ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಇಡೀ ರಾಷ್ಟ್ರದ ಎದುರು ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ ಆರೋಪಿ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ “ದೇಶದಲ್ಲಿ ಉಂಟಾದ ಉದ್ವಿಗ್ನ ವಾತಾವರಣಕ್ಕೆ ನೂಪುರ್ ಶರ್ಮಾ ಒಬ್ಬರೆ ಕಾರಣವಾಗಿದ್ದಾರೆ” ಎಂದು ಅಭಿಪ್ರಾಯಪಟ್ಟಿದೆ.
“ಅವರು ಹಾಗೆ ಮಾತನಾಡಲು ಹೇಗೆ ಪ್ರಚೋದಿಸಲಾಯಿತು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಅವರು ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆಯಾಚಿಸಬೇಕು” ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹೇಳಿದ್ದಾರೆ.
ಅರ್ಜಿದಾರರು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ವಕೀಲರು ವಾದಿಸಿದಾಗ, “ಅವರಿಗೆ ಬೆದರಿಕೆ ಇದೆಯೊ ಅಥವಾ ಅವರಿಂದ ದೇಶದ ಭದ್ರತೆಗೆ ಬೆದರಿಕೆಯಿದೆಯೊ? ಅವರು ದೇಶದಾದ್ಯಂತ ಶಾಂತಿ ಸುರಕ್ಷತೆಗೆ ಧಕ್ಕೆ ತಂದಿದ್ದಾರೆ. ಇಂದು ದೇಶದಲ್ಲಿ ಏನಾಗುತ್ತಿದೆಯೊ ಅದಕ್ಕೆ ಈ ಮಹಿಳೆ ಏಕಾಂಗಿಯಾಗಿ ಜವಾಬ್ದಾರಳು” ಎಂದು ಸೂರ್ಯ ಕಾಂತ್ ಹೇಳಿದ್ದಾರೆ.
ಟಿವಿ ಚಾನೆಲ್ ಡಿಬೇಟ್‌ನಲ್ಲಿನ ಅವರ ಹೇಳಿಕೆಗಳು ಅವರ ಹಠಮಾರಿ ಮತ್ತು ಸೊಕ್ಕಿನ ಸ್ವಭಾವವನ್ನು ತೋರಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ. ಅವರು ಒಂದು ಪಕ್ಷದ ವಕ್ತಾರರಾದರೆ ಮಾತ್ರಕ್ಕೆ ತನಗೆ ಅಧಿಕಾರವಿದೆ ಎಂದು ಭಾವಿಸಿ ದೇಶದ ಕಾನೂನನ್ನು ಗೌರವಿಸದೆ ಯಾವುದೇ ಹೇಳಿಕೆ ನೀಡಬಹುದೇ? ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರಶ್ನಿಸಿದ್ದಾರೆ.
ಚಾನೆಲ್ ನಿರೂಪಕರ ಪ್ರಶ್ನೆಗಳಿಗೆ ಅವರು ಹಾಗೆ ಉತ್ತರಿಸಿದ್ದಾರೆ ಎಂಬ ವಕೀಲರ ವಾದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳು ಹಾಗಾದರೆ ಚಾನೆಲ್ ನಿರೂಪಕರ ಮೇಲೂ ಪ್ರಕರಣ ದಾಖಲಿಸಿ ಎಂದಿದ್ದಾರೆ.
ದೆಹಲಿ ಪೊಲೀಸರು ಮತ್ತು ಚರ್ಚೆ ನಡೆಸುತ್ತಿದ್ದ ಟಿವಿ ಚಾನೆಲ್ ಅನ್ನು ತರಾಟೆಗೆ ತೆಗೆದುಕೊಂಡ ಪೀಠವು “ದೆಹಲಿ ಪೊಲೀಸರು ಏನು ಮಾಡಿದ್ದಾರೆ? ನಮ್ಮನ್ನು ಬಾಯಿ ತೆರೆಯುವಂತೆ ಮಾಡಬೇಡಿ, ಟಿವಿ ಚರ್ಚೆ ಏನು? ಕೇವಲ ಅಜೆಂಡಾವನ್ನು ರೂಪಿಸಲು ನಡೆಸಲಾಗುತ್ತದೆ ಎಂದು ಕಿಡಿಕಾರಿದೆ.
ಇದನ್ನೂ ಓದಿ; ಫಡ್ನವೀಸ್‌ಗೆ ದಕ್ಕದ ಸಿಎಂ ಪಟ್ಟ: ಬಿಜೆಪಿ ಹೈಕಮಾಂಡ್ ಎದುರು ಮಂಡಿಯೂರಿದ್ದೇಕೆ?
ಪ್ರಕರಣದಲ್ಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿದ ನ್ಯಾಯಾಲಯ, “ನೀವು ಇತರರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದಾಗ, ಅವರನ್ನು ತಕ್ಷಣವೇ ಬಂಧಿಸಲಾಗುತ್ತದೆ ಆದರೆ ಅದು ನಿಮ್ಮ ವಿರುದ್ಧವೇ ಪ್ರಕರಣ ದಾಖಲಾದರೆ ಯಾರೂ ನಿಮ್ಮನ್ನು ಮುಟ್ಟಲು ಧೈರ್ಯ ಮಾಡಿಲ್ಲ ಅಲ್ಲವೇ” ಎಂದಿದೆ.
ಎಲ್ಲಾ ಎಫ್‌ಐಆರ್‌ಗಳನ್ನು ಒಂದೇ ಎಂದು ಪರಿಗಣಸಬೇಕೆಂಬ ನೂಪರ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.