Homeಮುಖಪುಟಯಡಿಯೂರಪ್ಪ ಪ್ರತಿತಂತ್ರಕ್ಕೆ ಬೆಚ್ಚಿದ ಅಮಿತ್ ಶಾ; ಸದ್ಯಕ್ಕಿಲ್ಲ ಸಿಎಂ ಬದಲಾವಣೆ!

ಯಡಿಯೂರಪ್ಪ ಪ್ರತಿತಂತ್ರಕ್ಕೆ ಬೆಚ್ಚಿದ ಅಮಿತ್ ಶಾ; ಸದ್ಯಕ್ಕಿಲ್ಲ ಸಿಎಂ ಬದಲಾವಣೆ!

ಅಡ್ವಾನಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿಯಂತಹ ಘಟಾನುಘಟಿಗಳನ್ನೇ ವಯಸ್ಸಿನ ಕಾರಣ ನೀಡಿ ಪಕ್ಕಕ್ಕೆ ಇಟ್ಟ ಬಿಜೆಪಿ ಹೈಕಮಾಂಡ್ ನಾಯಕರಿಗೆ ಬಿ.ಎಸ್ ಯಡಿಯೂರಪ್ಪನನ್ನು ಮಾತ್ರ ಅಲುಗಾಡಿಸಲಾಗುತ್ತಿಲ್ಲ.

- Advertisement -
- Advertisement -

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಅಧಿಕಾರಕ್ಕೆ ಬಂದು ಇಂದಿಗೆ 20 ತಿಂಗಳು ಕಳೆದಿವೆ. ಆದರೆ, ಈ 20 ತಿಂಗಳಲ್ಲಿ ಆಡಳಿತಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಕ್ಯಾಬಿನೆಟ್ ವಿಸ್ತರಣೆ ಮತ್ತು ಸಿಎಂ ಬದಲಾವಣೆಯ ವಿಷಯಗಳು. ವಿಪರ್ಯಾಸವೆಂದರೆ ಈವರೆಗೆ ಇವೆರಡೂ ಸಾಧ್ಯವಾಗಿಲ್ಲವೆಂಬುದು.

ಅಸಲಿಗೆ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೇರುವುದು ರಾಜ್ಯ ಬಿಜೆಪಿ ಘಟಕದಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್‍ರಂತಹ ನಾಯಕರು ಬಹಿರಂಗವಾಗಿಯೇ ಸಿಎಂ ವಿರುದ್ಧ ಕಿಡಿಕಾರುತ್ತಿದ್ದಾರೆ. ಇನ್ನೂ ದೆಹಲಿಯ ಹೈಕಮಾಂಡ್ ಹಾಗೂ ಆರ್‌ಎಸ್‍ಎಸ್ ನಾಯಕರಿಗಂತೂ ಬಿಎಸ್‍ವೈ ಸದ್ಯಕ್ಕೆ ಬೇಡವಾಗಿದ್ದಾರೆ ಎಂಬುದು ಬಹಿರಂಗ ಸತ್ಯ.

ಈ ನಡುವೆ ಬಿಎಸ್‍ವೈ ಮಗ ವಿಜಯೇಂದ್ರ ದಿನದಿಂದ ದಿನಕ್ಕೆ ಪಕ್ಷದಲ್ಲಿ ಬೆಳೆಯುತ್ತಿರುವುದು, ಆಡಳಿತದಲ್ಲಿ ಹಸ್ತಕ್ಷೇಪ ಮತ್ತು ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸ್ವತಃ ಬಿಜೆಪಿ ನಾಯಕರೇ ಬೆಚ್ಚಿದ್ದಾರೆ. ಕಳೆದ ಆರು ತಿಂಗಳಲ್ಲಿ ಸರಣಿ ಸರಣಿಯಾಗಿ ಅನೇಕ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಬಳಿ ದೂರು ನೀಡಿದ್ದಾರೆ. ಆದರೂ ಬಿಎಸ್‍ವೈ ಅವರನ್ನು ಸಿಎಂ ಸ್ಥಾನದಿಂದ ಇಳಿಸುವುದು ಸಾಧ್ಯವಾಗುತ್ತಿಲ್ಲ. ಸ್ವತಃ ಅಮಿತ್ ಶಾ ಅವರಿಗೂ!

PC : India TV News

ನಿಜಕ್ಕೂ ಯಡಿಯೂರಪ್ಪನವರನ್ನು ಕಾಯುತ್ತಿರುವುದು ಏನೆಂದು ವಿಚಾರಿಸುತ್ತಾ ಹೊರಟರೆ ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಗೋಜಲು ಗೋಜಲಾಗಿರುವ ಅನೇಕ ವಿಚಾರಗಳನ್ನು ಲಿಂಗಾಯತ ಮತ ಬ್ಯಾಂಕ್ ಎಂಬ ಅತಿದೊಡ್ಡ ಸಂಗತಿ ಬೆಸೆಯುತ್ತಿದೆ.

ಲಿಂಗಾಯತ ಮತ ಬ್ಯಾಂಕ್

ಅಡ್ವಾನಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿಯಂತಹ ಘಟಾನುಘಟಿಗಳನ್ನೇ ವಯಸ್ಸಿನ ಕಾರಣ ನೀಡಿ ಪಕ್ಕಕ್ಕೆ ಇಟ್ಟ ಬಿಜೆಪಿ ಹೈಕಮಾಂಡ್ ನಾಯಕರಿಗೆ ಬಿ.ಎಸ್ ಯಡಿಯೂರಪ್ಪನನ್ನು ಮಾತ್ರ ಅಲುಗಾಡಿಸಲಾಗುತ್ತಿಲ್ಲ. ಕರ್ನಾಟಕ ಕಂಡ ಕಡು ಭ್ರಷ್ಟ ಎಂಬ ಆರೋಪ ಇದ್ದಾಗ್ಯೂ ಬಿಎಸ್‍ವೈ ಕಳೆದ ವರ್ಷ ಸಿಎಂ ಗಾದಿಗೆ ಏರಲು ಇದ್ದ ಏಕೈಕ ಕಾರಣ ಅವರ ಬೆನ್ನಿಗಿದ್ದ ಲಿಂಗಾಯತ ಮತ ಬ್ಯಾಂಕ್. ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಲಿಂಗಾಯತ ಮತಗಳಿಗೆ ಇಂದಿಗೂ ಸಹ ಯಡಿಯೂರಪ್ಪ ಓರ್ವರೇ ಸಾರ್ವಭೌಮ ಎಂಬುದು ವಿವಾದಾತೀತ.

70 ರಿಂದ 90ರ ದಶಕದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವೀರೇಂದ್ರ ಪಾಟೀಲ್ ಲಿಂಗಾಯತ ಸಮುದಾಯದ ಬಹುದೊಡ್ಡ ನಾಯಕ. 1968 ರಿಂದ 1971ರ ಅವಧಿಯಲ್ಲಿ ಅವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆನಂತರ 18 ವರ್ಷಗಳ ತರುವಾಯ ಮತ್ತೆ 1989ರಲ್ಲಿ ಅವರಿಗೆ ಸಿಎಂ ಸ್ಥಾನಕ್ಕೆ ಏರುವ ಅವಕಾಶ ಒದಗಿಬಂದಿತ್ತು. ಆದರೆ, 1990ರಲ್ಲಿ ಕಾಂಗ್ರೆಸ್ ಒಳಗಿನ ರಾಜಕೀಯ ಪ್ರಕ್ಷುಬ್ಧತೆಯಿಂದಾಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು.

PC : Twitter, (ಬಿಎಲ್ ಸಂತೋಷ್)

ಅಂದಿನ ಈ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ವಿರುದ್ಧ ವೈಮನಸ್ಯ ತಳೆದಿದ್ದ ಲಿಂಗಾಯತ ಸಮುದಾಯ ಈವರೆಗೆ ಕಾಂಗ್ರೆಸ್‍ಗೆ ಮತ ಚಲಾಯಿಸಿಲ್ಲ. ಅಂದಿನಿಂದ ಯಡಿಯೂರಪ್ಪ ಬೆನ್ನಿಗೆ ಬಲವಾಗಿ ನಿಂತಿರುವ ಈ ಸಮುದಾಯ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಗೆ ಮತ ಚಲಾಯಿಸುತ್ತಿದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದ ಬಹುದೊಡ್ಡ ಮತಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯ ಎಲ್ಲಿ ಬಿಜೆಪಿಯಿಂದ ವಿಮುಖವಾಗುತ್ತದೆಯೋ ಎಂಬ ಭಯ ಬಿಜೆಪಿ ಹೈಕಮಾಂಡ್‍ಗೂ ಇದೆ. ಇದೇ ಕಾರಣಕ್ಕೆ ವಯಸ್ಸು 78 ದಾಟಿದರೂ ಸಹ ಬಿಎಸ್‍ವೈ ಸ್ಥಾನಕ್ಕೆ ಕುತ್ತು ಬಂದಿಲ್ಲ.

ಆದಾಗ್ಯೂ ಅವರನ್ನು ಹೇಗಾದರೂ ಮಾಡಿ ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಕಾರಣದಿಂದಾಗಿಯೇ ಆರ್‌ಎಸ್‍ಎಸ್-ಹೈಕಮಾಂಡ್ ಬಣದ ಬಿಎಲ್ ಸಂತೋಷ್ ಕಳೆದ 20 ತಿಂಗಳಿನಿಂದ ನಾನಾ ದಾಳವನ್ನು ಉರುಳಿಸುತ್ತಲೇ ಇದ್ದಾರೆ. ಅಂತಹ ಒಂದು ದಾಳವೇ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ. ಈ ವಿವಾದದ ಮೂಲಕ ಲಿಂಗಾಯತ ಸಮುದಾಯದ ಎದುರು ಯಡಿಯೂರಪ್ಪನವರನ್ನು ಖಳನಂತೆ ಬಿಂಬಿಸುವುದು. ಆ ಮೂಲಕ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸಂತೋಷ್ ಅವರ ಯೋಜನೆಯಾಗಿತ್ತು. ಆದರೆ, ಇದಕ್ಕೂ ಯಡಿಯೂರಪ್ಪ ಉರುಳಿಸಿದ ಪ್ರತಿ ದಾಳ ಮಾತ್ರ ಸ್ವತಃ ಅಮಿತ್ ಶಾರನ್ನೂ ಬೆಚ್ಚಿ ಬೀಳಿಸಿದೆ.

ಲಿಂಗಾಯತ ಮೀಸಲಾತಿ ದಾಳ ಮತ್ತು ಪ್ರತಿದಾಳ

ಇತ್ತೀಚೆಗೆ ಮರಾಠ ಮತಗಳನ್ನು ಸೆಳೆಯುವ ಸಲುವಾಗಿ ಯಡಿಯೂರಪ್ಪ ಮರಾಠ ಅಭಿವೃದ್ಧಿ ನಿಗಮಕ್ಕೆ ಹಸಿರು ನಿಶಾನೆ ನೀಡಿದ್ದರು. ಅಲ್ಲದೆ, 50 ಕೋಟಿ ಹಣವನ್ನೂ ಮಂಜೂರು ಮಾಡಿದ್ದರು. ಇದು ರಾಜಕೀಯ ಗಿಮಿಕ್ ಎಂಬುದು ಯಾರಿಗೂ ತಿಳಿಯದ ವಿಚಾರವೇನಲ್ಲ. ಆದರೆ, ಇದೇ ವಿಚಾರವನ್ನು ಮುಂದಿಟ್ಟು ಆರ್‌ಎಸ್‍ಎಸ್ ನಾಯಕರು ಮತ್ತು ಬಿಎಲ್ ಸಂತೋಷ್ ಲಿಂಗಾಯತ ಸಮುದಾಯವನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲು ಮುಂದಾಗಿದ್ದರು.

ಮರಾಠ ಅಭಿವೃದ್ಧಿ ನಿಗಮ ಘೋಷಣೆಯಾದ ಮರುದಿನವೇ ಲಿಂಗಾಯತ ಸಮುದಾಯದಿಂದ ತಮಗೂ ಶೇ.17 ರಷ್ಟು ಮೀಸಲಾತಿ ಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ವಾಸ್ತವವಾಗಿ 3ಬಿ ವಿಭಾಗದಲ್ಲಿ ಗುರುತಿಸಿಕೊಳ್ಳುವ ಲಿಂಗಾಯತರಿಗೆ ರಾಜ್ಯದಲ್ಲಿ ಶೇ.17 ರಷ್ಟು ಮೀಸಲಾತಿ ನೀಡುವುದು ಸಾಧ್ಯವಾಗದ ವಿಚಾರ. ಹೀಗಾಗಿ ಈ ಕೂಗು ನಂತರದ ದಿನಗಳಲ್ಲಿ ದೊಡ್ಡ ಹೋರಾಟವಾಗಿ ರೂಪುಗೊಳ್ಳುತ್ತದೆ. ಲಿಂಗಾಯತ ಸಮುದಾಯದ ಎದುರು ಯಡಿಯೂರಪ್ಪ ಖಳನಂತೆ ಚಿತ್ರಿತವಾಗಲಿದ್ದಾರೆ ಎಂಬುದು ಸಂತೋಷ್ ಅವರ ಊಹೆಯಾಗಿತ್ತು. ಆದರೆ, ಇಂತಹ ಅಪಾಯಕಾರಿ ದಾಳಕ್ಕೂ ಯಡಿಯೂರಪ್ಪನ ಬಳಿ ಪ್ರತಿ ದಾಳವಿತ್ತು. ಆ ಮೂಲಕ ಅವರು ಲಿಂಗಾಯತರನ್ನು ಕೇಂದ್ರದ ವಿರುದ್ದ ಎತ್ತಿಕಟ್ಟಲಿದ್ದಾರೆ ಎಂದು ಯಾರೂ ಊಹಿಸಿರಲಿಲ್ಲ.

ಲಿಂಗಾಯತರನ್ನು ಕೇಂದ್ರದ ವಿರುದ್ಧ ಎತ್ತಿಕಟ್ಟಿದ ಬಿಎಸ್‍ವೈ

PC : Deccan Herald (ವಿಜಯೇಂದ್ರ)

ಕೇಂದ್ರದ ಒಬಿಸಿ ಪಟ್ಟಿಯಲ್ಲಿರುವ ಸಮುದಾಯಗಳಿಗೆ ಶೇ.27 ರಷ್ಟು ಮೀಸಲಾತಿ ಇದೆ. ಹೀಗಾಗಿ ವೀರಶೈವ ಲಿಂಗಾಯತ ಸಮುದಾಯವನ್ನೂ ಈ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು ಎಂಬ ಕೂಗು 1994ರಿಂದಲೂ ಚಾಲ್ತಿಯಲ್ಲಿದೆ. ಆದರೆ, ಈವರೆಗೆ ಅದು ಸಾಧ್ಯವಾಗಿಲ್ಲ. ಈ ಪಟ್ಟಿಯಲ್ಲಿ ಲಿಂಗಾಯತರನ್ನು ಸೇರಿಸಿದರೆ ಮತ್ತೂ ಒಂದಷ್ಟು ಸಮುದಾಯಗಳು ತಮ್ಮನ್ನೂ ಒಬಿಸಿ ಪಟ್ಟಿಗೆ ಸೇರಿಸುವಂತೆ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಅಲ್ಲದೆ, ಒಬಿಸಿ ಪಟ್ಟಿಯ ಒಳಗೇ ಇರುವ ಸಮುದಾಯಗಳೂ ಸಹ ಇದನ್ನು ವಿರೋಧಿಸುತ್ತವೆ ಎಂಬುದು ಉಲ್ಲೇಖಾರ್ಹ. ಇದೇ ಕಾರಣಕ್ಕೆ ಯಾವ ಕೇಂದ್ರ ಸರ್ಕಾರಗಳೂ ಈವರೆಗೆ ಈ ಒಬಿಸಿ ಪಟ್ಟಿಯಲ್ಲಿ ಕೈ ಇಡುವ ದುಸ್ಸಾಹಸಕ್ಕೆ ಮುಂದಾಗಿಲ್ಲ.

ಇದನ್ನು ಮನಗಂಡಿದ್ದ ಯಡಿಯೂರಪ್ಪ ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಶೇ.17 ರಷ್ಟು ಮೀಸಲಾತಿ ನೀಡುವುದು ಸಾಧ್ಯವಿಲ್ಲ. ಆದರೆ, ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತ ಸಮುದಾಯವನ್ನು ಸೇರಿಸಲು ತಾನು ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಲಿಂಗಾಯತರ ದಶಕದ ಮನವಿಗೆ ಮತ್ತೆ ಶಕ್ತಿ ತುಂಬಲು ಮುಂದಾದರು. ರಾಜ್ಯ ಸರ್ಕಾರ ಲಿಂಗಾಯತ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರೂ ಸಹ ಅದು ಅಷ್ಟು ಸುಲಭದ ಕೆಲಸವಲ್ಲ. ಪ್ರಧಾನಿ ಮೋದಿಯಿಂದಲೂ ಇದು ಸಾಧ್ಯವಿಲ್ಲ ಎಂಬುದು ಸ್ವತಃ ಬಿಎಸ್‍ವೈ ಅವರಿಗೂ ಗೊತ್ತಿತ್ತು. ಇದೇ ಕಾರಣಕ್ಕೆ ಅವರು ಅಂತಹ ಒಂದು ಹೇಳಿಕೆ ನೀಡಿದ್ದರು. ತತ್‌ಕ್ಷಣವೇ ಅಮಿತ್ ಶಾ, ಬಿಎಸ್‍ವೈ ಅವರಿಗೆ ಕರೆ ಮಾಡಿ ಕೇಂದ್ರಕ್ಕೆ ಯಾವುದೇ ಶಿಫಾರಸ್ನನ್ನು ಕಳಿಸದಂತೆ ತಾಕೀತು ಮಾಡಿದ್ದಾರೆ.

ಆದರೆ, ಅದನ್ನು ಮಾಧ್ಯಮಗಳ ಎದುರು ಬಹಿರಂಗವಾಗಿಯೇ ಹೇಳಿದ್ದ ಯಡಿಯೂರಪ್ಪ, “ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಶಿಫಾರಸು ಕುರಿತು ಕೇಂದ್ರದ ನಾಯಕರ ಜೊತೆಗೆ ವಿಶೇಷ ಮಾತುಕತೆ ನಡೆಸಿ ನಂತರ ತೀರ್ಮಾನಿಸುವಂತೆ ಅಮಿತ್ ಶಾ ಹೇಳಿದ್ದಾರೆ” ಎಂಬಂತಹ ಹೇಳಿಕೆಯನ್ನು ನೀಡಿಬಿಟ್ಟಿದ್ದರು. ಈ ಮೂಲಕ ಅಮಿತ್ ಶಾಗೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾದರು.

PC : The Hindu (ಬಸನಗೌಡ ಪಾಟೀಲ್ ಯತ್ನಾಳ್‍)

ಈ ಬೆಳವಣಿಗೆಗಳಿಂದ ‘ಯಡಿಯೂರಪ್ಪ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಆದರೆ, ಬಿಜೆಪಿ ಕೇಂದ್ರ ನಾಯಕರು ಅದನ್ನು ಪರಿಗಣಿಸಿಲ್ಲ’ ಎಂಬ ಮಾತು ಲಿಂಗಾಯತ ಸಮುದಾಯದ ಒಳಗೆ ಹರಡಿದೆ. ಅಲ್ಲಿಗೆ ಬಿಎಸ್‍ವೈ ಪ್ರತಿದಾಳ ಫಲ ನೀಡಿದೆ. ಲಿಂಗಾಯತ ಸಮುದಾಯದ ಎದುರು ಬಿಎಸ್‍ವೈ ಮತ್ತೆ ಏಕಪಕ್ಷೀಯ ನಾಯಕನಾಗಿ ಬಿಂಬಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಸ್ಥಾನವನ್ನು ಮತ್ತೂ ಒಂದಷ್ಟು ದಿನಕ್ಕೆ ವಿಸ್ತರಿಸಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ, ಬಿಎಸ್‍ವೈ ವಿರುದ್ಧ ದಾಳ ಉರುಳಿಸಿದ್ದ ಬಿಜೆಪಿ ಹೈಕಮಾಂಡ್ ಹಾಗೂ ಬಿ.ಎಲ್ ಸಂತೋಷ್ ಹಾದಿಯಾಗಿ ಎಲ್ಲಾ ಆರ್‌ಎಸ್‍ಎಸ್ ನಾಯಕರೂ ಇದೀಗ ಪೆಚ್ಚುಮೋರೆ ಹಾಕಿಕೊಳ್ಳುವಂತಾಗಿರುವುದು ಮಾತ್ರ ದಿಟ.

ಒಟ್ಟಾರೆ ರಾಜ್ಯ ಬಿಜೆಪಿ ನಾಯಕರೇ ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸುವುದು, ಹೈಕಮಾಂಡ್ ನಾಯಕರು ರಾಜ್ಯ ಕ್ಯಾಬಿನೆಟ್ ವಿಸ್ತರಣೆಗೆ ಹಸಿರು ನಿಶಾನೆ ನೀಡದಿರುವುದು, ಬಿಎಸ್‍ವೈ ದೆಹಲಿಗೆ ಆಗಮಿಸಿದರೆ ಅವರನ್ನು ಭೇಟಿಯಾದೆ ಅವಮಾನಿಸುವುದು ಮತ್ತು ರಾಜ್ಯ ಬಿಜೆಪಿಯೊಳಗೆ ಯಡಿಯೂರಪ್ಪ ವಿರುದ್ಧ ನಾಯಕರನ್ನು ಎತ್ತಿಕಟ್ಟಲು ನಾನಾ ತಂತ್ರಗಳನ್ನು ಹೆಣೆಯುವುದು ನಡೆಯುತ್ತಲೇ ಇದೆ. ಆದರೆ, 78ರ ಹರೆಯದಲ್ಲೂ ಈ ಎಲ್ಲಾ ಕುತಂತ್ರಗಳಿಗೂ ಬಿಎಸ್‍ವೈ ಬತ್ತಳಿಕೆಯಲ್ಲಿ ಅಸ್ತ್ರ ಇದ್ದೇ ಇದೆ. ಅಲ್ಲದೆ, ಲಿಂಗಾಯತ ಮತಬ್ಯಾಂಕ್ ಅವರ ಬೆನ್ನಿಗೆ ನಿಲ್ಲುವವರೆಗೆ ಅಮಿತ್ ಶಾ, ನರೇಂದ್ರ ಮೋದಿ ಸೇರಿದಂತೆ ಯಾರಿಗೂ ಬಿಎಸ್‍ವೈ ಕ್ಯಾರೇ ಎನ್ನಬೇಕಿಲ್ಲ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.


ಇದನ್ನೂ ಓದಿ: ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆಯುತ್ತಿದೆ: ಪದ್ಮವಿಭೂಷಣ ವಾಪಸ್ ಮಾಡಿದ ಪಂಜಾಬ್ ಮಾಜಿ ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇದೊಂದು ಮಿತಿಯಿಂದ ಕೂಡಿದ ಲೇಖನ. ಲಿಂಗಾಯತರು ಎಲ್ಲ ಸಾರಾಸಗಟಾಗಿ ಬಿಜೆಪಿ ಪಕ್ಷಕ್ಕೆ ಓಟ್ ಮಾಡುವುದಿಲ್ಲ. ಯಡಿಯೂರಪ್ಪ ಅವರ ಬದಲಾವಣೆಗೆ ಸಂತೋಷ್ ಮತ್ತು ಸಂಘ ಪರಿವಾರದ ಕುತಂತ್ರ ಎದ್ದು ಕಾಣುತ್ತದೆ. ಹೀಗೆ ಹಲವು ವಿಚಾರಗಳ ಬಗ್ಗೆ ಈ ಲೇಖನ ಮಿತಿ ಮತ್ತು ಪೂರ್ವಾಗ್ರಹ ಪೀಡಿತ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಸುಪ್ರೀಂ ಮೊರೆ ಹೋಗಲಿರುವ ವಕ್ಪ್‌‌ ಮಂಡಳಿ | Naanu Gauri

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಸುಪ್ರೀಂ ಮೊರೆ ಹೋಗಲಿರುವ ವಕ್ಪ್‌‌ ಮಂಡಳಿ

0
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನವು ತಮ್ಮ ಮಾಲೀಕತ್ವದಲ್ಲಿ ಇಲ್ಲ ಎಂದು ಬಿಬಿಎಂಪಿ ಹೇಳಿದ ನಂತರವೂ ಬಿಜೆಪಿ ಸರ್ಕಾರ ವಿವಾದವನ್ನು ಜೀವಂತವಾಗಿಡಲು ಶ್ರಮಿಸುತ್ತಿವೆ. ಇದೀಗ ಈದ್ಗಾ ಮೈದಾನವನ್ನು ಕಂದಾಯ ಭೂಮಿ ಎಂದು ಸರ್ಕಾರ ಹೇಳಿದೆ....