Homeಅಂಕಣಗಳುಓಡಿಒಪಿ: ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು

ಓಡಿಒಪಿ: ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು

ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ. ಪ್ರಧಾನಿಯವರ ಹೆಸರನ್ನೇ ಇಟ್ಟುಕೊಂಡ ಈ ಸಚಿವರು ಅವರ ಹಂಗೇನೇ ಒಂದು ಆನ್‌ಲೈನ್ ಭಾಷಣ ಮಾಡಿದರು. ಅದರೊಳಗ ನಾವು ಈಗ ಏನು ಮಾಡಲಿಕ್ಕ ಹೊಂಟೆವಿ ಅಂದ್ರ ಅದು ಬಹಳ ಮುಖ್ಯ ಅದ. ಅದು ರೈತರಿಗೆ ಒಳ್ಳೆಯದಾಗತದ. ಅದನ್ನು ಎಲ್ಲರೂ ಸ್ವಾಗತಿಸಬೇಕು, ಅಂತ ಅಂದ್ರು. ಅದು ಎನಪಾ ಅಂದ್ರ ಒನ್ ಡಿಸ್ಟ್ರಿಕ್ಟ್ ಒನ್ ಕ್ರಾಪ್ ಅರ್ಥಾತ್ ಒಂದು ಜಿಲ್ಲೆ ಒಂದು ಬೆಳೆ .

- Advertisement -
- Advertisement -

ಕೋವಿಡ್ ಅನ್ನೋದು ಜನರಿಗೆ ಭಾರಿ ಕಷ್ಟ ಕೊಡುವ ಭೂತ ಆಗಿದ್ದರೂ, ಸರ್ಕಾರಕ್ಕ ದೇವರು ಕೊಟ್ಟ ವರ ಆಗಿಬಿಟ್ಟದ.

ಮೊದಲಿಗೆಲ್ಲಾ ಏನಾದರೂ ಸರ್ಕಾರಿ ಯೋಜನೆ, ಕಾರ್ಯಕ್ರಮ ಮಾಡೋದಿದ್ದರ ಅದಕ್ಕೊಂದು ದೊಡ್ಡ ಪೆಂಡಾಲ ಹಾಕಿ, ಮೈಕು ಸೆಟ್ಟು ತಂದು, ಅದರಾಗ ಎಸ್.ಪಿ ಬಾಲಸುಬ್ರಮಣ್ಯಂ ಹಾಡು ಹಾಕಿಸಿ, ಮೈದಾನದಾಗ ಕುರ್ಚಿ ಹಾಕಿ, ಆ ಕುರ್ಚಿ ಮ್ಯಾಲೆ ಕೂಡಲಿಕ್ಕೆ ಸಾವಿರಾರು ಜನನ ಹಿಡಕೊಂಡು ಬಂದು ಕೂಡಿಸಿ, ಅವರಿಗೆ ಊಟದ ವ್ಯವಸ್ಥಾ ಮಾಡಿ, ಇಷ್ಟೆಲ್ಲಾ ಮಾಡಿದ ಮ್ಯಾಲೆ ಭಾಷಣ ಮಾಡೋರನ್ನ ಕರಕೊಂಡು ಬಂದು ಅವರಿಗೆ ಭಾಷಣ ಬರದುಕೊಟ್ಟು, ಅವರ ಕಡೆ ಮಾತು ಆಡಿಸಿ, ಸಾಲಿ ಹುಡುಗರ ಕಡೆ ಸ್ವಾಗತ ಗೀತೆ ಹೇಳಿಸಿ, ಉದ್ದನ ಜಡೆ ಹುಡುಗಿಯರ ಕಡೆ ಬಹುಮಾನದ ತಾಟು ಕೊಟ್ಟು, ಐದಾರು ಸರತೆ ಅಡ್ಡಾಡಿಸಿ, ಕಡಿಕೆ ಕನ್ನಡ ಸಾಲಿ ಮಾಸ್ಟರ್ ಕಡೆ ಅಭಿನಂದನಾ ಭಾಷಣ ಮಾಡಿಸಿ, ಅವರು ಎಲ್ಲಾರಿಗೆ ಧನ್ಯವಾದ ಹೇಳಿ ಜೈ ಹಿಂದ್ ಜೈ ಕರ್ನಾಟಕ ಹೇಳಿದ ಮ್ಯಾಲೆ ಕಾರ್ಯಕ್ರಮ ಮುಗುದ ಹೋಗತಿತ್ತು.

ಈಗ ಈ ಕೊರೊನಾ ರಾಕ್ಷಸನ ಸಲುವಾಗಿ ಎಲ್ಲಾ ಆಫ್‌ಲೈನ್ (ಅಂದ್ರ ಮೈದಾನದ ಒಳಗ ಎಲ್ಲಾರ ಮುಂದ ಖುಲ್ಲಮ ಖುಲ್ಲ ಕಾರ್ಯಕ್ರಮ) ಬಂದ್ ಆಗಿ ಬರೆ ಆನ್‌ಲೈನ್ (ಅಂದ್ರ ಬಾಗಿಲು ಮುಚ್ಚಿಕೊಂಡು ಕಂಪ್ಯೂಟರ್‌ದಾಗ ಮಾತಾಡೋದು) ಚಾಲೂ ಆಗಿಬಿಟ್ಟಾವು.

ಮೈದಾನದ ಕಾರ್ಯಕ್ರಮ ಆದರ ಪೇಪರ್, ಟಿವಿಯವರು ಬರತಿದ್ದರು, ಭಾಷಣ ಕೇಳತಿದ್ದರು, ಎನಾರ ಸುದ್ದಿ ಆಗತಿತ್ತು. ಈಗ ಮುಚ್ಚಿದ ಬಾಗಲ ಹಿಂದ ಏನು ನಡಿತದೋ ಏನೋ, ಗೊತ್ತಿಲ್ಲ. ಅವರು ಇದು ಸುದ್ದಿ ಅಂತ ಹೇಳಿದ್ದು, ಇದನ್ನ ಬರೀರಿ, ಇದನ್ನ ಬರಿಬೇಡ್ರಿ, ಅಂತ ಫರ್ಮಾನು ಹೊರಡಿಸಿಬಿಟ್ಟರ ಆತು. ಅದೇ ಸುದ್ದಿ. ಕಾರ್ಯಕ್ರಮ ಮುಗದು ಧನ್ಯವಾದ ಅಂತ ಹೇಳೋ ಮೊದಲೇ ಅದರ ಸುದ್ದಿ ನಮ್ಮ ಸಾಮಾಜಿಕ ಜಾಲತಾಣದಾಗ ಬಂದುಬಿಟ್ಟಿರತದ. ಅದಕ್ಕಿಂತ ಮೊದಲ ಅದರ ಪರ-ವಿರೋಧದ ಚರ್ಚೆ ಆರಂಭ ಆಗಿ ದೋಸ್ತರ ನಡುವೆ ಜಗಳ ಆಗಿಬಿಟ್ಟಿರತದ. ಇಂತಹುದೆ ಒಂದು ಆನ್‌ಲೈನ್ ಕಾರ್ಯಕ್ರಮ ದೆಹಲಿಯ ದಂತ ಗೋಪುರದ ಯಾವುದೋ ಒಂದು ಕೋಣೆಯ ಒಂದು ಮುಚ್ಚಿದ ಬಾಗಿಲ ಹಿಂದೆ ನಡೆಯಿತು. ಅದರ ಹೆಸರು ಓಡಿಒಪಿ. ಅದನ್ನ ಮಾಡಿ ಓಡಿಹೋದವರು ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ. ಪ್ರಧಾನಿಯವರ ಹೆಸರನ್ನೇ ಇಟ್ಟುಕೊಂಡ ಈ ಸಚಿವರು ಅವರ ಹಂಗೇನೇ ಒಂದು ಆನ್‌ಲೈನ್ ಭಾಷಣ ಮಾಡಿದರು.

ಅದರೊಳಗ ನಾವು ಈಗ ಏನು ಮಾಡಲಿಕ್ಕ ಹೊಂಟೆವಿ ಅಂದ್ರ ಅದು ಬಹಳ ಮುಖ್ಯ ಅದ. ಅದು ರೈತರಿಗೆ ಒಳ್ಳೆಯದಾಗತದ. ಅದನ್ನು ಎಲ್ಲರೂ ಸ್ವಾಗತಿಸಬೇಕು, ಅಂತ ಅಂದ್ರು. ಅದು ಎನಪಾ ಅಂದ್ರ ಒನ್ ಡಿಸ್ಟ್ರಿಕ್ಟ್ ಒನ್ ಕ್ರಾಪ್ ಅರ್ಥಾತ್ ಒಂದು ಜಿಲ್ಲೆ ಒಂದು ಬೆಳೆ.

ಅದೇ ಧಾಟಿಯೊಳಗ ನಮ್ಮ ತೆರೆಯ ಮೇಲಿನ ಕೌರವ ಹಾಗೂ ತೆರೆಯ ಹಿಂದಿನ ನಾಯಕನಾದ ಬಸನಗೌಡ ಚನ್ನ ಬಸನಗೌಡ ಪಾಟೀಲ್, ಕೃಷಿ ಮಂತ್ರಿಗಳು ಸಾಕಿನ ಹೀರೆಕೆರೂರು – ಬ್ಯಾಡಗಿಲ್ಲಿ ಒಂದು ಖತರನಾಕ ಡೈಲಾಗ್ ಹೊಡೆದರು. ರೈತರು ವೀಕ್ ಮೈಂಡ್ ಆಗಿ ಸೆಲ್ಫ್ ಸೂಯಿಸೈಡ್ ಮಾಡಿಕೊಳತಾರ ಅಂತ ಒಂದು ಬಿಟ್ಟು ಎರಡು ಸಾರಿ ಹೇಳಿದರು. ಅದಕ್ಕೆ ಸರ್ಕಾರದ ನೀತಿ ಕಾರಣ ಅಲ್ಲ ಅಂತನೂ ಹೇಳಿದರು.

PC : KNN India

ಇವೆಲ್ಲ ಬಿಡಿ. ಅವರು ಹೇಳಿದ ದೊಡ್ಡ ಮಾತು ಅಂದ್ರ ಓಡಿಒಪಿ ಅನ್ನುವುದು ರೈತರ ಕಲ್ಯಾಣಕ್ಕಾಗಿ ಆಕಾಶದಿಂದ ಇಳಿದುಬಂದ ಯೋಜನೆ ಅಂತ.

ಹಂಗಾರ ಈ ಯೋಜನೆ ಏನು? ಎಲ್ಲಿಂದ ಬಂತು? ಇದರಾಗ ಒಂದು ಮಾತು ಎನಪಾ ಅಂದ್ರ ಖಾಸಗಿ ಕಂಪನಿಯವರು ನಾವು ಈ ವರ್ಷ ಈ ಆಹಾರ ಖಾದ್ಯವನ್ನು ಪ್ಲಾಸ್ಟಿಕ್ ಚೀಲದೊಳಗ ಪ್ಯಾಕ್ ಮಾಡಿ ಮಾರಾಟ ಮಾಡಬೇಕು ಅಂತ ಮಾಡೇವಿ ಅಂತ ಸರ್ಕಾರಕ್ಕ ಹೇಳತಾರ. ಸರಕಾರ ಜಿ ಹಾಂ ಅಂತ ಹೇಳಿ ರೈತರಿಗೆ ಇದನ್ನ ಬೆಳೆಯಿರಿ ಅಂತ ಹೇಳತದ. ಸರಕಾರ ಹೇಳತದ ಅಂತ ನಮ್ಮವರು ಬೆಳಿತಾರ. ಅದನ್ನ ಆ ಕಂಪನಿಯವರು ಖರೀದಿ ಮಾಡಿ ಅದನ್ನ ಒಣಗಿಸಿ, ಉಪ್ಪು ಖಾರ ಹಾಕಿ ಮಾರಾಟ ಮಾಡತಾರ. ಇದರೊಳಗ ಪ್ಲಾಸ್ಟಿಕ್ ಚೀಲ ಮಾಡಿದವರು ಒಬ್ಬರು, ಆಹಾರ ಧಾನ್ಯ ಬೆಳೆದವರು ಇನ್ನೊಬ್ಬರು, ಉಪ್ಪು ಖಾರ ಹಾಕುವ ಜಾಬ್ ವರ್ಕ್ ಮಾಡಿವರು ಮತ್ತೊಬ್ಬರು. ಆದರ ಫಾಯದಾ ಮಾಡಿಕೊಂಡವರು ಮಾತ್ರ ಸರ್ಕಾರದ ಗೆಳೆಯರಾಗಿರುವ ಕಂಪನಿಯವರು.

ಆ ಕಂಪನಿಗಳಿಗೆ ಬಹಳ ಓಡಾಟ ಆಗಬಾರದು. ಅವರಿಗೆ ಬ್ಯಾರೆ ಬ್ಯಾರೆ ಊರಿನ ನೀರು ಕುಡಿದು ನೆಗಡಿ-ಕೆಮ್ಮ ಆಗಬಾರದು ಅಂತ ಸರ್ಕಾರದವರು ಒಂದು ಜಿಲ್ಲೆಗೆ ಒಂದು ಬೆಳೆ ಸಿಗೋ ಹಂಗ ಆಗಬೇಕು ಅಂತ ಹೇಳಿ ರೈತರಿಗೆ ಈ ಯೋಜನೆ ತೊಗೊಂಡು ಬಂದಾರ.

ರೈತರು ಎನಂದರೂ ಶ್ರಮ ಜೀವಿಗಳು, ಬಿಸಿಲು-ಮಳೆ-ಚಳಿ-ಗಾಳಿ ಒಳಗ ಕೆಲಸ ಮಾಡಿ ಅಭ್ಯಾಸ ಇದ್ದವರು. ಪಾಪ, ಕಂಪನಿ ಒಳಗ ಕೆಲಸ ಮಾಡೋ ಎಂಬಿಎಗಳಿಗೆ ಜಮೀನಿಗೆ ಹೋಗು ಅಂದ್ರ ಹೆಂಗ? ಕೆಲಸ ಮಾಡೋ ಮುಂದ ಅವರ ಸೂಟು-ಬೂಟು ಟೈ ತೆಗೆದು ಇಡಲಿಕ್ಕೆ ಜಮೀನು ಒಳಗ ಶುಭ್ರ ವಾದ ಸ್ವಚ್ಛ ಜಾಗ ಎಲ್ಲೆ ಸಿಗಬೇಕು?

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದ ಕೃಷಿ ಸಚಿವ ಬಿ.ಸಿ.ಪಾಟೀಲ್
ಬಿ.ಸಿ. ಪಾಟೀಲ್.

ಸರಕಾರ ಹೇಳಿದ ಹಂಗ ಕೇಳಿದರ ಸರಕಾರ ಎಲ್ಲಾ ರೀತಿಯ ತರಬೇತಿ-ಸಹಕಾರ ಕೊಡತದ. ಅಮೆರಿಕ-ಯೂರೋಪುನಲ್ಲಿ ಓದಿ ಓಡೋಡಿ ಬಂದ, ತಮ್ಮ ಜೀವನದಲ್ಲಿ ಕೇವಲ ಯೂಟ್ಯೂಬುಗಳಲ್ಲಿ ಮಾತ್ರ ಜಮೀನು ನೋಡಿ ಎಲ್ಲಾ ಕಲೆ ಕಲಿತುಕೊಂಡಿರುವ ಕೃಷಿ ಪಂಡಿತರು ತಲೆತಲಾಂತರದಿಂದ ಕೃಷಿ ಮಾಡುತ್ತಿರುವ ರೈತರಿಗೆ ತರಬೇತಿ ಕೊಡತಾರ. ಪೂರ್ತಿ ಇಂಗ್ಲಿಷಿನಲ್ಲಿ ಮಾತ ಆಡೋದಿಲ್ಲ. ನಡುನಡುವೆ ಕನ್ನಡ ಮಾತು ಅಡತಾರ. ‘ನಾ ಹೇಳ್ತಾ ಇರೋದು ತಿಳಿತಲ್ಲಾ, ಇಟ್ ಈಸ್ ವೆರೀ ಸಿಂಪಲ್’ ಅಂತ ಎಲ್ಲಾ ಕನ್ನಡ ಮಾತಾಡತಾರ.

ಕಂಪನಿಯವರು ಬೀಜ ಕೊಡತಾರ, ಗೊಬ್ಬರ ಕೊಡತಾರ, ಸಾಲ ಕೊಡತಾರ, ಡ್ರಿಪ್ ಇರಿಗೇಷನ್ ಕೊಡತಾರ, ಅವರ ಮಾತು ಕೇಳಿದರ ಇಸ್ರೇಲಿಗೆ ಕರಕೊಂಡು ಹೋಗತಾರ.

ಹಂಗ ಅಂತ ಯಾರಾದರೂ ರೈತರು ಅವರ ಮಾತು ಕೇಳಲೆ ಇಲ್ಲ ಅಂದ್ರ ಏನು ಮಾಡತಾರ? ಏನು ಮಾಡೋದಿಲ್ಲ. ಬಹಳ ಅಂದ್ರ ಸರಳ ಸಾಲ ಸಿಗಲಿಕ್ಕೆ ಇಲ್ಲ, ಬೀಜ ಗೊಬ್ಬರ ಕಷ್ಟ ಆಗಬಹುದು, ಬೆಳೆ ವಿಮೆ ಕಷ್ಟ ಆಗಬಹುದು, ಅಷ್ಟ. ಅಥವಾ ರೈತರಿಗೆ ತಮಗೆ ಬೇಕಾದ ಬೆಳೆ ಬೆಳಿಯಲಿಕ್ಕೆ ಆಗಲಿಕ್ಕಿಲ್ಲ. ಎಲ್ಲದರೊಳಗು ಸ್ವತಂತ್ರ ಬೇಕು ಅಂದ್ರ ಹೆಂಗ? 1947ರೊಳಗ ಸಿಕ್ಕದಲ್ಲಾ ಸಾಕು.

ರೊಕ್ಕ ಅನ್ನೋದು ಎಲ್ಲಕ್ಕಿಂತ ದೊಡ್ಡದು. ಸ್ವಾತಂತ್ರ ಯಾರಿಗೆ ಬೇಕು? ಅಷ್ಟೂ ಗೊತ್ತಿಲ್ಲ ಅಂದ್ರ ಹೆಂಗ?


ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿಗೆ ಪೊಲೀಸರ ಕೆಲವು ಷರತ್ತುಗಳು: ಒಪ್ಪದ ರೈತ ಸಂಘಟನೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...