Homeಮುಖಪುಟರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ; ಲೋಕಸಭಾ ಸದಸ್ಯತ್ವ ಅನರ್ಹಗೊಳ್ಳುವುದೇ?

ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ; ಲೋಕಸಭಾ ಸದಸ್ಯತ್ವ ಅನರ್ಹಗೊಳ್ಳುವುದೇ?

- Advertisement -
- Advertisement -

‘ಮೋದಿ ಸರ್‌ನೇಮ್‌‌’ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ಕೋರ್ಟ್‌ ಶಿಕ್ಷೆ ವಿಧಿಸಿದ ನಂತರ ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ 2019ರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯವು ತೀರ್ಪು ನೀಡಿದ್ದು, ಸಂಸದ ರಾಹುಲ್‌ ಅವರು ತಪ್ಪಿತಸ್ಥರೆಂದು ಗುರುತಿಸಿದೆ.

ಗುಜರಾತ್‌ನ ನ್ಯಾಯಾಲಯವು ರಾಹು‌ಲ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಆದರೆ ತಕ್ಷಣಕ್ಕೆ ಜಾರಿಯಾಗುವುದಿಲ್ಲ. ಐಪಿಸಿ ಸೆಕ್ಷನ್ 500 (ಮಾನನಷ್ಟ) ಅಡಿಯಲ್ಲಿ ರಾಹುಲ್ ಅವರನ್ನು ತಪ್ಪಿತಸ್ಥರು ಎಂದು ಗುರುತಿಸಲಾಗಿದೆ. ಎರಡು ವರ್ಷಗಳವರೆಗೆ ಸರಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಕೋರ್ಟ್ ಹೇಳಿದೆ.

ಸೂರತ್ ನ್ಯಾಯಾಲಯವು ರಾಹುಲ್‌ ಅವರ ಶಿಕ್ಷೆಯನ್ನು 30 ದಿನಗಳ ಕಾಲ ಅಮಾನತುಗೊಳಿಸಿದ್ದು, ಅವರ ವಕೀಲರ ತಂಡದಲ್ಲಿನ ಮನವಿಯ ಆಧಾರದಲ್ಲಿ ಈ ತೀರ್ಪನ್ನು ಪ್ರಶ್ನಿಸಲು ಅವಕಾಶ ನೀಡಲಾಗಿದೆ.

2013ರಲ್ಲಿ ಶಿಕ್ಷೆಗೊಳಗಾದ ಸಂಸದರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನ್ವಯ ರಾಹುಲ್ ಅವರು ಲೋಕಸಭಾ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆಯೇ ಎಂಬ ಊಹಾಪೋಹಗಳು ಹಬ್ಬಿವೆ. (ಕುತೂಹಲಕಾರಿ ಸಂಗತಿಯೆಂದರೆ ಸುಪ್ರೀಂಕೋರ್ಟ್‌ನ ತೀರ್ಮಾನವನ್ನು ರದ್ದುಗೊಳಿಸುವ ಸುಗ್ರೀವಾಜ್ಞೆಯನ್ನು ವಿರೋಧಿಸಿದ್ದ ರಾಹುಲ್‌, ತನ್ನದೇ ಪಕ್ಷದ ನಿರ್ಧಾರವನ್ನು ಟೀಕಿಸಿದ್ದರು.) ಆದಾಗ್ಯೂ, ಈ ಶಿಕ್ಷೆಯನ್ನು ತಡೆಯಲು ಉನ್ನತ ನ್ಯಾಯಾಲಯದ ಮೆಟ್ಟಿಲೇರಲು ರಾಹುಲ್ ಅವರಿಗೆ ಅವಕಾಶವಿದೆ.

ರಾಹುಲ್ ಅವರ ಅನರ್ಹತೆಯು ಒಂದು ತಿಂಗಳ ನಂತರ ಪ್ರಾರಂಭವಾಗಲಿದೆ, ಆ ಅವಧಿಯೊಳಗೆ ಅವರು ಮೇಲ್ಮನವಿ ಸಲ್ಲಿಸಬಹುದು.

ಕ್ರಿಮಿನಲ್ ಮೊಕದ್ದಮೆಯಲ್ಲಿ ಶಿಕ್ಷೆಯಾಗಿರುವ ಕಾರಣ ರಾಹುಲ್ ಅವರು ನೇರವಾಗಿ ಉಚ್ಚ ನ್ಯಾಯಾಲಯ ಅಥವಾ ಸರ್ವೊಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಿಲ್ಲ. “ಸೂರತ್ ನ್ಯಾಯಾಲಯದ ತೀರ್ಪಿನಿಂದಾಗಿ ದೊಡ್ಡ ಸಾರ್ವಜನಿಕ ಹಿತಾಸಕ್ತಿಗಳಿಗೆ ಹಾನಿಯಾಗುತ್ತದೆ ಎಂಬ ಕಾರಣಕ್ಕಾಗಿ ಉನ್ನತ ನ್ಯಾಯಾಂಗವು ಮಧ್ಯಪ್ರವೇಶಿಸಬೇಕೆಂದು ಮೂರನೇ ವ್ಯಕ್ತಿಯೊಬ್ಬರು ಮುಂದಾಗಬಹುದು.”

ಮೊದಲನೆಯದಾಗಿ, 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8(1) ರಲ್ಲಿ ಅಪರಾಧವನ್ನು ಪಟ್ಟಿ ಮಾಡಿದ್ದರೆ ಪ್ರಶ್ನೆ ಉದ್ಭವಿಸುತ್ತದೆ. ಈ ಕಾನೂನು ಲಂಚ ಮತ್ತು ಅನಗತ್ಯ ಪ್ರಭಾವದಂತಹ ಅಪರಾಧಗಳನ್ನು ಒಳಗೊಳ್ಳುತ್ತದೆ. ಮಾನನಷ್ಟವನ್ನು ಈ ವಿಭಾಗದಲ್ಲಿ ಸೇರಿಸಲಾಗಿಲ್ಲ.

ಎರಡನೆಯದಾಗಿ, ಒಬ್ಬ ಜನಪ್ರತಿನಿಧಿಯು ಇತರ ಅಪರಾಧಗಳಲ್ಲಿ ತಪ್ಪಿತಸ್ಥನಾಗಿದ್ದರೆ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರೆ ಸೆಕ್ಷನ್ 8(3) ಪ್ರಕಾರ ಸಂಸದರನ್ನು ಅನರ್ಹಗೊಳಿಸಬಹುದು.

ಸೆಕ್ಷನ್ 8(4)ರ ಪ್ರಕಾರ ಅನರ್ಹತೆಯು ಅಪರಾಧ ನಿರ್ಣಯದ ದಿನಾಂಕದಿಂದ ‘ಮೂರು ತಿಂಗಳುಗಳು ಕಳೆದ ನಂತರ’ ಮಾತ್ರ ಜಾರಿಗೆ ಬರುತ್ತದೆ.

ಇದರರ್ಥ ಮೇಲ್ಮನವಿ ಸಲ್ಲಿಸುವುದು ಸಾಕಾಗುವುದಿಲ್ಲ. ಆದರೆ ಶಿಕ್ಷೆಗೊಳಗಾದ ಸಂಸದ ಅಥವಾ ಶಾಸಕರು ವಿಚಾರಣಾ ನ್ಯಾಯಾಲಯದ ಶಿಕ್ಷೆಗೆ ವಿರುದ್ಧವಾಗಿ ನಿರ್ದಿಷ್ಟ ತಡೆಯಾಜ್ಞೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 389ರ ಪ್ರಕಾರ ಮೇಲ್ಮನವಿಯು ಬಾಕಿ ಉಳಿದಿರುವಾಗ ಮೇಲ್ಮನವಿ ನ್ಯಾಯಾಲಯವು ಅಪರಾಧಿಯ ಶಿಕ್ಷೆಯನ್ನು ಅಮಾನತುಗೊಳಿಸಬಹುದು.

2013ರ ‘ಲಿಲಿ ಥಾಮಸ್ ವಿ ಯೂನಿಯನ್ ಆಫ್ ಇಂಡಿಯಾ’ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಸೆಕ್ಷನ್ 8(4) ಅನ್ನು ರದ್ದುಗೊಳಿಸಿತು. ಸಂಸದರು ಮತ್ತು ಶಾಸಕರ ಅಪರಾಧಗಳಿಗೆ ಶಿಕ್ಷೆಯಾದರೆ, ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಸಮಯವನ್ನು ನೀಡದೆ ತಕ್ಷಣವೇ ಅವರ ಸ್ಥಾನದಿಂದ ಅನರ್ಹಗೊಳಿಸಲಾಗುವುದು ಎಂದು ಕೋರ್ಟ್ ಹೇಳಿತು.

ಅದೇ ವರ್ಷದಲ್ಲಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ತೀರ್ಪನ್ನು ರದ್ದುಗೊಳಿಸಲು ಮತ್ತು ಸೆಕ್ಷನ್ 8 (4) ಅನ್ನು ಉಳಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಯುಪಿಎಯ ಸುಗ್ರೀವಾಜ್ಞೆಯನ್ನು ವಿರೋಧಿಸಿದ ರಾಹುಲ್ ಗಾಂಧಿ, “ಇದು ಕಿತ್ತು ಬಿಸಾಡಬೇಕಾದ ಅಸಂಬದ್ಧ ಸಂಗತಿ” ಎಂದಿದ್ದರು.

ಸುಪ್ರೀಂ ಕೋರ್ಟ್ ವಕೀಲ ಉಪಮನ್ಯು ಹಜಾರಿಕಾ ‘ಹಿಂದೂಸ್ತಾನ್ ಟೈಮ್ಸ್‌’ಗೆ ಪ್ರತಿಕ್ರಿಯಿಸಿದ್ದು, “ಈ 30 ದಿನಗಳು ಅವರಿಗೆ ನಿರ್ಣಾಯಕ. ಸೂರತ್ ಜಿಲ್ಲಾ ನ್ಯಾಯಾಲಯದ ಆದೇಶವನ್ನು ತಡೆಹಿಡಿಯಲು ಅಥವಾ ರದ್ದುಗೊಳಿಸಲು ಅವರು ಉನ್ನತ ನ್ಯಾಯಾಲಯದ ಮೆಟ್ಟಿಲೇರಿದರೆ ಅವರು ತಮ್ಮ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳಬಹುದು” ಎಂದು ವಿವರಿಸಿದ್ದಾರೆ.

ಇದನ್ನೂ ಓದಿರಿ: ಚೇತನ್‌ ಬಂಧನ; ವಾಕ್ ಸ್ವಾತಂತ್ರ್ಯದ ಹರಣವೆಂದು ಜನಾಕ್ರೋಶ

ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲು ಕಾಂಗ್ರೆಸ್‌ನ ಕಾನೂನು ತಂಡವು ಯಾವುದೇ ಸಮಯವನ್ನು ವ್ಯರ್ಥ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ವಕೀಲ ಮುಹಮ್ಮದ್ ಖಾನ್ ಹೇಳಿದ್ದಾರೆ.

ಅಂತಹ ಪ್ರಕರಣಗಳಲ್ಲಿ ಮೇಲ್ಮನವಿಯನ್ನು ಸೆಷನ್ಸ್‌ ನ್ಯಾಯಾಲಯದಲ್ಲಿ ಸಲ್ಲಿಸಬೇಕಾಗುತ್ತದೆ. ಅಂದರೆ ಅವರು ತಾವಾಗಿಯೇ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ.

ಪ್ರಧಾನಿ ಮೋದಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

‘ಮೋದಿ’ ಎಂಬ ಸರ್‌ನೇಮ್‌ (ಉಪನಾಮ) ಬಳಸಿದ್ದಕ್ಕಾಗಿ 2019ರಲ್ಲಿ ರಾಹುಲ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ದೂರು ನೀಡಿದ್ದರು. ಕರ್ನಾಟಕದಲ್ಲಿ ಚುನಾವಣಾ ಪೂರ್ವ ರ್‍ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಸಾಮಾನ್ಯವಾಗಿ ಇರುವುದು ಹೇಗೆ?” ಎಂದು ಪ್ರಶ್ನಿಸಿದ್ದರು. ಇದು ವಿವಾದಕ್ಕೆ ಗುರಿಯಾಗಿತ್ತು.

ವರದಿ ಕೃಪೆ: ಮಿಂಟ್‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...