ಸಮಾಜ ಕಲ್ಯಾಣ ಇಲಾಖೆಯ ‘ಪ್ರಗತಿ ಕಾಲೋನಿ’ ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರಿಪುರ ಗ್ರಾಮ ಪಂಚಾಯಿತಿಯ ಹಾದ್ರಿಪುರ ಗ್ರಾಮದಲ್ಲಿ ನಡೆದಿದೆ.
ಜನವಸತಿ ಪ್ರದೇಶದಿಂದ ಸುಮಾರು ಒಂದು ಕಿ.ಮಿ. ದೂರದಲ್ಲಿರುವ ಗ್ರಾಮ ಪಂಚಾಯಿತಿ ಮುಂದೆಯೇ ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿರುವ ಯೋಜನೆ ದುರ್ಬಳಕೆಯಾಗುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ದಲಿತರ ಕೇರಿಗಳ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿರುವ ರಸ್ತೆಯಲ್ಲಿ ಕಾಮಗಾರಿ ನಡೆಸುವ ಮೂಲಕ ಪರಿಶಿಷ್ಟರಿಗೆ ಮೀಸಲಿಟ್ಟ ಹಣದ ದುರ್ಬಳಕೆ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈಗಾಗಲೇ ಕಾಮಗಾರಿ ಮುಗಿದಿದ್ದು, ರಸ್ತೆ ನಿರ್ವಹಣೆಗಾಗಿ ಸ್ಥಳೀಯ ಪಂಚಾಯಿತಿಗೆ ಹಸ್ತಾಂತರವಾಗಿದೆ.
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಬಡಾವಣೆಗಳು/ಕಾಲೋನಿಗಳ ಅಭಿವೃದ್ಧಿಗಾಗಿ ‘ಪ್ರಗತಿ ಕಾಲೋನಿ’ ಹೆಸರಿನಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಜೂನ್.8 ರಂದು ದೊಡ್ಡಬಳ್ಳಾಪುರ ಶಾಕಸ ಧೀರಜ್ ಮುನಿರಾಜು ಅವರು ಗುದ್ದಲಿ ಪೂಜೆ ನೆರವೇರಿಸಿ, ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಕಾಮಗಾರಿ ಮುಗಿದಿದ್ದು, ಸಿಸಿ ರಸ್ತೆ ನಿರ್ಮಾಣ ಮಾಡಿರುವ ಜಾಗದಲ್ಲಿ ಜನವಸತಿಯೇ ಇಲ್ಲ ಎಂಬುದು ಅಚ್ಚರಿಯ ವಿಷಯವಾಗಿದೆ. ಇದೀಗ ಕಾಮಗಾರಿ ನಡೆಸಿರುವ ಜಾಗದಿಂದ ದಕ್ಷಿಣಕ್ಕೆ ಸುಮಾರು ಒಂದು ಕಿ.ಮಿ. ದೂರದಲ್ಲಿ ಹಾದ್ರಿಪುರ ಗ್ರಾಮವಿದೆ; ಉತ್ತರಕ್ಕೆ ಹಾದ್ರಿಪುರ ಗ್ರಾಮದ ಕಾಲೋನಿ ಇದೆ. ಕಾಮಗಾರಿ ಮುಗಿದಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಫಲಕ ಅಳವಡಿಸಲಾಗಿದ್ದು, “ಹಾದ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದ್ರಿಪುರ ಪರಿಶಿಷ್ಟ ಜಾತಿ ಜನವಸತಿ ಕಾಲೋನಿಗೆ ಸಿ.ಸಿ. ರಸ್ತೆ ಅಭಿವೃದ್ಧಿ ಕಾಮಗಾರಿ” ಎಂದು ಬರೆಯಲಾಗಿದೆ.

ದಲಿತರ ಕೇರಿಯಲ್ಲಿಲ್ಲ ಚರಂಡಿ! ಜೆಜೆಎಂ ಕಾಮಗಾರಿಯಿಂದ ಹಾಳಾದ ಸಿಸಿ ರಸ್ತೆ
ಹಾದ್ರಿಪುರ ಗ್ರಾಮದಲ್ಲಿ ಸುಮಾರು 120 ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಜನರು ವಾಸಿಸುತ್ತಿದ್ದಾರೆ. ದಲಿತ ಸಮುದಾಯದ ಜನವಸತಿ ಪ್ರದೇಶದಲ್ಲಿ ಚರಂಡಿ ನಿರ್ಮಿಸಿ ಹಲವು ದಶಕಗಳೇ ಕಳೆದಿದೆ. ಕೆಲ ವರ್ಷಗಳ ಹಿಂದೆ ಗ್ರಾಮದ ದಲಿತ ಯುವಕರ ಒತ್ತಡಕ್ಕೆ ಮಣಿದಿದ್ದ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು, ಕೆಲವೇ ಕೆಲವು ಮೀಟರ್ನಷ್ಟು ಚರಂಡಿ ನಿರ್ಮಿಸಿದ್ದರು. ಆದರೂ ಈವರೆಗೆ ಬಹುತೇಕ ಕಡೆಗಳಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಈ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ ಹಾಕಲಾಗಿದ್ದ ಸಿಸಿ ರಸ್ತೆಯನ್ನು ಜೆಜೆಎಂ ಕಾಮಗಾರಿ ಸಂದರ್ಭದಲ್ಲಿ ಕತ್ತರಿಸಿ ಹಾಕಲಾಗಿದ್ದು ಬಹುತೇಕ ರಸ್ತೆ ಹಾಳಾಗಿದೆ. ಇಲ್ಲಿನ ಅಂಬೇಡ್ಕರ್ ಭವನವೂ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ದಲಿತರ ಜನವಸತಿ ಪ್ರದೇಶದಲ್ಲೇ ಸಾಕಷ್ಟು ಸಮಸ್ಯೆಗಳಿದ್ದರೂ, ಪರಿಶಿಷ್ಟರ ಹೆಸರಿನ ನಿಧಿಯಲ್ಲಿ ಅವರಿಗೆ ಸಂಬಂಧವೇ ಇಲ್ಲದೆ ಕಡೆಯಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದಾರೆ.

“ದಲಿತರು ವಾಸಿಸುವ ಪ್ರದೇಶದಲ್ಲಿ ಹೊಸದಾಗಿ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಿಸುವಂತೆ ಈ ಹಿಂದೆ ಹಲವು ಭಾರಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದ್ದೆವು, ‘ನಮ್ಮ ಬಳಿ ಯಾವುದೇ ಫಂಡ್ ಇಲ್ಲ’ ಎಂದು ಹೇಳುತ್ತಿದ್ದರು. ಇದೀಗ ರೂ. 50 ಲಕ್ಷ ವೆಚ್ಚದಲ್ಲಿ ಕೇವಲ ಅರ್ಧ ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಿದ್ದಾರೆ. ನಾವು ವಾಸಿಸುತ್ತಿರುವ ಪ್ರದೇಶದಲ್ಲೇ ಸಮಸ್ಯೆ ಸಾಕಷ್ಟಿದ್ದರೂ, ಇಷ್ಡೊಂದು ಹಣವನ್ನು ವಿನಾಕಾರಣ ವ್ಯರ್ಥ ಮಾಡಲಾಗಿದೆ” ಎಂದು ಹೆಸರು ಹೇಳಲಿಚ್ಚಿಸದ ದಲಿತ ಯುವಕನೊಬ್ಬ ಅಸಮಾಧಾನ ಹೊರಹಾಕಿದ್ದಾನೆ.
ಏನಿದು ‘ಪ್ರಗತಿ ಕಾಲೋನಿ’ ಯೋಜನೆ?
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಬಡಾವಣೆಗಳು/ಕಾಲೋನಿಗಳ ಅಭಿವೃದ್ಧಿಗಾಗಿ ಜಾರಿಗೆ ತರಲಾದ ಪ್ರಮುಖ ಮೂಲಸೌಕರ್ಯ ಯೋಜನೆಯನ್ನು ‘ಪ್ರಗತಿ ಕಾಲೋನಿ’ ಯೋಜನೆ ಎಂದು ಕರೆಯಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಹೆಚ್ಚಾಗಿ ವಾಸಿಸುವ ಕಾಲೋನಿಗಳು, ಹಾಡಿಗಳು ಹಾಗೂ ತಾಂಡಾಗಳನ್ನು ಹಂತ-ಹಂತವಾಗಿ ‘ಮಾದರಿ ಕಾಲೋನಿ’ಗಳನ್ನಾಗಿ ಪರಿವರ್ತಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯ ಮೂಲಕ ದಲಿತರು ವಾಸಿಸುವ ಜನವಸತಿ ಪ್ರದೇಶಗಳಲ್ಲಿ ಸಿಸಿ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ, ಚರಂಡಿ ಹಾಗೂ ವೈಜ್ಞಾನಿಕ ತ್ಯಾಜ್ಯ ನೀರು ನಿರ್ವಹಣೆ ವ್ಯವಸ್ಥೆ, ನೀರು ಶೇಖರಣಾ ಟ್ಯಾಂಕ್ ಸೇರಿದಂತೆ ಶುದ್ಧ ಕುಡಿಯುವ ನೀರಿನ ಸೌಲಭ್ಯ, ವಿದ್ಯುದ್ದೀಕರಣ ಮತ್ತು ಹೈಮಾಸ್ಕ್/ಸೌರ ಬೀದಿ ದೀಪಗಳ ಅಳವಡಿಕೆ ಮತ್ತು ಸಮುದಾಯ ಭವನ ಅಥವಾ ಅಧ್ಯಯನ ಕೇಂದ್ರಗಳ ನಿರ್ಮಾಣ ಮಾಡಲಾಗುತ್ತದೆ.
ಅನುದಾನ ಮೂಲ:
ಈ ಯೋಜನೆಗೆ ಅಗತ್ಯವಿರುವ ಹಣವನ್ನು ರಾಜ್ಯ ಸರ್ಕಾರದ ಎಸ್ಸಿಎಸ್ಪಿ ಮತ್ತು ಟಿಎಸ್ಪಿ (SCSP-TSP) ಕಾಯ್ದೆಯಡಿಯ ಬಂಡವಾಳ ಅನುದಾನ ಹಾಗೂ ‘ವಿಶೇಷ ಕೇಂದ್ರ ನೆರವು’ (SCA) ನಿಧಿಯಿಂದ ಒದಗಿಸಲಾಗುತ್ತದೆ.
ಕಾಮಗಾರಿಗಳನ್ನು ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಅಥವಾ ಕರ್ನಾಟಕ ಭೂಸೇನಾ ನಿಗಮ (ಕೆಆರ್ಐಡಿಎಲ್) ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ.


