Homeಮುಖಪುಟಕವಿ, ವಿಮರ್ಶಕ ಕೆ.ವಿ. ತಿರುಮಲೇಶ್ ಇನ್ನಿಲ್ಲ

ಕವಿ, ವಿಮರ್ಶಕ ಕೆ.ವಿ. ತಿರುಮಲೇಶ್ ಇನ್ನಿಲ್ಲ

- Advertisement -
- Advertisement -

ಕನ್ನಡದ ಖ್ಯಾತ ಕತೆಗಾರ, ಕವಿ ವಿಮರ್ಶಕ ಕೆ.ವಿ. ತಿರುಮಲೇಶ್ (82) ಸೋಮವಾರ ಬೆಳಿಗ್ಗೆ ಹೈದರಾಬಾದ್‌ನ ತಮ್ಮ ಮಗಳ ನಿವಾಸದಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಜನಿಸಿದ ತಿರುಮಲೇಶ್ ಇವರು ಕನ್ನಡ ಭಾಷೆಯ ಬಹು ಮುಖ್ಯ ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕರಾಗಿ ಗುರುತಿಸಿಕೊಂಡಿದ್ದರು.

ಕೆ.ವಿ. ತಿರುಮಲೇಶ್ ಕನ್ನಡದ ನವ್ಯಸಾಹಿತ್ಯದ ಸಂದರ್ಭದಲ್ಲಿ ಬರೆಯಲು ತೊಡಗಿದವರು. ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ‘ಮುಖವಾಡಗಳು’ ಹಾಗೂ ‘ವಠಾರ’ ಇವರ ಎರಡು ಜನಪ್ರಿಯ ಕೃತಿಗಳು. ಇವರ 20 ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು.ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಇವರ ಅನುವಾದಿತ ಕೃತಿ.ತಿರುಮಲೇಶರು ಪ್ರಸ್ತುತ ಅಮೇರಿಕದ ಅಯೋವ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಂಜನ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿವೆ. ಹೈದರಾಬಾದಿನ ಸಿ.ಐ.ಇ.ಎಫ್.ಎಲ್. (ಈಗ ಇ.ಎಫ್.ಎಲ್.ಯು.) ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದ ಪ್ರೊಫಸರರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡದ ವಾಕ್ಯರಚನೆಯ ಕುರಿತು ಮತ್ತು ಕರ್ಮಣೀ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿ.ಎಚ್ ಡಿ. ಪ್ರಬಂಧ. ಬೇಂದ್ರೆಯವರ ಶೈಲಿಯ ಬಗ್ಗೆಯೂ ಮತ್ತಿತರ ಭಾಷಾಸಂಬಂಧಿ ವಿಷಯಗಳನ್ನು ಕುರಿತೂ ಹಲವಾರು ಲೇಖನಗಳನ್ನೂ, ಒಂದು ಲೇಖನ ಸಂಗ್ರಹವನ್ನೂ ಪ್ರಕಟಿಸಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅತ್ಯುತ್ತಮವಾದುದ್ದನ್ನೇ ಬರೆದರು. ಕನ್ನಡ ಭಾಷೆ ಮತ್ತು ವ್ಯಾಕರಣದ ಮೇಲೆ ಬಹಳ ಆಳವಾದ ಹಿಡಿತವನ್ನು ಹೊಂದಿದ್ದರು.

ಕೆ.ವಿ.ತಿರುಮಲೇಶ್ ಅವರ ಕುರಿತು ಸಾಹಿತಿ, ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆಯವರು ಫೇಸ್‌ಬುಕ್‌ನಲ್ಲಿ ಬರೆದಿರುವ ಸಾಲುಗಳು– ಭಾಷೆಯ ಕುರಿತಾಗಿ ಅತ್ಯಂತ ಸೂಕ್ಷ್ಮವಾಗಿ ಮತ್ತು ನವಿರಾಗಿ ಯೋಚಿಸಿ ಬರೆಯುತ್ತಿದ್ದ ಕೆಲವೇ ಕೆಲವರಲ್ಲಿ ಕೆ.ವಿ.ತಿರುಮಲೇಶ್ ಕೂಡಾ ಒಬ್ಬರು. ಅವರು ಕವಿ, ಕತೆಗಾರ, ಅನುವಾದಕ, ಭಾಷಾ ವಿಜ್ಞಾನಿ, ಮತ್ತು ವಿಮರ್ಶಕ. ಅವರು ಕಾಸರಗೋಡಿನಲ್ಲಿದ್ದಾಗ ನಮಗೆಲ್ಲ ಬಹಳ ಹತ್ತಿರದವರಾಗಿದ್ದರು.

ತಿರುಮಲೇಶ್‌ ಹುಟ್ಟಿದ ಸ್ಥಳ ಕಾರಡ್ಕ ( ಸಪ್ಟಂಬರ 12, 1940) . ಇದೇ ಊರಿನಲ್ಲಿ ಹುಟ್ಟಿದ ಇನ್ನೊಬ್ಬ ಕವಿ ವೇಣುಗೋಪಾಲ ಕಾಸರಗೋಡು ಬಹಳ ಬೇಗ ತೀರಿಕೊಂಡರು. ಕಾರಡ್ಕದ ಕಾರಣಿಕ ಪುರುಷರು ಎಂದು ನಾನು ಅವರಿಗೆ ಹೇಳುತ್ತಿದ್ದೆ. ನವ್ಯಸಾಹಿತ್ಯ ಕಾಲದಲ್ಲಿ ಕಾಸರಗೋಡು ಬಹಳ ಕಾರಣಗಳಿಂದ ಸುದ್ದಿಯಲ್ಲಿತ್ತು. ತಿರುಮಲೇಶ್‌, ವೇಣುಗೋಪಾಲ ಕಾಸರಗೋಡು, ಎಂ. ಗಂಗಾಧರ ಭಟ್, ಯು ಮಹೇಶ್ವರಿ, ಲಲಿತಾ ಎಸ್‌ ಎನ್‌ ಭಟ್‌, ಮೊದಲಾದವರು ನವ್ಯ ಕಾಲಘಟ್ಟದ ದೊಡ್ಡ ಹೆಸರುಗಳು. ಇವರೆಲ್ಲ ಒಟ್ಟು ಸೇರಿ ಒಮ್ಮೆ ʼ ಕಯ್ಯಾರರು ಇನ್ನು ಬರೆಯಬೇಕಾಗಿಲ್ಲʼ ಎಂದು ಘೋಷಿಸಿ ದೊಡ್ಡ ಗುಲ್ಲೆಬ್ಬಿಸಿದ್ದರು.
ಮುಂದೆ ತಿರುಮಲೇಶ್‌ ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇರಿ ಅಲ್ಲಿಯೇ ನಿವೃತ್ತರಾದರು. ಹೊರನಾಡ ಕನ್ನಡಿಗರಾದ ನಾವು ಆ ಕಾರಣಕ್ಕೇನೇ ಹಲವು ವಿಷಯಗಳ ಬಗ್ಗೆ ಹರಟುತ್ತಿದ್ದೆವು.
ಕಳೆದ ಸುಮಾರು 50 ವರ್ಷಗಳಿಂದ ತಿರುಮಲೇಶ್‌ ಬರೆಯುತ್ತಲೇ ಇದ್ದರು. ‘ಮುಖವಾಡಗಳು’ ಹಾಗೂ ‘ವಠಾರ’ ಕವನ ಸಂಕಲನಗಳ ಮೂಲಕ ಅವರು ನವ್ಯ ಕಾಲಘಟ್ಟದಲ್ಲಿ ಜನಪ್ರಿಯರಾದರು. ಅಕ್ಷಯ ಕಾವ್ಯ, ಮಹಾಪ್ರಸ್ಥಾನ, ಅವಧ, ಪಾಪಿಯೂ , ಆರೋಪ, ಮುಸುಗು, ಕಳ್ಳಿಗಿಡದ ಹೂವು, ಸಮ್ಮುಖ, ಕಾವ್ಯಕಾರಣ ಇವರ ಇತರ ಮುಖ್ಯ ಕೃತಿಗಳು. ಕಲಿಗುಲ ಮತ್ತು ಟೈಬೀರಿಯಸ್‌ ಅವರಿಗೆ ಹೆಸರು ತಂದುಕೊಟ್ಟ ನಾಟಕಗಳು. ಡಾನ್ ಕ್ವಿಕ್ಸಾಟನ ಸಾಹಸಗಳು ಮತ್ತು ಗಂಟೆ ಗೋಪುರ ಅವರ ಒಳ್ಳೆಯ ಅನುವಾದಗಳು.
ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಮತ್ತು ಅಸ್ತಿತ್ವವಾದ ಇವರ ಮುಖ್ಯ ವಿಮರ್ಶಾ ಕೃತಿಗಳು.
ದೊಡ್ಡ ಲೇಖಕನೊಬ್ಬ ತೀರಿಕೊಂಡಾಗ ಸಹಜವಾಗಿ ಒಂದು ಬಗೆಯ ನಿರ್ವಾತ ಉಂಟಾಗುತ್ತದೆ. ಅದನ್ನು ಯಾರಾದರೂ ತುಂಬಿಸುವವರೆಗೆ ನಾವೆಲ್ಲ ಕಾಯಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...