Homeಕರ್ನಾಟಕಸ್ವಾತಂತ್ರ್ಯ ಸಂಗ್ರಾಮದ ಚಿತ್ರಕಥನ: ದಕ್ಷಿಣದ ಜಲಿಯನ್ ವಾಲಾಬಾಗ್ ವಿದುರಾಶ್ವತ್ಥ ಉಳಿಸೋಣ

ಸ್ವಾತಂತ್ರ್ಯ ಸಂಗ್ರಾಮದ ಚಿತ್ರಕಥನ: ದಕ್ಷಿಣದ ಜಲಿಯನ್ ವಾಲಾಬಾಗ್ ವಿದುರಾಶ್ವತ್ಥ ಉಳಿಸೋಣ

- Advertisement -
- Advertisement -

ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟ ಅತಿ ಮಹತ್ವದ್ದು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಅಸಂಖ್ಯ ಭಾರತೀಯರು ಸುದೀರ್ಘಕಾಲ ದಿಟ್ಟ ಹೋರಾಟ ನಡೆಸಿದ ವೀರಗಾಥೆಯದು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರು ತಮ್ಮ ಪ್ರಾಣಾರ್ಪಣೆಗೈದಿದ್ದಾರೆ. ಆ ಮಹಾನ್ ಹೋರಾಟದಲ್ಲಿ ಕನ್ನಡಿಗರ ಕೊಡುಗೆಯೂ ಅದ್ವಿತೀಯವಾದದ್ದು. ಕರ್ನಾಟಕದಲ್ಲಿಯೂ ಸಾವಿರಾರು ಜನ ಪ್ರಾಣ ತೆತ್ತಿದ್ದಾರೆ. ಅಂತಹ ನೂರಾರು ಹೋರಾಟಗಳಲ್ಲಿ ವಿದುರಾಶ್ವತ್ಥ ಧ್ಜಜ ಸತ್ಯಾಗ್ರಹ ಮತ್ತು ಗೋಲಿಬಾರ್ ಪ್ರಕರಣ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ. ಅಂದು ಅಲ್ಲಿ ಹುತಾತ್ಮರಾದ 32 ಹೋರಾಟಗಾರರ ನೆನಪಿನಲ್ಲಿ ಸ್ಮಾರಕ ಸ್ಥಾಪಿಸಲಾಗಿದೆ. ವೀರಸೌಧ ಎಂಬ ಹೆಸರಿನ ಸ್ವಾತಂತ್ರ್ಯ ಚಳವಳಿಯನ್ನು ಚಿತ್ರಗಳಲ್ಲಿ ಕಟ್ಟಿಕೊಡಲಾಗಿದೆ. ಆ ಮೂಲಕ ಹುತಾತ್ಮ ವೀರರಿಗೆ ಗೌರವ ಸಲ್ಲಿಸಲಾಗಿದೆ. ಇಂತಹ ಐತಿಹಾಸಿಕ ಸ್ಥಳವನ್ನೂ ಸಹ ವಿವಾದದ ಗೂಡು ಮಾಡಲು ಸಂಘಪರಿವಾರ ಮುಂದಾಗಿದೆ. ಆ ಮೂಲಕ ಇತಿಹಾಸವನ್ನು ಬದಲಿಸುವ ಪ್ರಯತ್ನಕ್ಕೆ ಕೈಹಾಕಿದೆ. ಏನಿದು ವಿವಾದ? ಸಂಘಪರಿವಾರದ ತಂಟೆಯೇನು ಎಂಬುದನ್ನು ತಿಳಿಯುವ ಮೊದಲು ವಿದುರಾಶ್ವತ್ಥದ ಇತಿಹಾಸದತ್ತ ಸಣ್ಣ ನೋಟ.

ಅದು 1938. ದೇಶಾದ್ಯಂತ ಸ್ವಾತಂತ್ರ್ಯ ಚಳವಳಿ ಉತ್ತುಂಗಕ್ಕೇರಿದ್ದ ಕಾಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಹಲವು ಧಾರೆಗಳು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದವು. ಕರ್ನಾಟಕದಲ್ಲಿಯೂ ಸ್ವಾತಂತ್ರ್ಯದ ಕಿಚ್ಚು ಹಬ್ಬತೊಡಗಿತ್ತು. ಮದ್ದೂರಿನ ಶಿವಪುರದಲ್ಲಿ ನಡೆದ ಶಿವಪುರ ಧ್ವಜ ಸತ್ಯಾಗ್ರಹ ಹೋರಾಟ ಭಾರೀ ಯಶಸ್ಸು ಕಂಡಿತ್ತು. ಬ್ರಿಟಿಷ್ ಸರ್ಕಾರದ ಆಜ್ಞೆ ಮೇರೆಗೆ ಆಗಿನ ಮೈಸೂರು ಸರ್ಕಾರದ ವಿರೋಧದ ನಡುವೆಯೂ ಸ್ವಾತಂತ್ರ್ಯ ಹೋರಾಟಗಾರರು ತ್ರಿವರ್ಣ ಧ್ವಜ ಹಾರಿಸಿ ಬಿಡುಗಡೆಯ ಕಹಳೆಯೂದಿದ್ದರು. ಅದು ಎಲ್ಲೆಡೆ ಮಾದನಿಸಿತ್ತು. ಅದರ ಸ್ಫೂರ್ತಿಯಲ್ಲಿಯೇ ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯ, ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಬೃಹತ್ ಹೋರಾಟವೊಂದು ರೂಪು ತಳೆದಿತ್ತು.

ಶಿವಪುರದಲ್ಲಿ ನಡೆದ ಶಿವಪುರ ಧ್ವಜ ಸತ್ಯಾಗ್ರಹ ಹೋರಾಟ

1938ರ ಏಪ್ರಿಲ್ 25ರಂದು ವಿದುರಾಶ್ವತ್ಥದಲ್ಲಿ ಸಾರ್ವಜನಿಕ ಜಾತ್ರೆ ನಡೆಯುತ್ತಿತ್ತು. ಅಂದು ಅಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸತ್ಯಾಗ್ರಹ ನಡೆಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮುಖಂಡರು ನಿರ್ಧರಿಸಿದ್ದರು. ಅಂತೆಯೇ ಎಚ್.ಸಿ ದಾಸಪ್ಪನವರ ಅಧ್ಯಕ್ಷತೆಯಲ್ಲಿ ಧ್ವಜ ಸತ್ಯಾಗ್ರಹ ನಡೆಸಲಾಯಿತು. ಇದನ್ನು ಸಹಿಸದ ಅಂದಿನ ಬ್ರಿಟಿಷ್ ಅಧಿಪತ್ಯದಲ್ಲಿದ್ದ ಮೈಸೂರು ಸರ್ಕಾರದ ಆದೇಶದಂತೆ ಪೊಲೀಸರು ಗುಂಡು ಹಾರಿಸಿದರು. ಏನು ನಡೆಯುತ್ತಿದೆ ಎಂದು ಜನರು ಅರಿಯುವಷ್ಟರಲ್ಲಿ 96 ಸುತ್ತಿನ ಗುಂಡಿನ ಮಳೆಗರೆಯಲಾಯಿತು. ಸ್ಥಳದಲ್ಲಿಯೇ 32 ಹೋರಾಟಗಾರರು ಹುತಾತ್ಮರಾದರು. 100ಕ್ಕೂ ಅಧಿಕ ಜನ ಗಾಯಗೊಂಡರು.

’ಮರೆತುಹೋದ ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್’ ಎಂಬ ಪುಸ್ತಕ ಬರೆದಿರುವ ಪ್ರೊ.ಬಿ ಗಂಗಾಧರಮೂರ್ತಿಯುವರು ಈ ಘಟನೆಯನ್ನು ನೆನೆಯುವುದು ಹೀಗೆ: “ಈ ವಿದ್ಯಮಾನಗಳು ನಡೆಯುವ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಯವರು ಬಾಂಬೆಯಲ್ಲಿದ್ದರು. ಗೋಪಾಲ್ ಚಂದ್ರಶೇಖರಯ್ಯ ಎಂಬುವವರು ವಿದುರಾಶ್ವತ್ಥ ಹೋರಾಟದ ಬಗ್ಗೆ ಗಾಂಧೀಜಿಯವರಿಗೆ ತಿಳಿಸಲು ಬಾಂಬೆಗೆ ಹೋದರು. ಆಗ ಗೋಲಿಬಾರ್ ವಿಷಯ ತಿಳಿದ ಗಾಂಧಿಯವರು ’ಅಹಿಂಸೆಯ ಮೂಲಕ ಸ್ವಾತಂತ್ರ್ಯವನ್ನು ಸಾಧಿಸುವ ಪ್ರಯತ್ನದಲ್ಲಿ ವಿದುರಾಶ್ವತ್ಥದಲ್ಲಿ ಮಡಿದ 32 ಜನರ ಬಲಿದಾನಗಳು ವ್ಯರ್ಥವಾಗುವುದಿಲ್ಲ’ ಎಂದು ಹೇಳಿಕೆ ನೀಡಿದ್ದರು.”

“ಆ ನಂತರ ಗಾಂಧಿಯವರು ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಆಚಾರ್ಯ ಕೃಪಲಾನಿಯವರಿಗೆ ಸ್ಥಳಕ್ಕೆ ಭೇಟಿ ಕೊಟ್ಟು ವರದಿ ನೀಡಲು ಹೇಳಿದ್ದರು. ಸರ್ದಾರ್ ವಲ್ಲಭಬಾಯಿ ಪಟೇಲ್‌ರವರು ವಿದುರಾಶ್ವತ್ಥಕ್ಕೆ ಭೇಟಿ ನೀಡಿದ ನಂತರ ಬೆಂಗಳೂರಿನಲ್ಲಿ ಮಿರ್ಜಾ ಇಸ್ಮಾಯಿಲ್‌ರವರನ್ನು ಕರೆಸಿಕೊಂಡು ಘಟನೆ ಖಂಡಿಸಿ ಮಾತುಕತೆ ನಡೆಸಿದರು. ಅದರ ಫಲಶೃತಿಯಾಗಿ ಪಟೇಲ್-ಮಿರ್ಜಾ ಒಪ್ಪಂದ ಮಾಡಿಕೊಳ್ಳಲಾಯಿತು. ಅಂದಿನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಧ್ವಜವನ್ನು ಸಹ ಹಾರಿಸಲು ಅನುಮತಿ ನೀಡಲಾಯಿತು. ಜೊತೆಗೆ ಅಂದಿನ ಮೈಸೂರು ಸಂಸ್ಥಾನದ ಜವಾಬ್ದಾರಿ ಸರ್ಕಾರದ ಸಭೆಯಲ್ಲಿ ಕಾಂಗ್ರೆಸ್ ಪ್ರತಿನಿಧಿಗಳು ಇರುವಂತೆ ನೋಡಿಕೊಳ್ಳಲು ಒಪ್ಪಂದ ಆಯಿತು. ಆ ಮೂಲಕ ಮೊಟ್ಟಮೊದಲ ಬಾರಿಗೆ ಜನಗಳ ಪ್ರತಿನಿಧಿಗಳು ಸರ್ಕಾರದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು. ಆನಂತರ ಎಲ್ಲಾ ಕಡೆ ಧ್ವಜ ಸತ್ಯಾಗ್ರಹಗಳು ನಡೆದವು. ವಿದುರಾಶ್ವತ್ಥ ದಿನವನ್ನಾಗಿ ಆಚರಿಸಲಾಯಿತು” ಎನ್ನುತ್ತಾರೆ.

“1938ರ ಸಮಯದಲ್ಲಿ ವಿದುರಾಶ್ವತ್ಥ ಒಂದು ದುರ್ಗಮ ಕಾಡಿನ ಪ್ರದೇಶವಾಗಿತ್ತು. ಜಾತ್ರೆ ನಡೆಯುತ್ತಿತ್ತು. ಆ ಜಾತ್ರೆಗೆ ಜನರ ಜೊತೆ ಕಾಂಗ್ರೆಸ್ ಹೋರಾಟಗಾರರೂ ಸೇರಿಕೊಂಡಿದ್ದರು. ಧ್ವಜ ಸತ್ಯಾಗ್ರಹ ನಡೆದು, ಗೋಲಿಬಾರ್ ಸಂಭವಿಸಿದ ಮೇಲೆ, ಸರ್ಕಾರ ಕೇವಲ 10 ಜನ ಮಾತ್ರ ಮೃತಪಟ್ಟಿದ್ದಾರೆ ಎಂದು ವರದಿ ನೀಡಿತು. ಆಗ ಬೆಂಗಳೂರಿನ ರಾಜು ಎಂಬ ಮಾನವ ಹಕ್ಕುಗಳ ಕಾಳಜಿಯುಳ್ಳವರು ಸ್ಥಳಕ್ಕೆ ಭೇಟಿ ನೀಡಿ 32 ಕ್ಕೂ ಹೆಚ್ಚು ಜನರ ಶವಗಳು ಬಿದ್ದಿದ್ದವು ಎಂದು ವರದಿ ಮಾಡಿದ್ದರು. ಆಗ ಜನರು ರಾತ್ರೋರಾತ್ರಿ ಲಾಟೀನುಗಳನ್ನು ಹಿಡಿದು ತಮ್ಮ ಸಂಬಂಧಿಕರ ಶವ, ಗಾಯಾಳುಗಳನ್ನು ಹುಡುಕಿ ಯಾರಿಗೂ ಹೇಳದೆ ತಮ್ಮ ಮನೆಗೆ ಹೊತ್ತುಕೊಂಡು ಹೋದರು. ಗುಪ್ತವಾಗಿ ಶವಸಂಸ್ಕಾರ ಮಾಡಿದರು. ಏಕೆಂದರೆ ಸರ್ಕಾರಕ್ಕೆ ಗೊತ್ತಾದರೆ ತಮ್ಮ ಮೇಲೆಯೂ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಹಾಕುತ್ತಾರೆ ಎಂಬ ಭಯ ಇತ್ತು” ಎಂದು ಹೋರಾಟದ ಘಟನೆಗಳನ್ನು ಮೆಲುಕು ಹಾಕುತ್ತಾರೆ ಗಂಗಾಧರ ಮೂರ್ತಿಯವರು.

ಹಿಂದಿನ ಬೆಂಗಳೂರಿನ ಕೋಮು ಗಲಭೆಯೊಂದರಲ್ಲಿ ಗುಂಡು ಹಾರಿಸಿದ್ದ ಇನ್ಸ್ಪೆಕ್ಟರ್ ಒಬ್ಬನನ್ನು ಗೌರಿಬಿದನೂರಿಗೆ ಶಿಕ್ಷೆಯಾಗಿ ವರ್ಗಾವಣೆ ಮಾಡಲಾಗಿತ್ತು. ಆತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೇಲೆ ಸದಾ ಕಿಡಿಕಾರುತ್ತಿದ್ದ. ಆತನೂ ಈ ಗೋಲಿಬಾರ್‌ಗೆ ಕಾರಣನಾಗಿದ್ದ. ಆದರೆ ಸರ್ಕಾರ ಕೇವಲ 10 ಜನ ಸತ್ತರು ಎಂದಿತ್ತು. ಕೆಲವರು ಹಾವು ಕಚ್ಚಿ ಸತ್ತರು ಎಂದು ಹೇಳಿ ಪೊಲೀಸರು ನುಣುಚಿಕೊಂಡರು. ಆದರೆ ಅದನ್ನು ಒಪ್ಪದ ಜನರು ಸರ್ಕಾರದ ವರದಿಯನ್ನು ಸುಟ್ಟುಹಾಕಿ ಹರತಾಳ ನಡೆಸಿದರು. ಗೌರಿಬಿದನೂರಿನ ಆಸ್ಪತ್ರೆಯ ಶಂಕುಸ್ಥಾಪನೆಗೆ ಬಂದಿದ್ದ ಮೈಸೂರು ದಿವಾನ ಮಿರ್ಜಾ ಇಸ್ಮಾಯಿಲ್ ಎದುರೆ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗಳು ಆರು ತಿಂಗಳಿಗೂ ಹೆಚ್ಚು ಕಾಲ ವ್ಯಾಪಿಸಿದ್ದವು. ವಿದುರಾಶ್ವತ್ಥ ಗೋಲಿಬಾರ್ ಖಂಡಿಸಿ 1938ರ ಅಕ್ಟೋಬರ್ 27ರಂದು ಇಡೀ ಮೈಸೂರು ಪ್ರಾಂತ್ಯದಲ್ಲಿ ಹೋರಾಟ ನಡೆಯಿತು ಎನ್ನುತ್ತದೆ ಇತಿಹಾಸ.

ಈ ಇತಿಹಾಸವನ್ನು ಕೇವಲ ವಿದ್ವ್ವಾಂಸರು ಮಾತ್ರ ಬರೆದಿರುವುದಲ್ಲ. ವಿದುರಾಶ್ವತ್ಥ ಸುತ್ತಲಿನ ಜನರು ಇಂದಿಗೂ ಈ ವಿವರಗಳನ್ನು ತಮ್ಮ ಒಡಲಲ್ಲಿಟ್ಟುಕೊಂಡಿದ್ದಾರೆ. ಹುತಾತ್ಮ ವೀರರನ್ನು ನೆನೆದು ಲಾವಣಿ ಕಟ್ಟಿ ಹಾಡಿದ್ದಾರೆ. ಆ ಮೂಲಕ ಅಂದಿನ ಹೋರಾಟವನ್ನು ಇಂದಿಗೂ ಜೀವಂತವಿಟ್ಟಿದ್ದಾರೆ. ಅಂತಹ ಒಂದು ಲಾವಣಿ ಇಲ್ಲಿದೆ.

“ಒಂಭೈನೂರ್ ಮೂವತ್ತೆಂಟನೆ ಏಪ್ರಿಲ್
ತಿಂಗಳ ಇಪ್ಪತ್ತೈದರೊಳು ತುಂಬಿರೆ
ಬಹು ಪ್ರಜೆ ಸಂಭ್ರಮದಿಂದಲಿ
ವಿದುರಾಶ್ವತ್ಥ ಜಾತ್ರೆಯೊಳು,
ಸುತ್ತಮುತ್ತಲು ಲಾಠಿ ಹೊಡೆತಗಳ
ಮತ್ತೆ ಗುಂಡಿನ ಏಟುಗಳ್ ಸತ್ತ
ಹೆಣಗಳ
ಲೆಕ್ಕವಿಲ್ಲವು ಹೊತ್ತರೆಷ್ಟೋ
ಗುಪ್ತದೊಳ್”.

ಇಂತಹ ಸ್ವಾತಂತ್ರ್ಯ ಹೋರಾಟದ ಕರಾಳ ಅಧ್ಯಾಯದ ಹುತಾತ್ಮರ ಸ್ಮರಣೆಯಲ್ಲಿ ವಿದುರಾಶ್ವತ್ಥವನ್ನು ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಕರೆಯಲಾಗುತ್ತದೆ. ಹುತಾತ್ಮರನ್ನು ಮಣ್ಣು ಮಾಡಿದ ಜಾಗದಲ್ಲಿ ಸ್ಮಾರಕವನ್ನು 1973ರಲ್ಲಿ ನಿರ್ಮಿಸಲಾಗಿದೆ. ಅಂದಿನ ದಿಟ್ಟ ಹೋರಾಟವನ್ನು ಕಣ್ಮುಂದೆ ತರುವ ವೀರಸೌಧವನ್ನು 2004ರಲ್ಲಿ ಕಟ್ಟಲಾಗಿದೆ. 2009ರಲ್ಲಿ ಸಮಗ್ರ ಭಾರತ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಒಂದು ಬೃಹತ್ ಚಿತ್ರ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ವಿದುರಾಶ್ವತ್ಥ ಹೋರಾಟ ಮಾತ್ರವಲ್ಲದೆ ಇಡೀ ದೇಶದ ಸ್ವಾತಂತ್ರ್ಯ ಚಳವಳಿಯ ಚಿತ್ರಗಳು ಅಲ್ಲಿವೆ. ಅಲ್ಲಿಗೆ ಒಮ್ಮೆ ಭೇಟಿ ಕೊಟ್ಟರೆ ಸಾಕು ನಮ್ಮ ಭಾರತದ ಸ್ವಾತಂತ್ರ್ಯ ಚಳವಳಿಯ ನೆನಪು ಕಣ್ಮುಂದೆ ಬರುತ್ತದೆ.

ಹುತಾತ್ಮರ ಸ್ಮಾರಕ ಸ್ಥಂಭ

ಆದರೀಗ ಇಂತಹ ಐತಿಹಾಸಿಕ ಸ್ಮಾರಕ, ಚಿತ್ರ ಗ್ಯಾಲರಿಯ ಮೇಲೆ ಸಂಘಪರಿವಾರದ ವಕ್ರದೃಷ್ಟಿ ಬಿದ್ದಿದೆ. ಕಾರಣ: ಸಂಘಪರಿವಾರದ ಒಬ್ಬ ವ್ಯಕ್ತಿಯೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ಭಾಗವಹಿಸಿ ಪ್ರಾಣ-ಬಲಿದಾನ ಕೊಟ್ಟಿದ್ದಿಲ್ಲ. ಸಹಜವಾಗಿ, ಬ್ರಿಟಿಷರಿಗೆ ಒಂಭತ್ತು ಬಾರಿ ಕ್ಷಮಾಪಣಾ ಪತ್ರಗಳನ್ನು ಬರೆದು, ಇನ್ನೆಂದೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಲಿಖಿತ ಪತ್ರ ಕೊಟ್ಟು, ಸರ್ಕಾರದ ಸೇವೆ ಮಾಡುತ್ತೇವೆಂದು ಘೋಷಿಸಿದವರ ಚಿತ್ರಗಳು, ಮಹಾತ್ಮ ಗಾಂಧಿ ಕೊಂದವರ ಚಿತ್ರಗಳು ಸ್ಮಾರಕ ಚಿತ್ರ ಗ್ಯಾಲರಿಯಲ್ಲಿ ದಾಖಲಿಸಲಾಗಿರುವ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿಲ್ಲ. ಬದಲಿಗೆ ಅವರ ಫೋಟೊಗಳು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಿದ, ಕೋಮುವಾದ ಹರಡಿದ ಜನರ ಪಟ್ಟಿಯಲ್ಲಿವೆ. ಈ ಐತಿಹಾಸಿಕ ಸತ್ಯಗಳು ಸಂಘಪರಿವಾರಕ್ಕೆ ನುಂಗಲಾರದ ತುತ್ತಾಗಿವೆ. ಹಾಗಾಗಿಯೇ ಅದು ಮಹಾತ್ಮ ಗಾಂಧೀಜಿ, ನೆಹರೂ, ಭಗತ್ ಸಿಂಗ್, ಟಿಪ್ಪು ಸುಲ್ತಾನ್‌ರಂತಹ ನೈಜ ಸ್ವಾತಂತ್ರ್ಯ ಹೋರಾಟಗಾರರ ತೇಜೋವಧೆ ಮಾಡುತ್ತಾ ಬಂದಿದೆ. ದೇಶದಾದ್ಯಂತ ಇತಿಹಾಸವನ್ನು ಅಗೆಯುತ್ತಾ, ಅದನ್ನು ತಿರುಚುವ ಕೆಲಸ ಮಾಡುತ್ತಿದೆ. ಹೇಗಾದರೂ ಮಾಡಿ ಸ್ವಾತಂತ್ರ್ಯ ಚಳವಳಿಯಲ್ಲಿ ನಾವೂ ಇದ್ದೆವು ಎಂದು ತೋರಿಸಿಕೊಳ್ಳುವ ಒತ್ತಡ ಉಂಟಾಗಿ ಅದಕ್ಕಾಗಿ ಸತತವಾಗಿ ವಿಫಲ ಯತ್ನ ಮಾಡುತ್ತಿದೆ. ಅದರ ಭಾಗವಾಗಿ ವಿದುರಾಶ್ವತ್ಥ ಚಿತ್ರಗ್ಯಾಲರಿಯನ್ನು ವಿವಾದವಾಗಿಸಿದೆ.

ಕಳೆದೊಂದು ದಶಕದಿಂದ ಈ ಚಿತ್ರ ಗ್ಯಾಲರಿಯನ್ನು ನೋಡಿ ಮೆಚ್ಚಿದವರು ಬಹುತೇಕರು. ಆಗ ಯಾವುದೇ ತಕರಾರು ಇಲ್ಲದ್ದು, ಈಗ ಸಂಘಪರಿವಾರದ ಕುಮ್ಮಕ್ಕಿನಿಂದ ವಿವಾದಕ್ಕೀಡಾಗಿದೆ. ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಸಂಘ ಪರಿವಾರದವರ ಫೋಟೊ ಇಲ್ಲ ಏಕೆ ಎಂಬುದು ಅವರ ಪ್ರಶ್ನೆಯಾಗಿದೆ. ಸಾವರ್ಕರ್ ಫೋಟೊ ಹಾಕಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ. ಆದರೆ ವಿದುರಾಶ್ವತ್ಥ ಫ್ರೀಡಂ ಮೆಮೊರಿಯಲ್ ಮ್ಯೂಸಿಯಂ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಪ್ರೊ. ಬಿ. ಗಂಗಾಧರ ಮೂರ್ತಿ ಅವರು “ಕ್ಷಮಾಪಣಾ ಪತ್ರ ಬರೆದುದು ಇಡೀ ಜಗತ್ತಿಗೇ ತಿಳಿದಿಲ್ಲವೇ? ಅವರ ಫೋಟೋ ಹಾಕುವ ಮೂಲಕ ಉಳಿದ ನೈಜ ಹೋರಾಟಗಾರರಿಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ” ಎಂದು ಖಡಕ್ ಆಗಿ ಹೇಳುತ್ತಾರೆ.

ಇನ್ನು ಮತ್ತೊಂದು ಚಿತ್ರದಲ್ಲಿ ಗಾಂಧಿ ಕೊಲೆಯ ಆರೋಪಿಗಳ ಪಟ್ಟಿಯನ್ನು ನೀಡಲಾಗಿದೆ. ಅದರಲ್ಲಿ ನಾಥೂರಾಂ ಗೋಡ್ಸೆ, ಎಚ್.ಎನ್ ಆಪ್ಟೆ, ಗೋಪಾಲ್ ಗೋಡ್ಸೆ, ಕರ್‌ಕರೆ ಮತ್ತು ಸಾವರ್ಕರ್ ಹೆಸರುಗಳನ್ನು ಹಾಕಲಾಗಿದೆ. ಅದರ ಕಳೆಗೆ ವಿಚಾರಣೆಯ ನಂತರ ನಾಥೂರಾಂ ಗೋಡ್ಸೆ, ಎಚ್.ಎನ್ ಆಪ್ಟೆ ಅವರಿಗೆ ಗಲ್ಲು ಶಿಕ್ಷೆ, ಗೋಪಾಲ್ ಗೋಡ್ಸೆಗೆ ಜೀವಾವಧಿ ಶಿಕ್ಷೆಯಾಗಿ, ಸಾವರ್ಕರ್‌ರನ್ನು ದೋಷಮುಕ್ತಗೊಳಿಸಲಾಗಿದೆ ಎಂದು ಬರೆಯಲಾಗಿದೆ. ಇದರಲ್ಲಿ ಸಾವರ್ಕರ್ ಫೋಟೊ ತೆಗೆಯಬೇಕೆಂಬುದು ಸಂಘಪರಿವಾರದ ಆಗ್ರಹವಾಗಿದೆ.

ಮತ್ತೊಂದು ಚಿತ್ರದಲ್ಲಿ ಬಲಪಂಥೀಯ ರಾಜಕಾರಣ: ಹಿಂದೂ ಕೋಮುವಾದ – ಹಿಂದೂ ಮಹಾಸಭಾ, ಆರ್‌ಎಸ್‌ಎಸ್ ಎಂದೂ, ಜೊತೆಗೆ ಬಲಪಂಥೀಯ ರಾಜಕಾರಣ: ಮುಸ್ಲಿಂ ಕೋಮುವಾದ- ಮುಸ್ಲಿಂ ಲೀಗ್ ಎಂದು ಬರೆದು ಸ್ವಾತಂತ್ರ್ಯ ಚಳವಳಿ ಸಂದರ್ಭವನ್ನು ವಾಸ್ತವವಾಗಿ ಕಟ್ಟಿಕೊಡಲಾಗಿದೆ. ಆಯಾ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡವರ ಮುಖಂಡರ ಹೆಸರು ಹಾಕಲಾಗಿದೆ. ಇದನ್ನು ತೆಗೆಯಬೇಕೆಂಬುದು ಆರ್‌ಎಸ್‌ಎಸ್ ಕಾರ್ಯಕರ್ತರ ವಾದ. ಜೊತೆಗೆ ಎಂದಿನಂತೆ ಟಿಪ್ಪು ಫೋಟೊವನ್ನು ಸಹ ತೆಗೆಯಬೇಕೆಂದು ಕ್ಯಾತೆ ತೆಗೆದಿದ್ದಾರೆ.

ಈ ಕುರಿತು ನ್ಯಾಯಪಥ ಪತ್ರಿಕೆಯೊಂದಿಗೆ ಮಾತನಾಡಿದ ಪ್ರೊ.ಬಿ ಗಂಗಾಧರ ಮೂರ್ತಿಯವರು, “ವಾಸ್ತವ ಅಂಶಗಳ ಆಧಾರದಲ್ಲಿ, ಎನ್‌ಸಿಎಫ್ 2005ರ ಪಠ್ಯಕ್ರಮದ ಆಧಾರದಲ್ಲಿ ನಾವೊಂದು ಐತಿಹಾಸಿಕ ದಾಖಲೆ ಸೃಷ್ಟಿಸಿದ್ದೇವೆ. ಆದರೆ ಅದನ್ನು ತಿರುಚಲು, ನಾಶಪಡಿಸಲು ಸಂಘಪರಿವಾರ, ಸರ್ಕಾರ ಪ್ರಯತ್ನಿಸುತ್ತಿದೆ. ಅದನ್ನು ಉಳಿಸಿಕೊಳ್ಳುವುದು ಜನರಿಗೆ ಬಿಟ್ಟಿದ್ದು. ಈಗಾಗಲೇ ವೀರಸೌಧ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟಿದ್ದೇವೆ. ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಕನ್ನಡಪರ ಸಂಘಟನೆಗಳು, ರೈತ ಸಂಘಟನೆ ಮತ್ತು ದಲಿತ ಸಂಘಟನೆಗಳು ನಮ್ಮ ಬೆನ್ನಿಗೆ ನಿಂತಿದ್ದಾರೆ. ಗಾಂಧಿವಾದಿಗಳು ಬೆಂಬಲ ಘೋಷಿಸಿದ್ದಾರೆ” ಎಂದರು.

“ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕುರಿತು ನೂರಾರು ಪುಸ್ತಕಗಳು, ಸಿನಿಮಾಗಳು ಬಂದಿವೆ. ಆ ಐತಿಹಾಸಿಕ ಹೋರಾಟವನ್ನು ಚಿತ್ರಗಳಲ್ಲಿ ಕಟ್ಟಿಕೊಡುವ ಕೆಲಸವನ್ನು ವಿದುರಾಶ್ವತ್ಥ ಚಿತ್ರ ಗ್ಯಾಲರಿಯ ಮೂಲಕ ನಮ್ಮ ಕನ್ನಡಿಗರು ಮಾಡಿದ್ದಾರೆ. ಅದನ್ನು ಜಾತ್ಯತೀತವಾಗಿ ಉಳಿಸುವ, ಸ್ವಾತಂತ್ರ್ಯ ಚಳವಳಿಗೆ ಗೌರವ ಸಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ” ಎನ್ನುತ್ತಾರೆ.

ಈ ನಿಟ್ಟಿನಲ್ಲಿ ಚಿತ್ರಗ್ಯಾಲರಿ ನಾಶ ಮಾಡುವ ಸಂಘಪರಿವಾರದ ಬೆದರಿಕೆಗೆ ಆಡಳಿತ ಮತ್ತು ನಿಜವನ್ನರಿತಿರುವ ಜನರು ಸರಿಯಾದ ಉತ್ತರ ನೀಡಬೇಕಿದೆ.


ಇದನ್ನೂ ಓದಿ: ಜನಸಾಮಾನ್ಯರನ್ನು ಕೆರಳಿಸಿದ ಪಠ್ಯಪುಸ್ತಕ ಪರಿಷ್ಕರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...