ಹತ್ರಾಸ್ ಕೇಸ್

ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ಕೆಲವು ಅಪರಿಚಿತ ಗುಂಪುಗಳು ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲು 50 ಲಕ್ಷ ರೂ ಆಮಿಷವೊಡ್ಡಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಆರೋಪಿಸಿದ್ದಾರೆ. ಈ ಕುರಿತು 19ನೇ ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರಕರಣವನ್ನು ಮುಂದಿಟ್ಟುಕೊಂಡು ಹಲವಾರು ಗುಂಪುಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಜಾತಿ ದ್ವೇಷವನ್ನು ಹರಡಲು ಪ್ರಯತ್ನಿಸಿದವು ಎಂದು ಉತ್ತರ ಪ್ರದೇಶ ಪೊಲೀಸರು ಜಾತಿ ಹಿಂಸಾಚಾರ, ದೇಶದ್ರೋಹ, ಅಂತರಾಷ್ಟ್ರೀಯ ಪಿತೂರಿ, ಧಾರ್ಮಿಕ ದ್ವೇಷ ಹರಡುವುದು ಸೇರಿದಂತೆ ವಿವಿಧ ಆರೋಪಗಳಡಿ ರಾಜ್ಯಾದ್ಯಂತ ಕನಿಷ್ಠ 19 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

19 ಪ್ರಕರಣಗಳಲ್ಲಿ ಆರು ಪ್ರಕರಣಗಳನ್ನು ಹತ್ರಾಸ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿದ್ದು, ಉಳಿದ ಎಫ್‌ಐಆರ್‌ಗಳನ್ನು ವಾತಾವರಣವನ್ನು ಹದಗೆಡಿಸಿದ್ದಕ್ಕಾಗಿ ಬಿಜ್ನೋರ್, ಸಹರಾನ್‌ಪುರ, ಬುಲಂದ್‌ಶಹರ್, ಅಲಹಾಬಾದ್, ಅಯೋಧ್ಯೆ ಮತ್ತು ಲಖನೌದಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ: ’ಹತ್ರಾಸ್‌‌ನಲ್ಲಿ ಪಿತೂರಿ ಮಾಡಲಾಗುತ್ತಿದೆ’ – 19 ಆರೋಪಗಳ ಪ್ರಕರಣ ದಾಖಲಿಸಿದ ಯುಪಿ ಪೊಲೀಸ್‌‌

ಹತ್ರಾಸ್‌ನಲ್ಲಿ ದಾಖಲಾದ ಆರು ಪ್ರಕರಣಗಳಲ್ಲಿ ಒಂದು ಎಫ್‌ಐಆರ್‌ನಲ್ಲಿ ಸರ್ಕಾರದ ವಿರುದ್ಧ ಸುಳ್ಳುಗಳನ್ನು ಹೇಳಲು ಸಂತ್ರಸ್ತ ಯುವತಿಯ ಕುಟುಂಬಕ್ಕೆ 50 ಲಕ್ಷ ರೂಪಾಯಿ ಆಮಿಷವೊಡ್ಡಲಾಗಿದೆ ಎಂದಿದ್ದು, ಅಪರಿಚಿತರು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.

ಲಖನೌದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್, “ವಿವಿಧ ಗುಂಪುಗಳು ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸಿದರು, ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿ ಮತ್ತು ಕಾನೂನುಬಾಹಿರ ಸಭೆಗಳನ್ನು ಸಹ ಆಯೋಜಿಸಿದರು” ಎಂದರು.

ಯಾವುದೇ ನಿರ್ದಿಷ್ಟ ಸಂಘಟನೆಯ ಹೆಸರನ್ನು ಉಲ್ಲೇಖಿಸದೆ, ’ಸಂತ್ರಸ್ತ ಯುವತಿ ಕುಟುಂಬಕ್ಕೆ ತಮ್ಮ ಪರವಾಗಿ ಮಾತನಾಡಲು, ರಾಜ್ಯ ಸರ್ಕಾರದ ವಿರುದ್ಧ ಸುಳ್ಳುಗಳನ್ನು ಹೇಳಲು ಕುಟುಂಬವನ್ನು ಪ್ರಚೋದಿಸುವುದು, ತಪ್ಪು ಹೇಳಿಕೆಗಳನ್ನು ನೀಡುವಂತೆ ಒತ್ತಡ ಹೇರುವುದು ಮತ್ತು  50 ಲಕ್ಷ ರೂಪಾಯಿ ನೀಡುವ ಪ್ರಸ್ತಾಪದೊಂದಿಗೆ ಕೋಮು ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸಿದ್ದಕ್ಕಾಗಿ ನಾವು ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮನಿಷಾಳನ್ನು ಸುಟ್ಟ ಜಾಗದಿಂದ ಒಂದು ಹಿಡಿ ಮಣ್ಣು ತಂದು ಸ್ಮಾರಕ ನಿರ್ಮಿಸೋಣ: ದೇವನೂರು ಮಹಾದೇವ

ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉತ್ತರ ಪ್ರದೇಶ ಸರ್ಕಾರವು “ನ್ಯಾಯಯುತ ತನಿಖೆಯನ್ನು ಹಳಿ ತಪ್ಪಿಸುವ ಉದ್ದೇಶವನ್ನು ಪಟ್ಟಭದ್ರ ಹಿತಾಸಕ್ತಿಗಳು ಹೊಂದಿವೆ”. ಈ ವಿಷಯಕ್ಕೆ ಜಾತಿ ಮತ್ತು ಕೋಮು ಬಣ್ಣ ನೀಡಲಾಗುತ್ತಿದೆ ಎಂದು ಆರೋಪಿಸಿದೆ.

ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ನಾಲ್ವರು ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸೆಪ್ಟೆಂಬರ್ 29 ರಂದು ಯುವತಿ ಸಾವನ್ನಪ್ಪಿದರು, ಸ್ಥಳೀಯ ಪೊಲೀಸರು ಮರುದಿನ ಮುಂಜಾನೆ 2.30ಕ್ಕೆ ಮೃತ ಯುವತಿಯ ದೇಹವನ್ನು ಕುಟುಂಬಕ್ಕೆ ಒಪ್ಪಿಸದೇ ಸುಟ್ಟುಹಾಕಿದ್ದರು. ತಮ್ಮ ಒಪ್ಪಿಗೆಯಿಲ್ಲದೇ ಶವಸಂಸ್ಕಾರ ಬಲವಂತವಾಗಿ ಮಾಡಲಾಯಿತು ಎಂದು ಕುಟುಂಬವು ಆರೋಪಿಸಿದೆ.

ತೀವ್ರ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಈ ಪ್ರಕರಣದಿಂದ ಜಿಲ್ಲಾಡಳಿತ ಹತ್ರಾಸ್‌ಗೆ ಪ್ರತಿಪಕ್ಷಗಳ ನಾಯಕರು, ಮಾಧ್ಯಮಗಳು ಯಾರಿಗೂ ಪ್ರವೇಶ ನೀಡದಂತೆ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ರಾಜಕೀಯ ಮುಖಂಡರುಗಳ ಮೇಲೆ ಅಲ್ಲಿನ ಪೊಲೀಸರು ದಾಳಿ ನಡೆಸಿದ್ದರು. ಈಗ ಘಟನೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವವರ ಮೇಲೆಯೇ ಎಫ್‌ಐಆರ್‌ ದಾಖಲಿಸಲಾಗುತ್ತಿದೆ. ಸಂತ್ರಸ್ತ ಯುವತಿಯ ಕುಟುಂಬದವರ ಮೇಲೂ ಎಫ್‌ಐಆರ್‌ ದಾಖಲಿಸಬೇಕು ಎಂದು ಮೇಲ್ಜಾತಿ ಸಮುದಾಯದವರು ಸಭೆ ಮಾಡಿ ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಬಹುಜನರಿಗೆ ಬಂದೂಕು ನೀಡಿ: ಹತ್ರಾಸ್‌ಗೆ ಹೊರಟ ಭೀಮ್ ಆರ್ಮಿ ಮುಖ್ಯಸ್ಥ ಆಜಾದ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here