Homeಮುಖಪುಟಸಮಾಜವಾದಿ ಚಿಂತಕ- ’ಗಾಂಧಿ ಕಥನ’ದ ಲೇಖಕ ಡಿ.ಎಸ್ ನಾಗಭೂಷಣ ನೆನಪು

ಸಮಾಜವಾದಿ ಚಿಂತಕ- ’ಗಾಂಧಿ ಕಥನ’ದ ಲೇಖಕ ಡಿ.ಎಸ್ ನಾಗಭೂಷಣ ನೆನಪು

- Advertisement -
- Advertisement -

ನಾಗಭೂಷಣ್ ನನಗೆ ಮೊದಲು ಪರಿಚಯವಾದದ್ದು ಅವರ ಧ್ವನಿಯ ಮುಖಾಂತರ. ಆಗವರು ದಿಲ್ಲಿಯ ಆಕಾಶವಾಣಿಯಲ್ಲಿ ವಾರ್ತೆಗಳನ್ನು ಓದುತ್ತಿದ್ದರು. ಯಾವುದೋ ಅಗಮ್ಯ ಲೋಕದಿಂದ ಬರುವ ಆ ದನಿಗೆ ಕಿವಿಗೊಟ್ಟು ಆಲಿಸುತ್ತ ವಾರ್ತೆಗಳ ವಿಶೇಷತೆಗೆ ತಕ್ಕಂತೆ ನಮಗೆ ಮುಖಭಾವ ಬದಲಾಗುವಂತೆ ಮಾಡುತ್ತಿದ್ದ ಆ ಗಂಭೀರ ಧ್ವನಿ ಅವರದಾಗಿತ್ತು. ಸಾಮಾಜಿಕ ಪರಿವರ್ತನೆಯಲ್ಲಿ ಅಚಲ ನಂಬಿಕೆಯುಳ್ಳವರಾಗಿದ್ದ ಆ ತರುಣ ಲಂಕೇಶ್ ಪತ್ರಿಕೆ ಆರಂಭವಾದ ಕೂಡಲೆ ಆಕಾಶವಾಣಿ ಕೆಲಸಕ್ಕೆ ರಾಜೀನಾಮೆ ಬರೆದು ಕರ್ನಾಟಕಕ್ಕೆ ಬಂದು ಪತ್ರಿಕೆಗೆ ತನಿಖಾ ವರದಿ ಬರೆದರು. ಆ ಕಾಲಕ್ಕೆ ಆ ವರದಿಗಳು ಬಾಂಬಿನಂತಿರುತ್ತಿದ್ದವು. ಕ್ರಮೇಣ ಲಂಕೇಶರ ಜೊತೆ ಏಗುವುದು ಕಷ್ಟ ಅನ್ನಿಸಿತು. ಮತ್ತೆ ಆಕಾಶವಾಣಿಗೆ ಹೋದರು. ಸುದೈವಕ್ಕೆ ಅವರ ರಾಜೀನಾಮೆ ಅಂಗೀಕೃತವಾಗಿರಲಿಲ್ಲ. ಆದ್ದರಿಂದ ನಾಗಭೂಷಣ ಬಚಾವಾದರೆಂದೇ ಹೇಳಬೇಕು. ಅವರು ಕವಿಯತ್ರಿ ಸವಿತಾರನ್ನ ಕೈ ಹಿಡಿದ ಮೇಲೆ ಬರವಣಿಗೆಯ ಜೊತೆಗೆ ಕರ್ನಾಟಕದ ಎಲ್ಲಾ ಚಳವಳಿಗಳಲ್ಲಿ ಭಾಗವಹಿಸುತ್ತಾ, ಮುಖ್ಯವಾಗಿ ರೈತ ಚಳಿವಳಿ, ದಲಿತ ಚಳವಳಿ, ಸಮಾಜವಾದಿ ಆಶಯಗಳ ಪ್ರತಿಪಾದನೆಯಲ್ಲಿ ಸಕ್ರಿಯರಾದರು.

ಅವರು ನೇರವಾಗಿ ಪರಿಚಯವಾದದ್ದು ಕೆಮ್ಮಣ್ಣುಗುಂಡಿಯಲ್ಲಿ ನಡೆದ ದಲಿತ ಅಧ್ಯಯನ ಶಿಬಿರದಲ್ಲಿ. ಲೋಹಿಯಾ, ಗಾಂಧೀಜಿ, ಅಂಬೇಡ್ಕರ್ ಮತ್ತು ಮಾರ್ಕ್ಸ್ ಕುರಿತ ನಾಲ್ಕು ದಿನದ ಚರ್ಚೆಯಲ್ಲಿ ನಾಗಭೂಷಣರ ದೈತ್ಯ ಪ್ರತಿಭೆಯ ಪರಿಚಯವಾಯ್ತು. ಅಲ್ಲಿಗೆ, ಚಂದ್ರಗುತ್ತಿಯಲ್ಲಿ ನಡೆದ ಬೆತ್ತಲೆ ಸೇವೆ ತಡೆದ ದಿಗ್ವಿಜಯದೊಂದಿಗೆ ಪ್ರೊ. ಬಿ.ಕೃಷ್ಣಪ್ಪ, ಕಡಿದಾಳು ಶಾಮಣ್ಣ ಬಂದು ಸೇರಿಕೊಂಡರು. ಅಲ್ಲಿ ನಡೆದ ಸಮಾರೋಪ ಮುಗಿಸಿ ಎಲ್ಲರೂ ತಮ್ಮತಮ್ಮ ದಿಕ್ಕಿಗೆ ಹಾರಿಹೋದರು. ರೈತ ಚಳವಳಿ ಮತ್ತು ದಲಿತ ಚಳವಳಿ ವಿಘಟನೆಗೊಂಡು ಭಾಷಾ ಚಳವಳಿ ಜೀರ್ಣಗೊಂಡ ನಂತರದ ವಿಷಾದಕರ ಸಂದರ್ಭದಲ್ಲಿ ನಾಗಾಭೂಷಣ್ ವಾಲೆಂಟರಿ ರಿಟೈರ್‌ಮೆಂಟ್ ಪಡೆದು ವಿಶ್ರಾಂತ ಜೀವನಕ್ಕೆ ಶಿವಮೊಗ್ಗ ಜಿಲ್ಲೆಯನ್ನೇ ಆರಿಸಿಕೊಂಡಾಗ ನಮಗೆಲ್ಲಾ ಖುಷಿಯಾಯ್ತು. ಆಗ ಭೇಟಿಯಾದ ನಾನು “ನೀವು ಶಿವಮೊಗ್ಗಕ್ಕೆ ಬಂದಿದ್ದು ಬಾಳ ಖುಷಿಯಾಯ್ತು ಸಾರ್” ಎಂದೆ. ಇಲ್ಲೆಲ್ಲಾ ಅವರ ಗತಕಾಲದ ಗೆಳೆಯರಿದ್ದು, ಕೆಲವರು ನಿವೃತ್ತರಾಗಿದ್ದರೆ ಕೆಲವರು ನಿವೃತ್ತಿ ಅಂಚಿನಲ್ಲಿದ್ದರು. ಶಿವಮೊಗ್ಗದ ಹೌಸಿಂಗ್ ಬೋರ್ಡಿನಿಂದ ಮನೆ ಪಡೆದು ಅದನ್ನು ನವೀಕರಿಸಿ ಮೂರನೇ ಮಜಲಿನ ಜೀವನ ಆರಂಭಿಸಿದರು. ಎಂದಿನಂತೆ ಬರವಣಿಗೆಯನ್ನು ಮುಂದುವರೆಸಿದ್ದರು. ಅವರ ’ಗಮನ’ ಕೃತಿ ನಾಡಿನ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿ ಅವರ ಮುಂದಿನ ಕೃತಿಗಳ ಬಗ್ಗೆ ತುಂಬಾ ಭರವಸೆ ಮೂಡಿಸಿದ್ದರು.

ಅದರಲ್ಲೂ ’ಗಮನ’ ಕೃತಿಯಲ್ಲಿ ಅವರು ಮಾಸ್ತಿಯವರ ಸಾಹಿತ್ಯವನ್ನು ವಿಮರ್ಶಿಸಿರುವ ಪರಿಗೆ ವಿಮರ್ಶಾಲೋಕ ಬೆರಗುಗೊಂಡಿತ್ತು. ಆದರೆ, ಜಾತಿಗಳದ್ದೇನೂ ತಪ್ಪಿಲ್ಲ ಅದನ್ನ ಆಚರಿಸಿಕೊಂಡು ಹೋಗುವ ರೀತಿಯಲ್ಲಿ ಕೆಲವು ತಪ್ಪಿರಬಹುದೆಂದು ಹೇಳಿ, ತೇಜಸ್ವಿಯವರಿಂದ ಉಗ್ರವಾಗಿ ಟೀಕಿಸಿಕೊಂಡಿದ್ದ ಮಾಸ್ತಿಯವರ ಮನೋಭಿತ್ತಿಯನ್ನು ನಾಗಭೂಷಣ ಪ್ರಶ್ನೆ ಮಾಡಿರಲಿಲ್ಲ. ಇಂತಹದೊಂದು ಅನುಮಾನ ನಮ್ಮಲ್ಲಿ ಸದಾ ಉಳಿದಿತ್ತು. ಚರ್ಚೆಗೆ ಹೋದರೆ ಹಠಬಿದ್ದು ಜಗಳ ಆಡಿ ಸಂತೋಷದ ಸಂದರ್ಭಗಳನ್ನೇ ಹಾಳುಮಾಡಿಕೊಂಡು ಕೂರುವ ನಾಗಭೂಷಣರ ನಡವಳಿಕೆಗೆ ಹೆದರಿದ ಹಲವು ಮಿತ್ರರು ತೆಪ್ಪಗಾಗುತ್ತಿದ್ದರು. ನಾಗಭೂಷಣ ವಿದ್ವತ್ತಿನಷ್ಟೇ ಜಗಳಗಂಟರು. ಎಲ್ಲಾ ಸಂತೋಷದ ಸಮಯಗಳನ್ನು ಉಡಾಯಿಸಿ ಹೋಗುವ ಸೋಷಿಯಲಿಸ್ಟರ ಮುಖ್ಯಗುಣ ಅಥವಾ ಹುಟ್ಟುಗುಣ ಅದು ಅನ್ನಬಹುದು. ತಾವು ತಿಳಿದುಕೊಂಡ ಸತ್ಯಗಳನ್ನ ವಿನಯದಿಂದ ಪ್ರತಿಪಾದಿಸಿ ಜನಸಮೂಹದ ವಿಶ್ವಾಸ ಗಳಿಸುವಂತಹ ತಾಳ್ಮೆಯನ್ನೇ ಕಾಣದೇ ಕಣ್ಮರೆಯಾದ ಸೋಷಿಯಲಿಸ್ಟರ ದಂಡೇ ಇದೆ ಹಾಗೆ ನೋಡಿದರೆ ಈ ಸೋಷಿಯಲಿಸ್ಟರು ಹೋರಾಡಿದ್ದು ತಮ್ಮ ವಿರುದ್ಧವೇ ಹೊರತು ಇನ್ನಾರ ವಿರುದ್ಧವೂ ಅಲ್ಲ ಎಂಬುದೂ ಸಾಬೀತಾಗಿದೆ.

ನಾಗಭೂಷಣ ಬಹುದೊಡ್ಡ ವಿದ್ವಾಂಸ, ಸಾಹಿತ್ಯ ಮತ್ತು ರಾಜಾಕಾರಣದ ವಿಶ್ಲೇಷಣೆಯಲ್ಲಿ ದೈತ್ಯ ಪ್ರತಿಭೆ. ಆದರೆ ಅವರಿಗೂ ಎಲ್ಲರಂತೆ ಕೆಲವು ಪೂರ್ವಾಗ್ರಹಗಳಿದ್ದವು. ಪೂರ್ವಾಗ್ರಹದ ಒಂದು ಎಳೆಯಿದ್ದರು ಸಾಕು ಪ್ರಶ್ನೆಗಳನ್ನ ಎದುರಿಸಬೇಕಾಗುತ್ತದೆ. ಅದಾಗಲೇ ನಾಗಾಭೂಷಣ್ ಬರೆಯುವಂತಹ ಯಾವ ಪತ್ರಿಕೆಯೂ ಇರಲಿಲ್ಲ. ಇಂದೂಧರ ಹೊನ್ನಾಪುರ ತರುತ್ತಿದ್ದ ಸಂವಾದ ಮಾಸಿಕ ನಾಗಭೂಷಣರ ವಿಚಾರ ವಿಮರ್ಶೆಗೆ ತಕ್ಕ ಪತ್ರಿಕೆಯಾಗಿ ಗೋಚರಿಸಿತ್ತು. ಅದಕ್ಕೆ ಲೇಖನ ಬರೆದರು. ರಹಮತ್ ತರೀಕೆರೆಯಿಂದ ಪ್ರತಿಲೇಖನ ಬಂತು. ಅದನ್ನು ಪ್ರಕಟಿಸಿದ ಇಂದೂಧರರ ಮೇಲೆ ಸಿಟ್ಟಾದರು ನಾಗಭೂಷಣ. ಬೇರೆ ಪತ್ರಿಕೆ ತೆಗೆಯಲು ತಯಾರಾದರು. ಆಗ ಶಿವಮೊಗ್ಗದ ಬಹುಮತದ ಹಾಲಪ್ಪನವರು ಬಹುಮತ ಎಂಬ ಪತ್ರಿಕೆ ತರುತ್ತಿದ್ದರು. ಜಮೀನಿನಲ್ಲಿ ಬೆಳೆ ಬಂದಾಗ ಅದನ್ನು ಮಾರಿ ಪ್ರಕಟಿಸುತ್ತಿದ್ದರಿಂದ, ಭೂಮಿಯ ಬೆಳೆ ನೆಚ್ಚಿದ ಪತ್ರಿಕೆಯಾಗಿತ್ತದು! ಹಾಲಪ್ಪ ನಾಗಭೂಷಣರ ಗೆಳೆಯರಾಗಿದ್ದರು. ಎಲ್ಲಿ ತಮ್ಮ ಪತ್ರಿಕೆಯನ್ನ ಹಠಮಾರಿ ಸಿದ್ಧಾಂತಗಳಿಂದ ಹಾಳುಮಾಡುತ್ತಾರೋ ಎಂದು ನಾಗಭೂಷಣರಿಗೆ ಅವರು ಕೊಡಲೊಪ್ಪಲಿಲ್ಲ. ಇದರಿಂದ ಕೆರಳಿದ ನಾಗಭೂಷಣ ’ಹೊಸ ಮನುಷ್ಯ’ ಎಂಬ ನಿರಾಭರಣ ಸುಂದರಿಯಂತಹ ಪತ್ರಿಕೆ ತಂದೇಬಿಟ್ಟರು. ಚಂದಾದಾರರನ್ನೇ ನೆಚ್ಚಿದ ಆ ಪತ್ರಿಕೆಯನ್ನು ಹತ್ತು ವರ್ಷ ಮಾಸಿಕವಾಗಿ ತಂದರು. ಈ ಮನುಷ್ಯ ಸಂಗ್ರಹಯೋಗ್ಯವಾಗಿ ನಾಗಭೂಷಣರ ನೆನಪಾಗಿ ಉಳಿದಿದೆ.

ನಿಜವಾದ ಸೋಷಿಯಲಿಸ್ಟರು ಸರಕಾರಕ್ಕೆ ಯಾವತ್ತು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಾರೆ. ನಾಗಭೂಷಣ ಕಾಂಗ್ರೆಸ್ ಸರಕಾರಕ್ಕೆ ಸರಿಯಾದ ವಿರೋಧ ಪಕ್ಷವಾಗಿ ತುಂಬ ನಿಷ್ಠುರವಾಗಿಯೇ ಕೆಲಸ ಮಾಡಿದರು. ಕಾಂಗ್ರೆಸ್ ಕೊಟ್ಟ ರಾಜ್ಯೋತ್ಸವ ಪ್ರಶಸ್ತಿಯನ್ನು ಮೊದಲು ಒಪ್ಪಿಕೊಂಡು, ನಂತರ ನಿರಾಕರಿಸಿದರು. ಇದಕ್ಕೆ ಅವರು ಕೊಟ್ಟ ಕಾರಣಗಳಿಗಿಂತ, ಮೊದಲೇ ನಿರಾಕರಿಸಬಹುದಿತ್ತು ಎಂಬುದು ಗೆಳೆಯರ-ವಿದ್ವಾಂಸರ ಅಭಿಪ್ರಾಯವಾಗಿತ್ತು. ಅವರು ಕಾಂಗ್ರೆಸ್ ಸರ್ಕಾರವನ್ನ ಟೀಕಿಸಿದಂತೆ, ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ಮೋದಿ ಸರಕಾರವನ್ನು ಟೀಕಿಸಲಿಲ್ಲ. ಬರುಬರುತ್ತ ಆ ಕಾಂಗ್ರೆಸ್‌ಗೆ ಸರಿಯಾದ ಉತ್ತರಕೊಡಲು ನಮ್ಮ ನಾಗಭೂಷಣರೇ ಸರಿ ಎಂದು ಆರೆಸ್ಸೆಸಿಗರು ಮಾತನಾಡಿಕೊಳ್ಳುವಂತಾಯ್ತು. ಮೋದಿ ಸರ್ಕಾರದ ಕೃಷಿಕಾಯ್ದೆ ಪ್ರತಿಭಟನೆಗೆ ಐದುನೂರು ಜನ ರೈತರು ಬಲಿಯಾದರು. ಈ ಬಗ್ಗೆ ನಾಗಭೂಷಣ ಏನೂ ಬರೆಯದೆ ರೈತ ಮುಖಂಡರಿಂದಲೇ ಲೇಖನ ಆಹ್ವಾನಿಸಿದರು. ತಮ್ಮ ಮನೆಬಾಗಿಲಲ್ಲೆ ರೈತರ ಸಭೆ ನಡೆದು ಟಿಕಾಯತ್ ಬಂದಾಗ ಏನೂ ಬರೆಯಲಿಲ್ಲ. ನನಗೆ ಸಿಟ್ಟು ಬಂದು ನಾಗಭೂಷಣನದ್ದು ಹೊಸ ಮನುಷ್ಯ ಅಲ್ಲ ವೃಣ ಮನುಷ್ಯ, ಆತ ಬಿಜೆಪಿ ಪರ ಇದ್ದಾನೆ ಎಂದು ಟೀಕಿಸಿದೆ. ಇದಕ್ಕೆ ಕಾರಣ ಆತ ಗೌರಿ ಲಂಕೇಶ್ ಬಗ್ಗೆ ಏನೂ ಬರೆದಿರಲಿಲ್ಲ, ಸಂತಾಪ ಸೂಚಕವನ್ನು ಹಾಕಿರಲಿಲ್ಲ ಎನ್ನುವುದಾಗಿತ್ತು. ಬದಲಿಗೆ ರಾಮಜೋಯಿಸನೆಂಬ ಮೀಸಲಾತಿ ವಿರೋಧಿಯ ಸಾವಿಗೆ ಸಂತಾಪ ಬರೆದಿದ್ದರು. ಇದನ್ನು ಕೇಳಿಸಿಕೊಂಡವನೊಬ್ಬ ನನ್ನ ಟೀಕೆಯನ್ನು ಅವರಿಗೆ ಹೇಳಿದ್ದ. ಇದರ ಅರಿವಿರದ ನಾನು ’ಹೊಸಮನುಷ್ಯದ ಚಂದಾ ಕೊಡಲು ಮನೆಗೆ ಹೋದೆ. ಹೋದಕೂಡಲೇ “ಏನ್ರೀ ನೀವು ನನ್ನನ್ನ ಬಿಜೆಪಿ ಏಜೆಂಟ್ ಅನ್ನಂಗೆ ಮಾತಾಡಿದ್ದೀರಿ. ರಾಘವೇಂದ್ರ ಪಾಟೀಲ್ ಹೇಳಿದ” ಎಂದು ರೇಗಿದರು. ಮನೆಗೆ ಬಂದವನೊಡನೆ ಜಗಳಕ್ಕೆ ಬೀಳುವುದು ಸುಲಭದ ಮಾತಲ್ಲ. ಆದರೂ ಅಂತಹ ಶಕ್ತಿ ನಾಗಭೂಷಣರಿಗಿತ್ತು. ನಾನು ನಿರಾಕರಿಸಲಿಲ್ಲ. “ಯಾಕಂಗಂದೆ ಅಂದ್ರೆ ಸಾರ್, ನೀವು ರಫೇಲ್ ಹಗರಣದ ಬಗ್ಗೆ ಬರೀತಾ ತ್ವರಿತವಾಗಿ ಈ ಒಪ್ಪಂದವನ್ನು ಮುಗಿಸಿದ್ದಾರೆಯೇ ಹೊರತು, ಇದರಿಂದ ಮೋದಿಗೆ ಯಾವುದೇ ಸ್ವಹಿತಾಸಕ್ತಿಯಿಲ್ಲ ಅಂತ ಬರೆದಿದ್ದೀರಿ” ಅಂದೆ. “ನಾನು ಬರೆದಿದ್ದೀನಾ” ಅಂದ್ರು. “ಹೌದು ಸಾರ್ ಸಂಪಾದಕೀಯನೇ ಬರೆದಿದ್ದೀರಿ” ಅಂದೆ. ಕೂಡಲೇ, ಸವಿತಾ ಅವರಿಗೆ ಹುಡುಕಲು ಹೇಳಿದರು. ನಾನು “ಹುಡುಕಬೇಡಿ ಮೇಡಂ, ನಾನೇ ಕಳಿಸ್ತೀನಿ” ಎಂದೆ. ಏಕೆಂದರೆ ನಾಗಭೂಷಣರಿಗೆ ಏನೇ ಹೇಳೀದರು ಅದನ್ನು ಹುಡುಕುವ ಜವಾಬ್ದಾರಿ ಸವಿತಾ ಮೇಲೆ ಬೀಳುತ್ತಿತ್ತು. “ಅಲ್ಲ ಸಾರ್ ಕ್ಯಾರವಾನ್ ಪತ್ರಿಕೆ ರಫೇಲ್ ಹಗರಣ ಬಗ್ಗೆ ಮೂವತ್ತು ಪೇಜ್ ಬರೆದಿದೆ. ನೀವು ಹಿಂಗೆ ಬರಿತಿರಿ” ಎಂದೆ. ನಾಗಭೂಷಣ್ ಒಳಗಣ್ಣಾದರು. ಸವಿತಾ ಕೊಟ್ಟ ಕಾಫಿ ಕುಡಿದು, ಪತ್ರಿಕೆ ಚಂದಾಕೊಟ್ಟು ಬಂದೆ.

ನಂತರ ಶಾಮಣ್ಣನವರ ಬಗ್ಗೆ ಅಭಿನಂದನಾ ಗ್ರಂಥ ತರುವಾಗ ನನ್ನನ್ನು ಸೇರಿಸಿಕೊಂಡಿದ್ದರು. ಎಂ.ಬಿ ನಟರಾಜ್, ನಾನು ಮತ್ತು ನಾಗಭೂಷಣ್ ನೇತೃತ್ವದಲ್ಲಿ ಗ್ರಂಥ ಹೊರಬರುವಾಗ ಅದಕ್ಕೆ ಎಸ್.ಎಲ್ ಭೈರಪ್ಪನವರ ಅಭಿಪ್ರಾಯ ಸೇರಿಸುವ ಪ್ರಸ್ತಾಪವನ್ನು ನಾಗಭೂಷಣ್ ಮುಂದಿಟ್ಟರು. ಪ್ರಕಾಶಕಿ ಅಕ್ಷತಾ ಈ ಬಗ್ಗೆ ನನ್ನನ್ನ ಕೇಳಿದರು. “ಅಲ್ಲವ್ವಾ, ಭೈರಪ್ಪನ ಸಾಹಿತ್ಯಕ್ಕೂ, ಶಾಮಣ್ಣನ ಬದುಕಿಗೂ ಏನಾದರೂ ಸಂಬಂಧವಿದೆಯಾ. ಒಂದೆರಡು ಮೂರು ಕೃತಿಬಿಟ್ಟರೆ ಆತ ಬರೆದುದೆಲ್ಲಾ ರಾಷ್ಟ್ರೋತ್ಥಾನ ಸಾಹಿತ್ಯ-ಸಿದ್ಧಾಂತಕ್ಕೆ ಅಂದೆ”. ಆದರೆ ನಾಗಭೂಷಣರ ಹಠವೇ ಗೆದ್ದು, ಭೈರಪ್ಪನ ಅಭಿಪ್ರಾಯ ತುರುಕಲಾಯ್ತು.

ಶಿವಮೊಗ್ಗದಲ್ಲಿ ನಡೆದ ದಕ್ಷಿಣಾಯನ ಕಾರ್ಯಕ್ರಮವನ್ನೂ ಅವರು ಕಟುವಾಗಿ ಟೀಕಿಸಿದ್ದರು. ಬೆಂಗಳೂರಲ್ಲಿ ನಡೆದ ರಾಷ್ಟ್ರಮಟ್ಟದ ಅಂಬೇಡ್ಕರ್ ಸೆಮಿನಾರುಗಳ ಬಗ್ಗೆ ಕೂತಲ್ಲೇ ಚಾಡಿಮಾತು ಕೇಳಿ ಟೀಕಿಸಿ ಬರೆದಿದ್ದರು. ಟೀಕೆಗೆ ಜಗಳಕ್ಕೆ ಬಗ್ಗಿಹೋದ ಮನಸ್ಸುಗಳಿಗೆ ಸಕಾರಾತ್ಮಕವಾದದ್ದು ಕಾಣುವುದೇ ಇಲ್ಲ. ಟೀಕಿಸಿದ ನಂತರವೇ ತಮ್ಮ ಅಸಹನೆಯನ್ನು ಶಮನಗೊಳಿಸಿಕೊಳ್ಳುವ ಸ್ಥಿತಿ ತಲುಪಿದ್ದರೇನೋ! ವ್ಯಕ್ತಿಗಳಲ್ಲಿನ ಅಭಿಪ್ರಾಯ ಭೇದಗಳು ಜಗಳಗಳಾಗಿ ಸಂವಾದ-ಸಂವಹನಗಳಲ್ಲಿ ಸಾಂತ್ವನ ಕಾಣುವ ವಾತಾವರಣ ನಾಗಭೂಷಣರ ಆವರಣದಲ್ಲಿ ಸುಳಿಯಲೇ ಇಲ್ಲ. ಮುನಿಸಿಕೊಂಡು ದಿಕ್ಕೆಟ್ಟು ಹೋದ ಉದಾಹರಣೆಗಳು ಹೇರಳವಾಗಿವೆ.

ಅವರು ’ಹೊಸ ಮನುಷ್ಯ’ ಸಂಚಿಕೆಗಳ ತಮ್ಮ ಬರವಣಿಗೆಯಲ್ಲಿ ನಮಗೆಲ್ಲಾ ಮೂಡಿಸಿದ್ದ ಅಸಹನೆ ಮತ್ತು ಸಿಟ್ಟುಗಳೆಲ್ಲಾ ಕರಗಿಹೋದದ್ದು ಅವರು ’ಗಾಂಧಿ ಕಥನ’ ಬರೆದು ಪ್ರಕಟಿಸಿದ ಮೇಲೆ. ಆವರೆಗೂ ನಾವೂ ಗಾಂಧಿ ಭಕ್ತರಿಂದ ರಚನೆಯಾದ ಗಾಂಧಿಯವರ ಜೀವನಚಿತ್ರಗಳನ್ನು ಓದಿದ್ದಕ್ಕೂ ನಾಗಭೂಷಣರ ಗಾಂಧಿಕಥನ ಓದಿದ್ದಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ನಮಗೆ ಗಾಂಧಿ ಇಡಿಯಾಗಿ ಸಿಕ್ಕಿದ್ದು ನಾಗಭೂಷಣರಿಂದಲೇ. ಅದೂ ಗಾಂಧಿ ಕೊಂದವರನ್ನು ಆರಾಧಿಸುವವರ ಕೈಗೆ ಸಿಕ್ಕಿ ಈ ದೇಶ ನರಳುತ್ತಿರುವಾಗ ಹೊರಬಂದ ಗಾಂಧಿಕಥನ ಬಿಡುವಿಲ್ಲದ ಮರುಮುದ್ರಣ ಕಂಡಿತು. ಹಾಗೆ ನೋಡಿದರೆ ಗಾಂಧೀಜಿಯ ಮುಂದುವರಿಕೆಯಾಗಿ ಸಮಾಜವಾದಿಗಳು ನಮಗೆ ದಾರಿದೀಪವಾಗಬೇಕಿತ್ತು. ಆದರೆ ಸಮಾಜವಾದಿಗಳು ಯಾದವೀ ಕಲಹದಲ್ಲಿ ಮುಳುಗಿಹೋದರೆ ಕಾಂಗ್ರೆಸ್ಸಿಗರು ಗಾಂಧಿ ಎಂತಹ ಜನರನ್ನ ಸೃಷ್ಟಿಸಿ ಹೋಗಿದ್ದಾನಲ್ಲಪ್ಪ ಎನ್ನುವಂತೆ ಮಾಡಿದರು. ನಾಗಭೂಷಣರ ಕಾಂಗ್ರೆಸ್ ವಿರೋಧ ಲೋಹಿಯಾ ಕಾಲದ್ದು. ಆದರೀಗ ಪರಿಸ್ಥಿತಿ ಬದಲಾಗಿದೆ. ಅದಕ್ಕಿಂತಲೂ ದೊಡ್ಡ ಕೆಡುಕು ದೇಶವನ್ನು ಬಾಧಿಸುತ್ತಿದೆ. ನಾಗಭೂಷಣ್‌ಗೆ ದಲಿತರು ಮತ್ತು ಮುಸ್ಲಿಮರ ಬಗ್ಗೆ ಕೆಲವು ಪೂರ್ವಾಗ್ರಹಗಳಿದ್ದವು. ಅದಕ್ಕೆ ಸಕಾರಣಕೊಟ್ಟು ವಾದಿಸುತ್ತಿದ್ದರು.

ಅಂಬೇಡ್ಕರ್ ಬಗ್ಗೆಯೂ ನಾಗಭೂಷಣ್ ಚಿಂತನೆ ಗೊಂದಲಮಯವಾಗಿತ್ತು. ಗಾಂಧಿ ಕಥನದಲ್ಲಿ ಅಂಬೇಡ್ಕರನ್ನು ಉದ್ದೇಶಪೂರ್ವಕವಾಗಿ ಬದಿಗೆ ಸರಿಸಿದ್ದಾರೆಂದು ದಲಿತರು ದೂರುವುದರಲ್ಲಿ ನಿಜಾಂಶವಿದೆ. ಅವರು ಶಿವಮೊಗ್ಗಕ್ಕೆ ಬಂದಾಗ ಗೆಳೆಯರ ಮನೆಗಳಲ್ಲಿ ಸೇರುತ್ತ ಹರಟೆಯೊಂದಿಗೆ ನಮ್ಮ ಕಾಲದ ಹಾಡುಗಳನ್ನು ಹೇಳುತ್ತ ಖುಷಿಪಡುತ್ತಿದ್ದ ಕಾಲವೊಂದಿತ್ತು. ಮತೀಯವಾದಿಗಳು ದೇಶದ ಅಧಿಕಾರ ಹಿಡಿದ ಮೇಲೆ ಆ ದಿನಗಳು ಕಾಣೆಯಾದವು. ಇಡೀ ದೇಶವೇ ಕ್ಷೋಭೆಗೊಂಡಾಗ ನಮ್ಮ ಮಾತು ಹಾಡು ಜಾನಪದಕ್ಕೆ ಬದಲಾಗಿ ಜಗಳಗಳು ಕಾಣಿಸಿಕೊಂಡವು. ಮನೆಯಲ್ಲೊಬ್ಬನಿಗೆ ತಲೆಕೆಟ್ರೆ ಇಡೀ ಮನೆಯ ಸಂಭ್ರಮವೇ ಹಾಳಾಗುವಂತೆ ರಾಜ್ಯ ದೇಶವೆಲ್ಲಾ ಕ್ಷೋಬೆಗೆ ತುತ್ತಾಗಿರುವ ಈ ಸಮಯದಲ್ಲಿ ನಾಗಭೂಷಣರ ನಿರ್ಗಮನ ಇಚ್ಛಾಮರಣದಂತೆ ಕಾಣುತ್ತಿದೆ. ಆ ಪ್ರಶಾಂತ ಮುಖಭಾವವೇ ಅದನ್ನ ಹೇಳುತ್ತಿತ್ತು. ಇನ್ನು ನಾಗಭೂಷಣರ ಜತೆಯಾಗಿ ಸವಿತಾ ನಾಗಭೂಷಣ ಅವರನ್ನು ಕಾಪಾಡಿದ ರೀತಿಗೆ ಅವರನ್ನು ಒಬ್ಬ ಅಸಾಮಾನ್ಯ ಮಹಿಳೆ ಅನ್ನುವುದಕ್ಕಿಂತ ತಾಯಿ ಹೃದಯಿ ಅನ್ನಬಹುದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶ್‌ರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...