Homeಮುಖಪುಟಆಂಧ್ರಪ್ರದೇಶ ಕಾಂಗ್ರೆಸ್‌ಗೆ ವೈ.ಎಸ್. ಶರ್ಮಿಳಾ ನೇತೃತ್ವ; ಸಹೋದರನ ವಿರುದ್ಧ ಸೆಣಸಲು ತಯಾರಿ!

ಆಂಧ್ರಪ್ರದೇಶ ಕಾಂಗ್ರೆಸ್‌ಗೆ ವೈ.ಎಸ್. ಶರ್ಮಿಳಾ ನೇತೃತ್ವ; ಸಹೋದರನ ವಿರುದ್ಧ ಸೆಣಸಲು ತಯಾರಿ!

- Advertisement -
- Advertisement -

ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಪುತ್ರಿ, ವೈಎಸ್ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಈ ವಾರ ಕಾಂಗ್ರೆಸ್ ಸೇರಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆಂಧ್ರಪ್ರದೇಶದ ಕಾಂಗ್ರೆಸ್ ನೇತೃತ್ವವನ್ನು ಶರ್ಮಿಳಾ ಅವರಿಗೆ ನೀಡಲು ಕಾಂಗ್ರೆಸ್ ಹೈಕಾಂಡ್ ಮುಂದಾಗಿದೆ ಎನ್ನಲಾಗಿದ್ದು, ತಮ್ಮ ಸಹೋದರ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಸೆಣಸಲು ಶರ್ಮಿಳಾ ತಯಾರಾಗಿದ್ದಾರೆ ಎನ್ನಲಾಗಿದೆ.

ಕಳೆದ ತಿಂಗಳು ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲಿ ಭಾರತ್ ರಾಷ್ಟ್ರ ಸಮಿತಿ ಪ್ರಾಬಲ್ಯವನ್ನು ಕೊನೆಗೊಳಿಸಿದೆ. ಮುಂದಿನ ಏಪ್ರಿಲ್‌ ಹೊತ್ತಿಗೆ ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆಯಲಿದ್ದು, ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದೆ.

ಮೂಲಗಳ ಪ್ರಕಾರ, ಚುನಾವಣೆಗೂ ಮುನ್ನ ಆಂಧ್ರಪ್ರದೇಶದ ಕಾಂಗ್ರೆಸ್ ನಾಯಕತ್ವವನ್ನು ಶರ್ಮಿಳಾ ಅವರಿಗೆ ವಹಿಸುವುದಕ್ಕೆ ವರಿಷ್ಠರು ನಿರ್ಧರಿಸಿದ್ದಾರೆ. ರಾಜ್ಯ ವಿಭಜನೆಯ ನಂತರ ಕಾಂಗ್ರೆಸ್ ಎರಡೂ ರಾಜ್ಯಗಳಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ತೆಲಂಗಾಣದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್, ಶರ್ಮಿಳಾ ನಾಯಕತ್ವದ ಮೂಲಕ ಆಂಧ್ರಪ್ರದೇಶದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಪ್ರಮುಖ ವಿರೋಧ ಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಪ್ರಭಾವವನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿರುವ ಸಮಯದಲ್ಲಿ ವೈಎಸ್ಆರ್‌ಸಿಪಿಯನ್ನು ತೊರೆಯಲು ಸಿದ್ಧರಿರುವವರು ಈಗ ಕಾಂಗ್ರೆಸ್ಸಿಗೆ ಸೇರಬಹುದು ಎಂದು ಪಕ್ಷ ನಿರೀಕ್ಷೆಯಲ್ಲಿದೆ.

ಹೊಸ ರಾಜ್ಯ ರಚನೆಯ ಆಂದೋಲನದ ಹಿನ್ನಲೆಯಲ್ಲಿ ಶರ್ಮಿಳಾ ಸಹೋದರ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್‌ನಿಂದ ಬೇರ್ಪಟ್ಟು ವೈಎಸ್ಆರ್‌ಪಿ ಸ್ಥಾಪಿಸಿದರು. ಅವರೊಂದಿಗೆ 18 ಶಾಸಕರು ಸೇರಿಕೊಂಡರು ಮತ್ತು ಕಾಂಗ್ರೆಸ್ ಸಂಸದರೊಬ್ಬರು ರಾಜೀನಾಮೆ ನೀಡಿದರು. ಇದು ಹಲವು ಉಪಚುನಾವಣೆಗಳಿಗೆ ನಾಂದಿ ಹಾಡಿತು. ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿತರಾಗಿ ರೆಡ್ಡಿ ಜೈಲಿನಲ್ಲಿದ್ದಾಗ ಅವರ ತಾಯಿ ವೈಎಸ್ ವಿಜಯಮ್ಮ ಮತ್ತು ಸಹೋದರಿ ವೈಎಸ್ ಶರ್ಮಿಳಾ ಪ್ರಚಾರದ ನೇತೃತ್ವ ವಹಿಸಿದ್ದರು. ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಮುನ್ನಡೆ ಸಾಧಿಸಿತು.

ಒಂಬತ್ತು ವರ್ಷಗಳ ನಂತರ, 2021 ರಲ್ಲಿ ಶರ್ಮಿಳಾ ಅವರು ತಮ್ಮ ಸಹೋದರನೊಂದಿಗೆ ಇರುವ ರಾಜಕೀಯ ಭಿನ್ನಾಭಿಪ್ರಾಯಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ತೆಲಂಗಾಣದಲ್ಲಿ ವೈಎಸ್ಆರ್‌ಸಿಪಿಗೆ ಯಾವುದೇ ಅಸ್ತಿತ್ವವಿಲ್ಲ ಎಂದು ಅವರು ಒತ್ತಿ ಹೇಳಿದರು. ಅದೇ ವರ್ಷ ಜುಲೈನಲ್ಲಿ, ಅವರು ವೈಎಸ್ಆರ್ ತೆಲಂಗಾಣ ಪಕ್ಷವನ್ನು ಘೋಷಿಸಿ, ಕೆ ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರದ ವಿರುದ್ಧ ಪ್ರಚಾರ ಪ್ರಾರಂಭಿಸಿದರು.

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶರ್ಮಿಳಾ ಅವರು ತೆಲಂಗಾಣ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ, ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಸುಸಜ್ಜಿತವಾಗಿದ್ದು, ಅದನ್ನು ಹಾಳು ಮಾಡಲು ನಾನು ಬಯಸುವುದಿಲ್ಲ ಎಂದು ಅವರು ಹೇಳಿದ್ದರು.

ಕಾಂಗ್ರೆಸ್ ಮೂಲಗಳ ಪ್ರಕಾರ, ಆಂಧ್ರದಲ್ಲಿ ಪಕ್ಷದ ಮತಗಳಿಕೆಯು ಕಳೆದ 10 ವರ್ಷಗಳಲ್ಲಿ ಹೀನಾಯವಾಗಿ ಕುಸಿದಿದೆ. ಕೇವಲ ಶೇ.1 ಪ್ರತಿಶತದಷ್ಟು ಮತಬ್ಯಾಂಕ್ ಇದ್ದು, ಶರ್ಮಿಳಾ ಅವರು ತಮ್ಮ ಸಹೋದರನೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಮತ್ತು ಅವರ ಪಕ್ಷದ ಚಟುವಟಿಕೆಗಳನ್ನು ಮುಂದುವರಿಸಲು ಹಣಕಾಸಿನ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಜಾರ್ಖಂಡ್: ಜೆಎಂಎಂ ಶಾಸಕ ದಿಢೀರ್ ರಾಜೀನಾಮೆ; ಸೊರೇನ್ ಪತ್ನಿಗೆ ಸಿಎಂ ಪಟ್ಟ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...