Homeನ್ಯಾಯ ಪಥಸಾಮಾಜಿಕ ಬದುಕಿಗೆ ವಿಷ ಕಲೆಸುತ್ತಿರುವ ದೇಶದ ಮಾಧ್ಯಮಗಳು: ಡಿ.ಉಮಾಪತಿ

ಸಾಮಾಜಿಕ ಬದುಕಿಗೆ ವಿಷ ಕಲೆಸುತ್ತಿರುವ ದೇಶದ ಮಾಧ್ಯಮಗಳು: ಡಿ.ಉಮಾಪತಿ

ಜನತೆಯಲ್ಲಿ ಅರಿವು ಮೂಡಿಸಿ ಅವರ ಮೆದುಳುಗಳನ್ನು ನಿರ್ಮಲವಾಗಿ ಇರಿಸುವುದು, ಸಂಕುಚಿತವಾದದ ಬಿಲಗಳಿಂದ ಹೊರಗೆಳೆದು ತರುವುದು, ಕೋಮುವಾದೀ ಭಾವನೆಗಳನ್ನು ಕೆರೆದು ತೆಗೆದು ತೊಳೆದು ಪರಸ್ಪರ, ಸಾಮರಸ್ಯ ಮೂಡಿಸುವುದು ಪತ್ರಿಕೆಗೆಳ ಅಸಲು ಕರ್ತವ್ಯ

- Advertisement -
- Advertisement -

‘ಹಿಂದೂ ಜನಾಂಗ ಮತ್ತು ಹಿಂದೂ ರಾಷ್ಟ್ರವನ್ನು ತಮ್ಮ ಹೃದಯಕ್ಕೆ ಹತ್ತಿರ ಇರಿಸಿಕೊಂಡು ವೈಭವೀಕರಿಸಿ ಆ ಧ್ಯೇಯದೆಡೆಗೆ ಸಾಗುವ ಆಶೋತ್ತರ ಉಳ್ಳವರು ಮಾತ್ರವೇ ರಾಷ್ಟ್ರವಾದೀ ದೇಶಭಕ್ತರು. ಉಳಿದವರೆಲ್ಲ ದೇಶದ್ರೋಹಿಗಳು ಮತ್ತು ರಾಷ್ಟ್ರೀಯತೆಯ ವೈರಿಗಳು’ ಎಂದು ಮೂರು ದಶಕಗಳ ಕಾಲ ಆರೆಸ್ಸೆಸ್ ಮುಖ್ಯಸ್ಥರಾಗಿದ್ದ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಹೇಳಿದ್ದರು. We or Our Nationhood Defined (1939) ಕೃತಿಯಲ್ಲಿ ರಾಷ್ಟ್ರೀಯತೆ ಕುರಿತ ಅವರ ವಿಚಾರದ ಸವಿವರ ಪ್ರಸ್ತಾಪವಿದೆ.

“ಹಿಂದುಸ್ತಾನದ ಪರಕೀಯ ಜನಾಂಗಗಳು ಹಿಂದು ಸಂಸ್ಕೃತಿ ಮತ್ತು ಭಾಷೆಯನ್ನು ಅಳವಡಿಸಿಕೊಳ್ಳಬೇಕು, ಹಿಂದು ಧರ್ಮವನ್ನು ಭಕ್ತಿಗೌರವದಿಂದ ಕಾಣಬೇಕು, ಹಿಂದೂ ಜನಾಂಗ ಮತ್ತು ಸಂಸ್ಕೃತಿಯನ್ನು ವೈಭವೀಕರಿಸುವುದರ ವಿನಾ ಬೇರೆ ಯಾವ ವಿಚಾರವನ್ನೂ ನೆಚ್ಚಕೂಡದು. ಪ್ರತ್ಯೇಕ ಅಸ್ತಿತ್ವವನ್ನು ಬಿಟ್ಟುಕೊಟ್ಟು ಹಿಂದು ಜನಾಂಗದೊಳಕ್ಕೆ ವಿಲೀನಗೊಳ್ಳಬೇಕು. ಇಲ್ಲವಾದರೆ ಹಿಂದು ರಾಷ್ಟ್ರಕ್ಕೆ ಸಂಪೂರ್ಣ ಅಧೀನವಾಗಿ ನಾಗರಿಕ ಹಕ್ಕುಗಳನ್ನು ಕೂಡ ಕೇಳದಂತೆ ಈ ದೇಶದಲ್ಲಿ ಜೀವಿಸಬೇಕು. ನಮ್ಮದು ಪ್ರಾಚೀನ ರಾಷ್ಟ್ರ. ತಮ್ಮ ದೇಶದಲ್ಲಿ ನೆಲೆಸಲು ಬಂದ ಪರಕೀಯ ಜನಾಂಗಗಳನ್ನು ಪ್ರಾಚೀನ ದೇಶಗಳು ಹೇಗೆ ನಡೆಸಿಕೊಳ್ಳುತ್ತವೆಯೋ ಅದೇರೀತಿ ನಡೆಸಿಕೊಳ್ಳೋಣ” ಎಂಬುದು ರಾಹುಲ ಸಾಂಕೃತ್ಯಾಯನ ಅವರ ಪ್ರತಿಪಾದನೆಯಾಗಿತ್ತು.

ಸಮಾನ ಪವಿತ್ರಭೂಮಿ ಎಂಬುದು ಬಹಳ ಸಂದರ್ಭಗಳಲ್ಲಿ ಮಾತೃಭೂಮಿಗಿಂತ ಬಲಿಷ್ಠ ಪರಿಕಲ್ಪನೆಯಾಗುತ್ತದೆ. ಮುಸಲ್ಮಾನರಿಗೆ ಅವರು ಬದುಕಿ ಬಾಳುವ ದೆಹಲಿ ಅಥವಾ ಆಗ್ರಾಗಿಂತ ಮೆಕ್ಕಾ ಮದೀನಾ ಹೆಚ್ಚು ವಾಸ್ತವ. ರಾಷ್ಟ್ರ ಎಂಬುದು ಪ್ರಾದೇಶಿಕ ಅಲ್ಲ, ಅದು ಸಾಂಸ್ಕೃತಿಕ. ದೇಶದಲ್ಲಿ ವಾಸಿಸುವವರೆಲ್ಲರೂ ದೇಶದ ಭಾಗವಲ್ಲ, ದೇಶದ ಹೊರಗೆ ವಾಸಿಸಿರುವವರೆಲ್ಲ ಹೊರಗಿನವರು ಎಂದೇನೂ ಅರ್ಥವಲ್ಲ ಎಂಬುದು ಹಿಂದುತ್ವದ ಪ್ರತಿಪಾದಕ ವಿ.ಡಿ.ಸಾವರ್ಕರ್ ಅವರ ಪ್ರತಿಪಾದನೆಯಾಗಿತ್ತು. ಆದರೆ ಸಂವಿಧಾನ ರಚನಾ ಸಭೆಯು ಗೋಲ್ವಲ್ಕರ್ ಮತ್ತು ಸಾವರ್ಕರ್ ಅವರ ಈ ಪ್ರತಿಪಾದನೆಗಳನ್ನು ತಿರಸ್ಕರಿಸಿತು. ಪೌರತ್ವದ ತಳಹದಿ ಧರ್ಮ ಅಲ್ಲ ಎಂದು ಸಾರಿತು. ಭಾರತವನ್ನು ಹಿಂದೂ ಬಹುಸಂಖ್ಯಾತ ದೇಶ ಎಂದು ಘೋಷಿಸದೆ ಜಾತ್ಯತೀತ ಮೌಲ್ಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ಆದರೆ ಮಹಮ್ಮದಾಲಿ ಜಿನ್ನಾ ನೇತೃತ್ವದ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರ ಎಂದು ಸ್ಥಾಪಿತವಾಯಿತು. ಜಿನ್ನಾ ಅವರು ಅಂದು ಪಾಕಿಸ್ತಾನಕ್ಕೆ ಮಾಡಿದ್ದನ್ನು ಬಿಜೆಪಿ ಇಂದು ಭಾರತಕ್ಕೆ ಮಾಡಲು ಹೊರಟಿದೆ.

ರಾಷ್ಟ್ರೀಯತೆ ಮತ್ತು ಪೌರತ್ವದ ಈ ಪರಿಕಲ್ಪನೆಯು ಇದೀಗ ಬಿಜೆಪಿ ಆಡಳಿತದಲ್ಲಿ ಎನ್.ಆರ್.ಸಿ. ಮತ್ತು ಪೌರತ್ವ ತಿದ್ದುಪಡಿ ಕಾಯಿದೆಯ ರೂಪದಲ್ಲಿ ಪ್ರತಿಫಲಿಸತೊಡಗಿದೆ. ಅಸ್ಸಾಮಿನಲ್ಲಿ ಎನ್.ಆರ್.ಸಿ. ಜಾರಿಯೊಂದಿಗೆ ಕಾರ್ಯರೂಪಕ್ಕೆ ಇಳಿಸಲಾಗಿತ್ತು. ಅದರ ತಾರ್ಕಿಕ ಮುಂದುವರಿಕೆ ಜಮ್ಮು-ಕಾಶ್ಮೀರದಲ್ಲಿ ಜರುಗಿತು. ಈ ರಾಜ್ಯಕ್ಕೆ
ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಲಾಯಿತು. ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಒಡೆಯಲಾಯಿತು. ಸಾಂವಿಧಾನಿಕ ಸ್ವಾಯತ್ತಾಧಿಕಾರ ಮತ್ತು ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆ ಎರಡನ್ನೂ ಕಳೆದುಕೊಂಡಿರುವ ಕಾಶ್ಮೀರಿಗರು ಮುಂಬರುವ ದಿನಗಳಲ್ಲಿ ಎನ್.ಆರ್.ಸಿ. ಎದುರಿಸಬೇಕಾಗುತ್ತದೆ. ತಮ್ಮ ಪೌರತ್ವ ಸಾಬೀತು ಮಾಡಲಾಗದೆ ಹೋದರೆ ಪೌರ ಹಕ್ಕುಗಳನ್ನೂ ಕಳೆದುಕೊಳ್ಳಲಿದ್ದಾರೆ.

ದ್ವೇಷವನ್ನು, ಶಂಕೆಯ ಅಸ್ತ್ರಗಳನ್ನು ತಯಾರಿಸಿ ಆಳುವವರ ಕೈಗೆ ಒಪ್ಪಿಸಿ ನಜರು ಒಪ್ಪಿಸುವ ಕಮ್ಮಟಗಳಾಗಿಬಿಟ್ಟಿವೆ ಛಾನೆಲ್ಲುಗಳು ಮತ್ತು ಪತ್ರಿಕೆಗಳು.

ಹಿಂದೂ ಮುಸ್ಲಿಂ ಧ್ರುವೀಕರಣವನ್ನು ತಾರಕಕ್ಕೆ ಒಯ್ಯುವ ನಿಚ್ಚಳ ಉದ್ದೇಶವನ್ನು ಹೊಂದಿರುವ ನಡೆಯಿದು. ಸಾಮಾಜಿಕ ಬದುಕಿಗೆ ವಿಷ ಕಲೆಸುವ ಕೃತ್ಯಕ್ಕೆ ದೇಶದ ಸಮೂಹ ಮಾಧ್ಯಮಗಳು ತಾಳ ಹಾಕತೊಡಗಿವೆ. ಸ್ವಾರ್ಥಕ್ಕಾಗಿ ಆಡತೊಡಗಿರುವ ಅಪಾಯಕಾರಿ ಆಟವಿದು.

ಈ ತಳಮಳದ ದುಬಾರಿ ಬೆಲೆಯನ್ನು ತೆರುವ ಪರಿಸ್ಥಿತಿಯಲ್ಲಿಲ್ಲ ಭಾರತ. ನಮ್ಮ ಸಮಾಜ ಗೊಂದಲದ ಸಮುದ್ರಕ್ಕೆ ಬೀಳಲಿದೆ. ಭಾರತದ ಮಾನವತಾವಾದಿ ಮೇರು ಪ್ರತಿಭೆ ರಾಹುಲ ಸಾಂಕೃತ್ಯಾಯನ (ಕೇದಾರನಾಥ ಪಾಂಡೆ) ಅವರು ಆರು ದಶಕಗಳ ಹಿಂದೆ ಬರೆದ ಈ ಮಾತುಗಳು ಇಂದಿಗೂ ಪ್ರಸ್ತುತ-“ಧರ್ಮ ದ್ವೇಷವನ್ನು ಬಿತ್ತುವುದಿಲ್ಲ” (“ಮಜಹಬ ನಹೀ ಸಿಖಾತಾ..ಆಪಸ ಮೇಂ ಬೈರ ರಖನಾ..”) ಎಂಬ ಮಾತು ಬಿಳಿ ಸುಳ್ಳು. ಧರ್ಮ ದ್ವೇಷವನ್ನು ಹೇಳಿಕೊಡುವುದಿಲ್ಲ ಎಂದಾದರೆ ನಮ್ಮ ದೇಶ ಜುಟ್ಟು- ಗಡ್ಡದ ಲಡಾಯಿಯಲ್ಲಿ ಸಾವಿರ ವರ್ಷಗಳಿಂದ ಯಾಕೆ ಬರಬಾದಾಗುತ್ತಿದೆ. ಹಳೆಯ ಚರಿತ್ರೆ ಬದಿಗಿಡಿ, ಈಗಲೂ ಹಿಂದುಸ್ತಾನದ ಶಹರಗಳು ಮತ್ತು ಹಳ್ಳಿಗಳಲ್ಲಿ ಒಂದು ಧರ್ಮದವರ ನೆತ್ತರಿಗಾಗಿ ಮತ್ತೊಂದು ಧರ್ಮದವರನ್ನು ಯಾರು ಯಾಕೆ ಎತ್ತಿಕಟ್ಟುತ್ತಿದ್ದಾರೆ?

ರಾಹುಲ ಸಾಂಕೃತ್ಯಾಯನ

1927ರಲ್ಲಿ ಭಗತ್ ಸಿಂಗ್ ಬರೆದ ಲೇಖನ ಇಂದಿನ ಭಾರತದ ಸ್ಥಿತಿಗತಿಗೆ ಹಿಡಿದ ಕನ್ನಡಿ. ಕೋಮುವಾದಿ ನಂಜಿನ ಬಗ್ಗಡವನ್ನು ಬಡಿದೆಬ್ಬಿಸುತ್ತಿರುವ ವಿಷಮತೆ-ಅಸಹನೆಗಳ ಸಮಕಾಲೀನ ಸಂದರ್ಭಕ್ಕೆ ಅಕ್ಷರಶಃ ಅನ್ವಯಿಸುತ್ತವೆ.

‘ಇಂಡಿಯಾದ ಇಂದಿನ ಪರಿಸ್ಥಿತಿ ಅತೀವವಾಗಿ ಉಲ್ಬಣಿಸಿದೆ. ಒಂದು ಧರ್ಮದ ಅನುಯಾಯಿಗಳು ಹಠಾತ್ತನೆ ಇತರೆ ಧರ್ಮಗಳ ವಿರುದ್ಧ ಕಡು ಹಗೆತನದ ಕತ್ತಿ ಹಿರಿದಿದ್ದಾರೆ. ಹಿಂದು ಸಿಖ್ಖರೆಂಬ ಏಕೈಕ ಕಾರಣಕ್ಕೆ ಮುಸ್ಲಿಮರು ಹಿಂದು ಮತ್ತು ಸಿಖ್ಖರನ್ನೂ, ಮುಸಲ್ಮಾನರರೆಂಬ ಕಾರಣಕ್ಕಾಗಿ ಮುಸಲ್ಮಾನರನ್ನೂ ಕ್ರೂರವಾಗಿ ಕೊಲ್ಲಲಾಗುತ್ತಿದೆ.
ರಾಜಕೀಯ ನಾಯಕರು ನಿರ್ಲಜ್ಜರಾಗಿ ವರ್ತಿಸುತ್ತಿದ್ದಾರೆ. ದೇಶವನ್ನು ದಾಸ್ಯದಿಂದ ವಿಮೋಚನೆಗೊಳಿಸುವ ಶಪಥ ತೊಟ್ಟಿರುವ ಮತ್ತು ಸಮಾನ ರಾಷ್ಟ್ರೀಯತೆ ಕುರಿತು ಕೊನೆಯಿಲ್ಲದಷ್ಟು ಭಾಷಣಬಾಜಿ ಮಾಡುವ ತಲೆಯಾಳುಗಳು ಒಂದೋ ಲಜ್ಜೆಯಿಂದ ತಲೆತಗ್ಗಿಸಿ ಬಾಯಿ ಹೊಲಿದುಕೊಂಡಿದ್ದಾರೆ ಇಲ್ಲವೇ ಧರ್ಮಾಂಧತೆಯ ದುಷ್ಟ ಗಾಳಿಯ ದಿಕ್ಕಿನತ್ತ ಓಲಾಡುತ್ತಿದ್ದಾರೆ….

ಭಗತ್‌ ಸಿಂಗ್‌

ತುಟಿ ಬಿಚ್ಚದೆ ಬೇಲಿಯ ಮೇಲೆ ಮುಖ ಮುಚ್ಚಿ ಕುಳಿತಿರುವ ಇಂತಹವರ ಸಂಖ್ಯೆ ಸಣ್ಣದೇನೂ ಅಲ್ಲ….” ಎಂದಿದ್ದಾರೆ.

ಕೋಮುವಾದದ ದಳ್ಳುರಿಗೆ ಎಣ್ಣೆ ಎರೆವ ಪತ್ರಿಕೆಗಳ ಕುರಿತು ಭಗತ್ ಹೇಳಿದ್ದು- “ಕೋಮು ದಂಗೆಗಳಿಗೆ ಪ್ರಚೋದನೆ ನೀಡುವ ಇತರೆ ಪ್ರಮುಖ ಪಾತ್ರಧಾರಿಗಳ ಸಾಲಿಗೆ ಪತ್ರಕರ್ತರೂ ಸೇರುತ್ತಾರೆ. ಒಂದು ಕಾಲಕ್ಕೆ ಬಹುಗಣ್ಯ ಕಸುಬು ಎಂದು ಪರಿಗಣಿಸಲಾಗಿದ್ದ ಪತ್ರಿಕೋದ್ಯಮ ಈಗ ತಿಪ್ಪೆಯಾಗಿ ಬದಲಾಗಿದೆ. ಒಬ್ಬರ ವಿರುದ್ಧ ಮತ್ತೊಬ್ಬರು ತಲೆಬರೆಹಗಳಲ್ಲಿ ಕೂಗಿ ಕಿರುಚುತ್ತಾರೆ, ಪರಸ್ಪರರನ್ನು ಕೊಲ್ಲುವ ಉನ್ಮಾದಗಳನ್ನು ಜನರಲ್ಲಿ ಪ್ರಚೋದಿಸುತ್ತಿದ್ದಾರೆ… ಪತ್ರಿಕೆಗಳು ತೀವ್ರತರದ ಆಸ್ಫೋಟಕ ಮತ್ತು ಅತೀವ ಪ್ರಚೋದಕ ಲೇಖನಗಳನ್ನು ಪ್ರಕಟಿಸಿ ಕೋಮುವಾದೀ ಜ್ವಾಲೆಯನ್ನು ಹತ್ತು ಹಲವು ಸ್ಥಳಗಳಲ್ಲಿ ಭುಗಿಲೆಬ್ಬಿಸುತ್ತಿವೆ… ತಳಮಳ ತಳ್ಳಂಕಗಳ ಈ ಸ್ಥಿತಿಯಲ್ಲಿ ಸಮಚಿತ್ತವನ್ನು, ಸಮತೂಕವನ್ನು ಪ್ರದರ್ಶಿಸಿದ ಪತ್ರಕರ್ತರು ಕೆಲವೇ ಕೆಲವರು.”

“ಜನತೆಯಲ್ಲಿ ಅರಿವು ಮೂಡಿಸಿ ಅವರ ಮೆದುಳುಗಳನ್ನು ನಿರ್ಮಲವಾಗಿ ಇರಿಸುವುದು, ಸಂಕುಚಿತವಾದದ ಬಿಲಗಳಿಂದ ಹೊರಗೆಳೆದು ತರುವುದು, ಕೋಮುವಾದೀ ಭಾವನೆಗಳನ್ನು ಕೆರೆದು ತೆಗೆದು ತೊಳೆದು ಪರಸ್ಪರ, ಸಾಮರಸ್ಯ ಮೂಡಿಸುವುದು ಪತ್ರಿಕೆಗೆಳ ಅಸಲು ಕರ್ತವ್ಯ….. ಬದಲಾಗಿ ಅರಿವುಗೇಡಿತನ, ಸಂಕುಚಿತ ಪಂಥವಾದ- ಕೋಮುವಾದಗಳನ್ನು ಜನರ ಮನಸುಗಳಲ್ಲಿ ಬಿತ್ತಿ ಗಲಭೆಗಳನ್ನು ಎಬ್ಬಿಸುವುದೇ ಅವರ ಮುಖ್ಯ ಗುರಿ ಎನ್ನಿಸುತ್ತಿದೆ. ಈಗಿನ ಇಂಡಿಯಾದ ಪರಿಸ್ಥಿತಿಯನ್ನು ನೋಡಿದರೆ ರಕ್ತಕಣ್ಣೀರು ಕಪಾಳಕ್ಕೆ ಇಳಿವುದಲ್ಲದೆ, ಕಟ್ಟಕಡೆಗೆ ಈ ದೇಶದ ಪರಿಸ್ಥಿತಿ ಏನಾದೀತು ಎಂಬ ಪ್ರಶ್ನೆ ಏಳುತ್ತದೆ.”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...