ಮಹಾರಾಷ್ಟ್ರದ ಥಾಣೆ ಬಳಿಯ ದಿವಾದಲ್ಲಿ ಕಿಕ್ಕಿರಿದ ಲೋಕಲ್ ರೈಲಿನಿಂದ ಬಿದ್ದು ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ.
ದಿವಾ ಮತ್ತು ಕೋಪರ್ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದ್ದು, ಕಿಕ್ಕಿರಿದ ರೈಲು ಕಸರಾ ಕಡೆಗೆ ಹೋಗುತ್ತಿತ್ತು ಎಂದು ವರದಿಯಾಗಿದೆ.
ಪೀಕ್ ಅವರ್‌ನಲ್ಲಿ ಭಾರೀ ಜನದಟ್ಟಣೆ ಇದ್ದುದರಿಂದ, ಅನೇಕ ಜನರು ರೈಲಿನ ಬಾಗಿಲುಗಳ ಬಳಿ ನಿಂತಿದ್ದರು. ರೈಲು ಚಲಿಸುತ್ತಿರುವಾಗ 10ಕ್ಕಿಂತ ಹೆಚ್ಚು ಪ್ರಯಾಣಿಕರು ಕೆಳಗೆ ಬಿದ್ದಿದ್ದಾರೆ ಎಂದು ವರದಿಗಳು ಹೇಳಿವೆ.
ಪ್ರಯಾಣಿಕರಲ್ಲಿ ಆರು ಮಂದಿ ಸಾವನ್ನಪ್ಪಿದರೆ, ಉಳಿದವರು ಗಾಯಗೊಂಡು ಹತ್ತಿರದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಮೃತರೆಲ್ಲರು 30 ರಿಂದ 35 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ.
ಇದು ರೈಲು ಡಿಕ್ಕಿಯಲ್ಲ. ಎರಡು ರೈಲುಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವಾಗ ಮೆಟ್ಟಿಲ ಬಳಿ ನಿಂತಿದ್ದ ಪ್ರಯಾಣಿಕರಿಗೆ ಪರಸ್ಪರ ತಾಗಿದೆ. ಪ್ರಯಾಣಿಕರೊಬ್ಬರು ಹೇಳಿದಂತೆ ಇದು ಘಟನೆಗೆ ಒಂದು ಶಂಕಿತ ಕಾರಣವಾಗಿದೆ. ಎರಡು ರೈಲುಗಳ ನಡುವಿನ ಅಂತರವು 1.5-2 ಮೀಟರ್. ಆದರೆ ತಿರುವುಗಳಲ್ಲಿ ಸ್ವಲ್ಪ ವಾಲುವಿಕೆ ಸಂಭವಿಸುತ್ತದೆ. ಇದು ಘಟನೆಗೆ ಮತ್ತೊಂದು ಕಾರಣವಾಗಿರಬಹುದು” ಎಂದು ಸೆಂಟ್ರಲ್ ರೈಲ್ವೆಯ ಸಿಪಿಆರ್‌ಒ ಸ್ವಪ್ನಿಲ್ ಧನರಾಜ್ ನಿಲಾ ಹೇಳಿದ್ದಾರೆ.
ಪ್ರಯಾಣಿಕರು ಕೈ ತಪ್ಪಿ ಕೆಳಗೆ ಬಿದ್ದಿದ್ದಾರೆಯೇ, ಬ್ಯಾಗ್‌ಗಳು ತಾಗಿ ಬಿದ್ದಿದ್ದಾರೆಯೇ ಅಥವಾ ಯಾರಾದರೂ ಅವರನ್ನು ತಳ್ಳಿದ್ದಾರೆಯೇ ಎಂಬುದನ್ನು ಕಂಡುಹಿಡಿಯುವ ಮೂಲಕ ಘಟನೆಗೆ ಕಾರಣವಾದ ಸಂದರ್ಭಗಳನ್ನು ತನಿಖೆ ಮಾಡಬೇಕು ಎಂದು ಶಿವಸೇನಾ ಸಂಸದ ನರೇಶ್ ಮಾಸ್ಕೆ ಒತ್ತಾಯಿಸಿದ್ದಾರೆ.
ಇದು ಅತ್ಯಂತ ದುರದೃಷ್ಟಕರ ಘಟನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಗಾಯಾಳುಗಳಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಬಗ್ಗೆ ರೈಲ್ವೆ ತನಿಖೆ ಆರಂಭಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಅದರ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಮೂಲಭೂತ ಸೇವೆಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಎನ್‌ಸಿಪಿ ಎಸ್‌ಪಿ ನಾಯಕಿ ವಿದ್ಯಾ ಚವಾಣ್ ಹೇಳಿದ್ದಾರೆ.
ರೈಲ್ವೆ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ರೈಲುಗಳ ಬಾಗಿಲುಗಳು ಸ್ವಯಂಚಾಲಿತವಾಗಿ ಮುಚ್ಚಲ್ಪಡುವಂತೆ ನೋಡಿಕೊಳ್ಳಬೇಕು ಇದರಿಂದ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬಹುದು ಎಂದಿದ್ದಾರೆ.
ಬಂಧಿತ 7 ಮಾವೋವಾದಿಗಳನ್ನು ದಿನಕ್ಕೊಬ್ಬರಂತೆ ಹತ್ಯೆ: ಮಾನವ ಹಕ್ಕುಗಳ ಸಂಘಟನೆ ಆರೋಪ