Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಣಸೂರು: ಅರಸು ಕರ್ಮಭೂಮಿಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಣಸೂರು: ಅರಸು ಕರ್ಮಭೂಮಿಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ

- Advertisement -
- Advertisement -

2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನವಾದ ಬಳಿಕ, ಸುಮಾರು ಮೂರು ವರ್ಷಗಳ ಕಾಲ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಹಿರಿಯ ರಾಜಕಾರಣಿ ಜಿ.ಟಿ.ದೇವೇಗೌಡ ಅವರು ತಮ್ಮ ಬೇಡಿಕೆ ಈಡೇರಿದ ಬಳಿಕ ಪಕ್ಷದಲ್ಲಿ ಸಕ್ರಿಯವಾದರು. ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದ ಅವರನ್ನು ವಾಪಸ್ ಮಾತುಕತೆಗೆ ಕರೆದು, ಜೆಡಿಎಸ್ ವರಿಷ್ಠರಾದ ದೇವೇಗೌಡರು ಸಮಾಧಾನಪಡಿಸಿದ್ದು- ಮುನಿಸು ಶಮನವಾಗಲು ಕಾರಣವಾಯಿತು. ಸಹಕಾರಿ ಕ್ಷೇತ್ರದಲ್ಲಿ ತಮ್ಮಂತೆಯೇ ಸಕ್ರಿಯವಾಗಿ ಹಿಡಿತ ಸಾಧಿಸಿರುವ ತಮ್ಮ ಪುತ್ರ ಜಿ.ಡಿ.ಹರೀಶ್ ಗೌಡ ಅವರಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂಬುದು ಜಿ.ಟಿ.ಡಿ.ಯವರ ಬೇಡಿಕೆಯಾಗಿತ್ತು. ಇದಕ್ಕೆ ಜೆಡಿಎಸ್ ವರಿಷ್ಠರು ಸ್ಪಂದಿಸಿದರು. ಜಿ.ಡಿ.ಹರೀಶ್ ಗೌಡರಿಗೆ ಟಿಕೆಟ್ ಖಾತ್ರಿಯಾಯಿತು, ಜಿ.ಟಿ.ಡಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭ್ಯರ್ಥಿಯಾದರು. ಈಗ ಅಪ್ಪ ಒಂದು ಕ್ಷೇತ್ರದಲ್ಲಿ, ಮಗ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಹರೀಶ್ ಗೌಡರು ಈಗಾಗಲೇ ಜನಾನುರಾಗಿಯಾಗಿ ಗುರುತಿಸಿಕೊಂಡಿರುವುದರಿಂದ ಮತ್ತು ಕಾಂಗ್ರೆಸ್ಸಿನ ಹಾಲಿ ಶಾಸಕರಾಗಿರುವ ಎಚ್.ಪಿ.ಮಂಜುನಾಥ್ ಅವರಿಗೆ ಈ ಬಾರಿಯೂ ಟಿಕೆಟ್ ದೊರಕಿರುವುದರಿಂದ ಹುಣಸೂರು ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ.

ದೇವರಾಜ್ ಅರಸ್

ಲಕ್ಷ್ಮಣತೀರ್ಥ ನದಿಯ ಇಕ್ಕೆಲಗಳಲ್ಲಿ ಬೆಳೆದುನಿಂತಿರುವ ಹುಣಸೂರು ವಿಧಾನಸಭಾ ಕ್ಷೇತ್ರವು ಶ್ರೀಮಂತ ಸಾಂಸ್ಕೃತಿಕ, ರಾಜಕೀಯ ಪರಂಪರೆಗೆ ಹೆಸರುವಾಸಿ. ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಶಕ್ತಿ ತುಂಬಿದ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಜನನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕರ್ಮಭೂಮಿ ಹುಣಸೂರು ವಿಧಾನಸಭಾ ಕ್ಷೇತ್ರ. ಸ್ವಜಾತಿ ಬಲವಿಲ್ಲದ ಅರಸು ಅವರನ್ನು ಒಮ್ಮೆ ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸಿದ್ದ ನೆಲ ಹುಣಸೂರು. ಇಂತಹ ಕ್ಷೇತ್ರದಿಂದ ಮೂರು ಬಾರಿ ಕಾಂಗ್ರೆಸ್ಸಿನಿಂದ ಗೆದ್ದಿರುವ, ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಅವರೇ ಹುಣಸೂರು ಪರಂಪರೆಗೆ ಮತ್ತೊಂದು ಉದಾಹರಣೆ. ವೈಷ್ಣವ ಶೆಟ್ಟಿ ಸಮುದಾಯಕ್ಕೆ ಸೇರಿದ ಮಂಜುನಾಥ್ ಅವರಿಗೂ ಸ್ವಜಾತಿ ಬಲವಿಲ್ಲ. ಶೆಟ್ಟಿ ಸಮುದಾಯದ ಮತಗಳು ಸಾವಿರವನ್ನೂ ದಾಟದ ಕ್ಷೇತ್ರವಿದು. ಆದರೆ ಜಾತಿ ಸಮೀಕರಣದ ಲೆಕ್ಕಾಚಾರ ಮತ್ತು ರಾಜಕೀಯ ಪಲ್ಲಟಗಳು ಮಂಜುನಾಥ್ ಅವರನ್ನು ಕೈಹಿಡಿಯುತ್ತಾ ಬಂದಿವೆ. ಯಾವಾಗ ಜೆಡಿಎಸ್ ಟಿಕೆಟ್ ಕೈತಪ್ಪಲಿದೆ ಎಂಬುದು ಖಾತ್ರಿಯಾಯಿತೋ, ಆಗಲೇ ಪಕ್ಷ ತೊರೆಯಲು ನಿರ್ಧರಿಸಿದ ದೇವರಹಳ್ಳಿ ಸೋಮಶೇಖರ್ ಬಿಜೆಪಿಗೆ ಹೋಗಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಹುಣಸೂರು ತಾಲ್ಲೂಕು ಜೆಡಿಎಸ್ ಅಧ್ಯಕ್ಷರೂ ಆಗಿದ್ದ ಸೋಮಶೇಖರ್, 2019ರ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ 32,859 ಮತಗಳನ್ನು ಪಡೆದಿದ್ದರು.

ಹುಣಸೂರು ಕ್ಷೇತ್ರದ ಈವರೆಗಿನ ಚುನಾವಣೆಗಳು

ಮೂರು ಉಪಚುನಾವಣೆಗಳೂ ಸೇರಿದಂತೆ 19 ಚುನಾವಣೆಗಳನ್ನು ಕಂಡಿರುವ ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ 12 ಬಾರಿ, ಜಾ.ದಳ 5, ಬಿಜೆಪಿ 2 ಬಾರಿ ಜಯಗಳಿಸಿವೆ. 1952ರಲ್ಲಿ ಅರಸು ಕಾಂಗ್ರೆಸ್‌ನಿಂದ ಸ್ಪರ್ಧಿಸಿ 6216 ಮತಪಡೆದು, ಪಕ್ಷೇತರ ಅಭ್ಯರ್ಥಿ ಬಿ.ಎಲ್.ಮರೀಗೌಡ ಅವರ ವಿರುದ್ಧ 3,490 ಮತಗಳ ಅಂತರದಲ್ಲಿ ಗೆದ್ದಿದ್ದರು. 1957ರಲ್ಲಿ ಮತ್ತೆ ಪುನರಾಯ್ಕೆಯಾದರು. ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೆ.ಲಿಂಗಪ್ಪ ಅವರಿಗೆ 1385 ಮತಗಳ ಅಂತರದಲ್ಲಿ ಸೋಲಾಗಿತ್ತು. ದ್ವಿ ಸದಸ್ಯ ಕ್ಷೇತ್ರವಾಗಿದ್ದರಿಂದ ಎನ್.ರಾಚಯ್ಯ ಅವರೂ ಇಲ್ಲಿಂದ ಆ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದರು. 1962ರ ಚುನಾವಣೆಯಲ್ಲಿ ಅರಸು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದ ಶ್ರೇಯಸ್ಸು ಈ ಕ್ಷೇತ್ರಕ್ಕೆ ಸಲ್ಲುತ್ತದೆ.

1967ರಲ್ಲಿ ಪಕ್ಷೇತರ ಅಭ್ಯರ್ಥಿ ತಿಮ್ಮಪ್ಪ ಅವರನ್ನು 7,837 ಮತಗಳ ಅಂತರದಲ್ಲಿ ಅರಸು ಮಣಿಸಿದ್ದರು. 1972ರಲ್ಲಿ ಕಾಂಗ್ರೆಸ್ಸಿನ ಕರಿಯಪ್ಪಗೌಡ ಗೆದ್ದಿದ್ದರು. ರಾಜಕೀಯ ಪಲ್ಲಟಗಳಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿತ್ತು. ಇಂದಿರಾ ಕಾಂಗ್ರೆಸ್ಸಿನಲ್ಲಿ ಉಳಿದ ಅರಸು 1978ರಲ್ಲಿ ಜನತಾದಳದ ಎಚ್.ಎಲ್.ತಿಮ್ಮೇಗೌಡ ಅವರನ್ನು 12,055 ಮತದಂತರದಲ್ಲಿ ಸೋಲಿಸಿದ್ದರು. 1978ರಲ್ಲಿ ಅರಸು ಅವರ ಪುತ್ರಿ ಚಂದ್ರಪ್ರಭಾ ಕ್ಷೇತ್ರದಲ್ಲಿ ಗೆದ್ದಿದ್ದರು. 1972-77, 1978-80ರ ಅವಧಿಯಲ್ಲಿ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1882ರಲ್ಲಿ ಅರಸು ನಿಧನರಾದರು. 1985ರಲ್ಲಿ ಚಂದ್ರಪ್ರಭಾ ಜನತಾಪಾರ್ಟಿಯ ಎಚ್.ಎಲ್.ತಿಮ್ಮೇಗೌಡರ ವಿರುದ್ಧ ಸೋತಿದ್ದರು. 1989ರಲ್ಲಿ ಮತ್ತೆ ಚಂದ್ರಪ್ರಭಾ ಆಯ್ಕೆಯಾದರು. ಜನತಾ ದಳದಿಂದ ಸ್ಪರ್ಧಿಸಿದ್ದ ಡಿ.ಕರಿಯಪ್ಪಗೌಡ ಪ್ರಬಲ ಪೈಪೋಟಿ ನೀಡಿದ್ದರು. ಚಂದ್ರಪ್ರಭಾ ಅವರು 91ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರಿಂದ ಶಾಸಕ ಸ್ಥಾನ ತ್ಯಜಿಸಿದರು. 1991ರಲ್ಲಿ ನಡೆದ ಉಪಚುನಾವಣೆಯಲ್ಲಿ ಎಸ್.ಚಿಕ್ಕಮಾದು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಎಚ್.ವಿಜಯಶಂಕರ್ ವಿರುದ್ಧ ಚಿಕ್ಕಮಾದು 3,931 ಮತದಂತರದಲ್ಲಿ ಗೆದ್ದರು. 1994ರಲ್ಲಿ ವಿಜಯಶಂಕರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯ್ಕೆಯಾದರು. ಜನತಾದಳದ ವಿ.ಪಾಪಣ್ಣ ಪ್ರಬಲ ಪೈಪೋಟಿ ನೀಡಿದ್ದರು. 1999ರಲ್ಲಿ ವಿ.ಪಾಪಣ್ಣ ಬಿಜೆಪಿಗೆ ಬಂದರು. ಈ ವೇಳೆಗೆ ಚಿಕ್ಕಮಾದು ಪಕ್ಷೇತರರಾಗಿ ಸ್ಪರ್ಧಿಸಿ, 2,790 ಮತದಂತರದಲ್ಲಿ ಸೋತರು.

ಜಿ.ಟಿ.ಡಿ. ಪ್ರವೇಶ

2018ರಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಅಂತರದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಿದ್ದ ಜೆಡಿಎಸ್ ಪಕ್ಷದ ಜಿ.ಟಿ.ದೇವೇಗೌಡರ ರಾಜಕೀಯ ನೆಲ ಮೂಲದಲ್ಲಿ ಹುಣಸೂರು.

ಜಿ.ಟಿ.ದೇವೇಗೌಡ

ಮೈಸೂರು ತಾಲ್ಲೂಕಿನ ಗುಂಗ್ರಾಲ್‌ಛತ್ರದ ನಿವಾಸಿಯಾದ ಜಿ.ಟಿ.ದೇವೇಗೌಡ ಅವರು ಮೂಲತಃ ಸಹಕಾರ ಕ್ಷೇತ್ರದ ಧುರೀಣರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದವರು. 2006ಕ್ಕೂ ಹಿಂದೆ ಜನತಾದಳದಲ್ಲಿದ್ದ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರಿಂದ ಜಿ.ಟಿ.ಡಿ. ಹುಣಸೂರು ಕ್ಷೇತ್ರದಲ್ಲಿ ತಮ್ಮ ನೆಲೆ ಕಂಡುಕೊಳ್ಳಬೇಕಾಯಿತು. 2004ರ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಜಿಟಿಡಿ ಸ್ಪರ್ಧಿಸಿದ್ದರು. ಆ ವೇಳೆಗೆ ಚಿಕ್ಕಮಾದು ಕಾಂಗ್ರೆಸ್ ಸೇರಿಕೊಂಡು ಈ ಚುನಾವಣೆಯಲ್ಲಿ ಜಿಟಿಡಿಯವರಿಗೆ ಪ್ರತಿಸ್ಪರ್ಧಿಯಾಗಿದ್ದರು. ಆದರೆ ಜಿಟಿಡಿ 60258 ಮತ ಪಡೆದು, ಚಿಕ್ಕಮಾದು (46126) ಅವರನ್ನು 14,132 ಮತಗಳ ಅಂತರದಲ್ಲಿ ಮಣಿಸಿದರು. ಆದರೆ 2008ರ ಚುನಾವಣೆ ವೇಳೆಗೆ ಚಿಕ್ಕಮಾದು ಜೆಡಿಎಸ್ ಸೇರಿ, ಟಿಕೆಟ್ ಪಡೆದರು. ಎಚ್.ಡಿ.ಕುಮಾರಸ್ವಾಮಿಯವರು ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದೆ ಮೋಸ ಮಾಡಿದರು ಎಂಬ ಕಾರಣವೊಡ್ಡಿ ಜೆಡಿಎಸ್ ತೊರೆದ ಜಿ.ಟಿ.ಡಿ. ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಂಡರು. ಹುಣಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದರು. 2008ರ ಚುನಾವಣೆಯಲ್ಲಿ ಎಸ್.ಚಿಕ್ಕಮಾದು (42456) ಎರಡನೇ ಸ್ಥಾನ ಪಡೆದರೆ, ಜಿಟಿಡಿ ಮೂರನೇ ಸ್ಥಾನದಲ್ಲಿ ತೃಪ್ತಿಪಟ್ಟರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ (57497) ಅವರು 15,041 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಆ ನಂತರದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಅಧ್ಯಕ್ಷರೂ ಆದ ಜಿಟಿಡಿ, 2013ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಮರಳಿದರು. ಆ ವರ್ಷದ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಸತ್ಯನಾರಾಯಣ (68761) ಅವರಿಗೆ ಜಿ.ಟಿ.ಡಿ. (75864) 7,103 ಮತಗಳ ಅಂತರದಲ್ಲಿ ಸೋಲುಣಿಸಿದರು. ಒಂದು ರೀತಿಯಲ್ಲಿ ಹುಣಸೂರು ಕ್ಷೇತ್ರದ ಮೇಲೆ ಜಿಟಿಡಿಯವರ ಹಿಡಿತ ಈಗಲೂ ಇದೆ. ಈ ಕಾರಣಕ್ಕಾಗಿಯೇ ತಮ್ಮ ಮಗನಿಗೆ ಇಲ್ಲಿಂದ ಟಿಕೆಟ್ ಕೊಡಿಸಲು ಅವರು ಇಚ್ಛಿಸಿದ್ದರು. ಜೆಡಿಎಸ್‌ನೊಂದಿಗೆ ಅಂತರ ಕಾಯ್ದುಕೊಂಡಿದ್ದ ಜಿಟಿಡಿಯವರಿಗೆ ಕಾಂಗ್ರೆಸ್ಸಿನ ಮೇಲೆ ಒಲವಿತ್ತು. ಬಿಜೆಪಿಗೆ ಹೋಗುವ ಅವಕಾಶವಿದ್ದರೂ ಅವರ ರಾಜಕೀಯ ಏರಿಳಿತದಲ್ಲಿ ಬಿಜೆಪಿ ಆಗಿಬರಲಿಲ್ಲ. ಮಾತುಕತೆಗಳ ನಂತರದಲ್ಲಿ ಜೆಡಿಎಸ್‌ನಲ್ಲಿಯೇ ಉಳಿದರು.

ಮೇಲೆದ್ದು ಬಂದ ಮಂಜುನಾಥ್

ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ವೈಷ್ಣವ ಶೆಟ್ಟಿ ಸಮುದಾಯದ ಮಂಜುನಾಥ್, ನಿರಂತರ ಜನಸಂಪರ್ಕ, ಸಂಪತ್ತಿನ ಪ್ರಭಾವದಿಂದಾಗಿ 2008ರಲ್ಲಿ ಮೊದಲ ಬಾರಿಗೆ ಗೆಲುವು ದಾಖಲಿಸಿದರು. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ನಾಯಕ ಸಮುದಾಯದ ಚಿಕ್ಕಮಾದು 15,041 ಮತದಂತರದಲ್ಲಿ ಸೋಲುಕಂಡರು. 2013ರಲ್ಲಿ ಒಡೆದ ಮನೆಯಾಗಿದ್ದ ಬಿಜೆಪಿ ಇಲ್ಲಿ ಲೆಕ್ಕಕ್ಕೆ ಇಲ್ಲವಾಯಿತು. ಜೆಡಿಎಸ್ ಟಿಕೆಟ್ ಪಡೆದಿದ್ದ ಕುಮಾರಸ್ವಾಮಿ 40,207 ಮತಗಳ ಅಂತರದಲ್ಲಿ ಎಚ್.ಪಿ.ಎಂ ವಿರುದ್ಧ ಸೋಲು ಕಂಡರು. 2018ರ ವೇಳೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿಕೊಂಡಿದ್ದ, ಹಳ್ಳಿಹಕ್ಕಿ ಖ್ಯಾತಿಯ ಅಡಗೂಡು ಎಚ್. ವಿಶ್ವನಾಥ್ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದರು. ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಅವರಿಗೆ ದೊರಕಿತು. ಈ ಚುನಾವಣೆಯಲ್ಲಿ ವಿಶ್ವನಾಥ್ ಎದುರು ಮಂಜುನಾಥ್ 8,575 ಮತದಂತರದಲ್ಲಿ ಸೋತರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮರಾಜನಗರ: ಪುಟ್ಟರಂಗಶೆಟ್ಟಿ-ಸೋಮಣ್ಣ ಸೆಣಸಾಟದಲ್ಲಿ ಬಿಎಸ್‌ಪಿ ಪಾತ್ರ ನಿರ್ಣಾಯಕ

ಆಪರೇಷನ್ ಕಮಲ ಮತ್ತು ಮಂಜುನಾಥ್ ಕೈ ಹಿಡಿದ ಮತದಾರರು

2018ರಲ್ಲಿ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಒಂದು ವರ್ಷದ ಬಳಿಕ ಉರುಳಿಬಿತ್ತು. ವಿಶ್ವನಾಥ್ ನೇತೃತ್ವದ ಶಾಸಕರ ದಂಡು ಬಾಂಬೆಗೆ ಹಾರಿ, ಸರ್ಕಾರ ಪತನವಾಗಲು ಕಾರಣವಾಯಿತು. ಜೆಡಿಎಸ್ ತೊರೆದು ಬಿಜೆಪಿಗೆ ಸೇರಿಕೊಂಡ ವಿಶ್ವನಾಥ್ 2019ರ ಚುನಾವಣೆಯಲ್ಲಿ ಮಂಜುನಾಥ್ ಅವರ ಎದುರು ಸೋತರು. ವಿಶ್ವನಾಥ್ ಅವರನ್ನು ಎಂಎಲ್ಸಿ ಮಾಡಲಾಯಿತು. ಮೂಲತಃ ಬಂಡಾಯ ಸ್ವಭಾವದ ಅಡಗೂರು ಬಿಜೆಪಿಯ ವಿರುದ್ಧ ಗುಡುಗಲಾರಂಭಿಸಿದರು. ಅಲ್ಲಿಯೂ ಇರದೆ ಈಗ ಮತ್ತೆ ತಮ್ಮ ಮಾತೃ ಪಕ್ಷ ಕಾಂಗ್ರೆಸ್ಸಿಗೆ ಹೊರಳಿದರು. ಇವರು ಹಳ್ಳಿಹಕ್ಕಿಯಲ್ಲ, ಹಾರುಹಕ್ಕಿ ಎಂಬ ಟೀಕೆಗೂ ಗುರಿಯಾದರು. ಉಪಚುನಾವಣೆಯಲ್ಲಿ ದೇವರಹಳ್ಳಿ ಸೋಮಶೇಖರ್ ಜೆಡಿಎಸ್ಸಿನಿಂದ ಸ್ಪರ್ಧಿಸಿದ್ದರು.

ಈಗ ಪರಿಸ್ಥಿತಿ ಹೇಗಿದೆ?

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಲಾಗಿರುವ ಹುಣಸೂರು ತಾಲ್ಲೂಕು ತೇಗದನಾಡು, ಬಂಡೀಪಾಳ್ಯ ಎಂಬ ಅನ್ವರ್ಥನಾಮಗಳನ್ನೂ ಹೊಂದಿದೆ. ವರ್ಜೀನಿಯಾ ಹೊಗೆಸೊಪ್ಪು ತಾಲ್ಲೂಕಿನ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇಂತಹ ಕ್ಷೇತ್ರದಲ್ಲಿ ಜಾತಿ ಸಮೀಕರಣ ಬಹುದೊಡ್ಡ ಪಾತ್ರ ವಹಿಸುತ್ತಿದೆ.

ಒಕ್ಕಲಿಗರು, ಲಿಂಗಾಯತರು, ಕುರುಬರು, ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರ ಜೊತೆಗೆ ಆದಿವಾಸಿ ಮತದಾರರು ಹೆಚ್ಚಿರುವ ಹುಣಸೂರು ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಹಾಲಿ ಶಾಸಕರಾಗಿರುವ ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ ಮತ್ತು ಜಾ.ದಳ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ ಅವರ ನಡುವೆ ಸಮಬಲದ ಹೋರಾಟ ಕಂಡುಬರುತ್ತಿದೆ.

ದೇವರಹಳ್ಳಿ ಸೋಮಶೇಖರ್

ಕಸಬಾ ಹೋಬಳಿ, ಬಿಳಿಕೆರೆ ಹೋಬಳಿ, ಹನಗೋಡು ಹೋಬಳಿ, ಗಾವಡಗೆರೆ ಹೋಬಳಿ ವ್ಯಾಪ್ತಿಯಲ್ಲಿ ಹಬ್ಬಿರುವ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಅಂದಾಜಿನ ಪ್ರಕಾರ ಪರಿಶಿಷ್ಟ ಜಾತಿ/ವರ್ಗದ 65,000, ಒಕ್ಕಲಿಗರ ಸಮುದಾಯದ 42,000 ಮತದಾರರಿದ್ದಾರೆ. ಮುಸ್ಲಿಮರು 17,000, ಕುರುಬರು 30,000, ನಾಯಕರು 28,000, ಲಿಂಗಾಯತರು 15,000, ಆದಿವಾಸಿಗಳು 8000 ಮತದಾರರಿದ್ದಾರೆ. ಕ್ಷೇತ್ರದ ಮೇಲೆ ಮತ್ತೆ ತಮ್ಮ ಹಿಡಿತ ಸಾಧಿಸಬೇಕು ಎಂಬ ನಿರೀಕ್ಷೆಯಲ್ಲಿ ಒಕ್ಕಲಿಗರಿದ್ದಾರೆ. ದೇವರಹಳ್ಳಿ ಸೋಮಶೇಖರ್ ಜಿ.ಡಿ.ಹರೀಶ್ ಗೌಡ ಇಬ್ಬರೂ ಒಕ್ಕಲಿಗರು. ಸೋಮಶೇಖರ್ ಪ್ರಬಲ ಪೈಪೋಟಿ ನೀಡುವಂತೆ ಕಂಡುಬರುತ್ತಿಲ್ಲ ಎಂದು ಕ್ಷೇತ್ರವನ್ನು ಬಲ್ಲವರು ಹೇಳುತ್ತಿದ್ದಾರೆ.

ಜಿ.ಡಿ.ಹರೀಶ್ ಗೌಡ ಅವರು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಜತೆಗೆ, ತಂದೆ ಜಿ.ಟಿ.ದೇವೇಗೌಡರು ಈ ಹಿಂದೆ ಕ್ಷೇತ್ರದ ಶಾಸಕರಾದಾಗಿನಿಂದ ತಮ್ಮದೇ ಆದ ಹಿಡಿತವನ್ನು ಕ್ಷೇತ್ರದಲ್ಲಿ ಹೊಂದಿದ್ದಾರೆ. ಸಹಕಾರ ಕ್ಷೇತ್ರದ ಜಾಲದ ಮೂಲಕ ಪ್ರತಿ ಹಳ್ಳಿಯೊಂದಿಗೂ ಸಂಪರ್ಕ ಸಾಧಿಸಿರುವುದು ಜೆಡಿಎಸ್ ಅಭ್ಯರ್ಥಿಯ ಪಾಲಿಗೆ ವರದಾನವಾಗಬಹುದು. ಪ್ರಬಲ ಒಕ್ಕಲಿಗ ಸಮುದಾಯದ ಬೆಂಬಲದ ಜತೆಗೆ, ಯುವ ಜನರು ಮತ್ತಿತರೆ ಸಣ್ಣಪುಟ್ಟ ಕೋಮುಗಳು ಬೆಂಬಲಿಸುವ ವಿಶ್ವಾಸ ಹೊಂದಿದ್ದಾರೆ.

ಬಿಜೆಪಿ ಸೇರಿಕೊಂಡಿರುವ ಸೋಮಶೇಖರ್ ಅವರಿಗೆ ಮೂಲ ಬಿಜೆಪಿ ಕಾರ್ಯಕರ್ತರ ಬೆಂಬಲ ಅಷ್ಟಾಗಿ ಕಂಡುಬರುತ್ತಿಲ್ಲ. ಈಗಾಗಲೇ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಕೆಲವರಿಗೆ ಟಿಕೆಟ್ ಕೈತಪ್ಪಿಸಿ ಹೊರಗಿನಿಂದ ಬಂದ ಸೋಮಶೇಖರ್ ಅವರಿಗೆ ಟಿಕೆಟ್ ನೀಡಿದ ಅಸಮಾಧಾನ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಇದೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಜಿ.ಡಿ.ಹರೀಶ್ ಗೌಡ ಅವರಿಗೂ ಸವಾಲು ಏರ್ಪಟ್ಟಿದೆ. ಮಗನಿಗೆ ಟಿಕೆಟ್ ಕೊಡಿಸಲು ಜಿಟಿಡಿ ಮೂರು ವರ್ಷ ಪಕ್ಷದ ಸಂಪರ್ಕ ಕಳೆದುಕೊಂಡಿದ್ದರು ಎಂಬ ಬೇಸರ ಕೆಲವು ಕಾರ್ಯಕರ್ತರಿಗಿದೆ. ಆದರೆ ಅದು ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದೂ ಹೇಳಲಾಗುತ್ತಿದೆ. ಅದ್ಯಾಕೋ ಗೊತ್ತಿಲ್ಲ, ಜಿಟಿಡಿಯವರ ಮೇಲೆ ಎಚ್.ಡಿ.ಕುಮಾರಸ್ವಾಮಿಯವರಿಗೆ ಮುನಿಸು ಇರುವಂತೆ ಕಾಣುತ್ತಿದೆ; ಅಕ್ಕಪಕ್ಕದ ಕ್ಷೇತ್ರಗಳಿಗೆ ಬಂದುಹೋದರೂ ಹುಣಸೂರಿನತ್ತ ಎಚ್.ಡಿ.ಕೆ. ತಲೆಹಾಕಲು ಹೋಗಿಲ್ಲ; ಇದು ಬೇರೆ ಸಂದೇಶವನ್ನು ರವಾನಿಸಿದಂತೆ ಕಾಣುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಎಚ್.ಪಿ.ಮಂಜುನಾಥ್ ಅವರಿಗೆ ಜಾತಿ ಬಲವಿಲ್ಲದಿದ್ದರೂ ಸಿದ್ದರಾಮಯ್ಯನವರೇ ಶ್ರೀರಕ್ಷೆ ಎನ್ನಲಾಗುತ್ತಿದೆ. ಕುರುಬ ಸಮುದಾಯದ ಮತಗಳು ಸಾಲಿಡ್ ಆಗಿ ಮಂಜುನಾಥ್ ಅವರಿಗೆ ಬೀಳಲಿವೆ. ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಜೊತೆಯಲ್ಲಿರುವ ದಲಿತರು ಎಷ್ಟರಮಟ್ಟಿಗೆ ಮಂಜುನಾಥ್ ಅವರನ್ನು ಕೈಹಿಡಿಯಲಿದ್ದಾರೆ ಎಂಬ ಕುತೂಹಲವಿದೆ. ಮಂಜುನಾಥ್ ಅವರು ಸ್ವಯಂಕೃತವಾಗಿ ಕೆಲವೊಂದು ತಪ್ಪುಗಳನ್ನು ಮಾಡಿಕೊಂಡಿದ್ದಾರೆ. ಕೆಲವೊಂದು ಸಲ ಆಡಿರುವ ಲೂಸ್‌ಟಾಕ್ ಅವರಿಗೆ ನಕಾರಾತ್ಮಕವಾಗಿ ಪರಿಣಮಿಸುತ್ತಿವೆ.

ಅಭಿವೃದ್ಧಿ ವಿಚಾರದಲ್ಲಿ ಹುಣಸೂರು ಅಷ್ಟಾಗಿ ಪ್ರಗತಿ ಕಂಡಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಮಂಜುನಾಥ್ ವಿಫಲರಾಗಿದ್ದರಿಂದ 2018ರಲ್ಲಿ ಸೋತಿದ್ದರು. ಆಪರೇಷನ್ ಕಮಲದಿಂದಾದ ಪಲ್ಲಟ ಮತ್ತು ಎ.ಎಚ್.ವಿಶ್ವನಾಥ್ ವಿರುದ್ಧ ಒಕ್ಕಲಿಗರ ಸಮುದಾಯಕ್ಕೆ ಇದ್ದ ಬೇಗುದಿಯ ಕಾರಣಕ್ಕೆ 2019ರ ಉಪಚುನಾವಣೆಯಲ್ಲಿ ಮಂಜು ಗೆದ್ದರು. “ಜಿ.ಟಿ.ದೇವೇಗೌಡರ ಕೃಪಾಕಟಾಕ್ಷ ನನ್ನ ಮೇಲಿತ್ತು, ಸುಮಾರು 40 ಸಾವಿರ ಮತಗಳು ಜಿಟಿಡಿಯವರಿಂದ ಬಂದಿದ್ದವು” ಎಂದು ಒಮ್ಮೆ ಮಂಜುನಾಥ್ ಅವರೇ ಹೇಳಿಕೊಂಡಿದ್ದರು. ಈ ಬಾರಿ ಜಿಟಿಡಿ ಕೈಹಿಡಿಯಲು ಸಾಧ್ಯವೇ ಇಲ್ಲ. ಇಲ್ಲಿ ಅವರ ಪುತ್ರನೇ ಮಂಜುನಾಥ್ ಅವರಿಗೆ ಪ್ರತಿಸ್ಪರ್ಧಿ. ಹೀಗಿರುವಾಗ ಹುಣಸೂರಿನಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಮಂಜುನಾಥ್ ಭವಿಷ್ಯ ನಿರ್ಧಾರವಾಗುವುದು ಪಕ್ಕಾ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...