ಮುಂಬೈನಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರೂ ಸಹ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರಾಚ್ ಜನತಾ ಪಾರ್ಟಿ’ (ಸಿಜೆಪಿ) ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಶುಕ್ರವಾರ (ಅ.2) ಶಿವಾಜಿ ಪಾರ್ಕ್ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.
ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ನಿರ್ಧಾರ ಹಾಗೂ ಆದೇಶಗಳ ಬಗ್ಗೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳಲ್ಲಿ ಕನಿಷ್ಠ 14 ಬಾರಿ ತಮ್ಮ ಆಕ್ಷೇಪಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಕೆಲವು ಆದೇಶಗಳು ತಮ್ಮ ಗಮನಕ್ಕೆ ಬಾರದೇ ಹೊರಡಿಸಲಾಗಿದೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ಬಹಿರಂಗಪಡಿಸಿದ ನಂತರ, ಸಿಜೆಪಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಈ ಪ್ರತಿಭಟನೆಯನ್ನು ಘೋಷಿಸಿತ್ತು.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸುತ್ತಮುತ್ತಲಿನ ದಾದರ್ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಇಸಿ ಅವರನ್ನು ಗುರಿಯಾಗಿಸಿಕೊಂಡ ಮೀಮ್‌ಗಳು, ಚಲನಚಿತ್ರ ಸಂಭಾಷಣೆಗಳು ಮತ್ತು ಘೋಷಣೆಗಳು ಕಂಡುಬಂದವು. ಪ್ರತಿಭಟನಾಕಾರರು “ಜ್ಞಾನು, ನಿನಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ವಾ”, “ಗ್ಯಾನೇಶ್ ಬ್ರೋ, ಜಸ್ಟ್ ರಿಸೈನ್” ಮತ್ತು “ಗದ್ದಾರ್ ಗ್ಯಾನು ಮಸ್ಟ್ ಗೋ” ಎಂಬ ಫಲಕಗಳನ್ನು ಹಿಡಿದಿದ್ದರು. ಸಿಜೆಪಿ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ “ಗ್ಯಾನೇಶ್ ಬ್ರೋ! ಜಸ್ಟ್ ರಿಸೈನ್ ಯಾ” ಎಂದು ಟ್ವೀಟ್ ಮಾಡಿದೆ.
ಹರಿದುಬಂದ ಬೆಂಬಲ
ಪ್ರತಿಭಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿರುವ ದೃಶ್ಯಗಳನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಸಿಜೆಪಿ, “ಮುಂಬೈ ಏನೋ ಹೊಸತಕ್ಕೆ ಸಾಕ್ಷಿಯಾಗುತ್ತಿದೆ. ಜೈ ಮಹಾರಾಷ್ಟ್ರ!” ಎಂದು ಪೋಸ್ಟ್ ಮಾಡಿದೆ.
ಮತ್ತೊಂದು ಪೋಸ್ಟ್‌ನಲ್ಲಿ, ಪ್ರತಿಭಟನೆಯ ವೇಳೆ ಬಂಧನಕ್ಕೊಳಗಾಗುವ ಯಾರಿಗಾದರೂ ಕಾನೂನು ನೆರವು ನೀಡುವುದಾಗಿ ತಿಳಿಸಿದೆ. “ಹಲೋ ಕಾಕ್ರಾಚ್‌ಗಳೇ, ಮುಂಬೈ ಕಾನೂನು ತಂಡ ಸಂಪೂರ್ಣ ಸಜ್ಜಾಗಿದೆ,” ಎಂದು ಅದು ಹೇಳಿದೆ.
ಹಿರಿಯ ನಟ ಪ್ರಕಾಶ್ ರಾಜ್ ಎಕ್ಸ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯ ಕೋರಿದ ಅವರು, “…ಕೆಲವು ಗೂಂಡಾಗಳು ಎಸ್‌ಐಆರ್ (ಎಸ್‌ಐಆರ್) ಮೂಲಕ ನಮ್ಮ ಪೌರತ್ವವನ್ನು, ನಮ್ಮ ಪ್ರಜಾಪ್ರಭುತ್ವವನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ. ಈ ದೇಶದ ಯುವಕರು, ನಾಗರಿಕ ಸಮಾಜ ಮತ್ತು ಕಾಕ್ರಾಚ್‌ಗಳು ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ…” ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ
ಹಿರಿಯ ನಟ ನಸೀರುದ್ದೀನ್ ಶಾ ತಮ್ಮನ್ನು ಭೇಟಿಯಾದ ವಿಡಿಯೋವನ್ನು ಸಿಜೆಪಿ ಸಂಚಾಲಕ ಅಭಿಜೀತ್ ದಿಪ್ಕೆ ಹಂಚಿಕೊಂಡಿದ್ದಾರೆ. ನಸೀರುದ್ದೀನ್ ಶಾ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸುತ್ತವೆಯಾದರೂ, ದಿಪ್ಕೆ ಹಂಚಿಕೊಂಡ ವಿಡಿಯೋದಿಂದ ಅದು ಸ್ಪಷ್ಟವಾಗಿಲ್ಲ. ವಿಡಿಯೋದಲ್ಲಿ ನಸೀರ್ ಅವರು ದಿಪ್ಕೆ ಮಾಡುತ್ತಿರುವ ಕೆಲಸಕ್ಕೆ ಧನ್ಯವಾದ ಹೇಳುತ್ತಿರುವುದು ಮತ್ತು ನಟನ ಭೇಟಿಯಿಂದ ಅತಿಯಾದ ಸಂತಸ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.
ರಾಷ್ಟ್ರಪಿತ ಗಾಂಧೀಜಿಯವರ ಜಯಂತಿಯ ಅಂಗವಾಗಿ ದಿಪ್ಕೆ ದಕ್ಷಿಣ ಮುಂಬೈನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಪ್ರತಿಭಟನೆಗೆ ಸ್ಥಳೀಯರ ಅಸಮಾಧಾನ
ಈ ಪ್ರತಿಭಟನೆಯಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ಕೆಲವು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ಯೋಜಿತ ಪ್ರತಿಭಟನೆಯು ನಮ್ಮ ಪ್ರದೇಶದ ಶಾಂತಿ ಮತ್ತು ದೈನಂದಿನ ಜೀವನಕ್ಕೆ ಭಂಗ ತರುತ್ತಿದೆ. ಅವರು ಬಲವಂತವಾಗಿ ಹೋರಾಟ ಮಾಡಲು ಯತ್ನಿಸುತ್ತಿದ್ದಾರೆ, ವಸತಿ ಪ್ರದೇಶದಲ್ಲಿ ಇಂತಹ ಪ್ರತಿಭಟನೆಗಳಿಗೆ ಅನುಮತಿ ನೀಡಬಾರದು” ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.


