Homeಮುಖಪುಟಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಇನ್ನು ಸರ್ಕಸ್‌ನಲ್ಲಿ: BJP V/s ಶಿವಸೇನೆ, NCP ಮತ್ತು ಕಾಂಗ್ರೆಸ್‌?

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಇನ್ನು ಸರ್ಕಸ್‌ನಲ್ಲಿ: BJP V/s ಶಿವಸೇನೆ, NCP ಮತ್ತು ಕಾಂಗ್ರೆಸ್‌?

- Advertisement -
- Advertisement -

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಹತ್ತು ದಿನ ಕಳೆದರೂ ಅಧಿಕಾರ ಹಗ್ಗ-ಜಗ್ಗಾಟ ಮಾತ್ರ ನಿಂತಿಲ್ಲ. ಶಿವಸೇನೆ ಮತ್ತು ಬಿಜೆಪಿ ಮಧ್ಯೆ ಒಳ ಬೇಗುದಿ, ಸಿಎಂ ಕುರ್ಚಿಗಾಗಿ ಇರುಸುಮುರಿಸು ನಡೆಯುತ್ತಲೇ ಇದೆ. ಜಪ್ಪಯ್ಯ ಅಂದ್ರೂ ಶಿವಸೇನೆಗೆ ಸಿಎಂ ಗಾದಿ ಬಿಟ್ಟು ಕೊಡುವುದಿಲ್ಲ ಎನ್ನುತ್ತಿದೆ ಬಿಜೆಪಿ. ಇತ್ತ ಶಿವಸೇನೆ ಕೂಡ ಚುನಾವಣಾ ಪೂರ್ವ ಮೈತ್ರಿಗೆ ಬಿಜೆಪಿ ಬದ್ಧವಾಗಿರಬೇಕು. 50:50 ಸೂತ್ರದ ಪ್ರಕಾರ, ಎರಡೂವರೆ ವರ್ಷ ಸಿಎಂ ಹುದ್ದೆಯನ್ನು ಶಿವಸೇನೆಗೆ ಬಿಟ್ಟು ಕೊಡಬೇಕು ಎಂದು ಪಟ್ಟು ಹಿಡಿದಿದೆ.

ಈ ಮಧ್ಯೆ ಶಿವಸೇನೆಯನ್ನು ಬದಿಗಿರಿಸಿ, ಬಿಜೆಪಿ ಅಧಿಕಾರಕ್ಕೇರಲು ತಂತ್ರ ರೂಪಿಸಿದೆ. ಇತ್ತ ಸೂತ್ರವಿಲ್ಲದ ಪಟದಂತೆ ಶಿವಸೇನೆ, ಬಿಜೆಪಿಯನ್ನು ಅಧಿಕಾರಕ್ಕೇರದಂತೆ ತಡೆಯಲು ರಣತಂತ್ರ ರೂಪಿಸುತ್ತಿದೆ.

ಯಾರು ಏನೇ ತಂತ್ರ ರೂಪಿಸಿದರೂ ಈಗ ಪಕ್ಷಗಳಿಗೆ ಇರುವ ಹಾದಿ ಒಂದೇ. ಅದು ಕಾಂಗ್ರೆಸ್ ಮತ್ತು ಎನ್ ಸಿ ಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದು. ಇದರ ಹೊರತು ಬಿಜೆಪಿ ಮತ್ತು ಶಿವಸೇನೆಗೆ ಯಾವುದೇ ಹಾದಿಯಿಲ್ಲ. ಅದರಂತೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರದಂತೆ ತಡೆಯಲು ಮುಂದಾಗಿರುವ ಶಿವಸೇನೆ, ಎನ್ ಸಿ ಪಿ ಮನಸ್ಸು ಮಾಡಿದರೆ ಸರ್ಕಾರ ರಚನೆ ಮಾಡಬಹುದು ಎಂಬ ನಿರೀಕ್ಷಿತ ಹೇಳಿಕೆ ನೀಡಿದೆ. ಭಿನ್ನ ಸಿದ್ಧಾಂತ, ಭಿನ್ನ ನೈತಿಕ ನೆಲೆಗಟ್ಟು ಹೊಂದಿರುವ ಎರಡೂ ಪಕ್ಷಗಳು ಒಗ್ಗೂಡಿ, ಬಿಜೆಪಿಯನ್ನು ಮಣಿಸುತ್ತವಾ..? ಇದಕ್ಕೆ ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ಒಪ್ಪಿಕೊಳ್ಳುತ್ತಾರಾ..? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಯಾಕಂದ್ರೆ ಈಗಾಗಲೇ ಶಿವಸೇನೆ ವಕ್ತಾರ ಸಂಜಯ್ ರಾವತ್, ಎನ್ ಸಿ ಪಿ ಜತೆಗಿನ ಮೈತ್ರಿ ಬಗ್ಗೆ ವಿಶ್ವಾಸದ ಮಾತನಾಡಿದ್ದಾರೆ. ಆದರೆ ಎನ್ ಸಿ ಪಿ ಕಡೆಯಿಂದ ಯಾವುದೇ ಹೇಳಿಕೆಗಳು ಬಂದಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತು ಶಿವಸೇನೆ ಅಧಿಕಾರ ಚುಕ್ಕಾಣಿ ಹಿಡಿಯಲು ನಡೆಸುತ್ತಿರುವ ಶೀತಲ ಸಮರವನ್ನು ಸುಮ್ಮನೇ ನೋಡುತ್ತಿದೆ. ಇನ್ನು ಈ ಮೈತ್ರಿಗೆ ಕಾಂಗ್ರೆಸ್ ಮನವೊಲಿಸಲು ಎನ್‌ಸಿಪಿ ಮುಂದಾಗಿದೆ. ಅದಕ್ಕಾಗಿ ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶರದ್ ಪವಾರ್ ಭೇಟಿಯಾಗಲಿದ್ದಾರೆ.

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಕರೆ ಮಾಡಿ, ಮೈತ್ರಿಯ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗಿದೆ. ಹೀಗೆ ಕರೆ ಬಂದ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಶರದ್ ಪವಾರ್ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿವಸೇನೆಯ ಸಂಜಯ್ ರಾವತ್ ಮಾತನಾಡಿ, ನಾವು ಮನಸ್ಸು ಮಾಡಿದರೆ ರಾಜ್ಯದಲ್ಲಿ ಅಧಿಕಾರಕ್ಕೇರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಇನ್ನು ಎನ್ ಸಿ ಪಿ ನಾಯಕ ಅಜಿತ್ ಪವಾರ್ ಮಾತನಾಡಿ, ಶಿವಸೇನೆ ನೀಡುತ್ತಿರುವ ಆಹ್ವಾನವನ್ನು ತಳ್ಳಿ ಹಾಕದೇ, ಸರ್ಕಾರ ರಚಿಸುವ ಮನಸ್ಸು ಮಾಡಬೇಕು ಎಂಬ ಸಲಹೆ ನೀಡಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೇರದಂತೆ ತಡೆಯಲು ಇದೊಂದು ಸೂತ್ರ ಅನುಸರಿಸುವುದು ಸೂಕ್ತ ಎಂದಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸುಶೀಲ್ ಕುಮಾರ್ ಶಿಂಧೆ ಅವರು ಶಿವಸೇನೆ ಜತೆಗೆ ಯಾವುದೇ ರೀತಿಯ ಸಂಬಂಧ ಒಳ್ಳೆಯದಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಕಾಂಗ್ರೆಸ್ ನ ಮಾಜಿ ಸಿಎಂ ಅಶೋಕ್ ಚವ್ಹಾಣ್, ಪೃಥ್ವಿರಾಜ್ ಚವ್ಹಾಣ್ ಅವರು ಶಿವಸೇನೆ ತಾನಾಗೇ, ಮೈತ್ರಿಗೆ ಆಹ್ವಾನ ನೀಡಿದರೆ ಒಪ್ಪಿಕೊಳ್ಳುವುದು ಸೂಕ್ತ ಎಂದಿದ್ದಾರೆ. ಇತ್ತ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮಾ, ಶಿವಸೇನೆ ಜತೆಗಿನ ಮೈತ್ರಿ ಮಾತು ಮತ್ತು ಶಿವಸೇನೆಗೆ ಬೆಂಬಲ ನೀಡುತ್ತಿರುವುದನ್ನು ವಿರೋಧಿಸಿದ್ದಾರೆ. ಬಿಜೆಪಿ ಮತ್ತು ಶಿವಸೇನೆ ನಾಟಕವಾಡುತ್ತಿವೆ. ಎರಡೂ ಪಕ್ಷಗಳ ನಾಟಕದಿಂದ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಶಿವಸೇನೆಗೆ ಬೆಂಬಲ ಸೂಚಿಸುವುದು ಬೇಡ ಎಂದಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಅಧಿಕಾರ ಗುದ್ದಾಟ, ಇತರೆ ಪಕ್ಷಗಳಿಗೆ ಯಾವ ರೀತಿ ಅನುಕೂಲವಾಗಲಿದೆ. ಕಾಂಗ್ರೆಸ್ ಮತ್ತು ಎನ್ ಸಿ ಪಿ ಪಕ್ಷದೊಳಗಿನ ನಾಯಕರ ಪರ-ವಿರೋಧದ ಮಾತುಗಳ ನಡುವೆ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ..? ಎನ್ನುವುದೇ ಸದ್ಯದ ಕುತೂಹಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...