Homeಮುಖಪುಟಬಿಜೆಪಿ ಕೊಟ್ಟ ಪಟ್ಟಿಯಂತೆ ಟಿಎಂಸಿ ನಾಯಕರನ್ನು ಟಾರ್ಗೆಟ್ ಮಾಡುತ್ತಿರುವ ಎನ್‌ಐಎ: ಸಾಕೇತ್ ಗೋಖಲೆ

ಬಿಜೆಪಿ ಕೊಟ್ಟ ಪಟ್ಟಿಯಂತೆ ಟಿಎಂಸಿ ನಾಯಕರನ್ನು ಟಾರ್ಗೆಟ್ ಮಾಡುತ್ತಿರುವ ಎನ್‌ಐಎ: ಸಾಕೇತ್ ಗೋಖಲೆ

ಚು. ಆಯೋಗದ ಅನುಮತಿಯಿಲ್ಲದೆ ಬಿಜೆಪಿ ಸರ್ಕಾರದ ಅಧಿಕಾರಿಯನ್ನು ಎನ್‌ಐಎ ಮುಖ್ಯಸ್ಥರಾಗಿ ನೇಮಿಸಿದ್ದು ಹೇಗೆ? ಗಂಭೀರ ಪ್ರಶ್ನೆ ಎತ್ತಿದ ಟಿಎಂಸಿ ಸಂಸದ

- Advertisement -
- Advertisement -

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವನ್ನು ದುರ್ಬಳಕೆ ಮಾಡಿಕೊಂಡು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂದು ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ಆರೋಪಿಸಿದ್ದಾರೆ.

ಈ ಆರೋಪವನ್ನು ಪುಷ್ಠೀಕರಿಸುವ ಕೆಲವೊಂದು ಪುರಾವೆಗಳನ್ನು ಅವರು ಜನರ ಮುಂದಿಟ್ಟಿದ್ದು, ಕೆಲ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಬಿಜೆಪಿ ಎನ್‌ಐಎ ಮೂಲಕ ಟಿಎಂಸಿ ನಾಯರನ್ನು ಹೇಗೆ ಗುರಿಯಾಗಿಸುತ್ತಿದೆ ಎಂದು ನಿನ್ನೆ (ಏ.7) ನಾವು ಸುದ್ದಿಗೋಷ್ಠಿ ನಡೆಸಿದ್ದೆವು. ಕಳೆದ ಮಾರ್ಚ್ 26ರಂದು ಬಿಜೆಪಿ ನಾಯಕರ ಜಿತೇಂದ್ರ ತಿವಾರಿ ಅವರು ಕೊಲ್ಕತ್ತಾದಲ್ಲಿ ಎನ್‌ಐಎ ಎಸ್‌ಪಿ ಅವರನ್ನು ಭೇಟಿಯಾಗಿದ್ದರು. ಜಿತೇಂದ್ರ ತಿವಾರಿ ಒಂದು ಬ್ಯಾಗ್‌ನೊಂದಿಗೆ ಹೋಗಿದ್ದರು. ನಾವು ನಿನ್ನೆ ಸಾರ್ವಜನಿಕವಾಗಿ ಇದಕ್ಕೆ ಸಾಕ್ಷಿ ತೋರಿಸಿದ್ದೇವೆ ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

ಎನ್‌ಐಎ ಎಸ್‌ಪಿಯನ್ನು ಭೇಟಿಯಾಗಿದ್ದ ಬಿಜೆಪಿ ನಾಯಕರ ಜಿತೇಂದ್ರ ತಿವಾರಿ ಬಂಗಾಳದಲ್ಲಿ ಯಾವೆಲ್ಲ ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರನ್ನು ಗುರಿಪಡಿಸಬೇಕು ಎಂದು ಪಟ್ಟಿ ಕೊಟ್ಟಿದ್ದರು. ಅದೇ ದಿನ (ಮಾ.26) ಮೋದಿ ಸರ್ಕಾರ ಎನ್‌ಐಎ ಮುಖ್ಯಸ್ಥರಾಗಿ (ಎನ್‌ಐಎ ಡಿಜಿ) ಸದಾನಂದ ದಾಟೆ ಅವರನ್ನು ನೇಮಿಸಿದೆ. ಹೊಸ ಎನ್‌ಐಎ ಮುಖ್ಯಸ್ಥ ಮಾ.26ರವರೆಗೆ ಮಹಾರಾಷ್ಟ್ರದ ಎಟಿಎಸ್‌ ಅಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಎಟಿಎಸ್‌ಗೆ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಗೃಹ ಸಚಿವ ದೇವೇಂದ್ರ ಫಡ್ನವಿಸ್ ನೇಮಿಸಿದ್ದರು ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ.

ಇವಿಷ್ಟು ಮಾಹಿತಿಯನ್ನು ತಿಳಿಸಿರುವ ಸಾಕೇತ್ ಗೋಖಲೆ ಕೆಲವೊಂದು ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಅವುಗಳು ಹೀಗಿವೆ..

ಮಹಾರಾಷ್ಟ್ರದ ರಾಜ್ಯ ಬಿಜೆಪಿ ಸರ್ಕಾರದಿಂದ ನೇಮಕಗೊಂಡ ಮತ್ತು ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಯೊಬ್ಬರು ಚುನಾವಣಾ ಸಮಯದಲ್ಲಿ ಇದ್ದಕ್ಕಿದ್ದಂತೆ ಎನ್‌ಐಎ ಡಿಜಿಯಾಗಿ ನೇಮಕಗೊಳಿಸುವಾಗ ಮೋದಿ ಸರ್ಕಾರ ಚುನಾವಣಾ ಆಯೋಗದ ಅನುಮತಿಯನ್ನು ತೆಗೆದುಕೊಂಡಿದೆಯೇ?

ಪಶ್ಚಿಮ ಬಂಗಾಳದ ಡಿಜಿಪಿ (ಪೊಲೀಸ್‌) ಯನ್ನು ಚುನಾವಣಾ ಆಯೋಗ 24 ಗಂಟೆಗಳಲ್ಲಿ 3 ಬಾರಿ ಬದಲಾಯಿಸಿದಾಗ, ಮಹಾರಾಷ್ಟ್ರ ಬಿಜೆಪಿ ಸರ್ಕಾರ ನೇಮಕ ಮಾಡಿದ ಅಧಿಕಾರಿಯನ್ನು ಚುನಾವಣಾ ಆಯೋಗದ ಅನುಮೋದನೆಯಿಲ್ಲದೆ ಎನ್‌ಐಎ ಮುಖ್ಯಸ್ಥರಾಗಿ ನೇಮಿಸಿದ್ದು ಹೇಗೆ?

ಹೊಸ ಎನ್‌ಐಎ ಮುಖ್ಯಸ್ಥರನ್ನು ನೇಮಿಸಿದ ಒಂದೇ ದಿನದಲ್ಲಿ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ಜೊತೆ ಪಿತೂರಿ ನಡೆಸುತ್ತಿರುವುದು ನಮ್ಮನ್ನು ಬೆರಗುಗೊಳಿಸಿದೆ. ಈ ವಿಚಾರವನ್ನು ತಕ್ಷಣವೇ ಚುನಾವಣಾ ಆಯೋಗ ತನಿಖೆ ಮಾಡಬೇಕು ಮತ್ತು ಆಯೋಗದ ಅನುಮೋದನೆಯಿಲ್ಲದೆ ಹೊಸ ಎನ್‌ಐಎ ಮುಖ್ಯಸ್ಥರನ್ನು ಹೇಗೆ ನೇಮಿಸಲಾಯಿತು ಎಂಬುವುದನ್ನು ಮೋದಿ ಸರ್ಕಾರವು ವಿವರಿಸಬೇಕು ಎಂದು ಸಾಕೇತ್ ಗೋಖಲೆ ಆಗ್ರಹಿಸಿದ್ದಾರೆ.

ಕೇಂದ್ರದ ತನಿಖಾ ಸಂಸ್ಥೆಗಳು ಮತ್ತು ಬಿಜೆಪಿಯು ಈ ಲೋಕಸಭಾ ಚುನಾವಣೆಯ ಸಮಯದಲ್ಲಿ ಆಳವಾದ ಸಂಬಂಧಲ್ಲಿದೆ. ತನಿಖಾ ಸಂಸ್ಥೆಗಳು ಅಕ್ಷರಶಃ ಬಿಜೆಪಿಯ ಖಾಸಗಿ ಮಾಫಿಯಾದಂತೆ ಕಾರ್ಯನಿರ್ವಹಿಸುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರನ್ನು ಗುರಿಯಾಗಿಸಲು ಬಿಜೆಪಿಯೊಂದಿಗೆ ಎನ್‌ಐಎ ಪಿತೂರಿ ನಡೆಸುತ್ತಿರುವುದು ಶೋಚನೀಯವಾಗಿದೆ ಮಾತ್ರವಲ್ಲದೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಸಾಧ್ಯವೇ ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತಿವೆ ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

ಇಂದು(ಏ.8) ಸಂಜೆ 6 ಗಂಟೆಯ ಹೊತ್ತಿಗೆ ಟಿಎಂಸಿಯ ಐವರು ಹಾಲಿ ಮತ್ತು ನಾಲ್ವರು ಮಾಜಿ ಸಂಸದರು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಎಂದು ಸಾಕೇತ್ ಗೋಖಲೆ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು. “ನಾವು ದೆಹಲಿಯ ಚುನಾವಣಾ ಆಯೋಗದ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದೆವು. ಪೊಲೀಸರು ನಮ್ಮನ್ನು ಮಂದಿರ್ ಮಾರ್ಗ್‌ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುವುದು ಎಂದು ಹೇಳಿ ಕರೆ ತಂದಿದ್ದಾರೆ. ಆದರೆ, ಮಾರ್ಗ ಮಧ್ಯೆ ಬಸ್ ತಿರುಗಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ. ಗಮನಿಸಿ..ನಮ್ಮಲ್ಲಿ ಐವರು ಹಾಲಿ ಮತ್ತು ನಾಲ್ವರು ಮಾಜಿ ಸಂಸದರಿದ್ದಾರೆ. ನಮ್ಮ ಮೇಲೆ ಹಲ್ಲೆ ನಡೆಸಿ, ಅಕ್ರಮವಾಗಿ ಬಂಧಿಸಿ, ಈಗ ಎಲ್ಲೋ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ” ಎಂದು ಸಾಕೇತ್ ಗೋಖಲೆ ಹೇಳಿದ್ದರು.

ಇದನ್ನೂ ಓದಿ : ಪ್ರಧಾನಿ ಮೋದಿ ಸೇರಿದಂತೆ ಹಲವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...