Homeಚಳವಳಿಅಂಬೇಡ್ಕರ್‌ರವರು ರವಿದಾಸರ ಮತ್ತೊಂದು ರೂಪ ಎಂದು ಭಾವಿಸಿರುವ ಈ ಚಮ್ಮಾರರ ಮಂದಿರದ ಕುರಿತು

ಅಂಬೇಡ್ಕರ್‌ರವರು ರವಿದಾಸರ ಮತ್ತೊಂದು ರೂಪ ಎಂದು ಭಾವಿಸಿರುವ ಈ ಚಮ್ಮಾರರ ಮಂದಿರದ ಕುರಿತು

ಇಂದು ರವಿದಾಸರ ಜಯಂತಿ. ಹಾಗಾಗಿ ನಾನುಗೌರಿ ಓದುಗರಿಗಾಗಿ ಈ ಬರಹವನ್ನು ಮತ್ತೆ ಪ್ರಕಟಿಸಲಾಗುತ್ತಿದೆ.

- Advertisement -
- Advertisement -

ಇಂದು ರವಿದಾಸರ ಜಯಂತಿ. ಹಾಗಾಗಿ ನಾನುಗೌರಿ ಓದುಗರಿಗಾಗಿ ಈ ಬರಹವನ್ನು ಮತ್ತೆ ಪ್ರಕಟಿಸಲಾಗುತ್ತಿದೆ.

ಚಮ್ಮಾರ ಕುಲದ ಹತ್ತಾರು ಸಾವಿರ ಮಂದಿ ಕಳೆದ ವಾರ ದೆಹಲಿಯಲ್ಲಿ ಆಕ್ರೋಶಭರಿತ ನದಿಯಂತೆ ಹರಿದರು. ತಮ್ಮ ಗುರು ರವಿದಾಸರ ದೇಗುಲವನ್ನು ಕೆಡವಿದ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಕೃತ್ಯ ಅವರನ್ನು ಕೆರಳಿಸಿತ್ತು. ಆಗಸ್ಟ್ ಒಂಬತ್ತರ ಸುಪ್ರೀಂ ಕೋರ್ಟಿನ ತೀರ್ಪನ್ನು ಕೈಲಿ ಹಿಡಿದ ಪ್ರಾಧಿಕಾರ ಮರುದಿನವೇ ‘ಹಸಿರು ವಲಯ’ದಲ್ಲಿ ನಿಂತಿದ್ದ ಈ ‘ಅಕ್ರಮ’ ದೇವಾಲಯವನ್ನು ನೆಲಸಮಗೊಳಿಸಿತು. ಕಾನೂನು ಹೋರಾಟದಲ್ಲಿ ಸೋತ ರವಿದಾಸಿಯಾಗಳು ಮಂದಿರ ರಾಜಕಾರಣ ಮಾಡುತ್ತಿರುವವರ ಆಡಳಿತದಲ್ಲಿ ದಲಿತರ ಮಂದಿರವನ್ನು ಕೆಡವಿದ ಅನ್ಯಾಯವನ್ನು ಪ್ರತಿಭಟನಾಕಾರರು ಎತ್ತಿ ತೋರಿದ್ದಾರೆ. ‘ಮಂದಿರವಲ್ಲೇ ಕಟ್ಟುವೆವು’ ಎಂಬ ಮಂದಿರ ರಾಜಕಾರಣದ ಘೋಷಣೆಯನ್ನು ಕೆಡವಿದವರ ವಿರುದ್ಧವೇ ತಿರುಗಿಸಿ ಹಿಡಿದಿದ್ದಾರೆ.

ತುಘಲಕಾಬಾದ್ ನಲ್ಲಿದ್ದ ತಮ್ಮ ಪರಮಗುರು ಸಂತ ರವಿದಾಸರ ದೇಗುಲವನ್ನು ಕೇಂದ್ರ ಸರ್ಕಾರ ಆಗಸ್ಟ್ ಹತ್ತರಂದು ಒಡೆದು ಹಾಕಿದ ಕೃತ್ಯ ಅವರನ್ನು ನೆರೆಹೊರೆಯ ರಾಜ್ಯಗಳಿಂದ ದೆಹಲಿಗೆ ಕರೆತಂದಿತ್ತು. ರಾಮಲೀಲಾ ಮೈದಾನದಲ್ಲಿ ಸೇರಿದ ಜನಸ್ತೋಮ ತುಘಲಕಾಬಾದ್ ಗೆ ಹೊರಟಿತು. ಹಿಂಸಾಚಾರಕ್ಕಿಳಿದವರನ್ನು ಬಂಧಿಸಿರುವ ಪೊಲೀಸರು ಹತ್ತು ಹಲವು ಕೇಸುಗಳ ಜೊತೆಗೆ ದೇಶದ್ರೋಹದ ಕೇಸುಗಳನ್ನೂ ಹಾಕಿದ್ದಾರೆ. ಬಂಧಿತರ ಪೈಕಿ ಭೀಮ್ ಆರ್ಮಿಯ ನಾಯಕ ಚಂದ್ರಶೇಖರ ಅಜಾದ್ ಅಲಿಯಾಸ್ ರಾವಣ ಪ್ರಮುಖರು. ಈ ಭಾರೀ ಪ್ರದರ್ಶನವು ದೇಶದ ಮುಖ್ಯವಾಹಿನಿಯ ಟಿವಿ ಚಾನೆಲ್‍ಗಳಿಗೆ ಸುದ್ದಿಯೇ ಆಗಲಿಲ್ಲ.

15-16ನೆಯ ಶತಮಾನದ ಗುರು ರವಿದಾಸರು ದೆಹಲಿಗೆ ಭೇಟಿ ನೀಡಿದ್ದಾಗ ತಂಗಿದ್ದ ಜಾಗವನ್ನು ಅಂದಿನ ದೆಹಲಿಯ ದೊರೆ ಸಿಕಂದರ್ ಲೋಧಿ ನೀಡಿದ್ದ. ಈ ಜಾಗದಲ್ಲೇ ಆನಂತರ ಮಂದಿರ ಕಟ್ಟಲಾಯಿತು. ಈ ಮಂದಿರ ನೂರಾರು ವರ್ಷ ಹಳೆಯದು ಎಂಬ ರವಿದಾಸರ ಅನುಯಾಯಿಗಳ ವಾದವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಅಲ್ಲಗಳೆದಿದೆ. 1950ರಲ್ಲಿ ಕಟ್ಟಲಾದ ದೇವಾಲಯವಿದು ಎಂದಿದೆ.

ಇದನ್ನೂ ಓದಿ: ದೆಹಲಿಯಲ್ಲಿ ದಲಿತರ ಪ್ರತಿಭಟನೆ: ನೀಲಿ ಸಮುದ್ರದ ಅಲೆಯಲ್ಲಿ ಮುಗಿಲು ಮುಟ್ಟಿದ ಜೈಭೀಮ್ ಘೋಷಣೆ…

ಅಪಾರ ಜನರ ಶ್ರದ್ಧೆಯ ಕೇಂದ್ರವಾಗಿದ್ದ ಈ ದೇವಾಲಯವನ್ನು ಹಿಂದೆ ಮುಂದೆ ನೋಡದೆ, ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಡವುವ ತುರ್ತಾದರೂ ಏನಿತ್ತು? ಸರ್ಕಾರಗಳು ತಮಗೆ ಬೇಕಾದವರಿಗಾಗಿ ಅದೆಷ್ಟು ಹಸಿರುವಲಯಗಳು ಮತ್ತು ಸಮುದ್ರತೀರ ವಲಯಗಳ ಕಾನೂನುಗಳನ್ನು ಗಾಳಿಗೆ ತೂರಿಲ್ಲ? ತಳವರ್ಗದ ಜನರ ಆಸ್ಥೆಯ ದೇಗುಲವೆಂದರೆ ಅಷ್ಟು ತಾತ್ಸಾರವೇ? ದೊಡ್ಡ ಜಾತಿಗಳ ಜನರ ಧರ್ಮಗಳು ಮತ್ತು ನಂಬಿಕೆಗಳು ಮಾತ್ರವೇ ಪವಿತ್ರವೇ? ‘ಹೆಚ್ಚು ಸಮಾನರಿಗೆ’ ಅನ್ವಯ ಆಗದ ಕಾಯಿದೆ ಕಾನೂನುಗಳು ಕಡಿಮೆ ಸಮಾನರಾದ ‘ದುರ್ಬಲ ಸಮುದಾಯಗಳ’ ಭಾವನೆಗಳನ್ನು ಯಾಕೆ ಕಾಲೊರಸಿನಂತೆ ಕಾಣುತ್ತವೆ?

ರವಿದಾಸರು ಜಾತಿ ಆಧಾರಿತ ಏಣಿಶ್ರೇಣಿ ವ್ಯವಸ್ಥೆ ಮತ್ತು ಸಂಪ್ರದಾಯಗಳು-ಆಚರಣೆಗಳ ಬಂಡೆದ್ದವರು. ನಿರ್ಗುಣ ನಿರಾಕಾರ ಭಕ್ತಿಯನ್ನು ನಂಬಿದವರು. ಅವರನ್ನು ಚಮ್ಮಾರರ ಗುರು ಎಂಬ ಅಭಿದಾನಕ್ಕೆ ಸೀಮಿತಗೊಳಿಸಲಾಗಿರುವುದು ನಮ್ಮ ಜಾತಿವ್ಯವಸ್ಥೆಯ ದೊಡ್ಡ ದುಷ್ಟಗುಣ.
ಕಾಯಕವೇ ಕೈಲಾಸ ಎಂಬ ಕರ್ನಾಟಕದ ವಚನ ಚಳವಳಿಯ ಮೌಲ್ಯ ರವಿದಾಸರ ನಂಬಿಕೆಗಳಲ್ಲಿ ಪ್ರತಿಫಲಿತವಾಗಿತ್ತು. ಸಂತರಾದರೂ ಅವರು ಚಮ್ಮಾರಿಕೆಯ ಕಾಯಕವನ್ನು ಬಿಟ್ಟುಕೊಟ್ಟಿರಲಿಲ್ಲ. ಯಾವ ಕೆಲಸವೂ ಕೀಳಲ್ಲ ಎಂಬುದು ಅವರ ಸಂದೇಶವಾಗಿತ್ತು. ತಾರತಮ್ಯ ಅಸಮಾನತೆ ದುಃಖ ಬವಣೆಗಳಿಲ್ಲದ ನಾಡನ್ನು (ಬೇ-ಗಮ್ ಪಾರ) ನಿರ್ಮಿಸುವ ಕನಸು ಕಂಡಿದ್ದರು. ‘ಯುಟೋಪಿಯಾ’ ಪರಿಕಲ್ಪನೆಯನ್ನು ನೀಡಿದ ಕಾರ್ಲ್ ಮಾರ್ಕ್ಸ್ ಗಿಂತ ನೂರಾರು ವರ್ಷಗಳ ಮೊದಲೇ ಹೊಮ್ಮಿದ್ದ ಪರಿಕಲ್ಪನೆ ಬೇ-ಗಮ್ ಪಾರ ಎಂಬುದು ರವಿದಾಸರ ಅನುಯಾಯಿಗಳ ಹೆಮ್ಮೆ.

ರವಿದಾಸರ ಅನುಯಾಯಿಗಳು ಅಂಬೇಡ್ಕರ್ ವಿಚಾರಗಳು ಮತ್ತು ಅಂಬೇಡ್ಕರ್ ರಾಜಕಾರಣದ ಪ್ರಬಲ ಪ್ರತಿಪಾದಕರು. ತಾವು ನಂಬಿದ ಸಂತ ಉಳಿಸಿ ಹೋಗಿರುವ ಆಧ್ಯಾತ್ಮಿಕ ಪರಂಪರೆಯಲ್ಲಿ ತಮ್ಮ ಅಸ್ಮಿತೆಯನ್ನು ನೇಯ್ದುಕೊಂಡಿದ್ದಾರೆ. ಅಂಬೇಡ್ಕರ್ ಅವರು ರವಿದಾಸರ ಮತ್ತೊಂದು ರೂಪ ಎಂದು ಭಾವಿಸಿದ್ದಾರೆ. ಇಬ್ಬರ ಅರಿವಿನ ಪರಂಪರೆಗಳನ್ನೂ ಒಂದೇ ಸಾಮಾಜಿಕ-ರಾಜಕೀಯ ಅಸ್ಮಿತೆಯಲ್ಲಿ ಬೆಸೆದು ಅದನ್ನು ಹೃದಯದಲ್ಲಿ ಧರಿಸಿದ್ದಾರೆ. ಜಾತಿ ವ್ಯವಸ್ಥೆಯ ಹಿಂದೂವಾದ ಮತ್ತು ಕಾಲಕ್ರಮೇಣ ಹಿಂದೂವಾದದ ಮೇಲು ಕೀಳಿನ ಭಾವನೆಯನ್ನು ಮೈಗೂಡಿಸಿಕೊಂಡ ಸಿಖ್ ಧರ್ಮದಿಂದ ದೂರ ನಿಂತಿದ್ದಾರೆ.

ಇದನ್ನೂ ಓದಿ: ನೀಲಿ ಸಮುದ್ರದ ಜೈಭೀಮ್ ಘೋಷಣೆಗೆ ಬೆದರಿದ ಕೇಂದ್ರ; ದೆಹಲಿಯ ರವಿದಾಸ್ ದೇವಸ್ಥಾನ ನಿರ್ಮಾಣಕ್ಕೆ ಅದೇ ಜಾಗ ನೀಡಲು ಒಪ್ಪಿಗೆ, ದಲಿತರ ಹೋರಾಟಕ್ಕೆ ಸಂದ ಜಯ..

ರವಿದಾಸರ ಬದುಕಿದ್ದಾಗ ಅವರ ತತ್ವ ಮತ್ತು ವಚನಗಳು ಜಾತಿ, ವರ್ಗದ ಎಲ್ಲೆಯನ್ನು ದಾಟಿ ಜನಪ್ರಿಯವಾಗಿದ್ದವು. ಪೂರ್ವಾಶ್ರಮದಲ್ಲಿ ರಜಪೂತ ರಾಜಕುಮಾರಿಯಾಗಿದ್ದ ಸಂತ ಮೀರಾಬಾಯಿ ರವಿದಾಸರ ಶಿಷ್ಯೆಯಾಗಿದ್ದುಂಟು. ತಮ್ಮ ಹಿರಿಯ ಸಮಕಾಲೀನ ಸಂತ ಕಬೀರದಾಸರ ರಚನೆಗಳಲ್ಲಿನ ಕದನೋತ್ಸಾಹ ರವಿದಾಸರಲ್ಲಿ ಇರಲಿಲ್ಲ. ಮೃದುಸ್ವಭಾವದವರೂ, ದೊಡ್ಡ ಮನಸ್ಸಿನ ಕ್ಷಮಾಗುಣ ಹೊಂದಿದ್ದ ಕಾರಣದಿಂದ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಬಲ್ಲವರಾಗಿದ್ದರು. ಬಹುಜನಕ್ಕೆ ಇಷ್ಟವಾದರು. ರವಿದಾಸರ 41 ವಚನಗಳನ್ನು ಸಿಖ್ ಪವಿತ್ರ ಗ್ರಂಥ ‘ಗುರುಗ್ರಂಥ ಸಾಹೇಬ’ದಲ್ಲಿ ಸೇರಿಸಲಾಗಿದೆ.

ರವಿದಾಸರು ಜನಿಸಿದ ವಾರಾಣಸಿಯ ಸೀರ್ ಗೋವರ್ಧನಪುರದಲ್ಲಿ ಅವರಿಗೆಂದು ದೊಡ್ಡ ದೇವಾಲಯವನ್ನು ಕಟ್ಟಲಾಗಿದೆ. ಪ್ರತಿವರ್ಷ ಅಲ್ಲಿ ಜರುಗುವ ರವಿದಾಸ ಜಯಂತಿಗೆ ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ ಉತ್ತರಪ್ರದೇಶದಿಂದ ರವಿದಾಸಿಯಾಗಳು ದೊಡ್ಡ ಸಂಖ್ಯೆಯಲ್ಲಿ ತೆರಳುತ್ತಾರೆ. ಬ್ರಿಟನ್, ಅಮೆರಿಕೆ ಮತ್ತು ಯೂರೋಪಿನ ಇತರೆ ದೇಶಗಳಿಂದಲೂ ಸಾವಿರಾರು ಮಂದಿ ಶ್ರದ್ಧಾಳುಗಳು ಬರುತ್ತಾರೆ. ರವಿದಾಸ್ ಮತ್ತು ಅಂಬೇಡ್ಕರ್ ಚಿತ್ರಗಳಿರುವ ಭಿತ್ತಿಪತ್ರಗಳನ್ನು ಹಿಡಿದು ಸಾಗುತ್ತಾರೆ. ಇಬ್ಬರ ಕುರಿತು ಹಾಡು ಕಟ್ಟಿ ಹಾಡುತ್ತಾರೆ. ಅಂಬೇಡ್ಕರ್ ಅವರ ಐತಿಹಾಸಿಕ ಕೃತಿ ‘ಜಾತಿವಿನಾಶ’ದ (Annihilation of Caste) ಹಿಂದಿ ಮತ್ತು ಪಂಜಾಬಿ ಅನುವಾದಗಳ ನೂರಾರು ಪ್ರತಿಗಳು ಮಾರಾಟ ಆಗುತ್ತವೆ. ರವಿದಾಸ-ಅಂಬೇಡ್ಕರ್ ಕ್ಯಾಲೆಂಡರುಗಳು ಸಾವಿರಾರು ಸಂಖ್ಯೆಯಲ್ಲಿ ದೂರ ದೂರದ ದಲಿತರ ಮನೆಗಳಿಗೆ ಪಯಣಿಸುತ್ತವೆ. ಫ್ರೇಂ ಹಾಕಿಸಿಕೊಂಡು ಹಾದಿ ಬೀದಿಗಳಲ್ಲಿ ಕುಳಿತು ಚಪ್ಪಲಿ ಹೊಲಿಯುವವರ ಹಿನ್ನೆಲೆಯಲ್ಲಿ ತೂಗುತ್ತವೆ.

ಪಂಜಾಬಿನಲ್ಲಿ ಮೇಲ್ಜಾತಿಗಳ ದಾಳಿಗಳಿಗೆ ಎದುರಾಗಿ ಬೇ ಗಮ್ ಪಾರಾ ಟೈಗರ್ ಫೋರ್ಸ್, ರವಿದಾಸ ಸೇನಾ ಹಾಗೂ ಅಂಬೇಡ್ಕರ್ ಸೇನಾಗಳು ನಿಂತಿವೆ. ಉತ್ತರಪ್ರದೇಶದಲ್ಲಿ ಭೀಮ್ ಆರ್ಮಿ ತಲೆ ಎತ್ತಿದೆ.

ಇದನ್ನೂ ಓದಿ: ಭಾರತವನ್ನು ತಾರತಮ್ಯಗಳಿಂದ ಮುಕ್ತಗೊಳಿಸುವುದೇ ಅಂಬೇಡ್ಕರ್‌ರಿಗೆ ಗೌರವ ಸಲ್ಲಿಸುವ ಏಕೈಕ ಮಾರ್ಗ: ರಾಹುಲ್ ಗಾಂಧಿ

ಉತ್ತರಪ್ರದೇಶ ಮತ್ತು ಪಂಜಾಬ್- ಹರಿಯಾಣದಲ್ಲಿ ನಿರಂತರ ಮರುಕಳಿಸುವ ಜಾತಿ ಘರ್ಷಣೆಗಳಲ್ಲಿ ಮೇಲ್ಜಾತಿಗಳ ದೌರ್ಜನ್ಯಗಳ ವಿರುದ್ಧ ಸೆಟೆದು ನಿಲ್ಲುವ ದಲಿತರ ಪೈಕಿ ರವಿದಾಸರ ಅನುಯಾಯಿಗಳು ಮುಂಚೂಣಿಯಲ್ಲಿ ಕಂಡು ಬರುತ್ತಾರೆ. ರವಿದಾಸರು ಬದುಕಿದ್ದಾಗ ಗುರು ನಾನಕರು ಮತ್ತು ಕಬೀರದಾಸರು ಮುಂಬೆಳಕಿನಲ್ಲಿರುತ್ತಾರೆ. ಇತಿಹಾಸದಲ್ಲಿ ಹೀಗೆ ಅದುಮಿ ಹೋದದ್ದು, ಈಗ ಕಥನಗಳ ಕಥನವಾಗಿ ಚೀರುತ್ತದೆ ಎಂಬುದಾಗಿ ಸಮಾಜಶಾಸ್ತ್ರಜ್ಞರು ವ್ಯಾಖ್ಯಾನಿಸಿದ್ದಾರೆ. ಈ ಮಾತಿಗೆ ಇತ್ತೀಚಿನ ಉದಾಹರಣೆ ಎರಡು ವರ್ಷಗಳ ಹಿಂದೆ ಪಶ್ಚಿಮೀ ಉತ್ತರಪ್ರದೇಶದ ಸಹಾರಣಪುರ ಜಿಲ್ಲೆಯ ಶಬ್ಬೀರಪುರದಲ್ಲಿ ಜರುಗಿದ ರಜಪೂತ- ಚಮ್ಮಾರ ಘರ್ಷಣೆ.

ಶಬ್ಬೀರಪುರದ ರಜಪೂತರು ರಾಣಾಪ್ರತಾಪ ಉತ್ಸವದ ಮೆರವಣಿಗೆ ತೆಗೆದಿದ್ದರು. ಮೆರವಣಿಗೆ ದಲಿತ ವಸತಿ ಪ್ರದೇಶಗಳನ್ನು ಹಾಯುತ್ತಲಿತ್ತು. ಕಿವಿ ಗಡಚಿಕ್ಕುವ ಡಿ.ಜೆ.ಸಂಗೀತದ ಅಬ್ಬರವನ್ನು ತಗ್ಗಿಸಬೇಕೆಂಬ ದಲಿತರ ಮನವಿಗೆ ಬೆಲೆ ಸಿಗಲಿಲ್ಲ. ಪೊಲೀಸರು ಮಧ್ಯಪ್ರವೇಶದ ನಂತರ ಸಂಗೀತದ ಅಬ್ಬರ ಅಡಗಿತು. ಅವಮಾನವೆಂದು ಬಗೆದ ರಜಪೂತರು ತಲವಾರುಗಳು, ಬಂದೂಕುಗಳು, ಕಲ್ಲುಗಳನ್ನು ಹಿಡಿದು ದಲಿತರ ಮನೆಗಳ ಮೇಲೆ ದಾಳಿ ನಡೆಸಿದರು. ಅಂಬೇಡ್ಕರ್ ಪ್ರತಿಮೆಯನ್ನು ಭಗ್ನಗೊಳಿಸಿದರು. ಸಂತ ರವಿದಾಸರ ದೇವಾಲಯಕ್ಕೆ ನುಗ್ಗಿ ಪ್ರತಿಮೆ ಉರುಳಿಸಿ ಮೂತ್ರ ವಿಸರ್ಜಿಸಿದರು. ಮನೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟರು. ಅಂಬೇಡ್ಕರ್ ಪಟಗಳು, ಪುಸ್ತಕಗಳು, ಒಲೆ ಮೇಲಿನ ಅಡುಗೆ, ಕಾಳು ಕಡ್ಡಿಗಳು, ಮೋಟರ್ ಸೈಕಲ್, ಟೀವಿ ಸೆಟ್ಟುಗಳನ್ನು ಸುಟ್ಟು ಹಾಕಿದರು. ನಗನಾಣ್ಯ ದೋಚಿದರು. ಪಾತ್ರೆ ಪಡಗಗಳನ್ನೂ ಬಿಡದೆ ಕೊಚ್ಚಿ ಹಾಕಿದರು. ಅಡ್ಡ ಬಂದವರ ಮೇಲೆ ತಲವಾರುಗಳ ಬೀಸಿದರು. ಬಂದೂಕಿನ ಗುಂಡುಗಳು ಸಿಡಿದವು ಕೂಡ. ಮೂಕ ಜಾನುವಾರುಗಳನ್ನೂ ಬಿಡದೆ ಥಳಿಸಿದರು. ಹೆಣ್ಣುಮಕ್ಕಳ ಬಟ್ಟೆ ಹರಿದರು. ಸ್ತನ ಕತ್ತರಿಸುವ ಪ್ರಯತ್ನಗಳು ಜರುಗಿದವು. ಹಲ್ಲೆಕೋರರಿಂದ ರಕ್ಷಿಸಲು ಮಕ್ಕಳನ್ನು ಮಂಚಗಳೊಳಗೆ ಮುಚ್ಚಿಡಲಾಯಿತು. ಮುಖ್ಯಮಂತ್ರಿ ಆದಿತ್ಯನಾಥ ಖುದ್ದು ರಜಪೂತ ಕುಲಕ್ಕೆ ಸೇರಿದವರು.

ದಾಳಿಕೋರರಿಗೆ ಪೊಲೀಸರ ಸಂಪೂರ್ಣ ‘ಸಹಕಾರ’ವಿತ್ತು. ಅಂಬೇಡ್ಕರ್ ಗೆ ಧಿಕ್ಕಾರ, ಜೈ ಶ್ರೀರಾಮ್, ಜೈ ರಾಣಾ ಪ್ರತಾಪ್ ಘೋಷಣೆಗಳು ಮೊಳಗಿದವು. ದಲಿತ ಹೆಣ್ಣುಮಕ್ಕಳನ್ನು ಬೆದರಿಸಿ ಅವರಿಂದ ‘ಜೈ ಬೋಲೋ ರಾಜಪುತಾನಾ’ ಘೋಷಣೆ ಕೂಗಿಸಲಾಯಿತು. ಕೊಳವೆ ಬಾವಿಗಳ ಹ್ಯಾಂಡ್ ಪಂಪುಗಳನ್ನು ಕಡಿದು ಹಾಕಲಾಯಿತು. ಹಲ್ಲೆಕೋರರ ಮೇಲೆ ಎಫ್.ಐ.ಆರ್. ದಾಖಲಿಸಿ ಕ್ರಮ ಜರುಗಿಸಬೇಕೆಂಬ ದಲಿತರ ಆಗ್ರಹಕ್ಕೆ ಜಿಲ್ಲಾಡಳಿತ ಕಿವುಡಾಯಿತು. ”ಭೀಮ್ ಆರ್ಮಿ”ಎಂಬ ಯುವ ದಲಿತ ಸಂಘಟನೆಯ ಮುಂದಾಳಾತ್ವದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು ರಜಪೂತ ದಲಿತ ಯುವಕರಿಬ್ಬರು ಮಡಿದರು. 180 ದಲಿತ ಕುಟುಂಬಗಳು ಕಾಲುವೆಯೊಂದರ ಬಳಿ ಗುಂಪುಗೂಡಿ ಹಿಂದೂ ದೇವ ದೇವತೆಗಳ ಪ್ರತಿಮೆಗಳನ್ನು ನೀರಿಗೆ ವಿಸರ್ಜಿಸಿ ಕೈ ತೊಳೆದುಕೊಂಡರು. ತಮ್ಮನ್ನು ಘನತೆಯಿಂದ ನಡೆಸಿಕೊಳ್ಳದೆ ಗುಲಾಮರಂತೆ ಕಾಣುವ ಧರ್ಮ ಮತ್ತು ಅದರ ತಥಾಕಥಿತ ಮೇಲ್ಜಾತಿಗಳ ಸಹವಾಸ ಬೇಡವೆಂದು ಸಿಡಿದು ನಿಂತರು.

ರಜಪೂತರು ನಡೆಸಿದ ದಾಳಿಯ ವಿರುದ್ಧದ ಆಂದೋಲನದ ನಾಯಕತ್ವವನ್ನು ‘ಭೀಮ್ ಆರ್ಮಿ’ಯ ಚಂದ್ರಶೇಖರ್ ವಹಿಸಿದ್ದರು. ‘ಜೈ ಗ್ರೇಟ್ ರಜಪುತಾನಾ’ ಘೋಷಣೆಗೆ ಪ್ರತಿಯಾಗಿ ‘ಜೈ ಗ್ರೇಟ್ ಚಮಾರ್’ ಪ್ರತಿರೋಧ ಎದ್ದಿತ್ತು. ಮಹಾರಾಷ್ಟ್ರದ ದಲಿತ ಪ್ಯಾಂಥರ್ ಪಕ್ಷದ ನಂತರ ದಲಿತ ರಾಜಕಾರಣ ಮತ್ತೊಂದು ಆಕ್ರಮಣಕಾರಿ ಸಂಘಟನೆಯನ್ನು ಇತ್ತೀಚೆಗೆ ‘ಭೀಮ್ ಆರ್ಮಿ’ಯ ಹುಟ್ಟಿನ ತನಕ ತನಕ ಕಂಡಿರಲಿಲ್ಲ. ತೀರಾ ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಚಂದ್ರಶೇಖರ್ ಆಜಾದ್ ಅವರನ್ನು ಭೇಟಿ ಮಾಡಲು ಮುಖ್ಯವಾಹಿನಿಯ ದಲಿತ ಸಂಘಟನೆಗಳು ಅಷ್ಟೇನೂ ಆಸಕ್ತಿ ತೋರಲಿಲ್ಲ. ತಮ್ಮ ಮಾತಿನ ವಿನಾ ಯಾರ ಮಾತಿಗೂ ಕಿವಿಗೊಡದ ನಿರ್ಲಕ್ಷ್ಯದ ಧೋರಣೆಯ ಆರೋಪ ಚಂದ್ರಶೇಖರ್ ಮೇಲಿದೆ. ಅವರ ಸಭೆಗೆ ಹಾಜರಾಗಿದ್ದ ಒಬ್ಬಿಬ್ಬರು ಹಿರಿಯ ದಲಿತಪಂಥೀಯರು ಕೂಡ ನಿರಾಸೆ ವ್ಯಕ್ತಪಡಿಸಿರುವ ವರದಿಗಳಿವೆ. ಆದರೆ ಆಜಾದ್ ಅವರ ಅಪ್ಪಟ ಆಕ್ರಮಣಶೀಲ ನಾಯಕತ್ವದ ಗುಣಗಳಿಗೆ ಸೈದ್ಧಾಂತಿಕ ಬದ್ಧತೆ ಬೆರೆತರೆ ಮುಂದೊಮ್ಮೆ ಅವರನ್ನು ದಲಿತ ಸಂಘರ್ಷ ರಾಜಕಾರಣದ ಎತ್ತರಗಳಿಗೆ ಒಯ್ಯಬಹುದಾದ ಸಾಧ್ಯತೆಗಳನ್ನು ಅವರು ಗುರುತಿಸಿದ್ದಾರೆ.

ತಮ್ಮ ದೈವ ಹುಟ್ಟಿದ ಜಾಗವೆಂದು ದಾವೆ ಹೂಡಿರುವವರ ಅಹವಾಲನ್ನು ಸರ್ಕಾರ ಮತ್ತು ನ್ಯಾಯಾಲಯಗಳು ಎಪ್ಪತ್ತು ವರ್ಷಗಳಿಂದ ಕೇಳುತ್ತಿವೆ. ದೆಹಲಿಯ ದೊರೆ ನೀಡಿದ ಜಾಗದ ಮೇಲೆ ಕಟ್ಟಿದ ರವಿದಾಸ್ ಮಂದಿರವನ್ನು 70 ದಿವಸಗಳ ಅವಕಾಶವನ್ನೂ ನೀಡದೆ ನೆಲಸಮ ಮಾಡಿದ್ದು ಯಾವ ನ್ಯಾಯ ಎಂಬ ರವಿದಾಸಿಯಾಗಳ ಪ್ರಶ್ನೆಯಲ್ಲಿ ಹುರುಳಿಲ್ಲವೇ?


ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಮನುವಾದಿಗಳ ಪ್ರಕಾರ ಬ್ರಾಹ್ಮಣರು ಮಾತ್ರ ಮಟಾದಿಪತಿಗಳು ಮತ್ತು ಗುರುಗಳು, ಬ್ರಾಹ್ಮಣರ ದೇವರುಗಳು ಮಾತ್ರ ದೇವರು, ಇದು ಕಂಡನಾರ್ಹ.

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...