Homeಮುಖಪುಟಯಾವ ಕಥೆ ಹೇಳಬೇಕು? ಇನ್ನಷ್ಟು ಪ್ರಶ್ನೆಗಳು

ಯಾವ ಕಥೆ ಹೇಳಬೇಕು? ಇನ್ನಷ್ಟು ಪ್ರಶ್ನೆಗಳು

- Advertisement -
- Advertisement -

“ಕುದುರೆಯನ್ನೇರಿ ರಾಜಕುಮಾರಿಗಾಗಿ ಓಡೋಡಿ ಬರುತ್ತಿರುವ ರಾಜಕುಮಾರ, ರಾಜ್ಯ, ರಾಜ ಮತ್ತು ರಾಣಿಯವರ ಕಥೆಯನ್ನೇಕೆ ನನಗೆ ಹೇಳಲಾಗುವುದಿಲ್ಲ” ಒರ್ಹಾನ್ ಪಾಮುಕ್ ಹೀಗೆ ತಮ್ಮ ಒಂದು ಪುಸ್ತಕದಲ್ಲಿ ವಿಷಾದಿಸುತ್ತಾರೆ.

“ಯುದ್ಧದ ಸಮಯದಲ್ಲಿ ಪ್ರೀತಿಯ ಕಥೆಯನ್ನು ಹೇಳು, ಶಾಂತಿಯ ಸಮಯದಲ್ಲಿ ಯುದ್ಧದ ಕಥೆಯನ್ನು” ಯಾರೋ ಹೇಳಿದ್ದು.

“ಮನಸ್ಸಿಗೆ ನೆಮ್ಮದಿ (ಸುಕೂನ್) ಸಿಗುತ್ತೆ” ಉತ್ತರಪ್ರದೇಶದಲ್ಲಿ ನಿಜವಾದ ರೇಪ್ ವೀಡಿಯೊಗಳನ್ನು ಮಾರುವ ಅಂಗಡಿಗೆ ಬಂದ ಗ್ರಾಹಕನೊಬ್ಬ ಹೇಳಿದ್ದು.

“ನನಗೆ ಕಥೆ ಇಷ್ಟವಾಯಿತು ಎಂದರೆ ಸಾಕಲ್ಲ, ಅದನ್ನಿಟ್ಟುಕೊಂಡು ಸಿನೆಮಾ ಮಾಡಲು ಏನು ತೊಂದರೆ?”
ಕಥೆಗಳನ್ನು ಬರೆಯುವುದಕ್ಕೆ ಮತ್ತು ನಾಟಕ ಅಥವಾ ಸಿನೆಮಾ ಮಾಡಲು ಒಂದು ದೊಡ್ಡ ವ್ಯತ್ಯಾಸವಿದೆ. ಒಬ್ಬ ಲೇಖಕನಿಗೆ ತಟ್ಟಿದ ವಿಷಯ, ಕತೆಯನ್ನು ಇಟ್ಟುಕೊಂಡು ಬರೆಯಲು ನೇರವಾಗಿ ಪ್ರಾರಂಭಿಸಬಹುದು ಆದರೆ ಸಿನೆಮಾ ಮತ್ತು ನಾಟಕದಲ್ಲಿ ಹಾಗಲ್ಲ. ಒಂದು ಸಿನೆಮಾ ನಿರ್ಮಿಸಲು ಕೆಲವು ವರ್ಷಗಳೇ ಬೇಕಾಗುವುದೆಂಬ ಮತ್ತು ಇದೊಂದು ಸಾಮೂಹಿಕ ಕಲೆಯಾಗಿರುವ ಕಾರಣದಿಂದ ಹಾಗೂ ಒಂದು ನಿರ್ದಿಷ್ಟ ಸಂಖ್ಯೆಯ ನೋಡುಗರನ್ನು ತಲುಪಲೇಬೇಕಾದ ಕಾರಣದಿಂದ ನಾವು ಹೇಳುವ ಕಥೆಯನ್ನು ಆಯ್ಕೆ ಮಾಡುವಾಗ ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ.

ಒಂದು ಕಥೆ ಇಷ್ಟವಾಯಿತು ಎನ್ನುವುದು ಖಂಡಿತವಾಗಿಯೂ ಸಮಾಧಾನಕರ ಉತ್ತರವಲ್ಲ. ಆ ಕಥೆ ನಮಗೆ ಯಾವ ಕಾರಣಕ್ಕೆ ಇಷ್ಟವಾಯಿತು ಎನ್ನುವ ಪ್ರಶ್ನೆಗೂ ಸೂಕ್ತ ಉತ್ತರವನ್ನು ಪಡೆಯಬೇಕಾಗುತ್ತದೆ. ನಾವಿರುವ ಸಮಯದಲ್ಲಿ ನಮಗಿಷ್ಟವಾದ ಕಥೆಯು ಪ್ರಸ್ತುತವೇ? ಏನಾದರೂ ಹೊಸತನ್ನು ಹೊಂದಿದೆಯೇ ಈ ಕಥೆ? ಮೊದಲಿಗೆ ಈ ಎರಡು ಪ್ರಶ್ನೆಗಳನ್ನು ನೋಡುವ.

ಪ್ರಸ್ತುತ ಎಂದರೇನು? ನಾಟಕ ಮಾಡುವಾಗಂತೂ ನಮ್ಮ ಪರಿಚಯದ ಅನೇಕರಿಗೆ ಇನ್ನೂ ಬಾದಲ್ ಸರ್ಕಾರ್, ಮೋಹನ್ ರಾಕೇಶ್, ಟೆಂಡುಳ್ಕರ್, ಗಿರೀಶ್ ಕಾರ್ನಾಡ್ ಅವರ ಕೃತಿಗಳೇ ಸೆಳೆಯುತ್ತವೆ. ತಮಗಿಷ್ಟವಾದ ಕೃತಿಗಳು ಇಂದಿಗೂ ಪ್ರಸ್ತುತ ಎಂದು ಗಟ್ಟಿಯಾಗಿಯೇ ಪ್ರತಿಪಾದಿಸುತ್ತಾರೆ. ಆದರೆ ಈ ಶ್ರೇಷ್ಠ ಲೇಖಕರ ಅದ್ಭುತ ಕೃತಿಗಳು ನಿಜವಾಗಿಯೂ ಪ್ರಸ್ತುತವಾಗಿ ಉಳಿದಿವೆಯೇ? ಅದನ್ನು ಪತ್ತೆ ಹಚ್ಚುವುದು ಹೇಗೆ? ಆಯಾ ಕೃತಿಗಳು ಸದಾಕಾಲ ಚಾಲ್ತಿಯಲ್ಲಿರುವ ಮಾನವೀಯ ಅಂಶಗಳನ್ನು, ಮನುಷ್ಯನ ತುಡಿತಗಳನ್ನು ಹೊಂದಿರುವ ಕಾರಣದಿಂದ ಅ ಕೃತಿಗಳು ಇಂದಿಗೂ ಪ್ರಸ್ತುತ ಎನ್ನುವ ಉತ್ತರವನ್ನು ನೀಡಬಹುದು. ಇನ್ನು ಆಯಾಕಾಲದಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ಸಮಸ್ಯೆಗಳನ್ನು ಕೆಲವು ಕೃತಿಗಳು ಉದ್ದೇಶಿಸಿದ್ದರಿಂದ ಅವುಗಳು ಪ್ರಸ್ತುತವಲ್ಲ ಎಂದು ಉತ್ತರ ಸಿಗಬಹುದು; ಉದಾಹರಣೆಗೆ ವರದಕ್ಷಿಣೆ ಅಥವಾ ನಿರುದ್ಯೋಗ (ಇವುಗಳು ಮುಂಚೆ ಇದ್ದವು ಈಗ ಇಲ್ಲ ಎಂದು ಹೇಳುತ್ತಿಲ್ಲ, ಆದರೆ ಇಂತಹ ಸಮಸ್ಯೆಗಳು ಆ ಬ್ರ್ಯಾಕೆಟ್‍ನಲ್ಲಿ ಹಾಕಬಹುದು). ಆದರೆ ಪ್ರಸಕ್ತ ಸಮಯದಲ್ಲಿ ಇರುವ ಸಮಸ್ಯೆಗಳನ್ನು ಉದ್ದೇಶಿಸುವ ಕೃತಿಗಳೇ ಪ್ರಸ್ತುತ ಎಂತಲೂ ಹೇಳಲಾಗುವುದಿಲ್ಲ. ರಾಜರಾಣಿಯರ, ರಾಜಕುಮಾರರ, ಪೌರಾಣಿಕ ಕಥೆಗಳ ಕೃತಿಗಳು ಪ್ರಸ್ತುತವಲ್ಲ ಹಾಗೂ ಇತ್ತೀಚಿನ ಇತಿಹಾಸದ ಮತ್ತು ಕೆಲವು ದಶಕ, ಶತಕಗಳ ಹಿಂದಿನ ಸಬ್‍ಆಲ್ಟರ್ನ್ ಇತಿಹಾಸವನ್ನು, ಜನರ ಸಮಸ್ಯೆಗಳನ್ನು ಪ್ರಸಕ್ತ ಸಮಾಜಕ್ಕೆ ತೋರಿಸುವುದೂ ಪ್ರಸ್ತುತವಲ್ಲ ಎಂದು ಹೇಳಲಾಗದು. ಅಂದರೆ ಇಂದು ಹೆಚ್ಚಾಗಿ ಕಾಣುತ್ತಿರುವ ಸಮಸ್ಯೆಗಳನ್ನು ಉದ್ದೇಶಿಸಿ ಕೃತಿ ರಚಿಸಿದಲ್ಲಿ ಅದನ್ನು ಪ್ರಸ್ತುತ ಎಂದು ಖಡಾಖಂಡಿತವಾಗಿ ಹೇಳಬಹುದೇ? ಪ್ರಸ್ತುತ ಏನು ಎಂದು ನಿರ್ಧರಿಸುವುದನ್ನು ಆಯಾ ಕರ್ತೃ ಮತ್ತು ನೋಡುಗರಿಗೆ ಬಿಟ್ಟ ವಿಷಯವೇ? ಒಂದು ಕೃತಿಯನ್ನು ಇದು ಪ್ರಸ್ತುತ ಅಥವಾ ಇಲ್ಲ ಎಂದು ಹೇಳಬಹುದೇ ಹೊರತು, ಪ್ರಸ್ತುತ ಎನ್ನುವುದಕ್ಕೆ ಮಾನದಂಡಗಳೇನು ಎನ್ನುವುದಕ್ಕೆ ಮಾನದಂಡಗಳನ್ನು ನಿರ್ಧರಿಸಲು ಸಾಧ್ಯವೋ ಇಲ್ಲವೋ, ನನಗೂ ಹೊಳೆಯುತ್ತಿಲ್ಲ.

ಇನ್ನೂ ಹೊಸತು ಎಂದರೇನು ಎನ್ನುವ ಪ್ರಶ್ನೆಗೂ ನಮ್ಮ ಬಳಿ ಸರಳ ಉತ್ತರಗಳಿಲ್ಲ. ಜಗತ್ತಿನಲ್ಲಿ ಇರುವ ಜೋಕ್‍ಗಳು ಕೇವಲ ಏಳೋ ಎಂಟೋ ಎಂದು ಹೇಳಲಾಗುತ್ತದೆ. ಅವೇ ಜೋಕ್‍ಗಳನ್ನು ಬೇರೆ ಬೇರೆ ಪಾತ್ರಗಳು ಮತ್ತು ಸಂದರ್ಭಗಳಿಗೆ ತುರುಕಿಸಿ ಹೊಸ ಜೋಕ್‍ಗಳೆಂದು ಹೇಳಲಾಗುತ್ತದೆ. ಇದೇ ಮಾತನ್ನು ಕಥೆಗಳಿಗೂ ಅನ್ವಯಿಸಬಹುದಾದರೆ, ಹೊಸ ಕಥೆ ಎಂದರೇನು? ಹೊಸ ಕಥೆಗಳನ್ನು ತರಲು ಸಾಧ್ಯವೇ ಇಲ್ಲವೇ? ಅನೇಕರು ಅನೇಕ ರೀತಿಯಲ್ಲಿ ಈ ಪ್ರಶ್ನೆಗೆ ಉತ್ತರ ನೀಡಬಹುದು ಆದರೆ ಮುಖ್ಯ ವಿಷಯವೆಂದರೆ, ನಾವು ಯಾವುದಾದರೂ ಕಥೆಯನ್ನು ಆಯ್ಕೆ ಮಾಡಿಕೊಂಡಾಗ ಈ ಎಲ್ಲ ಪ್ರಶ್ನೆಗಳನ್ನು ಆ ಕಥೆಗೆ ಕೇಳಲೇಬೇಕಾಗುತ್ತದೆ. ಅಲ್ಲಿ ಸಮಾಧಾನಕರ ಉತ್ತರ ಸಿಗಬಹುದು ಅಥವಾ ಸಿಗದೇ ಇರಬಹುದು.

ಕೆಲವರು ನೋಡುಗರ ಆಯ್ಕೆಯ ಅಧ್ಯಯನ ಮಾಡಿ ತಾವು ಯಾವ ಕಥೆ ಹೇಳಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ‘ಜನ ಇಂಥದ್ದನ್ನೇ ಇಷ್ಟಪಡ್ತಾರೆ, ನಾವೇನು ಮಾಡಬೇಕು?’ ಎನ್ನುವ ಉಡಾಫೆಯ ಕಾರಣಗಳನ್ನು ತಮ್ಮ ರಚನೆಗಳಿಗೆ ನೀಡುತ್ತಾರೆ. ಈ ಧೋರಣೆ ತಪ್ಪು ಎಂದು ನಿಸ್ಸಂಶಯವಾಗಿ ಹೇಳಬಲ್ಲೆ. ಇದಕ್ಕೆ ಹಲವಾರು ಕಾರಣಗಳಿವೆ. ಒಂದು, ಜನ ಏನು ಇಷ್ಟ ಪಡುತ್ತಾರೆ ಎಂದು ಯೋಚಿಸಿ ಚಿತ್ರವನ್ನು ಮಾಡಿದಾಗ, ಅವರು ಆ ಚಿತ್ರವನ್ನು ಮಾಡುವಷ್ಟರಲ್ಲಿ ಅಂತಹ ಕಥೆಗಳನ್ನು ನೋಡಿರುತ್ತಾರೆ. ಮತ್ತೇ ಅಂತಹ ಕಥೆಗಳನ್ನು ಜನರು ಏಕೆ ಇಷ್ಟಪಡಬೇಕು ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತರವಿರುವುದಿಲ್ಲ. ಇಲ್ಲಿ ಕೆಲವು ವರ್ಷಗಳ ಹಿಂದೆ ಬಂದ ಕನ್ನಡ ಚಿತ್ರ ‘ತಿಥಿ’ಯ ಉದಾಹರಣೆ ಕೊಡಬಹುದು. ತಿಥಿ ಚಿತ್ರ ಹಿಟ್ ಆದಕೂಡಲೇ ಅಂತಹದ್ದೇ ಹಲವಾರು ಚಿತ್ರಗಳು ಬಂದವು ಆದರೆ ಅವ್ಯಾವೂ ಸ್ವಾಭಾವಿಕವಾಗಿಯೇ ಯಶಸ್ವಿಯಾಗಲಿಲ್ಲ. ಹಾಗೂ ‘ಜನ ಏನು ಇಷ್ಟಪಡುತ್ತಾರೆ’ ಎನ್ನುವ ನಿರ್ಣಯಕ್ಕೆ ಆಳವಾದ ಅಧ್ಯಯನದಿಂದ ಬಂದಿರುವುದಿಲ್ಲ.

ಇದರೊಂದಿಗೆ, ಆಳವಾದ ಸಾಮಾಜಿಕ ವಿಷಯವನ್ನು ಹೊಂದಿರುವ ಕಥೆಗಳಿಂದ ಹಿಡಿದು ಕೇವಲ ವೈಭವೀಕರಿಸಿದ ಹಿಂಸೆ, ಪೊಳ್ಳು ಕಥೆಗಳನ್ನು ಹೊಂದಿರುವ ಚಿತ್ರಗಳೂ ಯಶಸ್ವಿಯಾಗಿದ್ದು ವಾಸ್ತವ. ಹಾಗಾದರೆ ಜನ ಏನು ಇಷ್ಟಪಡುತ್ತಾರೆ ಎಂದು ಖಚಿತವಾಗಿ ಹೇಳುವುದು ಹೇಗೆ? ಹಾಗೂ ಅವರ ಇಷ್ಟ ಚಿತ್ರ ನಿರ್ಮಿಸುವವರಿಗೆ ಏಕೆ ಮಾನದಂಡವಾಗಬೇಕು? ಮೇಲೆ ಹೇಳಿದಂತೆ, ರೇಪ್ ವಿಡಿಯೋಗಳನ್ನು ಮಾರಾಟ ಮಾಡಲಾಗುತ್ತದೆ, ಅದಕ್ಕೂ ಗ್ರಾಹಕರಿದ್ದಾರೆ, ಹಾಗಿರುವಾಗ ಅವೇ ಚಿತ್ರಗಳನ್ನೇಕೆ ನಿರ್ಮಿಸಬಾರದು? ಕಥೆ ಹೇಳುವವರೇ ತನಗೆ ಈ ಕಥೆ ಇಷ್ಟವೇ? ಯಾವ ಕಾರಣಕ್ಕೆ ಇಷ್ಟ ಎನ್ನುವ ನಿರ್ದಿಷ್ಟ ಉತ್ತರವನ್ನು ಕಂಡುಕೊಳ್ಳಬೇಕಾಗುತ್ತದೆ. ಆ ಉತ್ತರ ಇತರರಿಗೆ ಸಮಂಜಸ ಎನ್ನಿಸದೇ ಇರಬಹುದು, ಆದರೆ ತನ್ನ ಉತ್ತರಗಳಲ್ಲಿ ರಚಿಸುವವನಿಗೆ ಬಲವಾದ ನಂಬಿಕೆಯಿದ್ದರೆ ಅಲ್ಲೊಂದು ಉತ್ತಮ ಕೃತಿ ಬೆಳೆಯುತ್ತಿರುತ್ತದೆ. ಜಗತ್ತಿನ ಎಲ್ಲಾ ಶ್ರೇಷ್ಠ ಕೃತಿಗಳು ಹುಟ್ಟಿದ್ದು ಹೀಗೆ ಅಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...