂತರ ಪ್ರಥಮ ಗ್ಯಾಲಾಕ್ಸಿಗಳು ಹೇಗೆ ಉಗಮವಾದವು ಎಂಬ ವಿಷಯವನ್ನೂ ತಿಳಿಯುವುದಾಗಿದೆ.

 ವಿಶ್ವ ಕೀರ್ತಿ ಎಸ್.

ವಿಶ್ವ ಕೀರ್ತಿ ಎಸ್
ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: 2021ರ ಫಿಸಿಕ್ಸ್ ನೊಬೆಲ್; Butterfly Effect ಮತ್ತು ಹವಾಮಾನ ಬದಲಾವಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...