Homeಮುಖಪುಟಅಚ್ಚು ಮೊಳೆಯಿಂದ ಆನ್‌ಲೈನ್ ಎಡಿಷನ್‌ವರೆಗೆ ಪತ್ರಿಕಾ ಜಗತ್ತು!

ಅಚ್ಚು ಮೊಳೆಯಿಂದ ಆನ್‌ಲೈನ್ ಎಡಿಷನ್‌ವರೆಗೆ ಪತ್ರಿಕಾ ಜಗತ್ತು!

- Advertisement -
- Advertisement -

ಎರಡು ದಶಕಗಳ ಹಿಂದೆ ಸೂರ್ಯ ಹುಟ್ಟುವ ಮುಂಚೆಯೇ ದಿನಪತ್ರಿಕೆಗಳು ತವರ ಮತ್ತು ಅಂಟಿಮೊನಿ ಲೋಹಗಳ ಮಿಶ್ರಣದಿಂದ ತಯಾರಾದ ಅಚ್ಚು ಮೊಳೆಯ ಮೂಲಕ ಜನಿಸಿ, ಪತ್ರಿಕಾ ವಿತರಕರ ಸೈಕಲ್ಲುಗಳ ಮೂಲಕ ಸಾಗುತ್ತಿದ್ದವು. ಹೀಗೆ ಸಾಗಿಬಂದ ಪತ್ರಿಕೆಗಳನ್ನು ಓದದೆ ದಿನಚರಿಯೇ ಸಾಗದೆಂಬ ಪರಿಸ್ಥಿತಿ ದೇಶದೆಲ್ಲೆಡೆ ಇತ್ತು. ಇನ್ನೂ ಪಟ್ಟಣ, ತಾಲ್ಲೂಕು, ಹೋಬಳಿ ಮಟ್ಟಗಳಿಗೆ ಅಪರಾಹ್ನ 12ರ ಹೊತ್ತಿಗೆ ಬಸ್ಸುಗಳ ಮೂಲಕ ತಲುಪುತ್ತಿದ್ದವು. ಬಸ್ಸಿನ ಸದ್ದು ಬಂದಕೂಡಲೇ ಓಡೋಡಿ ಪತ್ರಿಕೆ ತರಲು ಬಾಗಿಲಲ್ಲೇ ಕಾದು ನಿಂತಿರುತ್ತಿದ್ದರು.

ಇಷ್ಟಕ್ಕೂ ನನ್ನ ಬಾಲ್ಯ, ಯವ್ವನ, ಪತ್ರಿಕೆ ಒಂದಕ್ಕೊಂದು ಬೆಸೆದುಕೊಂಡು ಸಾಗುತ್ತವೆ. ಶೆಟ್ಟರ ಅಂಗಡಿಯಿಂದ ತರುವ ಕಳ್ಳೆಪಪ್ಪು, ಬೇಳೆ, ಸಕ್ಕರೆ ಕಟ್ಟಿರುವ ಚಂದಮಮ, ತರಂಗ, ಸುಧಾ, ಮಯೂರ, ಪ್ರಜಾವಾಣಿಯ ಹಾಳೆಗಳಲ್ಲಿನ ಚಿತ್ರಗಳು, ಫ್ಯಾಂಟಮ, ಬೇತಾಳನ ಕಥೆಯ ತುಣುಕುಗಳನ್ನು ಬಿಡುವು ಸಿಕ್ಕಾಗಲೆಲ್ಲಾ ಓದುತ್ತಾ ಕಳೆದಿರುವೆ. ಹೈಸ್ಕೂಲು ಮೆಟ್ಟಿಲು ಹತ್ತಿದ ನಂತರ, ರಜಾದಿನಗಳಲ್ಲಿ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಪ್ರತಿ ಮನೆಯ ಗೇಟಿನೊಳಗಡೆ ಪತ್ರಿಕೆ ಎಸೆದಾಗ ಮನೆಯ ಮಾಲೀಕನ ಮಗುವೊಂದು ಪತ್ರಿಕೆಯನ್ನು ಮೊರದಗಲ ಬಿಡಿಸಿ ಚಾಕ್‌ಲೇಟ್ ಹೊತ್ತೊಯ್ದಂತೆ ಹೊತ್ತೊಯ್ಯುತ್ತಿತ್ತು. ಹಲವೆಡೆ ಜನ ರಸ್ತೆ ಬದಿ ನಿಂತು ಪತ್ರಿಕೆಯ ಪ್ರತಿ ಪುಟ ಓದುವುದನ್ನು ಕಂಡಿದ್ದೆ. ಅಲ್ಲದೆ, ವಾಚನಾಲಯಗಳಲ್ಲಿ, ಅಣ್ಣಾವ್ರ ಅಭಿಮಾನಿಗಳ ಸಂಘದ ಕಚೇರಿಗಳಲ್ಲಿ ಸರದಿಯಲ್ಲಿ ನಿಂತು, ಕುಂತು ಪತ್ರಿಕೆ ಓದುವುದನ್ನು ಕಂಡಿರುವೆ. ಹೀಗೆ ಪತ್ರಿಕೆಯ ಪ್ರತಿ ಪುಟ ಓದುವುದನ್ನು ನೋಡಿ ಓದುವುದನ್ನು ಕಲಿತೆ.

ಇರಲಿ, ಮನೆಮನೆಗೆ ಪತ್ರಿಕೆ ಮುಟ್ಟಿಸಿ ಹಿಂತಿರುಗುವಾಗ ಜಗಲಿ ಕಟ್ಟೆಂಂದರ ಬಳಿ ನಾಲ್ಕೈದು ಜನ ಅಜ್ಜಂದಿರು ನನಗಾಗಿ ಕಾದು ಕುಳಿತಿರುತ್ತಿದ್ದರು. ಸೈಕಲ್ ಕ್ಯಾರಿಯರ್‌ನಲ್ಲಿ ವಿತರಣೆಯಗದೆ ಒಂದೆರಡು ಪತ್ರಿಕೆ ಕಂಡರಂತೂ ಅವರುಗಳಿಗೆ ಮಹದಾನಂದವಾಗುತ್ತಿತ್ತು.

ಇಂದು ಮುದ್ರಣ ಮಧ್ಯಮಾ ಸೊರಗುತ್ತಿದೆ. ಇಂದು ‘ಡಿಜಿಟಲ್’ ರಾಜನಿಗೆ ಚಿರಾಯುವಾಗಲಿ ಎಂದು ಕೂಗುವ ಅನಿವಾರ್ಯತೆಯಲ್ಲಿ ನಾವಿದ್ದೇವೆ.

ಇರಲಿ, ಮಧ್ಯಮಾ ಹುಟ್ಟಿದ ದಿನದಿಂದಲೂ ಇಲ್ಲಿಯವರೆಗೂ ಸುದೀರ್ಘ ಹಾದಿ ಕ್ರಮಿಸಿದೆ. ಹಳೆಯದರಿಂದ, ಹೊಸದಕ್ಕೆ ಮತ್ತು ಏಕಪಕ್ಷೀಯದಿಂದ ಭಾಗವಹಿಸುವಿಕೆಗೆ, ಮಾಧ್ಯಮಾ ಎಂಬ ಪದವು ಅದರ ಅರ್ಥ ಮತ್ತು ಆಚರಣೆಯಲ್ಲಿ ತೀವ್ರ ಬದಲಾವಣೆಗೆ ಒಳಗಾಗಿದೆ. ಇಲ್ಲಿ ಕಹಿಸತ್ಯ ಒಂದಿದೆ. ಆವತ್ತು ಪತ್ರಿಕೆಗಳಿಗೆ ಪೈಪೋಟಿ ನೀಡಲು ರೇಡಿಯೋ ಇತ್ತು. ರೇಡಿಯೋ ಖರೀದಿಸಬೇಕೆಂದರೆ ಲೈಸನ್ಸ್ ಪಡೆಯುವುದು ಕಡ್ಡಾಯವಾಗಿತ್ತು. ಆದರೆ, ರೇಡಿಯೋ ಎಂಬ ಅಶರೀರವಾಣಿ ಬಹಳ ಹಿಂದೆ ಮರಣಶಯೈ ತಲುಪಿದ್ದನ್ನು ನಿರ್ಲಕ್ಷಿಸುವಂತಿಲ್ಲ. ದೂರದರ್ಶನ ಎಂಬ ಮಯವಿ ಕನ್ನಡಿ ‘ರೇಡಿಯೋ’ವನ್ನು ನೇಪಥ್ಯಕ್ಕೆ ತಳ್ಳಿಬಿಟ್ಟಿತು. ಮಂತ್ರಿಕವಾಗಿದ್ದ ರೇಡಿಯೋ ಜಾಗದಲ್ಲಿಂದು ಟಿ.ವಿ. ಬಂದು ಕೂತಿದೆ. ಟಿ.ವಿ. ಜಾಗದಲ್ಲಿ ಕಂಪ್ಯೂಟರ್ ಬಂದು ಕೂತಿದೆ.

ಇದರಂತೆಯೇ ಸಂಕಷ್ಟದಲ್ಲಿ ದಿನಗಳನ್ನು ಎದುರಿಸುತ್ತಿರುವ ಮುದ್ರಣ ಮಾಧ್ಯಮಾ ಇತ್ತೀಚೆಗೆ ರೇಡಿಯೋ ಪುಟಿದೆದ್ದಿರುವಂತೆಯೇ ನಿಲ್ಲುವ ಸಂಭವಗಳಿವೆ. ಇಲ್ಲಿ ರೇಡಿಯೋ ಪುನರ್‌ಸ್ಥಾಪಿತವಾಗಲು ಜನರ ಜೀವನದ ವಿಧಾನದಲ್ಲಿ ಆದ ಬದಲಾವಣೆಯೇ ಕಾರಣ. ಇಂತಹ ಬದಲಾವಣೆಯೇ ಮುದ್ರಣ ಮಾಧ್ಯಮಾ ನಾಶವಾಗಲು ಕಾರಣ ಎಂಬುದನ್ನು ಮರೆಯುವಂತಿಲ್ಲ. ಏಕೆಂದರೆ, ರೇಡಿಯೋ ಪಾಲಿಗೆ ಒಳಿತು ಎನಿಸಿದ್ದು ಮುದ್ರಣಕ್ಕೆ ಒಗ್ಗುವುದಿಲ್ಲ ಎಂಬುದೇ ವಿರೋಧಾಭಾಸವಾಗಿದೆ. ಹೀಗಾಗಿ ಮುದ್ರಣ ಮಾಧ್ಯಮಾ ಮರುಜನ್ಮ ಪಡೆಯಲು ಸಾಧ್ಯವೇ ಎಂಬ ಚಿಂತೆ ಕಾಡದೆ ಇರದು. ಇಲ್ಲಿ ರೇಡಿಯೋ ಪ್ರಸಾರಕ್ಕೆ ಯಾವುದೇ ಸಮಯದ ನಿರ್ಬಂಧವಿಲ್ಲ. ಇದರಿಂದಾಗಿಯೇ ಇದು ದೂರದರ್ಶನ, ಡಿಜಿಟಲ್‌ನೊಂದಿಗೆ ಸ್ಪರ್ಧಿಸುವ ಶಕ್ತಿ ಹೊಂದಿದೆ. ಟಿ.ವಿ. ವಾಹಿನಿ ತಲುಪುವಷ್ಟೇ ವೇಗವಾಗಿ ಜನರನ್ನು ರೇಡಿಯೋ ತಲುಪುತ್ತಿತ್ತು. ಆದರೆ ವೃತ್ತಪತ್ರಿಕೆಗಳು ಅಚ್ಚು ಮೊಳೆಯಿಂದ ಹೊರಬರಲಿ, ಕಂಪ್ಯೂಟರ್ ಮೂಲಕ ಹೊರಬರಲಿ, ತಲುಪಲು 12 ಗಂಟೆಗಳ ಕಾಲಾವಕಾಶ ಬೇಕು. ಇಂತಹ ನಿಧಾನಗತಿಯಿಂದ ಹಿಂದುಳಿದಿರುವ ವೃತ್ತಪತ್ರಿಕೆಯನ್ನು ಟಿ.ವಿ, ರೇಡಿಯೋ, ಡಿಜಿಟಲ್ ಜಗತ್ತು ಕೂಡಿ ಮೂಲೆಗೆ ತಳ್ಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೊರೊನಾ ಪೂರ್ವ ಮತ್ತು ನಂತರದ ದಿನಗಳಲ್ಲಿ ಆದ ಬದಲಾವಣೆಗಳನ್ನು ಕಂಡಾಗ ಒಂಥರಾ ಖಿನ್ನತೆ ಕಾಡುತ್ತದೆ. ನಮ್ಮ ರಾಜ್ಯ ಮಾತ್ರವಲ್ಲದೆ ದೇಶದ ಉದ್ದಗಲ ಹಲವು ಪತ್ರಿಕೆಗಳ ಕಚೇರಿಗಳನ್ನು ಸಿಬ್ಬಂದಿರಹಿತಗೊಳಿಸಲಾಗಿದೆ. ಸಂಬಳವನ್ನು ಕನಿಷ್ಠಗೊಳಿಸಲಾಗಿದೆ. ತಿಂಗಳ ಉದ್ಯೋಗದ 30 ದಿನಗಳಲ್ಲಿ 15 ದಿನಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಕಚೇರಿ ಮತ್ತು ಸಿಬ್ಬಂದಿ ಹೊಂದಿದ್ದ ಹಿಂದೂಸ್ತಾನ ಟೈಮ್ಸ್, ಏಷಿಯನ್ ಏಜ್, ಡೈಲಿ ಟೆಲಿಗ್ರಾಫ್‌ನಂತಹವೂ ತನ್ನ ಪ್ರಾದೇಶಿಕ ಕಚೇರಿ, ಸಿಬ್ಬಂದಿಗಳನ್ನೇ ಮನೆಕಡೆ ಅಟ್ಟಿಬಿಟ್ಟವು. ಇದರಿಂದ ಒಂದು ತಲೆಮರಿನ ಪತ್ರಕರ್ತರ ಬದುಕಂತೂ ತೊಳಲಾಟಕ್ಕೆ ಸಿಲುಕಿತು.

ಕೆಲ ವರ್ಷಗಳ ಹಿಂದೆ ಪಾಶ್ಚಿಮತ್ಯ ರಾಷ್ಟ್ರಗಳಲ್ಲಿ ಮುದ್ರಣ ಮಾಧ್ಯಮವನ್ನು ಆನ್‌ಲೈನ್ ಪತ್ರಿಕೋದ್ಯಮಕ್ಕೆ ಪರಿವರ್ತಿಸಲಾಯಿತು. ’ಸುದ್ದಿ ಮಾಧ್ಯಮದ ಸ್ಥಿತಿ 2016’ ಎಂಬ ಶೀರ್ಷಿಕೆಯುಳ್ಳ ವರದಿಯನ್ನು ಪಿಇಡಬ್ಲ್ಯೂ ಸಂಶೋಧನಾ ಕೇಂದ್ರವು ಪ್ರಕಟಿಸಿತ್ತು. ಇದು ಅಮೆರಿಕದಲ್ಲಿ ವಾರದ ದಿನಗಳು ಮತ್ತು ಭಾನುವಾರ ಪತ್ರಿಕೆಗಳ ಪ್ರಸರಣವು, 1930ರ ಮಹಾ ಆರ್ಥಿಕ ಹಿಂಜರಿತದ ತಕ್ಷಣದ ಪರಿಣಾಮದ ನಂತರ ಹಿಂದೆಂದೂ ಕಂಡುಬರದಷ್ಟು ಕುಸಿತವನ್ನು ಅನುಭವಿಸಿತೆಂದು ಹೇಳಿದೆ. ಇದರಂತೆ ವಾರದ ದಿನದ ಪ್ರಸರಣೆಯ ಸರಾಸರಿ ಪ್ರಮಾಣವು ಶೇ.7ರಷ್ಟು ಕುಸಿದಿತ್ತು. ಆದರೆ ಭಾನುವಾರದ ಪ್ರಸರಣವು ಶೇ.4ಕ್ಕೆ ಕುಸಿದಿತ್ತು. 2010ರಿಂದ ಇಂತಹ ಕುಸಿತದ ಇಳಿಕೆಯನ್ನು ಈ ವರದಿ ತೋರಿಸಿದೆ. ಹಲವು ಕಾರಣಗಳಿಂದ ಮುದ್ರಣ ಮಾಧ್ಯಮದ ಪ್ರಸರಣದಲ್ಲಿ ಶೇ.9ರಷ್ಟು ಕುಸಿತಕ್ಕೆ ಕಾರಣವಾಗಿದೆ.

ಇನ್ನು ಉತ್ತಮ ಆರ್ಥಿಕ ಬೆಳವಣಿಗೆಯ ಮಧ್ಯೆಯೂ ಜಾಹೀರಾತು ಆದಾಯ ಕೆಡುತ್ತಲೇ ಇತ್ತು. ಉದಾಹರಣೆಗೆ ನ್ಯೂಯಾರ್ಕ್‌ನ ಟೈಮ್ಸ್ 2016ರ 3 ತಿಂಗಳಲ್ಲಿ ಶೇ.19ರಷ್ಟು ಕುಸಿತ ಕಂಡಿದೆ. ವಾಲ್‌ಸ್ಟ್ರೀಟ್ ಜರ್ನಲ್ ಕ್ಷೀಣಿಸುತ್ತಿರುವ ಜಾಹೀರಾತು, ಮಾರಾಟವನ್ನು ನಿಭಾಯಿಸಲು ಹಲವು ವಿಭಾಗಗಳನ್ನು ಒಗ್ಗೂಡಿಸಿ ಮುನ್ನಡೆಯಿತು. ಇದೇ ಪ್ರಯೋಗವನ್ನು ನಮ್ಮಲ್ಲಿರುವ ನಂ. 1 ಪತ್ರಿಕೆ ಮಾಡಿತು. ರಾತ್ರೋರಾತ್ರಿ ಹಲವರನ್ನು ಉದ್ಯೋಗದಿಂದ ತೆಗೆಯಿತು. ಹಲವರಿಗೆ ‘ಖಾಯಂ’ ಪೊರೆ ತೆಗೆದು ‘ಗುತ್ತಿಗೆ’ ಆಧಾರ ನೀಡಿತು. ಇಂತಹ ಕಾರ್ಯಗಳಿಗೆ ಕೆಲವು ಮಾಧ್ಯಮ ಸಂಘಟನೆಗಳ ನೇತಾರರು ಕೈಜೋಡಿಸಿದರು. ಇದರ ನಡುವೆ ಓದುಗರ ಸಂಖ್ಯೆ ಇಳಿಮುಖ ಕಾಣುತ್ತಲೇ, ವೃತ್ತಪತ್ರಿಕೆಗಳು ಆನ್‌ಲೈನ್ ಆವೃತ್ತಿಯತ್ತ ಗಮನ ಕೊಟ್ಟವು.

ಇವತ್ತಿಗೂ ಕೈಬರಹದ ಮೂಲಕ ಸುದ್ದಿ ಬರೆಯುವ ನನಗೆ ವೃತ್ತಪತ್ರಿಕೆ ಎಂಬುದು ಸಂವೇದನೆಯ ಪ್ರತೀಕ. ವೃತ್ತಪತ್ರಿಕೆಯ ಪ್ರತಿ ಪುಟಗಳಲ್ಲಿ ಸ್ಪರ್ಶದಲ್ಲಿ, ಮುದ್ರಣದ ಘಮಲಿನಲ್ಲಿ ಅನೂಹ್ಯವಾದ ಪುಳಕ ಕಂಡಿರುವೆ. ಸುದ್ದಿಯನ್ನು ನೆನಪಿನ ಬುತ್ತಿಯಲ್ಲಿನ ‘ಅಮೂಲ್ಯ ವಸ್ತು’ ಎಂದೇ ಭಾವಿಸಿರುವೆ.

ಇಂದು ಡಿಜಿಟಲ್ ಮಾಧ್ಯಮ ‘ಮಾಧ್ಯಮ ಪ್ರಪಂಚ’ದಲ್ಲಿ ಸಿಂಹಪಾಲು ಹೊಂದಿದೆ. ಏಳು ವರ್ಷಗಳ ಹಿಂದೆಯೇ 227 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಇದರೊಳಗಡೆ ಮೊಬೈಲ್, ಟ್ಯಾಬ್ಲೆಟ್ ಕೂಡ ಸೇರಿತ್ತು. ಮುಂದಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮದ ಪರಿಣಾಮ ಇನ್ನೂ ಅಧಿಕವಾಗಿರುತ್ತದೆ. ವೃತ್ತಪತ್ರಿಕೆಗಳಲ್ಲಿ ಆಂಗ್ಲ ಭಾಷಾ ಪತ್ರಿಕೆಗಳು ಮಾತ್ರ ತಮ್ಮ ಪ್ರಸಾರವನ್ನು ಉಳಿಸಿಕೊಂಡಿವೆ. ಉಳಿದಂತೆ ಮಾತೃಭಾಷಾ ಪತ್ರಿಕೆಗಳು ತಮ್ಮ ಪ್ರಸಾರವನ್ನು ದಿನದಿಂದ ದಿನಕ್ಕೆ ಇಳಿಸಿಕೊಳ್ಳುತ್ತಲೇ ಇದೆ.

2016ರ ಪಿಇಡಬ್ಲ್ಯೂ ವರದಿಯಂತೆ ಅಮೆರಿಕದಲ್ಲಿನ ಪತ್ರಿಕಾ ವೆಬ್‌ಸೈಟ್‌ಗಳ ಒಯ್ಯಾಟ ಹೆಚ್ಚಾಗಿದೆ. ನಿರ್ದಿಷ್ಟವಾಗಿ ಮೊಬೈಲ್ ಬಳಕೆಯ ಹೆಚ್ಚಳದಿಂದಾಗಿ ಡಿಜಿಟಲ್ ಪ್ರಸರಣ ಬೆಳವಣಿಗೆಯನ್ನು ಕಂಡಿತು. ಬಹುತೇಕ ಇಂತಹದ್ದೇ ಬೆಳವಣಿಗೆಗಳು ಕೆಲದಿನಗಳ ನಂತರ ನಮ್ಮಲ್ಲಿಯೂ ಕಂಡುಬಂದಿತ್ತು. ಮುದ್ರಣ ಆವೃತ್ತಿಗಳೆಲ್ಲವೂ, ಆನ್‌ಲೈನ್ ಆವೃತ್ತಿ ಕಾಣಲಾರಂಭಿಸಿದವು. ಹೀಗೆ ಆನ್‌ಲೈನ್ ಆವೃತ್ತಿಯ ಮೂಲಕ ಗಣನೀಯ ಪ್ರಮಾಣದಲ್ಲಿ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದೆಂದು ವೃತ್ತಪತ್ರಿಕೆಗಳು ಅರಿತುಕೊಂಡವು. ಹೀಗಾಗಿಯೇ ವೃತ್ತಪತ್ರಿಕೆಗಳು ಆನ್‌ಲೈನ್ ಆವೃತ್ತಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿವೆ. ಉತ್ತಮವಾಗಿ ನಿರ್ವಹಿಸಲ್ಪಟ್ಟ ವೆಬ್‌ಸೈಟ್ ವೃತ್ತಪತ್ರಿಕೆಯ ಬ್ರ್ಯಾಂಡ್ ಇಮೇಜನ್ನು ಸುಧಾರಿಸುತ್ತದೆ. ಆದರೆ, ನಿರ್ವಹಣೆ ಕಾಣದ ವೆಬ್ ಆವೃತ್ತಿಯಿಂದ ಅದರ ನಿಷ್ಕ್ರಿಯತೆಯನ್ನು ತೋರಿಸುತ್ತದೆ. ಹೀಗಾಗಿ ವೆಬ್‌ನಿಂದಾಗಿ ಹೆಚ್ಚುವರಿ ಗುಣಲಕ್ಷಣಗಳನ್ನು ಕಾಣಬಹುದು.

ಇತ್ತೀಚೆಗೆ ಇಂದು ಸಂಜೆಯ ನೂತನ ಕಚೇರಿ ಉದ್ಘಾಟನಾ ಸಮಾರಂಭ ನಡೆಯಿತು. ಇಂದು ಸಂಜೆ ಗಾಸಿಪ್ ಸುದ್ದಿಯ ಅಡ್ಡೆಯಲ್ಲ. ರೋಮನ್ಸ್, ಕ್ರೈಂನ ಕೊಳೆತ ವಾಸನೆಯನ್ನು ಹೊತ್ತಿಲ್ಲ. ಅಂದು ಟಿ.ಎಸ್.ಆರ್. ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಗಂಗಾಧರ ಮೊದಲಿಯರ್, ಪಿ.ಟಿ.ಐ.ನ ನಿವೃತ್ತ ಮುಖ್ಯಸ್ಥ ಎಂ. ಸಿದ್ದರಾಜು, ಬಿ.ಕೆ. ಶಿವರಾಂ ಇವರುಗಳೆಲ್ಲರೂ ಕೂಡಿ ಮುದ್ರಣ ಮಾಧ್ಯಮದ ಉಳಿವು, ದೃಶ್ಯ ಮಾಧ್ಯಮದ ಅನಾಹುತಕಾರಿ ನಿಲುವು, ಮಾಧ್ಯಮದ ಮೇಲಾಗುತ್ತಿರುವ ಬೆದರಿಕೆಗಳ ಬಗ್ಗೆ ಮಾತನಾಡಿದರು. ಇಲ್ಲಿ ನನ್ನ ಮನಸ್ಸಿಗೆ ತಟ್ಟಿದ್ದೇನೆಂದರೆ, ಇಂತಹ ಪ್ರಯತ್ನಗಳು ಹೆಚ್ಚಾಗಬೇಕೆಂಬುದು. ಇದೇ ಹೊತಿನಲ್ಲಿ ಒಂದರೆಕ್ಷಣ ಇಂತಹ ಪ್ರಯತ್ನಗಳು ‘ನಿಷ್ಪಲ’ವೇ ಎಂಬ ಭಾವವೂ ಮೂಡಿ ಮರೆಯಾಯಿತು. ಕಾರಣ, ಪತ್ರಿಕೋದ್ಯಮವು ಈಗಾಗಲೇ ಅಪಾಯಕ್ಕೊಳಗಾದ ಜೀವನ ವಿಧಾನವಾಗಿದೆ. ಇದೇ ಕಾರ್ಯಕ್ರಮದಲ್ಲಿ ಹೃದಯ ತುಂಬಿ ಬಂದ ವಿಷಯವೆಂದರೆ, ಅಲ್ಲಿ ನೆರೆದಿದ್ದ ಎಲ್ಲಾ ಹಿರಿಯ, ಕಿರಿಯ ಪತ್ರಕರ್ತರನ್ನು ಭೇದಭಾವವಿಲ್ಲದೆ ಆಡಳಿತ ವರ್ಗ ಗೌರವಿಸಿತ್ತು. ವಿಶೇಷವಾಗಿ ಸಂಧ್ಯಾ, ಚಂದ್ರಕಲಾ, ಶೋಭಾ, ಶ್ವೇತಾ, ಲತಾ, ನದಾಫ್, ಹನುಮಂತರಾಯಪ್ಪ ಅವರುಗಳು ತಮ್ಮ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಂತೆ ಸಡಗರ-ಸಂಭ್ರಮದಿಂದ ತೊಡಗಿಸಿಕೊಂಡಿದ್ದರು.

ಆನ್‌ಲೈನ್ ಆವೃತ್ತಿಯಿಂದ ಸಂವಹನ ಸಾಮರ್ಥ್ಯ ಹೆಚ್ಚುತ್ತದೆ ಎಂದು ಸಂವಹನ ತಜ್ಞರಾದ ಪ್ರೊ. ಬಿ.ಕೆ. ರವಿ, ಪ್ರೊ. ಓಂಕಾರ್ ಕಾಕಡೆ, ಪ್ರೊ. ಮಹೇಶ್ ಚಂದ್ರಗುರು, ಪ್ರೊ. ಶ್ರೀಕಂಠಚಾರ್ ಅವರು ಭವಿಷ್ಯ ನುಡಿದಿದ್ದರು. ಡಿಜಿಟಲ್ ಯುಗದ ಸಾಧನಳಾದ ಇಮೇಲ್, ವೆಬ್‌ಸೈಟ್, ಲೈವ್ ಶೋ, ಆನ್‌ಲೈನ್ ಪೋಲ್‌ಗಳು ಮತ್ತು ಸಮೀಕ್ಷೆಗಳು, ಚರ್ಚಾವೇದಿಕೆಗಳು ಸೇರಿದಂತೆ ಇತ್ಯಾದಿ ಪರಿಕರಗಳು ಮತ್ತು ಉಪಯುಕ್ತತೆಗಳು ಆನ್‌ಲೈನ್ ಪತ್ರಿಕೆಯನ್ನು ಸಾರ್ವಜನಿಕ ಚರ್ಚೆಯ ಕ್ಷೇತ್ರವನ್ನಾಗಿ ಮಾಡಿ, ಸಂವಾದಾತ್ಮಕ ಸಂವಹನವನ್ನು ಒದಗಿಸುತ್ತದೆ ಎಂದು ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ, ಲಕ್ಷ್ಮೀನಾರಾಯಣ, ನಟರಾಜ, ಅಭಿಮನ್ಯು ರಮೇಶ್, ವೆಂಕಟೇಶ್ ಪ್ರಸಾದ್, ಆರ್.ಪಿ. ಸಾಂಬಸದಾಶಿವರೆಡ್ಡಿ ಅವರಂತಹವರು ವಾದಿಸಿದ್ದರು.

ವಿಶ್ವದ ಅತಿದೊಡ್ಡ ಅಧ್ಯಯನ ಮತ್ತು ಮುದ್ರಣ ಮಾಧ್ಯಮಕ್ಕೆ ಕರೆನ್ಸಿಯಾಗಿರುವ ಭಾರತೀಯ ಓದುಗರ ಸಮೀಕ್ಷೆ ಬಿಡುಗಡೆ ಮಾಡಿದ ಓದುಗರ ಅಂಕಿ-ಅಂಶ 2017ರ ಪ್ರಕಾರ ಟೈಮ್ಸ್ ಆಫ್ ಇಂಡಿಯ ಆಂಗ್ಲ ದಿನಪತ್ರಿಕೆ ಭಾರಿ ಅಂತರದಿಂದ ಮುನ್ನಡೆದಿದೆ. 2017ರ ಪ್ರಕಾರ ಟೈಮ್ಸ್ ಆಫ್ ಇಂಡಿಯಾದ ಒಟ್ಟು ಓದುಗರ ಸಂಖ್ಯೆ 1 ಕೋಟಿ 30 ಲಕ್ಷ 47 ಸಾವಿರದಷ್ಟಿದೆ. 2ನೇ ಸ್ಥಾನದಲ್ಲಿರುವ ಹಿಂದೂಸ್ತಾನ್ ಟೈಮ್ಸ್ 68 ಲಕ್ಷ 47 ಸಾವಿರ ಓದುಗರನ್ನು ಹೊಂದಿದೆ. ಇನ್ನೂ ಹಿಂದೂ ಪತ್ರಿಕೆ 3ನೇ ಅತಿಹೆಚ್ಚು ಪ್ರಸಾರ ಹೊಂದಿದೆ. ಇದರೊಂದಿಗೆ ಎಕನಾಮಿಕ್ ಟೈಮ್ಸ್ ಕೂಡ ಇದೆ. ಮುಂಬೈನ ಮಿರರ್, ದಿ ಇಂಡಿಯನ್ ಎಕ್ಸ್‌ಪ್ರೆಸ್ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದೆ. ದಿ ಟೆಲಿಗ್ರಾಫ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿದೆ. ಡೆಕ್ಕನ್ ಕ್ರಾನಿಕಲ್ 10ನೇ ಸ್ಥಾನದಲ್ಲಿದೆ.

ನಮ್ಮ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಾರ ಪ್ರಜಾವಾಣಿ 5 ಲಕ್ಷ 31 ಸಾವಿರದ 28, ಕನ್ನಡ ಪ್ರಭ 1 ಲಕ್ಷ 28 ಸಾವಿರದ 20, ವಿಜಯವಾಣಿ 7 ಲಕ್ಷ 91 ಸಾವಿರದ 837, ವಿಜಯ ಕರ್ನಾಟಕ 6 ಲಕ್ಷ 85 ಸಾವಿರ, ಸಂಯುಕ್ತ ಕರ್ನಾಟಕ 89 ಸಾವಿರದ 693, ಹೊಸ ದಿಗಂತ 1 ಲಕ್ಷ 1 ಸಾವಿರದ 355, ವಾರ್ತಾಭಾರತಿ 90 ಸಾವಿರ, ಉದಯವಾಣಿ 3 ಲಕ್ಷ 1 ಸಾವಿರದ ಹದಿನಾರು, ವಿಶ್ವವಾಣಿ 74 ಸಾವಿರದ 924ರಷ್ಟು ಪ್ರಸಾರವನ್ನು ಹೊಂದಿದೆ.

ದೊಡ್ಡದೊಡ್ಡ ಕಂಪನಿಗಳು ಜಾಹೀರಾತು ನೀಡಲು ಹೂಡಿಕೆದಾರರಿಗೆ ಆನ್‌ಲೈನ್ ವಿಫುಲ ಅವಕಾಶವನ್ನು ಒದಗಿಸಿಕೊಟ್ಟಿದೆ. ನ್ಯೂಸ್ ಮೀಡಿಯಾ ಅನಾಲಿಸಿಸ್ ಪ್ರಕಾರ ಆಫ್‌ಲೈನ್ ಮೂಲಕ ಗ್ರಾಹಕರನ್ನು ಮುಟ್ಟಲು ಜಾಹೀರಾತುದಾರರು 14 ಡಾಲರ್ ವ್ಯಯಿಸಬೇಕು. ಇದೇ ಆನ್‌ಲೈನ್‌ನಲ್ಲಿ 1 ಡಾಲರ್ ವ್ಯಯಿಸಿದರೆ ಸುಲಭವಾಗಿ ಗ್ರಾಹಕರನ್ನು ತಲುಪಬಹುದಾಗಿದೆ. ಹೀಗಾಗಿ ಬಂಡವಾಳ ಉತ್ಪನ್ನಗಳ ಉತ್ಪಾದಕರು ಮುದ್ರಣ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮಕ್ಕೆ ಸ್ಥಿತ್ಯಂತರ ಹೊಂದುತ್ತಿದ್ದಾರೆ.

ಇವತ್ತಿಗೂ ಚೀನಾ ಹೊರತುಪಡಿಸಿದರೆ, ವೃತ್ತ ಪತ್ರಿಕೆಗಳಿಗೆ ಹೆಚ್ಚು ಬೇಡಿಕೆಯ ಮರುಕಟ್ಟೆ ಇರುವುದು ನಮ್ಮ ದೇಶದಲ್ಲಿ ಮಾತ್ರ. ನಮ್ಮ ದೇಶದಲ್ಲಿ ಅಂದಾಜು 110 ಮಿಲಿಯನ್‌ನಷ್ಟು ವೃತ್ತಪತ್ರಿಕೆಗಳ ಪ್ರತಿಗಳು ಮಾರಾಟವಾಗುತ್ತದೆ.

ಇಂದು ರಾಷ್ಟ್ರೀಯ, ರಾಜ್ಯ ಮಟ್ಟದ 4 ಪತ್ರಿಕೆಗಳು ತಮ್ಮ ಆನ್‌ಲೈನ್ ಆವೃತ್ತಿಗಳಲ್ಲಿ ಸಾಮಾಜಿಕ
ಮಾಧ್ಯಮ ಹಂಚಿಕೆ, ಪ್ರತಿಕ್ರಿಯ ಮತ್ತು ಲೈವ್ ಕಮೆಂಟ್‌ಗಳ ಆಯ್ಕೆಯಂತಹ ವೈಶಿಷ್ಟ್ಯಗಳನ್ನು ಒದಗಿಸುವ ಮೂಲಕ ಓದುಗರೊಂದಿಗೆ ಸಾಧ್ಯವಾದಷ್ಟು ಸಂವಾದಾತ್ಮಕವಾಗಿರಲು ಪ್ರಯತ್ನಿಸುತ್ತಿವೆ. ಹಿಂದೆ ವೃತ್ತಪತ್ರಿಕೆಗಳು ಭಾಗಶಃ ಏಕಪಕ್ಷೀಯವಾಗಿದ್ದವು. ಅಲ್ಲಿ ಓದುಗರಿಗೆ ಸೀಮಿತ ಅವಕಾಶವಿತ್ತು. ಅಂದರೆ ವಾಚಕರ ವಾಣಿ ಮೂಲಕ ಓದುಗ ಸಂವಹಿಸಬಹುದಿತ್ತು. ಆದರೆ ಇಂದು ಓದುಗ ಆನ್‌ಲೈನ್‌ನಲ್ಲಿ ತಕ್ಷಣವೇ ಪ್ರತಿಕ್ರಿಯಿಸಬಹುದಾಗಿದೆ. ಕೆಲವೊಂದು ವಿಚಾರಗಳ ಕುರಿತು ವಿಮರ್ಶೆಯನ್ನು ಮಾಡಬಹುದಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಹುದಾಗಿದೆ. ಇದರಿಂದ ನಮ್ಮ ವಿಚಾರವನ್ನು ಹಿಂದೆಂದಿಗಿಂತಲೂ ಕ್ಷಿಪ್ರವಾಗಿ, ತ್ವರಿತವಾಗಿ ಹಂಚಬಹುದಾಗಿದೆ.

ಡಿಜಿಟಲ್, ಆನ್‌ಲೈನ್ ಮಾಧ್ಯಮದಿಂದ ವೃತ್ತಪತ್ರಿಕೆಗಳು ಹೊಡೆತ ಅನುಭವಿಸುತ್ತಿರುವುದು ಗೊತ್ತಿದ್ದರೂ, ಸುದ್ದಿಯೊಂದಿಗೆ ವಿಶ್ಲೇಷಿಸುವ ಕಾರ್ಯ ಮಾಡುತ್ತಿಲ್ಲ. ಸುದ್ದಿಯೊಂದಿಗೆ ವಿಶ್ಲೇಷಣೆ ಹೆಚ್ಚುಮಾಡಿದರೆ, ಓದುಗ ದೊರೆ ವೃತ್ತಪತ್ರಿಕೆಗಳನ್ನು ಕೈಬಿಡುವುದಿಲ್ಲ. ಇಂತಹ ಪ್ರಯತ್ನದಲ್ಲಿ ತೊಡಗಿಸಿಕೊಂಡಾಗ ಮಾತ್ರ ವಿದ್ಯುನ್ಮಾನ ಮಾಧ್ಯಮವನ್ನು ಸಮರ್ಥವಾಗಿ ದಿನಪತ್ರಿಕೆಗಳು ಎದುರಿಸಬಹುದಾಗಿದೆ. ಇದಕ್ಕೆ ನಮ್ಮ ಹಲವು ವೃತ್ತಪತ್ರಿಕೆಗಳು, ದೃಶ್ಯ ಮಾಧ್ಯಮಗಳ ನಡುವೆಯೂ ತಮ್ಮ ಪ್ರಸಾರ ಸಂಖ್ಯೆ ಉಳಿಸಿಕೊಂಡಿರುವುದನ್ನು ನೋಡಬಹುದಾಗಿದೆ. ಇಂತಹ ಪ್ರಯತ್ನಗಳು ನಾಡಿನ ಎಲ್ಲಾ ವೃತ್ತಪತ್ರಿಕೆಗಳು ಮಾಡಿದರೆ, ಖಂಡಿತವಾಗಿಯೂ ಎಲ್ಲರ ಮನೆಯಂಗಳದಲ್ಲಿ ವೃತ್ತಪತ್ರಿಕೆಗಳು ಮತ್ತೆ ಕಾಣಿಸಿಕೊಳ್ಳುತ್ತವೆ.

ಮತ್ತೊಂದು ಬೆಳವಣಿಗೆಯೂ ಇದೆ. ಅದು ವೃತ್ತಪತ್ರಿಕೆಗಳ ತಾಣಗಳಿಂದು ತಮ್ಮ ಓದುಗರನ್ನು ವೀಕ್ಷಕರನ್ನಾಗಿಯೂ ಪರಿವರ್ತಿಸಿ ಮಲ್ಟಿಮೀಡಿಯ ಸೌಲಭ್ಯಗಳನ್ನು ನೀಡುತ್ತಿವೆ. ಇದರಲ್ಲಿ ರೆಕಾರ್ಡ್ ಮಾಡಿರುವ ದೃಶ್ಯಗಳು ವಿಡಿಯೋ ರೂಪದಲ್ಲಿರುತ್ತದೆ. ಲೈವ್ ಟೆಲಿವಿಷನ್, ಫೋಟೋ ಗ್ಯಾಲರಿ, ಇನ್ಫೋಗ್ರಾಫಿಕ್ಸ್ ಮತ್ತು ಇಪೇಪರ್‌ಗಳನ್ನು ಒಳಗೊಂಡಿರುತ್ತವೆ. ಇವತ್ತು ಪತ್ರಿಕೆಗಳು ಡಿಜಿಟಲ್ ಆವೃತ್ತಿಯಲ್ಲಿ ಹೈಪರ್‌ಲಿಂಕ್‌ಗಳನ್ನು ನೀಡುತ್ತಿರುವುದರಿಂದ ಹೆಚ್ಚಿನ ನೆರವಾಗುತ್ತಿದೆ. ಹೀಗಾಗಿ ಆನ್‌ಲೈನ್ ಆವೃತ್ತಿಯಿಂದ ಪತ್ರಿಕೆಗಳು ದಾಪುಗಾಲು ಹಾಕಿ ನಡೆಯಬಹುದಾಗಿದೆ.

ಓದುಗ ಕೇವಲ ಗ್ರಾಹಕನಲ್ಲ. ಸುದ್ದಿಯ ನಿಷ್ಕ್ರಿಯ ಮಾಲೀಕ. ಓದುಗ ಮಾತನಾಡಬೇಕು. ಮುದ್ರಣ ಮಾಧ್ಯಮವನ್ನು ಸಂರಕ್ಷಿಸಬೇಕು. ಇದರ ಜೊತೆಗೆ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಒಂದು ನಿರ್ದಿಷ್ಟ ಗೌರವ, ಘನತೆ, ಆದಾಯ ಮತ್ತು ವೃತ್ತಿಪರತೆಯನ್ನು ಖಾತರಿಪಡಿಸುವ ಕೆಲಸವೂ ಆಗಬೇಕು. ಪತ್ರಕರ್ತರು ಇಂದಿನ ಯುಗದ ಕಥೆಗಾರರಾಗಿದ್ದಾರೆ. ಹೀಗಾಗಿಯೇ ಸಾಹಿತ್ಯಕ್ಕಾಗಿ ನೀಡುವ ನೊಬೆಲ್ ಪ್ರಶಸ್ತಿಯನ್ನು ತನಿಖಾ ಪತ್ರಕರ್ತೆ ಸ್ಟೆಟ್ಲಾನಾ ಅಲಕ್ಸಾಂಡ್ರಾಸ್ನಾ ಅಲೆಕ್ಸಿವಿಚ್ ಅವರಿಗೆ 2015ರಲ್ಲಿ ಲಭಿಸಿದೆ. ಹಾಗೆಯೇ ಫಿಲಿಪೈನ್ಸ್ ಪತ್ರಕರ್ತೆ ಮರಿಯಾ ರೆಸ್ಸಾ ಮತ್ತು ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್ ಅವರು 2021ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೆಬ್‌ಸೈಟ್‌ಗಳು ಉಚಿತವಾಗಿ ಕೊಡುವುದನ್ನು ನಿಲ್ಲಿಸಿ ಪೇವಾಲ್‌ಗಳನ್ನು ನಿರ್ಮಿಸಲು ಪ್ರಾರಂಭಿಸುತ್ತಿವೆ. ಡಿಜಿಟಲ್ ಪೇಪರ್‌ಗಳು ಹೆಚ್ಚಿನ ನಿರ್ವಹಣೆಯನ್ನು ಹೊಂದಿರುವುದರಿಂದ ಅವುಗಳ ಉಳಿವಿಗಾಗಿ ಇದು ಅನಿವಾರ್ಯವಾಗುತ್ತಿದೆ.

‘ಪ್ರತಿಬಿಂಬ’ ಮತ್ತು ‘ಮುನ್ನೆಚ್ಚರಿಕೆ’ಯ ವ್ಯವಸ್ಥೆಯೇ ಸುದ್ದಿಯ ಕಲ್ಪನೆ. ಇವೇ ಪ್ರಜಾಪ್ರಭುತ್ವವನ್ನು ಜೀವಂತವಾಗಿಡುತ್ತದೆ. ಇದಕ್ಕೊಂದು ಸಣ್ಣ ಕೊಡುಗೆ ಅಚ್ಚು ಮೊಳೆಯಿಂದ ಆನ್‌ಲೈನ್ ಎಡಿಷನ್‌ವರೆಗೆ…! ಎಂದೇ ಭಾವಿಸಿರುವೆ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಜಾತಿ ದಬ್ಬಾಳಿಕೆ – ದೌರ್ಜನ್ಯಕ್ಕೆ ಕೊನೆಯೇ ಇಲ್ಲವೇ?: ಡಾ. ಎಂ. ಎಸ್. ಮಣಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...