Homeಪುಸ್ತಕ ವಿಮರ್ಶೆಕ್ಯಾನ್ಸರ್ ಜಗತ್ತಿನ ಅನಾವರಣ; ಡಾ. ವಿ. ಪಿ. ಗಂಗಾಧರನ್ ಅವರ "ಜೀವನವೆನ್ನುವ ಅದ್ಭುತ"

ಕ್ಯಾನ್ಸರ್ ಜಗತ್ತಿನ ಅನಾವರಣ; ಡಾ. ವಿ. ಪಿ. ಗಂಗಾಧರನ್ ಅವರ “ಜೀವನವೆನ್ನುವ ಅದ್ಭುತ”

- Advertisement -
- Advertisement -

ಮಹಾತ್ಮ ಏಸು ಕ್ರಿಸ್ತನು ಜೆರೋಸಲಮ್‌ನ ಗುಡ್ಡ ಗವಿಗಳಲ್ಲಿ ಮನುಷ್ಯರ ಕಣ್ಣಿಗೆ ಬೀಳದಂತೆ ಅವಿತುಕೊಂಡು ಜೀವಿಸುತ್ತಿದ್ದ ಕುಷ್ಠರೋಗಿಗಳ ಬಳಿಗೆ ಹೋಗಿ ಉಪಚರಿಸಿ ಬರುತ್ತಿದ್ದನೆಂದು ಬೈಬಲ್ ಹೇಳುತ್ತದೆ. ಕುಷ್ಠರೋಗ ಅಂಟು ಜಾಢ್ಯವೆಂದು ತಿಳಿದ ಜನರು ಆ ರೋಗಿಗಳನ್ನು ಕಲ್ಲಿಂದ ಹೊಡೆದು ದೂರ ಅಟ್ಟುತ್ತಿದ್ದರು. ಅವರ ಮುಖ ನೋಡುವುದೂ ಸಹ ಅಪಶಕುನವೆಂದು ಭಾವಿಸಿದ್ದರು. ಈಗಲೂ ಅದು ಆಚರಣೆಯಲ್ಲಿದೆ ಎಂದರೆ ನಂಬಲು ಕಷ್ಟ. ಆದರೆ, ಡಾ. ಬಾಬಾ ಆಮ್ಟೆ, ಮದರ್ ತೆರೇಸಾ, ಸಾವಿತಿಬಾಯಿ ಪುಲೆ ಮುಂತಾದವರು ಅಂಥ ರೋಗಿಗಳನ್ನು ಉಪಚರಿಸಿದ ಉದಾಹರಣೆಗಳಿವೆ.

ಇನ್ನು ಕ್ಯಾನ್ಸರ್; “ಕ್ಯಾನ್ಸರ್ ರೋಗಿಯನ್ನು ಸಮಾಜವು ಕೂಡಲೆ ಒಂಟಿತನಕ್ಕೆ ನೂಕಿಬಿಡುತ್ತದೆ. ಯಾರ್‍ಯಾರೋ ಅನೇಕ ಕಾಲಗಳಿಂದ ಕಲ್ಪನೆಗೊಳಪಡಿಸಿ ಕಳಂಕವನ್ನು ಆರೋಪಿಸಿದ ಕಾರಣಕ್ಕೆ ಅದಿನ್ನೂ ಕ್ಯಾನ್ಸರ್ ಎನ್ನುವ ಹೆಸರಿನ ಮೇಲೆ ಈಗಲೂ ಗಿರಕಿ ಹೊಡೆಯುತ್ತಾ ಹಾರುತ್ತಿದೆ. ಇದೊಂದು ಹರಡದೇ ಇರುವ ರೋಗ ಎಂದು ಹಲವರು ಮರೆತವರಂತೆ! ಇದಕ್ಕಿಂತಲೂ ಎಷ್ಟೋ ಪಟ್ಟು ತೀವ್ರವೂ ಭಯಂಕರವೂ ಆದ ಅವಸ್ಥೆ ಇತರೆ ರೋಗಗಳಿಗೂ ಇದೆ ಎನ್ನುವ ವಾಸ್ತವಾಂಶದ ಅರಿವಿಲ್ಲದ ಮಂದಿಗಳಿವರು. ಹೃದ್ರೋಗಿಗಳಿಗಿಂತಲೂ ಕರುಳು ಬೇನೆಯವರಿಗಿಂತಲೂ ಮೂತ್ರಪಿಂಡದ ರೋಗಿಗಳಿಗಿಂಲೂ ಅದು ಹೇಗೆ ಕ್ಯಾನ್ಸರ್ ರೋಗಿಗಳು ಬೇರೆಯಾಗುತ್ತಾರೆ? ಯಾವುದೇ ಕಾಯಿಲೆಯನ್ನು ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವೆನ್ನುವ ಶೇಕಡವಾರು ಲೆಕ್ಕಹಿಡಿದು ನೋಡುವುದಾದರೆ, ಇತರೇ ಯಾವುದೇ ರೋಗಕ್ಕಿಂಲೂ ಕ್ಯಾನ್ಸರ್ ರೋಗವು ಮುಂಚೂಣಿಯಲ್ಲಿದೆ.

“ಮೂರನೇ ಒಂದು ಭಾಗದಷ್ಟು ಕ್ಯಾನ್ಸರ್ ರೋಗಿಗಳು ಪೂರ್ಣವಾಗಿಯೂ ಗುಣಹೊಂದಿದ್ದಾರೆ. ಮುಂದೆ ಇನ್ಯಾವಾಗಲೂ ರೋಗದ ನೆನಪು ಸಹ ಉಳಿಯದಂತೆ ಅವರುಗಳು ಪೂರ್ಣ ಸುಖಜೀವನ ನಡೆಸಲು ಸಮರ್ಥರಾಗಿರುತ್ತಾರೆ. ಜೀವನಕ್ರಮದಲ್ಲಾಗಲಿ ಆಹಾರದಕ್ರಮದಲ್ಲಾಗಲಿ ಯಾವುದೇ ರೀತಿಯ ನಿಯಂತ್ರಣ-ನಿರ್ಬಂಧಗಳಿಲ್ಲದೆ ಜೀವನ ನಡೆಸಲು ಅವರಿಗೆ ಸಾಧ್ಯವಿದೆ” ಎನ್ನುತ್ತಾರೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ಯಾನ್ಸರ್ ಚಿಕಿತ್ಸಕ ಕೇರಳದ ಡಾ. ವಿ. ಪಿ. ಗಂಗಾಧರನ್.

ಪ್ರಸ್ತುತ ’ಜೀವನವೆನ್ನುವ ಅದ್ಭುತ’ (Jeevithamenna Albhutham) ಎಂಬ ಈ ಪುಸ್ತಕವು ಡಾ. ವಿ. ಪಿ. ಗಂಗಾಧರನ್ ಅವರ ವೃತ್ತಿ ನೆನಪುಗಳು. ಈ ಕೃತಿಯಲ್ಲಿ ಕ್ಯಾನ್ಸರ್ ರೋಗಿಗಳೊಂದಿಗಿನ ಅವರ ಮೂವತ್ತೊಂದು ನೆನಪುಗಳ ಸಂಕಥನಗಳಿವೆ. ಇವುಗಳಲ್ಲಿ ’ಮೊದಲ ಕಾರಿನ ಚೊಚ್ಚಲ ಪ್ರಯಾಣ’ ಎಂಬುದೊಂದನ್ನು ಹೊರತುಪಡಿಸಿದರೆ ಉಳಿದ 30 ಸಂಕಥನಗಳು ಓದುಗನ ಕಣ್ಣುಗಳನ್ನು ತೇವಗೊಳಿಸುವಂತಿವೆ. ಒಬ್ಬೊಬ್ಬ ಕ್ಯಾನ್ಸರ್ ಪೇಷಂಟಿನ ಕತೆಯೂ ಒಂದೊಂದು ತೆರ. ರಕ್ತದ ಜೀವತಂತುವಿನೊಳಗೆ ತೂರಿ ಬಂದು ವ್ಯಕ್ತಿಯನ್ನು, ಗೆಜ್ಜಲುಹುಳು ಒಣ ಮರವ ಒಳಗೊಳಗೇ ತಿಂದಂತೆ ತಿಂದು ಕೊಬ್ಬಿ ಆ ರೋಗಿಯನ್ನು ಕೊಂದು ಕೂಗುತ್ತವೆ ಈ ಅರ್ಬುದದ ರೋಗಾಣುಗಳು. ಕ್ಯಾನ್ಸರ್ ಕಾಯಿಲೆ ಯಾರನ್ನು ಬಿಟ್ಟಿದ್ದಲ್ಲ.

ಡಾ. ವಿ. ಪಿ. ಗಂಗಾಧರನ್

ಬಡವ-ಬಲ್ಲಿದನೆಂಬ, ಹಸುಳೆ-ಶಿಶು ಮಗುವೆಂಬ, ಹಿರಿಯ ಕಿರಿಯರೆಂಬ, ಭಕ್ತ-ಪಾಷಂಡಿಯೆಂಬ, ಒಡೆಯ-ಆಳು ಎಂಬ, ಜಾತಿವಂತ-ನೀತಿವಂತ ಎಂಬ, ಕಳ್ಳ-ಪೋಲೀಸ್ ಎಂಬ, ನ್ಯಾಯವಾದಿ-ಕಿರಾತಕನೆಂಬ ಮುಂತಾಗಿ ಯಾವ ತಾರತಮ್ಯ ಭಿನ್ನ ಭೇದವೂ ಇಲ್ಲ.

’ಜೀವನವೆನ್ನುವ ಅದ್ಭುತ’ ದಿಂದ ಕೆಲವು ನಿದರ್ಶನಗಳನ್ನು ನೋಡೋಣ. ಡಾಕ್ಟರ್ ಮೊದಲು ಪ್ರಸ್ತಾಪಿಸಿರುವ ಕ್ಯಾನ್ಸರ್ ಪೀಡಿತ ’ನೌಷಾದ್’ ಎಂಬ ಮೆಡಿಕಲ್ ವಿದ್ಯಾರ್ಥಿಯ ಪ್ರಸಂಗವನ್ನೇ ಉಲ್ಲೇಖಿಸಬಹುದು. ನೌಷಾದ್‌ನ ಫೈಲನ್ನು ತೆರೆದು ನೋಡುತ್ತಾ ಕೇಳುತ್ತಾರೆ:

“ವಿದ್ಯಾಭ್ಯಾಸ ಹೇಗೆ ಸಾಗುತ್ತಿದೆ, ನೌಷಾದ್..?”

ನೌಷಾದ್ ಏನೂ ಹೇಳಲಿಲ್ಲ. ಯಾವುದೇ ಭಾವನೆಗಳಿಲ್ಲದ ಮುಖಹೊತ್ತು ಒಮ್ಮೆ ನನ್ನ ಕಡೆ ನೋಡಿದ. ವಿದ್ಯಾಭ್ಯಾಸದ ಬಗ್ಗೆಯೋ ತನ್ನ ಭಾವಿ ಡಾಕ್ಟರ್‌ತನದ ಸಂಕಲ್ಪದ ಬಗ್ಗೆಯೋ ನೌಷಾದ್ ಈಗಾಗಲೇ ಮರೆತುಹೋದವನಂತೆ..! ಎದೆಯೊಳಗೆ ಜೋಗುಳವ ಹಾಡಿ ಕಾಪಾಡಿಕೊಂಡಿದ್ದ ಕನಸುಗಳೆಲ್ಲ ಸಾಕ್ಷಾತ್ಕಾರಗೊಳ್ಳುವುದಕ್ಕೂ ಮೊದಲೇ ಕೈಬಿಟ್ಟುಹೋಗಿವೆ.

“ಈ ವರ್ಷದ ಪರೀಕ್ಷೆಗೆ ಸಮಯವಾಯ್ತಲ್ಲವೇ..?”

“ಹೌದು ಆಗಿದೆ. ಆದರೆ, ನನಗೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲವಲ್ಲ, ಡಾಕ್ಟರ್..!”

ಇಷ್ಟನ್ನು ಹೇಳಿ ಮುಗಿಯುತ್ತಿದ್ದಂತೆ ಅಳು ಉಕ್ಕಿ ಬಂದೇಬಿಟ್ಟಿತು. ನೌಷಾದ್‌ನ ಕೈಗಳನ್ನು ನಾನು ಅದುಮಿ ಹಿಡಿದುಕೊಂಡೆ.

“ಯಾರು ಹೇಳಿದರು ಬರೆಯಲು ಸಾಧ್ಯವಿಲ್ಲವೆಂದು? ನಾನು ಭರವಸೆ ಕೊಡ್ತಾ ಇದೀನಿ. ಇನ್ನುಳಿದ ಪರೀಕ್ಷೆಗಳನ್ನು ನಾವಿಬ್ಬರೂ ಒಟ್ಟಿಗೆ ಬರೆಯುತ್ತೇವೆ.”

ನೌಷಾದ್‌ನ ಬಿಕ್ಕುವಿಕೆ ಸಮಾಧಾನಗೊಂಡಿತು. ನನ್ನ ಕೈಮೇಲೆ ಜಾರಿಬಿದ್ದ ಒಂದು ಹನಿ ಕಣ್ಣೀರು ನನ್ನ ಎದೆಯೊಳಗಿನ ಉರಿ ಹೆಚ್ಚಿಸಿತು.

ನೌಷಾದ್‌ಗೆ ’ಲುಕೀಮಿಯ’ ಆಗಿತ್ತು. ’ಕೀಮೋಥೆರಪಿಯ’ ರೆಜೀಂ ತೀರ್ಮಾನಿಸುವಾಗ ನೌಷಾದಿನ ಪರೀಕ್ಷೆಯ ವೇಳಾಪಟ್ಟಿ ನನ್ನ ಅರಿವಿನಲ್ಲಿತ್ತು. ತಲೆತಿರುಗಿ ಹೋಗಿದ್ದ ಅಣುಕೋಶಗಳನ್ನು ನನ್ನ ಔಷಧಕ್ಕಿಂತ ಹೆಚ್ಚು ವೇಗದಲ್ಲಿ ನಿಯಂತ್ರಣಕ್ಕೆ ಒಳಪಡಿಸಿದ್ದು ನೌಷಾದ್‌ನ ಇಚ್ಛಾಶಕ್ತಿ ಆಗಿತ್ತು. ನೌಷಾದ್‌ಗೆ ಯಾವ ಪರೀಕ್ಷೆಯಲ್ಲೂ ನಷ್ಟ ಉಂಟಾಗಲಿಲ್ಲ. ಬಿಳೀ ರಕ್ತಕಣಗಳು ಸ್ವಪ್ರಜ್ಞೆ ಮರಳಿ ಬಂದಂತೆ ವ್ಯವಹರಿಸತೊಡಗಿದವು.

ಈ ನೌಷಾದ್‌ನ ಕಾಯಿಲೆ ಸಂಪೂರ್ಣ ಗುಣವಾಗಿ ಇದೀಗ ಹಲವಾರು ವರ್ಷಗಳೆ ಕಳೆದುಹೋಗಿವೆ. ನೌಷಾದ್ ತನ್ನ ವೈದ್ಯಕೀಯ ಪದವಿ, ಎಂ.ಬಿ.ಬಿ.ಎಸ್‌ಅನ್ನು ಪಡೆದುಕೊಂಡದ್ದೂ ಆಯಿತು. ಕಾಲೇಜಿನಲ್ಲಿ ತನಗಿಂತ ಕಿರಿಯವಳಾಗಿದ್ದ ಓರ್ವಳನ್ನು ಪ್ರೀತಿಸಿ ಮದುವೆಯನ್ನೂ ಮಾಡಿಕೊಂಡ. [ಪುಟ x-xi]

ಕ್ಯಾನ್ಸರ್ ರೋಗಗಳಲ್ಲಿ ಎಷ್ಟೊಂದು ಬಗೆಗಳು? ಮುಂದಿನ ಮೂವತ್ತು ಕಥನಗಳೂ ಹೀಗೆ ಎದೆ ಕರಗಿಸುತ್ತವೆ.

ಅತಿ ವೇಗದಲ್ಲಿ ಕೆಟ್ಟ ಸ್ಥಿತಿಗಿಳಿಸುವಂತಹ ’ಅಕ್ಯೂಟ್ ಲಿಂಫೋ ಬ್ಲಾಸ್ಟಿಕ್’ ಎಂಬುದೊಂದು ಕ್ಯಾನ್ಸರ್ 15 ವರ್ಷದ ಹೆಣ್ಣುಮಗಳಿಗೆ ಕಾಣಿಸಿಕೊಂಡಿದೆ. ಕೀಮೋಥೆರಪಿಗೆ ಒಳಗಾದರೆ ಮಂಡೆ ಕೂದಲೆಲ್ಲಾ ಉದುರುತ್ತದೆ. ಇದು ಸಾಮಾನ್ಯ. ಅವಳಿಗೆ ಅಂಥ ಕೀಮೋಥೆರಪಿ ನಡೆಯುತ್ತಿರುತ್ತದೆ. ಆದರೆ ಆ ಮಗುವಿಗೆ ಆಗ ಫಿಟ್ಸ್ ಬೇರೆ ಕಾಣಿಸಿಕೊಂಡಿತು; ’ಕೋಮ’ ಸ್ಥಿತಿಗೆ ಜಾರಿದಳು. ತಮ್ಮ ಮುದ್ದಿನ ಮಗಳು ಕೋಮಾದಿಂದ ಮೂರ್‍ನಾಲ್ಕು ದಿನಗಳಾದರೂ ಕಣ್ಣು ಬಿಡಲಿಲ್ಲ. ’ನನ್ನ ಮಗಳು ಇನ್ನು ಕಣ್ಣು ತೆರೆಯಬಹುದೆ ಡಾಕ್ಟ್ರೆ..?’ ಎಂದು ಅಂಗಲಾಚಿ ಕೇಳುವ ಅಪ್ಪ. ಪ್ರಜ್ಞೆತಪ್ಪಿ ಮಲಗಿರುವ ಮಗಳು. ಪುನಃ ಬದುಕಿಕೊಳ್ಳುವಳೆಂಬ ಭರವಸೆ ಇನಿತಿಲ್ಲ ತಂದೆಗೆ. ಅವಳ ನೆನಪಲ್ಲೇ ನೋವುಂಡ ಅವರ ಪ್ರಾಣಕ್ಕೆ ತಡೆದುಕೊಳ್ಳುವ ತ್ರಾಣ ಎಲ್ಲಿದೆ? ತೀರಿಹೋದರು. ಆದರೆ ಅಪ್ಪನ ಮರಣದ ಕಾರ್‍ಯಕ್ರಮಗಳೆಲ್ಲ ಮುಗಿದ ಮೇಲೆ ಮಗಳು ಕಣ್ಣು ತೆರೆದಳು. ಆದರೆ ಅವಳಿಗೆ ಅಪ್ಪನ ಜೀವ ಹಾರಿಹೋಯಿತೆಂದು ತಿಳಿಸುವವರು ಯಾರು? ಆ ದೌತ್ಯ ಡಾ. ಗಂಗಾಧರನ್ ಅವರ ಭುಜದ ಮೇಲೆಬಿತ್ತು. ಅವರು ಆ ಮಗಳಿಗೆ ಧೈರ್ಯ ತಂದುಕೊಳ್ಳಲು ಪೀಠಿಕೆ ಹಾಕುತ್ತಿದ್ದರು. ಅಷ್ಟರಲ್ಲಿ ಇಂಗಿತಜ್ಞೆಯಾದ ಅವಳಿಗೆ ಎಲ್ಲಾ ಗೊತ್ತಾಗಿಬಿಟ್ಟಿತ್ತು. ಒಂದು ಕ್ಷಣವೂ ಬಿಟ್ಟಿರದ ನನ್ನ ತಂದೆ ಈಗ ನನ್ನ ಬಳಿ ಇಲ್ಲ ಎಂಬುದರಿಂದಲೇ ’ನನ್ನ ಅಪ್ಪ ಇನ್ನಿಲ್ಲ’ ಎಂಬುದು ತಿಳಿದಿತ್ತು. (ನೋಡಿ: ಅಪ್ಪ-ಮಗಳು ಅಧ್ಯಾಯ)

ಬಷೀರರು ಬೀದಿಯಲ್ಲಿ ತಳ್ಳು ಗಾಡಿ ವ್ಯಾಪಾರಿ. ಅವರಿಗೆ ಮಾರಕ ವ್ಯಾಧಿ ’ಲುಕೀಮಿಯ’ ತಗುಲಿತು. ಹಕೀಮರ ಮದ್ದಿಗೆ ಜುಮ್ಮೆನ್ನಲಿಲ್ಲ. ಗಂಗಾಧರನ್ ಅವರಿದ್ದ ರೀಜನಲ್ ಕ್ಯಾನ್ಸರ್ ಸೆಂಟರ್‌ಗೆ (RCC) ದಾಖಲಾದರು. ಚಿಕಿತ್ಸೆ ಆರಂಭವಾಯಿತು. ಗುಣವಾದರು. ಅವರು ಒಂದು ದಿನ ತನ್ನ ಹೆಂಡತಿ ಮಕ್ಕಳ ಸಮೇತ ಬಂದು ’ಗುರುವಾಯೂರಪ್ಪ’ನ ಫೋಟೋ ತಂದು “ಇದನ್ನು ನಿಮ್ಮ ಮನೆಯಲ್ಲಿ ಇಡಬೇಕು. ಇದಕ್ಕೆ ವಿದ್ಯುತ್ ದೀಪವನ್ನು ಎಂದಿಗೂ ಹಚ್ಚಿಡಬೇಕು. ಆಮೇಲೆ ಇದನ್ನು ನೋಡುವಾಗಲೆಲ್ಲ ನಿಮಗೆ ನೆನಪಾಗಬೇಕು. ಐದು ಹೊತ್ತು ನಮಾಜು ಮಾಡುವ ಓರ್ವ ಮುಸಲ್ಮಾನ ತಂದುಕೊಟ್ಟ ’ಗುರುವಾಯೂರಪ್ಪ’ನಿವನು ಎಂದು. ಇದಕ್ಕಿಂತಲೂ ಮಿಗಿಲಾದ ಬೇರೆ ಯಾವುದೇ ಉಡುಗೊರೆ ನಿಮಗೆ ಕೊಡಲು ಇರುವುದಿಲ್ಲ” [ಪುಟ 60 ನೋಡಿ: ಪ್ರಜ್ವಲಿಸುವ ಮನಸ್ಸು]

ಪುಷ್ಪಾ ಸ್ವಾಮಿ ಎಂಬ ಅನಾಥ ಹೆಣ್ಣುಮಗಳು. ಅವಳಿಗೆ ’ಕ್ರೋನಿಕ್ ಲಿಂಫೋಸೈಟ್ಟಿಕ್ ಲುಕೀಮಿಯ’, ಅವರು ಕೀಮೋಥೆರಪಿಗೆ ಒಳಗಾದರು. ಪುಷ್ಪಾಸ್ವಾಮಿಗೆ ಯಾರೂ ದಿಕ್ಕಿಲ್ಲ. ಅವರಿಗೆ ಗಂಗಾಧರನ್ ಅವರೇ ಹತ್ತಿರದ ಸಂಬಂಧಿಯಾಗಿಬಿಟ್ಟರು. ಕ್ಯಾನ್ಸರ್ ಆಸ್ಪತ್ರೆ ಹತ್ತಿರದಲ್ಲೇ ಒಂದು ಚಿಕ್ಕ ಕೊಠಡಿಯನ್ನು ಬಾಡಿಗೆಗೆ ಪಡೆದರು. ತೀರ ಬಡವಿ ಏನು ಮಾಡಿಯಾಳು? ಊಟ ವಸತಿಗೆ ರಕ್ತಪರೀಕ್ಷೆಗೆ ದುಡ್ಡು ಕೊಡಬೇಕು. ರೂಮಿಗೂ ಆಸ್ಪತ್ರೆಗೂ ನಡೆಯಲಾರಳು. ಆಟೋ-ಬಸ್ಸಿಗೆ ದುಡ್ಡು ಕೊಡಬೇಕಲ್ಲ? ’ಅಯ್ಯಪ್ಪಾ, ನನ್ನ ಅಯ್ಯಪ್ಪಾ’ ಎಂದು ಸದಾ ಪ್ರಾರ್ಥಿಸುತ್ತಿದ್ದಳು. ಅದು ರೋದನವೋ ಪ್ರಾರ್ಥನೆಯೋ ಹೇಳಲುಬಾರದು. ಅಂಥ ಮುದುಕಿಯ ಬ್ಯಾಂಕ್ ಅಕೌಂಟಿನಲ್ಲಿ ಜೀವಮಾನ ದುಡಿದ ಹತ್ತು ಸಾವಿರ ಹಣವಿದೆ. ಸಾಯುವ ದಿನ ಹತ್ತಿರ ಬಂದಿದೆ. “ಡಾಕ್ಟ್ರೆ, ದಯವಿಟ್ಟು ಈ ಹಣವನ್ನು ಯಾವುದಾದರೂ ಬಡತನದಲ್ಲಿರುವ ರೋಗಿಗೆ..” ಎಂದು ಆಪ್ತಪಾಗಿ ಪ್ರಾರ್ಥಿಸಿಕೊಳ್ಳುತ್ತಾಳೆ. ದಾನ ಚಿಂತಾಮಣಿ ಪುಷ್ಪಾ ಸ್ವಾಮಿ! ಮೂರು ಕಾಸು ಕೊಟ್ಟು ಡಂಗೂರ ಬಾರಿಸುವ ಜನರಿದ್ದಾರೆ- ಈ ಲೋಕದಲ್ಲಿ! [ನೋಡಿ: ಪ್ರಾರ್ಥನೆಯೂ ರೋದನವೂ]

“ನನ್ನ ಮುಂದೆ ಎರಡು ವರ್ಷದ ಅಹಮ್ಮದ್ ಕುಳಿತಿದ್ದಾನೆ. ದೂರದ ಕಣ್ಣೂರಿನಿಂದ ಪ್ರಯಾಣ ಮಾಡಿ ಬಂದದ್ದರ ದಣಿವು ಅವನ ಮುಖದಲ್ಲಿ ಕಾಣುತ್ತಿತ್ತು. ಆದರೂ ಆ ಮುಖದಲ್ಲಿ ಸಣ್ಣದಾದ ತುಂಟು ಮಿಶ್ರಿತ ಮಧುರ ನಗು. ಅಹಮ್ಮದನಿಗೆ ಲುಕೀಮಿಯಾ ಬಾಧಿಸಿದೆ. ಅಹಮ್ಮದನ ಹತ್ರ ಕೇಳಬೇಕೆನಿಸಿತು. ಈ ಎರಡು ವರ್ಷದ ನಿನ್ನ ಪ್ರಾಯದೊಳಗೆ ನೀನು ಯಾವ ಪಾಪವನ್ನು ಮಾಡಿದೆ..? ನಿನ್ನ ದುಷ್ಕರ್ಮಗಳಿಂದಾಗಿ ಯಾರ್‍ಯಾರ ಜೀವಗಳ ಮನಸ್ಸಿಗೆ ನೋವುಂಟುಮಾಡಿ ಅವರುಗಳು ವಿಲವಿಲ ನರಳುವಂತೆ ಮಾಡಿದ್ದೀಯಾ..?

“ನಿಮಿಷಾರ್ಧಗಳಲ್ಲಿ ಸಂಶೋಧಕರು ಉತ್ತರ ಕೊಟ್ಟಾರು. ಅದು ಈ ಜನ್ಮಕ್ಕೆ ಸಂಬಂಧಿಸಿದ್ದಲ್ಲ. ಕಳೆದ ಜನ್ಮದ ಪಾಪದ ಫಲ. [ಪುಟ 71] ಕ್ಯಾನ್ಸರ್ ರೋಗಿಗಳ ಬಗ್ಗೆ ಧರ್ಮಾತ್ಮರು ನೀಡುವ ತೀರ್ಪು” ಇದು ಎನ್ನುತ್ತಾರೆ ಗಂಗಾಧರನ್. ಕ್ಯಾನ್ಸರ್‌ಗಿಂತ ಭಯಂಕರ ಇಂಥ ಮೂಢ ನಂಬಿಕೆ. ಎಷ್ಟೋ ಜನ ಅಮಾಯಕ ರೋಗಿಗಳು ಈ ಮೌಢ್ಯಕ್ಕೆ ನಿತ್ಯ ಬಲಿಯಾಗಿ ಹೋಗುತ್ತಿದ್ದಾರೆ.

ಡಾಕ್ಟರ್ ಅನುಭವದ ಮಾತು: “ಅಂತೂ ಪಾಪ-ಪುಣ್ಯಗಳ ತಕ್ಕಡಿ ಯಾವ ನಿರ್ಣಯವನ್ನೂ ತಗೆದುಕೊಳ್ಳದೆ ಆ ಕಡೆಗೂ ಈ ಕಡೆಗೂ ತೂಗಾಡುತ್ತಿದೆ. ನಿತ್ಯವೂ ಎಷ್ಟೋ ನಿಷ್ಕಳಂಕ ಮುಖಗಳು ರೋಗಪೀಡಿತರಾಗಿ ನನ್ನೆದುರು ಬರುತ್ತಾರೆ. ಪಾಪವನ್ನು ಎಸಗದವರು ಕಲ್ಲುಗಳಿಂದ ಹೊಡೆಸಿಕೊಳ್ಳುತ್ತಲೇ ಇದ್ದಾರೆ. [ಪುಟ 71] ಏಸು ಸ್ವಾಮಿ ಹೇಳಿದ “ಎಂದೂ ಪಾಪ ಮಾಡದವನು ಆ ವ್ಯಭಿಚಾರಿ ಹೆಣ್ಣಿನ ಮೇಲೆ ಕಲ್ಲು ಎಸೆಯಬಹುದು!”; ಎಲ್ಲರೂ ಕಲ್ಲುಗಳನ್ನು ಕೆಳಗೆ ಹಾಕಿದರು!

ಇದನ್ನೂ ಓದಿ: ಸರಮಾಗೋನ ’ಕುರುಡು’ ಕಾದಂಬರಿ: ನಾವು ಕಟ್ಟಿದ ಸ್ವರ್ಗ ದಿಢೀರನೆ ಕುಸಿದಾಗ..!

ರಾಜೀವ್ ಮತ್ತು ದೇವಿ ಮದುವೆಯಾಗಿ ಇದೀಗ ಕೇವಲ ಹತ್ತು ದಿನಗಳಾಗಿವೆ. ಅವರು ಜತೆಯಲ್ಲಿ ಕಳೆದದ್ದು ಕೇವಲ ಎರಡು ದಿನಗಳು ಮಾತ್ರ. ರಾಜೀವ್‌ಗೆ ಗಲ್ಫಿನಲ್ಲಿ ಕೆಲಸ. ರಜೆ ತೀರಾ ಕಡಿಮೆ. ಹೊರಟುಹೋಗಬೇಕಾಗಿತ್ತು. ಹೋಗಿದ್ದ. ಆದರೆ ಕೆಲವೇ ದಿನಗಳಲ್ಲಿ ಆತ ತಿರುಗಿ ಬರಬೇಕಾಯ್ತು. ದೇವಿಗೆ ಬ್ಲಡ್ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಆಗ ರಾಜೀವ್ ಬಂದರು. ಡಾಕ್ಟರ್ ಕಂಡು ನಿವೇದಿಸಿಕೊಳ್ಳುತ್ತಾರೆ:

“ನನ್ನೆದುರು ಎರಡು ವಿಚಾರಗಳಿವೆ, ಡಾಕ್ಟರ್, ಒಂದನೆಯದು, ಕೇವಲ ಎರಡು ದಿನಗಳ ಸಂಬಂಧವನ್ನು ಮರೆತು, ನಾನು ನನ್ನ ದಾರಿ ನೋಡಿಕೊಳ್ಳುವುದು. ನಾನೀಗ ಹೆಚ್ಚಿನವರಿಂದ ಕೇಳುತ್ತಿರುವುದು ಇದೇ ಸಲಹೆಯನ್ನು. ಅಲ್ಲದಿದ್ದರೆ ದೇವರಲ್ಲಿ ಮೊರೆಯಿಡುತ್ತಾ. ಕರುಣೆ ತೋರಲು ಪ್ರಾರ್ಥಿಸುತ್ತಾ ದೇವಿಯ ಚಿಕಿತ್ಸೆ ನಡೆಸುವುದು.”

ಆಗ ಡಾಕ್ಟರ್‌ಗೆ ಏನು ಹೇಳಲೂ ತೋರಲಿಲ್ಲ. ರಾಜೀವರೇ ಹೇಳಿದರು: ’ಖರ್ಚು ಎಷ್ಟೇ ಆದರೂ ನಾನು ಭರಿಸುತ್ತೇನೆ, ನೀವು ಚಿಕಿತ್ಸೆ ಆರಂಭಿಸಿರಿ’ ಎಂದು. ಗಲ್ಫಿಗೆ ಹೋಗಿ ತಿಂಗಳುತಿಂಗಳು ಹಣ ಕಳುಹಿಸಿದರು. ದೇವಿಯ ಕ್ಯಾನ್ಸರ್ ಸಂಪೂರ್ಣ ವಾಸಿಯಾಯಿತು. ನಂತರ ದೇವಿ ಎಂ.ಎ., ಬಿಎಡ್‌ಅನ್ನು ಮುಗಿಸಿ ಒಂದು ಶಾಲೆಯಲ್ಲಿ ಕೆಲಸಕ್ಕೆ ಸೇರಿದರು. ಒಮ್ಮೆ ರಾಜೀವ್ ಮತ್ತು ದೇವಿ ಇಬ್ಬರೂ ಡಾಕ್ಟರ್ ನೋಡಿ ಕೃತಜ್ಞತೆ ಅರ್ಪಿಸಲು ಬಂದರು. ಆದರೆ ರಾಜೀವ್‌ರು ಒದಗಿಸಿದ ಔಷಧಿಗಳಿಂದ ದೇವಿ ಗುಣ ಹೊಂದಿದರು ಎಂದುಕೊಂಡರು ಡಾಕ್ಟರ್. [ನೋಡಿ: ದೇವರ ರೂಪ]

ದೂರದ ಊರಿನಲ್ಲಿ ಮಗಳಿದ್ದಾಳೆ. ಇಲ್ಲಿ ಅಪ್ಪ ’ನಾನ್ ಹಾಜಿಕಿನ್ಸ್ ಲಿಂಫೋಮ’ ಎಂಬ ಕ್ಯಾನ್ಸರಿನಿಂದ ನರಳುತ್ತಿದ್ದಾರೆ. ಆದರೆ ಈ ಅಪ್ಪನಿಗೆ ಯಾವ ಕಾರಣಕ್ಕೂ ತನ್ನ ಮಗಳು ದುಃಖ ಪಡಬಾರದು ಎಂಬ ಮಹಾ ಮೋಹ! ಆದರೆ ಮಗಳು ಬಂದು ಸದಾ ತಂದೆಯ ಬಳಿ ಇರಲು ಸಾಧ್ಯವೆ? ತಾಯಿಯನ್ನು ಕಂಡರೆ ಈ ಅಪ್ಪನಿಗೆ ಸಹಿಸದು. ಮಾರಣಾಂತಿಕ ಕ್ಯಾನ್ಸರ್ ತಗುಲಿದ್ದರೂ ಆತನಿಗೆ ಹೆಂಡತಿ ಹತ್ತಿರ ಸುಳಿಯಬಾರದು. ಆದರೂ ಗಂಡ ಪಡುವ ಸಂಕಟವನ್ನೆಲ್ಲ ಮರೆಯಲ್ಲಿ ನಿಂತು ಆ ಸಾಧ್ವಿ ನೋಡಿ ದುಃಖಿಸುತ್ತಾರೆ. ಡಾಕ್ಟರ್ ಮಾತಿಗೂ ಕಿವಿಗೊಡದ ಹಠಮಾರಿ ಅಪ್ಪ ಹೇಳುವುದೇನು ಗೊತ್ತೇ?.. “ಈ ರೀತಿ ಮಲಗಿರುವಾಗಲೇ ಉಸಿರಾಟ ನಿಂತು ಹೋದರೂ ಅವಳನ್ನು ನೋಡಬಾರದು ಅನ್ನೋದೆ ನನ್ನ ಈಗಿನ ಪ್ರಾರ್ಥನೆ’ ಎಂದು. ಮನುಷ್ಯನ ರಾಗದ್ವೇಷಗಳಿಗೆ ಇತಿಯೇನಿದೆ ಮಿತಿಯೇನಿದೆ ? [ನೋಡಿ: ಹಠಮಾರಿ ಅಪ್ಪ]

ಕ್ಯಾನ್ಸರ್ ಮಕ್ಕಳ ವಾರ್ಡಿನಲ್ಲಿ ಲೀಲಾವತಿ ಎಂಬ ಸುಮಧುರ ಕಂಠದ ಹಾಡುಗಾರ್ತಿ ಇದ್ದಳು. ಅವಳಿಗೆ ’ಅಕ್ಯೂಟ್ ಬ್ಲಾಸ್ಟಿಕ್ ಲುಕೇಮಿಯ’. ಬೆನ್ನು ಮೂಳೆಯ ಮಜ್ಜೆಗೆ ಇಂಜಕ್ಷನ್ ನೀಡುತ್ತಿದ್ದರೂ ಅವಳು ಹಾಡು ಹಾಡುತ್ತಲೇ ಸಹಿಸಿಕೊಳ್ಳುತ್ತಿದ್ದಳು. ಆದರೂ ಅವಳು ಉಳಿಯಲಿಲ್ಲ. ಮಕ್ಕಳ ವಾರ್ಡಿನ ನಗೆಯೇ ಅವಳೊಂದಿಗೆ ಮಾಯವಾಗಿಬಿಟ್ಟಿತು. [ನೋಡಿ: ಚಿಕ್ಕ ಪುಟಾಣಿ ಗಿಣಿಯೇ, ಕಣ್ಣಮ್ಮಾ]

ಈ ಕತೆ ನೋಡಿ. ಕಬೀರನ ಅಕ್ಕನಿಗೆ ಕ್ಯಾನ್ಸರ್. ಅವರು ಸಾಕಿದ ಹಸು ಕ್ಯಾನ್ಸರ್‌ನಿಂದ ಸತ್ತು ಹೋಗಿತ್ತು. ಆ ಊರು ಕೇರಿಯ ಜನ ಇವರ ಮನೆ ಜನ-ದನ ಎಲ್ಲಕ್ಕೂ ಕ್ಯಾನ್ಸರ್ ಎಂದು ಮುಖಕ್ಕೆ ರಾಚಿಹೇಳುತ್ತಿದ್ದರು. ಅದನ್ನು ಸಹಿಸಲಿಕ್ಕಾಗದೆ ಭಾವನ ಜೊತೆ ಕಬೀರ್ ಗಲ್ಫ್ ದೇಶಕ್ಕೆ ವಲಸೆ ಹೋದ. ಡಾಕ್ಟರ್ ಹೇಳ್ತಾರೆ: ಮನಸ್ಸಿಗೆ ಹಿಡಿದ ಕ್ಯಾನ್ಸರ್‌ಗೆ ಮದ್ದಿಲ್ಲ. [ನೋಡಿ: ಚಿಕಿತ್ಸೆಯಿಲ್ಲದ ರೋಗ]

ಮೇರಿ ಹತ್ತನೇ ತರಗತಿ ಓದುತ್ತಿದ್ದಾಳೆ. ಅವಳಿಗೆ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲುಕೀಮಿಯ. ಚಿಕ್ಕದೊಂದು ದ್ವೀಪದಲ್ಲಿ ಅವಳ ಮನೆ; ತೀರ ಬಡತನದ ಕುಟುಂಬ. ಅವಳ ತಾಯಿ ಆಸ್ಪತ್ರೆಗೆ ಕರೆತಂದಿದ್ದಾರೆ. ಡಾಕ್ಟರ್ ’ಮೇರಿಗೆ ಏನಾಯ್ತು’ ಎನ್ನುತ್ತಾರೆ. ’ನನಗೆ ಹುಚ್ಚು ಹಿಡಿದಿದೆ ಡಾಕ್ಟರ್. ಏನಾದರೂ ಔಷಧ ಚುಚ್ಚಿ ನನ್ನನ್ನು ಕೊಂದುಬಿಡಿ’ ಎಂದು ಕೂಗುತ್ತಿದ್ದಾಳೆ. ಡಾಕ್ಟರ್ ಅವಳ ತಾಯಿಯನ್ನು ಹೊರಗೆ ಕಳುಹಿಸಿ, ಹುಡುಗಿಯ ತಲೆ ನೇವರಿಸಿ, ಸಮಾಧಾನ ಪಡಿಸಿ ಏನೆಂದು ವಿಚಾರಿಸುತ್ತಾರೆ. ಕೆಲ ಸಮಯಕ್ಕೆ ಮೇರಿ ಬಾಯಿ ಬಿಡುತ್ತಾಳೆ: “ತಮಗೆ ಗೊತ್ತಿದೆಯಲ್ಲವೆ ನಮ್ಮದೊಂದು ಸಣ್ಣಕುದ್ರು, ಅಂದರೆ ದ್ವೀಪ. ಎಲ್ಲರಿಗೂ ಎಲ್ಲರ ಚರಿತ್ರೆಗಳೆಲ್ಲ ಗೊತ್ತಿರುತ್ತದೆ. ಮತ್ತೀಗ ಯಾರಿಗಾದರೂ ನನಗೆ ಹಿಂದೆ ಕಾಯಿಲೆ ಆಗಿತ್ತೂಂತ ಗೊತ್ತಿಲ್ದೆ ಇದ್ರೆ, ನನ್ನ ಅಪ್ಪ ಅಮ್ಮ ಅದನ್ನೆ ಹೇಳ್ಕೊಂಡು ತಿರುಗಾಡ್ತಾರೆ. ನಾನು ಹೀಗೆ ನಡೆದುಕೊಂಡು ಹೋಗುವಾಗ ಊರಿನವರು ಹೇಳೋದನ್ನ ಕೇಳಿದೀನಿ. ಅದೋ ಬ್ಲಡ್‌ಕ್ಯಾನ್ಸರ್ ಹುಡುಗೀಂತ.. ನಾನು ಸಾಯೋ ದಿನ ಸಹಿತ ಕೆಲವರು ಬರ್‍ದಿಟ್ಟಿದ್ದಾರೆ. ಒಂದು ತಿಂಗಳಾ ಎರಡು ತಿಂಗಳಾ ಅನ್ನೂದು ಅವರವರೊಳಗಿನ ವಾದವಿವಾದ. ಒಬ್ಬರಿಗೆ ಹುಚ್ಚು ಹಿಡಿಯೋದಕ್ಕೆ ಇಷ್ಟೆಲ್ಲ ಸಾಕಲ್ಲವೇ ಸಾರ್. ಆದರೆ ಇಷ್ಟಾದರೂ ನನಗೆ ಹುಚ್ಚು ಬರಲಿಲ್ಲವಲ್ಲ ಅನ್ನೋದೆ ನನಗೆ ಕಷ್ಟ ಆಗಿರೋದು” ತುಂಬಿದ ಕಣ್ಣುಗಳೊಂದಿಗೆ ತಡವರಿಸದ ತುಟಿಗಳೊಂದಿಗೆ ಮೇರಿ ಕೇಳುತ್ತಿದ್ದಾಳೆ. “ಯಾಕೆ ಸಾರ್ ಸುಖಾಸುಮ್ಮನೆ ಅಂದು ನನ್ನ ರೋಗವನ್ನು ಗುಣಪಡಿಸಿದ್ದು..? ಇದಕ್ಕಿಂತಲೂ ನಾನು ಅಂದೆ ಸತ್ತುಹೋಗಿದ್ದರೆ ಚೆನ್ನಾಗಿತ್ತು. ಯಾಕೆ ಸಾರ್ ನನ್ನನ್ನು ಆ ಮಹಾರೋಗದಿಂದ ರಕ್ಷಿಸಿದ್ದು..?” [ನೋಡಿ: ಚಿಕಿತ್ಸೆಯಿಲ್ಲದ ರೋಗ, ಪುಟ 180]

ಸುನಂದ ಅನಾಥಾಶ್ರಮದಲ್ಲಿ ಬೆಳೆದ ಸುಂದರ ಕನ್ಯೆ. ಶ್ರೀಮಂತರ ಮನೆಯವರು ಅವಳನ್ನು ತಮ್ಮ ಹುಚ್ಚು ಮಗನಿಗೆ ತಂದುಕೊಂಡರು. ಅಲ್ಲಿ ಚಿತ್ರಹಿಂಸೆಗೆ ಗುರಿಯಾದಳು. ಹುಚ್ಚನ ತಮ್ಮಂದಿರು ಹಾಗೂ ಸೋದರ ಅಳಿಯನೂ ಸೇರಿ ಅವಳ ದೇಹವನ್ನು ಹರಿದು ತಿಂದರು. ಕಡೆಗೆ ಅವಳಿಗೆ ಸ್ತನಕ್ಯಾನ್ಸರ್ ಆಯಿತು. ಅವಳೀಗ ಉಳಿಯಲಾರಳು. ಅವಳ ಬಗ್ಗೆ ಹಿಂದೆ ಅವಳಿದ್ದ ಅನಾಥಾಲಯದ ಸಿಸ್ಟರ್ ಹೇಳಿದ್ದು; ’ಎಲ್ಲರನ್ನೂ ಸೋಲಿಸಿ ಇದೀಗ ಗೆದ್ದು ಬಂದ ಸಂತೋಷದಲ್ಲಿ ಅವಳು ಮಲಗಿದ್ದಾಳೆ ಡಾಕ್ಟರ್’; ಆ ಕಾಮದಹನ ಸನ್ನಿವೇಷ ’ಅಗ್ನಿಯೊಂದರ ಮೃದು ನಗು’ ಎಂಬಂತಿತ್ತು. [ನೋಡಿ: ಅಗ್ನಿ ನಗು]

* * *

ಹಾಗಾದರೆ ಪ್ರಸ್ತುತ ’ಜೀವನವೆನ್ನುವ ಅದ್ಭುತ’ ಎಂಬ ಈ ಕೃತಿ ಸಾಹಿತ್ಯದ ಯಾವ ವರ್ಗಕ್ಕೆ ಸೇರುತ್ತದೆ? ಈ ಕುರಿತು ಜಿಜ್ಞಾಸೆ ಏಕೆ? ಸಾಹಿತ್ಯ ಕೃತಿಯನ್ನು ಕೇಳಿ-ಓದಿ ಜನ ಬದುಕಬೇಕೆಂಬುದೇ ಪರಮ ಪ್ರಯೋಜನ. ’ಜೀವನವೆನ್ನುವ ಅದ್ಭುತ’ವನ್ನು ಓದುವುದರಿಂದ ಕ್ಯಾನ್ಸರ್ ಕಾಯಿಲೆ ಬಗ್ಗೆ ನಾವು ಒಳ್ಳೆ ತಿಳುವಳಿಕೆ ಪಡೆಯಬಹುದು. ಆಗ ಇದು ವೈದ್ಯ ವಿಜ್ಞಾನಕ್ಕೆ ಸೇರಿದ ಕೃತಿಯಾಗುತ್ತದೆ; ಮೂಢನಂಬಿಕೆಗಳ ವಿರುದ್ಧ ದನಿಎತ್ತಿ ವಿಶ್ಲೇಷಣೆ ಮಾಡಿರುವುದರಿಂದ ಇದು ಸಮಾಜ ವಿಜ್ಞಾನವೆನಿಸುತ್ತದೆ. ಪಾಪ-ಪುಣ್ಯ ಧರ್ಮ-ಕರ್ಮ ಮುಂತಾಗಿ ತಿಳುವಳಿಕೆ ಬರುವುದರಿಂದ ಇದೊಂದು ಆಧ್ಯಾತ್ಮಿಕ ಕೃತಿ ಎನ್ನಲೂಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಪುಸ್ತಕ ಕೈಗೆತ್ತಿಕೊಂಡರೆ ಮುಗಿಯುವವರೆಗೂ ಕೆಳಗಿಳಿಸುವ ಮನಸ್ಸಾಗುವುದೇ ಇಲ್ಲ. ಆದ್ದರಿಂದ ಇದೊಂದು ಉತ್ತಮ ಸಾಹಿತ್ಯ ಕೃತಿಯೂ ಹೌದು. ಒಟ್ಟಾರೆ ಇದು ಓದುಗರ ವೈಜ್ಞಾನಿಕ ಬುದ್ಧಿಯನ್ನೂ ವೈಚಾರಿಕ ಪ್ರಜ್ಞೆಯನ್ನೂ ವಿಸ್ತರಿಸುವಂತಿದೆ.

ಇಂಥದೊಂದು ಅಮೂಲ್ಯ ಅನುಭವ ಸಂಕಥನವು ಮೊದಲು ಬಂದದ್ದು ’ಮಲಯಾಳಂ’ ಭಾಷೆಯಲ್ಲಿ, 2016ರಲ್ಲಿ. ತಮ್ಮ ವೈದ್ಯಕೀಯ ವೃತ್ತಿ ಅನುಭವಗಳನ್ನು ಡಾ. ವಿ.ಪಿ. ಗಂಗಾಧರನ್ ಅವರೇ ಕೂತು ಬರೆದದ್ದಲ್ಲ. ಅವರು ಹೇಳುತ್ತಾ ಹೋದ ಅನುಭವಗಳನ್ನು ಪರಕಾಯ ಪ್ರವೇಶ ಪ್ರತಿಭೆಯುಳ್ಳ ಲೇಖಕ ಕೆ.ಎಸ್ ಅನಿಯನ್ ಹಾಗೇ ಅಕ್ಷರ ರೂಪಕ್ಕಿಳಿಸುವ ದೌತ್ಯ ಮಾಡಿದರು. ಸುರಿವ ಮುಂಗಾರು ಮಳೆಗೆ ಬಾಯಾರಿ ನಿಂತ ಧರೆಯಂತೆ ಡಾಕ್ಟರ್ ಹೇಳುತ್ತಿದ್ದ ಸ್ಮರಣಾನುಭವಗಳನ್ನು ಹೀರಿ ಬರೆದುಕೊಂಡರು. ಹಾಲುಣಿಸುವ ಹಸುವು ನಿಂತೆ ತೊರೆಗರೆಯುತ್ತದೆ ಮೈಮರೆತು; ಮೊಲೆಗೆ ಬಾಯಿಟ್ಟ ಕರು ನಿಂತೇ ಹಾಲುಣ್ಣುತ್ತದೆ. ಆ ಅಮೃತಪಾನಕ್ಕೆ ದಣಿವುಂಟೆ?

ಇಂಥ ಒಂದು ಅಮೂಲ್ಯ ಕೃತಿಯನ್ನು ಮಲಯಾಳಂ ಭಾಷೆಯಿಂದ ಶಿವಮೊಗ್ಗದ ಪ್ರಭಾಕರನ್ ಅವರು ಕನ್ನಡಕ್ಕಿಳಿಸಿದ್ದಾರೆ- ಇದೇ ಮೊದಲೆಂಬಂತೆ. ಡಾ. ವಿ. ಪಿ. ಗಂಗಾಧರನ್, ಕೆ. ಎಸ್. ಅನಿಯನ್, ಪ್ರಭಾಕರನ್ ಹಾಗೂ ಪ್ರಕಾಶಕ ಸೃಷ್ಟಿ ನಾಗೇಶ್ ಈ ಪ್ರತಿಯೊಬ್ಬರೂ ಅಭಿನಂದನಗೆ ಅರ್ಹರು. ಈ ಪುಸ್ತಕ ಓದುವುದರಿಂದ ’ಅಳುವುದಕ್ಕೂ ಬೇಕು ಹಕ್ಕು’ ಎಂಬ ಪರಮ ಸತ್ಯದ ಸಾಕ್ಷಾತ್ಕಾರ ಆಗದಿರದು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನ ಢಿಕ್ಕಿ: ಇಬ್ಬರು ಮೃತ್ಯು

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಪುತ್ರ ಕೈಸರ್‌ಗಂಜ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಣ್‌ ಭೂಷಣ್‌ ಸಿಂಗ್‌ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ...