ಮನುಷ್ಯನಿಂದಾದ ವಸ್ತು, ವಿಷಯ ಮತ್ತು ವ್ಯವಸ್ಥೆಗಳೆಲ್ಲವೂ ಕಾಲ ಕ್ರಮೇಣ ರೂಪಾಂತರಗಳನ್ನು ಹೊಂದುತ್ತಿರುತ್ತವೆ. ಅದು ಸಹಜ ಮತ್ತು ಅಪೇಕ್ಷಣೀಯ. ಮನುಷ್ಯನಾಗಲಿ, ಅವನು ಸಮೂಹದಲ್ಲಿ ವಾಸಿಸುವ ಸಮಾಜವಾಗಲಿ ಬದಲಾವಣೆಗೆ ಹೊರತಲ್ಲ. ಏಕೆಂದರೆ ಎರಡೂ ಜೀವಂತವಾಗಿರುವವು. ಬೆಳವಣಿಗೆ ಜೀವಂತಿಕೆಯ ಲಕ್ಷಣ. ಆದರೆ ಸಮಸ್ಯೆ ಎಂದರೆ ಮನುಷ್ಯ ತಾನೇ ಸೃಷ್ಟಿಸಿದ ಅಥವಾ ರಚಿಸಿದ ವಸ್ತುಗಳನ್ನು, ವಿಷಯಗಳನ್ನು ಮತ್ತು ವ್ಯವಸ್ಥೆಗಳನ್ನು ತಾನೇ ಅರ್ಥ ಮಾಡಿಕೊಳ್ಳಲು ತುಂಬಾ ಶ್ರಮಪಡಬೇಕಾಗುತ್ತದೆ. ಈ ಶ್ರಮದಿಂದ ತಪ್ಪಿಸಿಕೊಳ್ಳಲು ಅವನು ಮಾಡುವ ಮೊದಲ ಕೆಲಸವೆಂದರೆ ಮೊದಲಿನವರು ಏನು ಅರ್ಥವನ್ನು ನೀಡಿರುತ್ತಾರೋ ಅಥವಾ ಹೇಗೆ ವ್ಯಾಖ್ಯಾನಿಸಿರುತ್ತಾರೋ ಅದನ್ನೇ ಒಪ್ಪಿಕೊಂಡು ಹೋಗಿಬಿಡುವುದು. ಸ್ವಲ್ಪ ಗಮನಿಸಿ, ಬದಲಾವಣೆಗೆ ಒಳಗಾಗಿರುವುದನ್ನು ಹಳೆಯ ದೃಷ್ಟಿಯಲ್ಲಿ ಅರ್ಥ ಮಾಡಿಕೊಳ್ಳುವುದರಿಂದ ಬರೀ ಅಪಾರ್ಥವಾಗುವುದಲ್ಲ, ಅನರ್ಥವಾಗುತ್ತದೆ.

ಸುಮ್ಮನೆ ಅರ್ಥ ಮಾಡಿಕೊಳ್ಳಲು ಈ ಉದಾಹರಣೆ. ನಾನು ಮೂರು ವರ್ಷದವನಿದ್ದಾಗ ಹಾಕಿಕೊಳ್ಳುತ್ತಿದ್ದ ಉಡುಪೊಂದು ಈಗ ಐವತ್ತೆರಡು ವಯಸ್ಸಿನಲ್ಲಿ ಉಗ್ರಾಣದಿಂದ ಕೈಗೆಟುಕಿತು. ಅದನ್ನು ಈಗ ತೊಟ್ಟುಕೊಳ್ಳಲು ಯತ್ನಿಸಿದರೆ? ಅದು ಆಗದು. ನಾನು ಬಿಡೆನು. ಏಕೆಂದರೆ ಅದು ನನ್ನದೇ. ನಾನೇ ತೊಟ್ಟುಕೊಳ್ಳುತ್ತಿದ್ದೆ. ಈಗಾಗುವುದಿಲ್ಲ ಎಂದರೆ ಏನರ್ಥ? ಸರಿ, ಇನ್ನೊಂದು ಬಗೆಯಿಂದ ನೋಡೋಣ. ಮೂರು ವರ್ಷದ ಹುಡುಗನಾಗಿದ್ದನ ನನ್ನ ಬಟ್ಟೆ ಬಹಳ ಸೊಗಸಾಗಿದೆ. ಓಲ್ಡ್ ಈಸ್ ಗೋಲ್ಡ್. ಆ ಬಟ್ಟೆಗೆ ಹೊಂದಿಕೊಳ್ಳಲು ನಾನು ಪ್ರಯತ್ನಗಳನ್ನು ಮಾಡುತ್ತೇನೆ.

ಸಮಾಜವನ್ನು ಕುರಿತಂತೆ ಮನುಷ್ಯನ ವ್ಯಕ್ತಿಗತವಾದ ದೃಷ್ಟಿಯು, ವ್ಯಕ್ತಿಯನ್ನು ಕುರಿತಂತೆ ಸಮಾಜದ ದೃಷ್ಟಿಯು ಮೇಲಿನ ಉದಾಹರಣೆಯಂತಾಗಿಬಿಟ್ಟರೆ ಹೇಗೆ? ಕಾಲದಿಂದ ಕಾಲಕ್ಕೆ ಒಂದು ಕ್ರಮದಲ್ಲಿ ಮನುಷ್ಯನಲ್ಲಿ ದೈಹಿಕವಾದ, ಮಾನಸಿಕವಾದ, ಬೌದ್ಧಿಕವಾದ ಮತ್ತು ಭಾವನಾತ್ಮಕವಾದಂತಹ ಬದಲಾವಣೆಗಳು ಹೇಗೆ ಆಗುತ್ತಿರುತ್ತದೆಯೋ ಅದೇ ರೀತಿಯಲ್ಲಿ ಸಮಾಜದಲ್ಲಿಯೂ ಕೂಡಾ ಇಂತಹ ಬದಲಾವಣೆಗಳು ಆಗುತ್ತಿರುತ್ತವೆ.

ಅಂತಹ ಜೈವಿಕ ಮತ್ತು ಮಾನಸಿಕವಾದಂತಹ ಸಂಗತಿಗಳ ಕ್ರಮಗಳನ್ನು ವ್ಯಕ್ತಿಯ ಮತ್ತು ಸಮಾಜದ ಪ್ರಕಾರ ಅರಿತುಕೊಳ್ಳಲು ಫುಕೋ ಅವರ ‘ದ ಆರ್ಡರ್ ಆಫ್ ದ ಥಿಂಗ್ಸ್’ ನೆರವಾಗುತ್ತದೆ.

ಸಾಮಾನ್ಯ ಸಂಗತಿಗಳನ್ನು ತಾತ್ವಿಕಗೊಳಿಸಿ ಸೈದ್ಧಾಂತಿಕವಾಗಿ ಮಾತಾಡುವ ಬಗೆಯಲ್ಲ ಈ ಪುಸ್ತಕ. ಮನುಷ್ಯನ ಬದುಕು, ಕೆಲಸ ಮತ್ತು ಭಾಷೆಗಳ ಬೇರುಗಳಿಂದ ಮೂಡಿರುವಂತಹ ಜೀವನದ ರಚನಾಕ್ರಮವನ್ನು ಫುಕೋ ಅರಿತುಕೊಳ್ಳಲು ಯತ್ನಿಸುತ್ತಾರೆ. ಯಾರೊಬ್ಬನ ಜೈವಿಕತೆ, ಆರ್ಥಿಕತೆ ಮತ್ತು ಭಾಷಿಕ ಪ್ರಭಾವಗಳು ಅವನ ಬದುಕನ್ನು ರೂಪಿಸುವುದರಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂಬುದನ್ನು ಚರ್ಚಿಸುತ್ತಾರೆ.

ಚಿತ್ರರಚನೆಯನ್ನು ವಿವರಿಸುವುದರಿಂದ ಪ್ರಾರಂಭವಾಗುವ ಈ ಪುಸ್ತಕ, ಚಿತ್ರವು ನೇರವಾಗಿ ಕಣ್ಣಿಗೆ ಹೇಗೆ ಕಾಣುತ್ತದೆ, ಅದು ಏನನ್ನು ಅಡಗಿಸಿಟ್ಟುಕೊಂಡಿದೆ ಮತ್ತು ಅದು ಯಾವ ವಿಷಯದ ಕಡೆಗೆ ವಾಲುತ್ತದೆ ಎಂಬುದನ್ನು ಚರ್ಚಿಸುತ್ತದೆ.

ಅದೇ ರೀತಿ ಚರಿತ್ರೆಯ ವಿವಿಧ ಕಾಲಘಟ್ಟಗಳೂ ಕೂಡಾ ಅನೇಕ ಸಂಗತಿಗಳನ್ನು ತನ್ನಲ್ಲಿ ಅವಿತಿಟ್ಟುಕೊಂಡಿರುವುದರ ಬಗ್ಗೆ ಬೆಳಕು ಚೆಲ್ಲುತ್ತಾರೆ. ನಿಜಕ್ಕೂ ಕಾಣುವ, ಕೇಳುವ, ನೋಡುವ, ಓದುವ ಸಂಗತಿಗಳು ಹೊರನೋಟಕ್ಕೆ ಕಾಣುವಷ್ಟೇ ಆಗಿರುವುದಿಲ್ಲ ಎಂಬುದಂತೂ ಸ್ಪಷ್ಟ. ವಿಚಾರ ಮಾಡುತ್ತಾ ವಿವಿಧ ಆಯಾಮಗಳಲ್ಲಿ ನೋಡಲು ಯತ್ನಿಸಿದರೆ ಗ್ರಹಿಕೆಗೆ ಒಂದಷ್ಟು ನ್ಯಾಯ ಸಿಗಬಹುದು.

ವೈಚಾರಿಕತೆಯು ಯಾರೊಬ್ಬರ ಇಷ್ಟ ಮತ್ತು ಇಷ್ಟವಿಲ್ಲದಿರುವುದರ ಮೇಲೆ ಅವಲಂಬಿತವಾಗಕೂಡದು. ವೈಚಾರಿಕತೆಯಾಗಲಿ, ತಾತ್ವಿಕತೆಯಿಂದ ವಿಚಾರಗಳು ರೂಪುಗೊಳ್ಳುವುದಾಗಲಿ ಅದಕ್ಕೆ ವೈಜ್ಞಾನಿಕವಾದಂತಹ ಕ್ರಮ ಬೇಕು. ಇದನ್ನು ಫೂಕೋ ಸ್ಪಷ್ಟಪಡಿಸುತ್ತಾರೆ. ವೈಜ್ಞಾನಿಕ ಕ್ರಮವಿಲ್ಲದ, ಗಮನ ಮತ್ತು ಅಧ್ಯಯನವಿಲ್ಲದ ತಾತ್ವಿಕತೆಗಳು ಅಥವಾ ವೈಚಾರಿಕತೆಗಳು ವ್ಯಕ್ತಿಗತ ಒಲವು ನಿಲುವುಗಳಿಂದ ಪ್ರಭಾವಗೊಂಡಿರುತ್ತವೆ. ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಮೇಲೆ ಆಧರಿಸಿದ ಆ ಸಂಗತಿಗಳಿಗೆ ಮಾನವಶಾಸ್ತ್ರ ನ್ಯಾಯವನ್ನು ಒದಗಿಸುವುದಿಲ್ಲ.

ಇಂತಹ ಸಂಗತಿಗಳು ಊಹೆಗಳ, ಕಲ್ಪನೆಗಳ ಮೇಲೆ ಆಧಾರವಾಗಿಬಿಟ್ಟಲ್ಲಿ ಅವುಗಳ ಮೂಲವಾಗಿರುವ ಮನಸ್ಸಿನ ಆರೋಗ್ಯದ ಬಗ್ಗೆ ಯಾರೊಬ್ಬರಾದರೂ ಖಚಿತತೆಯಲ್ಲಿ ಹೇಗೆ ಪ್ರಮಾಣೀಕರಿಸುತ್ತಾರೆ? ವ್ಯಕ್ತಿಯೊಬ್ಬನ ಸಂಗತಿಗಳ ಮನೋವಿಶ್ಲೇಷಣೆಯಂತೆ ಸಮಾಜದ ಮತ್ತು ಚರಿತ್ರೆಯ ವಿವಿಧ ಕಾಲಘಟ್ಟಗಳ ಸಂಗತಿಗಳ ಮನೋವೈಜ್ಞಾನಿಕ ವಿಶ್ಲೇಷಣೆ ಅಗತ್ಯವಾಗಿದೆ. ಮನೋವೈಜ್ಞಾನಿಕ ಚಟುವಟಿಕೆಗಳೇ ಚರಿತ್ರೆಯಲ್ಲಿ ವಸ್ತುಗಳನ್ನು, ಸಂಗತಿಗಳನ್ನು, ವ್ಯವಸ್ಥೆಗಳನ್ನು ರೂಪಿಸಿರುವುದು. ಹಾಗೆಯೇ ಗಮನದಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಅಂಶವೇನೆಂದರೆ ಹಿಂದಿನ ಸಂಗತಿಗಳನ್ನು ಆ ಕಾಲಘಟ್ಟದಲ್ಲಿ ವಿಶ್ಲೇಷಿಸಿದ ರೀತಿಯ ಮನಸ್ಥಿತಿಯಲ್ಲಿಯೇ ಇಂದಿಗೂ ನಾವು ವಿಶ್ಲೇಷಿಸುವ ಅಗತ್ಯ ಇಲ್ಲ, ಕಾರಣವೂ ಇಲ್ಲ. ಮೊದಲಿಗೆ ಅದು ಕ್ರಮವೂ ಅಲ್ಲ. ಏಕೆಂದರೆ ಮುಂದುವರಿದು ಅದನ್ನು ಹೊರಗಿನಿಂದ ನೋಡುವ ಸಾಧ್ಯತೆ ಮಾತ್ರವಲ್ಲದೇ ಅದಕ್ಕಿಂತಲೂ ವಿಕಸಿತವಾಗಿರುವ ಮನಸ್ಥಿತಿಯು ನಮ್ಮದಾಗಿರುತ್ತದೆ. ಆದರೆ ಅದರ ಮುಂದುವರಿದ ಭಾಗವಾಗಿರುವ ನಮ್ಮ ಮನೋರಂಗದಲ್ಲಿ ಆ ಸಂಗತಿಗಳು ಸುಪ್ತವಾಗಿರುತ್ತವೆ.

ಫುಕೋ ಅವರ ಈ ಕೃತಿಯನ್ನು ಓದುವಾಗ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ನೆನಪಿಗೆ ಬರುವುದು ಸಹಜ. ಮನೋವೈಜ್ಞಾನಿಕ ವಿಶ್ಲೇಷಣೆಯಲ್ಲಿ ಸಂಗತಿಗಳನ್ನು ಚರ್ಚಿಸುವಾಗೆಲ್ಲಾ ಫ್ರಾಯ್ಡ್ ಅವರ ಮನೋವ್ಯಾಪಾರದ ಮೂರು ಕೇಂದ್ರಗಳಾದ ಜಾಗೃತಿ ಚೇತನ, ಸುಪ್ತ ಚೇತನ ಮತ್ತು ಅತಿಸುಪ್ತ ಚೇತನಗಳು ತಮ್ಮ ಜಾಡನ್ನು ಮೂಡಿಸಿವೆ.

ಒಬ್ಬನ ಬದಲಾಗುವ ಭಾಷೆ, ಜೈವಿಕ ವಿಕಾಸ, ಪ್ರಭಾವ ಬೀರುವ ಆರ್ಥಿಕ ನೀತಿಗಳು ಮತ್ತು ಚಟುವಟಿಕೆಗಳು ವ್ಯಕ್ತಿಗತ ಅಸ್ತಿತ್ವದ್ದೇ ಆದರೂ ಅದು ಅಂತಹ ವ್ಯಕ್ತಿಗಳ ಸಮೂಹವಾದ ಸಮಾಜದಲ್ಲಿ ತನ್ನ ಛಾಪನ್ನು ಮೂಡಿಸುತ್ತದೆ ಎಂಬುದನ್ನು ಮರೆಯಲಾಗದು.

ಫುಕೋ ಅವರು ಫ್ರೆಂಚ್ ಭಾಷೆಯಲ್ಲಿ ಬರೆದ ಪುಸ್ತಕವಾದರೂ ಭಾರತದ ಸಾಮಾಜಿಕ ಸ್ಥಿತಿಗತಿಗೆ ಮತ್ತು ವ್ಯವಸ್ಥೆಗೆ ಅನ್ವಯ ಮಾಡಿಕೊಳ್ಳಲು ಕಷ್ಟವೇನಾಗದು. ಮನುಷ್ಯ, ಅವನ ಸಮಾಜ ಹಾಗೂ ವ್ಯವಸ್ಥೆಗಳ ಆಲೋಚನೆ ಮತ್ತು ವ್ಯವಹಾರಗಳ ಮೂಲ ಪ್ರೇರಣೆಗಳಂತೂ ಸಾರ್ವತ್ರಿಕವಾಗಿಯೇ ಇವೆ.

ಫೂಕೋ ವಿಚಾರಗಳ ಉದಾಹರಣೆಗಳು ಕ್ಲಾಸಿಕ್ ಯುಗದಿಂದ ಈಗಿನ ಮಾಡರ್ನ್ ಯುಗಕ್ಕೆ ಹೇಗೆ ಸ್ಥಿತ್ಯಂತರಗೊಂಡಿತೆಂದು ವಿವರಿಸುವಾಗ ಐವತ್ತು ಮತ್ತು ಅರವತ್ತರ ಮೇಲೆ ವಯಸ್ಸಾಗಿರುವ ಯಾವುದೇ ಭಾರತೀಯನಿಗೆ ಭಾರತೀಯ ಸಮಾಜ ಕಂಡ ವೈಜ್ಞಾನಿಕ, ತಾಂತ್ರಿಕ, ರಾಜಕೀಯ ಮತ್ತು ಜೀವನ ಶೈಲಿಯ ಸ್ಥಿತ್ಯಂತರಗಳು ಕಣ್ಣೆದುರು ಬರುತ್ತವೆ. ವಿವಿಧ ಕಾಲಘಟ್ಟಗಳಲ್ಲಿ ಉಂಟಾಗಿರುವ ಬದಲಾವಣೆಗಳು ಪ್ರಸ್ತುತ ಬದುಕಿಗೆ ನಿರ್ಣಾಯಕವಾಗಿರುವಂತೆ ತೋರಿದರೂ ಅದೂ ಕೂಡ ಮುಂದಿನ ದಿನಗಳಲ್ಲಿ ಗತಕಾಲದ ಒಂದು ಚಾರಿತ್ರಿಕ ಸಂಗತಿಯಾಗಿಬಿಡುತ್ತವೆ.

ಇಂತಹ ಸೂಕ್ಷ್ಮಾವಲೋಕನಗಳು ವ್ಯಕ್ತಿಯನ್ನೂ ಮತ್ತು ಅವನ ಸಮಾಜವನ್ನೂ ಸುವ್ಯವಸ್ಥೆಯಲ್ಲಿ ಇಟ್ಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಸಂವೇದನೆಗಳ ಕೊರತೆಯಿಂದಾಗಿಯೇ ನಮ್ಮ ಸಮಾಜದಲ್ಲಿ ಅಸೂಕ್ಷ್ಮದ ಹಲವಾರು ಸಂಗತಿಗಳು ಪದೇ ಪದೇ ಮರುಕಳಿಸುತ್ತಾ ಸಂಘದ ಬದುಕಿಗೆ ಘಾಸಿಯನ್ನು ಉಂಟು ಮಾಡುತ್ತಿರುವುದು.


ಇದನ್ನು ಓದಿ: ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

Avatar
ಯೋಗೇಶ್ ಮಾಸ್ಟರ್‌
+ posts

LEAVE A REPLY

Please enter your comment!
Please enter your name here