ನಿವೇಶನವಿಲ್ಲದೇ 30 ವರ್ಷದಿಂದ ಗುಹೆಯಲ್ಲಿಯೇ ವಾಸಿಸುತ್ತಿರುವ ಕುಟುಂಬ: ಮಧುಗಿರಿಯಲ್ಲೊಂದು ಅಮಾನವೀಯ ಪ್ರಕರಣ ಬೆಳಕಿಗೆ

0

ತುಮಕೂರು ಜಿಲ್ಲೆಯ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾದ ಮಧುಗಿರಿಯಲ್ಲಿ ಒಂದು ಕುಟುಂಬ ವಸತಿ ವಂಚಿತರಾಗಿ ಮೂವತ್ತೊಂದು ವರ್ಷಗಳಿಂದ ಗುಹೆಯಲ್ಲಿ ವಾಸ ಮಾಡುತ್ತಿರುವಂತಹ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ನಮ್ಮ ಸರ್ಕಾರಗಳು, ಅಧಿಕಾರಿಗಳು ಬಡವರನ್ನು ಯಾವ ರೀತಿ ನಿರ್ಲಕ್ಷ್ಯ ಮಾಡುತ್ತಿವೆ ಎನ್ನುವುದಕ್ಕೆ ಈ ಕುಟುಂಬದ ಪಾಡು ಸಾಕ್ಷಿಯಾಗಿದೆ.

ಮಧುಗಿರಿ ತಾಲ್ಲೂಕು ಬಿಜವರ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಂಬತ್ತನಹಳ್ಳಿ ಗ್ರಾಮದಿಂದ ಒಂದು ಕಿ.ಮೀ ದೂರದಲ್ಲಿ ತಿಮ್ಮಣ್ಣ ಮತ್ತು ನಾಗಮ್ಮ ಎಂಬ ದಂಪತಿಗಳು ಅಂಬೆಸೆಯುವ ಗುಡ್ಡದಲ್ಲಿ ಹಲವು ವರ್ಷಗಳಿಂದ ಭಯ ಭೀತಿಯಲ್ಲಿ ವಾಸ ಮಾಡುತ್ತಿದ್ದಾರೆ. ಮಧುಗಿರಿ ಮತ್ತು ಕೊರಟಗೆರೆ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚಿನ ಕರಡಿದಾಳಿಗಳು ನಡೆದಿದ್ದು ಅನೇಕ ಜನರ ಜೀವಹಾನಿಯಾಗಿದೆ. ಇಂತಹ ಪ್ರದೇಶದಲ್ಲಿ ಒಂದು ಕುಟುಂಬ ಒಂಟಿಯಾಗಿ ಗುಹೆಯಲ್ಲಿ ವಾಸ ಮಾಡುತ್ತಿರುವ ಘಟನೆ ಇಡೀ ನಾಗರಿಕ ಸಮಾಜಕ್ಕೆ ತಕ್ಕುದ್ದಲ್ಲ.

ವಿಡಿಯೋ ನೋಡಿ:

ಮೂಲತಃ ಇದೇ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಜಿ.ಡಿ.ಪಾಳ್ಯದವರಾದ ಈ ದಂಪತಿಗಳು ಮದುವೆಯಾದ ಹೊಸತರಲ್ಲೇ ನೆಲೆಯಿಲ್ಲದೆ ಊರು ಊರು ಸುತ್ತುತ್ತಾ ಕಂಬತ್ತನಹಳ್ಳಿಗೆ ಬಂದು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ. ಆದರೆ ಕೆಲವು ಸ್ಥಳೀಯರ ಕಿರಿ-ಕಿರಿಯಿಂದ ಬೇಸತ್ತು ಈ ಗುಡದ್ದ ಕಡೆ ಮುಖ ಮಾಡಿದ್ದು ಈ ಗುಹೆಯಲ್ಲಿ ಮೊದಲಿದ್ದ ಸಾಧು ಶಂಕರಪ್ಪನವರ ಹತ್ತಿರ ಆಶ್ರಯ ಪಡೆದು ಜೀವನ ಸಾಗಿಸಿದ್ದಾರೆ. ಶಂಕರಪ್ಪ ತೀರಿಕೊಂಡ ಬಳಿಕ ಇಲ್ಲೆ ಗುಹೆ ಒಳಗೆ ತಮ್ಮ ಜೀವನವನ್ನು ಸಾಗಿಸುತ್ತಾ ಬಂದಿದ್ದಾರೆ.

ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಐದು ಜನ ಗಂಡುಮಕ್ಕಳಿದ್ದಾರೆ. ಈ ಹಿಂದೆಯೇ ಹೇಗೋ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಆದರೆ ಐದು ಜನ ಗಂಡು ಮಕ್ಕಳಿಗೆ ಮದುವೆ ಮಾಡಲು ಯಾರು ಹೆಣ್ಣು ಕೊಡುತ್ತಿಲ್ಲ. “ಊರಿನಿಂದ ದೂರ ಇದ್ದೀರಿ ಮತ್ತು ಗುಹೆಯಲ್ಲಿ ವಾಸಿಸುತ್ತಿದ್ದೀರಿ, ನಿಮ್ಮ ಮಕ್ಕಳಿಗೆ ನಾವು ಹೇಗೆ ಹೆಣ್ಣು ಕೊಡುವುದು ಎಂದು ಎಲ್ಲರೂ ಕೇಳುತ್ತಾರೆ. ನಿಮ್ಮ ಮಕ್ಕಳಿಗೆ ಮದುವೆಯೇ ಆಗುವುದಿಲ್ಲವೆಂದು ಹೀಯಾಳಿಸುತ್ತಿದ್ಧಾರೆ” ಎಂದು ದಂಪತಿಗಳು ತಮ್ಮ ಗೋಳು ತೋಡಿಕೊಂಡಿದ್ದಾರೆ.

ಇವರು ನಿವೇಶನ ಮತ್ತು ಮನೆಯನ್ನು ಪಡೆಯಲು ಕಂಡ ಕಂಡವರ ಬಳಿ ಬಹಳ ವರ್ಷಗಳಿಂದ ತಿರುಗಿದರೂ ಸಹ ಪ್ರಯೋಜನವಾಗಿಲ್ಲ. ಇಪ್ಪತ್ತು ವರ್ಷಗಳ ಹಿಂದೆ ಆಶ್ರಯ ಮನೆ ಯೋಜನೆಯಡಿಯಲ್ಲಿ ಮನೆ ಮಂಜೂರಾಗಿತ್ತು ಆದರೆ ಮನೆ ಕಟ್ಟಲು ನಿವೇಶನವೇ ಇಲ್ಲ! ಸರ್ಕಾರಕ್ಕೆ ಎಷ್ಟು ಬೇಡಿಕೊಂಡರು ಸಹ ಇವರಿಗೆ ಒಂದು ನಿವೇಶನ ಕೊಡುವಷ್ಟು ಗತಿ ಇಲ್ಲ ಸರ್ಕಾರಕ್ಕೆ.

ಇವರ ಇಬ್ಬರು ಮಕ್ಕಳು ಬೆಂಗಳೂರಿಗೆ ಕೂಲಿ ಕೆಲಸ ಹುಡುಕಿಕೊಂಡು ಹೋಗಿದ್ದು, ಉಳಿದ ಮೂರು ಜನ ಊರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಹೇಗೋ ಕಷ್ಟಪಟ್ಟು ಆಧಾರ್, ರೇಷನ್ ಕಾರ್ಡ್, ಗುರುತಿನ ಚೀಟಿ ಮಾಡಿಸಿಕೊಂಡಿದ್ದಾರೆ. ಆದರೆ ಈ ಗುಹೆಯ ಕಡೆ ಮೂಲಭೂತ ಸೌಕರ್ಯಗಳೆಂಬುದು ಕನಸಿನ ಮಾತಾಗಿದೆ.

ಇಷ್ಟು ದಿನ ಗಾಢ ನಿದ್ದೆಯಲ್ಲಿದ್ದ ತಾಲ್ಲೂಕು ಅಧಿಕಾರಿಗಳು ಇಂದು ದಿನಪತ್ರಿಕೆಗಳಲ್ಲಿ ಈ ವಿಷಯ ದೊಡ್ಡ ಸುದ್ದಿಯಾದ ನಂತರವಷ್ಟೇ ತಹಶೀಲ್ದಾರ್‌ ಇಂದು ಆ ಗುಹೆ ಕಡೆ ಮುಖ ಮಾಡಿದ್ದಾರೆ. ಜನಪ್ರತಿನಿಧಿಗಳು ಪತ್ತೆಯೇ ಇಲ್ಲ.

ಮಧುಗಿರಿಯ ಜನಪ್ರತಿನಿಧಿಗಳು ಪುಡಾರಿ ರಾಜಕಾರಣ ಮಾಡುವುದು ಮತ್ತು ಕಾಂಟ್ರಾಕ್ಟರ್‌ಗಳ ಹತ್ತಿರ ಕಮೀಶನ್ ಹೊಡೆಯುವುದೆ ತಮ್ಮ ಜೀವಮಾನದ ಸಾಧನೆ ಎಂಬುವುದನ್ನು ಬಿಟ್ಟು ಪಕ್ಷಾತೀತವಾಗಿ ಜನರ ಸಮಸ್ಯೆಗಳ ಕಡೆ ಗಮನ ಹರಿಸಬೇಕಿದೆ. ಈ ಪರಿಸ್ಥಿತಿ ಮಧುಗಿರಿ ತಾಲ್ಲೂಕಿನ ಮಾತ್ರವಿಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ರೀತಿಯ ದಯನೀಯ ಸ್ಥಿತಿಯಲ್ಲಿ ಲಕ್ಷಾಂತರ ಕುಟುಂಬಗಳು ದಿನದೂಡುತ್ತಿದ್ದಾರೆ.

ಅದಕ್ಕಾಗಿಯೇ ಹಿರಿಯ ಸ್ವತಂತ್ರ್ಯ ಹೋರಾಟಗಾರರಾದ ಹೆಚ್.ಎಸ್ ದೊರೆಸ್ವಾಮಿಯವರ ನೇತೃತ್ವದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯೂ ಮೂರು ವರ್ಷಗಳಿಂದ ಜನರಿಗೆ ತುಂಡುಭೂಮಿ ಸಿಗಬೇಕೆಂದು ಹೋರಾಟ ನಡೆಸಿದ್ದಾರೆ. ನೂರಾರು ಹೋರಾಟಗಳನ್ನು ನಡೆಸುತ್ತಿದ್ದಾರೆ. ಹಾಗಾಗಿ ಸರ್ಕಾರ ಈಗಲಾದರೂ ಎಚ್ಚೆತ್ತು ಈ ಕುಟುಂಬಕ್ಕೆ ನೀವೇಶನ ನೀಡಿ ಮನೆಯನ್ನು ಕಟ್ಟಿಸಿಕೊಡಬೇಕು. ಅದೇ ರೀತಿ ರಾಜ್ಯದಲ್ಲಿರುವ ಇತರೆ ಬಡವರಿಗೆ ಗೌರವಯುತವಾಗಿ ಬದುಕುವಂತಹ ವಾತಾವರಣ ನಿರ್ಮಿಸಬೇಕಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here