Homeಕರ್ನಾಟಕಆಪರೇಷನ್ ಫೈನಲ್: ಸಿದ್ದರಾಮಯ್ಯನವರಿಗೇ ಬೇಡವಾಗಿದ್ದ ಸರ್ಕಾರ!

ಆಪರೇಷನ್ ಫೈನಲ್: ಸಿದ್ದರಾಮಯ್ಯನವರಿಗೇ ಬೇಡವಾಗಿದ್ದ ಸರ್ಕಾರ!

- Advertisement -
- Advertisement -

ಮೂರು ದಿನದ ಹಿಂದಷ್ಟೇ ಮಾಧ್ಯಮದವರು ಸಮನ್ವಯ ಸಮಿತಿ ಆಧ್ಯಕ್ಷ ಸಿದ್ದರಾಮಯ್ಯನವರಿಗೆ, ‘ಸರ್, ಅತೃಪ್ತರ ಜೊತೆ ಮಾತನಾಡಿ ಮನವೊಲಿಸುತ್ತಿದ್ದಾರಾ?’ ಎಂದು ಕೇಳಿದಾಗ, ಅವರು ಹೇಳಿದ್ದ ಈ ಮಾತೊಂದೇ ಅವರಿಗೆ ಈ ಸರ್ಕಾರದ ಬಗ್ಗೆ ಮೊದಲಿನಿಂದಲೂ ಇದ್ದ ಅಸಮಾಧಾನದ ಅಂತಿಮವಾದ ಬಹಿರಂಗ ಸ್ಫೋಟದಂತಿತ್ತು: ‘ರೀ, ಎಷ್ಟೂ ಅಂತ ಮಾತನಾಡೋದು? ಎಷ್ಟು ಅಂತ ಅವರ ಮನವೊಲಿಸೋದು? ಈ ಅತೃಪ್ತರ ಜೊತೆ ಮಾತಾಡಿ, ಮಾತಾಡಿ ಸಾಕಾಗಿ ಹೋಗಿದೆ. ಇನ್ನೇನೂ ಮಾತೂ ಇಲ್ಲ, ಕತೆಯೂ ಇಲ್ಲ…’

ಬಹುಷ: ಅಷ್ಟೊತ್ತಿಗೆ ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗರು ಎನಿಸಿಕೊಂಡಿದ್ದ ಶಾಸಕರು ಅತೃಪ್ತರೊಂದಿಗೆ ‘ಸಮನ್ವಯ’ ಸಭೆ ನಡೆಸಿ ಅವರಿಗೆ ಸಾಥ್ ನೀಡಿಯಾಗಿತ್ತು. ಶನಿವಾರವಷ್ಟೇ ಅವರು ಬಹಿರಂಗವಾಗಿ ಕಾಣಿಸಿಕೊಂಡರು. ಅದು ದೊಡ್ಡ ಸುದ್ದಿಯಾಗುತ್ತಿದ್ದ ಸಮಯದಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಡಿ.ಕೆ. ಶಿವಕುಮಾರ್ ಧಾವಿಸಿದರಷ್ಟೇ. ಇಂತಹ ಸಂದರ್ಭಗಳಲ್ಲಿ ಎಂದಿನಂತೆ, ‘ಏನಾಗಿಲ್ಲ ಬಿಡ್ರಿ. ಸರ್ಕಾರ ಭದ್ರವಾಗಿದೆ’ ಎಂದು ಸುಮ್ಮನೇ ಆದರೂ ಹೇಳುತ್ತಿದ್ದ ಸಿದ್ದರಾಮಯ್ಯ ಶನಿವಾರ ಆಪರೇಷನ್ನಿನ ಟ್ರೈಲರ್ ‘ಟ್ರೆಂಡಿಂಗ್’ ಆಗುತ್ತಿದ್ದ ಪೀಕ್ ಅವರ್‍ಗಳಲ್ಲೂ ಮಾಧ್ಯಮಗಳ ಸಂಪರ್ಕಕಕ್ಕೆ ಸಿಗಲೇ ಇಲ್ಲ. ಅವರು ಟ್ರೈಲರ್ ಮುಗಿದು, ಬುಧವಾರದ ವೇಳೆಗೆ ಪಿಚ್ಚರ್ ರಿಲೀಸ್ ಆಗುವುದು ನಿಕ್ಕಿ ಆದ ಮೇಲಷ್ಟೇ ಕಾಣಿಸಿಕೊಂಡು, ‘ರೀ ಸ್ಪೀಕರ್ ರಾಜೀನಾಮೆ ಅಂಗೀಕರಿಸಿದ್ದಾರೇನ್ರಿ?’ ಎಂದು ಯಾವುದೇ ಮಹತ್ತರ ಬೆಳವಣಿಗೆ ನಡೆದೇ ಇಲ್ಲ ಎಂಬಂತೆ ಸಾಗಿಬಿಟ್ಟರು. ಟ್ರೈಲರ್‍ನಲ್ಲಿ ಅವರ ಆಪ್ತರ ಸೀನ್‍ಗಳೇ ಹೈಲಾಟಾಗಿದ್ದರೂ ಅವರಿಗೆ ಅದು ಆಶ್ಚರ್ಯದ ವಿಷಯವೇ ಆಗಿರಲಿಲ್ಲ.

ಕಳೆದ ವರ್ಷ ವಿಧಾನಸಭಾ ಚುನಾವಣೆ ಫಲಿತಾಂಶ ಕಣ್ಮುಂದೆ ಬಂದಾಗಲೇ ವಿರೋಧ ಪಕ್ಷದಲ್ಲಿ ಕೂಡುವುದೇ ಅವರ ನಿರ್ಧಾರವಾಗಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಕೋಮುವಾದಿ ಸರ್ಕಾರ ರಚನೆಗೆ ಅವಕಾಶ ನೀಡಬಾರದೆಂದು ತರಾತುರಿಯಲ್ಲಿ ಜೆಡಿಎಸ್‍ಗೆ ಬೇಷರತ್ ಬೆಂಬಲ ಕೊಡಲು ನಿರ್ಧರಿಸಿದಾಗ ಸಿದ್ದರಾಮಯ್ಯರಿಗೆ ಬೇರೆ ದಾರಿಯೇ ಇರಲಿಲ್ಲ. ಆರಂಭದಿಂದಲೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಹುಪಾಲು ನಿರ್ಧಾರಗಳ ಬಗ್ಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದರು. ಕುಮಾರಸ್ವಾಮಿ ತಮ್ಮ ಮೊದಲ ಬಜೆಟ್‍ನಲ್ಲಿ ಸಿದ್ದರಾಮಯ್ಯ ಸರ್ಕಾರದ ಕೆಲವು ಯೋಜನೆಗಳಲ್ಲಿ ಮಾರ್ಪಾಡು ಮಾಡಿದಾಗ ಸಿದ್ದರಾಮಯ್ಯ ಅದನ್ನು ಬಲವಾಗಿ ವಿರೋಧಿಸಿದ್ದರು.

ಅನ್ನಭಾಗ್ಯದಲ್ಲಿ ಪ್ರತಿ ತಿಂಗಳು ನೀಡುವ ಅಕ್ಕಿ ಪ್ರಮಾಣವನ್ನು 7 ರಿಂದ 5 ಕೆ.ಜಿ.ಗೆ ಇಳಿಸಿದ್ದು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಗೆ ಅಪಾರ ಸಿಟ್ಟು ತರಿಸಿತ್ತು. ಕುಮಾರಸ್ವಾಮಿ ತಮ್ಮ ಹಿಂದಿನ ಸರ್ಕಾರದ ಜನಪರ ಯೋಜನೆಗಳಿಗೆ ಧಕ್ಕೆ ಮಾಡುವ ಮೂಲಕ ಕಾಂಗ್ರೆಸ್‍ಗೆ ಹಿನ್ನಡೆ ಮಾಡಲು ಹೊರಟಿದ್ದಾರೆ ಎಂದು ವಿರೋಧ ಮಾಡಿದ್ದ ಸಿದ್ದರಾಮಯ್ಯ ಸಮನ್ವಯ ಸಮಿತಿಯಲ್ಲಿ ಈ ವಿಷಯ ಎತ್ತಿ ತಮ್ಮ ಸರ್ಕಾರದ ಯೋಜನೆಗಳು ಮೊದಲಿನಂತೆ ಸರಾಗವಾಗಿ ಜಾರಿಯಾಗುವಂತೆ ನೋಡಿಕೊಂಡರು. ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಇದೂ ಅಗತ್ಯವೂ ಆಗಿತ್ತು. ಆಗಿಂದಲೇ ಕುಮಾರಸ್ವಾಮಿ ಕಾಂಗ್ರೆಸ್ ಅನ್ನು ಹಿನ್ನಡೆಗೆ ಸರಿಸಿ ಜೆಡಿಎಸ್ ಪ್ರಾಬಲ್ಯ ಬೆಳೆಯುವಂತೆ ಮಾಡಲು ಹೊರಟಿದ್ದಾರೆ ಎಂಬ ಅಸಮಾಧಾನ ಹೊಂದಿದ್ದ ಸಿದ್ದರಾಮಯ್ಯನವರಿಗೆ, ಈ ಸರ್ಕಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಎಂಬುದು ಖಾತ್ರಿಯಾಗಿತ್ತು.

ಅದು ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಕಾಣಿಸಿಕೊಂಡಿತು. ಕಾಂಂಗ್ರೆಸ್ ಹೀನಾಯವಾಗಿ ಸೋತು ಕೇವಲ ಒಂದು ಸ್ಥಾನ ಗಳಿಸಿದ ಮೇಲಂತೂ ಜೆಡಿಎಸ್ ಸಹವಾಸ ತೊರೆದು ವಿರೋಧ ಪಕ್ಷದಲ್ಲಿ ಕೂಡುವುದೇ ಕಾಂಗ್ರೆಸ್ ಮತ್ತು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಅವರು ನಿರ್ಧರಿಸಿಯಾಗಿತ್ತು. ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್‍ಗಾಂಧಿಯವರಿಗೂ ಇದನ್ನು ಮನವರಿಕೆ ಮಾಡಿದ್ದರು. ಆದರೆ ಮತ್ತೆ ಮಿತ್ರಪಕ್ಷಗಳ ಸ್ನೇಹ ಉಳಿಸಿಕೊಳ್ಳುವ ದೃಷ್ಟಿಯಿಂದ ರಾಹುಲ್ ಗಾಂಧಿ ಸರ್ಕಾರಕ್ಕೆ ತೊದರೆಯಾಗದಂತೆ ಸೂಚಿಸಿದ್ದನ್ನು ಮನಸ್ಸಿಲ್ಲದೇ ಸಿದ್ದರಾಮಯ್ಯ ಒಪ್ಪಿಕೊಂಡು ಬಂದಿದ್ದರು.

ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಆಪರೇಷನ್ ಕಮಲವನ್ನು ತೀವ್ರಗೊಳಿಸಿ ಸರ್ಕಾರವನ್ನು ಕೆಡವಲು ನಿರಂತರ ಯತ್ನ ನಡೆಸಿದ್ದು ಅವರಿಗೆ ಸಮಾಧಾನ ತಂದಿತ್ತೇನೋ? ಮೊದಲಿಂದಲೂ ಸಚಿವ ಪದವಿಗೆ ಯತ್ನಿಸಿ ನಿರಾಶರಾಗಿದ್ದ ಅವರ ಹಲವು ಪರಮಾಪ್ತ ಶಾಸಕರು ಬಿಜೆಪಿ ಸರ್ಕಾರದಲ್ಲಾದರೂ ಅಧಿಕಾರ ಪಡೆಯಲಿ ಎಂದು ಸಿದ್ದರಾಮಯ್ಯ ಯೋಚಿಸಿರಬಹುದು. ‘ಹೋಗಿ ಬಿಡಿ ಅತ್ಲಾಗೆ. ಮುಂದೆ ಎಲ್ಲ ನೋಡಿದರಾಯಿತು’ ಎಂದು ಅವರು ಆಶೀರ್ವಾದ ಮಾಡಿದ ಪರಿಣಾಮವಾಗಿಯೇ ಅವರ ನಿಷ್ಠ ಶಾಸಕರು, ಅವರ ಮಾತಿಗೆ ಗೌರವ ಕೊಡುತ್ತಿದ್ದ ಇನ್ನಷ್ಟು ಶಾಸಕರು ಈಗ ಬಿಜೆಪಿ ಪಾಳೆಯದತ್ತ ಮುಖ ಮಾಡಿದ್ದಾರೆ.

ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ, ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ, ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಮತ್ತು ಸಿದ್ದರಾಮಯ್ಯನವರೇ ನಮ್ಮ ನಾಯಕರು ಎನ್ನುತ್ತಿದ್ದ ಚಿಕ್ಕೋಡಿ ಶಾಸಕ ಪ್ರಕಾಶ ಹುಕ್ಕೇರಿ, ಖಾನಾಪುರ ಶಾಸಕಿ ಅಂಜಲಿ ಹೆಬ್ಬಾಳ್ಕರ್ ಈಗ ಕಾಂಗ್ರೆಸ್ ತೊರೆಯುತ್ತಿರುವುದೇನೂ ಸಿದ್ದರಾಮಯ್ಯರಿಗೆ ಬೇಸರ ತಂದಿರಲಾರದು. ಈ ಪಟ್ಟಿ ನಾಳೆ ಬೆಳೆಯಲೂಬಹುದು.

ನಾಳೆ ಅವರ ಅತಿ ಪರಮಾಪ್ತ, ಹೊಸಕೋಟೆ ಶಾಸಕ, ಸಚಿವ ಎಂ.ಟಿ.ಬಿ. ನಾಗರಾಜ್ ಕೂಡ ರಾಜಿನಾಮೆ ನೀಡಲಿದ್ದಾರಂತೆ. ಇದೆಲ್ಲಕ್ಕೂ ಸಿದ್ದರಾಮಯ್ಯರ ಸಮ್ಮತಿ ಇದ್ದೇ ಇದೆ. ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ಈ ಸರ್ಕಾರದ ಕುರಿತು ಮನದಾಳದಿಂದ ಪ್ರೀತಿಯ ಮಾತನ್ನೇ ಆಡಿಲ್ಲ. ಲೋಕಸಭೆ ಸೀಟು ಮೈತ್ರಿಯ ಸಂದರ್ಭದಲ್ಲಿ ಜೆಡಿಎಸ್ ಮಾಡಿದ ಎಡವಟ್ಟಿನಿಂದ ಕಾಂಗ್ರೆಸ್‍ಗೆ ಮತ್ತು ತಮಗೆ ರಾಜಕೀಯವಾಗಿ ಆದ ಹಿನ್ನಡೆ ಇನ್ನಷ್ಟು ಮುಂದುವರಿಯಬಾರದು ಎಂದು ನಿರ್ಧರಿಸಿರುವ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಕುಳಿತು ರಚನಾತ್ಮಕವಾಗಿ ಜನಪರ ಹೋರಾಟ ಮಾಡುತ್ತ ಮತ್ತೆ ಕಾಂಗ್ರೆಸ್‍ ಗೆ ನವಶಕ್ತಿ ತುಂಬುವ ಯೋಚನೆಯಲ್ಲಂತೂ ಇದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...