Homeಕರ್ನಾಟಕಹಿರಿಯ ಸಾಹಿತಿ, ನಾಡೋಜ ಹಂಪನಾರನ್ನು ಠಾಣೆಗೆ ಕರೆಸಿ ಪೊಲೀಸ್ ವಿಚಾರಣೆ: ವ್ಯಾಪಕ ಖಂಡನೆ

ಹಿರಿಯ ಸಾಹಿತಿ, ನಾಡೋಜ ಹಂಪನಾರನ್ನು ಠಾಣೆಗೆ ಕರೆಸಿ ಪೊಲೀಸ್ ವಿಚಾರಣೆ: ವ್ಯಾಪಕ ಖಂಡನೆ

ದುರ್ಯೋಧನ ಎನ್ನುವುದು ಬೈಗುಳವೇ? CRPC ಅಥವಾ IPC ಯ ಯಾವ ಸೆಕ್ಷನ್ ಪ್ರಕಾರ ಇದು ಬೈಗುಳ? ಸರಕಾರ ದುರ್ಯೋಧನನಂತೆ ವರ್ತಿಸುತ್ತಿದೆ ಎನ್ನುವುದು ಒಬ್ಬ ಘನತೆವೆತ್ತ ಸಾಹಿತಿ ಬಳಸಬಹುದಾದ ಅತ್ಯಂತ ಸಭ್ಯ ಕನ್ನಡ- ಬಿ ಎಂ ಹನೀಫ್

- Advertisement -
- Advertisement -

ಬಿಜೆಪಿ ಸರ್ಕಾರವನ್ನು ಟೀಕಿಸಿದರು ಎನ್ನುವ ಕಾರಣಕ್ಕೆ 85 ವರ್ಷದ ಹಿರಿಯ ಸಾಹಿತಿ, ನಾಡೋಜ ಹಂ.ಪ.ನಾಗರಾಜಯ್ಯ (ಹಂಪನಾ) ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವ ಆತಂಕಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ.

“ಜನವರಿ 17 ರಂದು ಮಂಡ್ಯದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ್ದ ಹಂಪನಾ, ಕೃಷಿ ಕಾನೂನುಗಳ ಬಗ್ಗೆ ಭಾಷಣ ಮಾಡುತ್ತಾ ಮೋದಿ ಸರ್ಕಾರವನ್ನು ಟೀಕಿಸಿದ್ದರು. ಕಳೆದ ಹಲವು ದಿನಗಳಿಂದ ರೈತರು ಚಳಿ-ಮಳೆಯನ್ನು ಲೆಕ್ಕಿಸದೆ ಬೀದಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಸೌಜನ್ಯಕ್ಕಾದರೂ ಪ್ರಧಾನಿಯವರು ರೈತರನ್ನು ಭೇಟಿ ಮಾಡಿ ಮಾತನಾಡಬಾರದೇ? ಸರ್ಕಾರ ದುರ್ಯೋಧನನಂತೆ ವರ್ತಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದರು. ಅದೇ ಕಾರಣಕ್ಕೆ ಅವರನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ ಎಂದು ಹಂಪನಾ ಅವರ ಮಗಳು ಆರತಿ ಹಂಪನಾ ನಾನುಗೌರಿ.ಕಾಂಗೆ ತಿಳಿಸಿದರು.

“ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರಿಬ್ಬರು ಮಂಡ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಂತೆ. ಈ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿಯನ್ನು ಬೆಂಗಳೂರಿನಿಂದ ಮಂಡ್ಯದವರೆಗೆ ಕರೆಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕನಿಷ್ಟ ಎಫ್‌ಐಆರ್ ಕೂಡ ದಾಖಲಾಗಿಲ್ಲದಿರುವಾಗ, ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಹಂಪನಾ ಅವರನ್ನು ಠಾಣೆಯವರೆಗೆ ಕರೆಸಿಕೊಳ್ಳುವ ಅಗತ್ಯ ಏನಿತ್ತು? ಇದು ನಿಜಕ್ಕೂ ಪೊಲೀಸ್ ರಾಜ್ಯದ ದಬ್ಬಾಳಿಕೆಯಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ ಪ್ರಕರಣ: ಗುತ್ತಿಗೆದಾರ ಸೇರಿದಂತೆ ಮೂವರ ಬಂಧನ

ಮಂಡ್ಯ ಪೊಲೀಸರ ಈ ಕ್ರಮದ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಇಂತಹ ಸಂವೇದನಾರಹಿತ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಾಡಿನ ಹತ್ತಾರು ಸಾಹಿತಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಸಾಹಿತಿಗಳಾದ ಅಬ್ಬೂರು ರಾಜಶೇಖರ್, “ಹೃದಯ, ಮಿದುಳು ಇಲ್ಲದ ಸರ್ಕಾರ ನಾಡಿನ ವಿದ್ವಾಂಸರನ್ನೂ ಪೊಲೀಸ್ ಠಾಣೆಗೆ ಕರೆಸುವ ಹೀನಕೃತ್ಯಕ್ಕೆ ಇಳಿದಿದೆ. ಹಂಪನಾ ಅವರು ರೈತ ವಿರೋಧಿ ನಿಲುವನ್ನು ಟೀಕಿಸಿದ್ದು ಘೋರ ಅಪರಾಧ! ಇಂತಹ ಸರ್ವಾಧಿಕಾರಿ ಸರ್ಕಾರದ ನೀತಿಗೆ ಧಿಕ್ಕಾರ. ಅತ್ಯಂತ ಖಂಡನಾರ್ಹ ಘಟನೆ” ಎಂದು ಕಿಡಿಕಾರಿದ್ದಾರೆ.

ಮತ್ತೊಬ್ಬ ಸಾಹಿತಿಗಳಾದ ಲಕ್ಷ್ಮಣ ಕೊಡಸೆ, “ಅಂತರರಾಷ್ಟ್ರೀಯ ಖ್ಯಾತಿಯ ವಿದ್ವಾಂಸರಾದ ಹಂಪನಾ ಅವರನ್ನು ಯಾರೋ ದೂರು ನೀಡಿದರೆಂದು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಂಡಿದ್ದು ಆಡಳಿತ ವ್ಯವಸ್ಥೆಯ ಕ್ರೌರ್ಯ. ನಾಚಿಕೆಗೇಡಿನ ಈ ದುರ್ವರ್ತನೆಗೆ ಹಂಪನಾ ಅವರಿಂದ ಪಾಠ ಹೇಳಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ನಾಡಿನ ವಿದ್ವಾಂಸರ ಬಗ್ಗೆ ಗೌರವ ಇದ್ದರೆ ಇಬ್ಬರೂ ಹಂಪನಾ ಅವರ ಬಳಿ ಕ್ಷಮೆ ಕೋರಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿ ಎಂ ಹನೀಫ್, “ದುರ್ಯೋಧನ ಎನ್ನುವುದು ಬೈಗುಳವೇ? CRPC ಅಥವಾ IPC ಯ ಯಾವ ಸೆಕ್ಷನ್ ಪ್ರಕಾರ ಇದು ಬೈಗುಳ? ಸರಕಾರ ದುರ್ಯೋಧನನಂತೆ ವರ್ತಿಸುತ್ತಿದೆ ಎನ್ನುವುದು ಒಬ್ಬ ಘನತೆವೆತ್ತ ಸಾಹಿತಿ ಬಳಸಬಹುದಾದ ಅತ್ಯಂತ ಸಭ್ಯ ಕನ್ನಡ. ಹಂಪನಾ ಅವರಿಗೆ ಆಗಿರುವ ಅವಮಾನ ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತು ಕನ್ನಡದ ಎಲ್ಲ ಸಾಹಿತಿಗಳಿಗೆ ಅವಮಾನ” ಎಂದು ಖಂಡಿಸಿದ್ದಾರೆ.

ಇದನ್ನೂ ಓದಿ: ಮೋದಿಯವರೆ ಚೀನಾವನ್ನು ಟಾರ್ಗೆಟ್ ಮಾಡಿ, ರೈತರನ್ನಲ್ಲ: ರೈತಹೋರಾಟದ ಇಂದಿನ ಘೋಷಣೆ

ಪೊಲೀಸರ ಈ ನಡೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲೂ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಫೈಜರ್ ಲಸಿಕೆ ಪಡೆದ 12,400 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢ!


ಇದನ್ನೂ ಓದಿ: ಅಮಿತ್ ಶಾ ಟ್ವಿಟರ್ ಖಾತೆ ಬ್ಲಾಕ್: ಟ್ವಿಟರ್ ಅನ್ನು ತರಾಟೆಗೆ ತೆಗೆದುಕೊಂಡ ಸಂಸದೀಯ ಸಮಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಹಂಪನಾರನ್ನು ವಿಚಾರಣೆಗೆ ಒಳಪಡಿಸಿದ್ದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು ಕಂಡನಾರ್ಹ.

  2. ದೇಶಭಕ್ತರ‌ ಕಣ್ಣಿಗೆ ‘ಕಂಡೋರೆಲ್ಲಾ’ ದೇಶದ್ರೋಹಿಗಳಂತೆ ಕಾಣುವಂತಾಗಿದ್ದು ವಿಶ್ವಗುರು ನಾಡಿನ ಹಿರಿಮೆ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...