Homeಚಳವಳಿಅಂಬೇಡ್ಕರ್ ಪಟ - ತ್ರಿವರ್ಣ ಧ್ವಜ ಹಿಡಿದ ಮುಸ್ಲಿಂ ಮಹಿಳೆಯರು:ದೆಹಲಿಯಲ್ಲಿ ಹರ್ ಶಾಮ್ ಶಾಹೀನ್ ಬಾಗ್!

ಅಂಬೇಡ್ಕರ್ ಪಟ – ತ್ರಿವರ್ಣ ಧ್ವಜ ಹಿಡಿದ ಮುಸ್ಲಿಂ ಮಹಿಳೆಯರು:ದೆಹಲಿಯಲ್ಲಿ ಹರ್ ಶಾಮ್ ಶಾಹೀನ್ ಬಾಗ್!

ಮೊದಲ ರಾತ್ರಿ ಇಲ್ಲಿ ಪ್ರತಿಭಟನೆಗೆ ಸೇರಿದವರು ಕೇವಲ ನಾಲ್ವರು ಮಹಿಳೆಯರು. ಅಲ್ಲಿಂದ ಅದು ಒಂದೂವರೆ ಲಕ್ಷಕ್ಕೆ ಏರಿದೆ...

- Advertisement -
- Advertisement -

ರಾಮ್ ರಾಮ್, ಅಲ್ಲಾ ಹೋ ಅಕ್ಬರ್, ವಾಹೇ ಗುರೂ… ಹಿಂದು-ಮುಸ್ಲಿಮ್-ಸಿಖ್- ಕ್ರೈಸ್ತ ಧಾರ್ಮಿಕ ಜಯಕಾರಗಳು, ಜನಗಣಮನ… ಒಂದೇ ಚಪ್ಪರದಡಿ ಕುಳಿತ ಜನಸಮೂಹದಿಂದ ಮೊಳಗುತ್ತವೆ… ಪುರೋಹಿತರು ಹವನ ನೆರವೇರಿಸಿದರೆ ಮುಸಲ್ಮಾನರು ಭಕ್ತಿಯಿಂದ ಕೈ ಮುಗಿದು ಕುಳಿತಿರುತ್ತಾರೆ… ಖುರಾನ್, ಗೀತೆ, ಬೈಬಲ್ ಹಾಗೂ ಗುರು ಗ್ರಂಥಸಾಹೇಬದ ಪಠಣ ಅಕ್ಕಪಕ್ಕದಲ್ಲಿ ಜರುಗುತ್ತದೆ.. ದೇಶಭಕ್ತಿಯ ಘೋಷಣೆಗಳು, ಸಂವಿಧಾನದ ಮುನ್ನುಡಿಯ ವಾಚನ.. ಪ್ರತಿಭಟನೆಯ ಕವಿತೆಗಳು, ಚರ್ಚೆಗಳು, ಭಾಷಣಗಳು.. ಅಂಬೇಡ್ಕರ್- ಗಾಂಧೀ ಚಿತ್ರಪಟಗಳು, ಮೇಣದ ಬತ್ತಿ ಮೆರವಣಿಗೆಗಳು, ತಲೆಗಳಿಗೆ ಸುತ್ತಿಕೊಂಡ ತ್ರಿವರ್ಣ ಧ್ವಜಗಳು.. ಕತ್ತಲಲ್ಲಿ ತಾರೆಗಳಂತೆ ಒಮ್ಮೆಲೆ ಮಿನುಗುವ ಸಾವಿರಾರು ಮೊಬೈಲ್ ಫೋನುಗಳ ಬೆಳಕು… ದೆಹಲಿಯ ಶಾಹೀನ್ ಬಾಗ್ ನಲ್ಲಿ ನಿತ್ಯ ರಾತ್ರಿ ಕಾಣಬರುತ್ತಿರುವ ಮನತುಂಬುವ ಈ ನೋಟಗಳಿಗೆ, ಕಿವಿ ತುಂಬುವ ದನಿಗಳಿಗೆ ತಿಂಗಳು ತುಂಬಿದೆ.

ಎನ್.ಆರ್.ಸಿ-ಸಿಎಎ ವಿರೋಧಿಸಿ ನಡೆಯುತ್ತಿರುವ ಈ ಶಾಂತಿಯುತ ಪ್ರತಿಭಟನಾ ಸಭೆ ದಿನದಿಂದ ದಿನಕ್ಕೆ ದಾಖಲೆ ಸೃಷ್ಟಿಸತೊಡಗಿದೆ. ಇತಿಹಾಸ ರಚಿತವಾಗುತ್ತಿದೆ. ಮೊನ್ನೆ ಭಾನುವಾರ ಇಲ್ಲಿ ಸೇರಿದ್ದ ಜನಸಮೂಹದ ಅಂದಾಜು ಒಂದೂವರೆ ಲಕ್ಷ! ಪುಟ್ಟ ಮುಸ್ಲಿಮ್ ಬಾಲಕಿಯ ಕೈಯಲ್ಲಿನ ಭಿತ್ತಿಪತ್ರ ಇಲ್ಲಿನ ಪ್ರದರ್ಶನಕಾರರ ಮಾಡು ಇಲ್ಲವೇ ಮಡಿ ಹೋರಾಟದ ಮನೋಧರ್ಮವನ್ನು ಪ್ರತಿನಿಧಿಸುತ್ತದೆ.

ಜಹಾಂ ಪೈದಾ ಹುಯೋ ವಹಾಂ

ದಫನ್ ಭೀ ಹೋಂಗೇ (ಪಕ್ಕದಲ್ಲಿ ಭಾರತದ ಪುಟ್ಟ ಭೂಪಟ)

ಜೀತ್ ಗಯೇ ತೋ ವತನ್

ಮುಬಾರಕ್

ಹಾರ್ ಗಯೇ ತೋ ಕಫನ್

ಮುಬಾರಕ್

ನೋ ಎನ್.ಆರ್.ಸಿ.

ನೋ ಸಿಎಎ

(ಎಲ್ಲಿ ಜನಿಸಿದ್ದೇವೆಯೋ ಅಲ್ಲಿಯೇ

ಮಣ್ಣಾಗುತ್ತೇವೆ ಕೂಡ

ಗೆದ್ದರೆ ದೇಶ ದಕ್ಕುವ

ಅಭಿನಂದನೆ

ಸೋತರೆ ಸಾವಿನ

ಅಭಿನಂದನೆ)

ತ್ರಿವರ್ಣ ಧ್ವಜಗಳನ್ನು ಹಿಡಿದು ಬೀಸುತ್ತ ಆಜಾದಿ ಘೋಷಣೆಗಳ ಕೂಗುವ ಜನಸಮೂಹ. ತಾಪಮಾನ ಹತ್ತು ಡಿಗ್ರಿಗಳಿಗೆ ಕುಸಿದರೂ, ಚಳಿ ಮೈ ಮರಗಟ್ಟಿಸಿದರೂ ಜಗ್ಗದ ಜನಸಮೂಹ. ಶಾಹೀನ್ ಬಾಗ್ ನ ಸಾರ್ವಜನಿಕ ರಸ್ತೆಯಲ್ಲೇ ಎದ್ದು ನಿಂತಿರುವ ಪ್ರತಿಭಟನಾ ನೆಲೆಯಿದು. ನೆಲದ ಮೇಲೆ ಬಿಡಿಸಿದ ಸಿಎಎ-ಎನ್.ಆರ್.ಸಿ. ವಿರೋಧಿ ಬೃಹತ್ ಚಿತ್ರಗಳು… ಅವುಗಳ ಪಕ್ಕ ಉರಿಯುವ ಮೇಣದ ಬತ್ತಿಗಳು. ಬಾನೆತ್ತರದಲ್ಲಿ ಹಾರಾಡುವ ಕೇಸರಿ ಬಿಳಿ ಹಸಿರಿರುವ ಬಲೂನುಗಳು…

ಮರಗಟ್ಟಿಸುವ ಚಳಿ, ಮಳೆ, ಬೆದರಿಕೆಗಳಿಗೆ ಜಗ್ಗದ ಹೆಣ್ಣುಮಕ್ಕಳು ಇವರು. ನಮ್ಮ ಸಂವಿಧಾನ, ನಮ್ಮ ದೇಶ, ನಮ್ಮ ಉಳಿವಿಗಾಗಿ ಇಲ್ಲಿ ಸೇರುತ್ತಿದ್ದೇವೆ ಎನ್ನುತ್ತಾರೆ. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯಕ್ಕೆ ನುಗ್ಗಿ ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಮನಬಂದಂತೆ ಥಳಿಸಿ, ಗುಂಡು ಹಾರಿಸಿ ಪುಂಡಾಟ ನಡೆಸಿದ ಪೊಲೀಸರ ಹೇಯ ವರ್ತನೆಯ ನಂತರ ಆರಂಭವಾದ ಪ್ರತಿಫಟನೆಯಿದು. ಮೊದಲ ರಾತ್ರಿ ಇಲ್ಲಿ ಪ್ರತಿಭಟನೆಗೆ ಸೇರಿದವರು ಕೇವಲ ನಾಲ್ವರು ಮಹಿಳೆಯರು ಮತ್ತು ಆರು ಮಂದಿ ಪುರುಷರು. ಮರುದಿನದಿಂದ ಪುರುಷರು ಉದ್ಯೋಗಕ್ಕೆ ಹೋದರೂ ಮಹಿಳೆಯರ ಸಂಖ್ಯೆ ಏರುತ್ತಲೇ ಹೋಯಿತು.

ಈ ಪ್ರತಿಭಟನೆಯಲ್ಲಿ ಮಹಿಳೆಯರೇ ಮುಖ್ಯ ಸಭಿಕರು. ಹಸುಗೂಸು ಮಕ್ಕಳಿಂದ ಹಿಡಿದು ವೃದ್ದೆಯರವರೆಗೆ ಎಲ್ಲ ವಯೋಮಾನದ ಮಹಿಳೆಯರು. ಹಸಿ ಬಾಣಂತಿಯರು… ಪುಟ್ಟ ಮಕ್ಕಳನ್ನು ಕರೆತಂದ ಅಮ್ಮಂದಿರು..ಯುವತಿಯರು… ವಿದ್ಯಾರ್ಥಿನಿಯರು… ಎಲ್ಲರೂ ನಿರ್ಭೀತರು… ಮನಸಿನ ಮಾತನ್ನು ಗಟ್ಟಿದನಿಯಲ್ಲಿ ಹೇಳುವವರು.. ತಾತ ಮುತ್ತಾತಂದಿರು ಇಲ್ಲಿಯೇ ಹುಟ್ಟಿ ಇಲ್ಲಿಯೇ ಸತ್ತವರು…ಇದೇ ನಾವು ಹುಟ್ಟಿದ ಮಣ್ಣು….ಇಲ್ಲಿಯೇ ಮಣ್ಣು ಸೇರುತ್ತೇವೆ… ನಮಗೆ ನಾಗರಿಕತೆ ನಿರಾಕರಿಸುವುದು ಪರಮ ಅನ್ಯಾಯ… ಈ ಕಾನೂನು ವಾಪಸಾಗುವ ತನಕ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎನ್ನುವವರು… ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಜನಸಮೂಹ ಹಿಗ್ಗುತ್ತದೆಯೇ ವಿನಾ ಕುಗ್ಗುವುದಿಲ್ಲ.

ಟ್ರಕ್ಕುಗಳಲ್ಲಿ ಚಹಾ, ಹಾಲು, ಊಟ ಬರುತ್ತದೆ.. ಅಜ್ಞಾತ ಹಿತೈಷಿಗಳ ಕೊಡುಗೆ. ಸ್ಥಳೀಯ ರಾಜಕಾರಣಿಗಳನ್ನು ದೂರ ಇರಿಸಲಾಗಿದೆ.

ಗುಂಪು ಹತ್ಯೆಗಳಿಗೆ ಮುಸಲ್ಮಾನರು ಬಲಿಯಾದಾಗ ಬೀದಿಗಿಳಿಯದ ಮುಸಲ್ಮಾನ ಹೆಣ್ಣುಮಕ್ಕಳು ಈಗ ಪ್ರತಿಭಟನೆಯ ಕಣಕ್ಕೆ ಇಳಿದಿದ್ದಾರೆ… ಹಿಮ್ಮೆಟ್ಟುವುದಿಲ್ಲ ಎನ್ನುವ ದೃಢನಿಶ್ಚಯ ಅವರದು. ಬುರ್ಖಾಗಳನ್ನು ಹಿಂದಿಟ್ಟು ಬಂದಿದ್ದಾರೆ… ಕಳೆದು ಹೋಗಿದ್ದ ದನಿಗಳನ್ನು ಮರಳಿ ಪಡೆದು ಬಂದಿದ್ದಾರೆ… ನಮ್ಮ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯಿದು, ನಮ್ಮ ಮಕ್ಕಳು ಮೊಮ್ಮಕ್ಕಳ ಭವಿಷ್ಯದ ಪ್ರಶ್ನೆ… ನಮ್ಮ ಅಪ್ಪಂದಿರು… ತಾತಂದಿರು ಕೂಡ ಈ ಮಣ್ಣಿಗಾಗಿ ತ್ಯಾಗ ಮಾಡಿದ್ದಾರೆ.. ನಮ್ಮನ್ನೇಕೆ ಹೊರದಬ್ಬಲಾಗುತ್ತಿದೆ… ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಅರ್ಥವೇನು ಎಂಬ ನೋವಿನ ಕಣ್ಣೀರು ಕೆನ್ನೆಗಿಳಿಯುತ್ತವೆ… ಹಿಂದುಸ್ತಾನ್ ಎಂಬುದು ಗುಲದಸ್ತಾನ್… ಈ ಹೂಗೊಂಚಲಿನಲ್ಲಿ ಬಗೆಬಗೆಯ ಹೂವುಗಳು… ಪರಿಮಳಗಳು ಇಲ್ಲದಿದ್ದರೆ ಹೂಗೊಂಚಲಿನ ವಿಶೇಷತೆಯೇನು ಉಳಿಯುತ್ತದೆ? ಮುಸ್ಲಿಂ ಮಹಿಳೆಯರ ಕಷ್ಟ ಕಣ್ಣೀರು ಅಳಿಸಲೆಂದು ತ್ರಿವಳಿ ತಲಾಖ್ ರದ್ದುಗೊಳಿಸಿ ಕಾನೂನು ತಂದ ನರೇಂದ್ರ ಮೋದಿಯವರಿಗೆ ನಮ್ಮ ಈಗಿನ ಸಂಕಟ ಯಾಕೆ ಅರ್ಥವಾಗುತ್ತಿಲ್ಲ? ನಮಗೆ ಗುಂಡೇಟು, ಲಾಠಿಯೇಟು ಬಿದ್ದರೂ ನಾವು ಲೆಕ್ಕಿಸುವುದಿಲ್ಲ ಎನ್ನುತ್ತಾರೆ.

ಈ ಪ್ರತಿಭಟನೆ ಈಗಾಗಲೆ ಕಣ್ಣುಗಳನ್ನು ಕೆಂಪಾಗಿಸಿದೆ… ದಮನದ ಸಿಡಿಲು ಯಾವ ಕ್ಷಣದಲ್ಲಿ ಬಡಿಯುವುದೋ ಬಲ್ಲವರಾರು… ಆದರೆ ಈ ಮಹಿಳೆಯರ ಮನೋನಿಶ್ಚಯ ದಮನಗಳ ಬಿಸಿಗೆ ಕರಗುವಂತಹುದಲ್ಲ. ಲಕ್ಷ ವಾಹನಗಳು ಸಂಚರಿಸುವ ಈ ರಸ್ತೆಯನ್ನು ಪುನಃ ಸಂಚಾರಕ್ಕೆ ತೆರೆಯಬೇಕೆಂಬ ಅಹವಾಲು ಹೈಕೋರ್ಟ್ ಮೆಟ್ಟಿಲೇರಿದೆ. ಬಲಪ್ರಯೋಗ ನಡೆಸದೆ ಈ ಕ್ರಮ ಜರುಗಿಸುವಂತೆ ನ್ಯಾಯಾಲಯ ಹೇಳಿದೆ.

ಕೈಫಿ ಆಜ್ಮಿಯವರ ಉಠ್ ಮೇರೀ ಜಾನ್.. ಕವಿತೆಯ ಕೆಲ ಸಾಲುಗಳು…

ಉಠ್ ಮೇರೀ ಜಾನ್ ಮೇರೇ ಸಾಥ್ ಹೀ ಚಲನಾ ಹೈ ತುಝೇ

ಖಲ್ಬ್ ಎ ಮಾಹೋಲ್ ಮೇ ಲರ್ಜಾ ಶರರ್ ಎ ಜಂಗ್ ಹೈ ಆಜ್

ಹೋಸಲೇ ವಕ್ತ್ ಕೇ ಔರ್ ಜೀಸ್ತ್ ಕೆ ಯಕ್-ರಂಗ್ ಹೈ ಆಜ್

ಅಬಾಗೀನೋ ಮೇ ತಪಾಂ ವಲ್ವಲಾ-ಎ-ಸಂಗ್ ಹೈ ಆಜ್

ಹುಸ್ನ್ ಔರ್ ಇಶ್ಕ್ ಹಮ್ ಆವಾಜ್ ಓ ಹಮ್- ಆಹಂಗ್ ಹೈ ಆಜ್

ಜಿಸ್ ಮೇಂ ಜಲತಾ ಹೂಂ ಉಸೀ ಆಗ ಮೇ ಜಲನಾ ಹೈ ತುಝೇ

ಉಠ್ ಮೇರೀ ಜಾನ್ ಮೇರೇ ಸಾಥ್ ಹೀ ಚಲನಾ ಹೈ ತುಝೇ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...