Homeಮುಖಪುಟವೇದಗಣಿತ ಎಂಬುದೇ ಇಲ್ಲ: ಈ ಕುರಿತು ತಜ್ಞರು ಹೇಳುವುದೇನು?

ವೇದಗಣಿತ ಎಂಬುದೇ ಇಲ್ಲ: ಈ ಕುರಿತು ತಜ್ಞರು ಹೇಳುವುದೇನು?

ವೇದಗಣಿತ ಎಂಬುದು ವೇದ ಕಾಲದ್ದು ಅಲ್ಲ ಮತ್ತು ಗಣಿತವೂ ಅಲ್ಲ ಎಂದು ಗಣಿತಜ್ಞರು ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

”ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಭಾರತದತ್ತ ಸೆಳೆಯಲು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ‘ವೇದ’ ಗಣಿತ, ಸಂಸ್ಕೃತ, ಯೋಗ, ಆಯುರ್ವೇದ, ಜ್ಯೋತಿಷ್ಯ, ಮುಂತಾದ ಕೋರ್ಸ್‌ಗಳನ್ನು ಪರಿಚಯಿಸಲು ಆದೇಶಿಸಿದೆ. ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (HEIs) ಭಾರತೀಯ ನೀತಿಶಾಸ್ತ್ರ, ತತ್ವಶಾಸ್ತ್ರ, ಸಂಗೀತ, ನೃತ್ಯ ಮತ್ತು ಇತರ ಪ್ರಕಾರಗಳುನ್ನು ಬೋಧಿಸಲಾಗುತ್ತದೆ. ಆದರೆ ಈ ವಿಷಯಗಳ ಜೊತೆಗೆ ಜ್ಯೋತಿಷ್ಯದಂತಹ ಕೆಲವು ವಿಷಯಗಳ ಆಯ್ಕೆಯು ಅಚ್ಚರಿ ಮೂಡಿಸಿದೆ.

ಈ ಹಿಂದೆ ಕರ್ನಾಟಕ ಸರ್ಕಾರವು ಹಲವಾರು ಶಾಲೆಗಳಲ್ಲಿನ 5 ರಿಂದ 8ನೇ ತರಗತಿವರೆಗಿನ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ವೇದಗಣಿತ ಕಲಿಸಲು ಮುಂದಾಗಿತ್ತು. ಅದಕ್ಕಾಗಿ ಗ್ರಾಮ ಪಂಚಾಯ್ತಿಗಳಲ್ಲಿ ದಲಿತರಿಗಾಗಿ ಮೀಸಲಾದ ಶೇ.25ರ SCSP TSP ಅನುದಾನವನ್ನು ಬಳಸಿಕೊಳ್ಳುವಂತೆ ಗ್ರಾಮೀಣಾಭಿವೃದ್ದಿ ಇಲಾಖೆ ಆದೇಶ ಹೊರಡಿಸಿತ್ತು. ಈ ಯೋಜನೆಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದಂತೆ ಯೋಜನೆಯನ್ನು ಹಿಂದಕ್ಕೆ ಪಡೆದಿತ್ತು. ಈ ಹಿನ್ನೆಲೆಯಲ್ಲಿ ವೇದಗಣಿತ ಎಂದರೇನು? ಅದನ್ನು ಕಲಿಯುವುದರಿಂದ ಪ್ರಯೋಜನವಿದೆಯೇ? ಈ ಕುರಿತು ಚರ್ಚಿಸೋಣ.

ಗಣಿತದ ಲೆಕ್ಕಗಳನ್ನು ತ್ವರಿತವಾಗಿ ಮಾಡುವ, ಕ್ಲಿಷ್ಟಕರವಾದ ಸಮಸ್ಯೆಗಳನ್ನು ಮನಸ್ಸಿನಲ್ಲಿಯೇ ಲೆಕ್ಕಹಾಕಿ ಹೇಳುವ ಪ್ರಾಚೀನ ಗಣಿತ ಪದ್ದತಿಯನ್ನು ವೇದಗಣಿತ ಎನ್ನಲಾಗುತ್ತಿದೆ. ವೇದಗಳ ಕಾಲದ ಅಥರ್ವವೇದದಲ್ಲಿ ಈ ಬಗ್ಗೆ ಉಲ್ಲೇಖವಿದೆ ಎಂದು ಪ್ರತಿಪಾದಿಸಿ ಶ್ರೀ ಭಾರತೀ ಕೃಷ್ಣ ತೀರ್ಥಜಿ ಎಂಬುವವರು ಇದನ್ನು ಪ್ರಚಾರ ಮಾಡಿದ್ದರು. ಆತನನ್ನು ವೇದಗಣಿತದ ಪಿತಾಮಹಾ ಎಂದೆಲ್ಲ ಹೇಳಲಾಗುತ್ತದೆ. 16 ಸಂಸ್ಕೃತ ಸೂತ್ರಗಳನ್ನು ಪರಿಚಯಿಸಿದ ಅವರು 1957ರಲ್ಲಿ ಬರೆದ ಮತ್ತು ಅವರ ನಿಧನನಂತರ 1965ರಲ್ಲಿ ಪ್ರಕಟಗೊಂಡ ‘ವೇದಿಕ್ ಮ್ಯಾಥಮ್ಯಾಟಿಕ್ಸ್’ ಎಂಬ ಪುಸ್ತಕವು ಈ ಬಗ್ಗೆ ಹೆಚ್ಚು ಹೇಳುತ್ತದೆ.

ಇದನ್ನೂ ಓದಿ: ವೇದಗಣಿತ ತರಬೇತಿಗೆ ತಲಾ ಒಂದು ಲಕ್ಷ ನೀಡುತ್ತಿರುವ ಗ್ರಾಮ ಪಂಚಾಯ್ತಿಗಳು: ದಲಿತರಿಗಾಗಿ ಮೀಸಲಾದ SCSP TSP ಹಣ ದುರ್ಬಳಕೆ

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬಹಳಷ್ಟು ಸಂಶೋಧಕರು, ಚಿಂತಕರು ವೇದಗಣಿತ ಎಂಬುದೊಂದು ಇಲ್ಲವೇ ಇಲ್ಲ. ಯಾವ ವೇದಗಳಲ್ಲಿಯೂ ಇದರ ಬಗ್ಗೆ ಉಲ್ಲೇಖವಿಲ್ಲವೆಂದು ಬಲವಾಗಿ ವಾದಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ವೇದಗಳಿಗೂ ಈ ವೇದಗಣಿತಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ವಾದವನ್ನು ಮುಂದಿಡಲಾಗುತ್ತದೆ. ಏಕೆಂದರೆ ಶ್ರೀ ಭಾರತೀ ಕೃಷ್ಣ ತೀರ್ಥಜಿ ವೇದಗಣಿತ ಎಂಬ ಪುಸ್ತಕ ಬರೆದ ನಂತರವಷ್ಟೇ ಇದು ಗೊಂದಲಕ್ಕೆ ಕಾರಣವಾಗಿದೆ. ಅದೇ ಪುಸ್ತಕದಲ್ಲಿ ಪ್ರಾಥಮಿಕ ಅಂಕಗಣಿತದ ಕುರಿತು ಉಲ್ಲೇಖಿಸಲಾದ ಕ್ರಮಾವಳಿಗಳಿಗೂ ವೇದಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ನಿಸ್ಸಂಶಯವಾಗಿ ಈ ಸೂತ್ರಗಳು ಅಥರ್ವವೇದದಲ್ಲಿ ಕಂಡುಬರುವುದಿಲ್ಲ ಎಂದು ಸಹ ಸ್ಪಷ್ಟಪಡಿಸಲಾಗಿದೆ.

ಅಲ್ಲದೆ ಪ್ರೊ. ಶುಕ್ಲಾ ಎಂಬುವವರು ಅಥರ್ವವೇದದಲ್ಲಿ ವೇದಗಣಿತದ ಬಗ್ಗೆ ಉಲ್ಲೇಖ ಎಲ್ಲಿದೆ ಎಂಬುದನ್ನು ತೋರಿಸಿ ಪಟ್ಟು ಹಿಡಿದ ಸಂದರ್ಭದಲ್ಲಿ ವೇದಗಳಲ್ಲಿ ಅದರ ಉಲ್ಲೇಖವಿಲ್ಲವೆಂದು, ಆ 16 ಸೂತ್ರಗಳನ್ನು ನಾನೇ ಬರೆದೆನೆಂದು ಶ್ರೀ ಭಾರತೀ ಕೃಷ್ಣ ತೀರ್ಥಜಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ವೇದಗಣಿತದ ಬಗ್ಗೆ ಹಲವಾರು ತಕಾರರುಗಳು ಹುಟ್ಟಿಕೊಂಡಿವೆ.

ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಮುಂಬೈನ ಗಣಿತಶಾಸ್ತ್ರದ ಪ್ರಾಧ್ಯಾಪಕರಾದ ಎಸ್.ಜಿ.ದಾನಿಯವರು ವೇದಗಣಿತ ಎಂದು ಕರೆಯುವುದನ್ನೆ ವಿರೋಧಿಸುತ್ತಾರೆ. ಅದು ವೇದ ಕಾಲದ್ದು ಅಲ್ಲ ಮತ್ತು ಗಣಿತವೂ ಅಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. “ವೇದಗಣಿತ ಎಂಬ ಪುಸ್ತಕದಲ್ಲಿ ಬಳಸಲಾದ ವಿಧಾನಗಳು ಪ್ರಾಚೀನ ಕಾಲದ ಅಂಕಗಣಿತದ ತಂತ್ರಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಪುಸ್ತಕದಲ್ಲಿನ ಅಂಕಗಣಿತದ ತಂತ್ರಗಳಲ್ಲಿ ಬಳಸಲಾದ ಸಂಕೇತದಿಂದ ಸ್ಪಷ್ಟವಾಗುತ್ತದೆ. ಪ್ರಪಂಚದ ಯಾವುದೇ ಶಾಲೆಗಳಲ್ಲಿಯೂ ಈ ಗಣಿತವನ್ನು ಕಲಿಸುತ್ತಿಲ್ಲ” ಎಂಬುದು ಅವರ ಅಭಿಪ್ರಾಯವಾಗಿದೆ.

ಭಾರತವು ಇಂದು ಸಕ್ರಿಯ ಮತ್ತು ಅತ್ಯುತ್ತಮವಾದ ಗಣಿತಶಾಸ್ತ್ರದ ಸಂಶೋಧನೆ ಮತ್ತು ಬೋಧನೆಯ ಶಾಲೆಗಳನ್ನು ಹೊಂದಿದೆ. ಈ ವಿಭಾಗದಲ್ಲಿ ಆಧುನಿಕ ಸಂಶೋಧನೆಯ ಮುಂಚೂಣಿಯಲ್ಲಿದೆ. ಅವುಗಳಲ್ಲಿ ಕೆಲವು ತಮ್ಮ ಸಂಶೋಧನಾ ಕ್ಷೇತ್ರಗಳಲ್ಲಿ ವಿಶ್ವದ ಅತ್ಯುತ್ತಮವೆಂದು ಗುರುತಿಸಲ್ಪಟ್ಟಿವೆ. ಶ್ರೀನಿವಾಸ ರಾಮಾನುಜಂ, ವಿ.ಕೆ.ಪಟೋಡಿ, ಎಸ್.ಮಿನಾಕ್ಷಿಸುಂದರಂ, ಹರೀಶ್ ಚಂದ್ರ, ಕೆ.ಜಿ.ರಾಮನಾಥನ್, ಹಂಸರಾಜ್ ಗುಪ್ತಾ, ಶ್ಯಾಮದಾಸ್ ಮುಖೋಪಾಧ್ಯಾಯ, ಗಣೇಶ್ ಪ್ರಸಾದ್ ಮತ್ತು ಹಲವಾರು ಭಾರತೀಯ ಗಣಿತಜ್ಞರು ಸೇರಿದಂತೆ ಅನೇಕರು ಗಣಿತ ಪರಂಪರೆಯನ್ನು ಉನ್ನತ ಮಟ್ಟಕ್ಕೇರಿದ್ದಾರೆ. ಆದರೆ ಅವರ್ಯಾರು ಈ ವೇದಗಣಿತದ ಬಗ್ಗೆ ಉಲ್ಲೇಖಿಸಿಲ್ಲ. ಏಕೆಂದರೆ ಅದು ವೈಜ್ಞಾನಿಕವಲ್ಲ ಎಂದು ಎಸ್.ಜಿ.ದಾನಿಯವರು ಪ್ರತಿಪಾದಿಸಿದ್ದಾರೆ.

ವೇದಗಣಿತದಿಂದ ಮಕ್ಕಳು ನಿಜವಾದ ಗಣಿತ ಕಲಿಯದಿರುವ ಅಪಾಯವಿದೆ – ಎಸ್.ಬಾಲಚಂದ್ರ ರಾವ್

ಬೆಂಗಳೂರಿನ ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್ ಅಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯೂಸ್ ವಿಭಾಗದ ಗೌರವ ನಿರ್ದೇಶಕರೂ ಹಾಗೂ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಬಾಲಚಂದ್ರ ರಾವ್ ರವರು ಈ ವೇದಗಣಿತ ಕಲಿಕೆಯಿಂದ ಮಕ್ಕಳಿ ನಿಜವಾದ ಗಣಿತ ಕಲಿಯದಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ವೇದಗಣಿತ ಕಲಿಕೆಯಿಂದ ಏನೂ ಉಪಯೋಗವಿಲ್ಲ. ಅದರಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಶಾರ್ಟ್‌ಕಟ್ ವಿಧಾನದಲ್ಲಿ ಗುಣಾಕಾರ ಮತ್ತು ಭಾಗಕಾರವನ್ನು ಹೇಳಿಕೊಡಲಾಗುತ್ತದೆ. ಆದರೆ ಅದರಿಂದ ಗಣಿತಕ್ಕೆ ಬೇಕಾದ ತಾರ್ಕಿಕ ಚಿಂತನೆಗಳು ಅಭಿವೃದ್ಧಿಯಾಗುವುದಿಲ್ಲ” ಎಂದು ಅಭಿಪ್ರಾಯಪಡುತ್ತಾರೆ.

ಮುಖ್ಯವಾಗಿ ಗಣಿತ ವಿಜ್ಞಾನಕ್ಕೆ ತಾರ್ಕಿಕವಾದ ಚಿಂತನೆ, ಮನಸ್ಥಿತಿ ಬೇಕು. ಆದರೆ ವೇದಿಕ್ ಮ್ಯಾಥಮೆಟಿಕ್ಸ್‌ನಿಂದ ಅದು ಬರುವುದಿಲ್ಲ. ಅದೊಂದು ಮ್ಯಾಜಿಕ್ ಇದ್ದಹಾಗೆ ಅಷ್ಟೆ. ಇದನ್ನು ಮಕ್ಕಳಿಗೆ ಹೇಳಿಕೊಡುವುದರಿಂದ ಅದೇ ಗಣಿತ ಎಂದು ಭಾವಿಸಿ ಮಕ್ಕಳು ನಿಜವಾದ ಗಣಿತವನ್ನು ಕಲಿಯದೆ ಇರುವ ಅಪಾಯವಿದೆ. ನಿಜವಾದ ಗಣಿತದಲ್ಲಿ ಅದರಲ್ಲಿಯೂ ರೇಖಾಗಣಿತದಲ್ಲಿ ತಾರ್ಕಿಕವಾದ ಚಿಂತನೆ ಅಭಿವೃದ್ದಿಯಾಗುತ್ತದೆ. ಈ ಕಲಿಕೆಯನ್ನು ಹೆಚ್ಚು ಮಾಡಬೇಕು. ಇದರಿಂದ ಮುಂದೆ ಮುಂದೆ ಹೋದಂತೆ ತಾರ್ಕಿಕ ಚಿಂತನೆ ಆಳವಾಗಿ ಅಭಿವೃದ್ದಿಯಾಗುತ್ತದೆ. ಇದು ಯಾವುದು ಸಹ ವೇದಗಣಿತದಲ್ಲಿ ಸಾಧ್ಯವಿಲ್ಲ ಎನ್ನುತ್ತಾರೆ ಎಸ್.ಬಾಲಚಂದ್ರ ರಾವ್.

ಈ ವೇದಗಣಿತ ಕಲಿಕೆಯಿಂದ ಗಣಿತದ ಬಗ್ಗೆ ತಪ್ಪು ಅಭಿಪ್ರಾಯ ಬರುತ್ತದೆ. ಗಣಿತ ಎಂದರೆ ಕೇವಲ ಮ್ಯಾಜಿಕ್ ಎಂದು ವಿದ್ಯಾರ್ಥಿಗಳು ಭಾವಿಸುವ ಅಪಾಯವಿದೆ. ಅಲ್ಲದೆ ವೇದಗಣಿತದ ಬಗ್ಗೆ ಯಾವ ವೇದಗಳಲ್ಲಿಯೂ ಹೇಳಿಲ್ಲ. ಹಿಂದಿನ ಶತಮಾನದ ಕೆಲ ಸ್ವಾಮಿಗಳು ಮಾಡಿರುವ ಸೂತ್ರಗಳು ಇವು. ಅವು ವೇದಿಕ್ ಅಲ್ಲ ಮತ್ತು ಮ್ಯಾಥಮ್ಯಾಟಿಕ್ಸ್ ಕೂಡ ಅಲ್ಲ. ಅವುಗಳಿಗೆ ವೇದಿಕ್ ಎಂದು ಹೆಸರು ಕೊಟ್ಟು ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ವೇದಗಣಿತ ತರಬೇತಿಯ ಉಪಯೋಗಕ್ಕಿಂತ ಅಪಾಯವೇ ಹೆಚ್ಚು: ದಲಿತರ ಮೀಸಲು ಹಣ ದುರ್ಬಳಕೆಗೆ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...