ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಗಾಂಧಿ ಜಯಂತಿಯ ದಿನವಾದ ಇಂದು (ಅಕ್ಟೋಬರ್ 2) ನವದೆಹಲಿಯ ಜಂತರ್ ಮಂತರ್‌ನಲ್ಲಿ ಕರೆ ನೀಡಲಾಗಿದ್ದ ಬೃಹತ್ ‘ಪ್ರಜಾಪ್ರಭುತ್ವ ರಕ್ಷಿಸಿ’ ಪ್ರತಿಭಟನೆಗೆ ದೆಹಲಿ ಪೋಲಿಸರು ಅನುಮತಿ ನಿರಾಕರಿಸಿದ್ದಾರೆ. ಸಾರ್ವಜನಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಇಡೀ ನವದೆಹಲಿ ಜಿಲ್ಲಾದ್ಯಂತ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ (BNSS, 2023) ಸೆಕ್ಷನ್ 163 ರ ಅಡಿಯಲ್ಲಿ ಕಠಿಣ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಮಂಡಿ ಹೌಸ್ ಹಾಗೂ ಪಟೇಲ್ ಚೌಕ್ ಸೇರಿದಂತೆ ಪ್ರಮುಖ 11 ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಜಂತರ್ ಮಂತರ್ ಹಾಗೂ ಸಂಸತ್ ಭವನದ ಸುತ್ತಮುತ್ತ ಸಾವಿರಾರು ಪೋಲಿಸ್ ಮತ್ತು ಕೇಂದ್ರ ಸಶಸ್ತ್ರ ಪಡೆ (CAPF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಚುನಾವಣಾ ಆಯೋಗವು ತಯಾರಿಸಿರುವ ಕರಡು ಮತದಾರರ ಪಟ್ಟಿಯಿಂದ ದೇಶಾದ್ಯಂತ ಸುಮಾರು 13 ಕೋಟಿಗೂ ಹೆಚ್ಚು ಅರ್ಹ ನಾಗರಿಕರ ಹೆಸರುಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಶೇಷವಾಗಿ ಬಡವರು, ವಲಸೆ ಕಾರ್ಮಿಕರು, ದಲಿತರು ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ವ್ಯವಸ್ಥಿತವಾಗಿ ಕೈಬಿಡಲಾಗುತ್ತಿದೆ ಎಂದು ವಿಪಕ್ಷಗಳು ಮತ್ತು ವಿವಿಧ ನಾಗರಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ತಕ್ಷಣದ ರಾಜೀನಾಮೆ, ಎಸ್‌ಐಆರ್ ಪ್ರಕ್ರಿಯೆಯ ಅಮಾನತು ಹಾಗೂ ‘ವೋಟ್ ಚೋರಿ’ ಆರೋಪದ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲಾಗಿದೆ. ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆದಿರುವ ಮತದಾರರ ಹೊರಗಿಡುವಿಕೆಯ ಪ್ರಮಾಣವು ಸ್ವಾತಂತ್ರ್ಯೋತ್ತರ ಭಾರತದಲ್ಲೇ ಅಭೂತಪೂರ್ವ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ನೀಡಿರುವ ಹೇಳಿಕೆಯು ಈ ವಿಷಯದ ಸಾಂಸ್ಥಿಕ ಮತ್ತು ಸಂವಿಧಾನಿಕ ಗಂಭೀರತೆಯನ್ನು ಎತ್ತಿಹಿಡಿದಿದೆ.
ಆಡಳಿತ ಯಂತ್ರದ ಈ ಭಾರಿ ತಡೆಗೋಡೆ ಹಾಗೂ ನಿಷೇಧಾಜ್ಞೆಯ ನಡುವೆಯೂ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಸಂಸದ ಮನೋಜ್ ಝಾ, ವಿವಿಧ ವಿದ್ಯಾರ್ಥಿ-ಯುವಜನ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಅಹಿಂಸಾತ್ಮಕ ಚಳವಳಿಗೆ ಕರೆ ನೀಡಿದ್ದಾರೆ. ಇಂದಿನ ಹೋರಾಟದ ಕುರಿತು ಸ್ಪಷ್ಟನೆ ನೀಡಿರುವ ಪ್ರಶಾಂತ್ ಭೂಷಣ್, “ಜ್ಞಾನೇಶ್ ಕುಮಾರ್ ಹಾಗೂ ಅವರ ಆಡಳಿತಾತ್ಮಕ ಮೇಲಧಿಕಾರಿಗಳಿಂದ ಪ್ರಜಾಪ್ರಭುತ್ವ ಹೈಜಾಕ್ ಆಗುತ್ತಿರುವುದರ ವಿರುದ್ಧ ನಡೆಯುತ್ತಿರುವ ಇಂದಿನ ಜಂತರ್ ಮಂತರ್ ಪ್ರತಿಭಟನೆಯು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದುದಲ್ಲ. ಪ್ರತಿಯೊಬ್ಬರೂ ಯಾವುದೇ ಪಕ್ಷದ ಬ್ಯಾನರ್, ಫ್ಲ್ಯಾಕ್ಸ್ ಅಥವಾ ಲಾಂಛನಗಳಿಲ್ಲದೆ ಕೇವಲ ದೇಶದ ಸಾರ್ವಭೌಮ ನಾಗರಿಕರಾಗಿ ಪಾಲ್ಗೊಳ್ಳಬೇಕು. ಗಾಂಧಿ ಜಯಂತಿಯ ಈ ದಿನದಂದು ಆಡಳಿತ ಯಂತ್ರ ಎಷ್ಟೇ ಪ್ರಚೋದನೆ ನೀಡಿದರೂ ಸಂಪೂರ್ಣ ಅಹಿಂಸಾತ್ಮಕವಾಗಿರಬೇಕು; ಪೊಲೀಸರು ಬಲವಂತವಾಗಿ ತಡೆದರೆ ಇದ್ದಲ್ಲಿಯೇ ಕುಳಿತು ‘ನಾಗರಿಕ ಸತ್ಯಾಗ್ರಹ’ ನಡೆಸಬೇಕು” ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ದೆಹಲಿ ಪೋಲಿಸರು ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ, ಪೂರ್ವಾನುಮತಿಯಿಲ್ಲದೆ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ಮೆರವಣಿಗೆ ನಡೆಸುವುದು, ಧರಣಿ ಕುಳಿತುಕೊಳ್ಳುವುದು, ಘೋಷಣೆ ಕೂಗುವುದು ಹಾಗೂ ಬ್ಯಾನರ್, ಪ್ಲೇಕಾರ್ಡ್ ಅಥವಾ ಕೋಲುಗಳನ್ನು ಹಿಡಿದು ಸಂಚರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಷೇಧಾಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ‘ಭಾರತೀಯ ನ್ಯಾಯ ಸಂಹಿತೆ’ಯ (BNS, 2023) ಸೆಕ್ಷನ್ 223 ಹಾಗೂ ಇತರ ಅನ್ವಯಿಕ ಕಾನೂನು ನಿಬಂಧನೆಗಳ ಅಡಿಯಲ್ಲಿ ಕಠಿಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಇದರ ಜೊತೆಗೆ ಕನ್ನಾಟ್ ಪ್ಲೇಸ್, ಟಾಲ್‌ಸ್ಟಾಯ್ ಮಾರ್ಗ್, ಜಂತರ್ ಮಂತರ್ ರಸ್ತೆ ಹಾಗೂ ಅಶೋಕ ರಸ್ತೆಗಳಲ್ಲಿ ಭಾರಿ ವಾಹನ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ.
ದೆಹಲಿಯಲ್ಲಿ ಆಡಳಿತಾತ್ಮಕ ತಡೆ ವಿಧಿಸಲಾಗಿದ್ದರೂ, ‘ಇಂಡಿಯಾ’ ಮೈತ್ರಿಕೂಟ ಹಾಗೂ ಪ್ರಜಾಸತ್ತಾತ್ಮಕ ಸಂಘಟನೆಗಳು ದೇಶಾದ್ಯಂತ ತಮ್ಮ 4 ಹಂತದ ಸುದೀರ್ಘ ಅಭಿಯಾನವನ್ನು ಮುಂದುವರಿಸಲು ನಿರ್ಧರಿಸಿವೆ. ಅಕ್ಟೋಬರ್ 2 ರಿಂದ 8 ರವರೆಗೆ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ‘ಪ್ರಜಾಪ್ರಭುತ್ವ ರಕ್ಷಿಸಿ’ ಜಾಗೃತಿ ಜಾಥಾ ನಡೆಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸಂಸದರಿಂದ ಚುನಾವಣಾ ಆಯೋಗದ ಪ್ರಧಾನ ಕಚೇರಿ ಚಲೋ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ ಹಾಗೂ ನವೆಂಬರ್ 1 ರಂದು ನವದೆಹಲಿಯಲ್ಲಿ ಬೃಹತ್ ಜಂಟಿ ಸಮಾವೇಶವನ್ನು ಆಯೋಜಿಸಲು ತಂತ್ರ ರೂಪಿಸಲಾಗಿದೆ.


