Homeಮುಖಪುಟಕೊರೊನಾ ಲಾಕ್‍ಡೌನ್ ಎದುರಾಗಿ ಆನ್‍ಲೈನ್ ಶಿಕ್ಷಣದ ಅಪಾಯ ಮತ್ತು ಸಮಸ್ಯೆಗಳು

ಕೊರೊನಾ ಲಾಕ್‍ಡೌನ್ ಎದುರಾಗಿ ಆನ್‍ಲೈನ್ ಶಿಕ್ಷಣದ ಅಪಾಯ ಮತ್ತು ಸಮಸ್ಯೆಗಳು

- Advertisement -
- Advertisement -

ಭಾರತದ ಶಿಕ್ಷಣ ವ್ಯವಸ್ಥೆಯ ಎದುರು ಈ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ, ಪರಿಹಾರವಿಲ್ಲದ ಸಮಸ್ಯೆಯಾಗಿ ಬೆಳೆದು ನಿಂತಿದೆ. ಸೋಂಕಿನ ಭಯದಿಂದ ಬಹುತೇಕ ರಾಜ್ಯಗಳಲ್ಲಿ ಏಪ್ರಿಲ್—ಮೇ ತಿಂಗಳಲ್ಲೇ ನಡೆಯಬೇಕಿದ್ದ ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳನ್ನೇ ರದ್ದು ಮಾಡಲಾಗಿದೆ. ದೇಶದ ಶೈಕ್ಷಣಿಕ ಚಟುವಟಿಕೆಗಳು ಬಹುತೇಕ ಸ್ಥಗಿತವಾಗಿದೆ. ಈ ಸಾಲಿನ ಶೈಕ್ಷಣಿಕ ವರ್ಷವೂ ಆರಂಭವಾಗಿದ್ದು, ಸದ್ಯಕ್ಕಂತೂ ಶಾಲಾ-ಕಾಲೇಜುಗಳು ಆರಂಭವಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಹಾಗಾದರೆ ಮುಂದೇನು? ಭವಿಷ್ಯದ ಒಂದು ವರ್ಷದ ಅವಧಿಯ ಶಿಕ್ಷಣದ ಕಥೆ ಏನು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲೆಡೆ ಕಾಡುತ್ತಿದೆ.

ಆದರೆ, ಈ ಪ್ರಶ್ನೆಗೆ ಈಗ ಕಂಡುಕೊಂಡಿರುವ ಏಕೈಕ ಉತ್ತರ ಆನ್‍ಲೈನ್ ಶಿಕ್ಷಣ ವ್ಯವಸ್ಥೆ. ಕೊರೊನಾ ಮಹಾಮಾರಿ ಆರಂಭವಾದ ದಿನದಿಂದ ಆನ್‍ಲೈನ್ ಶಿಕ್ಷಣದ ಸಾಧ್ಯತೆಗಳನ್ನು ಪರ್ಯಾಯವಾಗಿ ನಮ್ಮ ಮುಂದೆ ಇಡಲಾಗುತ್ತಿದೆ. ಈ ಸಾಧ್ಯತೆಯನ್ನು ಸಮಾಜದ ಎದುರು ಇಡಲಾಗುತ್ತಿದೆ ಎನ್ನುವುದಕ್ಕಿಂತ ಒತ್ತಾಯಪೂರ್ವಕವಾಗಿ ಈ ಕಡೆಗೆ ನೂಕಲಾಗುತ್ತಿದೆ ಎಂದರೆ ಸೂಕ್ತವಾದೀತು. ಇದರ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಯನ್ನು ಅಲ್ಲಗೆಳೆಯುವಂತಿಲ್ಲ.

ಒಂದನೇ ತರಗತಿಯಿಂದ ಪದವಿ ಶಿಕ್ಷಣದವರೆಗೆ ಆನ್‍ಲೈನ್‍ನಲ್ಲೇ ಶಿಕ್ಷಣ ನೀಡುವುದು ಮತ್ತು ಪರೀಕ್ಷೆ ನಡೆಸುವ ಕುರಿತ ಚರ್ಚೆಗಳು ಈಗಾಗಲೇ ಆರಂಭವಾಗಿವೆ. ಹಾಗಾದರೆ ಭಾರತದಂತಹ ಇನ್ನೂ ಮುಂದುವರೆಯುತ್ತಿರುವ ರಾಷ್ಟ್ರದಲ್ಲಿ ಆನ್‍ಲೈನ್ ಶಿಕ್ಷಣ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವೇ? ಈ ವ್ಯವಸ್ಥೆಯಲ್ಲಿನ ತೊಡಕುಗಳೇನು? ಇದಕ್ಕಿರುವ ಪರಿಹಾರ ಮತ್ತು ಪರ್ಯಾಯಗಳೇನು?

ಭಾರತದಲ್ಲಿ ಆನ್‍ಲೈನ್ ಶಿಕ್ಷಣ ಸಾಧ್ಯವೇ?

ತಾಂತ್ರಿಕವಾಗಿ ದೇಶಗಳಿ ಮುಂದುವರೆದಂತೆಲ್ಲಾ ಕಳೆದ ಒಂದು ದಶಕದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗ್ರಪಂಕ್ತಿಯ ಅಭಿವೃದ್ಧಿ ರಾಷ್ಟ್ರಗಳಲ್ಲಿ ಆನ್‍ಲೈನ್ ಶಿಕ್ಷಣ ಭವಿಷ್ಯದ ಪರ್ಯಾಯವಾಗಿ ಬೆಳೆಯುತ್ತಿದೆ.

ಅಮೆರಿಕದಂತಹ ತಂತ್ರಜ್ಞಾನದಲ್ಲಿ ಹೆಚ್ಚು ಮುಂದುವರೆದ ರಾಷ್ಟ್ರದಲ್ಲಿ ಖರ್ಚು ಮತ್ತು ಸಮಯವನ್ನು ಉಳಿಸುವ ಸಲುವಾಗಿ ಆನ್‍ಲೈನ್ ಶಿಕ್ಷಣ ಹೆಚ್ಚು ಜನಪ್ರಿಯ. ಆನ್‍ಲೈನ್ ಮೂಲಕವೇ ಪದವಿಗಳಿಸುವುದು ಈ ರಾಷ್ಟ್ರಗಳಲ್ಲಿ ಸಾಧ್ಯ. ಅಲ್ಲಿನ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಎಂಬುದು ದೊಡ್ಡ ಮಾತೇನಲ್ಲ. ಏಕೆಂದರೆ ಅದಕ್ಕೆ ಬೇಕಾದ ವ್ಯವಸ್ಥೆಗಳು ಅಲ್ಲಿ ಸಾಕಷ್ಟು ಅಭಿವೃದ್ಧಿಗೊಂಡಿವೆ. ಆದರೆ, ಭಾರತದ ಮಟ್ಟಿಗೆ, ಇಲ್ಲಿನ ಎಷ್ಟೋ ಮಕ್ಕಳಿಗೆ ಆನ್‍ಲೈನ್ ತರಗತಿ ಎಂದರೆ ಈವರೆಗೆ ಕಂಡುಕೇಳರಿಯದ ಹೊಸ ವಿಚಾರ.

ಈವರೆಗೆ ಸಮೂಹ ಶಿಕ್ಷಣ ಪದ್ಧತಿಯಲ್ಲಿ ಶಾಲಾ ಗೆಳೆಯರ ಜೊತೆಯಲ್ಲಿ ಒಂದೇ ಕೊಠಡಿಯಲ್ಲಿ ಕುಳಿತು, ಶಾಲಾ ಆವರಣದಲ್ಲಿ ಆಡಾಡುತಲೇ ಶಿಕ್ಷಣದ ಜೊತೆಗೆ ಬದಕನ್ನೂ ಕಲಿತ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಒಗ್ಗಲು ಸಾಧ್ಯವೇ ಎಂಬುದು ಮೊದಲ ಪ್ರಶ್ನೆ. ಶಿಕ್ಷಣದ ಮೊದಲ ಗುರಿ ಸಾಮಾಜೀಕರಣ ಎಂಬ ಮಾತೂ ಇದೆ. ನಮ್ಮ ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ದಿನನಿತ್ಯದ ವ್ಯವಹಾರವನ್ನೂ ಕಲಿಸುತ್ತಿದ್ದವು. ಇದು ಆನ್‍ಲೈನ್ ಶಿಕ್ಷಣದಲ್ಲಿ ಸಾಧ್ಯವೇ ಎಂಬುದು ಮತ್ತೊಂದು ಬಹುದೊಡ್ಡ ಪ್ರಶ್ನೆ. ಆದರೆ, ಇದರ ನಡುವೆ ಕಾಡುವ ಮತ್ತೊಂದು ಪ್ರಶ್ನೆ – ಮಕ್ಕಳು ಇಂತಹ ಶಿಕ್ಷಣ ವ್ಯವಸ್ಥೆಗೆ ಒಗ್ಗುವುದಿರಲಿ ಭಾರತದಂತಹ ರಾಷ್ಟ್ರದಲ್ಲಿ ಮನೆಮಾಡಿರುವ ಅಸಮಾನತೆಗಳ ನಡುವೆ ಈ ಪರ್ಯಾಯ ಶಿಕ್ಷಣವನ್ನು ಯಶಸ್ವಿಗೊಳಿಸುವುದು ಸಾಧ್ಯವೇ?

ಅಸಮಾನತೆಯ ದೇಶದಲ್ಲಿ ಆನ್‍ಲೈನ್ ಶಿಕ್ಷಣ

ಆನ್‍ಲೈನ್ ಶಿಕ್ಷಣ ಎಂಬುದು ಹಗಳಿರುಳು ಕಳೆಯುವುದರ ಒಳಗಾಗಿ ಸಾಧ್ಯವಾಗಿಬಿಡುವ ಜುಮ್ಲಾ ಅಲ್ಲ. ಬದಲಾಗಿ ಅದಕ್ಕೆ ವ್ಯವಸ್ಥಿತ ಸಿದ್ಧತೆ ಬೇಕು. ಎಲ್ಲೆಡೆ 24 ಗಂಟೆ ವಿದ್ಯುತ್ ವ್ಯವಸ್ಥೆ ಇರಬೇಕು. ಉತ್ತಮ ಗುಣಮಟ್ಟದ ಇಂಟರ್ನೆಟ್ ಸೇವೆ ಆಭಾದಿತವಾಗಿರಬೇಕು, ಮೊಬೈಲ್ ಅಥವಾ ಟ್ಯಾಬ್ಲಾಯ್ಡ್ ಕಡ್ಡಾಯ ಇರಬೇಕು, ಬಹುಮುಖ್ಯವಾಗಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಮನೆಯಲ್ಲಿರಬೇಕು.

ಆದರೆ, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರೇ ಹೆಚ್ಚಿರುವ ಇನ್ನೂ ನಗರ ಭಾಗದಲ್ಲಿ ಇಕ್ಕಟ್ಟಿನ ಮನೆಗಳಲ್ಲಿ ವಾಸಿಸುವ ಮಕ್ಕಳಿಗೆ ಮನೆಯಲ್ಲಿ ಪೂರಕ ಕಲಿಕೆಯ ವಾತಾವರಣ ಇರುತ್ತದೆ ಎಂದು ಊಹಿಸುವುದೇ ಭಾರತ ಮಟ್ಟಿಗೆ ಅಪರಾಧವಾದೀತಲ್ಲವೇ?

ಪೂರಕ ವಾತಾವರಣ ಬಿಡಿ ಆನ್‍ಲೈನ್ ಶಿಕ್ಷಣಕ್ಕೆ ಅಗತ್ಯವಾದ ಉಳಿದ ಸವಲತ್ತುಗಳಾದರೂ ಭಾರತದಲ್ಲಿ ಇವೆಯೇ ಎಂದು ಒಮ್ಮೆ ಗಮನಿಸಿದರೆ..

1) ಭಾರತದ ಕೇವಲ ಶೇ.47ರಷ್ಟು ಕುಟುಂಬಗಳು ಮಾತ್ರ 12 ಗಂಟೆಗಿಂತ ಹೆಚ್ಚಿನ ವಿದ್ಯುತ್ ಪಡೆಯುತ್ತಿದ್ದಾರೆ ಎಂದು ಸ್ವತಃ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.

2) ಸೆಪ್ಟೆಂಬರ್ 2019 ರಲ್ಲಿ ಖಿಖಂI ಸಂಸ್ಥೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಭಾರತದಲ್ಲಿ ಸುಮಾರು ಶೇ.52ರಷ್ಟು ಜನ ಮಾತ್ರ ಇಂಟರ್ನೆಟ್ ಬಳಕೆದಾರರು. ಇದು ಇಂಟರ್ನೆಟ್ ಬಳಕೆಯಲ್ಲಿ ಭಾರತ ಎಷ್ಟು ಹಿಂದುಳಿದಿದೆ ಎಂಬುದು ಸ್ಪಷ್ಟವಾಗುತ್ತದೆ.

3) ಭಾರತದಲ್ಲಿ ಕೇವಲ ಶೇ.24ರಷ್ಟು ಜನ ಮಾತ್ರ ಸ್ಮಾರ್ಟ್‍ಫೋನ್ ಹೊಂದಿದ್ದಾರೆ. ಕೇವಲ ಶೇ.11ರಷ್ಟು ಜನ ಮಾತ್ರ ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್ ಹೊಂದಿದ್ದಾರೆ. ದೇಶದ ಶೇ.20 ರಷ್ಟು ಕುಟುಂಬಗಳ ಪೈಕಿ ಕೇವಲ ಶೇ.8.9 ರಷ್ಟು ಜನ ಮಾತ್ರ ಇಂಟರ್ನೆಟ್ ಸವಲತ್ತು ಹೊಂದಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ಶೇ.35ರಷ್ಟು ಕುಟುಂಬಗಳು ಕಂಪ್ಯೂಟರ್ ಹೊಂದಿದ್ದರೆ, ಬಿಹಾರದಲ್ಲಿ ಈ ಸಂಖ್ಯೆ ಕೇವಲ ಶೇ.4.6 ಎಂಬುದು ಉಲ್ಲೇಖಾರ್ಹ.

“ಭಾರತದಲ್ಲಿ ಅಸಮಾನ ಶಿಕ್ಷಣ ವ್ಯವಸ್ಥೆಗೆ ಆಡಳಿತ-ಅಧಿಕಾರಿ ವರ್ಗ ದಾರಿಮಾಡಿಕೊಟ್ಟು ದಶಕಗಳೇ ಕಳೆದಿದೆ. ಖಾಸಗಿ ಶಾಲೆಯಲ್ಲಿ ಓದುವ ಶ್ರೀಮಂತ ಮತ್ತು ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳ ನಡುವೆ ವ್ಯವಸ್ಥೆ ಈಗಾಗಲೇ ಬಹುದೊಡ್ಡ ಅಸಮಾನತೆಯ ಕಂದಕವನ್ನು ಸೃಷ್ಟಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಿಂತು ನಾವು ಆನ್‍ಲೈನ್ ಶಿಕ್ಷಣದ ಕುರಿತು ಚಿಂತನೆ ನಡೆಸುವುದೇ ಬಹುದೊಡ್ಡ ಅಪರಾಧ. ಅವಕಾಶ ಇದ್ದವರು ಆನ್‍ಲೈನ್ ಶಿಕ್ಷಣ ಪಡೆಯಲಿ, ಸಾಧ್ಯತೆ ಇಲ್ಲದವರಿಗೆ ಶಿಕ್ಷಣ ಬೇಡ ಎಂಬುದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ತಲುಪಬೇಕು ಎಂಬ ಪ್ರಜಾಪ್ರಭುತ್ವದ ಆಶಯಕ್ಕೇ ಮಾರಕ” ಎನ್ನುತ್ತಾರೆ ತಮಿಳುನಾಡಿನ ಶಿಕ್ಷಣ ತಜ್ಞ ಮತ್ತು ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ ಗಜೇಂದ್ರ ಬಾಬು.

ಪರ್ಯಾಯ ಅಥವಾ ಪರಿಹಾರವೇನು?

ಅಸಮಾನತೆಯ ಹೊರತಾಗಿಯೂ ಆನ್‍ಲೈನ್ ಶಿಕ್ಷಣಕ್ಕೆ ಬೇಕಾದ ಯಾವ ಮೂಲಭೂತ ಸೌಲಭ್ಯವೂ ಭಾರತದಲ್ಲಿ ಇಲ್ಲ. ಹೀಗಾಗಿ ಆನ್‍ಲೈನ್ ಶಿಕ್ಷಣ ಬೇಡ ಎಂಬುದಾದರೆ ಪರ್ಯಾಯವೇನು? ಈ ವರ್ಷದ ಮಕ್ಕಳ ಕಲಿಕೆ ಹೇಗೆ? ಶಾಲೆ ಕಲಿಕೆ ಇಲ್ಲದಿದ್ದರೆ ಮಕ್ಕಳ ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮವೇನು? ಎಂಬ ಪ್ರಶ್ನೆಗಳೂ ಏಳುತ್ತವೆ. ಅದಕ್ಕೂ ಪರ್ಯಾಯವನ್ನು ಮುಂದಿಡುತ್ತಾರೆ ಶಿಕ್ಷಣ ತಜ್ಞರು.

“ಭಾರತದಲ್ಲಿ ಮಕ್ಕಳಿಗೆ ಶಾಲಾ ಮಟ್ಟದಿಂದಲೇ ಆನ್‍ಲೈನ್ ಶಿಕ್ಷಣದ ಕಡೆಗೆ ವಾಲಿಸುವುದಕ್ಕಿಂತ ಮನೆಯಲ್ಲಿ ಅನೌಪಚಾರಿಕ ಶಿಕ್ಷಣ ನೀಡುವುದೇ ಲೇಸು” ಎಂದು ವ್ಯಾಖ್ಯಾನಿಸುತ್ತಾರೆ ಗಜೇಂದ್ರ ಬಾಬು.

ಗಜೇಂದ್ರ ಬಾಬು ಅವರ ಪ್ರಕಾರ, “ಭಾರತದಲ್ಲಿ PUಅ ವರೆಗಿನ ಶಿಕ್ಷಣವನ್ನು 10+2 ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ವರ್ಷ ಶಿಕ್ಷಣಕ್ಕೆ ದೀರ್ಘ ರಜೆ ನೀಡಿ 11+2 ಎಂದು ಬದಲಿಸಿದರೆ ಇದರಿಂದ ಯಾವುದೇ ನಷ್ಟವಿಲ್ಲ. ಹೀಗಾಗಿ ಈ ವರ್ಷ ಮಕ್ಕಳನ್ನು ಶಾಲೆಗೆ ಕಳಿಸುವ ಅಗತ್ಯವೂ ಇಲ್ಲ, ಆನ್‍ಲೈನ್ ಶಿಕ್ಷಣವೂ ಬೇಕಾಗಿಲ್ಲ.

“ಅದರ ಬದಲಾಗಿ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡಬೇಕು. ಪ್ರತಿದಿನ ಸುದ್ದಿ ಪತ್ರಿಕೆಗಳನ್ನು ಓದುವ ಅವಕಾಶ ನೀಡಬೇಕು. ವಿಶ್ವದ ವಿದ್ಯಮಾನಗಳನ್ನು ತಿಳಿಸಬೇಕು. ಪ್ರಸ್ತುತ ಸಮಾಜದಲ್ಲಿ ಆವರಿಸಿರುವ ಕೊರೊನಾ ಎಂಬ ವಿಚಾರವೇ ಬಹುದೊಡ್ಡ ಪಾಠ. ಹೀಗಾಗಿ ಮಕ್ಕಳಿಗೆ ಕೊರೋನಾ ಸೇರಿದಂತೆ ಎಲ್ಲಾ ಸಾಮೂಹಿಕ ರೋಗಗಳ ಬಗ್ಗೆ ಮನೆಯಲ್ಲೇ ಹಿರಿಯರು ಪೋಷಕರು ಪಾಠ ಮಾಡಬಹುದು. ಈ ಮೂಲಕ ಪೋಷಕರು ಸಾಕಷ್ಟು ವಿಚಾರಗಳನ್ನು ಕಲಿಯಬಹುದು.

“ಇದಲ್ಲದೆ ಎಲ್ಲಾ ಗ್ರಾಮಗಳಲ್ಲಿ ಶಾಲಾ ಮಕ್ಕಳನ್ನು ಒಟ್ಟಾಗಿ ಸೇರಿಸಿ ಶಾಲಾ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಅವರಿಗೆ ಕೆಲವು ಅಗತ್ಯ ವಿಚಾರಗಳನ್ನು ಬೋಧಿಸಬಹುದು. ಪೌಷ್ಠಿಕ ಆಹಾರದ ಮಾಹಿತಿಯ ಜೊತೆಗೆ ವಿಜ್ಞಾನ, ಸಮಾಜ ವಿಜ್ಞಾನವನ್ನು ಪ್ರಾಯೋಗಿಕವಾಗಿ ಬೋಧಿಸಬಹುದು. ಆಟಗಳಲ್ಲೂ ತೊಡಗಿಸಬಹುದು. ಇದರಿಂದ ಮಕ್ಕಳು ಗಡಿಬಿಡಿ ಶಿಕ್ಷಣದಿಂದ ದೊರೆತ ಈ ಒಂದು ವರ್ಷದ ಅವಧಿಯನ್ನು ಬಳಸಿಕೊಂಡು ಮತ್ತಷ್ಟು ಕ್ರಿಯಾಶೀಲರಾಗುತ್ತಾರೆ” ಎನ್ನುತ್ತಾರೆ ಶಿಕ್ಷಣ ತಜ್ಞ ಗಜೇಂದ್ರ ಬಾಬು.

ಒಟ್ಟಾರೆ ಭಾರತದಂತಹ ರಾಷ್ಟ್ರದಲ್ಲಿ ಆನ್‍ಲೈನ್ ಶಿಕ್ಷಣ ಯಶಸ್ವಿಯಾಗುವುದು ಸಾಧ್ಯವಿಲ್ಲ ಎಂಬುದು ಸರ್ಕಾರಕ್ಕೂ ತಿಳಿಯದ ವಿಚಾರವೇನಲ್ಲ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದಿರುವ ಸರ್ಕಾರ ಒತ್ತಾಯಪೂರ್ವಕವಾಗಿ ಆನ್‍ಲೈನ್ ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳನ್ನು ದೂಡುತ್ತಿರುವುದು ಸ್ಪಷ್ಟವಾಗಿದೆ. ಈ ವರ್ಷದ ಶಿಕ್ಷಣ ಶುಲ್ಕ ವಸೂಲಿ ಮಾಡುವ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ನಡೆಸುತ್ತಿರುವ ಈ ನಾಟಕವೂ ತಿಳಿಯದ ವಿಚಾರವೇನಲ್ಲ.

ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಖಾಸಗೀಕರಣವಾಗಿರುವ ಪರಿಣಾಮವಾಗಿಯೇ ಸರ್ಕಾರಗಳು ಸತತವಾಗಿ ಶಿಕ್ಷಣ ಬಜೆಟ್ ಗಾತ್ರವನ್ನು ಕಡಿಮೆ ಮಾಡುತ್ತಿವೆ ಎಂದರೂ ತಪ್ಪಾಗಲಾರದು. ಈ ನಡುವೆ ಆನ್‍ಲೈನ್ ಶಿಕ್ಷಣ ಎಂಬ ಹೊಸ ಮಾದರಿ ಹುಟ್ಟಿಕೊಂಡಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಲಾಭವಾಗಬಹುದೇನೋ? ಆದರೆ, ಇದರಿಂದ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಯಾವುದೇ ಲಾಭ ಇಲ್ಲ ಎಂಬುದು ಮಾತ್ರ ಸ್ಪಷ್ಟ.


ಇದನ್ನು ಓದಿ: ರಾಮ ರಾಜ್ಯದ ಭರವಸೆ ನೀಡಿ ಗೂಂಡಾ ರಾಜ್ಯ ನೀಡಿದ್ದಾರೆ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...