Homeಮುಖಪುಟವಿವಿಗಳ ನೇಮಕಾತಿಗೆ ಅಂಟಿದ ಗುರು-ಶಿಷ್ಯ ಬಾಂಧವ್ಯದ ’ಕಳಂಕ’

ವಿವಿಗಳ ನೇಮಕಾತಿಗೆ ಅಂಟಿದ ಗುರು-ಶಿಷ್ಯ ಬಾಂಧವ್ಯದ ’ಕಳಂಕ’

- Advertisement -
- Advertisement -

“ಕಾಸರಗೋಡಿನಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆದ ಸಂದರ್ಶನ ಪಾರದರ್ಶಕವಾಗಿರಲಿಲ್ಲ. ಸಂದರ್ಶನ ಮಾಡಿದ ಪ್ರಾಧ್ಯಾಪಕರು ತಮ್ಮ ಶಿಷ್ಯರನ್ನೇ ಹುದ್ದೆಗಳಿಗೆ ಆಯ್ಕೆ ಮಾಡಿದ್ದಾರೆ. ನೇಮಕಾತಿಯಲ್ಲಿ ಲೋಪಗಳಾಗಿವೆ” ಎಂಬ ಆರೋಪಗಳನ್ನು ಹುದ್ದೆಯ ಆಕಾಂಕ್ಷಿಗಳಾಗಿದ್ದವರು ಮಾಡಿದ್ದಾರೆ.

“ಕಳೆದ ಸೆ.5 ಮತ್ತು 6ರಂದು ನಾಲ್ಕು (ಮೂರು ಅನ್ ರಿಸರ್ವ್ಡ್, ಒಂದು ಒಬಿಸಿ) ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸಂದರ್ಶನ ಮಾಡಲಾಗಿದೆ. ಸಂದರ್ಶಿಸುವ ವಿಷಯ ತಜ್ಞರ ಸಮಿತಿಯಲ್ಲಿ ಡಾ.ವಿಜಯಕುಮಾರಿ ಎಸ್. ಕರಿಕಲ್ (ಮೈಸೂರು ವಿಶ್ವವಿದ್ಯಾನಿಲಯ), ಡಾ.ನಿತ್ಯಾನಂದ ಶೆಟ್ಟಿ (ತುಮಕೂರು ವಿಶ್ವವಿದ್ಯಾಲಯ) ಮತ್ತು ಡಾ. ಗಂಗಾಧರ್ (ಬೆಂಗಳೂರು ವಿಶ್ವವಿದ್ಯಾಲಯ) ಅವರು ಇದ್ದರು. ಇವರು ನಡೆಸಿದ ಸಂದರ್ಶನ ಪಾರದರ್ಶಕವಾಗಿರಲಿಲ್ಲ. ಡಾ. ನಿತ್ಯಾನಂದ ಶೆಟ್ಟಿಯವರು ತಮ್ಮ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡುತ್ತಿರುವ ಗೋವಿಂದರಾಜು ಕೆ.ಎಂ. ಇವರನ್ನು ಅನ್ ರಿಸರ್ವ್ಡ್ ಮೆರಿಟ್‌ನಲ್ಲಿ ಮೂರನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಆದರೆ ಈ ಅಭ್ಯರ್ಥಿಗಿಂತ ಹೆಚ್ಚಿನ ಅರ್ಹತೆ ಹೊಂದಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಇದ್ದರು. ಅಂಥವರನ್ನು ಸಂಪೂರ್ಣ ಕಡೆಗಣಿಸಲಾಗಿದೆ” ಎಂದು ಆರೋಪಿಸಲಾಗಿದೆ.

“ಈ ಹಿಂದೆ ಇದೇ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಂಚಾಲಕರಾಗಿದ್ದ ಡಾ.ಶಿವರಾಮ ಶೆಟ್ಟಿ (ಈಗ ಭಾರತೀಯ ಭಾಷಾ ಸಂಸ್ಥಾನ-ಸಿಐಐಎಲ್‌ನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿದ್ದಾರೆ) ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮುಗಿಸಿರುವ ಎಚ್.ಸೌಮ್ಯ (ಅನ್ ರಿಸರ್ವ್ಡ್ ಮೆರಿಟ್‌ನಲ್ಲಿ ಮೊದಲನೇ ಅಭ್ಯರ್ಥಿ), ಈ ಹಿಂದೆ ಇದೇ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ಚೇತನ್ ಎಂ. (ಒಬಿಸಿ ಮೆರಿಟ್‌ನಲ್ಲಿ ಮೊದಲ ಅಭ್ಯರ್ಥಿ) ಆಯ್ಕೆಯಾಗಿದ್ದಾರೆ” ಎಂಬ ಟೀಕೆಗಳು ಬಂದಿವೆ.

ಡಾ. ನಿತ್ಯಾನಂದ ಶೆಟ್ಟಿ

“ಚೇತನ್ ಎಂ ಮತ್ತು ಗೋವಿಂದರಾಜು ಅವರಿಗೆ ಪಿಎಚ್‌ಡಿ ಇನ್ನೂ ಅವಾರ್ಡ್ ಆಗಿಲ್ಲ. ಆದರೂ ಅವರನ್ನು ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಹರೆಂದು ಬಿಂಬಿಸಿ ಆಯ್ಕೆ ಮಾಡಲಾಗಿದೆ. ಅದೇ ರೀತಿ ಆಯ್ಕೆ ಸಮಿತಿಯಲ್ಲಿದ್ದ ಮತ್ತೊಬ್ಬ ತಜ್ಞರಾದ ಡಾ.ಗಂಗಾಧರ್ ಅವರ ಪ್ರೀತಿಯ ವಿದ್ಯಾರ್ಥಿ ಮುನಿರಾಜ್ ಅವರು ಕಾಯ್ದಿರಿಸಿದ ಪಟ್ಟಿಯಲ್ಲಿ ಇರುವುದು ವಿಶೇಷವಾಗಿದೆ. ತಮ್ಮತಮ್ಮ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡುವ ಈ ಘನಕಾರ್ಯಕ್ಕೆ ಸಂದರ್ಶನದ ನಾಟಕವನ್ನೇಕೆ ಮಾಡಬೇಕಿತ್ತು?” ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ’ನಾನುಗೌರಿ.ಕಾಂ’ ವರದಿ ಮಾಡಿದ್ದಾಗ ಡಾ.ನಿತ್ಯಾನಂದ ಬಿ.ಶೆಟ್ಟಿಯವರನ್ನು ಸಂಪರ್ಕಿಸಿತ್ತು. ಪ್ರತಿಕ್ರಿಯೆ ನೀಡಿದ್ದ ಅವರು, “ಸಂದರ್ಶನ ಸಮಿತಿಯಲ್ಲಿ ಒಟ್ಟು 9 ಸದಸ್ಯರಿದ್ದರು. ಅಲ್ಲಿಯ ಕುಲಪತಿ ಪ್ರೊ.ಎಚ್.ವೆಂಕಟೇಶ್ವರಲು, ರಾಷ್ಟ್ರಪತಿಗಳ ನಾಮನಿರ್ದೇಶನ ಸದಸ್ಯರಾದ ಪ್ರೊ.ಸಂಪತ್ ಕುಮಾರ್ (ಫಿಲಾಸಫಿ ಪ್ರೊಫೆಸರ್, ಚೆನ್ನೈ), ನಾನು (ನಿತ್ಯಾನಂದ ಬಿ ಶೆಟ್ಟಿ, ತುಮಕೂರು ವಿವಿ), ಪ್ರೊ.ಬಿ.ಗಂಗಾಧರ (ಬೆಂಗಳೂರು ವಿವಿ), ಪ್ರೊ.ವಿಜಯಕುಮಾರಿ ಎಸ್.ಕರಿಕಲ್ (ಮೈಸೂರು ವಿವಿ) ಇವರಷ್ಟೇ ಅಲ್ಲದೆ ಕೇಂದ್ರೀಯ ವಿವಿ, ಕೇರಳದ ವಿವಿಧ ನಿಕಾಯಗಳ ಡೀನ್‌ಗಳಾದ ನಾಲ್ವರು ಹಿರಿಯ ಪ್ರಾಧ್ಯಾಪಕರೂ ಈ ಸಮಿತಿಯಲ್ಲಿ ಇದ್ದರು. ಕುಲಪತಿಗಳು ಈ ಆಯ್ಕೆ ಸಮಿತಿಯ ಅಧ್ಯಕ್ಷರು. ಇವರೆಲ್ಲರ ಸಂಪೂರ್ಣ ಸಹಮತದಿಂದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಆಗಿದೆಯೇ ಹೊರತು ಆರೋಪಿಸುವವರು ಹೇಳುವಂತೆ ’ಸ್ವ-ಜನ ಪಕ್ಷಪಾತ’ ಎಂಬುದು ಸಂಪೂರ್ಣ ಸುಳ್ಳು ಎಂದಿದ್ದರು.

ಮುಂದುವರಿದು, “ನಾಲ್ಕು ಹುದ್ದೆಗಳಿಗೆ ಇಬ್ಬರು ಪಿಎಚ್‌ಡಿ ಪದವಿ ಇರುವವರು ಮತ್ತು ಇಬ್ಬರು ಪಿಎಚ್‌ಡಿ ಮಾಡುತ್ತಿರುವವರು ಆಯ್ಕೆ ಆಗಿದ್ದಾರೆ. ಇದರಲ್ಲಿ ಯಾವ ನೀತಿ-ನಿಯಮಗಳ ಉಲ್ಲಂಘನೆಯೂ ಆಗಿಲ್ಲ. ಆಯ್ಕೆ ಆದ ನಾಲ್ವರಲ್ಲಿ ಇಬ್ಬರು ಸಾಮಾನ್ಯ ವರ್ಗದವರು (ಒಬ್ಬರು ಮಹಿಳೆ), ಚೇತನ್ ಎಂ ಎಂಬವರು ಬಿಲ್ಲವ ಜಾತಿಗೆ ಸೇರಿದ ಹಿಂದುಳಿದ ಸಮುದಾಯದವರಾಗಿದ್ದು, ಗೋವಿಂದರಾಜು ಕೆ.ಎಂ. ಮಾದಿಗ ಸಮುದಾಯಕ್ಕೆ ಸೇರಿದ್ದಾರೆ” ಎಂದು ತಿಳಿಸಿದ್ದರು.

ಸಂದರ್ಶನ ಸಮಿತಿಯಲ್ಲಿದ್ದ ಪ್ರೊ.ಗಂಗಾಧರ್ ಅವರೂ ಇದನ್ನೇ ಹೇಳುತ್ತಿದ್ದಾರೆ. “ಪಿಎಚ್‌ಡಿ ಮಾಡಿದ್ದಾರೋ ಇಲ್ಲವೋ ಎಂಬುದು ನಮಗೆ ಬಿಟ್ಟ ವಿಚಾರವಲ್ಲ. ಮೊದಲ ಹಂತದಲ್ಲಿಯೇ ಅದನ್ನು ವಿವಿ ನಿರ್ಧರಿಸುತ್ತದೆ. ನಮ್ಮದು ಏನಿದ್ದರೂ ಸಂದರ್ಶನ ನಡೆಸುವುದಷ್ಟೇ. ಇಡೀ ಸಂದರ್ಶನ ವಿಡಿಯೋ ಮಾಡಿಕೊಳ್ಳಲಾಗಿದೆ. ಎಲ್ಲವೂ ಪಾರದರ್ಶಕವಾಗಿದೆ. ಪರೀಕ್ಷಿಸಿಕೊಳ್ಳಬಹುದು” ಎಂದು ಆಹ್ವಾನಿಸಿದರು.

ಹೀಗೆ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿರುವ ನೇಮಕಾತಿ ವಿವಾದ ಹೊಸ ಚರ್ಚೆಗೆ ಅವಕಾಶ ನೀಡಿದೆ. ವಿಶ್ವವಿದ್ಯಾನಿಲಯಗಳಲ್ಲಿ ಆಗುವ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತಗಳು ನಡೆದಿರುವ ಆರೋಪಗಳು ಬಂದಿರುವುದು ಇದೇ ಮೊದಲೂ ಅಲ್ಲ, ಕೊನೆಯೂ ಆಗಿರುವುದಿಲ್ಲ. ಪ್ರತಿ ವಿಶ್ವವಿದ್ಯಾನಿಲಯದ ಇತಿಹಾಸ ಕೆದಕಿ ನೋಡಿದರೆ ’ಸ್ವಜನ ಪಕ್ಷಪಾತ’ ಎಂಬ ಹಗರಣ ನಮ್ಮ ಕಣ್ಣ ಮುಂದೆ ಬಿಚ್ಚಿಕೊಳ್ಳುವುದು ಸಹಜ.

“ತಮ್ಮ ಶಿಷ್ಯಪಡೆಯನ್ನೇ ನೇಮಕ ಮಾಡುವ ಹಗರಣ ವಿವಿಗಳಲ್ಲಿ ಈ ಹಿಂದಿನಿಂದಲೂ ನಡೆಯುತ್ತಾ ಬಂದಿದೆ” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಮೈಸೂರು ವಿವಿ ಪ್ರಾಧ್ಯಾಪಕರೊಬ್ಬರು. “ಇಂಥದ್ದೇ ಆರೋಪಕ್ಕೆ ಸಂಬಂಧಿಸಿದಂತೆ ರಂಗವಿಠಲಾಚಾರ್ ಸಮಿತಿ ರಚನೆಯಾಗಿತ್ತು. ನೇಮಕಾತಿಯಲ್ಲಿ ಆಗಿರುವ ಲೋಪಗಳನ್ನು ಸಮಿತಿ ಗುರುತಿಸಿತ್ತು” ಎಂದು ತಿಳಿಸಿದರು.

ಮುಂದುವರಿದು, “ದೇ.ಜವರೇಗೌಡ ಅವರು ಮೈಸೂರು ವಿವಿಯ ಕುಲಪತಿಯಾಗಿದ್ದಾಗ ತಮ್ಮ ಶಿಷ್ಯರನ್ನೇ ನೇಮಕ ಮಾಡಿದ ಆರೋಪ ಎದುರಿಸಿದ್ದರು. ಶಶಿಧರ್ ಪ್ರಸಾದ್, ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿಯಾಗಿದ್ದಾಗಲೂ ಇದೇ ರೀತಿಯ ಆರೋಪಗಳು ದೊಡ್ಡಮಟ್ಟದಲ್ಲಿ ಕೇಳಿಬಂದಿದ್ದವು. ಆಯ್ಕೆಯಾದ ಅಭ್ಯರ್ಥಿಗೆ ಪಿಎಚ್‌ಡಿ ಪದವಿ ಇಲ್ಲದಿದ್ದಾಗ ಎಕ್ಸ್‌ಟ್ರಾಡಿನರಿ, ಔಟ್‌ಸ್ಟಾಂಡಿಂಗ್ ಫರ್‌ಫಾಮೆನ್ಸ್ ಇತ್ಯಾದಿ ಕಾರಣಗಳನ್ನು ನೀಡಲಾಗಿತ್ತು” ಎಂದು ತಾವು ನೋಡಿದ ಹಗರಣಗಳನ್ನು ಹಂಚಿಕೊಂಡರು.

ಕೇರಳ ವಿವಿಯ ವಿದ್ಯಮಾನ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ತಮ್ಮ ಪಿಎಚ್‌ಡಿ ವಿದ್ಯಾರ್ಥಿಗಳು ಸಂದರ್ಶನಕ್ಕೆ ಬಂದಿದ್ದಾಗ, ಪ್ರಾಧ್ಯಾಪಕರು ಪ್ಯಾನಲ್‌ನಲ್ಲಿ ಕೂರುವುದು ಎಷ್ಟು ಸರಿ? ನೈತಿಕತೆಯಾಚೆಗೆ ಯಾವುದಾದರೂ ನಿಯಮಗಳ ಅಗತ್ಯತೆ ಇದೆಯೇ? ನೇಮಕಾತಿಯಲ್ಲಿ ಯುಜಿಸಿ ನಿಯಮಾವಳಿಗಳು ಉಲ್ಲಂಘನೆಯಾಗುತ್ತಿವೆಯೇ? ನೇಮಕಾತಿ ನಿಯಮಾವಳಿಗಳಲ್ಲಿ ಯಾವ ಬದಲಾವಣೆಗಳನ್ನು ತರಬೇಕಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ಏನು ಬದಲಾವಣೆ ಬೇಕಿದೆ?

ಈಗ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ’ನ್ಯಾಯಪಥ’ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಹಿರಿಯ ಸಾಹಿತಿ, ಪ್ರೊ.ಬರಗೂರು ರಾಮಚಂದ್ರಪ್ಪ ಅವರು, “ಸಂದರ್ಶನಕ್ಕೆ ಹೋದಂತಹ ಸಂದರ್ಭದಲ್ಲಿ ನನ್ನ ವಿದ್ಯಾರ್ಥಿಗಳೇ ಸಾಕಷ್ಟು ಮಂದಿ ಬಂದಿರುವ ಅನೇಕ ಸಂದರ್ಭಗಳನ್ನು ನೋಡಿದ್ದೇನೆ. ನಮ್ಮ ವೃತ್ತಿ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ನೋಡಿರುತ್ತೇವೆ. ಹೀಗಾಗಿ ತಮ್ಮ ಶಿಷ್ಯರಿದ್ದಾಗ ಸಂದರ್ಶನದಿಂದ ಹಿಂದೆ ಸರಿಯಲು ಸಾಧ್ಯವಾಗದು. ಆದರೆ ಸಂದರ್ಶನಕ್ಕೆ ಕುಳಿತ ಅಭ್ಯರ್ಥಿಗೆ ಪಿಎಚ್‌ಡಿ ಮಾರ್ಗದರ್ಶಕನಾಗಿದ್ದಾಗ ಹೊರಗಡೆ ನಡೆಯುವುದು ಸೂಕ್ತ” ಎಂದು ಅಭಿಪ್ರಾಯಪಟ್ಟರು.

ಪ್ರೊ.ಬರಗೂರು ರಾಮಚಂದ್ರಪ್ಪ

“ಮೊದಲಿನಿಂದಲೂ ಈ ಆರೋಪಗಳು ಬರುತ್ತಲೇ ಇವೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷಗಳಿದ್ದರೆ ಮಾತ್ರ ನಾವು ಪ್ರಶ್ನೆ ಮಾಡಬಹುದು. ನಮ್ಮ ಪಿಎಚ್‌ಡಿ ವಿದ್ಯಾರ್ಥಿಗಳು ಸಂದರ್ಶನದಲ್ಲಿದ್ದಾಗ ನಾವು ಪ್ಯಾನೆಲ್‌ನಲ್ಲಿ ಇರಬೇಕಾ, ಇರಬಾರದಾ ಎಂಬುದು ನೈತಿಕ ಪ್ರಶ್ನೆ. ಇದಕ್ಕೆ ಸಂದರ್ಶನ ನಡೆಸುವವರೇ ಉತ್ತರ ಕಂಡುಕೊಳ್ಳಬೇಕು. ನನ್ನದೇ ಒಂದು ಅನುಭವ ಹೇಳುವೆ. ದೂರದರ್ಶನ ಆಯ್ಕೆ ಸಮಿತಿಗೆ ನನ್ನನ್ನು ನೇಮಿಸಿದ್ದರು. ನನ್ನ ದೂರದ ಸಂಬಂಧಿಕರೊಬ್ಬರು ಸಂದರ್ಶನಕ್ಕೆ ಬರುತ್ತಿದ್ದಾರೆಂದು ತಿಳಿಯಿತು. ನಾನು ಸಮಿತಿಯಲ್ಲಿ ಇರುವುದಿಲ್ಲ ಎಂದು ಹೊರಬಂದೆ. ಇದು ನಾವೇ ತೆಗೆದುಕೊಳ್ಳಬೇಕಾದ ನೈತಿಕ ನಿರ್ಧಾರ” ಎಂದು ತಿಳಿಸಿದರು.

ಮುಂದುವರಿದು, “ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಆಯ್ಕೆ ವಿಚಾರದಲ್ಲಿಯೂ ಹೀಗೆ ಆಗುತ್ತಿತ್ತು. ತಮ್ಮ ಸಂಬಂಧಿಕರ ಸಿನಿಮಾಗಳಿದ್ದರೆ ಆಯ್ಕೆ ಪ್ರಕ್ರಿಯೆಯಲ್ಲಿ ಅಂತಹ ಜ್ಯೂರಿಗಳು ಇರಬಾರದು ಎಂದು ಕೋರ್ಟ್ ಮೆಟ್ಟಿಲೇರಿದೆ. ಈಗ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಕೇರಳ ಕೇಂದ್ರೀಯ ವಿವಿಯಲ್ಲಿ ಸಂದರ್ಶನ ನಡೆಸಿದ ರೀತಿ ಹೇಗಿತ್ತು, ಆಕಾಂಕ್ಷಿಗಳು ಹೇಗೆ ಉತ್ತರಿಸಿದರು ಎಂಬುದೆಲ್ಲ ಸಾಪೇಕ್ಷ ವಿಚಾರಗಳು. ಆರೋಪ ಮಾಡಬಹುದೇ ಹೊರತು ಸಾಬೀತು ಮಾಡುವುದು ಕಷ್ಟ. ಈ ರೀತಿಯ ಪ್ರಶ್ನೆಗಳು ಆಯ್ಕೆಯಾಗದಿದ್ದಾಗ ಮಾತ್ರ ಬರುತ್ತವೆ. ಹೀಗಾಗಿ ನೇಮಕಾತಿ ನಿಯಮಾವಳಿಗಳ ಬದಲಾವಣೆಯ ಬಗ್ಗೆ ಚರ್ಚೆಯಾಗಬೇಕಿದೆ. ಆಯ್ಕೆ ಸಮಿತಿ ಹೇಗಿರಬೇಕು ಎಂಬ ಹೊಸ ನಿಯಮ ರೂಪಿಸಿಕೊಳ್ಳಬೇಕಿದೆ” ಎಂದು ಹೇಳಿದರು.

ಭಾಷಾತಜ್ಞರು ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ.ರಂಗನಾಥ್ ಕಂಟನಕುಂಟೆ ಪ್ರತಿಕ್ರಿಯಿಸಿ, “ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಇಲ್ಲಿಯವರೆಗೆ ಆಗಿರುವ ನೇಮಕಾತಿಗಳನ್ನು ನೋಡಿದರೆ ತಮಗೆ ಬೇಕಾದವರನ್ನು, ತಮ್ಮ ಆಪ್ತರನ್ನು ನೇಮಕ ಮಾಡಿಕೊಂಡ ಇತಿಹಾಸದ ದೊಡ್ಡದಿರುವುದನ್ನು ಗಮನಿಸಬಹುದು. ವಿಶ್ವವಿದ್ಯಾನಿಲಯಗಳಲ್ಲಿನ ಹುದ್ದೆಗಳ ಮೇಲೆ ಎಲ್ಲರ ಕಣ್ಣು ಇದ್ದೇ ಇರುತ್ತವೆ. ಸಾಮಾನ್ಯವಾಗಿ ಪ್ರಭಾವಗಳು ಇಲ್ಲಿ ನಡೆಯುತ್ತವೆ” ಎಂದರು.

“ಪ್ರತಿಭಾವಂತ ವಿದ್ಯಾರ್ಥಿ ತಮ್ಮ ಶಿಷ್ಯನೇ ಆಗಿದ್ದಾಗ ಆಯ್ಕೆ ಮಾಡಬಾರದು ಎನ್ನಲಾಗದು. ಆದರೆ ಕೇರಳ ಕೇಂದ್ರೀಯ ವಿವಿ ವಿವಾದವನ್ನು ಪ್ರಶ್ನಿಸಲು ಅವಕಾಶವಿದೆ. ಇಲ್ಲಿ ಆಯ್ಕೆಯಾದವರಿಗೆ ಪಿಎಚ್‌ಡಿ ಪದವಿ ಇಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಪಿಎಚ್‌ಡಿ ಇದ್ದು, ಒಳ್ಳೆಯ ಪಾಯಿಂಟ್ಸ್ ಪಡೆದಿದ್ದಾಗಲೂ ಆಯ್ಕೆಯಿಂದ ಕೈಬಿಟ್ಟಿದ್ದರೆ ತಪ್ಪು. ಯುಜಿಸಿ ನಿಯಮಾವಳಿಗಳ ಪ್ರಕಾರ ಇದನ್ನು ಪ್ರಶ್ನಿಸಲು ಅವಕಾಶವಿದೆ” ಎಂದು ವಿವರಿಸಿದರು.

“ಅರ್ಜಿ ಹಾಕಿದವರಲ್ಲಿ ಒಳ್ಳೆಯ ಅಂಕಗಳನ್ನು ಪಡೆದವರಿದ್ದು, ಅವರನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಕೈಬಿಟ್ಟಿದ್ದರೆ ಪ್ರಶ್ನೆ ಮಾಡಬಹುದು. ಆದರೆ ಶಿಷ್ಯರನ್ನೇ ಏಕೆ ಆಯ್ಕೆ ಮಾಡಿದ್ದೀರಿ ಎಂದು ಪ್ರಶ್ನಿಸಲು ಸಾಧ್ಯವಿಲ್ಲ. ನೈತಿಕ ಪ್ರಶ್ನೆ ಎಂಬುದು ಚರ್ಚೆಗೆ ಮಾತ್ರ ಚೆಂದ. ನೇಮಕಾತಿಯ ನಿಯಮಾವಳಿಗಳ ಕುರಿತು ಈ ವಿಚಾರದ ಬಗ್ಗೆ ಯೋಚಿಸಬೇಕು. ಸಂದರ್ಶನ ನಡೆಸಿದವರು ಗುರುಗಳಾಗಿದ್ದರೆ ಮಾತ್ರ ಅಕ್ರಮ ನಡೆಯುತ್ತದೆ ಎನ್ನಲು ಸಾಧ್ಯವೆ?” ಎಂದು ಪ್ರಶ್ನಿಸಿದರು.

ಡಾ.ರಂಗನಾಥ್ ಕಂಟನಕುಂಟೆ

“ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಆತ ಶೈಕ್ಷಣಿಕವಾಗಿ ಯಾವ ಬದಲಾವಣೆಗಳನ್ನು ತರಬಲ್ಲ ಎಂಬ ನೈತಿಕ ಎಚ್ಚರ ಇರಬೇಕಾಗುತ್ತದೆ. ಉದಾಹರಣೆಗೆ ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಜಿ.ಎಸ್.ಶಿವರುದ್ರಪ್ಪನವರು ಚೇರ್‌ಮನ್ ಆಗಿದ್ದರು. ಡಿ.ಆರ್.ನಾಗರಾಜ್, ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ- ಈ ರೀತಿಯ ಪ್ರತಿಭೆಗಳನ್ನು ಹುಡುಕಿಹುಡುಕಿ ಕರೆತಂದು ಕಾಯಂಗೊಳಿಸಿದರು. ಶಿವರುದ್ರಪ್ಪನವರು ನೇಮಕ ಮಾಡಿಕೊಂಡ ಈ ವಿದ್ವಾಂಸರು ಸಮಾಜವನ್ನು ಪ್ರಭಾವಿಸಿದರು. ಹೊಸ ಜ್ಞಾನವನ್ನು ಪ್ರವಹಿಸಿದರು. ಇವರ ನೇಮಕಾತಿಯ ವಿಚಾರದಲ್ಲಿಯೂ ತಕರಾರುಗಳು ಅಂದು ಬಂದಿದ್ದವು. ಆದರೆ ನೇಮಕವಾದ ಬಳಿಕ ಸರಿಯಾಗಿ ಕೆಲಸ ಮಾಡಿದರೆ ಈ ಎಲ್ಲ ಪ್ರಶ್ನೆಗಳು ಮುಚ್ಚಿಹೋಗುತ್ತವೆ” ಎಂದು ಅಭಿಪ್ರಾಯಪಟ್ಟರು.

“ಸಂದರ್ಶನಕ್ಕೆ ಯಾರು ಬರುತ್ತಾರೆಂಬ ಮಾಹಿತಿ ಸಂದರ್ಶಕರಿಗೆ ಗೊತ್ತಿರುತ್ತದೆಯೇ? ಇಲ್ಲಿ ನಿಮ್ಮ ವಿದ್ಯಾರ್ಥಿಗಳಿದ್ದಾರೆ ಎಂಬುದನ್ನು ಸಂದರ್ಶಕರಿಗೆ ತಿಳಿಸುವುದಾದರೂ ಹೇಗೆ?- ಹೀಗಾಗಿ ಸಂದರ್ಶನದ ಮಾದರಿಯ ಬಗ್ಗೆ ಹೊಸ ನಿಯಮಗಳನ್ನು ರೂಪಿಸಬೇಕಿದೆ” ಎಂದು ಆಶಿಸಿದರು.

ಗುಲ್ಬರ್ಗ ಕೇಂದ್ರೀಯ ವಿವಿಯಲ್ಲಿ ಇದೇ ರೀತಿಯ ನೇಮಕಾತಿ ಅಕ್ರಮ ನಡೆದಿರುವ ಆಕ್ಷೇಪಗಳು ಬಂದಿದ್ದವು. ಲೇಖಕ, ಚಿಂತಕ ಅರುಣ್ ಜೋಳದಕೂಡ್ಲಿಗಿಯವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣ ನಿಧಾನಗತಿಯಲ್ಲಿ ನಡೆಯುತ್ತಲೇ ಇದೆ. ’ಪತ್ರಿಕೆ’ಯ ಜೊತೆ ಮಾತನಾಡಿದ ಅರುಣ್ ಕೇಂದ್ರೀಯ ವಿವಿ ನೇಮಕಾತಿಯ ಪ್ರಕ್ರಿಯೆಗಳನ್ನು ವಿಶ್ಲೇಷಿಸಿದರು.

“ಕೇಂದ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆನ್‌ಲೈನ್ ಅಪ್ಲಿಕೇಷನ್ ಹಾಕುವಾಗ ನೂರು ಪಾಯಿಂಟ್ಸ್ ಇರುತ್ತವೆ. ಅಭ್ಯರ್ಥಿ ಸಲ್ಲಿಸುವ ದಾಖಲೆ ಮತ್ತು ವಿವರಣೆಗಳ ಅನ್ವಯ ಪಾಯಿಂಟ್ಸ್ ನೀಡಲಾಗುತ್ತದೆ. ಬಳಿಕ ಅಭ್ಯರ್ಥಿಯ ದಾಖಲಾತಿಗಳನ್ನು ವೆರಿಫೈ ಮಾಡುತ್ತಾರೆ. ಪಿಎಚ್‌ಡಿಗೆ ಇಂತಿಷ್ಟು ಅಂಕಗಳನ್ನು ನೀಡಿರುತ್ತಾರೆ.

ಅರುಣ್ ಜೋಳದಕೂಡ್ಲಿಗಿ

ಕೇರಳ ಕೇಂದ್ರೀಯ ವಿವಿಯ ನೇಮಕಾತಿ ಹೇಗೆ ನಡೆದಿದೆ ಎಂದು ಪರಿಶೀಲಿಸಬೇಕಿದೆ. ಆದರೆ ಇಲ್ಲಿ ಪಿಎಚ್‌ಡಿ ಮಾಡಿದವರನ್ನು, ಪಿಎಚ್‌ಡಿ ಮಾಡದಿರುವವರು ಹೇಗೆ ಓವರ್ ಟೇಕ್ ಮಾಡಿದ್ದಾರೆ ಎಂದು ಪರಿಶೀಲಿಸಬೇಕು. ಆನ್‌ಲೈನ್ ಅಪ್ಲಿಕೇಷನ್ ಹಾಕುವ ವೇಳೆ ಬಂದಿರುವ ಪಾಯಿಂಟ್‌ಗಳನ್ನು ಆಯ್ಕೆಯಾದವರು ಹೇಗೆ ಓವರ್ ಟೇಕ್ ಮಾಡಿದ್ದಾರೆ ಎಂಬುದು ತಿಳಿಯಬೇಕು” ಎಂದು ಒತ್ತಾಯಿಸಿದರು.

“ಯುಜಿಸಿ ನಿಯಮದ ಪ್ರಕಾರ ಅಪ್ಲಿಕೇಷನ್ ಹಾಕಿದವರ ಪ್ರಕಟಣೆ ನೀಡಬೇಕು. ಅಬ್‌ಜೆಕ್ಷನ್‌ಗೆ ಅವಕಾಶವನ್ನು ಒದಗಿಸಬೇಕು. ಇದೆಲ್ಲವನ್ನೂ ಮಾಡದೆ ನೇಮಕಾತಿ ನಡೆದಿದ್ದರೆ ಪಾರದರ್ಶಕವಾಗಿಲ್ಲ ಎನ್ನಬೇಕಾಗುತ್ತದೆ. ಆನ್‌ಲೈನ್ ಅಪ್ಲಿಕೇಷನ್ ಹಾಕಿದಾಗ ಬಂದ ಪಾಯಿಂಟ್‌ಗಳು ಡಾಕ್ಯುಮೆಂಟ್ ವೆರಿಫಿಕೇಷನ್ ನಂತರ ಎಷ್ಟು ಉಳಿದವೆಂದು ಗಮನಿಸಬೇಕು. ಈ ಮಾಹಿತಿ ನಮಗೆ ಲಭ್ಯವಾಗಿ, ಸಂದರ್ಶನದಲ್ಲಿ ಅಂಕಗಳು ತೀವ್ರ ಏರುಪೇರಾದರೆ ಅನುಮಾನಕ್ಕೆ ಅವಕಾಶವಿರುತ್ತದೆ” ಎಂದು ವಿವರಿಸಿದರು.


ಇದನ್ನೂ ಓದಿ: ಕೇರಳ ಕೇಂದ್ರಿಯ ವಿವಿ ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ತಮ್ಮ ಶಿಷ್ಯರನ್ನೇ ಆಯ್ಕೆ ಮಾಡಿದ ಸಂದರ್ಶಕರು: ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...